ಕುಮಟಾ : ತಾಲ್ಲೂಕಿನಲ್ಲಿ ಅಘನಾಶಿನಿ ನದಿ ಹರಿಯುತ್ತಿದ್ದು ಶಿರಸಿ ಸಿದ್ದಾಪುರ ಭಾಗದಲ್ಲಿ ಹೆಚ್ಚಿನ ಮಳೆ ಆದಾಗ ಸಿದ್ದಾಪುರ ದೊಡ್ಮನೆ ಘಟ್ಟದ ಪ್ರದೇಶದಿಂದ ಧಾರಾಕಾರವಾದ ನೀರು ಅಘನಾಶಿನಿ ನದಿಯ ಮೂಲಕ ಹರಿದು ಸಮುದ್ರ ಸೇರುತ್ತದೆ. ಅಲ್ಲಿಯ ದೊಡ್ಡ ಪ್ರಮಾಣದಿಂದ ನೀರು ನದಿಯ ಮೂಲಕ ಬಂದಾಗ ಅಘನಾಶಿನಿ ನದಿ ಪಾತ್ರದ ಹಳ್ಳಿಗಳು ನೀರಿನಿಂದ ಜಲಾವೃತವಾಗಿ ಅಲ್ಲಿ ವಾಸಿಸುವ ಜನರ ಗೋಳು ಹೇಳತೀರದು ಜೀವ ಉಳಿಸಿಕೊಳ್ಳಲು ಕೂಡ ಪರದಾಡುವ ಪರಿಸ್ಥಿತಿ ಕೂಡ ಉದ್ಭವಿಸುತ್ತದೆ. ಸಾಕಿದ ಜಾನುವಾರುಗಳು ನೀರಿನಲ್ಲಿ ತೇಲಿಹೋದ ಘಟನೆಗಳೂ ಕೂಡ ನಡೆದಿದೆ.ನೀರಿನ ಸೆಳೆತಕ್ಕೆ ತೆಂಗು ಅಡಿಕೆ ಬಾಳೆ ಹಾಗೂ ಈತರ ಮರಗಳು ಕೂಡ ಪ್ರವಾಹದ ಪಾಲಾಗುತ್ತದೆ.

ನದಿಯ ದಂಡೆಯ ಮೇಲೆ ಇರುವ ಸಂತೇಗುಳಿ, ದೀವಗಿ, ಮಣಕಿ, ಹೆಗಡೆ, ಮಿರ್ಜಾನ ತಾರಿಬಾಗಿಲ, ನದಿಯ ಮಧ್ಯೆ ದ್ವೀಪದಂತಿರುವ ಐಗಳಕುರ್ವೆ, ಬೇಲೆ ಇವೆಲ್ಲ ಪ್ರತಿವರ್ಷ ಮಳೆಗಾಲದಲ್ಲಿ ಪ್ರವಾಹದಿಂದ ಜಲಾವೃತವಾಗಿರುತ್ತದೆ. ಜಿಲ್ಲಾಡಳಿತ ತಾಲೂಕಾಡಳಿತ ಪ್ರವಾಹದ ಮುನ್ಸೂಚನೆಯಿಂದ ಸನ್ನದ್ಧವಾಗಿದ್ದರೂ ಅನೇಕ ದುರ್ಘಟನೆಗಳು ಜರುಗಿದ ಉದಾಹಣೆಗಳಿದೆ. ಪ್ರವಾಹದ ಸಂದರ್ಭದಲ್ಲಿ ತಾಲೂಕಾಡಳಿತದಿಂದ ಆಯಾ ಗ್ರಾಮದ ಶಾಲೆಗಳಲ್ಲಿ, ಸಮಾಜ ಮಂದಿರಗಳಲ್ಲಿ ಕಾಳಜಿ ಕೇಂದ್ರ ತೆರೆದು ಜನರಿಗೆ ಉಳಿಯಲು ಹಾಗೂ ಊಟ ತಿಂಡಿಯ ವ್ಯವಸ್ಥೆ ಮಾಡಲಾಗುತ್ತದೆ ಜಾನುವಾರುಗಳಿಗೂ ಮೇವಿನ ವ್ಯವಸ್ಥೆ ಮಾಡಿ ಅವುಗಳ ಬಗ್ಗೆ ಯೂ ಕಾಳಜಿ ಇಡಲಾಗುತ್ತದೆ.

