ಬ್ಯಾಂಕ್ ನಲ್ಲಿ ಗುಮಾಸ್ತರಾಗಬೇಕೆಂದು ಕನಸು ಹೊತ್ತವರಿಗೆ ಇಲ್ಲಿದೆ ಮತ್ತೊಂದು ಸಿಹಿ ಸುದ್ದಿ. ಬ್ಯಾಂಕ ಸಿಬ್ಬಂದಿ ನೇಮಕಾತಿ ಸಂಸ್ಥೆ ದೇಶದ 11 ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಖಾಲಿ ಇರುವ ಗುಮಾಸ್ತ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಸರಿ ಸುಮಾರು 4,545 ಹುದ್ದೆಗಳಿಗೆ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.
2022-23 ರಲ್ಲಿ 6,035 ಹುದ್ದೆಗಳಿಗೆ ನೇಮಕ ನಡೆಸಲು ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಈ ವರ್ಷ ಕೇವಲ 4,545 ಹುದ್ದೆಗಳಿಗೆ ನೇಮಕ ನಡೆಯಲಿದೆ.ಇದರಿಂದ ವರ್ಷದಿಂದ ವರ್ಷಕ್ಕೆ ನೇಮಕಾತಿಯಲ್ಲಿ ಇಳಿಮುಖ ವಾಗಿರೋದನ್ನ ಸ್ಪಷ್ಟವಾಗಿ ಕಾಣಬಹುದು.ಕಳೆದ ಬಾರಿ ರಾಜ್ಯದಲ್ಲಿ 358 ಹುದ್ದೆಗಳಿದ್ದರೆ ಈ ಬಾರಿ ಕೇವಲ 253 ಹುದ್ದೆಗಳಿಗೆ ಮಾತ್ರ ನೇಮಕ ನಡೆಯಲಿದೆ.ಇದರಿಂದ ಆಕಾಂಕ್ಷಿಗಳು ನಿರಾಸೆಯಾಗುವ ಅಗತ್ಯವಿಲ್ಲ.ವಿಲೀನದ ನಂತರದ ಈ ಹಿಂದಿನ ಕಾರ್ಪೋರೇಷನ್ ಬ್ಯಾಂಕ್ ವಿಲೀನವಾದ ಯೂನಿಯನ್ ಬ್ಯಾಂಕ್ ಇನ್ನು ಹುದ್ದೆಗಳ ಮಾಹಿತಿಯನ್ನು ಐಬಿಪಿಎಸ್ ಗೆ ನೀಡಿಲ್ಲ.ಕೊನೆಯ ಕ್ಷಣದಲ್ಲಿ ಬದಲಾವಣೆ ಆಗಲುಬಹುದು.
ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳೆಲ್ಲಿ?:
ರಾಜ್ಯದ 11 ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ ಪರೀಕ್ಷೆ ( ಬೆಂಗಳೂರು, ಬೆಳಗಾವಿ, ಬೀದರ್, ಕಲಬುರಗಿ, ದಾವಣಗೆರೆ,ಹುಬ್ಬಳ್ಳಿ-ಧಾರವಾಡ, ಮೈಸೂರು, ಮಂಗಳೂರು, ಶಿವಮೊಗ್ಗ ಮತ್ತು ಉಡುಪಿ. ಮತ್ತು 3 ಜಿಲ್ಲಾ ಕೇಂದ್ರಗಳಲ್ಲಿ(ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ಮಂಗಳೂರು )ಮುಖ್ಯ ಪರೀಕ್ಷೆ ಆನ್ ಲೈನ್ ನಲ್ಲಿ ನಡೆಯಲಿದೆ.
ಯಾವ ಬ್ಯಾಂಕಿನಲ್ಲಿ ಎಷ್ಟು ಹುದ್ದೆ?
