ಕುಮಟಾ : ಜನರ ಪ್ರಾಣ ರಕ್ಷಣೆಗಾಗಿ ಉತ್ತರ ಕನ್ನಡಿಗರು ಗೋಗರೆಯಲು ಪ್ರಾರಂಭಿಸಿ ಅನೇಕ ವರ್ಷಗಳೇ ಉರುಳಿ ಹೋಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರತಿವರ್ಷ ಅಪಘಾತದಿಂದಲೇ ನೂರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದು, ಇನ್ನೂ ಹಲವರು ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆ ಲಭ್ಯವಾಗದೆ ಸಾವನ್ನಪ್ಪುವಂತಾಗಿದೆ. ಆರೋಗ್ಯ ಸೇವೆಗಳಿಗಾಗಿ ಹೊರ ಜಿಲ್ಲೆಗಳನ್ನೇ ಅವಲಂಬಿಸಿ ಬದುಕಬೇಕಾದ ಸ್ಥಿತಿ ಜಿಲ್ಲೆಯ ಜನರದ್ದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕು ಎನ್ನುವ ಹೋರಾಟ ದೊಡ್ಡಮಟ್ಟದಲ್ಲೇ ನಡೆದಿತ್ತು.

ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಜನರು ಕಳೆದ ಹತ್ತು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ ಜನರು. ಒಂದೆಡೆ, ಆಸ್ಪತ್ರೆಗಾಗಿ ಟ್ವಿಟರ್ ಅಭಿಯಾನ ನಡೆಸಿದ್ರೆ, ಇನ್ನೊಂದೆಡೆ ರಕ್ತದಲ್ಲಿ ಪತ್ರ ಬರೆದು ಪತ್ರ ಚಳವಳಿಯನ್ನು ಸಹ ನಡೆಸಲಾಗಿದೆ. ಆದರೆ ಸರಕಾರ ಜನರ ಮೂಗಿಗೆ ತುಪ್ಪವರೆಸುವ ಕಾರ್ಯವನ್ನು ಮಾಡಿದಂತೆ ಹಲವು ಬಾರಿ ಭಾಸವಾಗಿದೆ. ಇತ್ತೀಚಿಗೆ ಉತ್ತರ ಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆ ಕೂಗು ಕೇವಲ ಚುನಾವಣೆಯ ತಂತ್ರವಾಗಿ ಬದಲಾಗಿದ್ದು ಮಾತ್ರ ವಿಪರ್ಯಾಸ.

