ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಮತ್ತೊಂದು ಕರ್ಮಕಾಂಡ ಬೆಳಕಿಗೆ ಬಂದಿದೆ. ಮದ್ಯದ ದೊರೆ ವಿಜಯ್ ಮಲ್ಯಗೆ ಸಾಲ ಕೊಡಿಸಲು ಕಾರಣರಾದ ಹಿರಿಯ ನಾಯಕರೊಬ್ಬರ ಹೆಸರು ಬಹಿರಂಗವಾಗಿದೆ. ಮಲ್ಯ ಬಂಧನಕ್ಕೆ ಬಿಜೆಪಿ ಸರಕಾರ ಹಿಂದೆ ಮುಂದೆ ನೋಡುತ್ತಿದೆ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್, ಇದರಿಂದ ತೀವ್ರ ಇರಿಸುಮುರಿಸಿಗೆ ಒಳಗಾಗಿದೆ.
ಮಹಾರಾಷ್ಟ್ರದ ಎನ್ಸಿಪಿ ಮುಖಂಡ, ಮಾಜಿ ಕೇಂದ್ರ ಸಚಿವ ಶರದ್ ಪವಾರ್ ತಮಗೆ ಸಾಲ ಕೊಡಿಸಲು ನೆರವಾಗಿದ್ದರು ಎಂದು ಯುಬಿ ಗ್ರೂಪ್ ಚೇರ್ಮನ್, ವಿಜಯ್ ಮಲ್ಯ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಗಂಭೀರ ವಂಚನೆ ಪ್ರಕರಣಗಳ ತನಿಖಾ ಸಂಸ್ಥೆ (ಎಸ್ಎಫ್ಐಒ) ವರದಿ ಮಾಡಿದೆ. ಮಲ್ಯಗೆ ಶರದ್ ಪವಾರ್ ವಿವಿಧ ಬ್ಯಾಂಕ್ಗಳ ಮೂಲಕ ಸುಮಾರು 2 ಸಾವಿರ ಕೋಟಿ ಲೋನ್ ಕೊಡಿಸಲು ಶಿಫಾರಸ್ಸು ಮಾಡಿದ್ದರು ಎಂದು ಎಸ್ಎಫ್ಐಒ ವರದಿ ಉಲ್ಲಖಿಸಿ ರಿಪಬ್ಲಿಕ್ ರಾಷ್ಟ್ರೀಯ ವಾಹಿನಿ ವರದಿ ಮಾಡಿದೆ. ಆಗ ವಿತ್ತಸಚಿವರಾಗಿದ್ದ ಪ್ರಣಬ್ ಮುಖರ್ಜಿ ಜೊತೆಗೂ ಪವಾರ್ ಈ ಸಂಬಂಧ ಮಾತುಕತೆ ನಡೆಸಿದ್ದರಂತೆ.
ಪವಾರ್ ಮಧ್ಯಪ್ರವೇಶದ ಬಳಿಕ ಮಲ್ಯ ಸಾಲದ ಪುನರಚನೆ ಯೋಜನೆಗೆ ಮುಖರ್ಜಿ ಅಸ್ತು ಎಂದಿದ್ದರು ಎಂದು ತಿಳಿದುಬಂದಿದೆ. ಪವಾರ್ ಪ್ರಧಾನಿ ಜೊತೆಗೆ ಮಾತನಾಡಿ ಎಂದು ಮುಖರ್ಜಿ ಸೂಚಿಸಿದ್ದೂ, ಕೂಡಾ ಈ ಮೇಲ್ಗಳ ಮೂಲಕ ಬಹಿರಂಗವಾಗಿದೆ. ಈ ಸುದ್ದಿಯ ಬಗ್ಗೆ ಖಚಿತ ಮಾಹಿತಿ ಇಲ್ಲದಿದ್ದರೂ, ತನಿಖೆ ವೇಳೆ ಮಲ್ಯ ಒಪ್ಪಿಕೊಂಡಿದ್ದೇ ಆದಲ್ಲಿ, ಯುಪಿಎ ಸರಕಾರದ ಉನ್ನತ ನಾಯಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.