muralidhar 2

ವಯಸ್ಸಾಗಿ ಸ್ವಂತವಾಗಿ ನಡೆಯಲು ಆಗದೆ ಇರುವವರ ಏಕೈಕ ಸಂಗಾತಿ ಊರುಗೋಲು. ಈ ಊರುಗೋಲನ್ನು ಹಿಡಿದುಕೊಂಡು ಅದರ ನೆರವಿನಿಂದ ನಡೆಯುತ್ತಾರೆ. ಕಣ್ಣು ಕಾಣಿಸದೇ ಇದ್ದವರು ಸಹ ಊರುಗೋಲನ್ನು ಬಳಸಿ ದಾರಿಯನ್ನು ಕಂಡುಕೊಂಡು ಹೋಗುತ್ತಾರೆ.

ಈ ವಸ್ತು ಎಲ್ಲರಿಗೂ ಕೆಲವೊಮ್ಮೆ ಅನಿವಾರ್ಯವಾಗಿರುತ್ತದೆ ಎಂದರೆ ಆಶ್ಚರ್ಯವಾಗಬಹುದು. ನಮಗೆ ಕಣ್ಣು ಸರಿಯಾಗಿಕಾಣುತ್ತದೆ, ಇನ್ನೂ ನಾವು ನಮಗೇಕೆ ಊರುಗೋಲು ಎಂದು ಹೇಳಬಹುದು. ನಮಗಿನ್ನೂ ಊರುಗೋಲನ್ನು ಹಿಡಿದುಕೊಂಡು ನಡೆಯುವಷ್ಟು ವಯಸ್ಸಾಗಿಲ್ಲ ನಮಗೆ ಈಗಲೇ ಊರುಗೋಲಿನ ಅವಶ್ಯಕತೆ ಇಲ್ಲ ಎಂದು ಹೇಳುವುದು ಸಹಜ. ಆದರೆ ಮನುಷ್ಯನು ತನ್ನ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಊರುಗೋಲನ್ನು ಅವಲಂಬಿಸಿರುತ್ತಾನೆ ಎಂದರೆ ಆಶ್ಚರ್ಯವಾಗಬಹುದಲ್ಲವೇ? ಆ ರೀತಿ ಅವಲಂಬಿಸಿರುವ ನಿಜವಾದ ಊರುಗೋಲು ಎಂದರೆ ನಂಬಿಕೆಯುಳ್ಳ ಸಹಾಯಕ ಅಥವಾ ಬೆಂಬಲಗಾರ ಎಂದು ಅರ್ಥ. ಮನುಷ್ಯನಿಗೆ ಯಾವುದೇ ಕೆಲಸ ನಿರ್ವಹಿಸಲು ಕಷ್ಟವಾದಾಗ, ಅಥವಾ ಕೆಲವೊಮ್ಮೆ ತಿಳಿಯದೇ ಇದ್ದಾಗ, ಅಥವಾ ಹೆಚ್ಚಿನ ಕೆಲಸದ ಒತ್ತಡ ಇದ್ದು ಕೆಲಸ ಮಾಡಲು ಸಾಧ್ಯವಿಲ್ಲದಾಗ, ಬೇರೊಬ್ಬರಿಂದ ಊರುಗೋಲಿನಂತೆ ಸಹಾಯ ಪಡೆದು ಕೆಲಸ ಪೂರೈಸುತ್ತಾನೆ. ಆದರೆ ಪ್ರತಿಯೊಂದಕ್ಕೂ ನಂಬಿಕೆ ಮುಖ್ಯ. ನಂಬಿಕೆ ಕಳೆದುಕೊಂಡರೆ ಊರುಗೋಲು ಮುರಿದಂತೆಯೇ ಆಗುತ್ತದೆ.