ಇದೀಗ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಉತ್ತರಕನ್ನಡ ಜಿಲ್ಲೆಗೆ ಅತ್ಯಗತ್ಯವಿರುವ ಸೂಪರ್ ಸ್ಪೆಷಲಿಟಿ ಆಸ್ಪತ್ರೆಯ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಜಿಲ್ಲೆಯ ಶಾಸಕರು ಸೂಪರ್ ಸ್ಪೆಷಲಿಟಿ ಆಸ್ಪತ್ರೆಯ ಕುರಿತು ಅವರವರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಅಧಿವೇಶನದ ಕಲಾಪದ ವೇಳೆ ಕಾರವಾರ ಶಾಸಕ ಸತೀಶ್‌ ಸೈಲ್‌ ಮಾತನಾಡಿ, ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೇ ಬೇಕು ಎಂದು ಆಗ್ರಹಿಸಿದರು. ಕಾರವಾರದಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರ ಹಾಗೂ ಸೀಬರ್ಡ್ನಲ್ಲಿ ಹೊರ ರಾಜ್ಯಗಳಿಂದ, ಹೊರ ಜಿಲ್ಲೆಗಳಿಂದ ಬಂದಿರುವ 30 ರಿಂದ 40 ಸಾವಿರ ಕಾರ್ಮಿಕರಿದ್ದು ಅವರಿಗೂ ಯಾವುದೇ ರೀತಿಯ ತುರ್ತುವೈದ್ಯಕೀಯ ಸೌಲಭ್ಯ ಸಿಗದಂತಾಗಿದೆ. ಉತ್ತರ ಕನ್ನಡಿಗರು ಹೊರ ಜಿಲ್ಲೆಯನ್ನೇ ನೆಚ್ಚಿಕೊಂಡಿದ್ದು,  ಇದರಿಂದ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಹಿಂದೆ ಮೆಡಿಕಲ್ ಕಾಲೇಜು ಸ್ಥಾಪನೆಗೆ ಕೆಎಲ್ಇ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ನಂತರದಲ್ಲಿ ಆಸ್ಪತ್ರೆ ಹಾಗೂ ಕಾಲೇಜಿನ ವ್ಯಾಪ್ತಿಗೆ ಸಂಬಂಧಪಟ್ಟು ಗೊಂದಲಗಳು ಉಂಟಾಗಿ ಅದು ನಡೆದಿಲ್ಲ. ನಾವು ಆಸ್ಪತ್ರೆಗಾಗಿ ಮಂಗಳೂರಿಗೆ ಹೋಗಬೇಕಿದ್ದು ಮಂಗಳೂರಿಗೆ ಹೋಗುವವರೆಗೆ ಅನಾರೋಗ್ಯಕ್ಕೆ ಒಳಗಾದವರು, ಅಪಘಾತವಾದವರು, ಸಾಯುವ ಸನ್ನಿವೇಶಗಳು ಹೆಚ್ಚು ಎಂದು ವಿವರಿಸುತ್ತಾ, ಹೀಗಾಗಿ ಸದ್ಯಕ್ಕೆ ಕಾರವಾರದಲ್ಲಿ ಆಸ್ಪತ್ರೆ ಮಾಡಿಕೊಡಿ. ನಂತರ ಉತ್ತರ ಕನ್ನಡದ ಬೇರೆ ಪ್ರದೇಶದಲ್ಲಿ ನಿರ್ಮಾಣ ಮಾಡಿ ಎಂದು ಆಗ್ರಹಿಸಿದರು.

RELATED ARTICLES  ಹಾಲಿನ ಉದ್ಯಮವೇ ಗೋವಿನ ಅಳಿವಿಗೆ ಕಾರಣವಾಗುತ್ತಿದೆಯೇ?

ಇದೇ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ ಅವರು ಕುಮಟಾದಲ್ಲಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ನಿರ್ಮಾಣಮಾಡುವುದರಿಂದ ಸಾರ್ವಜನಿಕರಿಗೆ ಆಗಲಿರುವ ಪ್ರಯೋಜನದ ಕುರಿತು ಸಭಾಧ್ಯಕ್ಷರಿಗೆ ವಿವರಣೆ ನೀಡುವ ಮೂಲಕ ಸಭೆಯ ಗಮನಸೆಳೆದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆಗೆ ಅಗತ್ಯವಿರುವ ಸ್ಥಳವನ್ನು ಕುಮಟಾದಲ್ಲಿ ಗೊತ್ತುಪಡಿಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿ, ರೈಲುನಿಲ್ದಾಣ ಸದರಿ ಸ್ಥಳಕ್ಕೆ ಸಮೀಪದಲ್ಲಿದೆ. ಅಲ್ಲದೆ ಕುಮಟಾ ಪಟ್ಟಣವು ಭೌಗೋಳಿಕಾವಾಗಿ ನಮ್ಮ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಮಧ್ಯವರ್ತಿ ಸ್ಥಳವಾಗಿದ್ದು, ಇಲ್ಲಿಯೇ ಆಸ್ಪತ್ರೆ ನಿರ್ಮಾಣವಾದರೆ ಎಲ್ಲರಿಗೂ ಪ್ರಯೋಜನವಾಗುತ್ತದೆ. ಕಾರವಾರ ಗೋವಾಕ್ಕೆ ಹತ್ತಿರವಿರುವುದರಿಂದ ಕಾರವಾರದಲ್ಲಿ ಅನಾರೋಗ್ಯಕ್ಕೆ ಒಳಗಾದವರನ್ನು ಗೋವಾಕ್ಕೆ ಕರೆದೊಯಬಹುದು ಹೀಗಾಗಿ ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿದರೆ ಎಲ್ಲರಿಗೆ ಅನುಕೂಲ ಎಂದು ದಿನಕರ ಶೆಟ್ಟಿ ಅವರು ಹೇಳಿದರು.