ಪಂಜಾಬ್ ಎಂಡ್ ಸಿಂಧ ಬ್ಯಾಂಕ್ 9, ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ 61, ಬ್ಯಾಂಕ್ ಆಫ್ ಇಂಡಿಯಾ 3, ಪಂಜಾಬ್ ನ್ಯಾಷನಲ್ ಬ್ಯಾಂಕ್ 15, ಕೆನರಾ ಬ್ಯಾಂಕನಲ್ಲಿ165 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿವೆ. ಹೀಗೆ ಒಟ್ಟಾರೆ ಕರ್ನಾಟಕದಲ್ಲಿ 253 ಹುದ್ದೆಗಳಿವೆ.(ಟೇಬಲ್ ಹಾಕಿ )
ಶೈಕ್ಷಣಿಕ ಅರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯ ದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆ. ಅಭ್ಯರ್ಥಿಯು ಕಂಪ್ಯೂಟರ್ ನಲ್ಲಿ ಕಾರ್ಯ ನಿರ್ವಹಿಸುವ ಜ್ಞಾನ ಹೊಂದಿರುವುದು ಕಡ್ಡಾಯ. ಹೀಗಾಗಿ ಕಂಪ್ಯೂಟರ್ ಕಲಿಕೆಯ ಬಗ್ಗೆ ದೃಢೀಕರಣ ಪತ್ರವನ್ನು ಕೂಡ ಅಭ್ಯರ್ಥಿಯು ಹೊಂದಿರಬೇಕಾಗುತ್ತದೆ.(ಕಂಪ್ಯೂಟರ್ ಗೆ ಸಂಬಂಧಿಸಿದ ವಿಷಯದಲ್ಲಿ ಸರ್ಟಿಫಿಕೇಟ್/ ಡಿಪ್ಲೊಮಾ ಅಥವಾ ಡಿಗ್ರಿ ಪಡೆದಿರುವುದು ಅಥವಾ ಶಾಲೆ ಅಥವಾ ಕಾಲೇಜಿನಲ್ಲಿ ಕಂಪ್ಯೂಟರ್ ಅಥವಾ ಐಟಿ(InformationTechnology) ಯನ್ನು ಒಂದು ವಿಷಯವಾಗಿ ಓದಿರಬೇಕು. ಅಲ್ಲದೆ, ರಾಜ್ಯದ ಅಧಿಕೃತ ಭಾಷೆಯಲ್ಲಿ ಮಾತನಾಡುವ, ಬರೆಯುವ ಸಾಮರ್ಥ್ಯ ಹೊಂದಿರಬೇಕು.
ಗಮನಿಸಿ: ಪದವಿ ಪೂರ್ಣಗೊಳಿಸಿ ದವರು ಮಾತ್ರ ಅರ್ಜಿ ಸಲ್ಲಿಸಬಹುದು. ಪದವಿಯಲ್ಲಿ ಪಡೆದ ಶೇಕಡಾವಾರು ಅಂಕಗಳನ್ನು ಅರ್ಜಿಯಲ್ಲಿ ಭರ್ತಿ ಮಾಡಬೇಕಾಗಿರುತ್ತದೆ.
ಕನ್ನಡದಲ್ಲಿ ಪರೀಕ್ಷೆ:
ಕರ್ನಾಟಕದ ಅಭ್ಯರ್ಥಿಗಳು ಹಿಂದಿ ಅಥವಾ ಇಂಗ್ಲಿಷ್ ಜೊತೆಗೆ ಕನ್ನಡ ಮತ್ತು ಕೊಂಕಣಿ ಭಾಷೆಯಲ್ಲೂ ಪರೀಕ್ಷೆ ಬರೆಯುವ ಅವಕಾಶವನ್ನು ಐಬಿಪಿಎಸ್ ನೀಡಿದೆ. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಭಾಷೆ ನಮೂದಿಸಬೇಕು. (ಪರೀಕ್ಷಾ ಸಂದರ್ಭದಲ್ಲಿ ಬದಲಾವಣೆಗೆ ಅವಕಾಶವಿಲ್ಲ ಎಂಬುದನ್ನ ಮರೆಯದಿರಿ.)
ನೆನಪಿಡಿ ಸಂದರ್ಶನವಿಲ್ಲ:
ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವ ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳು ಆಧಾರದ ಮೇಲೆ ಅವರನ್ನು ತಾತ್ಕಾಲಿಕವಾಗಿ ನೇಮಕಾತಿ ಪತ್ರ ವಿತರಿಸಲಾಗುತ್ತದೆ.
ಅರ್ಜಿ ಸಲ್ಲಿಕೆ ವಿಧಾನ:
ಆನ್ ಲೈನ್.
ಅರ್ಜಿ ಸಲ್ಲಿಕೆಯ ದಿನಾಂಕ: ಜುಲೈ 1 ರಿಂದ ಜುಲೈ 21, 2023 ರವರೆಗೆ ಇರೋದನ್ನ ಈ ತಿಂಗಳ 28 ರ ವರೆಗೆ ವಿಸ್ತರಿಸಲಾಗಿದೆ..
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಿಮ್ಮ ಆಯ್ಕೆಯ ಬ್ಯಾಂಕಿನ ಆದ್ಯತೆಯ ಆದೇಶವನ್ನು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಳವಡಿಸಲಾಗಿದೆ. ಅಭ್ಯರ್ಥಿಗಳು ಈ ಹಂತದಲ್ಲಿ ಅವರ ಬ್ಯಾಂಕ್ ಗಳ ಆದ್ಯತೆಯ ಕ್ರಮವನ್ನು ಅಗತ್ಯವಾಗಿ ಸೂಚಿಸಬೇಕು.
