ಕುಮಟಾ : ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗ ಇವು ಪ್ರಜಾಪ್ರಭುತ್ವದ ಮೂಲಾಧಾರಗಳಾಗಿವೆ.  ಸರ್ಕಾರಿ ನೌಕರರು ಪ್ರಜಾ ಸೇವಕರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಸರ್ಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮಹತ್ತರ ಕಾರ್ಯವನ್ನು ನಿರ್ವಹಿಸುವ ಜವಾಬ್ದಾರಿ ಸರ್ಕಾರಿ ನೌಕರರದ್ದಾಗಿದೆ, ಅಂತಹ ಕಾರ್ಯದಲ್ಲಿ ನಿರತರಾಗಿರುವ ನೌಕರರ ಕಾರ್ಯವು ಶ್ಲಾಘನೀಯ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಅವರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕುಮಟಾ ತಾಲೂಕು ಶಾಖೆಯವರು ನಾದಶ್ರೀ ಕಲಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ತಾಲೂಕಾ ಮಟ್ಟದ ನಿವೃತ್ತ ಸರ್ಕಾರಿ ನೌಕರರ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕುಮಟಾದ ಸರಕಾರಿ ನೌಕರರು ಕೇವಲ ನೌಕರಿಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಎಲ್ಲಾ ಇಲಾಖೆಯ ಬಹುತೇಕರು ಸೇವೆಯ ರೀತಿಯಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿ ಸಮಾಜಕ್ಕೆ ಮಾದರಿ ಎನಿಸಿದ್ದಾರೆ. ಅವರೆಲ್ಲರ ಕಾರ್ಯವನ್ನು ಶ್ಲಾಘಿಸಬೇಕಾಗಿರುವುದು ನಮ್ಮ ಕರ್ತವ್ಯ. ಕೇವಲ ಸರಕಾರಿ ಸೇವೆಯಲ್ಲಿ ಇರುವಾಗ ಅಷ್ಟೇ ಅಲ್ಲದೇ ನಂತರದಲ್ಲಿಯೂ ಜನರು ನಿಮ್ಮನ್ನು ಸ್ಮರಿಸಿಕೊಳ್ಳುತ್ತಾರೆ. ಸದಾ ನಾವು ಸ್ಮರಣೆಯಲ್ಲಿರುವಂತೆ ಕೆಲಸ ಮಾಡಬೇಕು ಎನ್ನುವುದು ಪ್ರತಿಯೊಬ್ಬ ನೌಕರರ ಗುರಿಯಾಗಬೇಕು ಎಂದರು.

ಸರ್ಕಾರದ ಎಲ್ಲಾ ಯೋಜನೆಗಳು ಜನರನ್ನು ತಲುಪಲು ಸರ್ಕಾರಿ ನೌಕರರು ಒಂದು ದೊಡ್ಡ ದಾರಿಯಾಗಿದ್ದಾರೆ. ಅದು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಎಲ್ಲ ಯೋಜನೆಗಳು ಪ್ರತಿಯೊಬ್ಬರನ್ನು ತಲುಪಲು ಸಹಾಯವಾಗುತ್ತದೆ. ಒಬ್ಬ ಸರ್ಕಾರಿ ನೌಕರ ತನ್ನ ಸೇವಾವಧಿಯಲ್ಲಿ ಉತ್ತಮ ಸೇವೆಸಲ್ಲಿಸಿದರೆ ಆತ ನಿವೃತ್ತಿಯಾದ ನಂತರವೂ ಜನರು ಆತನನ್ನು ಗೌರವಿಸಿತ್ತಾರೆ. ಇಂದು ಕುಮಟಾ ತಾಲೂಕು ನಿವೃತ್ತ ಸರ್ಕಾರಿ ನೌಕರರ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದೀರಿ. ಇದರಿಂದ ಎಲ್ಲ ಸರ್ಕಾರಿ ನೌಕರರಿಗೆ ಪ್ರೇರಣೆಯಾಗಲಿದೆ ಎಂದು ಹೇಳಿದರು.

