ಕುಮಟಾ : ತಾಲೂಕಿನ ಬಾಡದ ಶ್ರೀ ಕಾಂಚಿಕಾ ಪರಮೆಶ್ವರಿ ದೇವಸ್ಥಾನ ಸಿದ್ಧಿ ಕ್ಷೇತ್ರವೂ, ಸಹಸ್ರಾರು ಭಕ್ತರ ಆರಾಧ್ಯ ಕ್ಷೇತ್ರವೂ ಆಗಿದೆ. ಸಾವಿರಾರು ವರ್ಷಗಳಿಂದ ಭಕ್ತಜನರ ಕಣ್ಮಣಿಯಾಗಿರುವ ಈ ಜಗಜ್ಜನನಿಯು ಪಡುಗಡಲ ತೀರದಲ್ಲಿ ಪರ್ವತಾಗ್ರದ ಮೇಲೆ ದೇವಾಲಯದಲ್ಲಿ ನೆಲೆಸಿ ಭಕ್ತಜನರನ್ನು ಹರಸುತ್ತಿದ್ದಾಳೆ.

ರವಿವಾರದಿಂದ ದೇಗುಲದಲ್ಲಿ ದಸರೆಯ ವಿವಿಧ ಕೈಂಕರ್ಯಗಳು ಪ್ರಾರಂಭವಾಗಿದ್ದು, ದೇವಿಯ ಅಲಂಕಾರದಿಂದ ಪ್ರಾರಂಭಿಸಿ ವಿವಿಧ ಧಾರ್ಮಿಕ ಕಾರ್ಯಗಳು ಭಕ್ತ ಸಮೂಹವನ್ನು ತನ್ನತ್ತ ಸೆಳೆಯುತ್ತಿದೆ. ದಸರೆಯ ಪ್ರಾರಂಭದ ದಿನ ವಿಶೇಷವಾಗಿ ಸುತ್ತಲ ರೈತ ಸಮುದಾಯದಿಂದ ರಂಗಪೂಜೆ ಗಮನ ಸೆಳೆಯಿತು. ಎರಡನೇ ದಿನ ವಿಶೇಷ ಹೂವಿನ ಅಲಂಕಾರ ಹಾಗೂ ಪೂಜಾದಿ ಸೇವೆಗಳು ನಡೆದವು.

ಪಾಡ್ಯದ ದಿನ ಪ್ರಾಥಕ್ಕಾಲದಲ್ಲಿ ಗಣಪತಿ ಪೂಜೆ, ಪುಣ್ಯಾಹ, ಮಹಾಸಂಕಲ್ಪ, ಕಲಶ ಸ್ಥಾಪನೆ, ದೀಪ ಸ್ಥಾಪನೆ, ಸಪ್ತಶತಿ ಪಾರಾಯಣ ಅಭಿಷೇಕಗಳು, ಫಲಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ನಾರಿಕೇಲ ಅಭಿಷೇಕ, ಪಂಚರಸ ಫಲಾಭಿಷೇಕಗಳು ಹಾಗೂ ಸರ್ವಾಲಂಕಾರ ಪುಷ್ಪಾಲಂಕಾರ, ಕಲ್ಪೋಕ್ತ ಪೂಜಾ ಕಾರ್ಯಗಳು ನಡೆದವು.

ಸಾಯಂಕಾಲ ರೈತಾಪಿ ಸಮುದಾಯದವರಿಂದ ನಡೆದ ರಂಗ ಪೂಜೆ, ಮಹಾ ಮಂಗಳಾರತಿ, ಪರಿವಾರ ದೇವತೆಗಳಿಗೆ ಉತ್ಸವ ಸಹಿತ ಬಲಿ ಸಮರ್ಪಣೆ, ಸಾಮೂಹಿಕ ಪ್ರಾರ್ಥನೆ ಪ್ರಸಾದ ವಿತರಣೆ ಮಹಾಮಂಗಳಾರತಿಗಳು ನಡೆದವು. ಒಂಬತ್ತು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಲಲಿತಾ ಪಂಚಮಿ, ಶಾರದಾ ಸ್ಥಾಪನೆ, ವಿಜಯದಶಮಿ ಹಾಗೂ ಇತರ ಆಚರಣೆಗಳು ಅದ್ದೂರಿಯಾಗಿ ನಡೆಯಲಿದೆ.

ಶಾಂತಿಕಾಂಬಾ ದೇವಾಲಯದ ಹಿನ್ನೆಲೆ.

ಕಿರಿದಾದ ಗುಡ್ಡ, ಸುತ್ತಲ ಪ್ರಕೃತಿಯ ಸೌಂದರ್ಯ, ಸಮುದ್ರದ ತಟ ಇವೆಲ್ಲವೂ ಮಹಿಮಾತೀತ ಮಾತೆಯ ಈ ದೇವಸ್ಥಾನಕ್ಕಿರುವ, ದೈವಿದತ್ತವಾದ ವೇದಿಕೆ. ಇಲ್ಲಿಗೆ ಬರುವ ಭಕ್ತರ ಕಷ್ಟಗಳನ್ನು ನೀಗುವ ತಾಯಿ ಶಾಂತಿಕಾಂಬೆಯು ಸರ್ವಾಲಂಕಾರ ಭೂಷಿತೆಯಾಗಿ ಭಕ್ತಜನರ ಮನದಲ್ಲಿ ಚಿರಸ್ಥಾಯಿಯಾಗಿ ಇರುವಂತಹವಳು.

