ಕುಮಟಾ : ತಾಲೂಕಿನ ಪುರಭವನದಲ್ಲಿ ಶಿರಸಿ ಬ್ಯಾಗದ್ದೆಯ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಕುಮಟಾ ತಾಲೂಕಿನ ಆಟೋ ಚಾಲಕರು, ಮಾಲಕರಿಗೆ ಸಮವಸ್ತ್ರ, ಆಟೋ ರಿಕ್ಷಾ ಪ್ರಿಟಿಂಗ್ ವುಡ್ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮ ಅರ್ಥಪೂರ್ಣವಾಗಿ ಸಂಪನ್ನವಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಆಟೋರಿಕ್ಷಾ ಚಾಲಕರು ಹಾಗೂ ಅವರ ಕುಟುಂಬದ ಸದಸ್ಯರು ಜಿಲ್ಲೆಯಲ್ಲಿ ಕೊಡುಗೈ ದಾನಿ ಎಂದೇ ಪ್ರಸಿದ್ಧರಾದ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಅನಂತಮೂರ್ತಿ ಹೆಗಡೆಯವರ ಕುರಿತು ಆನಂದದ ನುಡಿಗಳನ್ನು ಹಂಚಿಕೊಳ್ಳುವ ಜೊತೆಗೆ, ನಮ್ಮೆಲ್ಲರ ಮನಸ್ಸಿನಲ್ಲಿ ಅನಂತಮೂರ್ತಿ ಹೆಗಡೆ ಅರಸರಾಗಿ ನೆಲೆಯೂರಿದ್ದು, ನಮ್ಮ ಬದುಕಿನ ಆಶಾಕಿರಣರಾಗಿದ್ದಾರೆ ಎಂಬ ಅಭಿಪ್ರಾಯ ಹಂಚಿಕೊಂಡು, ಇವರು ಸಂಸದರಾಗಲಿ ಎಂದು ಹಾರೈಸಿ, ಅನಂತಮೂರ್ತಿ ಹೆಗಡೆಯವರನ್ನು ಹೊತ್ತು ಕುಣಿದು ಸಂಭ್ರಮಿಸಿದರು. 

ಸಭಾ ಕಾರ್ಯಕ್ರಮದಲ್ಲಿ ಪ್ರಾಸ್ಥಾವಿಕ ನುಡಿಗಳನ್ನು ಹಂಚಿಕೊಂಡ ಕಾರ್ಯಕ್ರಮದ ರೂವಾರಿ ಅನಂತಮೂರ್ತಿ ಹೆಗಡೆ, ಮಾತನಾಡಿ, ತೀರಾ ಯೋಚಿಸಿ ಲಾಭ, ನಷ್ಟವನ್ನು ಲೆಕ್ಕಹಾಕಿ ಮಾಡಿದ ಕಾರ್ಯಕ್ರಮ ಇದಲ್ಲ. ಇದು ಹೃದಯ ದಿಂದ ಮೂಡಿಬಂದ ಕಾರ್ಯಕ್ರಮ. ಚಾಲಕ ವೃತ್ತಿ ಕಷ್ಟದ ಕಾರ್ಯ. ಆಟೋ ಚಾಲಕರಿಗೆ ಯಾವುದೇ ಗ್ಯಾರಂಟಿ ಇಲ್ಲ. ಆಟೋ ಚಾಲಕರ ಜೀವನ ದುಸ್ತರವಾಗಿದೆ. ಅವರ ಕಷ್ಟಕ್ಕೆ ಸ್ವಲ್ಪ ಸಹಾಯ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. 

ಚಾಲಕರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ದೊರಕುತ್ತಿಲ್ಲ. ಹಾಗಾಗಿ ನನ್ನ ದುಡುಮೆಯ ಒಂದು ಭಾಗವನ್ನು ಸಾಮಾಜಿಕ ಕಾರ್ಯಕ್ಕೆ ಬಳಸುತ್ತ ಬಂದಿದ್ದೇವೆ. ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇನೆ. ದುರ್ಬಲರಿಗೆ, ಅಸಹಾಯಕರಿಗೆ, ಬಡವರಿಗೆ ನನ್ನ ಕೈಲಾದ ಸಹಕಾರ ನೀಡುತ್ತೇನೆ ಎಂದರು.

