ಕುಮಟಾ : ವಿಧಾನಸಭೆ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದ್ದು ಕುಮಟಾ ವಿಧಾನಸಭಾ ಕ್ಷೇತ್ರಕ್ಕೆ ನಿವೇದಿತ ಆಳ್ವಾ ಹೆಸರು ಕೇಳಿ ಬರುತ್ತಿದೆ. ಇದರಿಂದ ಪಕ್ಷದ ಕಾರ್ಯಕರ್ತರು ವಿಚಲಿತಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದಲ್ಲದೆ ಹೊರಗಿನವರಿಗೆ ಟಿಕೆಟ್ ನೀಡುವುದನ್ನು ಪಕ್ಷದ ಕಾರ್ಯಕರ್ತರು ಬಲವಾಗಿ ವಿರೋಧಿಸಿದ ಘಟನೆಗಳು ಅಲ್ಲಲ್ಲಿ ನಡೆಯುತ್ತಿದೆ. ಪಕ್ಷದ ಹಿಂದಿನ ಆದೇಶದಂತೆ ಮಾಜಿ ಶಾಸಕಿ ಶಾರದಾ ಶೆಟ್ಟಿ, ಕಡತೋಕಾದ ಶಿವಾನಂದ ಹೆಗಡೆ, ಮಂಜುನಾಥ ನಾಯ್ಕ ಸೇರಿದಂತೆ ಒಟ್ಟು 14 ಜನರು 2 ಲಕ್ಷ ರೂಪಾಯಿ ಡಿ.ಡಿ ಹಚ್ಚಿ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದವರಾಗಿದ್ದಾರೆ. ಇಷ್ಟು ಜನರನ್ನು ಹೊರತುಪಡಿಸಿದರೆ ಆ ಸಮಯದಲ್ಲಿ ಯಾರೂ ಅರ್ಜಿ ಸಲ್ಲಿಸಿರಲಿಲ್ಲ ಹೀಗಾಗಿ ಈ 14 ಜನರಲ್ಲಿ ಒಬ್ಬರಿಗೆ ಟಿಕೆಟ್ ಸಿಗಲಿದೆ ಎಂಬ ಭಾವನೆ ಕಾರ್ಯಕರ್ತರಲ್ಲಿ ದಟ್ಟವಾಗಿತ್ತು.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಈಗ ಎರಡು ವಾರದಿಂದೀಚೆಗೆ ಕುಮಟಾ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಘಟಕ ಅಥವಾ ಜಿಲ್ಲಾ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದು ಅರ್ಜಿ ಸಲ್ಲಿಸದ ನಿವೇದಿತ್ ಆಳ್ವ ಅವರ ಹೆಸರು ಮುನ್ನೆಲೆಗೆ ಬಂದಿದ್ದು, ಮೊದಲು ಟಿಕೆಟ್ ಆಕಾಂಕ್ಷಿಗಳು ವಿರೋಧ ವ್ಯಕ್ತಪಡಿಸಿದ್ದರು, ಇದೀಗ ಕಾರ್ಯಕರ್ತರ ಬೇಗುದಿಗೆ ಇದು ಕಾರಣವಾಗಿದೆ ಎಂಬ ಸುದ್ದಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಒಂದು ವಾರದ ಹಿಂದೆ ಕುಮಟಾ ಕಾಂಗ್ರೆಸ್ ಕಾರ್ಯಕರ್ತರು ಪತ್ರಿಕಾಗೋಷ್ಠಿ ನಡೆಸಿ ಹೊರಗಿನ ಅಭ್ಯರ್ಥಿಗೆ ಟಿಕೆಟ್ ನೀಡಬಾರದು, ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರಿಗೆ ಟಿಕೆಟ್ ನೀಡಬೇಕೆಂದು ಪಕ್ಷವನ್ನು ಆಗ್ರಹಿಸಿದ್ದರು. ಸೋಮವಾರ ಹೊನ್ನಾವರ ತಾಲೂಕಿನ ಹಳದಿಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಸಭೆ ನಡೆಸಿ ಗಟ್ಟಿಧ್ವನಿ ಹೊರ ಹಾಕಿದ್ದರು. ಸಭೆಯ ನಂತರದಲ್ಲಿ ಹೊನ್ನಾವರ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಂದೇಶ್ ಶೆಟ್ಟಿ ಅವರನ್ನು ವಜಾ ಮಾಡಿ ಆದೇಶ ಹೊರಬರುತ್ತಿದ್ದಂತೆ ಕಾರ್ಯಕರ್ತರಲ್ಲಿ ಗೊಂದಲಗಳು ಪ್ರಾರಂಭವಾಗಿದೆ.

RELATED ARTICLES  "ಸ್ಥಿತಪ್ರಜ್ಞ ಶ್ರೀರಾಮ" (‘ಶ್ರೀಧರಾಮೃತ ವಚನಮಾಲೆ’).

ಕುಮಟಾ ಹೊನ್ನಾವರ ಕಾರ್ಯಕರ್ತರ ಒಳ ಆಕ್ರೋಶ ಕೆಲವೆಡೆ ಹೊರ ಬರುತ್ತಿದ್ದರೆ, ಇನ್ನೂ ಕೆಲವರಲ್ಲಿ ಗುಸು-ಗುಸು ಸದ್ದಾಗಿ ಹೊಗೆಯಾಡುತ್ತಿರುವ ಬೆಂಕಿಯಂತಾಗಿದೆ. ಈ ಎಲ್ಲ ಘಟನೆಗಳನ್ನು ಗಮನಿಸಿದಾಗ ಕಾರ್ಯಕರ್ತರಲ್ಲಿ ಯಾವ ರೀತಿಯ ಭಾವನೆಗಳಿದೆ ಎಂಬುದು ಎಲ್ಲರಿಗೂ ಸ್ಪಷ್ಟವಾಗುತ್ತಿದೆಯಾದರೂ, ಕಾಂಗ್ರೆಸ್ ಹೈಕಮಾಂಡ್ ಇದನ್ನು ಯಾವ ರೀತಿ ಅರ್ಥೈಸಿಕೊಂಡಿದೆ? ಮುಂದಿನ ನಿರ್ಧಾರ ಹೇಗೆ ತೆಗೆದುಕೊಳ್ಳಲಿದೆ? ಎಂಬುದೇ ಇದೀಗ ಕುತೂಹಲದ ಕೇಂದ್ರ ಬಿಂದುವಾಗಿದೆ.