RELATED ARTICLES  ಗುರುಗಳು ಶಿಷ್ಯರಮೇಲೆ ತೋರುವ ಕೃಪಾದೃಷ್ಟಿಯ ಕುರಿತು ಶ್ರೀಧರರು ಹೇಳಿದ ಮಾತು!

ಘಟ್ಟದ ಮೇಲಿನ ಪ್ರದೇಶಗಳಲ್ಲಿ ಮಳೆ ಜೋರಾದಾಗ ಪ್ರವಾಹದ ನೀರು ವೇಗವಾಗಿ ನದಿಯ ಮೂಲಕ ಬಂದು ನದಿ ಪಾತ್ರದ ಗ್ರಾಮಗಳ ಹೊಲ ಗದ್ದೆಗಳು, ತೋಟಗಳು ಜಲಾವೃತವಾಗಿ ಮನೆಗಳನ್ನು ಸುತ್ತುವರಿಯಲು ಪ್ರಾರಂಭವಾದ ತಕ್ಷಣ ತಮ್ಮ ತಮ್ಮ ಜಾನುವಾರುಗಳನ್ನು, ವಾಹನಗಳನ್ನು, ಮಕ್ಕಳನ್ನು, ಹಿರಿಯರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡುವುದು ಸರ್ವೆ ಸಾಮಾನ್ಯವಾಗಿರುತ್ತದೆ. ಅನೇಕ ಬಾರಿ ರಾತ್ರಿ ಸಮಯದಲ್ಲೂ ನೀರಿನ ಮಟ್ಟ ಜಾಸ್ತಿ ಆಗಿ ಮನೆಗಳಿಗೆ ನುಗ್ಗಿ ನಿದ್ದೆಯಲ್ಲಿದ್ದ ಜನರು ಜೀವ ಉಳಿಸಿಕೊಳ್ಳಲು ಪರದಾಡಿದ ಪ್ರಸಂಗಗಳೂ ಜರುಗಿದ ಉದಾಹರಣೆಗಳಿವೆ. ನೀರಿನ ಮಟ್ಟ ನೋಡುತ್ತ ಜಾಗರಣೆ ಮಾಡಿದ ದಿನಗಳೂ ಇವೆ.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕರಾವಳಿಯ ಶಾಸಕರ ಪ್ರಯತ್ನ ದಿಂದ ಎರಡು ವರ್ಷ ಸತತವಾಗಿ ಒಂದೊಂದು ಗ್ರಾಮದಲ್ಲಿ ನೀರಿನಲ್ಲಿ ಜಲಾವೃತವಾದ ಸಾವಿರಕ್ಕೂ ಅಧಿಕ ಮನೆಗಳಿಗೆ ತಲಾ ಹತ್ತು ಸಾವಿರದಂತೆ ಪರಿಹಾರ ಕೂಡ ನೀಡಲಾಗಿತ್ತು.

ಸಮಸ್ಯೆಗೆ ಶಾಶ್ವತ ಪರಿಹಾರ ಇಲ್ಲವೇ?

