ಕುಮಟಾ : ರಸ್ತೆಯ ಇಕ್ಕೆಲಗಳಲ್ಲಿ ಹಿಂಡು ಹಿಂಡಾಗಿ ನಿಂತಿರುವ ನಾಯಿಗಳು. ಯಾರಾದರೂ ದಾರಿಲ್ಲಿ ಬಂದರೆ ಜೊಲ್ಲು ಸುರಿಸುತ್ತಾ ಇನ್ನೇನು ಮೈಮೆಲೆ ಎರಗುತ್ತೇನೋ ಎನ್ನೋ ಭಯದ ವಾತಾವರಣ. ಇದು ಕಾಣುತ್ತಿರುವುದು ತಾಲೂಕಿನ ಹೆಗಡೆ ಗ್ರಾಮದಲ್ಲಿ. ಇಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟವಾಗಿದೆ.

ಗಲ್ಲಿ ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳ ಹಿಂಡು ಮಹಿಳೆಯರು, ಮಕ್ಕಳ‌ಮೇಲೆ ದಾಳಿ ಮಾಡುತ್ತಿವೆ. ಸ್ವಲ್ಪದರಲ್ಲಿಯೇ ಜೀವ ಉಳಿಸಿಕೊಂಡ ಹಲವು ಉದಾಹರಣೆಗಳು ಕಳೆದ ಒಂದೆರಡು ಮಾರದಿಂದೀಚೆಗೆ ಸಿಗುತ್ತಿವೆ. ಕೆಲ ನಾಯಿಗಳು ಬೈಕ್‌, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ವಾಹನ ಸವಾರರು ಆತಂಕ ಪಡಬೇಕಾಗಿದೆ. ಜೊತೆಗೆ ನಿಯಂತ್ರಣ ತಪ್ಪಿ ಬಿದ್ದು ಪೆಟ್ಟಾಗಿರುವ ಘಟನೆಗಳೂ ನಡೆದಿದೆ. 

ನಾಯಿಗಳ ಕಾಟದಿಂದ ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ರಾತ್ರಿ ವೇಳೆ ನಿವಾಸಿಗಳ ನಿದ್ದೆಗೆಡಿಸುತ್ತಿರುವ ಬಿಡಾಡಿ ನಾಯಿಗಳು ಉಪಟಳ ದಿನೇ ದಿನೇ ಹೆಚ್ಚಾಗಿದೆ.

ಇತ್ತೀಚಿಗೆ ಹೆಗಡೆ ಮುಖ್ಯರಸ್ತೆಯ ಪಕ್ಕ ವ್ಯವಸಾಯ ಸೇವಾ ಸಹಕಾರಿ ಸಂಘದ ಎದುರು ರಸ್ತೆಯಲ್ಲಿ ಮಲಗಿದ್ದ ಆಕಳ ಕರುವೊಂದನ್ನು ಬೀದಿ ನಾಯಿಗಳು ಕಚ್ಚಿ ಕೊಂದು ಮಾಂಸ ಹರಿದು ತಿನ್ನುತ್ತಿರುವ ದೃಶ್ಯ ಜನರಿಗೆ ಬೆದರಿಕೆ ಹುಟ್ಟಿಸಿದೆ. ಗೋವಿನ ಚರ್ಮ ಸುಲಿದು ನಾಯಿಗಳು ಗುಂಪಾಗಿ ಮಾಂಸವನ್ನು ಮೆಲುತ್ತಿರುವ ದೃಶ್ಯ ಎಂತವರಲ್ಲೂ ಮರುಕ ಹುಟ್ಟಿಸುವಂತಿದೆ. ಈ ಘಟನೆಯ ಬಗ್ಗೆ ಗಮನಕ್ಕೆ ಬರುತ್ತಿದ್ದಂತೆ ಗ್ರಾ.ಪಂ ಪಿ.ಡಿ.ಓ ದನದ ಶವವನ್ನು ಎತ್ತಿಸಿ ಮುಂದಿನ ಕ್ರಮ‌ಕೈಗೊಂಡಿದ್ದಾರೆ.

RELATED ARTICLES  ಭಗವಂತನ ಸಂಕಲ್ಪಮಾತ್ರದಿಂದ ಸೃಷ್ಟಿ (ಸದ್ಗುರು ಶ್ರೀಧರ ಸಂದೇಶ)

ಕುಮಟಾ ತಾಲೂಕಿನ ಹೆಗಡೆಯ ಮೇಲಿನ ಕೇರಿ‌ ಕ್ರಾಸ್, ತಣ್ಣೀರು ಕುಳಿ ಕ್ರಾಸ್, ಹೆಗಡೆ ಮೀನು ಮಾರುಕಟ್ಟೆ, ಹೆಗಡೆ ದೇವಾಲಯದ ಎದುರಿನಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ.

