ಗತವರ್ಷದ ಮೃತ ಪಾಪವ ಸುಡು,ತೊರೆ
ಅಪಜಯದ ಅವಮಾನಗಳನು ಬಿಡು,ಮರೆ
ಕಳಚಲಿ ಬೀಳಲಿ ಬಾಳಿನ ಹಳೆಪೊರೆ,
ನವ ಸಂವತ್ಸರವನು ಕೂಗಿ ಕರೆ

ಹೀಗೆಂಬ ರಸಋಷಿ ಕುವೆಂಪುರವರ ನುಡಿಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಸೂಕ್ತ ಎನಿಸುತ್ತಿದೆ. ಹೌದು, ಇದು ನಿಜವಾಗಿಯೂ ಹಳೆಯ ನೋವನ್ನು ಮರೆಯುವ ಕಾಲವೇ ಹೌದು. ಪ್ರತಿಯೊಬ್ಬರೂ ಈ ಯುಗಾದಿಯ ದಿನದಿಂದ ಹೊಸ ಬದುಕಿನೆಡೆಗೆ ಮುಖ ಮಾಡಬೇಕಾಗಿಯೂ ಇದೆ. ಪ್ರಕೃತಿಯೂ ಚಿಗುರಿ ಹೊಸ ಬದುಕಿನತ್ತ ನಡೆಯುತ್ತಿರುವಾಗ ನಮ್ಮ ಸಮಾಜದ ಚಿಗುರು ಎಂದರೆ ಮಕ್ಕಳು ಹೇಗೆ ಬದಲಾಗಬಹುದು ಎಂಬುದರ ಕುರಿತಾದ ಸಣ್ಣ ಚಿಂತನೆ ಇಲ್ಲಿದೆ.

ಶಾಲೆಯ ವಾತಾವರಣದಲ್ಲಿ ದಿನಂಪ್ರತಿ ಇರುತ್ತಿದ್ದ ಮಕ್ಕಳು ವಯಕ್ತಿಕ ಜೀವನವನ್ನು ಆನಂದಿಸುವ ಸುಸಮಯ ಇದು. ರಜೆಯ ಮಜದಲ್ಲಿರುವ ಮಕ್ಕಳ ಪಾಲಿಗೆ ನಿಜವಾಗಿಯೂ ಬದುಕು ಚಿಗುರುವ ಕಾಲ ಹಾಗೂ ಇದು ಹೊಸ ಹುರುಪಿನಿಂದ ಬೆಳೆಯುವ ಕಾಲ. ಹೀಗಿರುವಾಗ ಈ ರಜಾ ಕೇವಲ ಮೋಜು ಮಸ್ತಿ ಇವುಗಳಿಗಷ್ಟೇ ಸೀಮಿತವಾಗಿರದೇ ಬದುಕು ಬದಲಾಗುವ ಕಾರ್ಯದತ್ತ ಮುಖ ಮಾಡಲಿದು ಸೂಕ್ತಕಾಲ. ಕ್ರೀಡೆ, ಜ್ಞಾನವೃದ್ದಿ, ಕ್ರಿಯಾತ್ಮಕತೆ, ಸೇವೆ, ಸಂಶೋಧನೆ ಈ ಎಲ್ಲ ಅಂಶಗಳನ್ನು ಮೈಗೂಡಿಸಿಕೊಳ್ಳುವ ಪ್ರಯತ್ನವನ್ನು ಮಾಡುವ ಮೂಲಕ ಮಕ್ಕಳು ಜೀವನ ವಸಂತಕ್ಕೆ ಸೇರುವ ಪ್ರಯತ್ನ ಮಾಡಬಹುದು. ಅದಕ್ಕಾಗಿ ಮಕ್ಕಳು ರಜಾ ಅವಧಿಯನ್ನು ಸದುಪಯೋಗಪಡಿಸಿಕೊಳ್ಳಬೇಕು.ಅದಕ್ಕಾಗಿ ಮಕ್ಕಳೇ ಹೀಗೆ ಮಾಡಿ.

1) ಕುಟುಂಬದವರೊಂದಿಗೆ ಹಾಗೂ ಬಂಧುಗಳೊಂದಿಗೆ ಸಮಯಕಳೆಯಿರಿ.
ಈಗಿನ ತಾಂತ್ರಿಕತೆಯ ಯುಗದಲ್ಲಿ ಮಕ್ಕಳು ಮೊಬೈಲ್ ವ್ಯಸನಕ್ಕೆ ತುತ್ತಾಗಿ ಸಂಬಂಧದ ಬೆಲೆಯನ್ನು ಅರಿಯದಂತಾಗಿದ್ದಾರೆ. ನೀವು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರೆ ಮೊದಲು ನಿಮ್ಮ ತಂದೆ ತಾಯಿಯ ಜೊತೆಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಿ. ಅಜ್ಜ ಅಜ್ಜಿ ಇದ್ದರಂತು ಮನೆಯಲ್ಲಿ ನಡೆದಾಡುವ ದೇವರುಗಳೇ ಇದ್ದಂತೆ. ರಜೆಯ ಸಮಯವನ್ನು ಕುಟುಂಬಕ್ಕಾಗಿ ಹಾಗೂ ಬಂಧುಗಳಿಗಾಗಿ ಸ್ವಲ್ಪಮಟ್ಟಿಗೆ ವ್ಯಯ ಮಾಡಿ. ಆ ಬಾಂಧವ್ಯವೇ ನಿಮ್ಮ ಗುರುತು ಬದಲಾಯಿಸುವ ಮೊದಲ ಹೆಜ್ಜೆ.

RELATED ARTICLES  ಎಲ್ಲರನ್ನೂ ಸಲಹಮ್ಮ ಶ್ರೀ ಮಾರಿಯಮ್ಮ (ವಿಶೇಷ ಲೇಖನ)

2) ಕೂಡಿ ಆಡಿ, ಮೋಡಿ ನೋಡಿ
ಹಳ್ಳಿ ಪ್ರದೇಶಗಳಂತೆ ಗದ್ದೆ ಗುಡ್ಡಗಳು ಇಲ್ಲದ ಪರಿಸರದಲ್ಲಿಯೂ ಇತರ ಮಕ್ಕಳೊಂದಿಗೆ ಕೂಡಿ ಆಡುವ ರೂಢಿ ಮಾಡಿಕೊಳ್ಳಿ. ಶಾಲೆ, ಸ್ನೇಹಿತರು, ಶಿಕ್ಷಕರು ಅಷ್ಟೇ ಅಲ್ಲದೇ ಇನ್ನೂ ಕೆಲವು ಇದೆ. ಸುತ್ತಲಿನವರೊಂದಿಗೆ ಊರಿನವರೊಂದಿಗೆ ಹಾಗೂ ಹಿರಿಯ ಕಿರಿಯ ವಯಸ್ಸಿನವರೊಂದಿಗೆ ಕೂಡಿ ಆಡಿ. ನಗು-ಅಳು ಸೋಲು-ಗೆಲುವಿನ ನೈಜ ಅನುಭವ ಸಿಗುವುದು ಈ ಆಟಗಳಲ್ಲಿಯೇ. ಆಟದ ಮೋಡಿಗೆ ಸಿಲುಕದ ಮನಸ್ಸುಗಳೇ ಇಲ್ಲವಾದರೂ ಉತ್ತಮ ದೈಹಿಕ ಶ್ರಮದ ಆಟಗಳಿಂದ ದೇಹ ಹಾಗೂ ಮನಸ್ಸು ಸದೃಢವಾಗುತ್ತದೆ.

3) ಪುಸ್ತಕ ಪ್ರೇಮಕ್ಕೆ ಈ ರಜಾ ಮುನ್ನುಡಿ ಬರೆಯಲಿ.
ಶಾಲಾ ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಜೀವನ ಸಂದೇಶ ಕೊಡುವ ರಾಮಾಯಣ, ಮಹಾಭಾರತ, ಭಗವದ್ಗೀತೆ,ಮಂಕುತಿಮ್ಮನ ಕಗ್ಗಗಳಂತಹ ಪುಸ್ತಕಗಳಿಗೆ ಪ್ರಾಶಸ್ಥ್ಯನೀಡಿ. ಅವುಗಳಿಗೆ ಕೆಲ ಸಮಯ ಮೀಸಲಿಡಿ. ಪುಸ್ತಕದ ಓದು ಜ್ಞಾನಗಳಿಕೆಯ ಮಹತ್ತರ ಸಾಧನ. ಅಗತ್ಯ ಪುಸ್ತಕಗ ಸಂಗ್ರಹವನ್ನು ಪ್ರಾರಂಭಿಸಲು ಈ ಯುಗಾದಿಯೋ ಅಥವಾ ಈ ರಜೆಯೋ ಪ್ರೇರಣೆಯಾದರೆ ಅದುವೇ ಪ್ರತೀ ಮಕ್ಕಳ ಭವ್ಯ ಭವಿಷ್ಯದ ಪ್ರಾರಂಭದ ದಿನ ಇದಾಗಿರುತ್ತದೆ.