ನಿಜ ಜೀವನದಲ್ಲಿ ನಂಬಿಕೆಯುಳ್ಳ ಸಹಾಯಕರೇ ಊರುಗೋಲಿನಂತೆ ಕೆಲಸ ನಿರ್ವಹಿಸುತ್ತಾರೆ. ಪ್ರತಿಯೊಂದು ಕೆಲಸವನ್ನು ಒಬ್ಬನೇ ಮಾಡಲು ಸಾಧ್ಯವಿರುವುದಿಲ್ಲ. ನಂಬಿಕೆಯುಳ್ಳ ಯಾರಾದರೂ ಸಿಕ್ಕರೆ ಅವರಿಗೇ ತಮ್ಮ ಕೆಲಸವನ್ನು ವಹಿಸಿ ಅವರಿಂದ ಸಹಾಯ ಪಡೆಯುಬಹುದು.
ಕಛೇರಿಗಳಲ್ಲಿ ಕೆಲಸಗಾರರೇ ಯಜಮಾನನ ಊರುಗೋಲಿನಂತೆ ಸಹಾಯ ಮಾಡುವ ಸಹಾಯಕರು. ಅವರನ್ನು ನಂಬಿ ಯಜಮಾನನು ಊರುಗೋಲಿನ ಸಹಾಯ ಪಡೆಯುವಂತೆ ನಂಬಿ ಕಛೇರಿ ನಡೆಸುತ್ತಿರುತ್ತಾನೆ.

ಊರುಗೋಲು ಎಂದು ಒಂದು ದೊಣ್ಣೆಂiÀiನ್ನು ಸುಮ್ಮನೆ ಹಿಡಿದುಕೊಂಡು ಹೋಗಲು ಸಾಧ್ಯವಿಲ್ಲ. ಊರುಗೋಲನ್ನು ಮುಂದಕ್ಕೆ ಊರಿ, ಮುಂದೆ ಸಾಗಬೇಕಾಗಿರುತ್ತದೆ. ಅದಕ್ಕೆ ತಕ್ಕಹಾಗೆ ಊರುಗೋಲನ್ನು ಸಿದ್ದಪಡಿಸಬೇಕು. ಗಟ್ಟಿಯಾದ ದೊಣ್ಣೆ ಇರಬೇಕು, ಸರಿಯಾಗಿ ಹಿಡಿದುಕೊಳ್ಳಲು ಹಿಡಿ ಇರಬೇಕು. ಹಾಗಿದ್ದರೇ ಮಾತ್ರ ಊರುಗೋಲನ್ನು ಹಿಡಿದುಕೊಂಡು ಮುಂದೆ ಸಾಗಬಹುದು. ತೆಳುವಾದ ದೊಣ್ಣೆ ಇದ್ದರೆ ಊರುಗೋಲು ಮುರಿದುಹೋಗುವ ಸಂಭವ ಇರುತ್ತದೆ.

ಅದೇರೀತಿ, ನಾವುಗಳು ಆರೋಗ್ಯ ಉಳ್ಳ ನಂಬಿಕೆಯುಳ್ಳವರನ್ನು ಸಹಾಯಕರನ್ನಾಗಿ ಮಾಡಿಕೊಂಡು ಅವರಿಂದ ಸಹಾಯ ಪಡೆಯಬೇಕು. ಇಲ್ಲಿ ಗಟ್ಟಿಯಾದ ದೊಣ್ಣೆ ಎಂದರೆ ಆರೋಗ್ಯಉಳ್ಳ ಮನುಷ್ಯ ಎಂದು ಅರ್ಥ. ಹಾಗೆಯೇ ಗಟ್ಟಿಯಾದ ಹಿಡಿ ಎಂದರೆ ನಂಬಿಕೆಯುಳ್ಳವರು ಎಂದು ಅರ್ಥ. ಅಂದರೆ ಜೀವನದ ಊರುಗೋಲಿಗೆ ನಂಬಿಕೆಯೇ ಹಿಡಿಯಾಗಿರುತ್ತದೆ. ಆ ನಂಬಿಕೆಯಿಂದಲೇ ಕೆಲಸವನ್ನು ಪಡೆಯ ಬೇಕಾಗಿರುತ್ತದೆ. ಹಿಡಿಯೇ ಕಿತ್ತುಹೋದರೆ ಊರುಗೋಲು ಪ್ರಯೋಜನಕ್ಕೆ ಬಾರದು. ಅದೇರೀತಿ ಸಹಾಯಕರ ಮೇಲೆ ನಂಬಿಕೆಯೇ ಹೊರಟು ಹೋದಮೇಲೆ ಅವರಿಂದ ಕೆಲಸವನ್ನು ಪಡೆಯಲು ಹೇಗೆ ಸಾಧ್ಯ?