ಯಾವ್ಯಾವ ಬ್ಯಾಂಕ್ ಗಳಲ್ಲಿ ಎಷ್ಟೆಷ್ಟು ಹುದ್ದೆಗಳಿವೆ ಹಾಗೂ ನಮ್ಮ ರಾಜ್ಯದಲ್ಲಿ ಆ ಬ್ಯಾಂಕ್ ಗಳ ಶಾಖೆಗಳಿವೆಯಾ ಎಂಬುದರ ಮೇಲೆ ನಿಮ್ಮ ಆದ್ಯತೆಯ ಆಯ್ಕೆ ಇರಲಿ. ಒಮ್ಮೆ ನೀವು ಆಯ್ಕೆಯಾದರೆ ಬ್ಯಾಂಕ ಬದಲಾವಣೆಗೆ/ಸ್ಥಳ ಬದಲಾವಣೆಗೆ ಯಾವುದೇ ವಿನಂತಿಯನ್ನು ನಂತರದ ದಿನಗಳಲ್ಲಿ ಪರಿಗಣಿಸಲಾಗುವುದಿಲ್ಲ.
ಲಿಖಿತ ದೃಢೀಕರಣ:
ಕೈಬರಹದ ಘೋಷಣೆಯ ಪಠ್ಯ ಈ ರೀತಿಯಲ್ಲಿ ಬರೆದು ಅಪ್ಲೋಡ್ ಮಾಡಬೇಕು,_______ (ಅಭ್ಯರ್ಥಿಯ ಹೆಸರು),ಈ ಮೂಲಕ ಅರ್ಜಿಯಲ್ಲಿ ಸಲ್ಲಿಸಿದ ಎಲ್ಲಾ ಮಾಹಿತಿಯು ಸರಿಯಾಗಿದೆ.ನಿಜ ಮತ್ತು ಮಾನ್ಯವಾಗಿದೆ ಎಂದು ಘೋಷಿಸುತ್ತೇನೆ. ಅಗತ್ಯವಿದ್ದಾಗ ನಾನು ಪೂರಕ ದಾಖಲೆಗಳನ್ನು ಪ್ರಸ್ತುತಪಡಿಸುತ್ತೇನೆ.”
ಮೇಲೆ ತಿಳಿಸಿದ ಕೈಯಲ್ಲಿ ಬರೆದ ಲಿಖಿತ ಘೋಷಣೆಯು ಅಭ್ಯರ್ಥಿಯ ಕೈ ಬರಹದಲ್ಲಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಇರಬೇಕು ಮತ್ತು ಕ್ಯಾಪಿಟಲ್ ಲೆಟರ್ಸ್‌ನಲ್ಲಿ ಇರಬಾರದು. ಇದನ್ನು ಬೇರೆಯವರು ಅಥವಾ ಬೇರೆ ಯಾವುದೇ ಭಾಷೆಯಲ್ಲಿ ಬರೆದಿದ್ದರೆ, ಅರ್ಜಿಯನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ. ಕ್ಯಾಪಿಟಲ್ ಲೆಟರಗಳಲ್ಲಿ ಹಾಕಿದ ಸಹಿಯನ್ನು ಸ್ವೀಕರಿಸಲಾಗುವುದಿಲ್ಲ. ಎಡ ಹೆಬ್ಬೆರಳಿನ ಗುರುತು ಸರಿಯಾಗಿ ಸ್ಕ್ಯಾನ್ ಮಾಡಬೇಕು ಮತ್ತು ಮಸುಕಾಗಿರಬಾರದು.
ಆಯ್ಕೆ ಪ್ರಕ್ರಿಯೆಯ ಹಂತದಲ್ಲಿ ಅಥವಾ ಅಪಾಯಿಂಟ್‌ಮೆಂಟ್‌ನ ನಂತರ ನಿಮ್ಮ ಕೈಬರಹದ ಘೋಷಣೆ ಹಾಗೂ ನಿಮ್ಮ ಕೈಬರಹದಲ್ಲಿ ಭಿನ್ನವಾಗಿರುವುದು ತಜ್ಞರ ವಿಶ್ಲೇಷಣೆಯಲ್ಲಿ ಕಂಡುಬಂದರೆ, ಅಭ್ಯರ್ಥಿಯ ಉಮೇದುವಾರಿಕೆಯ ನ್ನ ರದ್ದುಗೊಳಿಸಲಾಗುವುದು. ಹೀಗಾಗಿ ಅರ್ಜಿ ಸಲ್ಲಿಸುವ ಹಂತದಲ್ಲಿಯೇ ಬಹಳ ಎಚ್ಚರಿಕೆಯಿಂದ ಅರ್ಜಿ ಸಲ್ಲಿಸುವುದು ಒಳಿತು.
