ಸರಿವ ಕ್ಷಣಗಳನ್ನು ಬೊಗಸೆಯಲ್ಲಿ ಹಿಡಿದಿಡಲಿಕ್ಕಾಗುವುದಿಲ್ಲ…. ಆದರೆ ಸುಳಿವ ನೆನಪುಗಳನ್ನು ಬರೆದಿಡುವುದಕ್ಕಾಗುತ್ತದೆ ನನ್ನ ಬಳಿ. ಕರೆವ ಮನೆಗಳಿಗೆಲ್ಲಾ ಹೋಗಲಿಕ್ಕಾಗುವುದಿಲ್ಲ ಒಮ್ಮೊಮ್ಮೆ…ಆದರೆ ಹರಸುವ ಮನಸ್ಸುಗಳನ್ನು ಹೃದಯದಲ್ಲಿಟ್ಟು ಪೂಜಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲವೂ ನನ್ನ ಬಳಿಯೇ ಸಾಧಿಸಲಿಕ್ಕಾಗುವುದಿಲ್ಲ ಜೀವನದಲ್ಲಿ….ಆದರೆ ಸಾಧಕರನ್ನು ಕಂಡಾಗ ಸಂತೋಷಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲರಿಗೂ ಉಪಕರಿಸುವುದಕ್ಕಾಗುವುದಿಲ್ಲ ನನ್ನಲ್ಲಿ….ಆದರೆ ಯಾರೊಬ್ಬರು ಉಪಕರಿಸಿದರೂ ಸ್ಮರಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲರೂ ಬಯಸಿದಂತೆ ಬದುಕುವುದಕ್ಕೆ ಸಾಧ್ಯವಿಲ್ಲ…..ಆದರೆ ನಮ್ಮಷ್ಟಕ್ಕೆ ನಾವು ಬದುಕುವುದಕ್ಕೆ ಸಾಧ್ಯವಿದೆ ನಮ್ಮ ಬಳಿ. ಹಾರ ತುರಾಯಿ ಶಾಲು ಹೊದಿಸಿಯೇ ಸನ್ಮಾನ ಮಾಡಬೇಕೆಂದಿಲ್ಲ…ಆದರೆ ಪ್ರೀತಿಯಿಂದ ಅಭಿಮಾನದಿಂದ ನಾಲ್ಕು ಮಾತಾಡುವುದಕ್ಕೆ ಸಾಧ್ಯವಿದೆ ನಮ್ಮ ಬಳಿ. ನನ್ನ ಕಣ್ಣೆದುರಿಗೆ ಸಿಕ್ಕ ಪ್ರತಿಯೊಬ್ಬರ ಬದುಕಿಗೂ ಬಣ್ಣವಾಗುವುದಕ್ಕೆ ಸಾಧ್ಯವಿಲ್ಲ… ಆದರೆ ನನ್ನ ಬದುಕಿಗೆ ಬಣ್ಣವಾದವರನ್ನು ಮುಕ್ತ ಮನಸ್ಸಿನಿಂದ ಹೇಳಿಕೊಳ್ಳುವುದಕ್ಕೆ ಸಾಧ್ಯವಿದೆ ನನ್ನ ಬಳಿ.