ಮೀನು ಮಾರುಕಟ್ಟೆಗೆ ಹೋಗಿ, ಮೀನು ಖರೀದಿಸಿ ವಾಪಸ್ ಆಗುವ ಸಂದರ್ಭದಲ್ಲಿ ಮೀನಿನ ಚೀಲಗಳನ್ನು ನಾಯಿಗಳು ಹರಿದು ಮುಕ್ಕುತ್ತಿವೆ. ಅದಷ್ಟೇ ಅಲ್ಲದೇ ಮಹಿಳೆಯರ ಮೇಲೆಯೂ ನಾಯಿಗಳು ದಾಳಿ ಮಾಡುತ್ತಿದೆ. ಇದರಿಂದ ಮಹಿಳೆಯರು ಗಾಬರಿಗೊಂಡು ಓಡಿದ ಹಲವು ಘಟನೆಗಳು ನಡೆದಿದೆ.

ಇದಲ್ಲದೆ ಶಾಲಾ ವಿದ್ಯಾರ್ಥಿಗಳ ಮೇಲೆಯೂ ಬೀದಿ ನಾಯಿಗಳು ದಾಳಿ ಮಾಡುತ್ತಿದ್ದು ಶಾಲೆಗೆ ಹೋಗಿ ಬರುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ತಿಂಡಿ ಡಬ್ಬ ಹಾಗೂ ಊಟದ ಡಬ್ಬದ ಮೇಲೆ ಗುರಿ ಹಾಕಿ ನಾಯಿಗಳು ವಿದ್ಯಾರ್ಥಿಗಳನ್ನು ಬೆದರಿಸುತ್ತಿದೆ. 

RELATED ARTICLES  ಬ್ರಹ್ಮಾಂಡದೊಳಗಿನ ಜೊಳ್ಳು

ವಿದ್ಯಾರ್ಥಿಗಳು ಒಬ್ಬೊಬ್ಬರೇ ಓಡಾಡುವಾಗ ಬೀದಿ ನಾಯಿಗಳು ಈ ರೀತಿಯಾಗಿ ದಾಳಿ ಮಾಡಿದರೆ ಅಪಾಯಗಳನ್ನು ತಂದೊಡಬಹುದು ಎಂಬುದು ಸಾರ್ವಜನಿಕರ ಮಾತಾಗಿದೆ.

ಒಟ್ಟಿನಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ದೊಡ್ಡ ಮಟ್ಟದ ಅವಘಡಗಳು ಸಂಭವಿಸುವ ಮೊದಲು ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಂಡು ಜನರ ಜೀವ ರಕ್ಷಿಸಬೇಕು ಎನ್ನುವುದು ಅನೇಕ ಸಾರ್ವಜನಿಕರ ಆಗ್ರಹವಾಗಿದೆ.

ಬೀದಿ ನಾಯಿಗಳ ಹಾವಳಿಯ ಬಗ್ಗೆ ಸಾಮಾನ್ಯ ಸಭೆಯಲ್ಲಿಯೂ ಚರ್ಚೆ ನಡೆಸಲಾಗಿದೆ. ಈ ಬಗ್ಗೆ ಮುಂದಿನ ಕ್ರಮದ ಬಗ್ಗೆ ಪಟ್ಟಣ ಪಂಚಾಯಿತಿ ಜೊತೆಗೆ ಮಾತುಕತೆ ನಡೆಸಲಾಗಿದ್ದು, ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡುವದರ ಬಗ್ಗೆ ಯೋಜನೆಯ ರೂಪಿಸುತ್ತಿದ್ದೇವೆ. ಇಲಾಖೆಯ ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇವೆ. – ವಿ.ಎ ಪಟಗಾರ ಪಿಡಿಓ ಗ್ರಾಮ ಪಂಚಾಯತ್ ಹೆಗಡೆ

ಗ್ರಾಮದಲ್ಲಿ ನಾಯಿಗಳ ಕಾಟ ತುಂಬಾ ಜಾಸ್ತಿಯಾಗಿದೆ. ಹಿಂದೊಮ್ಮೆ‌ ನಾಯಿಗಳನ್ನು ಹಿಡಿದು ಬೇರೆಡೆಗೆ ಸಾಗಿಸುವ ಕಾರ್ಯ ಮಾಡಿದ್ದರು. ಅದನ್ನು ಈಗ ಮತ್ತೆ ಮಾಡಬೇಕು. ಇಲ್ಲದಿದ್ದರೆ ನಾಯಿಗಳ ದಾಳಿಗೆ ಸಿಕ್ಕು ಜನರ ಜೀವ ಹಾನಿಯಾದರೂ ಆಶ್ಚರ್ಯವಿಲ್ಲ. – ಅಮರನಾಥ ಭಟ್ಟ, ಸ್ಥಳೀಯರು.