ನಿನ್ನೆ ದಿನ ಕೊಳಗದ್ದೆ ಜಾತ್ರೆಯಲ್ಲಿ ಪ್ರದರ್ಶನಗೊಂಡ ಶ್ರೀ ಪೆರ್ಡೂರು ಮೇಳದ, ಪ್ರೊ|| ಪವನ ಕಿರಣಕೆರೆ ವಿರಚಿತ ಗಂಗೆ ತುಂಗೆ ಕಾವೇರಿ ಕಥಾನಕ ಪ್ರೇಕ್ಷಕರ ಮನಸೂರೆಗೊಂಡಿತು. ರಾತ್ರಿಯಿಂದ ಬೆಳಗಿನ ತನ ಸಾವಿರಾರು ಪ್ರೇಕ್ಷಕರ ಕುತೂಹಲ ಕಾದಿರಿಸಿಕೊಳ್ಳುವಲ್ಲಿ ಯಶಸ್ವಿಯಾದ ಈ ಪ್ರಸಂಗ ಕೇವಲ ಮನರಂಜಿಸದೇ ಸಂಘಟಕರ ಗಲ್ಲಾ ಪೆಟ್ಟಿಗೆಯನ್ನೂ ತುಂಬಿ ತುಳುಕುವಂತೆ ಮಾಡಿತು. ಯಕ್ಷಗಾನ ನೋಡುವವರೇ ಕಡಿಮೆ ಕಡಿಮೆ ಎಂದು ಬೊಬ್ಬಿಡುವ ಕಾಲಕ್ಕೂ ಶ್ರೀ ರಾಮಕೃಷ್ಣ ಹೆಗಡೆ, ಗಣೇಶ ಹೆಗಡೆ, ಬಾಲು ಹೆಗಡೆ ಮತ್ತು ಗೆಳೆಯರ ಬಳಗ ಕೊಳಗದ್ದೆಯವರ ಸಂಘಟನೆಯಲ್ಲಿ ಲಕ್ಷಕ್ಕೂ ಮಿಗಿಲು ಕೌಂಟರ್ ನಲ್ಲೇ ಆದದ್ದು ವಿಶೇಷ.


ಪುರಾಣಮಿತ್ಯೇವ ನ ಸಾಧು ಸರ್ವಂ ನ ಚಾಪಿ ಕಾವ್ಯಂ ನವಮಿತ್ಯ ವಧ್ಯಂ ಎಂಬಂತೆ ಹಳೆ ಹೊಸ ಪ್ರಸಂಗಗಳನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ ನೋಡಬೇಕಾದ ಪ್ರೇಕ್ಷಕನಾಗಿ ಯಕ್ಷಗಾನದ ಓರ್ವ ಅಭಿಮಾನಿಯಾಗಿ ನಾಲ್ಕಕ್ಷರ ಬರೆಯಬೇಕೆನಿಸಿತು.


