ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ಸಾಮಾಜಿಕ ಮುಖಂಡ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಶಿರಸಿಯಿಂದ ಕಾರವಾರದವರೆಗೆ ನಡೆಯುತ್ತಿರುವ ಪಾದಯಾತ್ರೆಯೂ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಪಾದಯಾತ್ರೆಯ ಮಾರ್ಗದ ಉದ್ದಕ್ಕೂ ಸ್ಥಳೀಯರ ಅಪಾರ ಜನಬೆಂಬಲ ವ್ಯಕ್ತವಾಗಿದೆ.
ಇದು ಜನಪರ ಉದ್ದೇಶದ ಪಾದಯಾತ್ರೆಯಾಗಿದೆ. ಜಿಲ್ಲೆಯ ಜನರಿಗಾಗಿ ಸರ್ಕಾರವು ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಬೇಕು. ಇದು ಜನರ ಹಿತಕ್ಕಾಗಿ ಮತ್ತು ಜನಪರ ಉದ್ದೇಶಕ್ಕಾಗಿ ನಡೆಯುತ್ತಿರುವ ಪಾದಯಾತ್ರೆಯಾಗಿದೆ ಎಂದು ಅನಂತಮೂರ್ತಿ ಹೆಗಡೆ ತಿಳಿಸಿದರು.
ಇಂದು ಪಾದಯಾತ್ರೆಯ ಮೂರನೇ ದಿನವಾಗಿದ್ದು, ಇಂದು ದೇವಿಮನೆಯಿಂದ, ಕತಗಾಲ, ಹಾಗೂ ಅಂತ್ರವಳ್ಳಿ ಮೂಲಕ ದಿವಗಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಪಾದಯಾತ್ರೆಯು ಸಾಗುವ ಮಾರ್ಗದ ಎಲ್ಲಾ ಊರುಗಳಲ್ಲಿ ಜನರು ಪಾದಯಾತ್ರೆಯನ್ನು ಆತ್ಮೀಯವಾಗಿ ಬರಮಾಡಿಕೊಂಡು ತಮ್ಮ ಬೆಂವಲ ನೀಡುತ್ತಿದ್ದಾರೆ. ವಿವಿಧ ಸಂಘಟನೆಗಳ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರು ಅನಂತಮೂರ್ತಿಯವರ ಪಾದಯಾತ್ರೆಗೆ ಬೆಂಬಲ ಸೂಚಿಸಿ ಅವರೊಂದಿಗೆ ಪಾದಯಾತ್ರೆಯಲ್ಲಿ ಸಾಗುತ್ತಿದ್ದಾರೆ.
ಶನಿವಾರ ದೇವಿಮನೆಯಿಂದ ಪ್ರಾರಂಭವಾದ ಪಾದಯಾತ್ರೆಯೂ ಮಧ್ಯಾಹ್ನದ ವೇಳೆಗೆ ಕುಮಟಾ ತಾಲೂಕಿನ ಕತಗಾಲಕ್ಕೆ ಬಂದಿದ್ದು, ಇಲ್ಲಿನ ಗ್ರಾಮಸ್ಥರು ಭವ್ಯವಾಗಿ ಸ್ವಾಗತ ನೀಡಿ ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪಾದಯಾತ್ರೆಗೆ ಮುಖಂಡರುಗಳ ಸಾಥ
ಇಂದು ದೇವಿಮನೆಯಿಂದ ಪ್ರಾರಂಭವಾದ ಪಾದಯಾತ್ರೆಗೆ ದೇವಿಮನೆಯಲ್ಲಿ ಕೆಡಿಸಿಸಿ ಬ್ಯಾಂಕ್ ನಿಧೇರ್ಶಕ ಶಿವಾನಂದ ಹೆಗಡೆ ಕಡತೋಕಾ, ಮನುವಿಕಾಸ ಸಂಸ್ಥೆಯ ನಿದೇರ್ಶಕ ಗಣಪತಿ ಭಟ್ ಅನಂತಮೂರ್ತಿ ಹೆಗಡೆ ಸಾಥ ನೀಡಿದರೆ, ನಂತರ ಸಾಗಿದ ಪಾದಯಾತ್ರೆಯೂ ಮಧ್ಯಾಹ್ನದ ವೇಳೆಗೆ ಕುಮಟಾ ತಾಲೂಕಿನ ಕತಗಾಲ ತಲುಪಿದ್ದು, ಇಲ್ಲಿ ಕೆಡಿಸಿಸಿ ಬ್ಯಾಂಕ್ ನಿದೇರ್ಶಕ ಗಜಾನನ ಪೈ, ಕತಗಾಲ್ ಪಂಚಾಯತ್ ಅಧ್ಯಕ್ಷ ದೇವು ಗೌಡ, ಪಂಚಾಯತ್ ಸದಸ್ಯರಾದ ಮಹೇಶ್ ದೇಶಭಂಡಾರಿ, ರಾಜೀವ ಭಟ್ ಸೇರಿದಂತೆ ನೂರಾರು ಜನರು ಬೆಂಬಲ ಸೂಚಿಸಿ ಪಾದಯಾತ್ರೆಯಲ್ಲಿ ಹೆಜ್ಜೆಹಾಕಿದರು.
ಕುಮಟಾದಲ್ಲಿ ಬೃಹತ್ ಸಭೆ ಶಾಸಕ ದಿನಕರ ಶೇಟ್ಟಿ ಭಾಗಿ
ನಾಳೆ ರವಿವಾರ ಬೆಳಿಗ್ಗೆ ಪಾದಯಾತ್ರೆಯೂ ಕುಮಟಾದ ಬಸ್ ನಿಲ್ದಾಣ ಮುಂಭಾಗ ತಲುಪಲಿದ್ದು, ಬೆಳಿಗ್ಗೆ 8 ಘಂಟೆಗೆ ಸಾರ್ವಜನಿಕರನ್ನುದ್ದೇಶಿಸಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ. ಸಭೆಗೆ ಹೊನ್ನಾವರ – ಕುಮಟಾ ಕ್ಷೇತ್ರದ ಶಾಸಕ ದಿನಕರ್ ಶೇಟ್ಟಿಯವರು ಸೇರಿದಂತೆ ಅನೇಕ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಪಾದಯಾತ್ರೆಯ ರೂವಾರಿ ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ.