ಕುಮಟಾ : ತಾಯಿ ಭಾಷೆ ಉಳಿವಿಗಾಗಿ ಪ್ರತಿಯೊಬ್ಬರೂ ಕೈ ಜೋಡಿಸೋಣ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಆಶಾ ಎಮ್. ಎಸ್. ಹೇಳಿದರು.
ಪಟ್ಟಣದ ಚಿತ್ರಿಗಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಶನಿವಾರ ಕುಮಟಾ ಕನ್ನಡ ಸಂಘ ಹಾಗೂ ಕಾರ್ಯನಿರತ ಪತ್ರಕರ್ತರ ಧ್ವನಿ ಉತ್ತರ ಕನ್ನಡ ಜಿಲ್ಲಾ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಾಧ್ಯಮ ಯಾನ (ಪತ್ರಿಕಾ ದಿನಾಚರಣೆ) ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸಮ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಅನ್ಯ ಭಾಷೆಗಳ ಪ್ರಭಾವದಿಂದಾಗಿ ನಮ್ಮ ಕನ್ನಡ ಭಾಷೆ ನಲುಗುತ್ತಿದೆ. ಅತಿಯಾದ ಇಂಗ್ಲೀಷ್ ವ್ಯಾಮೋಹದಿಂದ ಪಾಲಕರು ಹೊರ ಬರಬೇಕಾಗಿದೆ. ತಾಯಿ ಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಪ್ರಜ್ಞಾವಂತ ಸಮಾಜ ನಿರ್ಮಾಣ ಸಾಧ್ಯ ಎಂದರು.
ಪತ್ರಿಕೆಗಳು ಪ್ರಜಾಪ್ರಭುತ್ವಕ್ಕೆ ಬುನಾದಿಯಾಗಿವೆ. ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ತೀಡುವ ಪತ್ರಕರ್ತರ ಬದುಕಿಗೆ ಸರ್ಕಾರಗಳು ಬದ್ಧತೆ ನೀಡುವಂತಾಗಬೇಕು. ನಿರ್ಭೀತವಾಗಿ ವರದಿ ಮಾಡುವ ವಾತಾವರಣ ಸೃಷ್ಟಿಯಾದಾಗ ಮಾತ್ರ ಉತ್ತಮ ವರದಿಗಳು ಪ್ರಕಟವಾಗಲು ಸಾಧ್ಯ. ಪತ್ರಿಕಾ ದಿನಾಚರಣೆ ಆಚರಿಸಿಕೊಳ್ಳುವ ಮೂಲಕ ಅವರ ಆಶಯಗಳು ಈಡೇರುವಂತಾಗಿ ಪತ್ರಕರ್ತರು ಸಮಾಜಕ್ಕೆ ಮಾದರಿಯಾಗಲಿ ಎಂದು ಹಾರೈಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ ಮಾತನಾಡಿ, ಕನ್ನಡದಲ್ಲಿ ಅತೀ ಹೆಚ್ಚು ಅಂಕ ಪಡೆದವರನ್ನು ಮಾತ್ರ ಸನ್ಮಾನಿಸುವ ಕಾರ್ಯವಾಗುತ್ತಿದೆ. ಆದರೆ ಕನ್ನಡ ಮಾಧ್ಯಮದಲ್ಲಿ ಕಲಿತು ಹೆಚ್ಚು ಅಂಕ ಪಡೆದವರನ್ನು ಕಡೆಗಣಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ತಾಯಿಯ ಸುಪುತ್ರರನ್ನು ಸನ್ಮಾನಿಸುವ ಕಾರ್ಯ ಮಾಡುತ್ತಿರುವ ಕುಮಟಾ ಕನ್ನಡ ಸಂಘದ ಕಾರ್ಯ ಶ್ಲಾಘನೀಯ. ಅನ್ಯ ಭಾಷೆಯ ವ್ಯಾಮೋಹಕ್ಕೆ ಸಿಲುಕಿ ಪಾಲಕರು ತಮ್ಮ ಮಕ್ಕಳು ಇಂಗ್ಲೀಷ್ ಶಾಲೆಯಲ್ಲಿ ಕಲಿತರೆ ಮಾತ್ರ ದೊಡ್ಡ ವ್ಯಕ್ತಿಗಳಾಗುತ್ತಾರೆನ್ನುವ ಭ್ರಮೆಯಿಂದ ಹೊರ ಬಂದು ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಲು ಮುಂದಾಗಬೇಕು. ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕಡಿಮೆ ಹಾಜರಾತಿಯಿಂದ ನಶಿಸುತ್ತಿರುವ ಇಂದಿನ ಸಂಧಿಗ್ಧತೆಯ ಸಂದರ್ಭಗಳಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿರುವ ಕುಮಟಾ ಕನ್ನಡ ಸಂಘ ಜಿಲ್ಲೆಯಲ್ಲಿ ಕನ್ನಡದ ಉಳಿವಿಗಾಗಿ ಶ್ರಮಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಡಾ. ಎ. ವಿ. ಬಾಳಿಗಾ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಅರವಿಂದ ನಾಯಕ ಪತ್ರಿಕಾ ದಿನಾಚರಣೆಯ ನಿಮಿತ್ತ ಮಾತನಾಡಿ, ಪತ್ರಿಕಾರಂಗ ಪತ್ರಿಕೋದ್ಯಮವಾಗಿ ಬೆಳೆದು ಬಂದ ಸಂದರ್ಭದಲ್ಲಿ ಪತ್ರಕರ್ತರು ನಿರ್ಭೀತವಾಗಿ ವರದಿ ಮಾಡಲು ಹಿಂಜರಿಯುವಂತಾಗಿರುವುದು ಬೇಸರದ ಸಂಗತಿ. ಖಡ್ಗಕ್ಕಿಂತ ಹರಿತವಾದ ಲೇಖನಿ ಸಮಾಜದ ಓರೆಕೋರೆಗಳನ್ನು ತಿದ್ದಿ ಆಳುವವರನ್ನು ಎಚ್ಚರಿಸುವ ಜೊತೆಯಲ್ಲಿ ಸಮರ್ಥ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆಯುತ್ತಿದೆ. ಉತ್ತಮ ವರದಿಗಳು ಪ್ರಕಟವಾದಾಗ ಬೆನ್ನು ತಟ್ಟುವ ಆಡಳಿತಶಾಹಿಗಳು ವ್ಯತಿರಿಕ್ತ ವರದಿಗಳು ಬಂದಾಗ ಸಮಾನ ಮನಸ್ಥಿತಿಯಿಂದ ನೋಡುವಂತಾಗಬೇಕು. ಆಧುನಿಕತೆಯ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಪತ್ರಿಕಾರಂಗ ಮುಂದೊಂದು ದಿನ ಹಿನ್ನಡೆ ಅನುಭವಿಸಬೇಕಾದ ಸಾಧ್ಯತೆ ಇರುವುದರಿಂದ ಪತ್ರಕರ್ತರು ಜಾಗೃತರಾಗಿರುವುದರ ಜೊತೆಯಲ್ಲಿ ಸಂಘಟಿತರಾಗಿ ಕಾರ್ಯ ನಿರ್ವಹಿಸುವಂತಾಗಲಿ ಎಂದು ಹಾರೈಸಿದರು.
ಸಾಧಕ ವಿದ್ಯಾರ್ಥಿಗಳನ್ನು ಸಮ್ಮಾನಿಸಿ ಕುಮಟಾ ಠಾಣಾ ಆರಕ್ಷಕ ಉಪನಿರೀಕ್ಷಕ ಇ. ಸಿ. ಸಂಪತ್ ಮಾತನಾಡಿ, ಮಕ್ಕಳು ಮೊಬೈಲ್ ಹಾಗೂ ದುಶ್ಚಟಗಳ ವ್ಯಾಮೋಹದಿಂದ ದೂರವಿದ್ದು, ಓದಿನ ಮೂಲಕ ತಮ್ಮ ಗುರಿ ಸಾಧಿಸಿ ಸತ್ಪ್ರಜೆಗಳಾಗಿ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಕುಮಟಾ ಕನ್ನಡ ಸಂಘದ ಸಂಸ್ಥಾಪಕ ಅಧ್ಯಕ್ಷ ಸದಾನಂದ ದೇಶಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಕಟ್ಟುವ ಕೆಲಸಕ್ಕೆ ಪ್ರತಿಯೊಬ್ಬ ಕನ್ನಡಿಗರು ಮುಂದಾಗಬೇಕು. ಕನ್ನಡ ಮಾಧ್ಯಮದಲ್ಲೇ ತಮ್ಮ ಮಕ್ಕಳನ್ನು ಓದಿಸುವ ಮೂಲಕ ಪಾಲಕರು ಕನ್ನಡ ಉಳಿವಿಗೆ ಕೈಜೊಡಿಸಬೇಕು ಎಂದರು.
