ಕುಮಟಾ : ಮುಕ್ಕಾಲು ಭಾಗ ಜೂನ್ ಕಳೆದರೂ ಬಾರದ ಮಳೆಯಿಂದಾಗಿ ತಲೆಯಮೇಲೆ ಕೈ ಇಟ್ಟು ಕುಳಿತಿದ್ದ ಅನ್ನದಾತರು, ಜುಲೈ ಪ್ರಾರಂಭದಲ್ಲಿಯೇ ಬರಪೂರ ಮಳೆಯಿಂದಾಗಿ, ಕೃಷಿ ಕಾರ್ಯವನ್ನು ಚುರುಕಾಗಿಸಿದ್ದಾರೆ. ತಾಲೂಕಿನಲ್ಲಿ ಕಳೆದೊಂದು ವಾರದಿಂದ ಉತ್ತಮವಾಗಿ ತಾಲೂಕಿನಾದ್ಯಂತ ಮಳೆ ಬೀಳುತ್ತಲಿದೆ. ಅನೇಕ ಭಾಗಗಳಲ್ಲಿ ರೈತರು ನಾಟಿ ಕಾರ್ಯಕ್ಕೆ ಮುಂದಾಗಿದ್ದಾರೆ.

ತಾಲೂಕಿನಲ್ಲಿ ಕೆಲವೆಡೆ ಈಗ ರೈತರು ಭತ್ತದ ಸಸಿ ನಾಟಿ ಕಾರ್ಯದಲ್ಲಿ ನಿರತರಾಗಿದ್ದರೆ, ಇನ್ನು ಕೆಲವೆಡೆ ನೇರ ಬಿತ್ತನ ಮಾಡಿದ್ದಾರೆ. ಕುಮಟಾ ತಾಲೂಕಿನಲ್ಲಿ ಈ ಬಾರಿ ಒಟ್ಟೂ ೨,೬೨೦ ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಮಳೆಯಾಶ್ರಿತ ಭತ್ತದ ಬೆಳೆ ಬೆಳೆಯುವ ಗುರಿ ಹೊಂದಲಾಗಿದೆ. ಇದರ ಜೊತೆಗೆ ಕುಮಟಾದಲ್ಲಿ ಕಬ್ಬು (೨೦ ಹೆಕ್ಟೇರ್) ಶೇಂಗಾ (೫ ಹೆಕ್ಟೇರ್) ಬೆಳೆಗಳಿದೆ.

ಮುಂಗಾರು ಹಂಗಾಮಿನಲ್ಲಿ ಬತ್ತ ಬೆಳೆ ಬಿತ್ತನೆಗೆ ರೈತರಿಗೆ ಸಹಾಯಧನದ ಅಡಿಯಲ್ಲಿ ತಾಲೂಕಿನ ಕುಮಟಾ, ಗೋಕರ್ಣ, ಮಿರ್ಜಾನ್, ಕೂಜಳ್ಳಿ ರೈತ ಸಂಪರ್ಕ ಕೇಂದ್ರದಿಂದ ಬೀಜ ಹಾಗೂ ರಸಗೊಬ್ಬರಗಳನ್ನು ವಿತರಿಸಲಾಗಿದೆ. ಕಳೆದ ವರ್ಷ 750 ಕ್ವಿಂಟಲ್ ಬತ್ತ ಬಿತ್ತನೆ ಬೀಜ ವಿತರಿಸಿದ್ದು, ಪ್ರಸ್ತುತ ವರ್ಷ 1107 ಕ್ವಿಂಟಲ್ ಭತ್ತದ ವಿವಿಧ ತಳಿಗಳಾದ ವಿತರಿಸಲಾಗಿದೆ.

ದಿವಗಿ, ಅಘನಾಶಿನಿ, ಬಾಡ, ಕಾಗಾಲ, ಹೊಲನಗದ್ದೆ, ಕಲಭಾಗ, ಹಂದಿಗೋಣ, ಮಾದನಗೇರಿ,  ಗೋಕರ್ಣ ಭಾಗದಲ್ಲಿನ ೩೫ ಹೆಕ್ಟೇರ್ ಗದ್ದೆಗಳಲ್ಲಿ ರೈತರು ನಾಟಿ ಕಾರ್ಯ ಮುಗಿಸಿದ್ದಾರೆ. ಇನ್ನೂ ತಾಲೂಕಿನ ವಿವಿಧೆಡೆಯಲ್ಲಿ ಸುಮಾರು ೧೫ ಹೆಕ್ಟೇರ್ ಪ್ರದೇಶದಲ್ಲಿ ನೇರ ಬಿತ್ತನೆ ಮಾಡಲಾಗಿದೆ. ಇನ್ನು ಉಳಿದಿರುವ ಹೆಕ್ಟೇರ್ ಪ್ರದೇಶದ ಗದ್ದೆಗಳಲ್ಲಿ ಭತ್ತ ಬೆಳೆಯಲು ಪೂರಕವಾಗುವ ಕೆಲಸವನ್ನ ಮಳೆ ನೋಡಿಕೊಂಡು ರೈತರು ನಡೆಸಿದ್ದಾರೆ ಎಂದು ಕುಮಟಾ ಕೃಷಿ ಇಲಾಖೆಯ ಮಾಹಿತಿ ನೀಡಿದೆ.

