ಕುಮಟಾ : ತಾಲೂಕಿನ ಹೆಗಡೆ ಸೇರಿದಂತೆ ಒಟ್ಟು ಹದಿನಾಲ್ಕು ಗ್ರಾಮ ಪಂಚಾಯತಿಗಳಿಗೆ ನೀರನ್ನು ಒದಗಿಸುವ ಯೋಜನೆಯಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದ್ದು, ಪೈಪ್ ಲೈನ್ ಅಳವಡಿಸುವ ಕೆಲಸ ತ್ವರಿತಗತಿಯಲ್ಲಿ ಸಾಗಿದೆ. ಸಂತೆಗುಳಿ ಗ್ರಾಮಪಂಚಾಯತ ವ್ಯಾಪ್ತಿಯ ಕವಲೋಡಿ ಸಮೀಪದ ದೋಣಿಗುಂಡಿಯಲ್ಲಿ ಜಲಮೂಲವನ್ನು ಗುರುತಿಸಲಾಗಿದೆ.
ದೋಣಿಗುಂಡಿಯ ಹತ್ತಿರ ಜಾಕ್ವೆಲ್ ನಿರ್ಮಾಣ ಮಾಡುವ ಬದಲು ದಿವಳ್ಳಿಯ ಸಮೀಪದ ಗಿಳಿಗುಂಡಿಯಲ್ಲಿ ನಿರ್ಮಾಣ ಮಾಡಬೇಕು ಎನ್ನುವುದು ಸಂತೆಗುಳಿ ಹಾಗೂ ಸೊಪ್ಪಿನ ಹೊಸಳ್ಳಿ ಪಂಚಾಯತ್ ಭಾಗದ ಬಹುಜನರ ಬೇಡಿಕೆಯಾಗಿತ್ತು. ಅವರು ಈ ಕುರಿತು ಶಾಸಕರ ನಿವಾಸಕ್ಕೆ ಆಗಮಿಸಿ ಮನವಿ ಮಾಡಿಕೊಂಡಿದ್ದರು. ಈ ಯೋಜನೆಯ ಅನುಷ್ಠಾನಕ್ಕೆ ನಮ್ಮ ವಿರೋಧವಿಲ್ಲ. ಆದರೆ ಈಗ ನಿಗದಿಪಡಿಸಿದ ಜಾಗದಲ್ಲಿ ಜಾಕ್ವೆಲ್ ನಿರ್ಮಾಣ ಮಾಡಿದರೆ ಅಕ್ಕಪಕ್ಕದ ಜನರಿಗೆ ಮಳೆಗಾಲದಲ್ಲಿ ತೊಂದರೆ ಉಂಟಾಗುವ ಸಂಭವವಿದೆ. ಅಲ್ಲದೆ ಬೇಸಿಗೆಯ ಕೊನೆಗೆ ನೀರಿನ ಅಭಾವ ಎದುರಾಗುವ ಆತಂಕವಿದೆ ಎನ್ನುವುದು ಅವರ ಅಭಿಪ್ರಾಯ. ಜಾಕ್ವೆಲ್ ನಿರ್ಮಿಸಲು ಗಿಳಿಗುಂಡಿಯನ್ನು ಆಯ್ಕೆಮಾಡಿದರೆ ಎಲ್ಲ ದೃಷ್ಟಿಯಿಂದಲೂ ಅನುಕೂಲವಾಗುತ್ತದೆ ಎನ್ನುವ ಅನಿಸಿಕೆಯನ್ನು ಶಾಸಕರ ಬಳಿ ವ್ಯಕ್ತಪಡಿಸಿದ್ದರು. ಸದರಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸುವಂತೆ ಮನವಿ ಮಾಡಿಕೊಂಡಿದ್ದರು.
ಸಂತೆಗುಳಿ ಹಾಗೂ ಸೊಪ್ಪಿನಹೊಸಳ್ಳಿ ಗ್ರಾಮಸ್ಥರ ಅಪೇಕ್ಷೆಯ ಮೇರೆಗೆ ಶಾಸಕ ದಿನಕರ ಶೆಟ್ಟಿ ಅವರು ಮಂಗಳವಾರ ದಿವಳ್ಳಿ ಸಮೀಪವಿರುವ ಗಿಳಿಗುಂಡಿ ಹಳ್ಳದ ಸಮೀಪ ತೆರಳಿ ವೀಕ್ಷಿಸಿದರು. ಬಹುಗ್ರಾಮಗಳ ಕುಡಿಯುವ ನೀರಿನ ಬವಣೆಯನ್ನು ನೀಗಿಸುವ ಈ ಮಹತ್ತರ ಯೋಜನೆಯ ಅನುಷ್ಠಾನದಿಂದ ಯಾರಿಗೂ ತೊಂದರೆ ಆಗಬಾರದೆನ್ನುವುದು ನನ್ನ ಕಳಕಳಿ. ಜಾಕ್ವೆಲ್ ನಿರ್ಮಾಣದ ಸ್ಥಳ ಬದಲಾವಣೆಯ ಸಾಧ್ಯಾ ಸಾಧ್ಯತೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಈ ಬಗ್ಗೆ ಇನ್ನೊಮ್ಮೆ ಪರಾಮರ್ಷಿಸಲು ಸೂಚಿಸುತ್ತೇನೆ ಎಂದು ಹೇಳಿದರು.
ಸಂತೆಗುಳಿ ಗ್ರಾಮಪಂಚಾಯತ್ ಅಧ್ಯಕ್ಷ ಮಹೇಶ ನಾಯ್ಕ, ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ವಿನಾಯಕ ಭಟ್ಟ, ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ರಾಘವೇಂದ್ರ ನಾಯ್ಕ, ಸ್ಥಳೀಯ ಪ್ರಮುಖರಾದ ಗಜಾನನ ನಾಯ್ಕ, ಹನುಮಂತ ನಾಯ್ಕ, ಜಟ್ಟು ಗೌಡ, ಮಂಜುನಾಥ ಗೌಡ, ಹಮ್ಮು ಗೌಡ ಹಾಗೂ ಗ್ರಾಮಸ್ಥರನೇಕರು ಇದ್ದರು.