Satwadhara News

Author: satwadharadmin

  • ರಾಜ್ಯಕ್ಕೆ 6 ನೇ ರ್ಯಾಂಕ್ ಪಡೆದ ವಿಧಾತ್ರಿಯ ವಿದ್ಯಾರ್ಥಿನಿ : ನಿರಂತರ ಐದನೇ ವರ್ಷದ ಸಾಧನೆ.

    ರಾಜ್ಯಕ್ಕೆ 6 ನೇ ರ್ಯಾಂಕ್ ಪಡೆದ ವಿಧಾತ್ರಿಯ ವಿದ್ಯಾರ್ಥಿನಿ : ನಿರಂತರ ಐದನೇ ವರ್ಷದ ಸಾಧನೆ.

    ಕುಮಟಾ : ಮಂಗಳೂರಿನ ವಿಧಾತ್ರಿ ಅಕಾಡೆಮಿ, ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಜೊತೆಗೆ ಒಡಂಬಡಿಕೆ ಮಾಡಿಕೊಂಡು ನಡೆಸುತ್ತಿರುವ ತಾಲೂಕಿನ ವಿದ್ಯಾಗಿರಿಯ ಸರಸ್ವತಿ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಈ ಹಿಂದಿನಂತೆ ರಾಜ್ಯಮಟ್ಟದ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ೧ ರಲ್ಲಿ ಅತ್ಯುತ್ತಮ ಅಂಕಗಳಿಸಿ ರಾಜ್ಯ ಮಟ್ಟದಲ್ಲಿ 6 ನೇ ಸ್ಥಾನವನ್ನು ಪಡೆದು ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ.

    ವಿಜ್ಞಾನ ವಿಭಾಗದಲ್ಲಿ ಅನನ್ಯಾ ಭಾಗ್ವತ್ ೬೦೦ ಕ್ಕೆ ೫೯೪ ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ 6ನೇ ಸ್ಥಾನ ಪಡೆದು ಕಾಲೇಜಿಗೆ ಪ್ರಥಮಳಾಗಿ ಹೊರಹೊಮ್ಮಿದ್ದಾಳೆ. ಜೊತೆಗೆ ಉತ್ತರ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಸ್ವಾತಿ ಗಾಯತೊಂಡೆ ಹಾಗೂ ಸಾಗರ ನಾಯ್ಕ 588 ಅಂಕಗಳಿಸಿ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸುಮೇಧಾ ಭಟ್ 587 ಅಂಕಗಳಿಸಿ ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟು 205 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ115 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಹಾಗೂ ಉಳಿದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

    ವಿಧಾತ್ರಿ ಅಕಾಡೆಮಿಯ ಉಪನ್ಯಾಸಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಕಳೆದ ಐದು ವರ್ಷಗಳಿಂದಲೂ ರಾಜ್ಯಮಟ್ಟದಲ್ಲಿ ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳು, ಈ ಸಾಲಿನಲ್ಲಿಯೂ ತಮ್ಮ ಸಾಧನೆ ಮುಂದುವರೆಸಿದ್ದಾರೆ.

    ಇನ್ನು ವಾಣಿಜ್ಯ ವಿಭಾಗದಲ್ಲಿ ಅನನ್ಯಾ ಭಟ್ಟ ೬೦೦ ಕ್ಕೆ 586 ಅಂಕಗಳಿಸಿ ಕಾಲೇಜಿಗೆ ಪ್ರಥಮಳಾಗಿ ಹೊರಹೊಮ್ಮಿದ್ದಾಳೆ. ಸಮರ್ಥ ಕಾಮತ್ 578 ಅಂಕಗಳಿಸಿ ಕಾಲೇಜಿಗೆ ದ್ವಿತೀಯ ಸ್ಥಾನ ಹಾಗೂ ಸಂಜವ ಡಿಸೋಜ 568 ಅಂಕಗಳಿಸಿ ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟು 36 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 20 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಮತ್ತು ಉಳಿದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

    ವಿದ್ಯಾರ್ಥಿಗಳ ಈ ಸಾಧನೆಗೆ ಕೊಂಕಣ ಎಜುಕೇಶನ್ ಟ್ರಸ್ಟ್ ನ ಪದಾಧಿಕಾರಿಗಳು, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ಪ್ರಾಂಶುಪಾಲ ಕಿರಣ ಭಟ್ಟ, ಉಪ ಪ್ರಾಂಶುಪಾಲೆ ಸುಜಾತಾ ಹೆಗಡೆ, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

  • ಬಜೆಟ್‌ನಲ್ಲಿ ಅನ್ನದಾತರಿಗೆ ಸಿಕ್ಕಿದ್ದೇನು..?

    ಬಜೆಟ್‌ನಲ್ಲಿ ಅನ್ನದಾತರಿಗೆ ಸಿಕ್ಕಿದ್ದೇನು..?