ಶ್ರೀಮತಿ ರೇಖಾ ನಾಯ್ಕ

ಇತ್ತೀಚೆಗೆ ನೀವು ಯಾರ ಬಗ್ಗೂ ಬರೆಯುವುದಿಲ್ಲವಲ್ಲ ನಿಮ್ಮ ಬದುಕಿಗೆ ಬಣ್ಣ ತುಂಬಿದವರು ಲೇಖನ ಬರುತ್ತಲೇ ಇಲ್ಲ….ಎಂದು ಹಲವರು ಆಗಾಗ ಪ್ರಶ್ನಿಸುತ್ತಾರೆ. ಆದರೆ ಬರೆಯಲೇಬೇಕೆಂದವರು ಹಲವರಿದ್ದರೂ ಬರೆಯುವ ಮನಸ್ಸಾಗಬೇಕು. ಸಮಯ ಸಿಗಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಬರೆಯುವ ಒಂದೊಂದು ಅಕ್ಷರಗಳೂ ನಿಸ್ವಾರ್ಥ ಕುಸುಮಗಳಾಗಬೇಕು ಎಂದೇ ನಾನು ಭಾವಿಸುತ್ತೇನೆ. ಒಮ್ಮೊಮ್ಮೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾವಚಿತ್ರಗಳನ್ನು ಕಂಡಾಗ ಆತಂಕವೂ ಆಗುತ್ತದೆ. 😄 ಅತಿಶಯೋಕ್ತಿಯಾಗಿ ಹೊಗಳಿದರೆ ವ್ಯಕ್ತಿಯ ವ್ಯಕ್ತಿತ್ವವೂ ತೇಲಿ ಹೋಗುತ್ತದೆ ಮತ್ತು ಅದು ನನ್ನ ಉದ್ದೇಶವನ್ನೂ ಮರೆಸಿ ಬಿಡುತ್ತದೆ. ಹೀಗಾಗಿ ಅಪರೂಪಕ್ಕಾದರೂ ಧನ್ಯತೆಯ ಭಾವಾಭಿವ್ಯಕ್ತಿ ನನ್ನಿಂದಾಗಬೇಕೆಂದು ಹೀಗೆ ಬರೆಯುವೆ. ಬೆರೆಯುವೆ.
ಎಸ್ ಎಸ್ ಎಲ್ ಸಿ ಮುಗಿಸಿದ ಕಾಲಕ್ಕ ಬೇಗನೇ ನೌಕರಿ ಹಿಡಿಯುವ ಆಲೋಚನೆ. ಹೀಗಾಗಿಯೇ ಟಿ.ಸಿ.ಹೆಚ್ ಮಾಡಿ ಮಾಸ್ಟರ್ ಆಗಿಬಿಡುವುದು ತೇನಸಿಂಗನ ಎವರೆಸ್ಟ್ ಏರುವ ಕನಸಿನಂತೆ ಆಗಿತ್ತು ನಮಗೆ. ಈ ಕಾರಣಕ್ಕಾಗಿಯೇ ಪಿ.ಯು.ಸಿ ಮಾಡಿ ಕುಮಟಾದ ಡಯಟ್ ಮೆಟ್ಟಿಲೇರಿದ್ದು. ಕುಮಟಾದಲ್ಲಿ ಟಿ.ಸಿ.ಹೆಚ್ ಸಿಗುವುದೂ ಆಗ ಬಹು ಕಷ್ಟಕರ ಕೆಲಸ. ಕಾಲೇಜಿನ 100 ವಿದ್ಯಾರ್ಥಿಗಳಲ್ಲಿ ಕುಮಟಾ ಸಿಕ್ಕಿದ್ದು ಮೂವರಿಗೆ ಮಾತ್ರ. ನಮಗೆ ಮನೆಯಿಂದಲೇ ಹೋಗಿ ಬರಬಹುದಲ್ಲಾ ಎನ್ನುವ ಉತ್ಸಾಹ, ಸಂತೋಷ ಎರಡೂ.
ಡಯೆಟ್ ಗೆ ಕಾಲಿಟ್ಟ ಕಾಲಕ್ಕೆ ನಮ್ಮ ಗುರುಮಾತೆಯಾಗಿ ಸಿಕ್ಕವರು ರೇಖಾ ಮೇಡಂ. ಚಂದ ಮನಸ್ಸಿನ ಚಂದದ ಗುರುಮಾತೆ….😄😄😄. ರೇಖಾ ಮೇಡಂ ಡಯೆಟ್ ಗೆ ಬಂದರೆ ಅದರ ಗತ್ತೇ ಬೇರೆ. ಎಷ್ಟು ಸುಂದರವೋ ಅಷ್ಟೇ ಗಂಭೀರ ಅವರು. ಬಯಾಲಾಜಿ ಹೇಳಲು ವರ್ಗಕೋಣೆಗೆ ಕಾಲಿಟ್ಟ ರೇಖಾ ಮೇಡಂ ನಮ್ಮ ಗುರು-ಮಾತೆ ಅಷ್ಟೇ ಆಗಿರದೆ ಒಬ್ಬ ಆತ್ಮೀಯ ಸ್ನೇಹಿತೆಯೇ ಆಗಿ ನಮಗೆ ಇಂದಿಗೂ ಕಾಣುತ್ತಾರೆ. ಅತ್ಯಂತ ಪ್ರೀತಿ, ಗೌರವ, ಅಭಿಮಾನ ತೋರಲೇ ಬೇಕಾದ ವ್ಯಕ್ತಿತ್ವ ರೇಖಾ ಮೇಡಂ ಅವರದ್ದು.