ಒಬ್ಬ ಪ್ರಸಂಗ ರಚನೆಗಾರ ವಿಭಿನ್ನ ಪಾತ್ರಗಳ ಜೊತೆಗೆ ರಾತ್ರಿ ಬೆಳಿಗ್ಗೆಯವರೆಗೂ ಕಥೆಯ ಕುತೂಹಲ ಕಾಯ್ದಿರಿಸಿಕೊಂಡಿದ್ದಾನೆಂದರೆ ಕಥೆ ಗೆದ್ದಂತೆಯೇ. ಆ ಮಟ್ಟಿಗೆ ಗಂಗೆ ತುಂಗೆ ಕಾವೇರಿ ನೋಡಲೇ ಬೇಕಾದ ಪ್ರಸಂಗ. ಭಾಗವತರಾದ ಶ್ರೀಯುತ ರಾಘವೇಂದ್ರ ಆಚಾರ್ಯರು, ಪ್ರಸನ್ನ ಭಟ್ಟ ಬಾಳ್ಕಲ್ ಹಾಗೂ ಹಿಮ್ಮೇಳದ ತಂಡ ಕಥೆಯನ್ನು ಸುಂದರವಾಗಿ ನಿರೂಪಿಸಿದೆ ಎಂಬುದರಲ್ಲಿ ಎರಡು ಮಾತೇ ಇಲ್ಲ. ಗಂಗೆ ತುಂಗೆ ಕಾವೇರಿಯ ಟೈಟಲ್ ಸಾಂಗ್ ತುಂಬಾ ಇಷ್ಟವಾಯಿತು. ಅನೇಕ ಹಾಡುಗಳು ಇಷ್ಟವಾದರೂ ಶಂಕರಾಭರಣ ಚಂದ್ರಮುಖಿ ಸೂರ್ಯಸಖಿ ಈಥರದ ಪ್ರಸಂಗಗಳನ್ನು ಈಗಾಗಲೇ ನೋಡಿದ್ದ ನನಗೆ ಇದು ಇನ್ನೂ ಉತ್ತಮವಾಗಬಹುದಿತ್ತೇನೋ ಎಂದು ಅನ್ನಿಸಿತು.
ಸ್ತ್ರೀ ಪಾತ್ರಧಾರಿಗಳಾದ ಶ್ರೀ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಸುಧೀರ್ ಉಪ್ಪೂರು, ಸಂತೋಷ ಕುಲಾಲ್ ಈ ಮೂವರೂ ಪ್ರಸಂಗದ ನಿಜವಾದ ನಾಯಕಿಯರಾಗಿ ಪ್ರಸಂಗವನ್ನು ಗೆಲ್ಲಿಸಿದ್ದಾರೆ. ಪ್ರವೇಶದ ಜಡೆ ನೆಯ್ಯುವ ನೃತ್ಯ ಸಂಯೋಜನೆ ಪರಿಕಲ್ಪನೆಯು ಬಹಳ ಖುಷಿ ನೀಡಿತು. ಈಗಾಗಲೇ ಯಲಗುಪ್ಪರವರು ಭರತನಾಟ್ಯದ ಅನೇಕ ಮಜಲುಗಳನ್ನು ಇಂತಹ ಅನೇಕ ಹೊಸತನ್ನು ಯಕ್ಷಗಾನದ ರಂಗಸ್ಥಳಕ್ಕೆ ತಂದಿರುವುನ್ನು ನಾವು ಶ್ಲಾಘಿಸಲೇ ಬೇಕು. ಸುಧೀರ್ ಉಪ್ಪೂರು ಪಾತ್ರವನ್ನು ಎಲ್ಲೂ ಬಿಟ್ಟುಕೊಡದ ಒಬ್ಬ ಸುಂದರ ಕಲಾವಿದ. ಇಡೀ ಪ್ರಸಂಗದಲ್ಲಿ ಹತ್ತಾರು ಬಾರಿ ಸೀರೆ ಬದಲಾಯಿಸುತ್ತಾ ಪ್ರೇಕ್ಷಕರನ್ನು ಸಾಧ್ಯವಾದಷ್ಟೂ ಮನರಂಜಿಸಲು ಪ್ರಯತ್ನ ಪಡುವ ಅವರ ಕಠಿಣ ಪರಿಶ್ರಮ ಎಂಥವರೂ ಮೆಚ್ಚಲೇ ಬೇಕು. ಸಂತೋಷ ಕುಲಾಲ ಹಲವರ ಹೃದಯಕ್ಕೆ ಲಗ್ಗೆಯಿಡಬಲ್ಲ ಕನಸಿನ ಕನ್ಯೆಯಾಗಿ ಕಾಡುತ್ತಾರೆ. ಮೂವರ ವೇಷಭೂಷಣಗಳೂ ವಿಭಿನ್ನವೂ, ವೈಶಿಷ್ಟ್ಯಪೂರ್ಣವೂ ಹಾಗೂ ಅನನ್ಯವೂ ಆಗಿತ್ತು. No doubt. ನೀವು ಮೇಳದ ಶಕ್ತಿ. ಬೆಳಕಿನ ಸಂಯೋಜನೆ ಇನ್ನೂ ಬೇಕಿತ್ತು. ರಂಗ ಇನ್ನೂ ರಂಗೇರಬೇಕು. ನನಗೆ ಪ್ರಾಮಾಣಿಕವಾಗಿ ಗೊತ್ತಿಲ್ಲ. ನಾನು ಪ್ರೇಕ್ಷಕನಾಗಿ ಹೊಸಬ. ಆದರೆ ದಿನವೂ ಅದೇ ಪ್ರದರ್ಶನ ನೀಡುತ್ತಾ ದೂರ ದೂರದ ಊರಿಗೆ ಸಾಗಬೇಕಾದವರು ನೀವು. ದಣಿವಿನ ಕಾರಣದಿಂದಲೋ ಪುನರಪಿ ಪುನಹ ಅದದೇ ಪಾತ್ರಗಳನ್ನು ಮಾಡುವ ಕಾರಣದಿಂದಲೋ ಆಗಾಗ ಪಾತ್ರದ ಘನತೆಯನ್ನು ಮರೆಯುವ ಹಾಗೆ ಅನಿಸಿತು. ಏನೋ ಮಾಡಲು ಹೋಗಿ ಏನೋ ಹೇಳಲು ಹೋಗಿ ಕಥೆಯ ಪಾತ್ರದ ಔಚಿತ್ಯವನ್ನೂ ಕಳೆಯದಿರೆ ಕಥೆ ಇನ್ನೂ ಕಳೆಕಟ್ಟುತ್ತದೆ. ಬೆಳಗಿನ ಜಾವದ ಭಾವನಾತ್ಮಕ ಸನ್ನಿವೇಶಗಳಿಗೆ ಇನ್ನೂ ಜೀವ ತುಂಬಬೇಕಿದೆ.