ಈ ದಾನದ ಹಿಂದೆ ಯಾವುದೇ ಅನ್ಯ ಉದ್ದೇಶ ಇಲ್ಲ. ಸಮಾಜದಲ್ಲಿ ಎಲ್ಲರೂ ಬದುಕಬೇಕು, ಎಲ್ಲರ ಬದುಕೂ ಹಸನಾಗಬೇಕು ಎಂಬುದು ನನ್ನ ಆಶಯ ಎಂದರು. ದಾನ ಮಾಡುವವರು ಸತ್ಪಾತ್ರರಿಗೆ ದಾನ‌ಮಾಡಬೇಕು ಎಂಬ ದಿಶೆಯಲ್ಲಿ ಈ ಕಾರ್ಯ ಮಾಡುತ್ತಿರುವುದು ಎಂದು ಅವರು ತಿಳಿಸಿದರು.

ಅಲ್ಲದೇ ಈ ಜಿಲ್ಲೆಗೆ ಅತ್ಯಗತ್ಯವಾಗಿ ಬೇಕಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಅನೇಕ ಪ್ರಯತ್ನಗಳು ನಡೆದಿದೆ. ಎಲ್ಲಿಯೋ ಹೋಗಿ ಚಿಕಿತ್ಸೆ ಪಡೆಯುವ ದುಸ್ಥಿತಿ ನಮ್ಮ ಜಿಲ್ಲೆಗಿದೆ. ಜಿಲ್ಲೆಗೆ ಬೇಕಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಅ. ೬ರಿಂದ ೧೩ರ ವರೆಗೆ ಶಿರಸಿಯಿಂದ ಕಾರವಾರದ ವರೆಗೆ ಪಾದ ಯಾತ್ರೆ ಮಾಡುತ್ತಿದ್ದೇನೆ. ಇದಕ್ಕೆ ಜಿಲ್ಲೆಯ ಜನರು ವ್ಯಾಪಕ ಬೆಂಬಲ ನೀಡುವಂತೆ ಅನಂತಮೂರ್ತಿ ಹೆಗಡೆ ಮನವಿ ಮಾಡಿದರು.