ಪ್ರಸ್ತುತ ಕುಮಟಾ ತಾಲೂಕಿನ ಸಮನ್ವಯಾಧಿಕಾರಿಗಳಾಗಿ ( BRC coordinator ) ಆಗಿ ಕಾರ್ಯ ನಿರ್ವಹಿಸುತ್ತಿರುವ ರೇಖಾ ಮೇಡಂ ಹಲವರ ಪಾಲಿಗೆ ಮೆಚ್ಚಿನ ಅಧಿಕಾರಿ. ಸಾವಿರಾರು ವಿದ್ಯಾರ್ಥಿಗಳಿಗೆ ಅವರಿಂದಿಗೂ ನಮ್ಮ ರೇಖಾ ಮೇಡಂ.
ಗುರುವಾದ ಕಾಲಕ್ಕೆ ಯಾರು ಜಾತಿಯ ಅಭಿಮಾನವನ್ನು ತೊರೆದು ಪ್ರತಿಯೊಬ್ಬರನ್ನೂ ಪ್ರೀತಿಸುತ್ತಾರೋ….. ಗುರುವಾದ ಕಾಲಕ್ಕೆ ಯಾರು ದಡ್ಡರೆನಿಸಿಕೊಂಡವರನ್ನೂ ಆತ್ಮೀಯತೆಯಿಂದ ಕಾಣುತ್ತಾರೋ, ಗುರುವಾದ ಕಾಲಕ್ಕೆ ಯಾರು ಅತ್ಯಂತ ಕ್ರಿಯಾಶೀಲವಾಗಿ ಪಾಠ ಪ್ರವಚನ ಮಾಡುತ್ತಾರೋ, ಗುರುವಾದ ಕಾಲಕ್ಕೆ ಯಾರು ಪ್ರಶಂಸಿಸಬೇಕಾದ ಕಾಲಕ್ಕೆ ಪ್ರಶಂಸೆಯನ್ನೂ, ಶಿಕ್ಷಿಸಬೇಕಾದ ಕಾಲಕ್ಕೆ ಶಿಕ್ಷೆಯನ್ನೂ ನೀಡುತ್ತಾರೋ…..ಅಂತಹ ಗುರು ಅನೇಕ ಶಿಷ್ಯಂದಿರ ಮನದಲ್ಲಿ ಸಾಕ್ಷಾತ್ ದೇವರೇ ಆಗಿ ಬಿಡುತ್ತಾರೆ. ಶಾಶ್ವತವಾದ ಸ್ಥಾನ ಪಡೆಯುತ್ತಾರೆ. ರೇಖಾ ಮೇಡಂ ನಮ್ಮ ಪಾಲಿಗೆ ಅದೇ.
