ಮುಂಬಯಿ : ಪ್ಯಾರಡೈಸ್ ಪೇಪರ್‌ಸ್‌ನಲ್ಲಿ ಕೇಂದ್ರ ಸಚಿವ ಜಯಂತ್ ಸಿನ್ಹಾ ಮತ್ತು ಬಿಜೆಪಿ ಸಂಸದ ಆರ್ ಕೆ ಸಿನ್ಹಾ ಅವರ ಹೆಸರು ಕಂಡು ಬಂದಿರುವುದರಿಂದ ಪ್ರಧಾನಿ ಮೋದಿ ಅವರು ಈ ಇಬ್ಬರಿಂದ ತತ್‌ಕ್ಷಣವೇ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಇದೇ ರೀತಿ ವಿದೇಶಗಳಲ್ಲಿ ಭಾರತೀಯರು ಕೂಡಿಟ್ಟಿರುವ ಕಾಳಧನದ ವಿರುದ್ಧ ಶೂನ್ಯ ಕ್ರಿಯೆಯನ್ನು ತೋರಿರುವ ಮೋದಿ ಅವರು ದೇಶದ ಜನರಿಗೆ ದ್ರೋಹ ಬಗೆದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತು.
ವಿದೇಶೀ ಖಾತೆಗಳಲ್ಲಿ ಕಾಳಧನ ಹೊಂದಿರುವ ಎಲ್ಲ ಭಾರತೀಯರ ಹೆಸರನ್ನು ಪ್ರಧಾನಿ ಮೋದಿ ಬಹಿರಂಗಪಡಿಸುವರೇ ? ಪ್ಯಾರಡೈಸ್ ಪೇಪರ್‌ಸ್‌ನಲ್ಲಿ ಹೆಸರು ಕಂಡು ಬಂದಿರುವ ಜಯಂತ್ ಸಿನ್ಹಾ ಮತ್ತು ಆರ್ ಕೆ ಸಿನ್ಹಾ ಅವರಿಂದ ರಾಜೀನಾಮೆ ಪಡೆಯುವರೇ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್‌ಜೇವಾಲಾ ಅವರು ಪ್ರಶ್ನಿಸಿದರು.
ಸಿಬಿಐ ಅನ್ನು ‘ಕಾಂಪ್ರಮೈಸ್‌ಡ್ ಬ್ಯೂರೋ ಆಫ್ ಇನ್‌ವೆಸ್ಟಿಗೇಶನ್ ‘ ಎಂದೂ ಇಡಿಯನ್ನು ‘ಎನ್‌ಮಿಟಿ ಡೈರಕ್ಟೋರೇಟ್’ ಎಂದೂ ಲೇವಡಿ ಮಾಡಿರುವ ಸುರ್‌ಜೇವಾಲಾ, ವಿದೇಶದಲ್ಲಿ ಕಾಳಧನ ಕೂಡಿಟ್ಟಿರುವ ಭಾರತೀಯರ ಪ್ಯಾರಡೈಸ್ ಪಟ್ಟಿಯನ್ನು ಸುಪ್ರೀಂ ಕೋರ್ಟಿಗೆ ಒಪ್ಪಿಸುವ ಧೈರ್ಯ ಮತ್ತು ದಿಟ್ಟತನವನ್ನು ಪ್ರಧಾನಿ ಮೋದಿ ತೋರುವರೇ ಎಂದು ಸುರ್‌ಜೇವಾಲಾ ಪ್ರಶ್ನಿಸಿದರು.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ಅವರ ಪುತ್ರನಿಂದ ನಡೆಸಲ್ಪಡುತ್ತಿರುವ ಇಂಡಿಯಾ ಫೌಂಡೇಶನ್‌ನ ನಿರ್ದೇಶಕರಾಗಿರುವ ನಾಲ್ವರು ಕೇಂದ್ರ ಸಚಿವರು ಈ ಕೂಡಲೇ “ಹಿತಾಸಕ್ತಿಗಳ ಸಂಘರ್ಷ’ಕ್ಕಾಗಿ ತಮ್ಮ ಸಚಿವ ಪದಕ್ಕೆ ರಾಜೀನಾಮೆ ನೀಡುವಂತೆ ಪ್ರಧಾನಿ ಮೋದಿ ಅವರನ್ನು ಕೇಳುವ ಧೈರ್ಯ ಮಾಡುವರೇ ? ಎಂದು ಸುರ್‌ಜೇವಾಲಾ ಪ್ರಶ್ನಿಸಿದರು.
ಪ್ರಧಾನಿ ಮೋದಿ ಅವರು ಪನಾಮಾ ಪೇಪರ್‌ಸ್ ಬಹಿರಂಗಪಡಿಸಿದ್ದ ಮತ್ತು ಇದೀಗ ಪ್ಯಾರಡೈಸ್ ಪೇಪರ್‌ಸ್‌ನಲ್ಲಿ ಕಂಡು ಬಂದಿರುವ 714 ಭಾರತೀಯರ ವಿರುದ್ಧ ಯಾವುದೇ ಎಫ್ಐಆರ್ ದಾಖಲಿಸದಿರುವ ಮೂಲಕ “ಕಾಳಧನಕೋರರ ವಿರುದ್ಧ ಶೂನ್ಯ ಕ್ರಿಯೆ’ಯನ್ನು ತೋರಿರುವುದರಿಂದ ಮೋದಿ ಅವರು ದೇಶದ ಜನರಿಗೆ ದ್ರೋಹ ಬಗೆದಿದ್ದಾರೆ ಎಂದು ಸುರ್‌ಜೇವಾಲಾ ಆರೋಪಿಸಿದರು.
ಪ್ರಧಾನಿ ಮೋದಿ ಅವರು ಈ ಹಿಂದೆ ತನ್ನ ಸರಕಾರ ಅಧಿಕಾರ ವಹಿಸುವ ಮೊದಲ ನೂರು ದಿನಗಳ ಒಳಗೆ 80 ಲಕ್ಷ ಕೋಟಿ ರೂ.ಗಳ ವಿದೇಶೀ ಕಾಳಧನವನ್ನು ದೇಶಕ್ಕೆ ತಂದು ಭಾರತೀಯರ ಖಾತೆಗೆ 15 ಲಕ್ಷ ರೂ.ಗಳನ್ನು ಜಮೆ ಮಾಡುವುದಾಗಿ ಭರವಸೆ ನೀಡಿದ್ದರು. ಅದಾಗಿ ಈಗ 41 ತಿಂಗಳು ಕಳೆದಿದ್ದು ಈ ಹಂತದಲ್ಲಿ ಮೋದಿ ಅವರ ಭರವಸೆ ಪೂರ್ತಿ ಸುಳ್ಳಾಗಿದೆ. ಇನ್ನಾದರೂ ಅವರು ಪನಾಮಾ ಮತ್ತು ಪ್ಯಾರಡೈಸ್ ಪೇಪರ್‌ಸ್‌ನಲ್ಲಿ ಬಹಿರಂಗವಾಗಿ ಭಾರತೀಯ ಕಾಳಧನಕೋರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸುರ್‌ಜೇವಾಲಾ ಹೇಳಿದರು.