    ಸಿಎಂ ಸಿದ್ದರಾಮಯ್ಯ 15ನೇ ಬಾರಿಗೆ ಬಜೆಟ್‌ ಮಂಡನೆ ಮಾಡ್ತಿದ್ದಾರೆ, ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಬಜೆಟ್‌ ಮಂಡನೆ ಮಾಡುತ್ತಿರುವುದರಿಂದ ಸಹಜವಾಗಿ ಭಾರಿ ನಿರೀಕ್ಷೆಯಿತ್ತು. ಇದರ ನಡುವೆ ಅನ್ನದಾತರಿಗೆ ಬಜೆಟ್‌ನಲ್ಲಿ ಭರಪೂರ ಕೊಡುಗೆ ಸಿಕ್ಕಿದೆ. ಕೃಷಿ ಹಾಗೂ ರೈತರ ತೋಳನ್ನ ಬಲ ಪಡಿಸಲು ಸಿದ್ದರಾಮಯ್ಯ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನ ಘೋಷಣೆ ಮಾಡಿದ್ದಾರೆ. ವಿವಿಧ ರೈತಪರ ಯೋಜನೆಗಳನ್ನು ಒಗ್ಗೂಡಿಸಿ, ಸಮಗ್ರ ಕೃಷಿಯನ್ನು ಉತ್ತೇಜಿಸುವ ಕರ್ನಾಟಕ ರೈತ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಈ ಯೋಜನೆಯಡಿ ರೈತರಿಗೆ ಕೆಳಕಂಡ ವಿಷಯಗಳಲ್ಲಿ ಮಾರ್ಗದರ್ಶನ ಹಾಗೂ ಬೆಂಬಲ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ.ಕೃಷಿ ಭಾಗ್ಯ ಯೋಜನೆಯನ್ನು ಮತ್ತೆ ಜಾರಿಗೊಳಿಸಲಾಗಿದೆ. ಈ ಯೋಜನೆಗೆ 2023-24ನೇ ಸಾಲಿನಲ್ಲಿ 200 ಕೋಟಿ ರೂಪಾಯಿಗಳ ಅನುದಾನ ಒದಗಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿಯೂ ಈ ಯೋಜನೆಯನ್ನು ಮುಂದುವರೆಸಲಾಗುವುದು . ಕೃಷಿ ಮತ್ತು ಪೂರಕ ಚಟುವಟಿಕೆಗಳ ನೀತಿ ಮತ್ತು ಯೋಜನೆಗಳ ಸಂಯೋಜನೆ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಪೂರಕವಾಗಿ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಸಹಕಾರ, ಪಶುಸಂಗೋಪನೆ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ. 2024ರ ರಾಜ್ಯ ಬಜೆಟ್‌ನಲ್ಲಿ ನಮ್ಮ ಮಿಲ್ಲೆಟ್ ಎಂಬ ಹೆಸರಿನ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಲಾಗಿದೆ. ಈ ಯೋಜನೆಯಡಿಯಲ್ಲಿ ಸಂಸ್ಕರಿಸಿದ ಸಿರಿಧಾನ್ಯಗಳು ಹಾಗೂ ಮೌಲ್ಯವರ್ಧಿತ ಸಿರಿಧಾನ್ಯ ಉತ್ಪನ್ನಗಳನ್ನು ಅಗ್ರಿ-ಟೆಕ್ ಕಂಪನಿಗಳು ಮತ್ತು ರಿಟೇಲ್ ಚೈನ್ಸ್‌ಗಳ ಸಹಭಾಗಿತ್ವದೊಂದಿಗೆ ಕೈಗೆಟುಕುವ ದರದಲ್ಲಿ ದೊರಕಿಸಲು ಅನುವು ಮಾಡಿಕೊಡಲಾಗುವುದು. ಕಣ್ಮರೆಯಾಗುತ್ತಿರುವ ಹಾಗೂ ನಶಿಸಿ ಹೋಗುತ್ತಿರುವ ಸ್ಥಳೀಯ ಬೆಳೆಗಳ ತಳಿಗಳನ್ನು ಸಂಗ್ರಹಿಸಲು ಮತ್ತು ಸಂರಕ್ಷಿಸುವ ಉದ್ದೇಶದಿಂದ ಒಂದು ಸಮುದಾಯ ಬೀಜ ಬ್ಯಾಂಕ್ ಅನ್ನು ಸ್ಥಾಪಿಸಲಿದೆ.

  • ರಾಜ್ಯ ಕ್ರೀಡಾಪಟುಗಳಿಗೆ ಬಂಪರ್ ಗಿಫ್ಟ್

    ರಾಜ್ಯ ಕ್ರೀಡಾಪಟುಗಳಿಗೆ ಬಂಪರ್ ಗಿಫ್ಟ್

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ರಾಜ್ಯ ವಾರ್ಷಿಕ ಬಜೆಟ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದಾರೆ. ಅದರಂತೆ ಬೆಂಗಳೂರಿನಲ್ಲಿ ಕ್ರೀಡಾ ನಗರ, ಬೆಂಗಳೂರಿನ ನಾಲ್ಕು ಸ್ಥಳಗಳಲ್ಲಿ ಕ್ರೀಡಾ ಸಂಕೀರ್ಣಗಳು, ಪ್ಯಾರಿಸ್ ಒಲಿಂಪಿಕ್ಸ್, ಏಷ್ಯನ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಿಗೆ ನಗದು ಬಹುಮಾನ ಸೇರಿದಂತೆ ವಿವಿಧ ಅನುದಾನಗಳನ್ನು ಕ್ರೀಡಾ ಕ್ಷೇತ್ರಕ್ಕೆ ಮೀಸಲಿಟ್ಟಿದ್ದಾರೆ. ಹಾಗಾದರೆ ಸಿದ್ದರಾಮಯ್ಯನವರ ಬಜೆಟ್‌ನಲ್ಲಿ ರಾಜ್ಯ ಕ್ರೀಡಾಳುಗಳಿಗೆ ಸಿಕ್ಕಿದ್ದೇನು ಎಂಬುದನ್ನು ನೋಡುವುದಾದರೆ..

    • ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರು ಉತ್ತರ ತಾಲೂಕಿನಲ್ಲಿ 70 ಎಕರೆ ಜಾಗದಲ್ಲಿ ಆಧುನಿಕ ಹಾಗೂ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾ ನಗರಿ ನಿರ್ಮಿಸಲಾಗುವುದು.
    • ಬೆಂಗಳೂರಿನ ನಾಲ್ಕು ಸ್ಥಳಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಬಹು-ಕ್ರೀಡಾ ಸೌಲಭ್ಯಗಳು ಸೇರಿದಂತೆ ಅಂತರರಾಷ್ಟ್ರೀಯ ಗುಣಮಟ್ಟದ ಅತ್ಯಾಧುನಿಕ ಕ್ರೀಡಾ ಸಂಕೀರ್ಣಗಳನ್ನು ನಿರ್ಮಿಸಲಾಗುವುದು.
    • ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ರಾಜ್ಯದ ಕ್ರೀಡಾಪಟುಗಳಿಗೆ ಸಿದ್ದರಾಮಯ್ಯ ಬಂಪರ್ ಬಹುಮಾನ ಘೋಷಣೆ ಮಾಡಿದ್ದಾರೆ. ಅದರಂತೆ ಒಲಿಂಪಿಕ್ಸ್​ನಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ವಿಜೇತರಿಗೆ ಕ್ರಮವಾಗಿ 6 ಕೋಟಿ ರೂ., 4 ಕೋಟಿ ರೂ., ಹಾಗೂ 3 ಕೋಟಿ ರೂ.ಗಳನ್ನು ಬಹುಮಾನವಾಗಿ ನೀಡಲಾಗುವುದು.
    • ಇದಲ್ಲದೆ ಏಷ್ಯನ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಚಿನ್ನ, ಬೆಳ್ಳಿ ಅಥವಾ ಕಂಚಿನ ಪದಕಗಳನ್ನು ಗೆಲ್ಲುವ ಕ್ರೀಡಾಪಟುಗಳಿಗೆ ಕ್ರಮವಾಗಿ 35 ಲಕ್ಷ, 25 ಲಕ್ಷ, 15 ಲಕ್ಷ ರೂ.ಗಳನ್ನು ಬಹುಮಾನವಾಗಿ ನೀಡಲಾಗುವುದು.
    • ಅತ್ಯುತ್ತಮ ಸ್ಪರ್ಧಾತ್ಮಕ ಅವಕಾಶಗಳನ್ನು ಒದಗಿಸಲು ಪ್ರತಿ ವರ್ಷ ಕ್ರೀಡಾಪಟುಗಳಿಗೆ ರಾಜ್ಯ ಮಟ್ಟದ ಒಲಿಂಪಿಕ್ಸ್ ಮತ್ತು 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕ್ರೀಡಾಪಟುಗಳಿಗೆ ಮಿನಿ ಒಲಿಂಪಿಕ್ಸ್ ಆಯೋಜಿಸಲಾಗುವುದು.
    • ಮುಂದಿನ ಎರಡು ವರ್ಷಗಳಲ್ಲಿ 35 ಕೋಟಿ ವೆಚ್ಚದಲ್ಲಿ ರಾಜ್ಯದ 14 ಸ್ಥಳಗಳಲ್ಲಿ ಮಹಿಳಾ ಕ್ರೀಡಾ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುವುದು.
    • ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಗಾಯಗೊಂಡ ಕರ್ನಾಟಕದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ಆರೋಗ್ಯ ವಿಮೆ ಸೌಲಭ್ಯವನ್ನು ಒದಗಿಸುವುದು.
  • ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಬಂಪರ್‌ : ವಕ್ಫ್​ಗೆ 100 ಕೋಟಿ, ಕ್ರಿಶ್ಚಿಯನ್ ಸಮುದಾಯಕ್ಕೆ 200 ಕೋಟಿ ಘೋಷಣೆ

    ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಬಂಪರ್‌ : ವಕ್ಫ್​ಗೆ 100 ಕೋಟಿ, ಕ್ರಿಶ್ಚಿಯನ್ ಸಮುದಾಯಕ್ಕೆ 200 ಕೋಟಿ ಘೋಷಣೆ

    ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ಬಜೆಟ್‌ನಲ್ಲಿ ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ, ಕ್ರಿಶ್ಚಿನ್ ಸಮುದಾಯದ ಅಭಿವೃದ್ಧಿಗೆ ಭರ್ಜರಿ ಅನುದಾನ ಘೋಷಣೆ ಮಾಡಿದ್ದಾರೆ. ವಕ್ಫ್​​ ಆಸ್ತಿಗಳ ಸಂರಕ್ಷಣೆಗೆ 100 ಕೋಟಿ ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ 200 ಕೋಟಿ ಘೋಷಣೆ ಮಾಡಿದ್ದಾರೆ.ಸಿದ್ದರಾಮಯ್ಯ ಮಂಡಿಸುತ್ತಿರುವ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಕೋಟಿ ಕೋಟಿ ರೂಪಾಯಿ ಅನುದಾನಗಳ ಜೊತೆಗೆ ವಸತಿ ಸಾಲೆ, ಕಡ್ಡಿಮೆ ಬಡ್ಡಿ ಸಾಲ ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಈ ಬಾರಿಯ ಬಜೆಟ್‌ನಲ್ಲಿ 393 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಸಿದ್ದರಾಮಯ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಬಂಪರ್‌ ಸಿಕ್ಕಿದೆ. ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ ಅವರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು, 50 ಸಂಖ್ಯಾ ಬಲವುಳ್ಳ 50 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು, 100 ಸಂಖ್ಯಾ ಬಲವುಳ್ಳ 100 ಮೆಟ್ರಿಕ್‌ ನಂತರದ ಬಾಲಕ / ಬಾಲಕಿಯರ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲಾಗುವುದು, 100 ಹೊಸ ಮೌಲಾನಾ ಆಜಾದ್‌ ಶಾಲೆಗಳನ್ನು ತೆರೆಯಲಾಗುವುದು, 25 ಶಾಲೆಗಳಲ್ಲಿ ಪದವಿ ಪೂರ್ವ ಶಿಕ್ಷಣ ಪ್ರಾರಂಭ ಮಾಡಲಾಗುವುದು, ಮಂಗಳೂರಿನ ಹಜ್‌ ಭವನದ ನಿರ್ಮಾಣ ಕಾಮಗಾರಿಯನ್ನು 10 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಒಟ್ಟಾರೆಯಾಗಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 393 ಕೋಟಿ ಮೀಸಲು ಇಡಲಾಗಿದೆಇನ್ನೂ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಉದ್ಯಮ ಶೀಲರು ಸ್ಥಾಪಿಸುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ಹೊಸ ಘಟಕಗಳನ್ನು ಸ್ಥಾಪಿಸಲು ಹಾಗೂ ಅಸ್ತಿತ್ವದಲ್ಲಿರುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ಘಟಕಗಳ ಉನ್ನತೀಕರಣಕ್ಕೆ KSFC ಮೂಲಕ ಪಡೆಯುವ 10 ಕೋಟಿ ರೂ.ವರೆಗಿನ ಸಾಲಕ್ಕೆ ಶೇ.6ರಷ್ಟು ಬಡ್ಡಿ ಸಹಾಯಧನ ನೀಡಲಾಗುವುದು, ರೇಷ್ಮೆ ನೂಲು ಬಿಚ್ಚಾಣಿಕೆಯಲ್ಲಿ ತೊಡಗಿರುವ ಅಲ್ಪಸಂಖ್ಯಾತ ಫಲಾನುಭವಿಗಳ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು ರೇಷ್ಮೆ ಇಲಾಖೆ ಮೂಲಕ ತರಬೇತಿ ಮತ್ತು ಕೆ.ಎಂ.ಡಿ.ಸಿ ಮೂಲಕ ಸಾಲ ಸೌಲಭ್ಯಗಳನ್ನು ನೀಡಲಾಗುವುದು.ಇನ್ನೂ ಜೈನರ ಪ್ರಮುಖ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗಾಗಿ 50 ಕೋಟಿ ರೂ. ಅನುದಾನ ಒದಗಿಸಲಾಗುವುದು. ಕ್ರಿಶ್ಚಿಯನ್‌ ಸಮುದಾಯದ ಅಭಿವೃದ್ಧಿಗಾಗಿ 200 ಕೋಟಿ ರೂಪಾಯಿ ಮೀಸಲಿಡಲಾಗಿದೆ, ಬೌದ್ಧರ ಪವಿತ್ರ ಗ್ರಂಥಗಳಾದ ತ್ರಿಪಿಟಕಗಳನ್ನು ಪಾಲಿ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಲು ಸೂಕ್ತ ಅನುದಾನ ಮೀಸಲಿಡಲಾಗಿದೆ, ರಾಜ್ಯದಲ್ಲಿ ವಾಸಿಸುತ್ತಿರುವ ಸಿಖ್ಖ್‌ ಲಿಗಾರ್‌ ಸಮುದಾಯದ ಜನರ ಆರ್ಥಿಕ ಸಬಲೀಕರಣಕ್ಕಾಗಿ ಎರಡು ಕೋಟಿ ರೂಪಾಯಿ ಅನುದಾನದಲ್ಲಿ ಹೊಸ ಯೋಜನೆಗಳನ್ನು ರೂಪಿಸಲಾಗುವುದು. ಬೀದರ್‌ನಲ್ಲಿರುವ ಶ್ರೀ ನಾನಕ್‌ ಝೀರಾ ಸಾಹೇಬ್ ಗುರುದ್ವಾರದ ಅಭಿವೃದ್ಧಿಗಾಗಿ ಒಂದು ಕೋಟಿ ರೂಪಾಯಿ ಅನುದಾನ ನೀಡಲಾಗುವುದು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2024-25ನೇ ವರ್ಷದಲ್ಲಿ ಒಟ್ಟಾರೆಯಾಗಿ 393 ಕೋಟಿ ರೂಪಾಯಿಗಳ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

  • ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಲವಾಗಿ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ

    ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಲವಾಗಿ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಲವಾಗಿ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಜನ ವಿರೋಧಿ ನಿರ್ಧಾರಗಳನ್ನು ಹೊಂದಿದೆ ಎಂದು ಬಜೆಟ್ ಮಂಡನೆ ವೇಳೆ ಟೀಕಿಸಿದ್ದಾರೆ.

    ತಮ್ಮ ಸರ್ಕಾರದ ಖಾತರಿ ಯೋಜನೆಗಳು ಚುನಾವಣಾ ಗಿಮಿಕ್ ಅಲ್ಲ ಎಂದು ಸಮರ್ಥಿಸಿಕೊಂಡ ಅವರು, ಭಾರತೀಯ ನಿರ್ಮಿತ ಮದ್ಯ (IML) ಮತ್ತು ಬಿಯರ್ ಮೇಲಿನ ತೆರಿಗೆ ಸ್ಲ್ಯಾಬ್ ಗಳನ್ನು ಪರಿಷ್ಕರಿಸಲು ಪ್ರಸ್ತಾಪಿಸಲಾಗಿದೆ ಎಂದರು.

    ಇದು ಕರ್ನಾಟಕದ ಹಣಕಾಸು ಸಚಿವರಾಗಿ ಸಿದ್ದರಾಮಯ್ಯ ಅವರ ದಾಖಲೆಯ 15 ನೇ ಬಜೆಟ್ ಮತ್ತು ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅವರು ಮಂಡಿಸುತ್ತಿರುವ ಎರಡನೇ ಬಜೆಟ್ ಇದಾಗಿದೆ. ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ನ್ಯಾಯ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳ ಆಧಾರದ ಮೇಲೆ ಸ್ಥಾಪಿಸಲಾದ ಕರ್ನಾಟಕ ಮಾದರಿ ಅಭಿವೃದ್ಧಿಯ ಹೊಸ ಉದಾಹರಣೆಯನ್ನು ಸ್ಥಾಪಿಸುವತ್ತ ತಮ್ಮ ಸರ್ಕಾರ ಮುನ್ನಡೆಯುತ್ತಿದೆ ಎಂದು ಹೇಳಿದರು.

    ವಸತಿ ವಿಭಾಗಕ್ಕೆ ಹಲವಾರು ಯೋಜನೆ

    ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್​ನಲ್ಲಿ ವಸತಿ ವಿಭಾಗಕ್ಕೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ. 2024-25ನೇ ಸಾಲಿನಲ್ಲಿ 3 ಲಕ್ಷ ಹೊಸ ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಬಜೆಟ್​ನಲ್ಲಿ ಘೋಷಿಸಲಾಗಿದೆ. ಒಟ್ಟಾರೆ ವಸತಿ ವಿಭಾಗಕ್ಕೆ ಇಂದಿನ ಬಜೆಟ್​ನಲ್ಲಿ ಘೋಷಿಸಲಾದ ಯೋಜನೆಗಳು, ಮೀಸಲಿಟ್ಟ ಅನುದಾನದ ವಿವರ ಇಲ್ಲಿದೆ.

