ಕುಮಟಾ : ಕಣ್ಣೀರಿಡುತ್ತಾ, ಗೋಳಾಡುತ್ತಾ ಶಿಕ್ಷಕಿಯನ್ನು ಬಾಚಿ ತಬ್ಬುತ್ತಿರುವ ಮಕ್ಕಳು. ಇದೇ ಶಿಕ್ಷಕಿ ನಮ್ಮ ಶಾಲೆಗೆ ಬೇಕೆಂದು ಹಟಹಿಡಿದ ಗ್ರಾಮಸ್ಥರು, ಶಾಲೆಗೆ ಬೀಗ ಹಾಕಿ ಪ್ರತಿಭಟನೆಗೆ ಮುಂದಾದ ಎಸ್.ಡಿ.ಎಂ.ಸಿ ಸದಸ್ಯರು‌ ಹಾಗೂ ನಾಗರೀಕರು. ಇದೆಲ್ಲ ಕಂಡುಬಂದಿದ್ದು ತಾಲ್ಲೂಕಿನ ಅಳ್ಕೋಡ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಪ್ಪಿನ ಪಟ್ಟಣ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ. 

ಇಲ್ಲಿಯ ಶಾಲೆಯ ಶಿಕ್ಷಕಿ  ಸಂಧ್ಯಾ ರಾಯ್ಕರ್ ಅವರ ವರ್ಗಾವಣೆ ಖಂಡಿಸಿ ಗ್ರಾಮಸ್ಥರು ಹಾಗೂ ಎಸ್‌ಡಿಎಂಸಿಯವರು ಶುಕ್ರವಾರ ಶಾಲೆಗೆ ಬೀಗಹಾಕಿ ಪ್ರತಿಭಟನೆಗೆ ಮುಂದಾದರು. ಕಳೆದ 20 ವರ್ಷಗಳಿಂದ ಮಕ್ಕಳಿಗೆ ಪಾಠದೊಂದಿಗೆ ಉತ್ತಮ ಸಂಸ್ಕಾರವನ್ನು ಸಂಧ್ಯಾರವರು ನೀಡುತ್ತಿದ್ದಾರೆ. ಅವರನ್ನು ವರ್ಗ ಮಾಡುವುದರಿಂದ ಶಾಲೆಯ ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಾರೆ. ಹೀಗಾಗಿ ಮಕ್ಕಳ ಹಿತದ್ರಷ್ಟಿಯಿಂದ ಅವರನ್ನು ಪುನಃ ಇದೇ ಶಾಲೆಗೆ ನೇಮಕ ಮಾಡುವವರೆಗೂ ಶಾಲೆಯ ಬೀಗ ತೆರೆಯುವದಿಲ್ಲ ಎಂದು ಪ್ರತಿಭಟನೆಗೆ ಮುಂದಾದವರು ಪಟ್ಟು ಹಿಡಿದರು.

ಈ ಶಾಲೆಯಲ್ಲಿ ಈಗಾಗಲೇ ಶಾಲೆಯಲ್ಲಿ  50 ಕ್ಕೂ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೂ ಶಿಕ್ಸಣ ಇಲಾಖೆ  ಸಂಧ್ಯಾ ರಾಯ್ಕರ್ ಅವರನ್ನು ಹೆಚ್ಚುವರಿ ಎಂದು ವರ್ಗಾವಣೆ ಮಾಡಿದೆ. ಇದು ಸರಿಯಾದ ಕ್ರಮವಲ್ಲ. ಶಾಲೆಗೆ ಶಿಕ್ಷಕರ ಕೊರತೆಯಾಗುವ ಜೊತೆಗೆ ಉತ್ತಮ ಶಿಕ್ಷಕಿಯನ್ನು ಕಳೆದುಕೊಂಡಂತೆ ಆಗುತ್ತದೆ ಎಂಬುದು ಗ್ರಾಮಸ್ಥರವಾದ. 

ಅತ್ಯುತ್ತಮವಾಗಿ ಕಲಿಸುವ, ಮಕ್ಕಳನ್ನು ಪ್ರೀತಿಸುವ, ಉತ್ಯಮ ಸಂಸ್ಕಾರ ನೀಡುವ ಸಂಧ್ಯಾ ರಾಯ್ಕರ್ ಅವರನ್ನು ವರ್ಗಾವಣೆ ಮಾಡಕೂಡದು ಎಂದು ಘೋಷಣೆಗಳನ್ನು ಕೂಗಿದ ಗ್ರಾಮಸ್ಥರು ಹಾಗೂ ಎಸ್.ಡಿ.ಎಂ.ಸಿ ಸದಸ್ಯರುಗಳು ಮಕ್ಕಳನ್ನು ಶಾಲೆಯಿಂದ ಹೊರಹಾಕಿ, ಶಾಲೆಗೆ ಬೀಗ ಹಾಕಿಸಿ, ಬಿಸಿ ಊಟ ನೀಡದೇ ಪ್ರತಿಭಟನೆಯಲ್ಲಿ ತೊಡಗಿಕೊಂಡರು‌. 