ಹಾಸ್ಯ ಪ್ರಸಂಗದ ಮೂಲಾಧಾರ. ಒಂದೇ ಮೇಳದಲ್ಲಿ ನಿಷ್ಠಾವಂತರಾಗಿ ಬಹುವರ್ಷಗಳಿಂದ ತದೇಕಚಿತ್ತತೆಯನ್ನು ಕಾಯ್ದುಕೊಂಡು ಪೌರಾಣಿಕವಿರಲಿ ಹೊಸ ಪ್ರಸಂಗಗಳಿರಲಿ ತನ್ನದೇ ಆದ ಶೈಲಿ ಹಾಸ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸುವ ದೇವಾಡಿಗರು ನನಗೆ ತುಂಬಾ ಇಷ್ಟವಾಗುತ್ತಾರೆ. ಪುರಂದರ ಮೂಡ್ಕಣಿಯವರು ಅವರದೇ ಹಾದಿಯಲ್ಲಿ ಸಾಗುತ್ತಿದ್ದರೂ ಕೆಲವೊಮ್ಮೆ over act ಮಾಡುವ ಹಾಗೆ ಅನಿಸಿಬಿಡುತ್ತದೆ. ಕ್ಷಮೆಯಿರಲಿ. ಹಾಸ್ಯ ಮಾಡುವ ಜೊತೆಗೆ ಯಾರಲ್ಲಿ ಯಾವ ಪಾತ್ರದ ಜೊತೆಗೆ ಹಾಸ್ಯ ಎಂಬುದೂ ಪ್ರಧಾನ. ಗುರುವಿಗೆ, ಸನ್ಯಾಸಿಗೆ, ಮುನಿಗೆ, ಛೇಡಿಸುವ ಸನ್ನಿವೇಶ ವೈಯಕ್ತಿಕವಾಗಿ ನನಗೆ ಇಷ್ಟವಾಗದ್ದು. ಹೀಗಾಗಿ ಎದುರು ಪಾತ್ರಧಾರಿಗಳ ಘನತೆ ಕಳೆಯದಂತೆ ವ್ಯವಹರಿಸುವುದೂ ಮುಖ್ಯ. ಪುರಂದರರ ಪೆನ್ಸಿಲ್, ಬುಕ್, ಎಲ್ಲವೂ ವಿಭಿನ್ನ ಯೋಚನೆ ಇಷ್ಟವಾಯಿತು.
ಪುರುಷ ಪಾತ್ರಗಳಲ್ಲಿ ಬರುವ ಶ್ರೀಪಾದ ಭಟ್ಟರು, ವಿನಯ ಬೇರೊಳ್ಳಿ, ಕಾರ್ತಿಕ ಚಿಟ್ಟಾಣಿ, ಉದಯ ಹೆಗಡೆ ಕಡಬಾಳ, ಅಣ್ಣಪ್ಪ ಗೌಡ ಮಾಗೋಡ ಎಲ್ಲರೂ ಕಥೆಯ ನೈಜತೆಯನ್ನು ಬಿಡಿಸಿಡುವಲ್ಲಿ ಯಶಸ್ವಿಯಾಗಿದ್ದಾರೆ. ಕಡಬಾಳರ ವೇಷಭೂಷಣ ತುಂಬಾ ಇಷ್ಟವಾಯಿತು. ವಿಭಿನ್ನ ಪರಿಕಲ್ಪನೆ. ಅವರ ಪಾತ್ರಚಿತ್ರಣ ತುಸು ನಾಟಕೀಯವೆನಿಸಿತು. ವಿನಯ ಬೇರೊಳ್ಳಿಯವರು ಇಡೀ ಪ್ರಸಂಗದಲ್ಲಿ ಹೆಚ್ಚಿನ ಸಮಯ ಬಂದು ಹೋಗುತ್ತಾರೆ. ಕಿರೀಟ, ಪೊಗಡೆ ಎರಡೂ ಒಪ್ಪುವ ಅಪರೂಪದ ಕಲಾವಿದ ವಿನಯರವರ ಪಾತ್ರ ಖುಷಿ ನೀಡಿತು. ಕಾರ್ತಿಕ ಚಿಟ್ಟಾಣಿಯವರ ನೃತ್ಯದಲ್ಲಿ ನಾವಿನ್ಯತೆ ಗುರುತಿಸಿದೆ. ಇನ್ನೂ ಹೆಚ್ಚಿನ ಪ್ರಯೋಗಗಳನ್ನು ನಿರೀಕ್ಷಿಸುವೆ. ಮಾಗೋಡ ಅಣ್ಣಪ್ಪ ಗೌಡರು ನಿಜವಾಗಿಯೂ ಅವರ ಪಾತ್ರವನ್ನು ಯಾವಾಗಲೂ ಚೆನ್ನಾಗಿ ನಿರ್ವಹಿಸುತ್ತಾರೆ. ಅನೇಕ ಬಾರಿ ಅವರ ಪಾತ್ರವನ್ನು ನೋಡಿದಾಗ ಬೇಕಾಬಿಟ್ಟಿ ಮಾಡುವವರೇ ಅಲ್ಲ ಅವರು ಅನ್ನಿಸದೆ.