    ಎಲ್ಲಾ ವಸತಿರಹಿತರಿಗೆ ಸೂರು ಒದಗಿಸುವ ಧ್ಯೇಯ ಸರ್ಕಾರದ್ದಾಗಿದೆ. ನಮ್ಮ ಹಿಂದಿನ ಅವಧಿಯಲ್ಲಿ 14.54 ಲಕ್ಷ ಮನೆಗಳನ್ನು ನಿರ್ಮಿಸಲಾಗಿತ್ತು. 2019 ರಿಂದ 2023ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿರ್ಮಿಸಲಾದ ಮನೆಗಳ ಸಂಖ್ಯೆ ಕೇವಲ 5.19 ಲಕ್ಷ. ಬಾಕಿ ಉಳಿದಿರುವ 12 ಲಕ್ಷ ಮನೆಗಳ ನಿರ್ಮಾಣದ ಹೊಣೆಗಾರಿಕೆ ನಮ್ಮ ಸರ್ಕಾರದ ಮುಂದಿದ್ದು, 2023-2024ನೇ ಸಾಲಿನಲ್ಲಿ 3 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ.

    2024-25ರಲ್ಲಿ 3 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಇದಲ್ಲದೇ, ರಾಜ್ಯದಲ್ಲಿ ವಸತಿರಹಿತರ ಸಂಖ್ಯೆಯನ್ನು ಗುರುತಿಸಲು ಒಂದು ಸಮೀಕ್ಷೆ ನಡೆಸಲಾಗುವುದು ಎಂದು ಬಜೆಟ್​ನಲ್ಲಿ ಘೋಷಿಸಲಾಗಿದೆ.

    ತಸ್ತಿಕ್ ಮೊತ್ತ ಅರ್ಚಕರ ಬ್ಯಾಂಕ್ ಖಾತೆಗೆ; ಧಾರ್ಮಿಕ ದತ್ತಿ ಇಲಾಖೆಗೆ ಹಲವು ಯೋಜನೆ

    ಇನಾಂ, ಇನಾಂಯೇತರ ಜಮೀನು ಕಳೆದುಕೊಂಡಂತಹ 29,523 ʻಸಿʼ ವರ್ಗದ ದೇವಾಲಯಗಳ ಅರ್ಚಕರುಗಳಿಗೆ ಇನ್ನು ಮುಂದೆ ತಸ್ತಿಕ್ ಮೊತ್ತವನ್ನು ಅರ್ಚಕರುಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

    ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿಗಳು ಧಾರ್ಮಿಕ ದತ್ತಿ ಇಲಾಖೆಗೆ ಹಲವು ಯೋಜನೆಗಳನ್ನು ಘೋಷಣೆ ಮಾಡಿದರು.

    • ಹೊರ ರಾಜ್ಯಗಳಲ್ಲಿನ ಪವಿತ್ರ ಪುಣ್ಯಕ್ಷೇತ್ರಗಳಾದ ತಿರುಮಲ, ಶ್ರೀಶೈಲ, ವಾರಣಾಸಿ ಮತ್ತು ಗುಡ್ಡಾಪುರಕ್ಕೆ ಭೇಟಿ ನೀಡುವ ಕರ್ನಾಟಕದ ಭಕ್ತಾಧಿಗಳ ಅನುಕೂಲಕ್ಕಾಗಿ ಸುಸಜ್ಜಿತ ವಸತಿ ಸಂಕೀರ್ಣಗಳನ್ನು ನಿರ್ಮಾಣ.
    • ತಿರುಮಲದಲ್ಲಿ ರೂ.200 ಕೋಟಿ ಕಾಮಗಾರಿ ಅಂತಿಮ ಹಂತದಲ್ಲಿದೆ. ಶ್ರೀಶೈಲದಲ್ಲಿ ರೂ.85 ಕೋಟಿ ವೆಚ್ಚದಲ್ಲಿ ಮತ್ತು ಗುಡ್ಡಾಪುರದಲ್ಲಿ ರೂ.11 ಕೋಟಿ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರಸಕ್ತ ಸಾಲಿನಲ್ಲಿ ವಾರಾಣಸಿಯಲ್ಲಿ ರೂ.5 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.
    • ಮಂತ್ರಾಲಯಕ್ಕೆ ಸಂಪರ್ಕ ಕಲ್ಪಿಸಲು ರಾಯಚೂರಿನ ಚಿಕ್ಕಮಂಚಾಲಿ ಗ್ರಾಮದ ಬಳಿ ಬ್ರಿಡ್ಜ್-ಕಂ-ಬ್ಯಾರೇಜ್ ಅನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ರೂ.158 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು.
    • ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಹಾಗೂ ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಾಲಯದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರ ರಚನೆ.
    • ಯಾವುದೇ ಆದಾಯವಿಲ್ಲದ 34,165 ʻಸಿʼ ವರ್ಗದ ಐತಿಹಾಸಿಕ ದೇವಾಲಯಗಳಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಮಾಜದ ಗಣ್ಯರು ಮತ್ತು ಸಂಬಂಧಪಟ್ಟ ಇಲಾಖೆಗಳ ಪ್ರತಿನಿಧಿಗಳನ್ನೊಳಗೊಂಡ Vision Group ರಚನೆ. ಇನಾಂ/ ಇನಾಂಯೇತರ ಜಮೀನು ಕಳೆದುಕೊಂಡಂತಹ 29,523 ಸಿ ವರ್ಗದ ದೇವಾಲಯಗಳ ಅರ್ಚಕರುಗಳಿಗೆ ಇನ್ನು ಮುಂದೆ ತಸ್ತಿಕ್‌ ಮೊತ್ತವನ್ನು ಅರ್ಚಕರುಗಳ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುವುದು ಎಂದು ಹೇಳಿದರು.
  • ವಾಸೋಧ್ಯಮ ಕ್ಷೇತ್ರಕ್ಕೆ ವಿಶೇಷ ಒತ್ತು : 10 ಪ್ರವಾಸಿತಾಣಗಳಲ್ಲಿ ಕೇಬಲ್ ಕಾರ್, ರೋಪ್ ವೇ ಸೌಲಭ್ಯ

    ವಾಸೋಧ್ಯಮ ಕ್ಷೇತ್ರಕ್ಕೆ ವಿಶೇಷ ಒತ್ತು : 10 ಪ್ರವಾಸಿತಾಣಗಳಲ್ಲಿ ಕೇಬಲ್ ಕಾರ್, ರೋಪ್ ವೇ ಸೌಲಭ್ಯ

    ಕರ್ನಾಟಕ ಬಜೆಟ್ 2024ನ್ನು ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ ಪ್ರವಾಸೋಧ್ಯಮ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಿದ್ದು, 10 ಪ್ರವಾಸಿತಾಣಗಳಲ್ಲಿ ಕೇಬಲ್ ಕಾರ್, ರೋಪ್ ವೇ ಸೌಲಭ್ಯ ನಿರ್ಮಿಸಲಾಗುವುದು ಎಂದು ಹೇಳಿದರು.

