ಭಟ್ಕಳ : ಮುರುಡೇಶ್ವರಕ್ಕೆ ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿ ಸಮುದ್ರದಲೆಗೆ ಸಿಲುಕಿ ಸಾವನ್ನಪ್ಪಿದ್ದು ಇಬ್ಬರನ್ನು ಸ್ಥಳೀಯ
ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಮೃತ ವಿದ್ಯಾರ್ಥಿಯನ್ನು ಬೆಂಗಳೂರು ಖಾಸಗಿ ಕಾಲೇಜಿನ ವಿದ್ಯಾರ್ಥಿ ಪವನ್ ನಾಯ್ಕ(20) ಎಂದು ಗುರುತಿಸಲಾಗಿದೆ.
ಆರು ಜನ ಸ್ನೇಹಿತರೊಂದಿಗೆ ಮುರುಡೇಶ್ವರಕ್ಕೆ ಪ್ರವಾಸ ಬಂದಿದ್ದ ಪವನ್ ಹಾಗೂ ಮತ್ತಿಬ್ಬರು ಸಮುದ್ರದಲ್ಲಿ ಈಜಲು ಹೋಗಿದ್ದಾರೆ. ಈ ಸಂದರ್ಭ ಕಡಲ ಅಲೆಗಳ ಅಬ್ಬರ
ಜೋರಾಗಿದ್ದು, ಪವನ್ ಅಲೆಗಳಲ್ಲಿ ಕೊಚ್ಚಿ ಹೋಗಿದ್ದು ಜೀವರಕ್ಷಕ ಸಿಬ್ಬಂದಿ ಇಬ್ಬರು ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.
ಕಳೆದ ಮೂರು ದಿನಗಳ ಅಂತರದಲ್ಲಿ ಇಬ್ಬರನ್ನು ಬಲಿ ತೆಗೆದುಕೊಂಡಿರುವ ಮುರುಡೇಶ್ವರ ಕಡಲು ಸಾವಿನ ಒಡಲಾಗಿ ಮಾರ್ಪಟ್ಟಿದೆ ಎಂಬ ಮಾತುಗಳು ಕೇಳಿ ಬರತೊಡಗಿದ್ದು, ಇದೇ ಸ್ಥಳದಲ್ಲಿ ವ್ಯಕ್ತಿಯೊಬ್ಬರು ಕಣ್ಮರೆಯಾಗಿದ್ದು ವ್ಯಕ್ತಿಯ ಪತ್ತೆ ಇನ್ನೂ ಕೂಡ ಆಗಿಲ್ಲ. ಈ ನಡುವೆ ಮತ್ತೊಂದು ದುರ್ಘಟನೆ ಸಂಭವಿಸಿದೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.