Home Article ಸ್ನೇಹ (ಕವನ)

ಸ್ನೇಹ (ಕವನ)

ಸ್ನೇಹವೆಂದರೆ ಸ್ನೇಹ
ಸರಿಸಾಟಿ ಮತ್ತೊಂದಿಲ್ಲ
ಅದು ನಮ್ಮದೇ ಮನಸ್ಸಿನ ಕಿಂಡಿ
ವ್ಯಕ್ತಿತ್ವದ ಕನ್ನಡಿ
ಭಾವಗಳ ಹೂರಣ
ಹಿಡಿದಿಟ್ಟ ಪದಗಳ ಪುಂಜ

ಸ್ನೇಹವೆಂದರೆ ಅದು ಸ್ನೇಹ
ಬಾಗಿಲಿಗೆ ಭದ್ರವಾಗಿ ಹಾಕಿದ ಕೊಂಡಿ
ಬೆಳಗುವ ದೀಪದ ಮುನ್ನುಡಿ
ಅನ್ನಕ್ಕೆ ಹಾಕಿದ ಸಾರು
ನೆತ್ತಿಗೇರಿದಾಗ ಕುಡಿದ ನೀರು

ಸ್ನೇಹವೆಂದರೆ ಅದು ಸ್ನೇಹ
ಎಡವುವಾಗ ಮಾಡಿದ ಸಮತೋಲನ
ತಪ್ಪಿದಾಗ ಆದ ಮನವರಿಕೆ
ಜೀವನಕ್ಕೆ ಬೇಕಾದ ತಿಳುವಳಿಕೆ
ಬದುಕಲು ಆಗುವ ಸ್ಪೂರ್ತಿ
ಮನಕ್ಕೆ ಮುದ ನೀಡುವ ನೆಮ್ಮದಿ

ಸ್ನೇಹವೆಂದರೆ ಅದು ಸ್ನೇಹ
ಪ್ರತಿ ದಿನದ ಸೂರ್ಯೋದಯ
ಮುಂಜಾನೆಯ ಇಬ್ಬನಿ
ಮುಸ್ಸಂಜೆಯ ತಂಗಾಳಿ
ನಿನ್ನೊಳಗೆ ಒಂದಾದ ಉಸಿರು
ಆ ಉಸಿರಲ್ಲಿ ಇರುವ ನಾನು

ಬಸವರಾಜ ಕಾಸೆ