    ರಾಜ್ಯದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಹೆಚ್ಚಿನ ಪ್ರವಾಸಿಗರು ಮತ್ತು ಹೂಡಿಕೆದಾರರನ್ನು ಆಕರ್ಷಿಸಲು 2024-29ಕ್ಕೆ ಪ್ರವಾಸೋದ್ಯಮ ನೀತಿಯನ್ನು ಪರಿಷ್ಕರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಅಲ್ಲದೆ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಪೌರಾಣಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿವೆ. ಇವುಗಳಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು 100 ಕೋಟಿ ರೂ. ಒದಗಿಸಲಾಗುವುದು ಎಂದು ಹೇಳಿದರು.

    ಇದಲ್ಲದೆ ರಾಜ್ಯದ 10 ಪ್ರವಾಸಿತಾಣಗಳಲ್ಲಿ ಕೇಬಲ್ ಕಾರ್, ರೋಪ್ ವೇ ಸೌಲಭ್ಯಕ್ಕೆ ಕ್ರಮ ಕೈಗೊಳ್ಳಲಾಗಿದೆ. 250 ಮೀಟರ್ ಎತ್ತರದ ಸ್ಕೈಡೆಕ್ ನಿರ್ಮಾಣ ನಿಧಿ ಮೀಸಲಿಡಲಾಗಿದೆ. ಬೆಳಗಾವಿಯಲ್ಲಿರುವ ಗೋಕಾಕ್ ಜಲಪಾತವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು. ಮೂಲಸೌಕರ್ಯಕ್ಕಾಗಿ ಹಣ ನಿಗದಿ ಮಾಡಲಾಗುತ್ತದೆ ಎಂದರು.

    ಮಾತ್ರವಲ್ಲದೇ ರಾಜ್ಯದ ಮೂರು ಜಿಲ್ಲೆಗಳಲ್ಲಿ ಆಹಾರ ಪಾರ್ಕ್​ ನಿರ್ಮಾಣ ಮಾಡಲಾಗುವುದು. ಶಿವಮೊಗ್ಗದ ಸೋಗಾನೆ, ವಿಜಯಪುರದ ಇಟ್ಟಂಗಿಹಾಳ, ಬೆಂಗಳೂರು ಗ್ರಾ. ಜಿಲ್ಲೆ ಮೂಗೆನಹಳ್ಳಿ ಬಳಿ ಆಹಾರ ಪಾರ್ಕ್​ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.

    ಬಸವಣ್ಣನವರ ಜನ್ಮಸ್ಥಳದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಪ್ರಾಧಿಕಾರ ರಚನೆಯ ಘೋಷಣೆ ಮಾಡಿದ್ದು, ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

    ಹಾಗೆಯೇ, ಕಲಬುರಗಿಯಲ್ಲಿ ವಚನ ಮಂಟಪ ನಿರ್ಮಿಸಲಾಗುವುದು. ಜಾನಪದ ಕಲೆಗಳ ಪುನರುಜ್ಜೀವನಕ್ಕೆ ಅನುದಾನ, ನಾರಾಯಣಗುರು, ಜ್ಯೋತಿಬಾ ಫುಲೆ, ಪೆರಿಯಾರ್, ರಾಮಸ್ವಾಮಿ, ಲೋಹಿಯಾ ಬರಹ ಕನ್ನಡಕ್ಕೆ ಅನುವಾದಕ್ಕೆ ಕ್ರಮ. ಕೀರ್ತನೆಗಳ ಪ್ರಚಾರಕ್ಕೆ 1 ಕೋಟಿ ರೂ. ಮೀಸಲಿಡಲಾಗುವುದು. ಕಲಬುರಗಿ ವಿವಿಯಲ್ಲಿ ತತ್ವಪದ, ಸೂಫಿ ಅಧ್ಯಯನ ಪೀಠ ಸ್ಥಾಪನೆ. ಸರ್ವಜ್ಙನ ಸ್ಮಾರಕ ಅಭಿವೃದ್ಧಿಗೆ ಅನುದಾನ, ಕೋಲಾರದ ಅದಿಮ ಸಾಂಸ್ಕೃತಿಕ ಕೇಂದ್ರದ ಅಭಿವೃದ್ಧಿ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

  • ಪ್ರಣವಾನಂದ ಸ್ವಾಮೀಜಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದನ್ನು ನಾವು ಸಹಿಸುವುದಿಲ್ಲ: ಅಂತಹ ಸಂದರ್ಭ ಬಂದರೆ ಎಂತಹ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ – ರಾಜೇಂದ್ರ

    ಪ್ರಣವಾನಂದ ಸ್ವಾಮೀಜಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದನ್ನು ನಾವು ಸಹಿಸುವುದಿಲ್ಲ: ಅಂತಹ ಸಂದರ್ಭ ಬಂದರೆ ಎಂತಹ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ – ರಾಜೇಂದ್ರ

    ಅಂಕೋಲಾ: ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಶ್ರೀನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದನ್ನು ನಾವು ಸಹಿಸುವುದಿಲ್ಲ. ಅಂತಹ ಸಂದರ್ಭ ಬಂದರೆ ಎಂತಹ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ವಿ.ನಾಯ್ಕ ಎಚ್ಚರಿಕೆ ನೀಡಿದರು.