RELATED ARTICLES  ಸರಳ ಸಜ್ಜನಿಕೆಯ ಸಹೃದಯಿ ಪತ್ರಕರ್ತ ವಿಠ್ಠಲದಾಸ್ ಕಾಮತ್

ಘಟನೆಯ ವಿವರ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯತ್ ನಿಕಟ ಪೂರ್ವ ಸದಸ್ಯ ಗಜಾನನ ಪೈ ಮಾತನಾಡಿ ಇಂತಹ ಶಿಕ್ಷಕರು ನಮ್ಮ ಶಾಲೆಗೆ ಅವಶ್ಯಕತೆ ಇದೆ. ಶಾಸಕರ ಬಳಿ ಚರ್ಚಸಿ ಪುನಃ ಇದೆ ಶಾಲೆಗೆ ವಾಪಾಸ್ ಕರೆತರಲು ಪ್ರಯತ್ನ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಹರಿಶ್ಚಂದ್ರ ಗೌಡ. ನಯನಾ ಗೌಡ. ಶ್ರೀಧರ್ ಗೌಡ, ಮಾರು ಮುಕ್ರಿ, ಶಶಿಕಲ್ ಅಂಬಿಗ, ಅನಂತ್ ಶಾನಭಾಗ್ ಹಾಗೂ ಎಸ್. ಡಿ. ಎಮ್. ಸಿ ಅಧ್ಯಕ್ಷ ಉಪಾಧ್ಯಕ್ಷರು ಇದ್ದರು.

ಉತ್ತಮ ಶಿಕ್ಷಕಿ ಸಂಧ್ಯಾ.

ಸಂಧ್ಯಾ ರಾಯ್ಕರ್ ಕಳೆದ ಅನೇಕ ವರ್ಷಗಳಿಂದ ಇಲ್ಲಿಯೇ ಸೇವೆ ಸಲ್ಲಿಸುತ್ತಿದ್ದು, ಅತ್ಯಂತ ಕ್ರಿಯಾಶೀಲ ಹಾಗೂ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ ಪಾಠ ಪ್ರವಚನಗಳಲ್ಲಿಯೂ ಉತ್ತಮ ರೀತಿಯಲ್ಲಿ ಹೆಸರು ಗಳಿಸಿದ್ದಾರೆ. ವಿವಿಧ ಸಂಸ್ಕೃತಿಕ ಹಾಗೂ ಶಾಲಾ ಸಂಬಂಧಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡವರಾಗಿದ್ದಾರೆ. ಇದೀಗ ಅವರು ವರ್ಗಾವಣೆಗೊಂಡು ಭಟ್ಕಳಕ್ಕೆ ತೆರಳಬೇಕಾಗಿದೆ.

ಶಾಲೆಯ ಪಾಡೇನು?

4 ವರ್ಷದಿಂದ ಮುಖ್ಯಶಿಕ್ಷಕರು ಇಲ್ಲದೆ ಶಾಲೆ ನಡೆಯುತ್ತಿದೆ. ಒಬ್ಬರು ಇಲ್ಲಿಂದ ಹೋದರೆ ಕೇವಲ 3 ಶಿಕ್ಷಕರು ಕಾರ್ಯ ಮಾಡಬೇಕು. ಮುಖ್ಯ ಶಿಕ್ಷಕರ ಜವಾಬ್ದಾರಿ ಓರ್ವರು ನಿರ್ವಹಿಸಬೇಕು. ನಲಿ ಕಲಿಯ ತರಗತಿ ಓರ್ವರಿಗೆ ಇನ್ನುಳಿದ ಓರ್ವರು ಉಳಿದ ಜವಾಬ್ದಾರಿ ನಿರ್ವಹಿಸುವುದು ಕಷ್ಟಸಾಧ್ಯ ಎಂಬಂತಿದೆ.

ಗೊಂದಲಕ್ಕೆ ಕಾರಣವೇನು?