ಪರೀಕ್ಷಾ ಪೂರ್ವ ತರಬೇತಿ:
ಐಬಿಪಿಎಸ್ ಎಸ್ ಸಿ/ಎಸ್ ಟಿ, ಅಲ್ಪಸಂಖ್ಯಾತ ಅಭ್ಯರ್ಥಿಗಳು ಮಾಜಿ ಸೈನಿಕರು ವಿಕಲಚೇತನ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಲಿದೆ. ತರಬೇತಿ ಪಡೆಯುವ ಅಭ್ಯರ್ಥಿಗಳು ಆನ್ ಲೈನ್ ನಲ್ಲಿಅರ್ಜಿ ಸಲ್ಲಿಸುವಾಗಲೇ ತರಬೇತಿ ಪಡೆಯುವ ಬಗ್ಗೆ ಅದಕ್ಕಾಗಿ ಮೀಸಲಿಟ್ಟ ಕಾಲಂನಲ್ಲಿ ನಮೂದಿಸಬೇಕು,ತರಬೇತಿ ಸ್ಥಳದ ಖರ್ಚು ವೆಚ್ಚಗಳನ್ನು ಹಾಗೂ ಪ್ರಯಾಣದ ಖರ್ಚು ವೆಚ್ಚವನ್ನು ಅಭ್ಯರ್ಥಿಗಳ ಭರಿಸಬೇಕಾಗುತ್ತದೆ. ರಾಜ್ಯದಲ್ಲಿ ಬೆಂಗಳೂರು, ಹುಬ್ಬಳ್ಳಿ, ಮೈಸೂರು ಹಾಗೂ ಮಂಗಳೂರಿನಲ್ಲಿ ಪರೀಕ್ಷಾ ಪೂರ್ವ ತರಬೇತಿ ಕೇಂದ್ರಗಳಿವೆ.
ಪರೀಕ್ಷಾ ಪ್ರಕ್ರಿಯೆ:
ಮೊದಲ ಹಂತ: ಆನ್ಲೈನ್ ಪೂರ್ವಭಾವಿ ಪರೀಕ್ಷೆ – ಸೆಪ್ಟೆಂಬರ್ 2023
ಎರಡನೇ ಹಂತ: ಆನ್ಲೈನ್ ಮುಖ್ಯ ಪರೀಕ್ಷೆ – ಸೆಪ್ಟೆಂಬರ್ ಅಕ್ಟೋಬರ್, 2023
ಪ್ರಾತಿನಿಧಿಕ ಹಂಚಿಕೆ: ಎಪ್ರಿಲ್ 2024.
ವಯೋಮಿತಿ:
01.07.2023 ಕ್ಕೆ, 20 ವರ್ಷಕ್ಕಿಂತ ಕಡಿಮೆ ಇರಬಾರದು. ಮತ್ತು 1.07.2023 ಕ್ಕೆ 28 ವರ್ಷಗಳಿಗಿಂತ ಹೆಚ್ಚಿರಬಾರದು.ಅಂದರೆ 20 ವರ್ಷದಿಂದ 28 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಂದರೆ ಅಭ್ಯರ್ಥಿಯು 02.07.1995 ಕ್ಕಿಂತ ಮೊದಲು ಮತ್ತು 01.07.2023 ಕ್ಕಿಂತ ನಂತರ ಹುಟ್ಟಿರಬಾರದು( ಎರಡೂ ದಿನಾಂಕಗಳು ಒಳಗೊಂಡಂತೆ) ಸರಕಾರದ ನಿಯಮದಂತೆ ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಶುಲ್ಕಪಾವತಿ:/ ಅರ್ಜಿ ಶುಲ್ಕ:
ನೋಂದಣಿ ನಂತರ ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಆನ್‌ಲೈನ್ ಮೋಡ್ ಮೂಲಕ ಅಗತ್ಯವಾದ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 850 ರೂ. ಹಾಗೂ ಎಸ್‌ಸಿ/ಎಸ್‌ಟಿ/ವಿಕಲಚೇತನರು/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 175 ರೂ.ಶುಲ್ಕ ನಿಗದಿಪಡಿಸಲಾಗಿದೆ. ಬ್ಯಾಂಕ್ ಸೇವಾ ಶುಲ್ಕ ಮತ್ತು ಇಂಟಿಮೇಷನ್ ಫೀ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಆನ್ ಲೈನ್ ಮೂಲಕ ಮಾತ್ರ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.
ಹೆಚ್ಚಿನಮಾಹಿತಿಗೆವೆಬ್:
ಆರ್ ಕೆ ಬಾಲಚಂದ್ರ, ಅಂಕಣಕಾರರು, ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು ಹಾಗೂ ವೃತ್ತಿ ಮಾರ್ಗದರ್ಶಕರು, ಮಡಿಕೇರಿ.