ನಾನು ಡಯೆಟ್ ಗೆ ಹೋದ ತಿಂಗಳಾಗಿತ್ತೋ ಇಲ್ಲವೋ…. ಪೋಲೀಸ್ ಇಲಾಖೆಯಿಂದ ಒಂದು ಸಾರ್ವಜನಿಕ ಪ್ರಬಂಧ ಸ್ಪರ್ಧೆ ಏರ್ಪಟ್ಟಿತ್ತು. ನಾನೂ ಒಂದು ಪ್ರಬಂಧ ಬರೆದು ಕಳುಹಿಸಿದ್ದೆ. ಆಶ್ಚರ್ಯದ ವಿಷಯ ಏನೆಂದರೆ ನನಗೇ ಪ್ರಥಮ ಸ್ಥಾನ ಬಂದಿತ್ತು. ಅದಕ್ಕಿಂತ ಹೆಚ್ಚಾಗಿ ಆ ಸಮಯಕ್ಕೆ ನನಗೆ ಅತಿ ಅವಶ್ಯವಿದ್ದ ವಾಚೊಂದನ್ನು ಪೋಲೀಸ್ ಇಲಾಖೆಯವರು ಬಹುಮಾನವಾಗಿ ನೀಡಿದ್ದರು. ( HMT Swarna ) ಈ ಬಹುಮಾನ ನನಗೇ ಸಿಗುತ್ತದೆಂದು ಗೊತ್ತಿರದ ನಾನು ಆ ಸಮಾರಂಭಕ್ಕೆ ಹೋಗಿರಲಿಲ್ಲ. ಆದರೆ ಆ ಸಮಾರಂಭಕ್ಕೆ ಹೋಗಿದ್ದ ರೇಖಾ ಮೇಡಂ ಆ Golden watch ಹಿಡಿದುಕೊಂಡು ಬಂದು ತನಗೇ ಸಿಕ್ಕಷ್ಟು ಸಂತೋಷದಲ್ಲಿ ಡಯೆಟ್ ನ ಪ್ರಾರ್ಥನಾ ಮಂದಿರದಲ್ಲಿ ನನಗೆ ತೊಡಿಸಿದ್ದರು. ಇಂದಿನ ಕಾಲಕ್ಕೆ ಇದು ಅಂಥದ್ದೇನೂ ವಿಶೇಷ ಅಲ್ಲದಿರಬಹುದು. ನನ್ನ ಬಳಿ ಈಗ ನಾಲ್ಕೈದು ರೀತಿಯ watch ಗಳಿವೆ. ಆದರೆ ಇಂದಿಗೂ ಆ watch ಮಾತ್ರ ನನ್ನ ಬದುಕಿನ ಸಮಯವನ್ನೇ ಬದಲಿಸಿತು ಎಂಬ ಭಾವವೇ ನನ್ನನ್ನು ಕಾಡುತ್ತದೆ. ರೇಖಾ ಮೇಡಂ ಇದನ್ನು ತಂದು ಪ್ರಾಂಶುಪಾಲರ ಹಾಗೂ ಇಡೀ ಡಯೆಟ್ ನ ನೂರಾರು ಸ್ನೇಹಿತರ ಸಮ್ಮುಖದಲ್ಲಿ ನನಗೆ ಕೊಟ್ಟಿದ್ದು ಇಂದಿಗೂ ಮಾಸದ ನೆನಪು. ಎನ್ ಎಸ್. ಎಸ್ ಕ್ಯಾಂಪ ಗಳಲ್ಲಿ, ಸಾಪ್ತಾಹಿಕ ಪಾಠದ ಅವಧಿಗಳಲ್ಲಿ ನಮ್ಮ ತಂಡದ ಮಾರ್ಗದರ್ಶಕರಾಗಿ ನಮ್ಮಲ್ಲಿರುವ ಅಲ್ಪ ಪ್ರತಿಭೆಗಳನ್ನೂ ಬೆಳಗುವುದಕ್ಕೆ ಅವಕಾಶ ಮಾಡಿಕೊಟ್ಟ ರೇಖಾ ಮೇಡಂ ಗೆ ನನ್ನ ಹೃದಯಪೂರ್ವಕ ಪ್ರಣಾಮಗಳು.