RELATED ARTICLES  ಗುರುವೇ ಅಗಸ

ಶಾಸಕ ದಿನಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅನಂತಮೂರ್ತಿ ಹೆಗಡೆ ತಮ್ಮ ಟ್ರಸ್ಟ್ ಮೂಲಕ ಜಿಲ್ಲಾದ್ಯಂತ ಸಾಮಾಜಿಕ ಕೆಲಸ ಮಾಡುತ್ತಿರುವ ಅವರ ಸೇವಾ ಕಾರ್ಯ ಹೀಗೆ ಮುಂದುವರೆಯಲಿ ಎಂದು ಆಶಿಸಿದರು. ೮೦೦ ಚಾಲಕರಿಗೆ ಸಮವಸ್ತ್ರ, ಊಟ, ಪಾಸಿಂಗ್ ಯೋಜನೆ ಕಲ್ಪಿಸುವ ಮೂಲಕ ಆಟೋ ಚಾಲಕರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿರುವ ಅನಂತಮೂರ್ತಿ ಹೆಗಡೆ ನಮ್ಮವರು ಎಂಬ ಹೆಮ್ಮೆ ನಮಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕೆಲವು ಹೋರಾಟಗಾರರು ಅಲ್ಲೊಮ್ಮೆ ಇನ್ನೊಮ್ಮೆ ಹೋರಾಟ ಮಾಡಿ ಕಣ್ಮರೆಯಾಗುತ್ತಾರೆ. ಆದರೆ ಇಂತಹ ದಾನಿಗಳು ಸಿಗುವುದು ಅಪರೂಪ ಎಂದ ಅವರು,  ನಮ್ಮ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದುಳಿಯಲು ಜನಪ್ರತಿನಿಧಿಗಳ ಒಗ್ಗಟ್ಟೂ ಕಾರಣ. ವಿಧಾನಸಭೆಯಲ್ಲಿ ವಿವಿಧ ಯೋಜನೆಗಳನ್ನು ನಮ್ಮ ಜಿಲ್ಲೆಗೆ ತರಲು ಸರ್ಕಾರದ ಮೇಲೆ ನಾವು ಹೇರುತ್ತಿರುವ ಒತ್ತಡ ಸಾಲುತ್ತಿಲ್ಲ. ಜಿಲ್ಲೆಯ ಎಲ್ಲ ಶಾಸಕರು ಒಗ್ಗಟ್ಟಾಗಿ ಪ್ರಯತ್ನಿಸಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಬಳಿಯೂ ಮಾತನಾಡಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಟೋ ವೃತ್ತಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಹತ್ತು ಮಂದಿ ಆಟೋ ಚಾಲಕರಾದ ದಯಾ ದೇವಪ್ಪ ನಾಯ್ಕ, ಮಂಜುನಾಥ ಜಟ್ಟಿ ನಾಯ್ಕ, ಕೃಷ್ಣ ಗಣಪತಿ ನಾಯ್ಕ, ರೋಹಿದಾಸ ನಾಗಪ್ಪ ಭಂಡಾರಿ, ಮಂಜುನಾಥ ನಾಯ್ಕ, ಹರಿಶ್ಚಂದ್ರ ಮಹಾದೇವ ಮಡಿವಾಳ, ಲಕ್ಷ್ಮಣ ನಾಗಪ್ಪ ಗಾಡಿಗ, ವಿಶ್ವನಾಥ ಭಂಡಾರಿ, ರಮೇಶ ರಾಮ ನಾಯ್ಕ ಮತ್ತು ದಯಾನಂದ ಕಲಭಾಗ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ ಆಟೋದಲ್ಲಿ ಪ್ರಯಾಣಿಕರು ಬಿಟ್ಟು ಹೋದ ಚಿನ್ನಾಭರಣವನ್ನು ಪ್ರಾಮಾಣಿಕವಾಗಿ ವಾರಸುದಾರರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಚಾಲಕರಾದ ಮಂಜುನಾಥ ಜಿ. ಪಟಗಾರ ಮತ್ತು ವಾಸು ನಾಯ್ಕ ಅವರನ್ನು ಗೌರವಿಸಲಾಯಿತು. ಜರ್ಮನಿಯಲ್ಲಿ ನಡೆದ ಸ್ಪೆಷಲ್ ಓಲಂಪಿಕ್ ವ್ಲರ್ಡ್ ಗೇಮ್‌ನ ಟೆಬಲ್ ಟೆನಿಸ್‌ನಲ್ಲಿ ೨ ಚಿನ್ನದ ಪದಕ ಗೆದ್ದ ವಿಕಲ ಚೇತನ ಕ್ರೀಡಾಪಟು ವಿಘ್ನೇಶ ಲೋಕೇಶ್ವರ ನಾಯ್ಕ ನನ್ನೂ ಸನ್ಮಾನಿಸಿ, ಗೌರವಿಸಲಾಯಿತು.

RELATED ARTICLES  ಕೋವಿಡ್ ೧೯ ( ಕಲ್ಪನಾ ಅರುಣ ಬರೆದ ಕಥೆ)