ಆಗ ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಶಿರಸಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿ ಎಂದು ಆಗ್ರಹಿಸಿದ್ದಾರೆ. ಅದಕ್ಕೆ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಅವರು, ಘಟ್ಟದ ಮೇಲೊಂದು, ಘಟ್ಟದ ಕೆಳಗೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಒತ್ತಾಯ ಮಾಡಿದರು. ಹೀಗಾಗಿ ತಮ್ಮ ತಮ್ಮ ಕ್ಷೇತ್ರಗಳಲ್ಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಡಿಮ್ಯಾಂಡ್‌ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಶಾಸಕರಿಂದಲೂ ಕೇಳಿಬಂತು.

ಇದಕ್ಕೆ ಸಚಿವ ಶರಣ ಪ್ರಕಾಶ ಪಾಟೀಲ್ ಉತ್ತರ ನೀಡಿ, ಬಹಳ ದಿನಗಳಿಂದ ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬೇಡಿಕೆ ಇದೆ. ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಮಾಡಬೇಕು ಎಂಬ ಪ್ರಯತ್ನ ನಡೆದಿದೆ. ಆದರೆ, ಕಾರವಾರದಲ್ಲಿ ಅಗತ್ಯ ವೈದ್ಯ ಹುದ್ದೆಗಳಿಗೆ ಎರಡು ಸಲ ಕಾಲ್ ಫಾರ್ ಮಾಡಿದರೂ ಯಾರೂ ಅರ್ಜಿ ಹಾಕಿಲ್ಲ. ಮತ್ತೊಮ್ಮೆ ವೈದ್ಯ ಹುದ್ದೆಗಳಿಗೆ ಆಹ್ವಾನ ನೀಡಲಾಗುತ್ತದೆ. ಈ ಕೆಲಸವಾದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸುಲಭವಾಗಲಿದೆ ಎಂದು ಹೇಳಿದರು.

RELATED ARTICLES  ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಎಂ.ಎಲ್.ಎ ಟಿಕೆಟ್ ಆಕಾಂಕ್ಷಿ ಶ್ರೀಧರ ನಾಯ್ಕ ಕೈಕಿಣಿ

ಬಗೆಹರಿದಿದ್ದ ಜಾಗದ ಗೊಂದಲ

ಉತ್ತರ ಕನ್ನಡ ಜಿಲ್ಲೆಯ ಹೃದಯಭಾಗ ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣಕ್ಕಾಗಿ ಸರ್ವೆ ನಂಬರ್ 440ರಲ್ಲಿ 15.35 ಎಕರೆ ಜಾಗವನ್ನು ಮೀಸಲಿಡಲಾಗಿದೆ. ಹಿಂದೆ ಈ ಜಾಗವನ್ನು ಏಕಲವ್ಯ ಮಾದರಿ ವಸತಿ ಶಾಲೆ ನಿರ್ಮಾಣಕ್ಕಾಗಿ ಮೀಸಲಿಡಲಾಗಿತ್ತು. ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ ಜಾಗವಾಗಿರುವ ಹಿನ್ನೆಲೆಯಲ್ಲಿ ಸದ್ಯ ಈ ಜಾಗವನ್ನು ಆಸ್ಪತ್ರೆಗಾಗಿ ನೀಡುವಂತೆ ಸೂಚನೆ ನೀಡಲಾಗಿತ್ತು. ವಸತಿ ಶಾಲೆ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಪರ್ಯಾಯ ಜಾಗವನ್ನು ಒದಗಿಸುವ ಭರವಸೆಯನ್ನೂ ನೀಡಲಾಗಿತ್ತು.

ಆಗಿನ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಉತ್ತರ ಕನ್ನಡದ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಅವರು ಆ ಜಾಗವನ್ನು ಸರ್ಕಾರಕ್ಕೆ ಹಿಂದಿರುಗಿಸಲು ಅನುಮತಿ ನೀಡಿದ್ದರು. ಅದರಂತೆ ಏಕಲವ್ಯ ವಸತಿ ಶಾಲೆಗಾಗಿ ನಿಗದಿಪಡಿಸಿ ಇರಿಸಲಾಗಿದ್ದ 17 ಎಕರೆ 14 ಗುಂಟೆ ಜಮೀನಿನಲ್ಲಿ, 15 ಎಕರೆ 35 ಗುಂಟೆಯಷ್ಟು ಪ್ರದೇಶವನ್ನು ಸರ್ಕಾರಕ್ಕೆ ಹಿಂದಿರುಗಿಸಿತ್ತು.

ಜನರ ಗೋಳು ಕೇಳಿರಿಲ್ಲಿ.

ಉತ್ತರ ಕನ್ನಡ ಜಿಲ್ಲೆಯು ಭೌಗೋಳಿಕವಾಗಿ ಬಹಳ ದೊಡ್ಡದಿರುವ ಕಾರಣ, ಅಪಘಾತವಾದರೆ ಇಲ್ಲವೇ ತುರ್ತು ಚಿಕಿತ್ಸೆ ಬೇಕಿದ್ದರೆ ಪಕ್ಕದ ಮಂಗಳೂರು, ಗೋವಾ ಇಲ್ಲವೇ ಹುಬ್ಬಳ್ಳಿಯಂತಹ ಕಡೆಗಳಿಗೆ ಹೋಗಬೇಕು. ಇದರಿಂದ ಸಾಕಷ್ಟು ಜೀವ ಹಾನಿಯಾಗುತ್ತಲಿದೆ. ರಾಜ್ಯಕ್ಕೆ ವಿದ್ಯುತ್‌ ಕೊಟ್ಟ ಜಿಲ್ಲೆಯ ಜನರಿಗೆ ಕನಿಷ್ಠ ಮೂಲ ಸೌಕರ್ಯವೂ ಇಲ್ಲದಂತೆ ಆಗಿದ್ದು, ಕೊನೇ ಪಕ್ಷ ಒಂದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನಾದರೂ ನೀಡಬೇಕು ಎಂಬುದು ಜನರ ಅಹವಾಲು.

ಶಾಸಕರಲ್ಲಿ ಒಡಕು.

ಇಷ್ಟೆಲ್ಲಾ ಬೆಳವಣಿಗೆಯ ನಂತರದಲ್ಲಿಯೂ ಉತ್ತರ ಕನ್ನಡ ಜಿಲ್ಲೆಯ ದಶಕಗಳ ಬೇಡಿಕೆಯಾಗಿದ್ದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕನಸು ಸದ್ಯಕ್ಕೆ ಈಡೇರುವ ಯಾವ ಲಕ್ಷಣವೂ ಕಾಣುತ್ತಿಲ್ಲ. ನನ್ನ ತಾಲೂಕಿಗೆ ಕೊಡಿ, ನನ್ನ ತಾಲೂಕಿಗೆ ಕೊಡಿ ಎಂದು ಅಧಿವೇಶನದಲ್ಲಿ ಬೇಡಿಕೆ ಇಟ್ಟಿರುವುದು ನೋಡಿದರೆ, ಈಗ ಜಿಲ್ಲೆಯ ಶಾಸಕರಲ್ಲೇ ಒಡಕು ಮೂಡಿದಂತಿದೆ. ಕಾರವಾರ ಶಾಸಕ ಸತೀಶ್ ಸೈಲ್‌, ಕುಮಟಾ ಶಾಸಕ ದಿನಕರ ಶೆಟ್ಟಿ, ಶಿರಸಿ ಶಾಸಕ ಭೀಮಣ್ಣ ನಾಯ್ಕ, ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ತಮ್ಮ ತಮ್ಮ ತಾಲೂಕಿಗೆ ಬೇಕು ಎಂದು ಕೇಳಿದ್ದಾರೆ.