ಕುಮಟಾ : ಹಬ್ಬ ಹರಿದಿನಗಳ ಮಾಸ ಶ್ರಾವಣ ಬಂದೊಡನೆ ಧಾರ್ಮಿಕತೆಯ ಭಾವ ಜಾಗೃತವಾಗುತ್ತದೆ. ಹೀಗಾಗಿ ಉತ್ತರ ಕನ್ನಡದ ಜನರು ಅದೆಷ್ಟೇ ಮಾಂಸಹಾರ ಪ್ರಿಯರಾದರೂ, ಅವರಿಗೆ ಪ್ರತಿದಿನವೂ ಮೀನು ಬೇಕೇ ಬೇಕು ಎನಿಸಿದರೂ, ಶ್ರಾವಣ ಮಾಸ ಬರುತ್ತಿದ್ದಂತೆ ಬಹುತೇಕರು ಮಾಂಸಹಾರದಿಂದ ವಿಮುಖರಾಗಿ ಸಸ್ಯಹಾರಿಗಳಾಗುತ್ತಾರೆ. ಇದರಿಂದ ತಾಲೂಕಿನ ಬಹುತೇಕ ಮಾರುಕಟ್ಟೆಯಲ್ಲಿ ಮಾಂಸದ ದರ ಕುಸಿತ ಕಾಣುವುದು ಸಹಜ. ಆಗ ತರಕಾರಿ ಬೆಲೆ ದುಬಾರಿಯಾಗುತ್ತದೆ. ಶ್ರಾವಣವಾದ ಕಾರಣ ಜನ ಯಾವುದೇ ತಕರಾರು ಇಲ್ಲದೇ ತರಕಾರಿಯತ್ತ ಮುಖ ಮಾಡುತ್ತಿರುವುದು ಕಾಣುತ್ತಿದೆ. ತರಕಾರಿಗೆ ಹೇಳುದಷ್ಟು ಬೆಲೆಕೊಟ್ಟು ಖರೀದಿಸಲು ಜನರು ಮುಂದಾಗಿದ್ದಾರೆ.

ಈ ವರ್ಷ ಉತ್ಪಾದನೆ ವೆಚ್ಚ ಏರಿಕೆಯಾದ ಹಿನ್ನೆಲೆಯಲ್ಲಿ ಹಾಗೂ ರಾಜ್ಯದಲ್ಲಿ ಕೋಳಿ ಮಾಂಸದ ಉತ್ಪಾದನೆ ಕುಗ್ಗಿರುವ ಕಾರಣ ಶ್ರಾವಣ ಮಾಸದಲ್ಲಿ ಸಾಮಾನ್ಯವಾಗಿ ಇಳಿಕೆಯಾಗುತ್ತಿದ್ದ ಕೋಳಿ ಮಾಂಸದ ದರ ಈ ಬಾರಿ ಯಥಾಸ್ಥಿತಿ ಕಾಯ್ದುಕೊಳ್ಳುವ ಲಕ್ಷಣ ತೋರಿಸುತ್ತಿದೆ. ಜೊತೆಗೆ ಮೀನು, ಚಿಕನ್ ದರಗಳು ಶ್ರಾವಣ ಬಂದರೂ ಇಳಿಕೆ ಕಾಣದೇ ಏರು ಮುಖದತ್ತ ಸಾಗುತ್ತಿರುವುದು ಮಾಂಸಹಾರಿಗಳಿಗೆ ಅಚ್ಚರಿ ತಂದಿದೆ.

ಪೇಟೆಯಲ್ಲಿ ಸಾಧಾರಣವಾಗಿ ಒಂದು ಕಿಲೋ ಗ್ರಾಂ. ಗೆ ೧೫೦ ರು. ಇರುತ್ತಿದ್ದ ಚಿಕನ್ ದರ ದರ ೨೦೦ರ ಸನಿಹಕ್ಕೆ ಬಂದು ಯಥಾಸ್ಥಿತಿಯಲ್ಲಿ ಹಲದಿನಗಳನ್ನು ಕಳೆಸಿದೆ. ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಮೀನಿನ ಧಾರಣೆಯೂ ಏರು ಗತಿಯಲ್ಲಿ ಇರುವುದು ಮೀನು ಪ್ರಿಯರಿಗೂ ಬೇಸರ ಉಂಟುಮಾಡಿದೆ. ಹೀಗಾಗಿ ಕುಮಟಾ ತರಕಾರಿ ಮಾರುಕಟ್ಟೆ ಹಾಗೂ ಸಂತೆ ಪೇಟೆಯಲ್ಲಿ ಜನರ ತರಕಾರಿ ಖರೀದಿ ಭರಾಟೆ ಜೋರಾಗಿದೆ.

RELATED ARTICLES  ವಾಟ್ಸಾಪ್ ಸ್ಟೇಟಸ್ ಬಗ್ಗೆ ನಿಮಗೆಷ್ಟು ಗೊತ್ತು?

ಬಂಗಡೆ ೧೫ ಮೀನಿಗೆ ೧೦೦ ರೂ., ಇಸ್ವಾಣ ೬೦೦ರೂ ನಿಂದ ೯೦೦ ರೂ., ತೂರಿ 20 ಮೀನಿಗೆ 100 ರೂ., ಲೆಪ್ಪೆ ಮೀನು ಒಂದು ಪಾಲಿಗೆ ೧೦೦ ರೂ, ಕರಳಗಿ ೧ ಮೀನಿಗೆ ೨೫೦ ರೂ ವರೆಗೆ ಮಾರಾಟವಾಗುತ್ತಿದೆ. ಇನ್ನು ಒಣ ಮೀನಿಗೆ ೬-೭ ಬಂಗಡೆಗೆ ೧೦೦ ರೂ., ಶೆಟ್ಟ್ಲಿ ೫೦ ರೂ., ಹಾಗೂ ೧೦೦ ರೂ., ಪಾಲು ಗಳು ಮಾರುಕಟ್ಟೆಯಲ್ಲಿದೆ.

ಇನ್ನು ಫಾರಂ ಕೋಳಿಗಳ ಆಯಸ್ಸು ತುಂಬಾ ಕಡಿಮೆಯಾಗಿರುವ ಕಾರಣ ಶ್ರಾವಣ ಮಾಸದ ಒಂದು ತಿಂಗಳ ಮೊದಲೇ ಕೋಳಿ ಪೂರೈಕೆದಾರರು ಕೋಳಿಗಳ ಉತ್ಪಾದನೆಯನ್ನೇ ಕಡಿಮೆ ಮಾಡಿದ್ದಾರೆ ಎನ್ನಲಾಗಿದೆ. ಕೃತಕ ವಾತಾವರಣದಲ್ಲಿ ಫಾರಂ ಕೋಳಿ ಬೆಳೆಸುವುದರಿಂದ ಅವು ನಿಗದಿತ ದಿನದ ಬಳಕೆಗೆ ಮಾತ್ರ ಬರುತ್ತದೆ. ಇಲ್ಲದಿದ್ದರೆ ಅವು ಸಾಯಲಾರಂಭಿಸುತ್ತವೆ ಹೀಗಾಗಿ ಪೂರೈಕೆ ಕಡಿಮೆಯಾಗಿ, ದರ ಏರಿಕೆಯಾಗಿದೆ.

RELATED ARTICLES  ದೇವರು ಆ ಹುಡುಗು ಬುದ್ಧಿಯ ಶಿಷ್ಯರನ್ನು ಸುಖರೂಪ ಇಡಲಿ.

ಹಲವರು ಶ್ರಾವಣದಲ್ಲಿ ಅನ್ಯಾಹಾರ ತ್ಯಜಿಸಿ, ಶಾಖಾಹಾರ ಬಳಸುವ ಕಾರಣ ತರಕಾರಿ ಬೆಳೆಗಾರರಿಗೆ ಇದು ಸುಗ್ಗಿಯ ಕಾಲ ಎಂಬಂತಾಗಿದೆ. ಹೀಗಾಗಿ, ತಮ್ಮ ಜಮೀನುಗಳಲ್ಲಿ ಕಷ್ಟಪಟ್ಟು ಬೆಳೆಯುವ ತರಕಾರಿಗಳನ್ನು ಸಾಮಾನ್ಯವಾಗಿ ರೈತರು ಶ್ರಾವಣ ಮಾಸದಲ್ಲಿಯೇ ಪೇಟೆಗಳಿಗೆ ತರುತ್ತಾರೆ.

ಮೀನು ಮಾಂಸದ ದರದ ಏರಿಕೆಯ ಜೊತೆಗೆ, ತರಕಾರಿಯ ಬೆಲೆಯೂ ಏರುಗತಿ ಪಡೆದಿದೆ.  ಪ್ರತೀ ಕಿಲೋ ಗ್ರಾಂ. ಗೆ ಸಂಬಂಧಿಸಿ ಬೆಲೆ ಶುಂಠಿ ೧೨೦ ರೂ.,ಸವತೆ ೨೩ ರೂ., ಹಾಗಲ ೫೦ ರೂ., ಈರುಳ್ಳಿ ೩೦ ರೂ., ಕ್ಯಾರೆಟ್  ೪೫ ರೂ., ತೊಂಡೆಕಾಯಿ ೪೦ ರೂ., ಮಗೆಕಾಯಿ ೪೦ ರೂ., ಆಲೂಗಡ್ಡೆ ೪೦ ರೂ., ಮೂಲಂಗಿ ೮೦ ರೂ., ನುಗ್ಗಿ ೧೨೦ ರೂ., ಬದನೆ ೬೦ ರೂ., ಟೊಮೆಟೊ ೭೦ ರೂ., ಬೀಟ್ರೂಟ್ ೮೦ ರೂ., ನವಿಲಕೋಸು ೧೦೦ ರೂ., ಬೀನ್ಸ್ ೧೦೦ ರೂ., ಹಸಿಮೆಣಸು ೩೦ ರೂ., ಲಿಂಬು ೧೪೦ ರೂ., ನಂತೆ ದರ ನಡೆದಿದೆ. ಆದರೂ ಜನ ಶ್ರಾವಣದ ಶುದ್ಧತೆ ಕಾಪಾಡಲು ತರಕಾರಿ ಕಡೆಗೆ ಮುಖ ಮಾಡಿ ತಕರಾರಿಲ್ಲದೆ ತರಕಾರಿ ಖರೀದಿ ಮಾಡುತ್ತಿದ್ದಾರೆ.