ಈ ಸಂದರ್ಭದಲ್ಲ್ಲಿ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಚಿತ್ರಿಗಿಯ ಮಹಾತ್ಮಾ ಗಾಂಧಿ ಪ್ರೌಢ ಶಾಲೆಯ ನೇಹಾ ಸುಬ್ರಾಯ ಗೌಡ, ಭೂಮಿಕಾ ನಾಗೇಶ ಹಿಣಿ, ನಂದನ್ ಸುಬ್ರಾಯ ಗೌಡ, ರಕ್ಷಿತಾ ಭದ್ರು ಮಡಿವಾಳ, ಶ್ರೀ ರಾಮನಾಥ ಪ್ರೌಢ ಶಾಲೆಯ ಕವನಾ ಭಗಿರಥ ನಾಯಕ, ಕತಗಾಲ ಎಸ್. ಕೆ. ಪಿ. ಹೈಸ್ಕೂಲ್‍ನ ಕವನಾ ಜಗದೀಶ ನಾಯ್ಕ, ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್‍ನ ವಿಜೇತಾ ಮಂಜುನಾಥ ಗುನಗಾ, ಬರ್ಗಿ ಸರ್ಕಾರಿ ಪ್ರೌಢ ಶಾಲೆಯ ರೇಣುಕಾ ರಾಮಚಂದ್ರ ಪಟಗಾರ, ಜನತಾ ವಿದ್ಯಾಲಯ ಮಿರ್ಜಾನ-ಕೊಡಕಣಿಯ ಸಾತ್ವಿಕ ಗಜಾನನ ಭಟ್ಟ ಇವರನ್ನು ಸಮ್ಮಾನಿಸಲಾಯಿತು.
ಮಹಾತ್ಮಾ ಗಾಂಧಿ ಪ್ರೌಢ ಶಾಲೆಯ ಮುಖ್ಯೋಧ್ಯಾಪಕ ಪಾಂಡುರಂಗ ವಾಘ್ರೇಕರ್, ಸಿಂಚನ ವಾಹಿನಿಯ ಸಂಪಾದಕ ಕೃಷ್ಣಾನಂದ ಭಟ್ಟ, ಕುಮಟಾ ಕನ್ನಡ ಸಂಘದ ಮಾಧ್ಯಮ ಸಲಹೆಗಾರ ಸಂತೋಷ ನಾಯ್ಕ, ಉಪಾಧ್ಯಕ್ಷ ಉದಯ ಭಟ್ಟ, ಖಜಾಂಚಿ ಶಿವಯ್ಯ ಹರಿಕಾಂತ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪಟಗಾರ, ನಾಗಪ್ಪ ಮುಕ್ರಿ, ಪಾಂಡುರಂಗ ಗಾಂವಕರ, ನಾರಾಯಣ ಪಟಗಾರ, ಗಜೇಂದ್ರ ಪಟಗಾರ, ಪತ್ರಕರ್ತರಾದ ಪ್ರಜೋತ್ ನಾಯ್ಕ, ವಿಶ್ವನಾಥ ನಾಯ್ಕ, ನಟರಾಜ ಗದ್ದೆಮನೆ ಇನ್ನಿತರರು ಇದ್ದರು.ಕುಮಟಾ ಕನ್ನಡ ಸಂಘದ ಉಪಾಧ್ಯಕ್ಷ ಮಂಗಲದಾಸ ನಾಯ್ಕ ಸ್ವಾಗತಿಸಿದರು. ಶಿಕ್ಷಕ ವಿನಾಯಕ ಶಾನಭಾಗ ನಿರೂಪಿಸಿದರು. ಸದಸ್ಯ ರಾಘು ಗುನಗಾ ವಂದಿಸಿದರು.