RELATED ARTICLES  ಮರೆಯಾದ ಮುರುಡೇಶ್ವರದ ಮಾಣಿಕ್ಯ

ಕೆಲವೊಮ್ಮೆ ನೆಲ ಸರಿ ಇಲ್ಲದೆ ಇದ್ದಾಗ ಗಟ್ಟಿಯಾಗಿ ಹಿಡಿದಿರುವ ಊರುಗೋಲು ಸಹ ಜಾರಿ ಹಿಡಿದಿರುವವರು ಬೀಳಬಹುದು. ಅದೇರೀತಿ ನಂಬಿದವರು ಕೆಲವರು ಮೋಸಮಾಡಿ ಕೆಳಕ್ಕೆ ಬೀಳಿಸಬಹುದು. ಇದಕ್ಕೆ ಜಾಗರೂಕರಾಗಿರಬೇಕು ಅಷ್ಟೆ. ಎಷ್ಟೇ ಜಾಗರೂಕರಾಗಿದ್ದರೂ ಸಹ ಒಮ್ಮೊಮ್ಮೆ ನಂಬಿದವರು ನಂಬಿಸಿ ಮೋಸ ಮಾಡುತ್ತಾರೆ. ತಮ್ಮ ಸ್ವಾರ್ಥಕ್ಕಾಗಿ ನಂಬಿಕೆ ಉಳ್ಳವರಂತೆ ನಟಿಸಿ, ನಂಬಿಸಿ ಅವರ ಕೆಲಸವಾಗುವವರೆಗೆ ಮಾತ್ರ ಇದ್ದು, ಲಾಭ ಪಡೆದು ಹಳ್ಳಕ್ಕೆ ತಳ್ಳಿ ಹೋಗುತ್ತಾರೆ. ಇಂಥವರನ್ನು ನಂಬಿ ಕೆಲವು ಮನುಷ್ಯರು ಮೋಸಹೋಗುತ್ತಾರೆ.