    ಬೆಂಗಳೂರಿನಲ್ಲಿ ಪೂರ್ವಭಾವಿ ಸಭೆಯ ನಂತರ ಪ್ರೀಡಂ ಪಾರ್ಕ್ನಲ್ಲಿ ಪಂಜಿನ ಮೆರವಣಿಗೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಪ್ರಣವಾನಂದ ಸ್ವಾಮೀಜಿಯವರು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆ ಮಾಡುತ್ತಿದ್ದು, ಮಂಗಳೂರಿನಿ0ದ ಬೆಂಗಳೂರಿಗೆ 750 ಕಿ.ಮೀ. ನಡೆದು ಇತಿಹಾಸ ನಿರ್ಮಿಸಿದ್ದಾರೆ. ಇದರ ಪರಿಣಾಮವಾಗಿ ನಿಗಮ ಮಂಡಳಿ ಘೋಷಣೆಯಾಯಿತು. ಆದರೆ ಈಗಿನ ಸರಕಾರ ನಿಗಮ ಮಂಡಳಿಗೆ ಹಣ ನೀಡಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ನಮ್ಮ ಸಮುದಾಯದವರನ್ನೇ ಎತ್ತಿ ಕಟ್ಟುವ ಪ್ರಯತ್ನ ನಡೆಯುತ್ತಿದೆ. ನಾವು ಎಂತಹ ಪರಿಸ್ಥಿತಿ ಬಂದರೂ ಕೂಡ ನಾವು ಸ್ವಾಮೀಜಿಗಳ ಪರವಾಗಿ ಹೋರಾಟಕ್ಕೆ ಸದಾ ಸಿದ್ಧರಿದ್ದೇವೆ ಎಂದರು.

    ಈ ಸಂದರ್ಭದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಷ್ಟ್ರೀಯ ಕಾರ್ಯದರ್ಶಿ ಡಾ. ಮಂಚೇಗೌಡ ಬಿ.ಎಚ್., ರಾಜ್ಯಾಧ್ಯಕ್ಷ ಸಂತೋಷಕುಮಾರ, ಗೌರವಾಧ್ಯಕ್ಷ ಸತೀಶ ಗುತ್ತೆದಾರ, ಹೆಚ್.ವೈ.ಆನಂದ, ರಾಜ್ಯ ಕಾರ್ಯದರ್ಶಿ ಜಿತೇಂದ್ರ ಸುವರ್ಣ, ವೆಂಕಟೇಶ ಗುಂಡನೂರು, ಮಹಾದೇವಪ್ಪ ಮೈಸೂರು, ವಸಂತಕುಮಾರ, ಉ.ಕ. ಜಿಲ್ಲಾ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಗೌರವಾಧ್ಯಕ್ಷ ಡಾ.ನಾಗೇಶ ನಾಯ್ಕ, ಅಂಕೋಲಾ ತಾಲೂಕು ಅಧ್ಯಕ್ಷ ದಾಮೋದರ ಜಿ. ನಾಯ್ಕ, ಉಪಾಧ್ಯಕ್ಷ ರಮೇಶ ಎನ್. ನಾಯ್ಕ, ಖಜಾಂಚಿ ಶ್ರೀಪಾದ ನಾಯ್ಕ, ಪ್ರಧಾನ ಕಾರ್ಯದರ್ಶಿ ನಾಗರಾಜ ಮಂಜಗುಣಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

  • ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಬೆಲೆಯ ಸಾಗುವಾನಿ ತುಂಡು ವಶ

    ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಬೆಲೆಯ ಸಾಗುವಾನಿ ತುಂಡು ವಶ

    ಶಿರಸಿ: ತಾಲೂಕಿನ ಬನವಾಸಿ ವ್ಯಾಪ್ತಿಯ ಹಲಸಿನಕೊಪ್ಪ ರಸ್ತೆ ಬಳಿ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಬೆಲೆಯ ಸಾಗುವಾನಿ ತುಂಡುಗಳನ್ನು ಆರೋಪಿ ಸಮೇತವಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಹಲಸಿನಕೊಪ್ಪದ ಪಾಂಡುರಂಗ ಪುಟ್ಟಪ್ಪ ಆಚಾರಿ ಹಾಗು ಬಿದ್ರಳ್ಳಿಯ ಗಣಪತಿ ನಾಗ್ಯ ಬಂಧಿತ ಆರೋಪಿಗಳಾಗಿದ್ದು, ಬನವಾಸಿ ಅರಣ್ಯ ವಲಯ ಅಧಿಕಾರಿ ವರದ ಜಿ. ಎಚ್. ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ ಸಿಬ್ಬಂದಿಗಳು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

  • ‘ಉದಯ ರಾಗ’ ಸಂಗೀತ ಕಾರ್ಯಕ್ರಮವು ಅ.20ರಂದು

    ‘ಉದಯ ರಾಗ’ ಸಂಗೀತ ಕಾರ್ಯಕ್ರಮವು ಅ.20ರಂದು

    ಶಿರಸಿ: ಕಲ್ಯಾಣ ಸಂಗೀತ ಸಭಾ ಟ್ರಸ್ಟ್ ಸೋಮನಹಳ್ಳಿ ಇವರಿಂದ ‘ಉದಯ ರಾಗ’ ಸಂಗೀತ ಕಾರ್ಯಕ್ರಮವು ಅ.20ರಂದು ಬೆಳಿಗ್ಗೆ 9.30 ಘಂಟೆಯಿಂದ ಚಿಪಗಿಯ ನಂದಗೋಕುಲದಲ್ಲಿ ನಡೆಯಲಿದೆ. ಕಲಾವಿದೆ ವಿದೂಷಿ ಮಂಜರಿ ಅಲೆಗಾಂವ್ಕರ್ ಕಾರ್ಯಕ್ರಮ ನಡೆಸಿಕೊಡಲಿದ್ದು, ಇವರಿಗೆ ತಬಲಾದಲ್ಲಿ ಪಂ.ಗುರುಮೂರ್ತಿ ವೈದ್ಯ, ಹಾರ್ಮೋನಿಯಂನಲ್ಲಿ ಭರತ ಹೆಗಡೆ ಹೆಬ್ಬಲಸು ಸಾಥ್ ನೀಡಲಿದ್ದಾರೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಅನಾರೋಗ್ಯ ಪೀಡಿತರಿಗೆ ಧನಸಹಾಯ : ಶಾಲೆಗೆ ಸ್ಮಾರ್ಟ್ ಟಿವಿ ಕೊಡುಗೆ.