4) ಸೇವೆ ಮಾಡಿ ಸಾರ್ಥಕ್ಯ ಪಡೆಯಿರಿ.
ರಜಾದ ಆನಂದದ ಜೊತೆಗೆ ಸೇವೆಗೂ ಅವಕಾಶಕೊಡಿ. ಸೇವೆ ಎಂದಾಕ್ಷಣ ಏನೋ ದೊಡ್ಡ ಕಾರ್ಯವನ್ನೇ ಮಾಡಬೇಕು ಎಂಬುದನ್ನು ಎಣಿಸದಿರಿ. ನಿಮ್ಮ ಸಾಮರ್ಥಕ್ಕೆ ಅನುಗುಣವಾಗಿ ಸಮಾಜ, ಸಂಸ್ಥೆ, ಮಠ, ದೇವಾಲಯ ಯಾವುದೇ ಇರಲಿ ನಿಮ್ಮ ಕೈಲಾದ ಸೇವೆ ಮಾಡಿ. ಕಷ್ಟದಲ್ಲಿ ಇವುವವರಿಗೆ ನಿಮ್ಮಿಂದಾಗುವ ಸಹಾಯಮಾಡಿ. ನಿಮ್ಮಿಂದ ಕೆಲವವರಿಗೆ ಉಪಕಾರವಾದರೂ ಈ ದಿನ ನಿಮ್ಮ ಜೀವನದ ಸಾರ್ಥಕ ಕ್ಷಣಗಳಲ್ಲಿ ಒಂದು.

5) ಪರಿಸರದ ಸೌಂದರ್ಯ ಸವಿಯಿರಿ.
ಹಿಂದಿನ ಕಾಲದಲ್ಲಿ ರಜಾ ಬಂತೆಂದರೆ ಸಾಕು ಮಕ್ಕಳು ಅಜ್ಜನ ಮನೆ,ಅಜ್ಜಿ, ಮುತ್ತಜ್ಜಿಯ ಊರು ಹೀಗೇ ತಿಂಗಳುಗಟ್ಟಲೆ ಬೇರೆ ಪ್ರದೇಶಕ್ಕೆ ಹೋಗಿಬಿಡುತ್ತಿದ್ದರು. ಆದರೀಗ ಕಾಲ ಬದಲಾಗಿದೆ. ಮನೆ ಬಿಟ್ಟು ಮಕ್ಕಳು ಬೇರೆಕಡೆಗೆ ಹೋಗುವುದೂ ಕಡಿಮೆಯಾಗಿದೆ. ಆದರೆ
ಹೊರಪ್ರಪಂಚ ಕಾಣಬೇಕು ಎಂದರೆ ಬೇರೆ ಬೇರೆ ಪರಿಸರವನ್ನು ನಾವು ನೋಡಲೇಬೇಕು. ರಜಾದ ಸವಿಸವಿಯಲು ನೀವು ಬೇರೆ ಬೇರೆ ಪ್ರದೇಶಗಳಿಗೆ ಭೇಟಿಮಾಡಿ. ಕುಟುಂಬದವರೊಂದಿಗೆ ಪ್ರವಾಸ ಮಾಡಿ ಹಾಗೂ ಅಲ್ಲಿಯ ಪ್ರಕ್ರತಿಯ ಸೌಂದರ್ಯವನ್ನು ಸವಿಯಿರಿ. ಇದರಿಂದಾಗಿ ರಜಾ ದಿನದ ಸದುಪಯೋಗವಾಗುವುದು.