ಬುದ್ದಿವಂತ ನಂಬಿಕಸ್ಥ ಎಂದು ನಂಬಿ ಅವರಿಗೆ ಏನಾದರೂ ಕೆಲಸ ಮಾಡಲು ಹಣ ನೀಡಿದರೆ, ಈ ಕಡೆ ಹಣವೂ ಇಲ್ಲ ಅವರೂ ಬರುವುದಿಲ್ಲದಂತಾಗಿ ನಮ್ಮ ಹಣವೂ ಹೋಗುತ್ತದೆ.
ಇನ್ನೂ ಕೆಲವು ಸಂದರ್ಭಗಳಲ್ಲಿ ಕೆಲವರನ್ನು ಬುದ್ದಿವಂತರೆಂದು ಎಲ್ಲಾ ತಿಳಿದಿರುವರೆಂದು, ಎಲ್ಲದರಲ್ಲಿಯೂ ಪ್ರವೀಣರು ಹಾಗೂ ಪ್ರಭುದ್ದರು (ಇxಠಿeಡಿಣs)ಎಂದು ನಂಬಿ ಕೆಲವು ಕೆಲಸ ಮಾಡಿಸಲು ಹೋದಾಗ, ಅವರು ಅವರ ಸ್ವಂತ ಜನಗಳಿಗಾಗಿ ಅವರ ವಿಶ್ವಾಸಗಳಿಸಲು, ಅವರ ಹಿತವನ್ನು ಬಲಿಕೊಡುವುದರ ಜೊತೆಗೆ ನಂಬಿದವರ ಹಿತವನ್ನೂ ಸಹ ಬಲಿಕೊಟ್ಟು ನಂಬಿದವರಿಗೆ ನಷ್ಟವಾಗುವಂತೆ ಮಾಡುತ್ತಾರೆ. ತಮ್ಮ ಸ್ವಂತ ಜನರ ವಿಶ್ವಾಸಗಳಿಸಲು ಅವರ ಹಿತವನ್ನು ಬಲಿಕೊಟ್ಟು ಸತ್ಯವಾದ ಅಂಶವನ್ನು ಮರೆಮಾಚಿದರೆ ಕೆಲವರಿಗೆ ಅನ್ಯಾಯವಾಗಬಹುದು. ಇದನ್ನು ದೇವರೂ ಮೆಚ್ಚುವುದಿಲ್ಲ. ಯಾವಾಗಲೂ ಒಬ್ಬರ ಮೆಚ್ಚುಗೆಗೋಸ್ಕರ ಸತ್ಯವನ್ನು ಮರೆಮಾಚಬಾರದು. ಈಗಿನ ಕಾಲದಲ್ಲಿ ಕೆಲವೊಮ್ಮೆ ಯಾರನ್ನೂ ನಂಬುವುದಕ್ಕೆ ಆಗುವುದಿಲ್ಲ. ಯಾರೇ ಆಗಲೀ ಬುದ್ದಿವಂತರಾದವರು ನಂಬಿದವರಿಗೆ ತಮ್ಮ ಸ್ವಂತ ಜನರ ಹಿತಕ್ಕಾಗಿ ಬೇರೆಯವರ ಹಿತವನ್ನು ಬಲಿಕೊಡುವುದು ತರವಲ್ಲ. ಇರುವ ಸತ್ಯ ಹೇಳಲೇ ಬೇಕು. ಇದರಿಂದ ಯಾರಿಗೂ ಅನ್ಯಾಯವಾಗುವುದಿಲ್ಲ. ಸತ್ಯವನ್ನು ತಿಳಿಯದೇ ಇದ್ದವರಿಗೆ ಸತ್ಯವನ್ನು ಹೇಳುವುದರಲ್ಲಿ ತಪ್ಪೇನಿಲ್ಲ.

ಯಾರಾದರೂ ಸ್ವಲ್ಪ ಒಳ್ಳೆಯವರಂತೆ ಹಾಗೂ ಮೃದು ಸ್ವಭಾವದವರಂತೆ ಕಂಡರೆ ಸಾಕು ಹೇಗಾದರೂ ಮಾಡಿ ಅವರನ್ನು ನಂಬಿಸಿ, ಅವರಿಂದ ಕೆಲಸವನ್ನು ಗಿಟ್ಟಿಸಿಕೊಂಡು ತಾವು ಲಾಭ ಪಡೆದು ನಂಬಿದವರಿಗೆ ಮೋಸ ಮಾಡುತ್ತಾರೆ. ಉದಾಹರಣೆಗೆ ನಿರುದ್ಯೋಗಿಗಳು ಕೆಲಸಕ್ಕಾಗಿ ಹಂಬಲಿಸುತ್ತಿದ್ದಾಗ, ಅವರಿಗೆ ಕೆಲಸ ಕೊಡಿಸುತ್ತೇನೆಂದು ನಂಬಿಸಿ ಅವರಿಂದ ಹಣವನ್ನು ಪಡೆದು ಮೋಸ ಮಾಡುವುದು, ಹಾಗೆಯೇ ತಮ್ಮ ಮುಂದಿನ ಮಕ್ಕಳ ಭವಿಷ್ಯಕ್ಕಾಗಿ ಅಲ್ಪ ಸ್ವಲ್ಪ ಹಣವನ್ನು ಕೂಡಿಟ್ಟುಕೊಂಡು ಮನೆ ಯಲ್ಲಿದ್ದರೆ ರಕ್ಷಣೆಯಲ್ಲಿ ಇರುವುದಿಲ್ಲ ಯಾವುದಾದರೂ ಬಡ್ಡಿ ಬರುವಲ್ಲಿ ಹಣ ತೊಡಗಿಸಿದರೆ ಹಣವೂ ಬೆಳೆಯುತ್ತದೆ ಎಂದು ನಂಬಿ ಬೇರೆಯವರಿಗೆ ಕೊಟ್ಟರೆ. ಹಣ ಪಡೆದವರು ನಂಬಿದವರಿಗೆ ಮೋಸಮಾಡಿ ಹಣ ಬಂದ ತಕ್ಷಣ ಕೈಗೆ ಸಿಗದಂತೆ ಹೋಗುತ್ತಾರೆ. ಇದೇರೀತಿ ನಿವೇಶನ ಪಡೆಯುವ ಬಗ್ಗೆಯೂ ಕೆಲವರು ಮೋಸ ಹೋಗುವುದುಂಟು.

