Home Article ಬೆಳೆಗಳನ್ನು ತಿಂದು ತೇಗುತ್ತಿರುವ ಮಂಗಗಳು : ರೈತರ ಗೋಳು ಕೆಳೋರು ಯಾರು? : ವಾನರ ಹಾವಳಿಗೆ...

ಬೆಳೆಗಳನ್ನು ತಿಂದು ತೇಗುತ್ತಿರುವ ಮಂಗಗಳು : ರೈತರ ಗೋಳು ಕೆಳೋರು ಯಾರು? : ವಾನರ ಹಾವಳಿಗೆ ಬಳಲಿದ ಬೆಳೆಗಾರ.

ಕುಮಟಾ : ಅಡಿಕೆಗೆ ಕೊಳೆರೋಗ, ಮುಗಟು ಉದುರುವುದು , ತೆಂಗಿಗೆ ಎಲೆಸುಳಿ ರೋಗ, ಮಿಳ್ಳೆ ಕೊಳೆಯುವಂತಹ ಸಮಸ್ಯೆಗಳು ಒಂದೆಡೆಯಾದರೆ, ಕೂಲಿಕಾರರ ಅಭಾವದಂತಹ ಹತ್ತಾರು ಸಮಸ್ಯೆಗಳ ಸುಳಿಗೆ ಸಿಕ್ಕು ಹೈರಾಣಾಗಿರುವ ಕುಮಟಾ ತಾಲೂಕಿನ ಬಹು ಭಾಗದ ಕೃಷಿಕರಿಗೆ ಇದೀಗ ಮಂಗನ ಹಾವಳಿ ಹೊಸ ತಲೆಬೇನೆಯಾಗಿದೆ. ಹೇಗೆ ಈ ಕಾಟ ಸಹಿಸೋದು, ಇದಕ್ಕೆ ಪರಿಹಾರ ಏನು ಎಂಬ ಚಿಂತೆ ರೈತರನ್ನು ಆವರಿಸಿದ್ದು, ಮಂಗನ ಉಪಟಳ ರೈತರಲ್ಲಿ ನಡುಕ ತಂದಿದೆ. ದಾರಿ ಕಾಣದ ರೈತರು ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿ ಮಂಕಾಗಿ ಹೋಗಿದ್ದಾರೆ.

ತಾಲೂಕಿನ ಕತಗಾಲ, ಮಿರ್ಜಾನ್, ವಾಲ್ಗಳ್ಳಿ, ಕೂಜಳ್ಳಿ, ಕಲಭಾಗ, ದೀವಗಿ, ಬಾಡ, ಹೊಲನಗದ್ದೆ, ಸಂತೆಗುಳಿ, ಕಲವೆ, ಮೂರೂರು ಭಾಗದಲ್ಲಿ ಮಂಗಗಳು ಕಾಣಿಸಿಕೊಳ್ಳುವುದು ಹೆಚ್ಚಿದ್ದರೂ, ಪಕ್ಕದ ಸೊಪ್ಪಿನ ಬೆಟ್ಟ, ಕಾಡಿನಲ್ಲಿ ಓಡಾಡಿಕೊಂಡಿದ್ದ ಮಂಗಗಳು ಅಷ್ಟಾಗಿ ತೋಟಕ್ಕೆ ಬರುತ್ತಿರಲಿಲ್ಲ. ಒಂದು ವೇಳೆ ತೋಟಕ್ಕೆ ಬಂದರೂ ಮಿಶ್ರ ಬೆಳೆಗಳಾದ ಬಾಳೆಕಾಯಿ, ಇತರ ತರಕಾರಿ ಹಾಗೂ ಹಣ್ಣು ತಿಂದು ತೃಪ್ತವಾಗುತ್ತಿದ್ದವು. 