ರೇಖಾ ಮೇಡಂ ಪಾಠ ಟಿಪ್ಪಣಿಗೆ ಅಷ್ಟು ಬೇಗ ಸಹಿ ಹಾಕಿದವರಲ್ಲ. ಅದು ಹಾಗೆ. ಇದು ಹೀಗೆ ಅನ್ನುವವರು. ಆದರೆ ನನಗೆಂದಿಗೂ ಅವರು ಸಹಿ ಹಾಕದೇ ಹಿಂದೆ ಕಳಿಸಿದ್ದಿಲ್ಲ. ಅಷ್ಟೇ ಅಲ್ಲದೇ ಎರಡು ಬಾರಿ ಬರೆಸಿದ್ದೂ ಇಲ್ಲ. ನಾನು ಬರೆಯುವುದಕ್ಕೆ ಸ್ವಲ್ಲ ಆಳಸಿ ಎಂದು ಅವರಿಗೆ ಮೊದಲೇ ಗೊತ್ತಿರಬೇಕು. 😄😄😄😄. ರೇಖಾ ಮೇಡಂ ಬೇರೆ ವಿದ್ಯಾರ್ಥಿಗಳಿಗೆ ಗದರಿದ್ದನ್ನು ಕಂಡಿದ್ದೇನೆ. ಆದರೆ ನನಗೆ ಯಾವತ್ತೂ ಗದರಿದವರಲ್ಲ. ಅಷ್ಟಕ್ಕೂ ಗದರಿದರೂ ಅವರು ಚಂದ ಚಂದವೇ. 😄😄 ಸಿಕ್ಕಾಪಟ್ಟೆ ಅವರು ಗದರಿದರೂ ಕೊನೆಗೆ ಅವರೇ ನಗಬೇಕು. ನಾವು ತಲೆತಗ್ಗಿಸಿ ನಿಂತು ಬಿಡುತ್ತೇವೆ ಅವರೆದುರು. 😄😄
ರೇಖಾ ಮೇಡಂ ಇಂದಿಗೂ ನಮಗೆ ಪರಮಾಪ್ತ. ಅವರು ಧಾರವಾಡಕ್ಕೆ ವರ್ಗಾವಣೆ ಆದ ಕಾಲಕ್ಕೂ ನಮ್ಮನ್ನು ಮರೆಯಲಿಲ್ಲ. ಇತ್ತೀಚೆಗೆ ಒಮ್ಮೆ ಮೈಸೂರಿನ ಸಭಾಂಗಣದಲ್ಲಿ ಎಲ್ಲರೆದುರು ನಾಲ್ಕು ಮಾತಾಡುವ ಅವಕಾಶ ಸಿಕ್ಕಾಗ ರೇಖಾ ಮೇಡಂ ನನ್ನೆದುರಿಗೇ ಕುಳಿತಿದ್ದರು. ಸಂದೀಪ್ ನನ್ನ ವಿದ್ಯಾರ್ಥಿ ಎಂದು ಅತ್ಯಂತ ಪ್ರೀತಿಯಿಂದ ಬೆನ್ನು ತಟ್ಟಿದರು.
ಶಿಷ್ಯನಿಗೆ ಒಳ್ಳೆಯ ಗುರು ಸಿಗುವುದು ಜನ್ಮ ಜನ್ಮಾಂತರದ ಪುಣ್ಯ ಎಂದೇ ನಾನು ಭಾವಿಸುತ್ತೇನೆ. ನಾನು ಹಾಗೂ ಮಡದಿ ಸರಸ್ವತಿ ಇಬ್ಬರೂ ಅವರ ಶಿಷ್ಯಂದಿರೇ. ಇದು ನಮ್ಮ ಸೌಭಾಗ್ಯ.
ರೇಖಾ ಮೇಡಂ ನಗು, ರೇಖಾ ಮೇಡಂ ಮಾತು, ರೇಖಾ ಮೇಡಂ ಸೀರೆ, 😄 ರೇಖಾ ಮೇಡಂ ಪಾಠ, ಎಲ್ಲವೂ ನೆನಪಿತ್ತು. ನೆನಪಿದೆ. ಮತ್ತು ನೆನಪಿನಲ್ಲಿ ಇರುತ್ತದೆ.
ಈಗಲೂ ನನಗೆ ಅವರಿಂದ ಅಧಿಕಾರಿಯಾಗಿ ಕೆಲಸ ಆಗಬೇಕಾಗಿಲ್ಲ. ಆದರೆ ಒಬ್ಬ ಧಕ್ಷ ಅಧಿಕಾರಿಯಾಗಿ ಆರೋಗ್ಯದಿಂದ, ಲವಲವಿಕೆಯಿಂದ ಅವರು ಕಾರ್ಯನಿರ್ವಹಿಸುತ್ತಿರುವುದನ್ನು ಕಂಡು ನಾನು ಖುಷಿ ಪಡುತ್ತೇನೆ.