RELATED ARTICLES  ಕಡತೊಕಾದಲ್ಲಿ ಯಶಸ್ವಿಯಾದ ಪ್ರತಿಜ್ಞಾ ಕಾರ್ಯಕ್ರಮ : ಭಾಗವಹಿಸಿದ ಕಾಂಗ್ರೆಸ್ ‌ಪ್ರಮುಖರು

ಕಲಭ ಎಂಬ ರಾಜನು ಸಹಸ್ರಾರು ವರ್ಷಗಳ ಹಿಂದೆ ಗೋಕರ್ಣ ಮಂಡಳದ ಅರಸನಾಗಿ ರಾಜ್ಯವಾಳುತ್ತಿದ್ದ. ಒಂದು ದಿನ ಅವನಿಗೆ ಕನಸಿನಲ್ಲಿ ದಿವ್ಯ ದರ್ಶನವಿತ್ತ ದೇವಿ, ಕಾಗಾಲ್-ಅಘನಾಶಿನಿ-ಗುಡ್ಡದಲ್ಲಿರುವ ಅಗಸ್ತ್ಯಾಶ್ರಮದ ದಕ್ಷಿಣಕ್ಕೆ ಸಮುದ್ರ ತೀರದ ಕಿರುಗುಡ್ಡ ಅಂಚಿನಲ್ಲಿ ಚಾಕ್ರಾಯಣಿ ಕ್ಷೇತ್ರವಿದೆ. ಅಲ್ಲಿ ಗುಡಿಯೊಂದನ್ನು ಕಟ್ಟಿಸಿ ನನ್ನ ಮೂರ್ತಿ ಪ್ರತಿಷ್ಠಾಪಿಸು. ಇದರಿಂದ ನಿನಗೂ , ನಿನ್ನ ಪ್ರಜೆಗಳಿಗೂ ಕಲ್ಯಾಣವಾಗುವುದು ಎಂದು ಆದೇಶಿಸಿದಳೆಂಬುದು ಇಲ್ಲಿಯ ಐತಿಹ್ಯ. ಅದರಂತೆ ಮಹಿಷಾಸುರ ಮರ್ಧಿನಿ ರೂಪವಿರುವ 54 ಅಂಗುಲ ಎತ್ತರದ ಮೂರ್ತಿಯನ್ನು ಕಂಚಿ ದೇಶದಿಂದ ತರಸಿ ಚಾಕ್ರಾಯಣಿ(ಚವನ ಋಷಿ) ಋಷಿಗಳ ಅಮೃತ ಹಸ್ತದಿಂದ ಶ್ರೀ ದೇವಿಯನ್ನು ಪ್ರತಿಷ್ಠಾಪಿಸಿದನು. ಇಲ್ಲಿ ಕಂಚಿ' ದೇಶದಿಂದಮೂರ್ತಿಯನ್ನು ತರಿಸಿದ ಪ್ರಯುಕ್ತಕಾಂಚಿಕಾಂಬಾ’ ಎಂಬ ಅನ್ವರ್ಥಕ ನಾಮ ಇಟ್ಟಿದ್ದಾರೆ ಎಂದು ಹೇಳಲಾಗುತ್ತದೆ.