    ಅನಾರೋಗ್ಯ ಪೀಡಿತರಿಗೆ ಧನಸಹಾಯ : ಶಾಲೆಗೆ ಸ್ಮಾರ್ಟ್ ಟಿವಿ ಕೊಡುಗೆ.

    ಕುಮಟಾ : ಶ್ರೀ ಲಕ್ಷ್ಮೀ ನರಸಿಂಹ ಯಕ್ಷಗಾನ ಮಂಡಳಿ ‌ಹೊಲನಗದ್ದೆ ಇವರ ಆಶ್ರಯದಲ್ಲಿ ‌ಖ್ಯಾತ ಕಲಾವಿದರು, ಚಿಣ್ಣರ ಮೇಳದ‌ ಕಲಾವಿದರಿಂದ ‌ಉಚಿತ ಯಕ್ಷಗಾನ ಪ್ರದರ್ಶನ, ಅನಾರೋಗ್ಯ ಪೀಡಿತರಿಗೆ ಧನಸಹಾಯ, ಶಾಲೆಗೆ ಸ್ಮಾರ್ಟ್ ಟಿವಿ ವಿತರಣೆ ಕಾರ್ಯಕ್ರಮವು ಯಕ್ಷಗಾನ ಭಾಗವತ ಜಿ.ಕೆ.ಹೆಗಡೆ ಇವರ ನೇತೃತ್ವದಲ್ಲಿ ಜರುಗಿತು.

    ಕುಮಟಾ ಹವ್ಯಕ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹವ್ಯಕ ಸೇವಾ ಸಂಘದ ಅಧ್ಯಕ್ಷರಾದ ಶ್ರೀಕಾಂತ ಹೆಗಡೆ ವಹಿಸಿ ಇಂದಿನ ಉತ್ತಮ ‌ಸಮಾಜದ ನಿರ್ಮಾಣಕ್ಕೆ ಯಕ್ಷಗಾನ ಕಲೆಯ ಅವಶ್ಯಕತೆ ಇದೆ ಎಂದರು.‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮುಖಂಡರಾದ ‌ಸೂರಜ್ ನಾಯ್ಕ ಸೋನಿ‌ ಮಾತನಾಡಿ‌ ಯಾವುದೇ ಬೇಧಭಾವ ಇಲ್ಲದೇ ಪ್ರತಿಭೆಯನ್ನು ಪ್ರೋತ್ಸಾಹಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ, ಉಳಿಸಿ, ಬೆಳೆಸಲು ಯುವಕ ಯುವತಿಯರು ಯಕ್ಷಗಾನ ಕಲೆಯನ್ನು ಕಲಿಯಲು‌ ಆಸಕ್ತಿ ಹೊಂದಬೇಕು ಎಂದರು. 

    ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಮುಖರಾದ ದತ್ತಾ ಪಟಗಾರ, ‌ ರಾಘವೇಂದ್ರ ಪಟಗಾರ, ಜ್ಯೇಷ್ಠಾಪುರ ಶಾಲಾ ಶಿಕ್ಷಕರಾದ ಪ್ರಶಾಂತ ನಾಯಕ  ಜಿ. ಕೆ.‌ ಹೆಗಡೆಯವರ ಕಲಾ ಸೇವೆ ಹಾಗೂ ಸಾಮಾಜಿಕ ಕಳಕಳಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

    ಕಾರ್ಯಕ್ರಮದ ಸಂಯೋಜಕ ಜಿ. ಕೆ. ಹೆಗಡೆ ಇವರು ಮಾತನಾಡಿ ತಾನು ಕಳೆದ ಏಳು ವರ್ಷಗಳಿಂದ  ಮಾಡುತ್ತಾ  ಬಂದಿರುವ ಈ ಚಿಕ್ಕ ಸಾಮಾಜಿಕ ಸೇವೆ ಇತರರಿಗೆ ಸ್ಪೂರ್ತಿಯಾಗಿ ಸಮಾಜಕ್ಕೆ ಎಲ್ಲರೂ‌ ಸಹಕರಿಸುವಂತಾಗಲಿ ಎಂಬುದು ತನ್ನ ಸದುದ್ದೇಶವಾಗಿದೆ. ಸಹಕರಿಸಿದ ಸರ್ವರಿಗೂ ಧನ್ಯವಾದ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಜ್ಯೇಷ್ಠಾಪುರ ಶಾಲಾ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಸ್ಮಾರ್ಟ್ ಟಿವಿಯನ್ನು , ಅನಾರೋಗ್ಯ ಪೀಡಿತ ಮೋಹನ ನಾಯ್ಕ ಗುಡೇಅಂಗಡಿ ಇವರಿಗೆ ರೂ. ಹತ್ತು ಸಾವಿರ ಧನಸಹಾಯ ನೀಡಲಾಯಿತು. ‌ಸಿ.ಎ. ಪರೀಕ್ಷೆಯಲ್ಲಿ ಸಾಧನೆಗೈದ ಜಯಂತ ಶ್ರೀಕಾಂತ ಭಟ್ ಇವರನ್ನು ಸನ್ಮಾನಿಸಲಾಯಿತು. ಎಂ.ಎನ್.ಹೆಗಡೆ ನಿರೂಪಿಸಿದರು.‌ ಗಂಗಾಧರ ನಾಯ್ಕ ಸ್ವಾಗತಿಸಿದರು. ಶಿಕ್ಷಕರಾದ ಸಿ.‌ಜಿ.ನಾಯ್ಕ ‌ವಂದನಾರ್ಪಣೆಗೈದರು.

    ನಂತರ ಚಕ್ರ ಚಂಡಿಕೆ ಪೌರಾಣಿಕ ಯಕ್ಷಗಾನ  ಯಶಸ್ವಿಯಾಗಿ ನಡೆಯಿತು.