RELATED ARTICLES  || ಪುಣ್ಯಕೋಟಿ ಗೋಮಾತೆ ||

ತಾಲೂಕಿನ ಮಿರ್ಜಾನ್, ಕೂಜಳ್ಳಿ, ದೀವಗಿ, ಹರಕಡೆ ಭಾಗದಲ್ಲಿ ಬಹುಪಾಲು ರೈತರ ನಾಟಿ ಕಾರ್ಯ ತುರುಸಾಗಿ ನಡೆದಿದೆ. ಆದರೆ ಜೂನ್ ನಲ್ಲಿ ನಡೆಯಬೇಕಾದ ಎಲ್ಲಾ ಕೃಷಿ ಚಟುವಟಿಕೆಗಳು ಜುಲೈ ಪ್ರಾರಂಭದಲ್ಲಿ ಚುರುಕಾಗಿ ನಡೆಯುತ್ತಿದೆ. ಅಂದರೆ ಒಂದು ತಿಂಗಳ ಕಾಲಾವಧಿಯ ಹಿನ್ನಡೆಯನ್ನು ಗಮನಿಸಬಹುದಾಗಿದೆ.

ರೈತರು ಭತ್ತದ ತಳಿಗಳಾದ ಉಮಾ, ಹಳಗ, ೧೦೦೧, ಭದ್ರ ಭತ್ತವನ್ನು ನಾಟಿ ಮಾಡಿದ್ದಾರೆ. ಹಲವೆಡೆ ಪಾರಂಪರಿಕ ಜೋಡೆತ್ತುಗಳ ಮೂಲಕ ನಾಟಿ ಕಾರ್ಯವನ್ನು ಮಾಡಿದ್ದಾರೆ. ಇನ್ನೆರಡು ಮೂರು ದಿನದಲ್ಲಿ ತಾಲೂಕಿನಲ್ಲಿ ಸುಮಾರು ೧೦೦% ನಾಟಿ ಕಾರ್ಯ ಮುಕ್ತಾಯಗೊಳ್ಳಲಿದೆ.

ಕಳೆದ ೨೦೨೨-೨೩ನೇ ಸಾಲಿನಲ್ಲಿ ಜೂನ್ ೧ ರಿಂದ ಜೂನ್ ೩೦ರ ವರೆಗೆ ವಾಡಿಕೆಯಂತೆ ೯೭೩ ಮೀ.ಮೀ ಮಳೆಯಾಗುವ ಬದಲು ೭೭೫ ಮೀ ಮೀ ಮಳೆಯಾಗಿತ್ತು. ಜುಲೈ ೧ ರಿಂದ ೫ ರವರೆ ವಾಡಿಕೆಯಂತೆ ೨೩೯ ಮೀ.ಮೀ ಮಳೆಯಾಗುವ ಬದಲು ೬೨೬ ಮೀ.ಮೀ ಮಳೆ ಸುರಿದಿತ್ತು.
ಆದರೆ ಈ ಸಲದ(೨೦೨೩-೨೪ಸಾಲಿನ) ಜೂನ್ ೧ ರಿಂದ ಜೂನ್ ೩೦ರ ವರೆಗೆ  ೭೭೫ ಮೀ.ಮೀ(ವಾಡಿಕೆ ಮಳೆಯಾಗಬೇಕಾಗಿದ್ದು-೯೭೩), ಜುಲೈ ೧ ರಿಂದ ೫ರ ವರೆಗೆ ೧೨೭ ಮೀ.ಮೀ ಮಳೆಯಾಗಿದೆ(ವಾಡಿಕೆಯಂತೆ ಈ ಅವಧಿಯಲ್ಲಿ ಆಗಬೇಕಾಗಿದ್ದ ಮಳೆ ೧೧೮ ಮೀ.ಮೀ). 

ಮಳೆಯ ಕೊರತೆಯ ಮಧ್ಯೆಯು ಕೃಷಿ ಇಲಾಖೆಯಿಂದ ರೈತರಿಗೆ ೫೦೩ ಕ್ವಿಂಟಲ್ ಜಯಾ ಭತ್ತದ ಬೀಜ, ಎಂ.ಟಿ.ಯು-೧೦೦೧-೧೧೮.೭೫, ಕ್ವಿಂಟಲ್, ಎಂ.ಓ-೪-೨೬.೭೫ ಕ್ವಿಂಟಲ್, ಪಿ.ಎ.ಸಿ-೮೩೭ ಎಂಬ ಹೆಸರಿನ ಹೈಬ್ರಡ್ ಭತ್ತದ ಬೀಜವನ್ನು ೨೪.೦೪ ಕ್ವಿಂಟಲ್ ವಿತರಿಸಿದೆ. ತಾಲೂಕಿನ ದಿವಳ್ಳಿ, ಸಾಂತಗಲ್, ಮಿರ್ಜಾನ್, ಹೆಗಡೆ, ಮುರೂರು, ಬಾಡ, ಕಾಗಲ್, ಮರಾಕಲ್ ಸೇರಿದಂತೆ ಅನೇಕ ಗುಡ್ಡಗಾಡು ಪ್ರದೇಶದಲ್ಲಿ ಜೂನ್ ಕೊನೆಯ ವರೆಗೆ ನೀರಿನ ಕೊರತೆ ಎದುರಾಗಿರುವುದರಿಂದ ನಾಟಿ ಕಾರ್ಯಕ್ಕೆ ವಿಳಂಬ ಉಂಟಾಗಿತ್ತು.