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಆಟೋ ಚಾಲಕರ, ಮಾಲಕರ ಸಂಘದ ಜಿಲ್ಲಾಧ್ಯಕ್ಷ ಶಿವರಾಜ ಮೇಸ್ತಾ ಮಾತನಾಡಿ ಆಟೋ ಚಾಲಕರು ಸಿಸಿ ಕ್ಯಾಮರಾಗಳಿದ್ದಂತೆ. ಅನೇಕ ಅಪರಾಧ ಪ್ರಕರಣಗಳನ್ನು ಆರಂಭದಲ್ಲೆ ತಡೆಯುವ ಕೆಲಸ ಮಾಡುತ್ತಾರೆ. ಸಂಕಷ್ಟದಲ್ಲಿರುವವರಿಗೆ ಸಹಾಯಕ್ಕೆ ಬರುತ್ತಾರೆ. ಅಂಥವರರ ಕಷ್ಟ ಕೇಳುವವರು ಇಲ್ಲವಾಗಿತ್ತು. ಅನಂತಮೂರ್ತಿ ಅವರು ಸ್ವಾರ್ಥ ಇಲ್ಲದೇ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅಂಥ ಚಾಲಕರ ಕಷ್ಟಕ್ಕೆ ಸ್ಪಂದಿಸುವ ಅನಂತಮೂರ್ತಿ ಅವರಿಗೆ ನಾವು ಸಹಕಾರ ನೀಡೋಣ ಎಂದರು. ಕಟ್ಟಡ ಕಾರ್ಮಿಕರಿಗೆ ನೀಡಿದ ಸೌಲಭ್ಯವನ್ನು ನಮ್ಮ ಆಟೋ ಚಾಲಕರಿಗೂ ಒದಗಿಸಿಕೊಡಲು ಶಾಸಕರು ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸಬೇಕೆಂದು ಅವರು ಮನವಿ ಮಾಡಿದರು.

ಆಟೋ ಚಾಲಕರ, ಮಾಲಕರ ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷ ಮತ್ತು ನ್ಯಾಯವಾದಿ ಆರ್.ಜಿ ನಾಯ್ಕ ಮಾತನಾಡಿ, ಎಲ್ಲರಿಗೂ ವಿವಿಧ ಸಬ್ಸಿಡಿ ಯೋಜನೆಗಳಿವೆ. ಆದರೆ ನಮ್ಮ ಆಟೋ ಚಾಲಕರಿಗೆ ಸರ್ಕಾರ ಯಾವುದೇ ಸಬ್ಸಿಡಿ ಯೋಜನೆ ಜಾರಿ ಮಾಡಿಲ್ಲ. ಹಾಗಾಗಿ ನಮ್ಮ ಚಾಲಕರಿಗೂ ಸರ್ಕಾರದ ಯೋಜನೆ ಸಿಗುವಂತಾಗಬೇಕು. ಯಾವ ಕೆಲಸ ಸರ್ಕಾರ ಮತ್ತು ಜನಪ್ರತಿನಿಧಿಗಳು ಮಾಡಬೇಕಿತ್ತೋ ಅಂಥ ಕಾರ್ಯವನ್ನು ಅನಂತಮೂರ್ತಿ ಅವರು ಮಾಡುತ್ತಿದ್ದಾರೆ. ಜನಪ್ರತಿನಿಧಿಯಾಗಲು ಯಾವುದೇ ಶೈಕ್ಷಣಿಕ ಮಾನದಂಡವಿಲ್ಲ. ಆದರೆ ಚಾಲಕರಿಗೆ ಲೈಸೆನ್ಸ್ ಪಡೆಯಲು ಎಸ್ಸೆಸ್ಸೆಲ್ಸಿ ಆಗಬೇಕೆಂಬ ಕಾನೂನು ರೂಪಿಸಿರುವುದು ಎಷ್ಟೊಂದು ಸರಿ ಎಂದು ಅವರು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಕುಮಟಾ ತಾಲೂಕು ಆಟೋ ರಿಕ್ಷಾ ಸಂಘದ ಕಾರ್ಯದರ್ಶಿ ಮತ್ತು ಕಲಭಾಗ ಗ್ರಾಪಂ ಅಧ್ಯಕ್ಷ ಮಂಜುನಾಥ ನಾಯ್ಕ, ಆಟೋ ಚಾಲಕ ಮಾಲಕ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ವಿಶ್ವನಾಥ ಗೌಡ, ಸಂಚಾಲಕ ಸಂತೋಷ ನಾಯ್ಕ, ಪ್ರಮುಖರಾದ ಚಂದ್ರಹಾಸ ನಾಯ್ಕ, ದಯಾ ನಾಯ್ಕ ಇತರರು ಇದ್ದರು. ಕುಮಟಾ ಸಂಘದ ಅಧ್ಯಕ್ಷ ಗಣಪತಿ ಪಟಗಾರ ಸ್ವಾಗತಿಸಿದರು. ಪತ್ರಕರ್ತ ಗಣೇಶ ಜೋಶಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.