RELATED ARTICLES  ಶ್ರೀಧರರು ಬಾಳಕೃಷ್ಣಬುವಾ ಅಷ್ಟೇಕರ, ಪುಣೆ, ಅವರಿಗೆ ಪತ್ರದ ಮೊದಲ ಭಾಗ


ಇನ್ನು ದರ್ಶನ ಭಟ್ಟ ಇವರನ್ನು ವಿಶೇಷವಾಗಿ ಅಭಿನಂದಿಸಲೇ ಬೇಕು. ಇನ್ನೇನು ಕಣ್ಣಿಗೆ ನಿದ್ರೆ ಆವರಿಸುತ್ತದೆ ಎನ್ನುವಷ್ಟರಲ್ಲಿ ಥಟ್ಟನೆ ಪ್ರತ್ಯಕ್ಷವಾಗುವ ಇವರ ಪಾತ್ರ ವಿಭಿನ್ನ ವೇಷಭೂಷಣ ಧ್ವನಿ, ನೃತ್ಯಗಳಿಂದ ಜನಮನಸೂರೆಗೊಂಡಿತು. ನಿಜವಾಗಿಯೂ ಬೆವರು ಸುರಿಸಿದ್ದಾರೆ. ಎಲ್ಲೂ ಹಿಂಜರಿಯಲಿಲ್ಲ.