RELATED ARTICLES  ಶ್ರುತ್ಯಾನುಸಾರ ಸೃಷ್ಟಿಯುತ್ಪತ್ತಿಕ್ರಮ

ಮಳೆಯಿಂದ ತೇವಾಂಶ ಹೆಚ್ಚಿದ ಗದ್ದೆಯನ್ನು ಪಾರಂಪರಿಕ ಜೋಡೆತ್ತುಗಳ ಮೂಲಕ, ಯಾಂತ್ರೀಕೃತ ಟ್ರಾಕ್ಟರ್ ಮೂಲಕ ಹದಮಾಡಿ ಸಾವಯವ ಗೊಬ್ಬರಗಳನ್ನು ಜಮೀನಿಗೆ ಹಾಕಿ, ಹಲವೆಡೆ ಬಿತ್ತನೆ ಕಾರ್ಯ ಮುಗಿಯುತ್ತಾ ಬಂದಿದ್ದರೆ ಇನ್ನೂ ಕೆಲವೆಡೆ ನಾಟಿ ಕಾರ್ಯ ಬಹಳ ಚುರುಕಾಗಿ ಸಾಗಿದೆ.

ಅಘನಾಶಿನಿ ನದಿ ತೀರದಲ್ಲಿ ನೆರೆಹಾವಳಿ ಮತ್ತು ಉಪ್ಪು ನೀರಿನಿಂದ ಕೆಲವು ಪ್ರದೇಶಗಳಲ್ಲಿ ಭತ್ತದ ಬೆಳೆ ಕಷ್ಟ ಸಾಧ್ಯವಾಗಿದ್ದು ನೆರೆನಿರೋಧಕ ಮತ್ತು ಉಪ್ಪು ನೀರಿನಲ್ಲಿಯೂ ಬೆಳೆಯುವ ಭತ್ತದ ತಳಿಗಳನ್ನು ರೈತರಿಗೆ ಪರಿಚಯಿಸಿ ಈ ಮೂಲಕ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.

ಮಳೆಯು ಜುಲೈ ನಿಂದ ಪ್ರಾರಂಭವಾದ ಹಿನ್ನೆಲೆಯಲ್ಲಿ ನಾಟಿ ಕಾರ್ಯವು ತುಂಬಾ ಮುಂದೆ ಬಂದಿದೆ. ಆದರೆ ಮಳೆ ಈಗ ಒಳ್ಳೆಯ ವಾತಾವರಣ ಮಾಡಿಕೊಟ್ಟಿದೆ. ನಾನು ಒಳ್ಳೆಯ ಅಕ್ಕಿಯಾಗುವ ನಿಟ್ಟಿನಲ್ಲಿ ೧೦೦೧ ಭತ್ತವನ್ನು ಗದ್ದೆಗೆ ಹಾಕಿದ್ದು, ನಾಟಿ ಕಾರ್ಯ ನಡೆಯುತ್ತಲಿದೆ – ಹರೀಶ ಗೌಡ, ಭತ್ತ ಬೆಳೆಗಾರ.

ಪ್ರಸ್ತುತ ವರ್ಷ ಮುಂಗಾರು ಮಳೆ ತಡವಾಗಿ ಪ್ರಾರಂಭವಾಗಿರುವುದರಿಂದ ಕೃಷಿ ಚಟುವಟಿಕೆ ತಡವಾಗಿ ಪ್ರಾರಂಭವಾದರೂ ಉತ್ತಮ ಮಳೆಯಾಗಿರುವುದರಿಂದ ಭತ್ತ ಬೆಳೆಗೆ ಯಾವುದೇ ತೊಂದರೆ ಇಲ್ಲವಾಗಿದೆ. ರೈತರು ಸಂತಸದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಬೇಕಾದ ಎಲ್ಲ ವಿಧದ ಸೌಲಭ್ಯ ಒದಗಿಸಲು ಕೃಷಿ ಇಲಾಖೆ, ಸನ್ನದ್ಧವಾಗಿದೆ. – ಶ್ರೀಧರ ನಾಯ್ಕ, ಸಹಾಯಕ ಕೃಷಿ ನಿರ್ದೇಶಕರು (ಪ್ರಭಾರಿ). ಕುಮಟಾ