ಬೆಂಗಳೂರು: ವಿಶ್ವಸುಂದರಿ-2017 ಆಗಿ ಆಯ್ಕೆಯಾಗಿರುವ ಹರಿಯಾಣದ ವೈದ್ಯ ವಿದ್ಯಾರ್ಥಿನಿ ಮಾನುಷಿ ಚಿಲ್ಲರ್ ರಾಜ ರಾಜ್ಯಧಾನಿ ನಮ್ಮ ಬೆಂಗಳೂರಿನೊಂದಿಗೂ ನಂಟನ್ನು ಹೊಂದಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಹೌದು 17 ವರ್ಷಗಳ ಬಳಿಕ ಭಾರತಕ್ಕೆ ವಿಶ್ವ ಸುಂದರಿ ಪಟ್ಟ ತಂದುಕೊಟ್ಟ ಮಾನುಷಿ ಚಿಲ್ಲರ್ ಬೆಂಗಳೂರಿನಲ್ಲಿ ಕೂಚಿಪುಡಿ ನೃತ್ಯವನ್ನು ಕಲಿತಿದ್ದಾರೆ.
ಹರಿಯಾಣ ಮೂಲದವರಾದ ಮಾನುಷಿ ತಂದೆ ಡಾ.ಮಿತ್ರಾ ಬಸು ಹಾಗೂ ತಾಯಿ ಡಾ.ನೀಲಮ್ ದಂಪತಿ ಬೆಂಗಳೂರಿನಲ್ಲಿ ಐದು ವರ್ಷಗಳ ಕಾಲ ವಾಸವಿದ್ದರು. 1999ರಿಂದ 2004ರವರೆಗೆ ಬೆಂಗಳೂರಿನಲ್ಲಿ ವಾಸವಿದ್ದ ಸಮಯದಲ್ಲಿ ಮಾನುಷಿ ಕೂಚಿಪುಡಿ ನೃತ್ಯದ ತರಬೇತಿ ಪಡೆದಿದ್ದರು.
ಮಾನುಷಿ ಜನಿಸಿದಾಗ 1997ರಲ್ಲಿ ಅಪ್ಪ ಮಿತ್ರಾ ಬಸು ಬೆಂಗಳೂರಿನ ಡಿಆರ್‌ಡಿಒದಲ್ಲಿ ಹಿರಿಯ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದರು. ಹರಿಯಾಣ (ರೋಹ್ಟಕ್)ದಲ್ಲಿ ಎರಡು ವರ್ಷ ಕಳೆದ ಬಳಿಕ ಅಮ್ಮ ನೀಲಮ್ ಮಗಳನ್ನು ಕರೆದುಕೊಂಡು ಬೆಂಗಳೂರಿಗೆ ಬಂದು ನೆಲೆಸಿದರು.
ಮಾನುಷಿ ಎಲ್‌ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಯವರೆಗಿನ ವ್ಯಾಸಂಗವನ್ನು ಬೆಂಗಳೂರಿನಲ್ಲೇ ಪಡೆದಿದ್ದಾರೆ. ಬಾಲ್ಯದಲ್ಲೇ ಓದಿನಲ್ಲಿ ಚುರುಕಾಗಿದ್ದ ಮಾನುಷಿ ತರಗತಿಯಲ್ಲಿ ಸದಾ ಮೊದಲ ಸ್ಥಾನ ಪಡೆಯುತ್ತಿದ್ದರು. ಯಾವುದನ್ನೂ ಪಟ್ಟು ಬಿಡದೆ ಮಾಡುತ್ತಿದ್ದರು. ಬೆಂಗಳೂರಿನಿಂದ ಹರಿಯಾಣಕ್ಕೆ ತೆರಳಿದ ಬಳಿಕ ಮತ್ತೊಂದು ಶಾಲೆಗೆ ಸೇರ್ಪಡೆಗೊಳಿಸಲಾಯಿತು. ಅಲ್ಲಿಯೂ ಆಕೆ ಎಲ್ಲದರಲ್ಲೂ ಮೊದಲ ಸ್ಥಾನ ಪಡೆಯುತ್ತಿದ್ದರು ಎಂದು ಮಾನುಷಿ ಸಂಬಂಧಿಕರಾದ ಡಾ.ಉಷಾ ಚಿಲ್ಲರ್ ತಿಳಿಸಿದ್ದಾರೆ.
ಉಷಾ ಪತಿ ಡಾ.ದಿನೇಶ್ ಚಿಲ್ಲರ್ ಮಾತನಾಡಿ ”ಆಲ್ ಇಂಡಿಯಾ ಮೆಡಿಕಲ್ ಪ್ರವೇಶ ಪರೀಕ್ಷೆಯನ್ನು ಮಾನುಷಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಪೂರೈಸಿದ್ದಳು. ದ್ವಿತೀಯ ಪಿಯುಸಿಯಲ್ಲಿ ಎಲ್ಲ ವಿಷಯಗಳಲ್ಲಿ ಶೇ.96 ಅಂಕ ಗಳಿಸಿದ್ದಳು ಎಂದು ತಿಳಿಸಿದ್ದಾರೆ.