ಜಾನಗಳ್ಳಿ ನಿರಂಜನ, ಪವನಕುಮಾರ ಸಾಣಮನೆ, ಭಾಸ್ಕರ ಮರಾಠೆ, ಶ್ರೀಧರ ಕುಡ್ಲ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಎಲ್ಲರಿಗೂ ದೊಡ್ಡ ಪಾತ್ರಗಳು ಬರುವುದಿಲ್ಲ. ಪ್ರಧಾನ ನಟರಾಗುವ ಮುಂಚೆ ಎಲ್ಲರೂ ಚಿಕ್ಕ ಚಿಕ್ಕ ಪಾತ್ರಗಳನ್ನು ನಿರ್ವಹಿಸಿಯೇ ಮೇಲೆ ಬಂದವರು. ಹೀಗಾಗಿ ಎಳೆ ಪ್ರಾಯದ ಎಲ್ಲಾ ಹೊಸತರುಣರಿಗೂ ಉಜ್ವಲ ಭವಿಷ್ಯವಿದೆ. ಆದರೊಂದು ನನ್ನದು ಸಣ್ಣ ಪಾತ್ರ ಎಂಬ ಕಲ್ಪನೆ ಅವರಲ್ಲಿ ಮೂಡಲೇ ಬಾರದು. ನನ್ನಿಂದ ಇಂದೇನು ಮಾಡಲಿಕ್ಕಾಗಬಹುದು ಎಂಬುದೊಂದೇ ತಲೆಯಲ್ಲಿರಬೇಕು.
ಒಟ್ಟಿನಲ್ಲಿ ಭಾವ ಬಂಧದ ತ್ರಿವೇಣಿ ಸಂಗಮ ಗಂಗೆ ತುಂಗೆ ಕಾವೇರಿ ಪ್ರತಿ ಪ್ರದರ್ಶನ, ಕಥೆ, ಸಾಹಿತ್ಯ, ವ್ಯಕ್ತಿತ್ವ, ಎಲ್ಲವೂ ವಿಮರ್ಶೆಗಳಿಗೆ ಒಳಪಡಲೇ ಬೇಕು. ತಪ್ಪು ಒಪ್ಪುಗಳನ್ನೂ ಮೀರಿ ನಾವು ಎಲ್ಲರನ್ನು ಅಭಿನಂದಿಸುವ ಗುಣ ಹೊಂದಬೇಕು. ಮನೆ ಮಠ ಬಿಟ್ಟು ನೂರಾರು ಊರು, ಎಲ್ಲಿಯದೋ ನೀರು, ಸಾರು ಉಂಡು ಬಣ್ಣದ ಬದುಕಿನಲ್ಲೇ ಸಾರ್ಥಕ್ಯ ಕಂಡು ನಮ್ಮ ನಿಮ್ಮಂಥ ಲಕ್ಷಾಂತರ ಅಭಿಮಾನಿಗಳನ್ನು ಸಂತೋಷಗೊಳಿಸುವ ಕಲಾವಿದರಿಗೆ ನನ್ನ ಹೃದಯಪೂರ್ವಕ ಪ್ರಣಾಮಗಳು.

RELATED ARTICLES  ಬದುಕಿಗೆ ಬಣ್ಣ ತುಂಬಿದವರು


ಎಲ್ಲಾ ವರ್ಗದ ಪ್ರೇಕ್ಷಕರಿರುತ್ತಾರೆ. ಎಲ್ಲರನ್ನೂ ಮೆಚ್ಚಿಸಲು ಹೊರಟವ ಯಾರನ್ನೂ ಮೆಚ್ಚಿಸಲಾಗುವುದಿಲ್ಲ. ನಗುತ್ತಾರೆಂದು ತೀರಾ ಕೆಳಮಟ್ಟದ ಹಾಸ್ಯ ಶೋಭೆ ತರದು. ಚಪ್ಪಾಳೆ ಹೊಡೆಯುತ್ತಾರೆಂದು ಒಂದೇ ನೃತ್ಯದಲ್ಲಿ ಎಲ್ಲವನ್ನೂ ಮಾಡಿಬಿಡಬೇಕೆಂಬ ಹಪಹಪಿಕೆ ರಂಜಿಸದು. ಇವತ್ತೊಂದಿನ ಕಳೆದರೆ ಸಾಕು ನಾಳೆ ಮಾಡಿದರಾಯಿತು ಎಂಬ ಆಲಸ್ಯ ಕಥೆಯನ್ನು ಸೋಲಿಸುತ್ತದೆ. ರಂಗಸ್ಥಳದಲ್ಲಿ ಕುಳಿತು ಹಿಮ್ಮೇಳದವರೇ ಹಿನ್ನೆಲೆಯಲ್ಲಿ ವಿಪರೀತ ಮಾತನಾಡುವುದು. ಚಂಡೆಯವರು ಮದ್ದಳೆಗಾರರು ವಿಪರೀತ ಮಾತನಾಡುತ್ತಾ ಕಥಾಭಾಗಕ್ಕೆ ಭಂಗ ತರುವುದು, ಕೆಳವರ್ಗದ ಸಾಮಾನ್ಯ ಬಡ ಪ್ರೇಕ್ಷಕರನ್ನು ಮೇಲೆ ಕುಳಿತೇ ಹಂಗಿಸುವ ವ್ಯಂಗ್ಯ ನಗು ಇವೆಲ್ಲಾ ರಂಗಸ್ಥಳದ ಘನತೆಯನ್ನು ಎತ್ತರಿಸುವುದಿಲ್ಲ. ಹಲವರು ಹೇಳದಿರಬಹುದು, ಬರೆಯದಿರಬಹುದು. ಆದರೆ ಖಂಡಿತ ಅನಿಸಿರುತ್ತದೆ.