2021ರ ಮಕ್ಕಳ ಹಾಜರಾತಿಯನ್ವಯ ವರ್ಗಾವಣೆ ಪ್ರಕ್ರಿಯೆಗಳನ್ನು ನಡೆಸಲಾಗಿದೆ. ಆದರೆ ಕಳೆದೆರಡು ವರ್ಷಗಳಲ್ಲಿ ಅನೇಕ ರೀತಿಯ ಬದಲಾವಣೆಗಳಾಗಿದ್ದು ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಬದಲಾವಣೆಯಾಗಿದೆ. ಆಗಿನ ದಾಖಲಾತಿ ಪ್ರಕ್ರಿಯೆನ್ವಯ ಈ ಚಟುವಟಿಕೆಗಳನ್ನು ನಡೆಸಿರುವುದು ಈಗ ವಿದ್ಯಾರ್ಥಿಗಳು ಹೆಚ್ಚಿರುವ ಶಾಲೆಯಲ್ಲಿಯೂ ಶಿಕ್ಷಕರ ಕೊರತೆ ತಲೆದೋರುವಂತೆ ಮಾಡಿದೆ. ಅದರ ಜೊತೆಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಶಾಲೆಯಲ್ಲಿ ಶಿಕ್ಷಕರು ಹೆಚ್ಚುವರಿಯಾಗಿರುವುದೂ ಆಗಿದೆ.

RELATED ARTICLES  ಮಗುವಿನ ಚಿಂತನೆ..

ಇಲಾಖೆಯ ನಿಯಮಕ್ಕೆ ಅನುಸಾರವಾಗಿ ಈ ಪ್ರಕ್ರಿಯೆಗಳು ನಡೆದಿದೆ. ಶಾಲೆಗೆ ಶಿಕ್ಷಕರ ಕೊರತೆ ಇದ್ದರೆ, ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಅನಾನುಕೂಲವಾಗದಂತೆ ಸೂಕ್ತ ವ್ಯವಸ್ಥೆ ಕೈಗೊಳ್ಳುತ್ತೇವೆ. ವರ್ಗಾವಣೆ ಪ್ರಕ್ರಿಯೆಗಳು ನಿಯಮಾನುಸಾರ ನಡೆದಿದ್ದು ಅನೇಕರ ವರ್ಗಾವಣೆಗಳಾಗಿದೆ. ಇವರೇ ನಮ್ಮ ಶಾಲೆಗೆ ಬೇಕು ಎನ್ನುವಂತಹ ಆಗ್ರಹ ಈ ಕ್ಷಣದಲ್ಲಿ ಸಾಧ್ಯವಿಲ್ಲವಾಗಿದೆ. ಅವರು ನಿಯಮಾನುಸಾರ ಅಲ್ಲಿಗೆ ವರ್ಗಾವಣೆಗೊಂಡು ಮತ್ತೆ ಪುನಹ ಇಲ್ಲಿಗೆ ಬರಲು ಇಲಾಖೆಯ ಪ್ರಕ್ರಿಯೆಗಳ ಮೂಲಕ ಅವಕಾಶವಿದ್ದು, ಅದರ ಬಗ್ಗೆ ಅವರು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು – ರಾಜೇಂದ್ರ ಭಟ್ಟ, ಕ್ಷೇತ್ರ ಶಿಕ್ಷಣಾಧಿಕಾರಿ ಕುಮಟಾ.

——–

ವಿದ್ಯಾರ್ಥಿಗಳು ಹಾಗೂ ಪಾಲಕರು ಮತ್ತು ಗ್ರಾಮಸ್ಥರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ಇಲಾಖೆಯ ನಿಯಮಾನುಸಾರ ನಡೆಯುವ ಪ್ರಕ್ರಿಯೆ ಇದು. ಅವಕಾಶಗಳಿದ್ದಲ್ಲಿ ಖಂಡಿತವಾಗಿ ಎಲ್ಲಿಯೇ ಬಂದು ನನ್ನ ಸೇವೆ ಮುಂದುವರಿಸುತ್ತೇನೆ ಪ್ರೀತಿಯ ಮಕ್ಕಳನ್ನು ಬಿಟ್ಟು ಹೋಗುತ್ತಿರುವುದು ಬೇಸರವೆನಿಸಿದರೂ ಅನಿವಾರ್ಯವಾಗಿದೆ. ನನ್ನ ಎಲ್ಲಾ ಕಾರ್ಯಕ್ಕೆ ಪ್ರೀತಿಯಿಂದ ಎಲ್ಲರೂ ಸಹಕಾರ ನೀಡಿದ್ದಾರೆ. ನನಗೆ ಶಾಲೆ ಎಂದರೆ ಪ್ರಾಣ. ಮಕ್ಕಳು ಅಳುವುದು ಅತ್ಯಂತ ನೋವಿನ ಸಂಗತಿಯಾಗಿದೆ. – ಸಂಧ್ಯಾ ರಾಯ್ಕರ್,ವರ್ಗಾವಣೆಗೊಂಡ ಶಿಕ್ಷಕಿ.