ಆದರೆ ಈ ವರ್ಷ ಗುಂಪು ಗುಂಪಾಗಿ ಬರುತ್ತಿರುವ ಮಂಗಗಳು ಮುಖ್ಯ ಬೆಳೆ ತೆಂಗಿಗೆ ಹಾಗೂ ಅಲ್ಲಲ್ಲಿ ಅಡಕೆಗೂ ಕೈ ಹಚ್ಚಿದೆ. ಚಿಕ್ಕ ಚಿಕ್ಕ ತೆಂಗಿನ ಮಿಳ್ಳೆಗಳನ್ನು ಕಚ್ಚಿ ಒಡೆದು, ತಿರುಳು ತಿಂದು ಬಿಸಾಡುವ ಮಂಗಗಳಿಂದಾಗಿ ಜನರಿಗೆ ಕಲ್ಪವೃಕ್ಷದ ಬೆಳೆ ಕೈಗೆ ಸಿಗದಂತೆ ಆಗಿದೆ. ಮಂಗಗಳನ್ನು ಓಡಿಸಲು ಹಿಂದೆಲ್ಲಾ ಅನುಸರಿಸುತ್ತಿದ್ದ ಪಟಾಕಿ, ಗರ್ನಾಲು, ಏರ್‌ಗನ್‌ ಮೊದಲಾದ ವಿಧಾನಗಳು ಬಿಲ್‌ ಕುಲ್‌ ಪ್ರಯೋಜನಕ್ಕೆ ಬರುತ್ತಿಲ್ಲ. ಮಂಗಗಳ ಪಕ್ಕದಲ್ಲೇ ಪಟಾಕಿ ಸಿಡಿದರೂ ಕ್ಯಾರೇ ಅನ್ನುತ್ತಿಲ್ಲ ಎನ್ನುತ್ತಿದ್ದಾರೆ ರೈತರು. ಇದೆಲ್ಲಾ ಪ್ರಯೋಗಗಳನ್ನು ನಡೆಸಿಯೂ ಕೈ ಸೋತಿರುವ ಬೆಳೆಗಾರ ಬದುಕು ಹೇಗೆ ಎಂಬ ಚಿಂತೆಯಲ್ಲಿ ಇದ್ದಾನೆ.

ಕಪ್ಪು ಮೂತಿ ಹಾಗೂ ಬಿಳಿ ಬಿಳಿ(ಕೆಂಪು)ಮೂತಿಯ ಮಂಗಗಳೂ ಬರುತ್ತಿದ್ದು. ಈ ಎರಡು ಜಾತಿಯವೂ ಕೃಷಿ ಬೆಳೆಗೆ ಹಾನಿ ಮಾಡುತ್ತವೆಯಾದರೂ ಹೆಚ್ಚು ಸವಾಲು ಒಡ್ಡುವುದು ಬಿಳಿ ಮೂತಿಯವು. ಅತಿಯಾದ ಬುದ್ಧಿವಂತಿಕೆ, ತಂಡದಲ್ಲಿ ಕಾರ್ಯಾಚರಣೆ, ಕಣ್ತಪ್ಪಿಸಿ ಬೆಳೆ ಲಪಟಾಯಿಸುವ ಚಾಣಾಕ್ಷತೆ, ನಿಯಂತ್ರಣದ ಹೊಸ ಹೊಸ ತಂತ್ರ ಎದುರಿಸಿ ಬದುಕಬಲ್ಲ ಗಟ್ಟಿತನ ಹೊಂದಿರುವ ಕೋತಿ ಇದು. ಆಹಾರ, ತರಕಾರಿಗಳಲ್ಲಂತೂ ಬೆಳೆ ನಾಟಿಯಿಂದ ಫಸಲು ಬರುವವರೆಗೆ, ಇನ್ನು ತೋಟಗಾರಿಕಾ ಬೆಳೆಗಳಲ್ಲಂತೂ ಹೂವಿನಿಂದ ಹಣ್ಣಾಗುವವರೆಗೂ ಈ ಕೋತಿ ಹಾನಿ ಮಾಡುತ್ತವೆ. ತಂಡ ತಂಡವಾಗಿ ಬರುವ ಇದು ಒಂದೊಂದು ತಂಡದಲ್ಲಿ ಕನಿಷ್ಟ 10ರಿಂದ 50-60 ಸಂಖ್ಯೆಯಲ್ಲಿ ಇರುತ್ತದೆ.

1972ರ ವನ್ಯಜೀವಿ ಸಂರಕ್ಷಣಾ ಕಾಯಿದೆ ಷೆಡ್ಯೂಲ್‌-3 ಭಾಗ 1ರ ಪ್ರಕಾರ ಮಂಗಗಳನ್ನು ವನ್ಯ ಜೀವಿಗಳೆಂದು ಪರಿಗಣಿಸಲಾಗಿದೆ. ಈ ಕಾಯಿದೆಯ ಸೆಕ್ಷನ್‌ 27, 29, 50, 51ರ ಪ್ರಕಾರ ಮಂಗನನ್ನು ಸಾಯಿಸುವುದು ಶಿಕ್ಷಾರ್ಹ ಅಪರಾಧ. ಇದಕ್ಕೆ 3 ರಿಂದ 7 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಸರಕಾರಿ ಆದೇಶದ ಪ್ರಕಾರ ವನ್ಯಜೀವಿಯಿಂದ ಬೆಳೆ ಹಾನಿಯಾದರೆ ನಷ್ಟ ಅನುಭವಿಸಿದ ರೈತರಿಗೆ ಬೆಳೆ ಹಾನಿಯ ಮೌಲ್ಯ ನಿರ್ಧರಿಸಿ, ಪರಿಹಾರ ಧನ ಮಂಜೂರು ಮಾಡುವ ವಿವೇಚನಾಧಿಕಾರ ಅರಣ್ಯಾಧಿಕಾರಿಗಳಿಗಿದೆ. ಆದರೆ ಇದು ಈ ಭಾಗದಲ್ಲಿ ಆಗುತ್ತಿಲ್ಲವೆಂಬ ಅಳಲು ರೈತರದ್ದು. 

