Home Article ಭಾಗ್ಯ ಪಡೆಯಲು ಸರ್ವರ್ ಸಮಸ್ಯೆ : ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಕಾದು ಕಾದು ಸುಸ್ತಾದ ಮಹಿಳೆಯರು...

ಭಾಗ್ಯ ಪಡೆಯಲು ಸರ್ವರ್ ಸಮಸ್ಯೆ : ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಕಾದು ಕಾದು ಸುಸ್ತಾದ ಮಹಿಳೆಯರು : ಅವ್ಯವಸ್ಥೆ ಬಗ್ಗೆ ಗುಸುಗುಸು.

ಕುಮಟಾ : ಅಯ್ಯೋ.. ಇದೊಳ್ಳೆಯ ಗ್ರಹಚಾರ, ಬೆಳಿಗ್ಗೆಯಿಂದ ನಿಂತು ನಿಂತು ಕಾಲು ಸೋತೋಯ್ತು, ಊಟನೂ ಮಾಡದೆ ತಿಂಡಿನೂ ಮಾಡಿದೆ ಬೆಳಿಗ್ಗೆಯಿಂದ ಇಲ್ಲೇ ನಿಂತು ಕಾಯ್ತಾ ಇದ್ದೇವೆ ಆದರೆ ಸಾಲು ಮುಂದೆ ಹೋಗ್ತಾನೆ ಇಲ್ಲ. ನಮ್ಮ ಕೆಲಸಾನೂ ಆಗ್ತಾ ಇಲ್ಲ. ಸರ್ಕಾರ ಯಾವಾಗಿಂದ ಈ ಭಾಗ್ಯ ಕೊಡುತ್ತೋ ಏನೋ… ಆದರೆ ನಮ್ಮ ಒದ್ದಾಟ ಮಾತ್ರ ತಪ್ಪುತಿಲ್ಲ. ಇದೆಲ್ಲಾ ಮಾತುಗಳು ಕೇಳ್ತಾ ಇದ್ದಿದ್ದು, ಕುಮಟಾದಲ್ಲಿ ಗೃಹ ಲಕ್ಷ್ಮಿ ಯೋಜನೆಗಾಗಿ ಅರ್ಜಿ ಸಲ್ಲಿಸಲು ಬಂದ ಮಹಿಳೆಯರಿಂದ. ಅಂದರೆ ಗೃಹ ಲಕ್ಷ್ಮೀ ಯೋಜನೆಯ ಸರ್ವರ್ ಕಂಟಕದಿಂದ.

ರಾಜ್ಯಾದ್ಯಂತ ಗೃಹ ಲಕ್ಷ್ಮಿ ಯೋಜನೆ ಜಾರಿಗೆ ಬಂದು ಐದು ದಿನಗಳಾಗಿದ್ದರೂ ಜನರಿಗೆ ಸರ್ವರ್ ಸಮಸ್ಯೆ ಉಂಟಾಗುತ್ತಿರುವ ಕಾರಣ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪರದಾಡುತ್ತಿರುವ ದೃಶ್ಯ ಕಂಡುಬಂತು. ತಾಲೂಕಿನ ಗಿಬ್ ಸರ್ಕಲ್ ಸಮೀಪ ಪುರಸಭಾ ಕಟ್ಟಡದಲ್ಲಿ ಪುರಸಭೆಯಿಂದ ತೆರೆಯಲಾದ ಗೃಹ ಲಕ್ಷ್ಮೀ ನೋದಾವಣೆ ಕೇಂದ್ರ ೩ ರಲ್ಲಿ ಇಂದು ಸರ್ವರ್ ಸಮಸ್ಯೆ ಇದ್ದ ಕಾರಣ ರಸ್ತೆಯವರೆಗೂ ಜನರು ಸರತಿ ಸಾಲಿನಲ್ಲಿ ನಿಂತಿದ್ದದ್ದು ಕಂಡುಬಂತು.

ಸರಕಾರದ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಬಂದವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ. ಏಕೆಂದರೆ, ಅಲ್ಲಿ ನಿತ್ಯವೂ ಸರ್ವರ್ ಸಮಸ್ಯೆ ಉಂಟಾಗುತ್ತಿದ್ದು ಅರ್ಜಿ ಸಲ್ಲಿಸಲು ಬಂದ ಮಹಿಳೆಯರು ದಿನವಿಡೀ ಕಾದರೂ ಕೆಲವರಿಗಷ್ಟೇ ಅರ್ಜಿ ಸಲ್ಲಿಸಲು ಸಾಧ್ಯವಾಗುವಂತಾಗಿದೆ. ಇದರ ಬಗ್ಗೆ ಕೆಲವು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರೆ,ಇನ್ನೂ ಕೆಲವರು ಇದು ನಮ್ಮಿಂದ ಆಗೋದಲ್ಲ‌ ಅಂತ ವಾಪಸ್ಸಾದ ಘಟನೆಗಳೂ ನಡೆದಿದೆ. 

