ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಕಡಲತೀರ ರೌದ್ರಾವತಾರ ತಾಳಿದೆ. ಈಗಾಗಲೇ, ಬಿಪರ್ ಜಾಯ್ ಚಂಡಮಾರುತ ಕರಾವಳಿಗೆ ಅಪ್ಪಳಿಸಿದ್ದು, ಅಲೆಗಳ ಅಬ್ಬರ ಹೆಚ್ಚಾಗಿದೆ.
ರಾಜ್ಯದಲ್ಲಿ ಮುಂಗಾರು ಇನ್ನೂ ಪ್ರವೇಶ ಮಾಡಿಲ್ಲ. ಮಳೆಗಾಗಿ ಜನರು ಕಾಯುತ್ತಿರುವುದರ ನಡುವೆ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತದ ಪರಿಣಾಮ ಮಳೆ ಬೀಳಲು ಪ್ರಾರಂಭವಾಗಿದೆ. ಬಿಪರ್ ಜಾಯ್ ಚಂಡಮಾರುತ ಕರಾವಳಿ
ಭಾಗಕ್ಕೆ ಅಪ್ಪಳಿಸಿದ್ದು, ಗಾಳಿ ಮಳೆ ಜೋರಾಗಿದೆ.
ಇದರ ನಡುವೆ ಸಮುದ್ರ ಸಹ ತನ್ನ ಸ್ವರೂಪ ಬದಲಿಸಿದ್ದು ಭಾರೀ ಅಲೆಗಳು ಏಳುತಿವೆ. ಕಳೆದ ಎರಡು ದಿನಗಳಿಂದ ಅಲೆಗಳ ಅಬ್ಬರ ಅಧಿಕವಾಗಿದ್ದು ಸ್ವಲ್ಪ ಯಾಮಾರಿದ್ರೂ ಪ್ರವಾಸಿಗರು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ವೀಕೆಂಡ್ ಆದ ಹಿನ್ನೆಲೆಯಲ್ಲಿ ರಾಜ್ಯ ಹೊರ ರಾಜ್ಯದಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಅಪಾಯಕಾರಿ ಕಡಲಿನಲ್ಲಿಯೇ ಇಳಿದು ಆಟ ಆಡಲು ಮುಂದಾಗುತ್ತಿದ್ದಾರೆ. ಪ್ರವಾಸಿಗರನ್ನ ಎಚ್ಚರಿಸಲು ಟೂರಿಸ್ಟ್ ಮಿತ್ರ, ಪೊಲೀಸರನ್ನ ನಿಯೋಜನೆ ಮಾಡಿದ್ದು, ಸಿಬ್ಬಂದಿಗಳ ಮಾತಿಗೆ ಲೆಕ್ಕಿಸದೇ ಪ್ರವಾಸಿಗರು ಕಡಲಿಗೆ ಇಳಿಯುತ್ತಿದ್ದಾರೆ.
ಇನ್ನು ಮೂರು ದಿನಗಳ ಕಾಲ ಕಡಲಿಗೆ ಪ್ರವಾಸಿಗರು ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಕಡಲ ತೀರಗಳಲ್ಲಿ ಕೆಂಪು ಬಾವುಟಗಳನ್ನ ಹಾಕಿ ಪ್ರವಾಸಿಗರಿಗೆ
ಎಚ್ಚರಿಸುವ ಕಾರ್ಯಕ್ಕೆ ಸಿಬ್ಬಂದಿಗಳು ಮುಂದಾಗುತ್ತಿದ್ದಾರೆ.
ಆದಾಗ್ಯೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಜಿಲ್ಲಾಡಳಿತದ ಎಚ್ಚರಿಕೆಗೆ ಕ್ಯಾರೆ ಎನ್ನುತ್ತಿಲ್ಲ. ಒಟ್ಟಿನಲ್ಲಿ ವಾಯುಭಾರ ಕುಸಿತದಿಂದ ಕರಾವಳಿ ಭಾಗದಲ್ಲಿ
ಕಡಲತೀರಗಳು ತನ್ನ ಸ್ವರೂಪ ಬದಲಿಸಿಕೊಂಡಿದ್ದು, ಪ್ರವಾಸಿಗರು ಕೂಡ ಕರಾವಳಿಯ ಕಡಲತೀರಗಳಿಗೆ ಪ್ರವಾಸಕ್ಕೆ
ಬರುವುದನ್ನ ಮುಂದೂಡಿ ಮುಂಜಾಗೃತೆ ವಹಿಸಿದರೆ ಒಳಿತು.