ತಾಲೂಕಿನಲ್ಲಿ 2592.22 ಹೆಕ್ಟೇರ್ ಜಾಗದಲ್ಲಿ ತೆಂಗು, 2538.83 ಹೆಕ್ಟೇರ್ ನಲ್ಲಿ ಅಡಿಕೆ, 204.94 ಹೆಕ್ಟೇರ್ ಕಾಳುಮೆಣಸು, 70.42 ಹೆಕ್ಟೇರ್ ಜಾಗದಲ್ಲಿ ಮಾವು ಬೆಳೆಗಳನ್ನು ಬೆಳೆಯಲಾಗುತ್ತದೆ. ತೆಂಗು ವಾರ್ಷಿಕವಾಗಿ 37,206 ಕಾಯಿಗಳು, ಅಡಿಕೆ 5,430 ಟನ್, ಕಾಳುಮೆಣಸು 68 ಟನ್, ಕೊಕೋ 1 ಟನ್ , ಬಾಳೆ 10636 ಮೆ.ಟನ್, ಮಾವು 2778 ಮೆ.ಟನ್, ನಿಂಬೆ 6 ಮೆ.ಟನ್, ಅನಾನಸ್ 4 ಮೆ.ಟನ್ ಹಾಗೂ ಇತರ ತರಕಾರಿಗಳನ್ನು ಬೆಳೆಯಲಾಗುತ್ತದೆ. ಆದರೆ ಇದೆಲ್ಲದಕ್ಕೂ ಮಂಗಗಳ ಹಾವಳಿ ಜೋರಾಗಿದ್ದು ರೈತರು ಅಕ್ಷರಶಃ ಸಮಸ್ಯೆಯ ಬಾಗಿಲು ತಟ್ಟುವಂತಾಗಿದೆ.

ಇಂದಿನ ಹಲವು ವರ್ಷಗಳಲ್ಲಿ ಮಂಗಗಳನ್ನು ಹಿಡಿಯುವವರು ಆಗಾಗ ಬಂದು ಮಂಗಗಳನ್ನು ಹಿಡಿದುಕೊಂಡು ತೆರಳುತ್ತಿದ್ದರು . ಆದರೆ ಇದೀಗ ಮಂಗಗಳನ್ನು ಹಿಡಿಯುವವರು ಸಿಗುತ್ತಿಲ್ಲ ಜೊತೆಗೆ ಮಂಗಗಳನ್ನು ಕೊಲ್ಲುವುದು ಅಪರಾಧವಾಗಿರುವುದರಿಂದ ರೈತರ ಕಷ್ಟ ಹೇಳುತೀರದಾಗಿದೆ. ಮರದ ಬುಡದಲ್ಲಿ ಬಿದ್ದಿರುವ ತೆಂಗಿನ ಮಿಳ್ಳೆಗಳನ್ನು ಹಾಗೂ ಮಂಗಗಳ ಹಾವಳಿಯಿಂದ ಹಾಳಾದ ಬೆಳೆಗಳನ್ನು ನೋಡಿ ರೈತರು ಕಣ್ಣೀರು ಸುರಿಸುವ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಹಾಗೂ ಸರಕಾರ ರೈತರಿಗೆ ನೆರವಿಗೆ ಬರಲಿ ಎಂಬುದು ಬಹು ರೈತರ ಆಗ್ರಹವಾಗಿದೆ.

ನೋಡ ನೋಡುತ್ತಿದ್ದಂತೆ ತೋಟಕ್ಕೆ ಬರುವ ಮಂಗಗಳು ಬೆಳೆಗಳನ್ನು ಹಾಳು ಮಾಡುತ್ತಿದೆ. ಕೊಯ್ದು ಬೆಳೆಯನ್ನು ಬಳಸಲೂ ಇರದ ರೀತಿಯಲ್ಲಿ ಬೆಳೆ ಹಾನಿಯಾಗುತ್ತಿದೆ. ಈ ಬಗ್ಗೆ ರೈತರಿಗೆ ನೆರವಾಗುವ ಯೋಜನೆ ಅಗತ್ಯವಿದೆ. ಸಂಬಂಧಿಸಿದ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ರೈತರ ಸಹಾಯಕ್ಕೆ ನಿಲ್ಲಬೇಕು. – ವಿಶ್ವನಾಥ ಹೆಗಡೆ, ಕೃಷಿಕರು ಹಾಗೂ ಸಾಮಾಜಿಕ ಕಾರ್ಯಕರ್ತರು.