ಶಿರಸಿ: ಸೋಂದಾ ಸ್ವರ್ಣವಲ್ಲೀ‌ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿಗಳ 33ನೇ ಚಾತುರ್ಮಾಸ್ಯ ವ್ರತಾಚರಣೆ ಜುಲೈ 3 ರಿಂದ ಸೆಪ್ಟೆಂಬರ್ 29 ರ ತನಕ ನಡೆಯಲಿದೆ ಎಂದು ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ತಿಳಿಸಿದ್ದಾರೆ. ನಗರದ ಯೋಗ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು, ಸಾಮಾನ್ಯವಾಗಿ ನಾಲ್ಕು ಪಕ್ಷಗಳ ಕಾಲ ಚಾತುರ್ಮಾಸ್ಯ ವ್ರತಾಚರಣೆ ನಡೆಯುತ್ತದೆ. ಈ ಸಲ ಶ್ರಾವಣ‌ ಮಾಸ ಅಧಿಕ ಆಗಿದ್ದರಿಂದ ಒಟ್ಟು 3 ತಿಂಗಳು ವ್ರತಾಚರಣೆ ನಡೆಯಲಿದೆ ಎಂದರು. ಆಷಾಢ ಪೂರ್ಣಿಮೆಯಂದು ಬೆಳಗ್ಗೆ 10 ಕ್ಕೆ ಶ್ರೀಗಳು ಶ್ರೀವೇದ ವ್ಯಾಸರ ಪೂಜೆ ನಡೆಸಿ‌ ವ್ರತ ಸಂಕಲ್ಪ‌ ಮಾಡಲಿದ್ದಾರೆ. ಬಳಿಕ ಸಮಸ್ತ ಶಿಷ್ಯರ ಪರವಾಗಿ ಪಾದುಕಾ ಪೂಜೆ‌ ನಡೆಯಲಿದೆ ಎಂದರು. ಈ ವ್ರತ ಶೋಭನ ಸಂವತ್ಸರದ ಆಷಾಢ ಪೂರ್ಣಿಮೆಯಿಂದ ಭಾದ್ರಪದ ಶುದ್ದ ಹುಣ್ಣಿಮೆಗೆ ಪೂರ್ಣವಾಗಲಿದೆ. ಚಾತುರ್ಮಾಸ್ಯದ ಅವಧಿಯಲ್ಲಿ ನಿತ್ಯವೂ ಒಂದೊಂದು ಸೀಮೆಯಿಂದ ಪಾದ ಪೂಜೆ‌ ನಡೆಯಲಿದೆ ಎಂದರು.

ಸ್ವರ್ಣವಲ್ಲೀ ಮಠದಲ್ಲೇ ವ್ರತ ಸಂಕಲ್ಪ
ಕಳೆದ 33 ವರ್ಷದಿಂದ ತಪೋ ಭೂಮಿಯಾದ ಸ್ವರ್ಣವಲ್ಲೀ ಮಠದಲ್ಲಿಯೇ ಶ್ರೀಗಂಗಾಧರೇಂದ್ರ ಸರಸ್ವತೀ ಶ್ರೀಗಳು ಚಾತುರ್ಮಾಸ್ಯ‌ ವ್ರತಾಚರಣೆ ನಡೆಯುತ್ತಿರುವದು ಸ್ವರ್ಣವಲ್ಲೀಯಲ್ಲಿ ವಿಶೇಷವಾಗಿದೆ. ಈ ಅವಧಿಯಲ್ಲಿ ಶಿಷ್ಯರು‌ ಮಠಕ್ಕೆ ಆಗಮಿಸಿ ಗುರು ಸೇವೆ‌ ನಡೆಸಲಿದ್ದಾರೆ ಎಂದರು.

ವ್ರತ ಸಂಕಲ್ಪ ದಿನ ಋಗ್ವೇದ, ಕೃಷ್ಣಜುರ್ವೇದ, 18 ಪುರಾಣ ಪಾರಾಯಣ ನಡೆಯಲಿದೆ. ಜು. 10 ರಿಂದ 24 ರ ತನಕ ಶ್ರೀಗಳಿಂದ ಕಾಷ್ಠ ಮೌನ ಇದ್ದು, ಅಂದಿನ ದಿನದಲ್ಲಿ ಶ್ರೀ ದರ್ಶನ ಇಲ್ಲವಾಗಿದೆ‌.