RELATED ARTICLES  ಶ್ರೀ ಶ್ರೀ ಬಸವಾನಂದ ಸ್ವಾಮೀಜಿಯವರಿಗೆ ಗೌರವ

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ಭಟ್ಟ ಮಾತನಾಡಿ, ಸರಕಾರಿ ಆಡಳಿತ ಯಂತ್ರದಲ್ಲಿ ನೌಕರರು ಬಹುದೊಡ್ಡ ಪಾತ್ರ ನಿರ್ವಹಿಸುತ್ತಾರೆ. ನೌಕರರು ಒಮ್ಮತದಿಂದ ಕಾರ್ಯ ಬದ್ಧತೆಯಿಂದ ಮುಂದುವರಿಯಬೇಕು. ಕುಮಟಾ ತಾಲ್ಲೂಕಿನಲ್ಲಿ ಅಂತಹ ಬದ್ಧತೆಯ ನಿಷ್ಠಾವಂತ ನೌಕರರಿದ್ದು, ಹೀಗಾಗಿಯೇ ಎಲ್ಲ ಯೋಜನೆಗಳು ಸಮಾಜದ ಕಟ್ಟ ಕೊನೆಯ ವ್ಯಕ್ತಿಯವರೆಗೂ ತಲುಪುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ರಘುನಾಥ ಡಿ. ನಾಯ್ಕ ಮಾತನಾಡಿ, ನೂರಾರು ವರ್ಷಗಳ ಇತಿಹಾಸವಿರುವ ಸರ್ಕಾರಿ ನೌಕರರ ಸಂಘದ ಕುಮಟಾ ಘಟಕದ ಕಚೇರಿ ಕಟ್ಟಡವು ಶಿಥಿಲವಾಗಿರುವ ಈ ಸಂದರ್ಭದಲ್ಲಿಯೂ, ಅದನ್ನು ತೆರವುಗೊಳಿಸಬೇಕು ಎನ್ನುವ ತೆರೆಮರೆ ಯೋಚನೆ ಹಲವರು ಮಾಡುತ್ತಿದ್ದಾರೆ. ಆದರೆ ಕೈ ಬಿಟ್ಟು ನಮ್ಮ ಹಿಂದಿನವರು ಕಟ್ಟಿ ಬೆಳೆಸಿದ ಹಾಗೂ ಈವರೆಗೆ ಉಳಿಸಿದ ಕಟ್ಟಡವನ್ನು ನಮ್ಮ ಮುಂದಿನವರಿಗಾಗಿ ಉಳಿಸಬೇಕು ಎನ್ನುವ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ನಾನು ಪ್ರಯತ್ನ ಮಾಡುತ್ತೇನೆ ಎನ್ನುತ್ತಾ, ಅಧ್ಯಕ್ಷರಾಗಿ ಆಯ್ಕೆ ಮಾಡಿದ ಎಲ್ಲ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು. ಸರಕಾರಿಯ ಯಾವುದೇ ಇಲಾಖೆಯ, ಯಾವುದೇ ನೌಕರರಿಗೆ ತೊಂದರೆ ಆದರೂ ಸಂಘ ಜೊತೆಗೆ ಇರುತ್ತದೆ. ಸಮಸ್ಯೆಯನ್ನು ಲಿಖಿತ ರೂಪದಲ್ಲಿ ಗಮನಕ್ಕೆ ತಂದರೆ ನ್ಯಾಯತವಾಗಿ ಅದನ್ನು ಬಗೆಹರಿಸಲು ಪ್ರಯತ್ನ ಮಾಡುತ್ತೇವೆ ಎಂದು ಅವರು ಭರವಸೆಯಿತ್ತರು.

RELATED ARTICLES  ಕಾರು ಅಪಘಾತ : ನಾಲ್ವರಿಗೆ ಗಂಭೀರ ಪೆಟ್ಟು.

ಸಾಧಕ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಗುರುತಿಸಿ ಅಭಿನಂದಿಸಲಾಯಿತು. ಕುಮಟಾ ತಾಲೂಕಿನ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಕಳೆದೊಂದು ವರ್ಷದಿಂದ ಈಚೆಗೆ ನಿವೃತ್ತರಾದ ಎಲ್ಲಾ ಸರಕಾರಿ ನೌಕರರನ್ನೂ ಗೌರವಿಸಲಾಯಿತು. ೩೩ ಇಲಾಖೆಯ ಸುಮಾರು ೫೦ ಕ್ಕೂ ಹೆಚ್ಚು ಜನ ನಿವೃತ್ತ ಸರಕಾರಿ ನೌಕರರನ್ನು ಸನ್ಮಾನಿಸಿ ಅವರ ಸಾರ್ಥಕ ಸೇವೆಯನ್ನು ಸ್ಮರಿಸಲಾಯಿತು. 

ಕುಮಟಾ ತಾ. ಪಂ. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ನಾಗರತ್ನ ನಾಯಕ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಭಾರತಿ ಆಚಾರಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನ ಪಾಂಡು ನಾಯ್ಕ, ಪಶು ವೈದ್ಯಾಧಿಕಾರಿ (ಆಡಳಿತ) ವಿ. ಕೆ. ಹೆಗಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆನಂದು ಗಾಂವಕರ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿನಾಯಕ ವೈದ್ಯ, ಕುಮಟಾ ತಾಲೂಕು ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ರವೀಂದ್ರ ಭಟ್ ಸೂರಿ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಬೊಮ್ಮಯ್ಯ ನಾಯಕ, ಉಪಾಧ್ಯಕ್ಷರುಗಳಾದ ಎಮ್. ಎಮ್. ಹೆಗಡೆ, ಮಂಜುನಾಥ ನಾಯ್ಕ, ಭಾಗೀರಥಿ ನಾಯ್ಕ, ಖಜಾಂಚಿ ಮುಕುಂದ ಮಡಿವಾಳ ಹಾಗೂ ಪದಾಧಿಕಾರಿಗಳು, ಸದಸ್ಯರು, ತಾಲೂಕಿನ ಎಲ್ಲ ಇಲಾಖಾ ನೌಕರರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಗುರು ಮಹಾಲೆ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ನಾಯ್ಕ ನಿರೂಪಿಸಿದರು. ರಾಜು ಶೇಟ್ ವಂದಿಸಿದರು.