ಪ್ರತಿವರ್ಷ ಮಳೆಗಾಲ ಬಂತೆಂದರೆ ನದಿಪಾತ್ರದಲ್ಲಿರುವ ಕೆಲವು ಗ್ರಾಮದ ಜನರು ಕಾಳಜಿ ಕೇಂದ್ರಕ್ಕೆ ಹೋಗಿ ವಾಸ್ತವ್ಯ ಮಾಡವಂತಾಗುತ್ತದೆ, ನೆರೆ ಬಂದಾಗ ಆಗುವಂಥ ಹಾನಿಗೆ ಸರ್ಕಾರ ಪರಿಹಾರ ಕೊಡುವಂತದ್ದು ಇವೆಲ್ಲ ಸರ್ಕಾರಕ್ಕೂ ಹೊರೆಯಾಗುವಂಥದ್ದು. ಮನುಷ್ಯರು, ಜಾನುವಾರುಗಳು ಪ್ರಾಣ ಕಳೆದುಕೊಂಡ ಘಟನೆಗಳೂ ನಡೆಯುತ್ತದೆ ನಂತರ ಅವುಗಳ ಲೆಕ್ಕಾಚಾರ ಹಾಗಾದರೆ ಈ ಸಮಸ್ಯೆಗೆ ಪರಿಹಾರ ಇಲ್ಲವೇ? ಪ್ರತಿವರ್ಷ ಇದೇ ಸಮಸ್ಯೆಯಲ್ಲಿ ನದಿಯ ಪಕ್ಕದ ಜನರು ನರಳುವಂತಾಗಬೇಕಾ? ಯಾವುದೇ ಸಮಸ್ಯೆಗಳಿಗೆ ಪರಿಹಾರ ಎಂಬುದು ಇದ್ದೇ ಇರುತ್ತದೆ ಆದರೆ ಪರಿಹರಿಸುವ ಇಚ್ಛಾಶಕ್ತಿಯು ಬೇಕು. ನಮ್ಮ ಭಾಗದಲ್ಲಿ ಸಾಕಷ್ಟು ಅರಣ್ಯ ಪ್ರದೇಶಗಳಿವೆ, ಕಂದಾಯ ಭೂಮಿಗಳಿವೆ ಅಂತಹ ಪ್ರದೇಶದಲ್ಲಿ ಈ ನದಿಪಾತ್ರದಲ್ಲಿರುವ ಜನರಿಗೆ ಶಾಶ್ವತವಾದ ಪರಿಹಾರ ಕಲ್ಪಿಸಲು ಸಾಧ್ಯವಿದೆ ಎನ್ನುತ್ತಿದ್ದಾರೆ ಜನರು.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ.

ಕಾನೂನಿನಲ್ಲಿ ಯಾವುದೇ ತೊಡಕು ಇದ್ದರೂ ಅದನ್ನು ಸರಿಯಾದ ಯೋಜನೆ ರೂಪಿಸಿ ನಿವಾರಿಸಿ ಈ ಸಮಸ್ಯೆಗೆ ಮುಂದಾಗಬೇಕಿದೆ. ಪ್ರತಿವರ್ಷ ಪ್ರವಾಹ ಬಂದಾಗ ನೀರು ನುಗ್ಗಿದ ಮನೆಗಳಿಗೆ ಪರಿಹಾರ ನೀಡಿ ಹಣವನ್ನು ವ್ಯರ್ಥ ಮಾಡುವ ಬದಲು ಇಂತಹ ಶಾಶ್ವತ ಪರಿಹಾರ ಕ್ಕಾಗಿ ಸರ್ಕಾರ ಚಿಂತನೆ ಕೈಗೊಳ್ಳುವ ಅವಶ್ಯಕತೆ ಇದೆ ಎಂಬುದು ಜನರ ಮಾತು.

ಆದಷ್ಟು ಶೀಘ್ರವಾಗಿ ನೆರೆಹಾವಳಿ ಬಂದಾಗ ಅಪಾಯಕ್ಕೆ ಸಿಲುಕುವ ಪ್ರದೇಶದ ಜನರ ರಕ್ಷಣೆಗೆ ಹಾಗೂ ಅವರ ವಾಸ್ತವ್ಯಕ್ಕೆ ಶಾಶ್ವತ ಪರಿಹಾರಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರ ಮುಂದಾಗಬೇಕು ಎನ್ನುವುದು ಆಯಾ ಗ್ರಾಮಸ್ಥರ ಆಗ್ರಹವಾಗಿದೆ.