ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಗಾಂಧಿ ಕುಟುಂಬದ ಸದಸ್ಯ ಯುವ ಮುಖಂಡ, ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ಉತ್ತರ ಪ್ರದೇಶದ ಹಲವಾರು ಕಾಂಗ್ರೆಸ್ ಮುಖಂಡರು ಈ ಸುದ್ದಿಯನ್ನು ಖಚಿತಪಡಿಸುವ ರೀತಿಯ ಹೇಳಿಕೆ ನೀಡುತ್ತಿದ್ದಾರೆ.
ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಅವರ ಸೋದರ ವರುಣ್ ಗಾಂಧಿ ಕಾಂಗ್ರೆಸ್ ಸೇರಬಹುದು. ಅವರಿಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯ ಅಥವಾ ಪದಾಧಿಕಾರಿ ಹುದ್ದೆ ಕೊಡಬಹುದು ಎಂದು ಹೇಳಲಾಗುತ್ತಿದೆ.
ಉತ್ತರ ಪ್ರದೇಶದ ಸುಲ್ತಾನ್‌ಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ವರುಣ್ ಗಾಂಧಿ ಕಳೆದ ಕೆಲ ವರ್ಷಗಳಿಂದ ಬಿಜೆಪಿಯಲ್ಲಿ ಕಡೆಗಣಿಸಲ್ಪಟ್ಟಿದ್ದಾರೆ. ಪಕ್ಷದ ಯಾವುದೇ ಸಭೆ ಸಮಾರಂಭಗಳಲ್ಲೂ ಅವರು ಭಾಗವಹಿಸುತ್ತಿಲ್ಲ. ಉತ್ತರ ಪ್ರದೇಶದ ಬಿಜೆಪಿ ಸೇರಿದಂತೆ ಒಟ್ಟಾರೆಯಾಗಿ ವರುಣ್ ಗಾಂಧಿಯನ್ನು ಎಲ್ಲರೂ ನಿರ್ಲಕ್ಷಿಸುತ್ತಿದ್ದಾರೆ ಎನ್ನಲಾಗಿದ್ದು ವರುಣ್ ಮುಂಬರುವ 2019ರ ಲೋಕಸಭಾ ಚುನಾವಣೆಯ ಮುನ್ನ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ವರುಣ್ ಗಾಂಧಿ ಬಿಜೆಪಿಯ ಹಲವು ನಿಲುವು ಮತ್ತು ಕಾರ್ಯಕ್ರಮಗಳನ್ನು ಆಗಾಗ ಟೀಕಿಸುತ್ತಲೇ ಬಂದಿದ್ದಾರೆ. ಮಾತ್ರವಲ್ಲದೆ ತಾನು ಜಾತ್ಯತೀತ ಮನೋಭಾವದ ನಾಯಕ ಎಂದು ಗುರುತಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದಾರೆ. ವರುಣ್ ಗಾಂಧಿಯನ್ನು ಈ ಕಾರಣಗಳಿಗಾಗಿ ಬಿಜೆಪಿ ಕಡೆಗಣಿಸುತ್ತಿದೆ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರ ಅಂಬೋಣ.
ತನ್ನ ಕ್ಷೇತ್ರವಾದ ಸುಲ್ತಾನ್‌ಪುರ್, ತಾಯಿ ಮನೇಕಾ ಗಾಂಧಿಯವರ ಕ್ಷೇತ್ರ ಪಿಲಿಭ್ಹಿತ್ ಮತ್ತು ಪಕ್ಕದ ಲಖೀಮ್‌ಪುರ್ ಖೀರಿಯಲ್ಲೂ ವರುಣ್ ವ್ಯಾಪಕ ಜನ ಬೆಂಬಲ ಹೊಂದಿದ್ದು ವರುಣ್ ಕಾಂಗ್ರೆಸ್ ಸೇರಿದರೆ ಉತ್ತರ ಪ್ರದೇಶದಲ್ಲಿ ಗಟ್ಟಿ ಎಲೆಯೂರಲು ಹೆಣಗಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಇದರಿಂದ ಭಾರೀ ಶಕ್ತಿ ಬರಲಿದೆ ಎಂದು ಹಲವು ಕಾಂಗ್ರೆಸ್ ನಾಯಕೌ ಅಭಿಪ್ರಾಯಪಟ್ಟಿದ್ದಾರೆ.
ವಿಶೇಷವೆಂದರೆ ಇದುವರೆಗೂ ವರುಣ್ ರಾಹುಲ್ ಗಾಂಧಿ ವಿರುದ್ಧ ನೇರ ವಾಗ್ದಾಳಿ ಮಾಡಿಲ್ಲ. ವರುಣ್ ಕಾಂಗ್ರೆಸ್ ಸೇರ್ಪಡೆಗೆ ಪ್ರಿಯಾಂಕಾ ಗಾಂಧಿ ನೆರವಾಗಬಹುದು ಎನ್ನಲಾಗಿದೆ. ಪ್ರಿಯಾಂಕಾ ಮತ್ತು ವರುಣ್ ತೀರಾ ಅನ್ಯೋನ್ಯವಾಗಿದ್ದಾರೆ.