RELATED ARTICLES  ಏಕೋಹಂ ಬಹುಸ್ಯಾಮ್

ಕೆಲವು ಸಮಯದಲ್ಲಿ ಒಂದು ಸಂಸ್ಥೆಯಲ್ಲಿ ಬಹಳ ಕಾಲದಿಂದ ಕೆಲಸ ನಿರ್ವಹಿಸಿ ನಂಬಿಕೆಯನ್ನು ಇಟ್ಟುಕೊಂಡಿರುವವರಿಗೆ ಆ ಸಂಸ್ಥೆಯ ಯಜಮಾನನು ಇವರನ್ನು ನಂಬಿ ಸಂಸ್ಥೆಯ ಆಡಳಿತವನ್ನು ನೋಡಿಕೊಳ್ಳಲು ಹೇಳಿದರೆ, ಇವರು ನಂಬಿಕೆ ಉಳಿಸಿಕೊಳ್ಳಲು ಯಜಮಾನನಿಗೆ ನಿಯತ್ತಿನಿಂದ ಇರಬೇಕು. ಸಿಕ್ಕಿದ್ದೇ ಅವಕಾಶ ಎಂಬಂತೆ ಯಜಮಾನನಿಗೆ ಮೋಸಮಾಡಿ ತಾನೂ ಮಾತ್ರ ಉದ್ದಾರವಾಗಲು ನೋಡಿದರೆ, ಬೇಲಿಯೇ ಎದ್ದು ಹೊಲ ಮೇದಂತೆ ಆಗುತ್ತದೆ.

ಕಲಿಯುವ ಮಕ್ಕಳಿಗೆ ಶಾಲೆಯ ಉಪಾದ್ಯಾಯರುಗಳೇ ಊರುಗೋಲು ಉಪಾದ್ಯಾಯರ ಸಹಾಯದಿಂದ ವಿದ್ಯೆಯನ್ನು ಕಲಿತು ದೊಡ್ಡವರಾಗಿ ವಿದ್ಯಾವಂತರಾಗುತ್ತಾರೆ. ಉಪಾಧ್ಯಾಯರುಗಳೇ ಒಂದು ಶಾಲೆಯ ಊರುಗೋಲು ಇದ್ದಂತೆ. ವಿದ್ಯಾ ಸಂಸ್ಥೆಗಳು ಈ ಉಪಾಧ್ಯಾಯರನ್ನು ನಂಬಿ ಸಂಸ್ಥೆಯನ್ನು ನಡೆಸುತ್ತಿರುತ್ತಾರೆ. ಉಪಾಧ್ಯಾಯರುಗಳು ಮಕ್ಕಳಿಗೂ ಸಂಸ್ಥೆಗಳಿಗೂ ಬಹಳ ಮಹತ್ತರವಾಗಿರುತ್ತಾರೆ.