ಸೋಮವಾರ ಕುಮಟಾದಲ್ಲಿ ಭಾರೀ ಸಂಖ್ಯೆಯಲ್ಲಿ ಬಂದಿದ್ದ ಮಹಿಳೆಯರು ನಿರಾಸೆಗೊಂಡು ಸರ್ಕಾರದ ವಿರುದ್ಧ ಬೇಸರ ಹೊರಹಾಕಲಾರಂಭಿಸಿದ್ದಾರೆ. ಅತಿಯಾದ ಮಳೆಯ ಕಾರಣ ಶಾಲಾ-ಕಾಲೇಜುಗಳಿಗೆ ರಜೆ ನೀಡಿದ್ದು ಅನೇಕ ತಾಯಂದಿರು ಚಿಕ್ಕಪುಟ್ಟ ಮಕ್ಕಳನ್ನು ಕರೆದುಕೊಂಡು ಅರ್ಜಿ ಸಲ್ಲಿಕೆಗೆ ಬಂದ ಸಂದರ್ಭದಲ್ಲಿ ಸರ್ವರ್ ಸಮಸ್ಯೆ ಉಂಟಾಗಿದ್ದು, ಮಹಿಳೆಯರು ಪುಟ್ಟ ಮಕ್ಕಳನ್ನು ಹಿಡಿದುಕೊಂಡು ಸರತಿ ಸಾಲಿನಲ್ಲಿ ನಿಂತು ಯೋಜನೆಯ ಫಲಾನುಭವಿಗಳಾಗುವ ನಿರೀಕ್ಷೆಯ ಕಂಗಳಲ್ಲಿ ಎಲ್ಲವನ್ನೂ ನೋಡುತ್ತಿದ್ದರು.

ಬೆಳಗ್ಗಿನಿಂದ ಸರ್ವರ್ ಸಮಸ್ಯೆ ಉಂಟಾಗಿದ್ದು, ಮಧ್ಯಾಹ್ನದ ವರೆಗೆ ಕೇವಲ 19 ಜನರ ಅರ್ಜಿ ಸಲ್ಲಿಸಲು ಸಾಧ್ಯವಾಗಿದೆ. ಆಧಾರ ಕಾರ್ಡ ಗೆ ಬ್ಯಾಂಕ್ ಲಿಂಕ್ ಆಗದಿದ್ದರೆ  ಎರಡು ಒಟಿಪಿ ಬರುತ್ತದೆ. ಆ ಹಂತ ಪೂರ್ಣವಾಗಿದ್ದರೆ,  ಸಿಂಗಲ್ ಒಟಿಪಿ ಬರುತ್ತದೆ. ಒಂದು ಹಂತ ಮುಗಿದವರದ್ದು ಸಾಧ್ಯವಾದಷ್ಟು ಬೇಗನೆ ಮುಗಿಯುತ್ತಿದ್ದು, ಡಬಲ್ ಒಟಿಪಿ ಬರುವವರದ್ದು ಪ್ರತಿಯೊಬ್ಬರಿಗೂ ಮುಕ್ಕಾಲು ಗಂಟೆಯ ಸಮಯ ಪಡೆಯುತ್ತಿದೆ ಎನ್ನುತ್ತಾರೆ ಜನರು. 

ಇನ್ನು ಈ ಕೇಂದ್ರದಲ್ಲಿ ಹೆರವಟ್ಟಾ, ದೇವರಹಕ್ಕಲ, ಕೊಪ್ಪಳಕರ ವಾಡಿ, ಮಡಿವಾಳ ಕೇರಿ, ವನ್ನಳ್ಳಿ, ಶಶಿಹಿತ್ತಲ, ಹೊನ್ಮಾವ್, ಪೈರಗದ್ದೆ, ಬಗ್ಗೋಣ, ಹೊಸ ಹೆರವಟ್ಟಾದ ವಾರ್ಡ ನ ಜನರಿಗೆ ಅವಕಾಶ ಕಲ್ಪಿಸಿದ್ದು, ಹೆಚ್ಚು ಜನರು ಇಲ್ಲಿ ಬರುತ್ತಿದ್ದಾರೆ. ಬರುವ ಬಹುಪಾಲು ಜನರಿಗೆ ಕುಳಿತುಕೊಳ್ಳುವ ವ್ಯವಸ್ಥೆಯಾಗಲೀ, ಅಥವಾ ಆ ಕೋಣೆಯ ಹೊರಗಡೆಗೆ ಮಳೆ ತಾಗದಂತೆ ವ್ಯವಸ್ಥೆಯಾಗಲೀ ಇಲ್ಲದೆ ಇರುವುದರಿಂದ ಮಳೆಗಾಳಿಗೆ ನೆನೆದುಕೊಂಡೆ ತಮ್ಮ ಕಾರ್ಯದಲ್ಲಿ ಜನರು ತೊಡಗಿದ ದೃಶ್ಯ ಮನಕಲಕುವಂತಿತ್ತು. 