ಇನ್ನೊಂದು ಹೇಳಿಕೆಯ ಪ್ರಕಾರ ಒಬ್ಬ ಹಳ್ಳೇರ ಮಹಿಳೆಯು ಒಣಗಿದ ಎಲೆಯನ್ನು ಬುಟ್ಟಿಯಲ್ಲಿ ತುಂಬುತ್ತಿರುವಾಗ, ಚಾಕ್ರಾಯಣಿ ಕ್ಷೇತ್ರ ಸಮೀಪ ಅವಳಿಗೊಂದು ಗೊಂಬೆ ಸಿಕ್ಕಿತು. ತನ್ನ ಮಗುವಿಗೆ ಆಡಲೆಂದು ಅದನ್ನು ಬುಟ್ಟಿಯಲ್ಲಿ ಎತ್ತಿಟ್ಟುಕೊಳ್ಳುತ್ತಾಳೆ. ತುಂಬಿದ ಬುಟ್ಟಿಯನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಬುಟ್ಟಿ ಭಾರವಾಗುತ್ತ ಹೋಯಿತು. ಹೆಜ್ಜೆ ಇಡಲಾರದಷ್ಟು ಭಾರವಾದಾಗ ಅಲ್ಲೆ ಸಮೀಪದ ಆಲದ ಕಟ್ಟೆಯ ಹತ್ತಿರ ಬುಟ್ಟಿ ಇಟ್ಟು ವಿಶ್ರಾಂತಿ ತೆಗೆದುಕೊಳ್ಳುತ್ತಾಳೆ. ಯಾಕೆ ಹೀಗಾಯಿತೆಂದು ಯೋಚಿಸುತ್ತಿರುವಾಗ, ಬುಟ್ಟಿಯಲ್ಲಿ ಗೊಂಬೆ ಇರುವುದು ನೆನಪಿಗೆ ಬರುತ್ತದೆ. ಬೊಂಬೆಯನ್ನು ತೆಗೆದು ಕಟ್ಟೆಯ ಮೇಲಿಟ್ಟು ಹೊರಡುತ್ತಾಳೆ. ಅಂದಿನ ಜನರು ಎಲ್ಲಿಂದ ಬಂದಿದೆಯೆಂದು ಅರಿಯದಿದ್ದರೂ, ಆ ಗೊಂಬೆಯನ್ನು ಪೂಜಿಸಲಾರಂಭಿಸಿದರು.
ಕ್ರಮೇಣ ಕಟ್ಟೆಯ ಮೇಲಿದ್ದ ಗೊಂಬೆಯ ತದ್ರೂಪಿ ಮೂರ್ತಿಯನ್ನು ಗುಡ್ಡದ ನೆತ್ತಿಯ ಮೇಲೆ ಪ್ರತಿಷ್ಠಾಪಿಸಲಾಯಿತು ಎಂಬ ಮಾತು ಪ್ರತೀತಿಯಲ್ಲಿದೆ. ಆ ಮಹಿಳೆ ಗೊಂಬೆ ಇಟ್ಟ ಕಟ್ಟೆ `ಗೊಂಬೆ ಕಟ್ಟೆ’ಯಾಗಿ ಇಂದಿಗೂ ಇದೆ. ಹಳ್ಳೇರ ಮಹಿಳೆಗೆ ಸಿಕ್ಕ ಅದೇ ಗೊಂಬೆಯನ್ನು ಕಲಭರಾಜನು ದೇವಿಯ ಅಪ್ಪಣೆಯಂತೆ ಪ್ರತಿಷ್ಠಾಪಿಸಿದನು ಎಂಬುದಕ್ಕೆ ಪೂರಕವಾಗಿ ಕೆಲವು ಉತ್ಸವ ರಿವಾಜುಗಳಿವೆ.

RELATED ARTICLES  ಇಹಲೋಕ ತ್ಯಜಿಸಿದ ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತರು.

ಪವಿತ್ರ ಸ್ಥಳ.

ಪವಿತ್ರವೂ ಪ್ರಶಾಂತವೂ ಆದ ಈ ಸ್ಥಳ ಸಮುದ್ರಮಟ್ಟದಿಂದ 300 ಅಡಿಗಳಷ್ಟು ಎತ್ತರವಾಗಿದೆ. ಸಾವಿರಾರು ವರ್ಷಗಳ ಹಿಂದೆ ಋಷಿಗಳಿಂದ ಪ್ರತಿಷ್ಠಾಪಿತಗೊಂಡ ಮೂರ್ತಿ ಶಿಥಿಲಗೊಂಡ ಕಾರಣ ದೇವಿಯ ಅಪ್ಪಣೆಯಂತೆ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳ ಮಾರ್ಗದರ್ಶನ ಹಾಗೂ ದಿವ್ಯ ಸಾನಿಧ್ಯದಲ್ಲಿ ಹೊಸ ಮೂರ್ತಿಯನ್ನು 1982ರಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದನ್ನು ಸುವಿಖ್ಯಾತ ಶಿಲ್ಪಿ ಧರ್ಮಸ್ಥಳದ ಗುಮ್ಮಟೇಶ್ವರ ಮೂರ್ತಿಯನ್ನು ಕೆತ್ತಿದ ರೆಂಜಾಳ ಗೋಪಾಲಕೃಷ್ಣ ಶೆಣೈಯವರು ಕೆತ್ತಿದ್ದಾರೆ.

ಮೂಲತಃ ಮಹಿಷಾಸುರ ಮರ್ಧಿನಿ ಮೂರ್ತಿಯನ್ನು ಮೂಲ ಮೂರ್ತಿ ಪ್ರತಿಷ್ಠಾಪಕರು, ಶ್ರೀ ದೇವಿಯ ಮೂರ್ತಿಯನ್ನು ಕಂಚಿ ದೇಶದಿಂದ ತಂದ ಕಾರಣದಿಂದ `ಕಾಂಚಿಕಾ’ ಎಂಬ ಅನ್ವರ್ಥಕನಾಮ ಇಟ್ಟಿದ್ದಾರೆಂದು ಹೇಳುತ್ತಾರೆ. ಮೂರ್ತಿ ಸ್ಥಾಪನೆ ಬಗ್ಗೆ ಯಾವ ಆಧಾರ ಗ್ರಂಥವಾಗಲಿ, ಶಾಸನಗಳಾಗಲಿ ಲಭ್ಯವಾಗಿಲ್ಲ. ಹಿರಿಯರ ಬಾಯಿಂದ ಹರಿದು ಬಂದ ಕತೆಗಳ ಆಧಾರದ ಮೇಲೆ ಊಹಿಸಲಾಗುತ್ತದೆ.