ಕಾರವಾರ: ಜಗತ್ತಿಗೆ ರಾಕೆಟ್ ತಂತ್ರಜ್ಞಾನ ಪರಿಚಯಿಸಿದ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ನ.10ರಂದು ಜಿಲ್ಲಾ ರಂಗಮಂದಿರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಿದ ಅವರು, ರಾಕೆಟ್ ತಂತ್ರಜ್ಞಾನ ಬಳಸಿ ಯುದ್ಧ ಮಾಡುವ ಕಲೆಯನ್ನು ಪ್ರಪ್ರಥಮ ಬಾರಿಗೆ ಜಗತ್ತಿಗೆ ಪರಿಚಯಿಸಿ ವೀರ ಸೇನಾನಿ ಟಿಪ್ಪು ಸುಲ್ತಾನ್. ರಾಕೆಟ್ ತಂತ್ರ ಬಳಸಿಯೇ ಆಂಗ್ಲರು ಫ್ರೆಂಚರ ವಿರುದ್ಧ ಯು ಮಾಡಿ ಗೆದ್ದರು. ಅಂತಹ ಮೇರು ವ್ಯಕ್ತಿತ್ವದ ಟಿಪ್ಪು ಸುಲ್ತಾನ್ ಅವರ ಜೀವನಗಾಥೆ ಸ್ಮರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುತ್ತಿದ್ದು ನವೆಂಬರ್ 10ರಂದು ಜಿಲ್ಲಾ ರಂಗಮಂದಿರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು.
ಸರ್ಕಾರಿ ಶಿಷ್ಟಾಚಾರದಂತೆ ಕಾರ್ಯಕ್ರಮ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಟಿಪ್ಪು ಸುಲ್ತಾನ್ ಅವರ ಜಯಂತಿ ಅಂಗವಾಗಿ ಕಾರವಾರದ ವಿವಿಧ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಅಥವಾ ಚಿತ್ರ ರಚನಾ ಸ್ಪರ್ಧೆ ಆಯೋಜಿಸಲಾಗುವುದು. ಈ ಮೂಲಕ ಟಿಪ್ಪು ಸುಲ್ತಾನ್ ಅವರ ವ್ಯಕ್ತಿತ್ವದ ಕುರಿತು ಮುಂದಿನ ಪೀಳಿಗೆಗೆ ಪರಿಸಚಯಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿನಾಯಕ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಮಕೃಷ್ಣ ನಾಯಕ್, ಸಮುದಾಯದ ಮುಖಂಡರು ಭಾಗವಹಿಸಿದ್ದರು.