ಹೊನ್ನಾವರ ತಾಲೂಕಿನ ಕರ್ಕಿಯ ಮಠದಕೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಚರಂಡಿಯಲ್ಲಿ ಮಣ್ಣು ತುಂಬಿದ ಪರಿಣಾಮ ಚರಂಡಿಯಲ್ಲಿ ಹರಿಯಬೇಕಿದ್ದ ಮಳೆನೀರು ಅಕ್ಕಪಕ್ಕದ ಮನೆಗಳನ್ನು ಸುತ್ತುವರೆದು, ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ. ಇಂದು ಮಾನ್ಯ ದಿನಕರ ಶೆಟ್ಟಿಯವರು ಅಲ್ಲಿಗೆ ಭೇಟಿನೀಡಿ ವೀಕ್ಷಿಸಿ, ಸಮಸ್ಯೆಯನ್ನು ಬಗೆಹರಿಸಲು ಇರುವ ಮಾರ್ಗೋಪಾಯಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಮಾತುಕತೆಯ ಮೂಲಕ ಭೂಮಾಲೀಕರ ಮನವೊಲಿಸಿದ ಶಾಸಕರು ನಂತರ ಚರಂಡಿಯ ಅಗಲೀಕರಣ ಕೆಲಸವನ್ನು ನಾಳೆಯಿಂದಲೇ ಆರಂಭ ಮಾಡುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ನಂತರ ಕರ್ಕಿಯ ಬೇಲೆಕೇರಿ ಹರಿಜನಕೇರಿಗೆ ತೆರಳಿ ಅಲ್ಲಿ ನದಿದಂಡೆಯಲ್ಲಿ ಉಂಟಾದ ಕೊರೆತವನ್ನು ವೀಕ್ಷಣೆ ಮಾಡಿದರು. ಇದನ್ನು ತಪ್ಪಿಸಲು ತಡೆಗೋಡೆ ನಿರ್ಮಿಸುವ ಬಗ್ಗೆ ಚರ್ಚಿಸಿದರು.
ಬಿಜೆಪಿಯ ಹಿರಿಯ ಮುಖಂಡರಾದ ವಿನೋದ ಪ್ರಭು, ಗ್ರಾಮಪಂಚಾಯತ್ ಸದಸ್ಯರುಗಳಾದ ನಾಗರಾಜ ನಾಯ್ಕ್, ಹರೀಶ ನಾಯ್ಕ, ಶ್ರೀಕಾಂತ ಗಣಪತಿ ಮೊಗೇರ, ನಾಗರಾಜ ಶಿವು ಗೌಡ, ಸ್ಥಳೀಯ ಪ್ರಮುಖರಾದ ಮಂಜುನಾಥ ಗೋವಿಂದ ಶಾನಭಾಗ, ಗ್ರಾಮಸ್ಥರಾದ ನಾಗೇಶ ಮುಕ್ರಿ, ನಾರಾಯಣ ಮುಕ್ರಿ, ಶಿವು ಮುಕ್ರಿ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.