ಯಲ್ಲಾಪುರ; ಮೈಸೂರು ಹುಲಿ ಪ್ರಖ್ಯಾತಿ ಪಡೆದ ಟಿಪ್ಪು ಸುಲ್ತಾನ್ ಸರ್ವಧರ್ಮ ಸಮಾನತೆ ಕಾಪಾಡಿದ ಮಹಾನ್ ವ್ಯಕ್ತಿಯಾಗಿದ್ದಾರೆ , ಮಹಾನ್ ವ್ಯಕ್ತಿಗಳ ಜಯಂತಿ ಆಚರಿಸುವ ಉದ್ದೇಶ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಶುಕ್ರವಾರ ಬೆಳಗ್ಗೆ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಮೈಸೂರಿನ ಹುಲಿ ಹಜರತ್ ಟಿಪ್ಪು ಸುಲ್ತಾನ್ ಅವರ ಜಯಂತಿ ಆಚರಣೆಯನ್ನು ತಾಲೂಕ ಪಂಚಾಯತ್ ಸಭಾ ಭವನದ ಗಾಂಧಿ ಕುಟೀರದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಟಿಪ್ಪು ಸುಲ್ತಾನ್ ಕುರಿತು ಉಪನ್ಯಾಸ ನೀಡಿದ ಸಾಮಾಜಿಕ ಕಾರ್ಯಕರ್ತ ಕೈಸರ್ ಸೈಯದಲಿ ಟಿಪ್ಪು ಸುಲ್ತಾನ್ ಓರ್ವ ಮಹಾನ ರಾಜನಷ್ಟೆ ಅಲ್ಲದೆ ಶಿಕ್ಷಣ ಪ್ರೇಮಿ ಆಗಿದ್ದ, ಕನ್ನಡ ಭಾಷೆಯ ಅತ್ಯಂತ ಪ್ರೀತಿಸುತ್ತಿದ್ದ ಟಿಪ್ಪು ಕನ್ನಡ ನೆಲದ ಪ್ರಥಮ ಸ್ವತಂತ್ರ ಹೋರಾಟಗಾರನಾಗಿದ್ದಾನೆ. ಜಗತ್ತಿನಲ್ಲಿಯೇ ಪ್ರಪ್ರಥಮ ಬಾರಿಗೆ ರಾಕೆಟ್ ಅನ್ನು ಪ್ರಯೋಗಿಸಿದ ವೈಜ್ಞಾನಿಕ ಮನೋಭಾವದ ವ್ಯಕ್ತಿ , ಅಷ್ಟೇ ಅಲ್ಲದೆ ಪ್ರಪ್ರಥಮವಾಗಿ ದೇಶದಲ್ಲಿ ರೇಷ್ಮೆ ಕೃಷಿಯನ್ನು ಪರಿಚಯಿಸಿದವನಾಗಿದ್ದಾನೆ ಎಂದು ಹೇಳಿದರು.
ತಾಲೂಕ ಪಂಚಾಯತಿ ಅಧ್ಯಕ್ಷೆ ಭವ್ಯ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಪಟ್ಟಣ ಪಂಚಾಯತಿ ಅಧ್ಯಕ್ಷ ಸಿರೀಷ ಪ್ರಭು, ಖಾದಿ ಗ್ರಾಮೋದ್ಯೋಗ ಮಂಡಳಿಯ ನಿರ್ದೇಶಕ ವಿಜಯ ಮಿರಾಶಿ, ಪೊಲೀಸ್ ನಿರೀಕ್ಷಕ ಮಂಜುನಾಥ ನಾಯಕ, ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಬಸೀರಾ ಬೇಗಂ ಶೇಕ್, ಟಿಪ್ಪು ಸುಲ್ತಾನ್ ಅಭಿಮಾನಿ ವೇದಿಕೆಯ ಶಬ್ಬೀರ್ ಹಸನಸಾಬ್ ಮುಜಾವರ, ಶಮಾ ಭಾರತ ಗ್ಯಾಸ ವಿತರಕರಾದ ಎ.ಎ.ಶೇಖ ವೇದಿಕೆಯಲ್ಲಿದ್ದರು.
ತಹಶೀಲ್ದಾರ ಡಿ.ಜಿ.ಹೆಗಡೆ ಸ್ವಾಗತಿಸಿದರು, ಲಕ್ಷ್ಮೀ ಭಟ್ ಚಿಮ್ನಳ್ಳಿ ನಿರೂಪಿಸಿದರು. ಕೊನೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ವಂದಿಸಿದರು.
ನಂತರ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ರೂಪಕಗಳು ಪ್ರದರ್ಶನಗೊಂಡವು.