ಕೇಳಿದ್ದು. ಕಷ್ಟಕಾಲದಲ್ಲೂ ಕಲಿತು ಉನ್ನತ ಉದ್ಯೋಗ ಹೊಂದಿದ ರೇಖಾ ಮೇಡಂ ಮನೆಗೂ, ತವರುಮನೆಗೂ ಸ್ವರ್ಣ ರೇಖೆಯೇ ಆಗಿದ್ದಾರೆ. ಪತಿ, ಮಕ್ಕಳೊಂದಿಗೆ ಸುಖ ಸಂತೋಷದಿಂದ ಇರುವ ರೇಖಾ ಮೇಡಂ ಗೆ ಜಯವಾಗಲಿ. ಜಯವಾಗುತ್ತಲೇ ಇರಲಿ.
ಅಷ್ಟಕ್ಕೂ ಹಳೆಯ ನೆನಪುಗಳಲ್ಲೇ ಕೊರಗುವುದು ಜೀವನವಲ್ಲ. ಹೊಸ ಕನಸುಗಳೂ ಬೇಕು. ಸಾಧಿಸುವ ಛಲವೂ ಬೇಕು. ಅದೆಲ್ಲಕ್ಕಿಂತ ಹೆಚ್ಚಾಗಿ ಭಗವಂತನ ಆಶೀರ್ವಾದ ಬೇಕು. ಗುರು-ಹಿರಿಯರ ಶುಭಾಶೀರ್ವಾದ ನಮ್ಮ ಬದುಕಿಗೆ ಖಂಡಿತ ಬಲ ತುಂಬುತ್ತದೆ. ಇದನ್ನು ಪ್ರಯೋಗದಿಂದ ನಿಮ್ಮ ಕಣ್ಣೆದುರು ತೋರಲು ನನಗೆ ಸಾಧ್ಯವಾಗದಿರಬಹುದು. ಆದರೆ ಖಂಡಿತ ನನಗೆ ಅನುಭವಕ್ಕೆ ಬರುತ್ತದೆ. ಅದು ನಿಮಗೂ.

RELATED ARTICLES  ಹಣ್ಣಿರುವ ಮರಕ್ಕೇ ಕಲ್ಲು ಬೀಳುವುದು.


‌‌‌‌ ರೇಖಾ ಮೇಡಂ ಗೆ ನಾನು ಶಾಲು ಹೊದಿಸಿಲ್ಲ. ಒಣ ಸೇಬು ಮೂಸಂಬಿ ಹಣ್ಣುಗಳನ್ನು ನೀಡಿಲ್ಲ. 😄 ಸ್ಟೀಲ್ ಬಟ್ಟಲು ಕೊಟ್ಟಿಲ್ಲ. 😄 ನೀವು ಮೇಲಿನ ಲೋಕದಿಂದ ಧರೆಗಿಳಿದವರೆಂದು ಬಾಯ್ತುಂಬ ಹೊಗಳಿದ್ದೂ ಇಲ್ಲ. ಅವರು ಬಯ್ದರೂ ತಮಾಷೆಯಾಗಿಯೇ ವಿದ್ಯಾರ್ಥಿ ಜೀವನವನ್ನು ಕಳೆದ ನಮಗೆ ಅವರು ಪ್ರಾತಃ ಸ್ಮರಣೀಯರು ಇಷ್ಟೇ ಹೇಳಬಲ್ಲೆ. ಎದುರು ಸಿಕ್ಕರೆ ಕೈಮುಗಿಯಬಲ್ಲೆ.
‌‌ ನಾನು ನಂಬಿದ ಭಗವಾನ್ ಸದ್ಗುರು ಶ್ರೀಧರರ ಕೃಪಾಕಟಾಕ್ಷ ಅವರ ಮೇಲಿರಲಿ. ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿ ಅವರಿಗೂ ಅವರ ಕುಟುಂಬಕ್ಕೂ ಒಳ್ಳೆಯದು ಮಾಡಲಿ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು: ಮನುಷ್ಯ ತನ್ನ ತಪ್ಪಿಗೆ ಯಾವಾಗ ಪಶ್ಚಾತ್ತಾಪ ಪಡುತ್ತಾನೆ? ಭಾಗ – 1

✍ಸಂದೀಪ ಎಸ್ ಭಟ್ಟ.