ಕುಮಟಾ : ಖ್ಯಾತ ಚಲನಚಿತ್ರ ನಿರ್ಮಾಪಕ ಹಾಗೂ ಉದ್ಯಮಿ, ಸುಬ್ರಾಯ ವಾಳ್ಕೆ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಪರವಾಗಿ ತಾಲೂಕಿನ ಮೂಲೆ ಮೂಲೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ಮೂಲಕ ಅವರು ಬಿಜೆಪಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಅವರು ಶುಕ್ರವಾರ ಹಿಂದೆ ಬಿಜೆಪಿಯಲ್ಲಿ ಸಕ್ರಿಯವಾಗಿದ್ದ ಹಳದೀಪುರದ ಅರುಣ ನಾಯ್ಕ ಅವರ ಮನೆಗೆ ಹಿರಿಯರಾದ ವಿನೋದ ಪ್ರಭು, ಚಿದಾನಂದ ಭಂಡಾರಿ, ವಿಶ್ವನಾಥ ನಾಯ್ಕ, ಗುರು ಗೌಡರೊಂದಿಗೆ ಭೇಟಿನೀಡಿ ಮಾತುಕತೆ ನಡೆಸಿದರು.
ಜೊತೆಗೆ ತಾಲೂಕಿನ ಮೂರೂರು, ಚಂದಾವರ, ಹೊಸಾಡ, ವಾಲ್ಗಳ್ಲಿ, ಸಾಂತಗಲ್, ಮಿರ್ಜಾನ್, ಕತಗಾಲ, ದೀವಗಿ ಹಾಗೂ ಹೊನ್ನಾವರ ತಾಲೂಕಿನ ಕರ್ಕಿ, ಹಳದೀಪುರ, ಹೊಸಾಕುಳಿ, ಭಾಸ್ಕೇರಿ ಇನ್ನಿತರ ಕಡೆಗಳಲ್ಲಿ ಅವರು ತೆರಳಿ ಜನರನ್ನು ಭೇಟಿ ಮಾಡಿ ಜನರ ಮನವೊಲಿಸುವ ಪ್ರಯತ್ನ ನಡೆಸಿದರು.
ಬಿಜೆಪಿ ಬಗ್ಗೆ ಅಸಮಾಧಾನಗೊಂಡಿದ್ದ ಅನೇಕರನ್ನು ಭೇಟಿಮಾಡಿ ವೈಯಕ್ತಿಕ ವರ್ಚಸ್ಸಿನ ಮೂಲಕ ಇವರು ಬಿಜೆಪಿಗೆ ಮತ ನೀಡುವಂತೆ ಅವರನ್ನು ಪ್ರೇರೇಪಿಸುತ್ತಿದ್ದಾರೆ. ತನ್ಮೂಲಕ ಕಾರ್ಯಕರ್ತರಲ್ಲಿರುವ ಅಸಮಾಧಾನವನ್ನು ಸರಿಪಡಿಸುವಲ್ಲಿ ಇವರ ಪ್ರಚಾರದ ವೈಖರಿ ಮಹತ್ವಪೂರ್ಣ ಎನಿಸಿಕೊಂಡಿದೆ.
ಈ ಸಲದ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೂಡ ಆಗಿದ್ದ ವಾಳ್ಕೆ, ಪಕ್ಷದಿಂದ ಈ ಹಿಂದಿನ ಶಾಸಕರಾದ ದಿನಕರ ಶೆಟ್ಟಿ ಅವರಿಗೆ ಟಿಕೆಟ್ ಸಿಕ್ಕಿದ ನಂತರದಲ್ಲಿ ಯಾವುದೇ ರೀತಿಯ ಅಸಮಾಧಾನವಿಲ್ಲದೆ, ಪಕ್ಷ ನಿಷ್ಟೆ ಮೆರೆಯುವ ಮೂಲಕ ಬಿಜೆಪಿ ಗೆಲ್ಲಲೇ ಬೇಕೆಂಬ ಒಂದೇ ಉದ್ದೇಶದಿಂದ ಅವರು ಎಲ್ಲೆಡೆ ಪ್ರಚಾರ ಕೈಗೊಂಡಿದ್ದಾರೆ.
ಅನೇಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತು, ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಈಗಾಗಲೇ ತಾಲೂಕಿನಾದ್ಯಂತ ಹೆಸರುವಾಸಿಯಾಗಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ವಾಳ್ಕೆ ಬಿಜೆಪಿ ಅಭ್ಯರ್ಥಿಯ ಪರವಾಗಿ ಸಕ್ರಿಯವಾಗಿ ತೊಡಗಿಕೊಳ್ಳುವ ಮೂಲಕ ಪಕ್ಷಕ್ಕೆ ಬಲ ತುಂಬುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಅನ್ನುವ ತತ್ವದಲ್ಲಿ ನಂಬಿಕೆ ಇಟ್ಟವರು ನಾವು. ದೇಶಕ್ಕಾಗಿ, ಪಕ್ಷಕ್ಕಾಗಿ ಯಾವುದೇ ಕೆಲಸವನ್ನಾದರೂ ಪ್ರಾಮಾಣಿಕವಾಗಿ ಮಾಡುತ್ತೇನೆ – ಸುಬ್ರಾಯ ವಾಳ್ಕೆ, ಚಲನಚಿತ್ರ ನಿರ್ಮಾಪಕರು.