ವಯಸ್ಸಾದ ತಂದೆ ತಾಯಿಯರಿಗೆ ಮಕ್ಕಳೇ ಊರುಗೋಲಾಗಿರುವುದು ಸಹಜ. ತಂದೆ ತಾಯಿಯರಿಗೆ ತಮ್ಮ ಕೆಲಸ ಮಾಡಿಕೊಳ್ಳಲು ಆಗದ ಪರಿಸ್ಥಿತಿಯಲ್ಲಿ ಮಕ್ಕಳು ಅವರ ಸೇವೆಯನ್ನು ಮಾಡುವ ಮೂಲಕ ಊರುಗೋಲಾಗಿರುತ್ತಾರೆ. ತಂದೆ ತಾಯಂದರಿಗೆ ಅವರು ವಯಸ್ಸಾದ ಕಾಲಕ್ಕೆ ಮಕ್ಕಳೇ ಊರುಗೋಲಾಗಿ ಇರಬೇಕಾಗಿರುವುದು ಮಕ್ಕಳ ಕರ್ತವ್ಯ. ಆದರೆ ತನ್ನ ಪತ್ನಿಯ ಮಾತುಕೇಳಿ ತಂದೆ ತಾಯಿಯರಿಗೆ ಊರುಗೋಲಾಗುವ ಬದಲು, ತಂದೆ ತಾಯಂದಿರು ಭಾರವಾಗಿದ್ದಾರೆಂದು ಅವರನ್ನು ವೃದ್ದಾಶ್ರಮಕ್ಕೆ ಸೇರಿಸಿದರೆ, ಅದು ನಂಬಿದ ಊರುಗೋಲು ಮುರಿದಂತೆ ಆಗುತ್ತದೆ.

ಭಕ್ತರಿಗೆ ದೇವರ ಧ್ಯಾನವೇ ಊರುಗೋಲಿದ್ದಂತೆ. ದೇವರನ್ನು ನಂಬಿ ಜೀವನ ನಡೆಸಿದರೆ ದೇವರು ಒಂದಲ್ಲಾ ಒಂದು ರೀತಿಯಲ್ಲಿ ನಮಗೆ ಸಹಾಯ ಮಾಡುತ್ತಾನೆ. ದೇವರು ನೇರವಾಗಿ ಎದುರಿಗೆ ಬಂದು ಸಹಾಯ ಮಾಡಲಾರದೇ ಹೋದರೂ ಕೆಲವರ ಮುಖಾಂತರ ನಮಗೆ ಸಹಾಯವಾಗುತ್ತದೆ.

ರಾಜಕೀಯದವರಿಗೆ ಅವರ ಬೆಂಬಲಿಗರೇ ಊರುಗೋಲು ಇದ್ದಂತೆ. ಹೆಚ್ಚಿನ ಮತದಾರರ ಬೆಂಬಲ ಸಹಾಯ ಇಲ್ಲದಿದ್ದರೆ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ರಾಜಕಾರಣಿಯೂ ಚುನಾವಣೆಯಲ್ಲಿ ಗೆಲುವು ಸಾಧಿಸಲು ತನ್ನ ಬೆಂಬಲಿಗರನ್ನು ಆಶ್ರಯಿಸಿರುತ್ತಾರೆ. ನಂಬಿಕೆಯುಳ್ಳ ಬೆಂಬಲಿಗರನ್ನು ಆಯ್ಕೆ ಮಾಡಿ ತನಗೆ ಸಹಾಯ ಮಾಡಲು ಇವರನ್ನು ಆಶ್ರಯಿಸಿರುತ್ತಾನೆ.

ವಾಹನ ಮಾಲೀಕರಿಗೆ ವಾಹನ ಚಾಲಕರೇ ಊರುಗೋಲು ಇದ್ದಂತೆ. ಇವರನ್ನೇ ನಂಬಿ ವಾಹನಗಳ ಮಾಲೀಕರುಗಳು ಪ್ರಯಾಣ ಮಾಡುತ್ತಿರುತ್ತಾರೆ. ಇದಕ್ಕಾಗಿ ನಂಬಿಕೆ ಯುಳ್ಳ ಒಳ್ಳೆ ಚಾಲಕರನ್ನು ನೇಮಿಸಿಕೊಳ್ಳುತ್ತಾರೆ.

ಒಟ್ಟಿನಲ್ಲಿ ಊರುಗೋಲಾಗಿ ಮನುಷ್ಯನು ಬೇರೆಯವರಿಗೆ ಸಹಾಯ ಮಾಡುತ್ತಾ ಇದ್ದರೆ ಮಾತ್ರ ಜೀವನಕ್ಕೆ ಒಂದು ಅರ್ಥ ಇರುತ್ತದೆ.