RELATED ARTICLES  ಆಲಸ್ಯ ಹಿಂದೂಡಿ ಉಲ್ಲಾಸವನ್ನು ಚಿಗುರಿಸಿಕೊಳ್ಳಿ

6) ಮನೆಗೆಲಸ ಮರೆಯದಿರಿ
ಶಾಲೆಯಲ್ಲಿ ಕಲಿತ ವಿಷಯಗಳಿಗೆ ಸಂಬಂಧಿಸಿದಂತೆ ಶಿಕ್ಷಕರು ಹೋಮ್‍ವರ್ಕಗಳನ್ನು ನೀಡುವುದು ಸಾಮಾನ್ಯ. ಈ ಮನೆಗೆಲಸಗಳನ್ನು ಆಯಾಯ ದಿನವೇ ಸರಿಯಾಗಿ ಶಿಸ್ತಿನಿಂದ ಮಾಡಿ. ಅದರ ಜೊತೆಗೆ ತಾಯಿಯ ಮನೆಕೆಲಸದಲ್ಲಿಯೋ, ತಂದೆಯ ಕೆಲಸದಲ್ಲಿಯೋ ಸ್ವಲ್ಪಮಟ್ಟಿಗೆ ಸಹಕಾರ ನೀಡಿ. ಈ ಎರಡೂ ಮನೆಗೆಲಸಗಳೂ ಜೀವನದಲ್ಲಿ ಶಿಸ್ತಿನ ಜೊತೆಗೆ ಹೊಸ ಜ್ಞಾನವನ್ನು ನೀಡುತ್ತದೆ. ಮುಂದಿನ ಭವಿಷ್ಯದ ಎಲ್ಲ ಚಟುವಟಿಕೆಗಳಿಗೆ ಇವುಗಳು ಮಾರ್ಗದರ್ಶಿಯಾಗಿಯಾಗಿಯೇ ಇರುತ್ತದೆ.

ಇದಿಷ್ಟೇ ಅಲ್ಲದೇ ನಿಮ್ಮ ರಜಾದಿನವನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಸಂಯೋಜಿಸುವ ಬಗೆಗೆ ಚಿಂತನೆ ನಡೆಸಿ. ರಜಾದಿನ ಕೇವಲ ಮೋಜು ಮಸ್ತಿಗೆ ಮಾತ್ರವಲ್ಲ. ಈ ರಜಾದಿನ ಜೀವನದ ಉನ್ನತಿಗೆ ಎಂಬುದನ್ನು ನೆನೆಯಿರಿ. ಈ ಯುಗಾದಿಯ ನವ ಸಂವತ್ಸರದ ಶುಭ ದಿನ ನಿಜವಾಗಿಯೂ ಮಕ್ಕಳ ಬದುಕಿನಲ್ಲಿ ಹೊಸ ಯುಗಕ್ಕೆ ನಾಂದಿಯಾಗಲಿ. ಸತ್ಕರ್ಮ, ಸದಾಚಾರಗಳನ್ನು ಬೆಳೆಸಿಕೊಳ್ಳುವತ್ತ ಮನಸ್ಸು ಹರಿಯಲಿ.ಗೂಡಾರ್ಥದಲ್ಲಿ ಚಿನ್ನವೆಂಬ ಸಂವತ್ಸರ ಮಕ್ಕಳ ಬದುಕನ್ನು ಬಂಗಾರವಾಗಿಸಲಿ. ವಿವೇಕ ವಾಣಿಯಂತೆ ನಮ್ಮ ಜೀವನದ ನಿರ್ಮಾತ್ರರು ನಾವೇ ಆಗಿರುವುದರಿಂದ ಮಕ್ಕಳೇ ಈ ರಜಾದಿನದ ಸದುಪಯೋಗ ಪಡೆಯಿರಿ. ಪಾಲಕರು ಮಕ್ಕಳ ಕನಸಿಗೆ ಕಂಗಳಾಗಿ. ನವ ಸಂವತ್ಸರ ನಾವಿನ್ಯತೆಯ ಬದುಕಿಗೆ ನಾಂದಿಯಾಗಲಿ ಎಂದು ಆಶಿಸುತ್ತೇವೆ.
ಸಂಶಯ ದ್ವೇಷಾಸೂಯೆಯ ದಬ್ಬು
ಸುಖಶ್ರದ್ಧಾ ಧೈರ್ಯಗಳನ್ನು ತಬ್ಬು
ಉರಿಯಲಿ ಸತ್ಯದ ಊದಿನ ಕಡ್ಡಿ
ಚಿರ ಸೌಂದರ್ಯದ ಹಾಲ್ಮಡ್ಡಿ.

ಧನ್ಯವಾದಗಳೊಂದಿಗೆ..
ಗಣೇಶ ಡಿ. ಜೋಶಿ, ಸಂಕೊಳ್ಳಿ