ಕೊನೆಗೂ ಯಕ್ಷಗಾನ ನಮಗೆ ಬದುಕು ಕೊಟ್ಟಿದೆ. ಯಕ್ಷಗಾನ ನಮಗೆ ಹೆಸರು ಕೊಟ್ಟಿದೆ. ಯಕ್ಷಗಾನ ನಮಗೆ ಸಾವಿರಾರು ಜನರ ಪರಿಚಯ ಮಾಡಿಕೊಟ್ಟಿದೆ. ಛಾಯಾಚಿತ್ರಕಾರರು ನಿಮ್ಮನ್ನು ನೂರಾರು ಕಡೆ ವಿಭಿನ್ನ ಭಂಗಿಗಳ ಛಾಯಾಚಿತ್ರ ತೆಗೆದು ಪ್ರಚಾರ ನೀಡುತ್ತಿದ್ದಾರೆ. ನಿಮ್ಮ ವಿಡಿಯೋಗಳು ಲಕ್ಷಾಂತರ views ಕಾಣುತ್ತಿವೆ. ದೇಶ ವಿದೇಶದ ಜನ ಯಕ್ಷಗಾನವನ್ನು, ಕಲಾವಿದರನ್ನು ವಿಶೇಷವಾಗಿ ಗೌರವಿಸುತ್ತಿದ್ದಾರೆ.


ಉತ್ತಮವಾದುದನ್ನು ಮತ್ತೂ ಉತ್ತಮಗೊಳಿಸುವ ಪ್ರಯತ್ನ ಯಾವಾಗಲೂ ನಡೆದೇ ಇರಲಿ. ಯಕ್ಷರಂಗ ಉಳಿಯಲಿ. ಬೆಳೆಯಲಿ. ಪ್ರಶಸ್ತಿ, ಸನ್ಮಾನ, ಚಪ್ಪಾಳೆ, ಸಿಳ್ಳೆ, ನಮ್ಮ ಪ್ರತಿಭೆಯನ್ನರಿಸಿ ಬಂದರೆ ಮಾತ್ರ ಗೌರವ. 😁😜 ಪೆರ್ಡೂರು ಮೇಳದ ಈ ಕಥಾನಕ ನೂರಾರು ಪ್ರದರ್ಶನ ಕಂಡು ಜಯಭೇರಿ ಹೊಡೆಯಲಿ, ರಾಘವೇಂದ್ರ ಆಚಾರ್ಯರು, ಪ್ರಸನ್ನ ಭಟ್ಟ ಬಾಳ್ಕಲರು ಭಾಗವತಿಕೆಯ ಜೊತೆಗೆ ಅತಿಯಾಯಿತು ಅನಿಸಿದಾಗ ಸ್ವಲ್ಪ ನಿಯಂತ್ರಣ ತೆಗೆದುಕೊಂಡರೆ ಗಾಡಿ ಸರಿ ಹೋಗುತ್ತದೆ. ಅವರು ಸಭಾದ್ಯಕ್ಷರಿದ್ದ ಹಾಗೆ. ಹಡಗಿನ ನಾವಿಕರಿದ್ದ ಹಾಗೆ.

ಮತ್ತೊಮ್ಮೆ ಅಭಿನಂದಿಸುವೆ. ಮತ್ತೊಮ್ಮೆ ಅಭಿವಂದಿಸುವೆ.

✍ಸಂದೀಪ ಎಸ್ ಭಟ್ಟ