ಅನೇಕ ತಾಯಂದಿರು ಈ ನೋಂದಾವಣೆಯ ಕಾರ್ಯಕ್ಕೆ ಬಂದಿದ್ದು, ಅವರನ್ನು ಕರೆತಂದ ಮನೆಯ ಯಜಮಾನರೂ ಮಕ್ಕಳೊಂದಿಗೆ ಪಕ್ಕದಲ್ಲಿ ನಿಂತು ಸಪ್ಪೆ ಮೋರೆ ಹಾಕಿ ತಮ್ಮ ಮಡದಿಯ ನೋಂದಾವಣೆ ಕಾರ್ಯ ಎಷ್ಟು ಗಂಟೆಗೆ ಮುಗಿಯಬಹುದಪ್ಪಾ ಎಂದು ಕಾಯುತ್ತಿರುವ ದೃಷ್ಯವೂ ಕಾಣುತ್ತಿತ್ತು. 

ಕಂಪ್ಯೂಟರ್ ನಲ್ಲಿ ಆಗದ ಕೆಲಸ.

ಏನಂದಾವನ ಕೇಂದ್ರದಲ್ಲಿ ಕಂಪ್ಯೂಟರ್ನಲ್ಲಿ ಕೆಲಸ ಆಗದೇ ಇದ್ದ ಕಾರಣ ಅಲ್ಲಿರುವ ಪುರಸಭಾ ನೌಕರರು ಮೊಬೈಲ್ ನಲ್ಲಿಯೇ ಜನರ ನೋಂದಾವಣೆ ಕಾರ್ಯ ಮಾಡುತ್ತಿರುವುದು ಕಂಡು ಬಂತು. ಸರ್ವರ ಹಾಗೂ ಇಂಟರ್ನೆಟ್ ಸಮಸ್ಯೆಯಿಂದಾಗಿ ಕಂಪ್ಯೂಟರ್ನಲ್ಲಿ ಕೆಲಸ ಆಗುತ್ತಿಲ್ಲ ಹೀಗಾಗಿ ಮೊಬೈಲ್ ನಲ್ಲಿಯೇ ಮಾಡಿಕೊಡುತ್ತಿರುವುದಾಗಿ ಅವರು ವಿವರಿಸುತ್ತಿದ್ದರು.

ಒಟ್ಟಿನಲ್ಲಿ ಗೃಹಲಕ್ಷ್ಮಿಗೆ ಸರ್ವರ್ ಕಂಟಕ ಎದುರಾಗಿದ್ದು ಸರ್ಕಾರ ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಜನತೆ ತೊಂದರೆ ಅನುಭವಿಸದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕೆಂಬುದು ಜನರ ಆಗ್ರಹವಾಗಿದೆ.

ಇಂದು ಶಾಲೆಗೆ ರಜೆ ಇದ್ದ ಕಾರಣ ನನ್ನ ಮಗನನ್ನು ಕರೆದುಕೊಂಡು ಬೆಳಿಗ್ಗೆಯಿಂದ ಇಲ್ಲಿಗೆ ಬಂದು ಕಾಯುತ್ತಿದ್ದೇನೆ. ಸರ್ವರ್ ಸಮಸ್ಯೆಯಿಂದ ಕೆಲಸ ಆಗುತ್ತಿಲ್ಲ. ಕಾದು ಕಾದು ಸೋತಿದ್ದೇವೆ. ಇಲ್ಲಿ ನಿಂತುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. – ಸುಮಂಗಲಾ ನಾಯ್ಕ,  ನೋಂದಾವಣೆಗೆ ಬಂದ ಮಹಿಳೆ.

ಗೃಹ ಲಕ್ಷ್ಮೀ ಯೋಜನೆಯ ಸರ್ವರ್ ಸಮಸ್ಯೆಯಿಂದ ಮಹಿಳೆಯರು ತೊಂದರೆ ಅನುಭವಿಸುವಂತಾಗಿದೆ. ಜನರಿಗೆ ಉಪದ್ರವ ಆಗುತ್ತಿದೆ. ಆದಷ್ಟು ಬೇಗ ಈ ವ್ಯವಸ್ಥೆ ಸರಿಪಡಿಸಿ, ಇಲ್ಲದಿದ್ದರೆ ಮಹಿಳೆಯ ಕೆಂಗಣ್ಣಿಗೆ ಗುರಿಯಾಗಿ ಈಗಿನ ಸರ್ಕಾರದ ಸರ್ವರ್ ಕೂಡಾ ಲೋ ಆಗಬಹುದು. – ಪ್ರಶಾಂತ ನಾಯ್ಕ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ.