ಕುಮಟಾ : ರಾಜ್ಯ ಕಾಂಗ್ರೆಸ್ ಸರ್ಕಾರ ತಮ್ಮ ಪ್ರಚಾರಕ್ಕೋಸ್ಕರ ಸಾರ್ವಜನಿಕರ ತೆರಿಗೆ ಹಣವನ್ನು ದುಂದುವೆಚ್ಚ ಮಾಡುತ್ತಿರುವುದನ್ನು ನಾವು ದಿನನಿತ್ಯ ಕಾಣಿತ್ತಿದ್ದೇವೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಅವರು ಕುಮಟಾ ಮಂಡಲ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ನಡೆದ ಮಂಡಲ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ತಮ್ಮ ಪ್ರಚಾರದ ಸಲುವಾಗಿ ಸಾರ್ವಜನಿಕರ ಹಣ ಬಳಸುತ್ತಿದೆ. ಆದರೆ ಮೋದಿಜಿಯವರು ಹಲವಾರು ಅತ್ಯುತ್ತಮ ಯೋಜನೆಗಳನ್ನು ಜನರಿಗೆ ತಲುಪಿಸಿದ್ದು, ಅವುಗಳ ಪ್ರಚಾರಕ್ಕಾಗಿ ಪ್ರಯತ್ನಿಸಿಲ್ಲ ಎನ್ನುತ್ತಾ, ನರೇಂದ್ರ ಮೋದೀಜಿಯವರ ಅವಧಿಯಲ್ಲಿ ನೆರವೇರಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದರು.
ಮೋದಿಯವರಂತಹ ಮಹಾನ್ ವ್ಯಕ್ತಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ನಾವೆಲ್ಲರೂ ಶ್ರಮಿಸಬೇಕಿದೆ. ಕೇಂದ್ರಸರ್ಕಾರ ನೆರವೇರಿಸುವ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಕಾರ್ಯಕರ್ತರೆಲ್ಲರು ಮನೆಮನೆಗೆ ತೆರಳಿ ಜನಸಾಮಾನ್ಯರಿಗೆ ನೆನಪಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ನಮ್ಮ ಹೆಮ್ಮೆಯ ಪ್ರಧಾನಿ ಮೋದೀಜಿಯವರ ಜನ್ಮದಿನದ ಪ್ರಯುಕ್ತ ಪಕ್ಷದ ವತಿಯಿಂದ ದೇಶದಾದ್ಯಂತ ಸೇವಾ ಪಾಕ್ಷಿಕವನ್ನು ಹಮ್ಮಿಕೊಳ್ಳಲಾಗಿದೆ. ತನ್ಮೂಲಕ ಸಾರ್ವಜನಿಕರಿಗೆ ನೆರವಾಗುವಂತಹ ಕೆಲಸ ಕಾರ್ಯಗಳನ್ನು ಪಕ್ಷದ ಕಾರ್ಯಕರ್ತರಾದ ನಾವೆಲ್ಲರೂ ಮಾಡುತ್ತಿದ್ದೇವೆ. ರಕ್ತದಾನ ಶಿಬಿರ, ಆಸ್ಪತ್ರೆಗೆ ತೆರಳಿ ರೋಗಿಗಳ ಯೋಗಕ್ಷೇಮ ವಿಚಾರಿಸಿ ಹಣ್ಣುಹಂಪಲು ವಿತರಿಸುವುದು, ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವುದು ಹೀಗೆ ವಿವಿಧ ಜನೋಪಯೋಗಿ ಸೇವಾ ಚಟುವಟಿಕೆಗಳನ್ನು ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಬೆಂಬಲದೊಂದಿಗೆ ನೂತನವಾಗಿ ಆಯ್ಕೆಯಾಗಿರುವ ಗ್ರಾಮಪಂಚಾಯತ್ ಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕುಮಟಾ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಜಿಲ್ಲಾ ಪ್ರಧಾನಕಾರ್ಯದರ್ಶಿ ಗುರುಪ್ರಸಾದ್ ಹೆಗಡೆ, ಸೇವಾ ಪಾಕ್ಷಿಕದ ಮಂಡಲ ಪ್ರಮುಖರಾದ ಡಾ. ಜಿ. ಜಿ. ಹೆಗಡೆ, ಕುಮಾರ್ ಮಾರ್ಕಾಂಡೆಯ, ಪ್ರಶಾಂತ ನಾಯ್ಕ ಹಾಗೂ ಇತರರು ವೇದಿಕೆಯಲ್ಲಿದ್ದರು. ಜಿಲ್ಲೆ ಹಾಗೂ ಮಂಡಲದ ವಿವಿಧ ಸ್ಥರಗಳ ಪದಾಧಿಕಾರಿಗಳು, ಗ್ರಾಮಪಂಚಾಯತ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಪುರಸಭಾ ಸದಸ್ಯರು, ವಿವಿಧ ಮೋರ್ಚಾ ಹಾಗೂ ಪ್ರಕೋಷ್ಟಗಳ ಪ್ರಮುಖರು, ಮಹಾಶಕ್ತಿಕೇಂದ್ರ ಹಾಗೂ ಶಕ್ತಿಕೇಂದ್ರ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.