ಶ್ರೀಗಳ ಚಾತುರ್ಮಾಸ್ಯ ಆರಂಭದ‌ ಹಿನ್ನಲೆಯಲ್ಲಿ ಜು.3ರಂದು ಸಂಜೆ 4ಕ್ಕೆ ಸಭಾ‌ ಕಾರ್ಯಕ್ರಮ ನಡೆಯಲಿದೆ. ಅಂದು ಅತಿಥಿಗಳಾಗಿ ಶಾಸಕ ಶಿವರಾಮ ಹೆಬ್ಬಾರ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಅಶೋಕ ಹಾರ್ನಳ್ಳಿ ಪಾಲ್ಗೊಳ್ಳುವರು ಎಂದರು.

ನಾಡಿನ ಖ್ಯಾತ ವೈದ್ಯ ದಾವಣಗೆರೆಯ ಡಾ. ಎಸ್.ಆರ್.ಹೆಗಡೆ, ವಾತುಲಾಗಮ ವಿದ್ವಾಂಸ ವೇ. ಗಜಾನನ ಹಿರೇ ಭಟ್ಟ ಗೋಕರ್ಣ, ದಕ್ಷ ಆಡಳಿತಗಾರ ರಘುಪತಿ ಎನ್.ಭಟ್ಟ ಸುಗಾವಿ, ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರನ್ನು ಸಮಾರಂಭದ ಸಾನ್ನಿಧ್ಯ‌ ನೀಡುವ ಶ್ರೀಗಳು ಗೌರವಿಸಲಿದ್ದಾರೆ. ಶ್ರೀಗಳು ಬರೆದ ಲೇಖನಗಳ ಸಂಕಲನ ಗುರುವಾಣಿ ಕೃತಿ ಬಿಡುಗಡೆ ಕೂಡ ಆಗಲಿದೆ ಎಂದರು.

ಮಠದ ವ್ಯಾಪ್ತಿಯ ಹಾಗೂ ವಿವಿಧ ನಗರಗಳಲ್ಲಿ ಇರುವ ಸ್ವರ್ಣವಲ್ಲೀ ಸೀಮಾ ಪರಿಷತ್ ಸದಸ್ಯರು, ಶ್ರೀರಾಮ ಕ್ಷತ್ರಿಯ ಶಿಷ್ಯರು ಸೇರಿದಂತೆ ಅನೇಕ ಶಿಷ್ಯರು ಈ ಅವಧಿಯಲ್ಲಿ ಸೇವೆ ಸಲ್ಲಿ ಸಲಿದ್ದಾರೆ.

ಶಿಷ್ಯರಿಗಾಗಿ ಪ್ರತಿ‌ ದಿನ‌ ಸಂಜೆ ಶ್ರೀ ಮಹಾಭಾರತ ಪುರಾಣ ಪ್ರವಚನ ನಡೆಯಲಿದೆ. ಚಾತುರ್ಮಾಸ್ಯ ಅವಧಿಯಲ್ಲಿ ಸ್ವಸಹಾಯ ಸಂಘಗಳ‌ ಸಮಾವೇಶ, ಯಕ್ಷ ಶಾಲ್ಮಲಾ‌ ಸಂಸ್ಥೆಯಿಂದ ಮಕ್ಕಳ‌ ತಾಳಮದ್ದಲೆ ಸ್ಪರ್ಧೆ, ಸನ್ಮಾನ ನಡೆಯಲಿದೆ. ಚಾತುರ್ಮಾಸ್ಯ ವೇಳೆ ಉಪನೀತರು ಕನಿಷ್ಠ 1008 ಗಾಯತ್ರಿ ಜಪ‌ ಅನುಷ್ಠಾನ ಮಾಡಬೇಕು ಎಂಬುದು ಶ್ರೀಗಳ ಅಪೇಕ್ಷೆ ಆಗಿದೆ ಎಂದೂ ತಿಳಿಸಿರು.ಈ ವೇಳೆ ಪ್ರಮುಖರಾದ ಆರ್.ಎಸ್.ಹೆಗಡೆ ಭೈರುಂಬೆ, ಕೆ.ವಿ.ಭಟ್ಟ, ಎಸ್.ಎನ್.ಭಟ್‌ ಉಪಾಧ್ಯ ಇತರರು ಇದ್ದರು.