“ಶ್ರೀ” ಎಂದರೆ ಸಿರಿವಂತ ಎಂಬ ಅರ್ಥವಿದೆ.ವಿದ್ಯೆ, ರೂಪ, ಪ್ರತಿಭೆ, ಸಂಪತ್ತು, ಎಲ್ಲದರಲ್ಲೂ ಸ್ವಲ್ಪ ವಿಭಿನ್ನ ಮತ್ತು ವಿಶೇಷವಾಗಿರುವ ವ್ಯಕ್ತಿ ಸಮಾಜಮುಖಿ ಕೆಲಸದಲ್ಲಿ ತೊಡಗಿದರೆ ಅವನೇ ಆ ಸಮಾಜದ ಆಸ್ತಿಯಾಗುತ್ತಾನೆ. ಅಂಥವರನ್ನು ಗುರುತಿಸಿ ಸಮಾಜ ಅವರಿಗೆ ಒಂದು ಮನ್ನಣೆ ಅಥವಾ ಗೌರವವನ್ನು ನೀಡಿದರೆ, ಆ ಸಮಾಜವು ತನ್ನನ್ನು ತಾನು ಗೌರವಿಸಿಕೊಂಡಂತಾಗುವುದಲ್ಲದೇ,ಇತರರಿಗೂ ಒಂದು ಮಾದರಿ ಮತ್ತು ಸ್ಪೂರ್ತಿಯಾಗಲು ಅವಕಾಶ ಕಲ್ಪಿಸಿದಂತಾಗುತ್ತದೆ.ಹೀಗೆ ಹವ್ಯಕ ಸಮಾಜದ  ತೆಕ್ಕೆಯಲ್ಲಿರುವ ಅಪರೂಪದ ಪ್ರತಿಭಾವಂತ  
ಡಾಕ್ಟರ್ ಕಿಶನ್ ಭಾಗ್ವತ್ ಅವರಿಗೆ ಶ್ರೀ ಅಖಿಲ ಹವ್ಯಕ ಮಹಾಸಭಾ ರಿ.ನಿಂದ 2022-23 ನೇ ಸಾಲಿನ ‘ಹವ್ಯಕಶ್ರೀ’ ಪ್ರಶಸ್ತಿ ದೊರಕಿದ್ದು ನಿಜವಾಗಿಯೂ ಇವರ ಸಾಧನೆಗೆ ಸಂದ ಗೌರವ.


ಲಕ್ಷ್ಮಿ, ಶಾರದೆ ಒಟ್ಟಿಗೆ ಇರುವುದು ತುಂಬಾ ಅಪರೂಪ.ಅದಾಗಲೇ ಸಾಗರದಲ್ಲಿ ಹೆಸರು ಮಾಡುತ್ತಿದ್ದ ವೈದ್ಯ ಡಾ॥ ಭಾಗ್ವತ್ ದಂಪತಿಯ ಪ್ರಥಮ ಪುತ್ರನಾಗಿ ಜನಿಸಿದ ಇವರಿಗೆ, ವೈದ್ಯರಾಗಿ ಜನ ಸೇವೆ ಮಾಡುವ ಅನಿವಾರ್ಯತೆ ಖಂಡಿತ ಇರಲಿಲ್ಲ.ಆಗಿನ CETಯ ಮೆಡಿಕಲ್ ವಿಭಾಗದಲ್ಲಿ, ರಾಜ್ಯಕ್ಕೆ ಪ್ರಥಮ Rank ಗಳಿಸಿ , ಅವರು ಆಯ್ದುಕೊಂಡ ವಿಷಯ, ಮೂಳೆಶಸ್ತ್ರ ಚಿಕಿತ್ಸೆ. ಶಿವಮೊಗ್ಗದ ಖ್ಯಾತ ಆಸ್ಪತ್ರೆಯಲ್ಲಿ ಸ್ವಲ್ಪಕಾಲ  ಸೇವೆ ಸಲ್ಲಿಸಿ, ಈಗ ಸಾಗರದಲ್ಲಿ ಸ್ವಂತ ನರ್ಸಿಂಗ್ ಹೋಂ ನಲ್ಲಿ, ತಜ್ಞ ವೈದ್ಯರಾಗಿ, ಜನರಿಗೆ ಸೇವೆ ನೀಡುತ್ತಿರುವ ಕಿಶನ್ ಭಾಗ್ವತ ಅತ್ಯಂತ ಸಹೃದಯಿ. ಅವರ ನಗುಮುಖ, ಮೃದು ಮಾತು, ಮೃದು ಧೋರಣೆಗಳೇ ರೋಗಿಗಳಿಗೆ  ಗುಣಮುಖರಾಗುವ ಭರವಸೆ ಮೂಡಿಸಿ ಬಿಡುತ್ತದೆ. ಔಷಧ ಅರ್ಧ ಪಾಲು, ವೈದ್ಯರ ನಗುಮುಖದ ಚೇತೋಹಾರಿ ಮಾತು ಅರ್ಧಪಾಲು ರೋಗಿಯಲ್ಲಿ ಆತ್ಮವಿಶ್ವಾಸ ತುಂಬಿ, ಚೇತರಿಸಿಕೊಳ್ಳಲು ತುಂಬಾ ಸಹಕಾರಿ. ಅದೇ ಡಾ॥ ಕಿಶನ್ ರ ಗುರುತಿಸುವಿಕೆ (identity)  ಕೂಡ ಆಗಿದೆ.ದಿನಕ್ಕೆ ಎಷ್ಟೋ ರೋಗಿಗಳಿಗೆ ಟ್ರೀಟ್ಮೆಂಟ್ ಕೊಟ್ಟರೂ, ರಾತ್ರಿ ವೇಳೆ ತುರ್ತು ಸ್ಥಿತಿಯಲ್ಲಿ ಯಾವುದೇ ರೋಗಿ ಬಂದರೂ, ಅವರಿಗೂ ಅಷ್ಟೇ ಸಮಾಧಾನದಿಂದ ಚಿಕಿತ್ಸೆ ನೀಡುವ ಇವರಿಗೆ ನಿಜವಾದ “ವೈದ್ಯೋ ನಾರಾಯಣ ಹರಿ”ಎಂದರೆ ಅತಿಶಯೋಕ್ತಿಯಲ್ಲ ಅನಿಸುತ್ತದೆ.

RELATED ARTICLES  ಗಣಪನ ಮಡಿ, ಶಾಲುಗಳಲ್ಲೂ ನೈಜತೆ ತುಂಬಿದ ಕಲಾವಿದ ಜಿ.ಡಿ ಭಟ್ಟ ಕೆಕ್ಕಾರು.


ಒಬ್ಬ ವ್ಯಕ್ತಿಯ ಸಾಧನೆ ಹಿಂದೆ, ತಂದೆ ತಾಯಿ, ಹೆಂಡತಿ ಹೀಗೆ ಮನೆಯವರೆಲ್ಲರ ಸಹಕಾರ ಬೇಕೇ ಬೇಕು.ಇವರ ತಂದೆ ಡಾ॥ ರಾಮಚಂದ್ರ ಭಾಗ್ವತ್,  ತಾಯಿ ಡಾ॥ ನಳಿನಾ ಭಾಗ್ವತ್  ಸಾಗರದ ಖ್ಯಾತ ಪ್ರಸೂತಿ ತಜ್ಞರು.ಇವರ ಹೆಂಡತಿ ಡಾ॥ ರಶ್ಮಿ ಅರಿವಳಿಕೆ ತಜ್ಞೆ. ತುಂಬಾ ಸಮಾಧಾನಿ. ಡಾ॥ ಕಿಶನ್ ದಂಪತಿಗೆ ಪುಣ್ಯ ಮತ್ತು ಸ್ವಸ್ತಿ ಎಂಬ ಇಬ್ಬರು ಮುದ್ದಾದ ಹೆಣ್ಣುಮಕ್ಕಳು. ಇವರ ತಂಗಿ ಡಾ॥ ಶ್ರೀಯಾ ಮತ್ತು ಬಾವ ಡಾ॥ಸುಮಂತ್ ಬಳಗಂಡಿ ಕೂಡಾ ವೈದ್ಯರು. ಒಟ್ಟಿನಲ್ಲಿ ಇಡೀ ಕುಟುಂಬವೇ ಸಮಾಜದ ಸ್ವಾಸ್ಥ್ಯ ಕಾಪಾಡುವ ವೈದ್ಯರ ಕುಟುಂಬ.ಎಲ್ಲರೂ ಸಾಯಿಬಾಬಾ ಭಕ್ತರು. ಮನೆಯಲ್ಲಿ ಪ್ರತಿದಿನ ಸಾಯಿ ಭಜನೆ ಮಾಡುವುದು ಒಂದು ವಿಶೇಷ.ಈ ಕುಟುಂಬದ ಇನ್ನೊಂದು ವಿಶೇಷ ಅಂದರೆ, ಎಲ್ಲರೂ ಸಂಗೀತ ಪ್ರೇಮಿಗಳು.ಡಾಕ್ಟರ್ ಕಿಶನ್ ಭಾಗ್ವತ ಅವರು ಒಳ್ಳೆಯ ತಬಲಾ ವಾದಕರು.ತಬಲಾ ಸೀನಿಯರ್ ವಿಭಾಗದಲ್ಲಿ ಕೂಡಾ ರಾಜ್ಯಕ್ಕೆ rank ಪಡೆದ ಪ್ರತಿಭಾವಂತರು.  ಇವರ ಹೆಂಡತಿ ರಶ್ಮಿಯವರು ಕೂಡ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಾ, ಕೆಲಸದ  ಒತ್ತಡದ ನಡುವೆಯೂ ಸಂಗೀತ ಕಲಿಯಲು ಸಾಮಾನ್ಯ ಜನರಂತೆ ಸಂಗೀತ ತರಗತಿಗೆ ಬರುವುದು ಅವರ ಸರಳತೆಗೆ ಸಾಕ್ಷಿ ಆಗಿದೆ. ಡಾ॥ ಕಿಶನ್ ಭಾಗ್ವತ್ ಅವರಿಗೆ “ಹವ್ಯಕಶ್ರೀ” ಪ್ರಶಸ್ತಿ ದೊರಕಿದ್ದು ಅರ್ಹರಿಗೆ ಸಂದ ಪುರಸ್ಕಾರವಾಗಿದ್ದು ಸಾಗರದ ಜನತೆಗೆ ಅತ್ಯಂತ ಹೆಮ್ಮೆಯ ವಿಷಯ.ಯಾವುದೇ ಪ್ರಚಾರ ಪ್ರಿಯರಲ್ಲದ ಇವರು, ಸದಾ ಸಮಾಜಮುಖಿ-ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿರುತ್ತಾರೆ.ನಾನು ಸಾಗರಕ್ಕೆ ಕಾಲಿಟ್ಟಾಗಿನಿಂದಲೂ ಅವರ ಕುಟುಂಬವನ್ನು ನೋಡುತ್ತಲೇ ಬಂದಿದ್ದೇನೆ. ಮಧ್ಯರಾತ್ರಿ ಅನಾರೋಗ್ಯ ಅಂತ ಹೋದ್ರು ಕೂಡ, ಸ್ವಲ್ಪವೂ ಬೇಸರಿಸದೆ ಟ್ರೀಟ್ಮೆಂಟ್ ಕೊಟ್ಟು ಕಳಿಸಿದ ಉದಾಹರಣೆ ಸಾಕಷ್ಟಿದೆ.ಇವರ “ಭಾಗ್ವತ್  ನರ್ಸಿಂಗ್ ಹೋಂ”, ಸುಮಾರು 4 ದಶಕಗಳಿಂದ, 24×7ರ ಪಾಳಿಯಲ್ಲಿ ಸಾಗರದಲ್ಲಿ ಜನಸಾಮಾನ್ಯರ ಸೇವೆ ಮಾಡುತ್ತಾ ಸಾಕಷ್ಟು ಜನಪ್ರಿಯತೆ ಗಳಿಸಿ ಮನೆ ಮಾತಾಗಿರುವ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ.
‘ವಿದ್ಯಾ ದದಾತಿ ವಿನಯಂ’ ಎಂಬ ಮಾತಿನಂತೆ ಜನಸಾಮಾನ್ಯರಲ್ಲಿ ಸದಾ ನಗುಮುಖದಿಂದ ಬೆರೆಯುವ ಮತ್ತು ವಿನಯದಿಂದ ವರ್ತಿಸುವ ಇಡೀ ಕುಟುಂಬ ಸದಾ ಮಾದರಿಯ ಕುಟುಂಬವಾಗಿದ್ದು , ಇಂತಹ ಕುಟುಂಬದ ಕುಡಿಯಾದ ಡಾ॥ ಕಿಶನ್ ಭಾಗ್ವತ್ ಅವರಿಗೆ ಇನ್ನೂ ಹೆಚ್ಚಿನ ಗೌರವಾದರಗಳು ದೊರಕಲಿ ಮತ್ತು ಭಗವಂತ ಅವರಿಗೆ ಮತ್ತು ಅವರ ಕುಟುಂಬದ ಎಲ್ಲರಿಗೂ ಇನ್ನೂ ಹೆಚ್ಚಿನ ಸೇವೆ ಮಾಡುವ ಚೈತನ್ಯ ನೀಡಲಿ ಎಂದು ನಾನು ಮನದುಂಬಿ ಪ್ರಾರ್ಥಿಸುತ್ತಾ, ಡಾ॥ಕಿಶನ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

  • ಶುಭಾ ನಾಗರಾಜ್ ಸಾಗರ
RELATED ARTICLES  ಮಕ್ಕಳ ಜೀವನದಲ್ಲಿ ಸ್ನೇಹ ಪ್ರೀತಿ