Satwadhara News

Category: State News

  • SSLC ಪರೀಕ್ಷೆಯ ಫಲಿತಾಂಶ (SSLC Result) ಪ್ರಕಟ.

    SSLC ಪರೀಕ್ಷೆಯ ಫಲಿತಾಂಶ (SSLC Result) ಪ್ರಕಟ.

    ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಟಿಯಲ್ಲಿ ಫಲಿತಾಂಶ ಪ್ರಕಟ ಮಾಡಿದೆ. ಮನೆಯಲ್ಲಿಯೇ ಕುಳಿತು ವಿದ್ಯಾರ್ಥಿಗಳು, ಪಾಲಕರು ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಈ ಕೆಳಗಡೆ ಅಧಿಕೃತ ವೆಬ್‌ಸೈಟಿನ ಲಿಂಕ್ ನೀಡಲಾಗಿದೆ. ಆಸಕ್ತರು ಭೇಟಿ ನೀಡಿ, ಫಲಿತಾಂಶವನ್ನು ವೀಕ್ಷಿಸಬಹುದು.

    ಉಡುಪಿ ಪ್ರಥಮ ಸ್ಥಾನ ಪಡೆದರೆ, ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಹಾಗು ಶಿವಮೊಗ್ಗ ಮೂರನೇ ಸ್ಥಾನದಲ್ಲಿದೆ. ಶೇಕಡಾ 84.54 ರಷ್ಟು ಫಲಿತಾಂಶದೊoದಿಗೆ ಉತ್ತರಕನ್ನಡ ಜಿಲ್ಲೆ ಐದನೇ ಸ್ಥಾನದಲ್ಲಿದೆ. ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆಯಲ್ಲಿ ಶೇಕಡಾ 94 ರಷ್ಟು ಫಲಿತಾಂಶ ಬಂದಿದೆ. ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ಬಾಗಲಕೋಟೆಯ ಅಂಕಿತಾ ಬಸಪ್ಪ ಪ್ರಥಮ ಸ್ಥಾನ ಪಡೆದಿದ್ದು 625ಕ್ಕೆ 625 ಅಂಕ ಪಡೆದಿದ್ದಾಳೆ. ಶೇಕಡಾ 73.40 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

    ಬಾಗಲಕೋಟೆಯ ಅಂಕಿತಾ ಬಸಪ್ಪ ಕೊನ್ನೂರು 625ಕ್ಕೆ 625 ಅಂಕ ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದಾರೆ. ಇವರು ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮೆಳ್ಳಿಗೇರಿಯವರಾಗಿದ್ದಾರೆ. ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಾರೆ.

    ರಿಸಲ್ಟ್ ನೋಡೋದು ಹೇಗೆ? ಇಲಾಖೆಯ ಅಧಿಕೃತ ವೆಬ್ ಸೈಟ್‌ಗಳಾದ kseab.karnataka.gov.in ಮತ್ತು karresults.nic.in ಗಳಲ್ಲಿ ವೀಕ್ಷಿಸಬಹುದು. ಅಲ್ಲದೆ, (SSLC Result) ಫಲಿತಾಂಶವನ್ನು ಡೌನ್‌ಲೋಡ್ ಮಾಡಲು ಅವಕಾಶವಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಮಾಹಿತಿ ನೀಡಿದೆ.

  • ದೇವೇಗೌಡರ ನಿವಾಸದಲ್ಲಿ ಹೆಚ್.ಡಿ.ರೇವಣ್ಣ ಅರೆಸ್ಟ್..!

    ದೇವೇಗೌಡರ ನಿವಾಸದಲ್ಲಿ ಹೆಚ್.ಡಿ.ರೇವಣ್ಣ ಅರೆಸ್ಟ್..!

    ಬೆಂಗಳೂರು : ಮಾಜಿ ಸಚಿವ ಹಾಗೂ ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಅವರನ್ನು ಎಸ್‌ಐಟಿ ವಶಕ್ಕೆ ಪಡೆದುಕೊಂಡಿದೆ. ಜನಪ್ರತಿನಿಧಿಗಳ ನ್ಯಾಯಾಲಯ ಶನಿವಾರ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ರೇವಣ್ಣ ಬಂಧನಕ್ಕೆ ಕ್ಷಣಗಣನೆ ಆರಂಭವಾಗಿತ್ತು. ರೇವಣ್ಣನವರನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸದಿಂದ ಎಸ್‌ಐಟಿ ಅಧಿಕಾರಿಗಳು ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ. ಜೆಡಿಎಸ್ ವರಿಷ್ಠರ ಮನೆಯೇ ಈ ಘಟನೆಗೆ ಸಾಕ್ಷಿಯಾಗಿದ್ದರಿಂದ ಇದು, ಜಾತ್ಯಾತೀತ ಜನತಾದಳದ ಮುಂದಿನ ಭವಿಷ್ಯಕ್ಕೆ ಭಾರೀ ಕೊಡಲಿ ಪೆಟ್ಟುಕೊಟ್ಟಂತಾಗಿದೆ.

    ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ವಜಾ ಬೆನ್ನಲ್ಲೇ ಜೆಡಿಎಸ್ ಶಾಸಕರ ಎಚ್ ಡಿ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದರ ಬೆನ್ನಲ್ಲೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಜೆಡಿಎಸ್ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.

    ಹಾಸನ ಸಂಸದ ಪ್ರಜ್ವಲ್ ರೇವಣ್ಣರ ಅಶ್ಲೀಲ ವಿಡಿಯೋ ಬಹಿರಂಗ ಬೆನ್ನಲ್ಲೇ ಎಚ್ ಡಿ ರೇವಣ್ಣ ವಿರುದ್ಧವೂ ಸಹ ಲೈಂಗಿಕ ದೌರ್ಜನ್ಯ ಮತ್ತು ಅಪಹರಣ ಪ್ರಕರಣ ದಾಖಲಾಗಿದೆ. ಇದೀಗ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಎಚ್‌.ಡಿ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದು, ಸಿಐಡಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.

    ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಚ್ ಡಿ ರೇವಣ್ಣಗೆ ಸಂಕಷ್ಟ ಎದುರಾಗಿದ್ದು ಅಪಹರಣಕ್ಕೀಡಾಗಿದ್ದ ಮನೆ ಕೆಲಸದಾಕೆಯನ್ನು SIT ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಏಪ್ರಿಲ್ 29ರಂದು ರೇವಣ್ಣ ಅವರ ಸಂಬಂಧ ಸತೀಶ್ ಬಾಬು ಎಂಬುವರು ಸಂತ್ರಸ್ತ ಮಹಿಳೆಯನ್ನು ಆಕೆಯ ಮನೆಯಿಂದ ಕರೆದೊಯ್ದಿದ್ದರು. ಈ ಸಂಬಂಧ ತನಿಖೆ ತೀವ್ರಗೊಳಿಸಿದ್ದ ಎಸ್ಐಟಿ ಅಧಿಕಾರಿಗಳು ಮೈಸೂರಿನ ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿ ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ರೇವಣ್ಣರ ಪಿಎ ರಾಜಶೇಖರ ಎಂಬುವರ ತೋಟದ ಮನೆಯಲ್ಲಿದ್ದ ಮಹಿಳೆಯನ್ನು ರಕ್ಷಿಸಿರುವ ಎಸ್ಐಟಿ ಅಧಿಕಾರಿಗಳು ಆಕೆಯನ್ನು ಸುರಕ್ಷಿತವಾಗಿ ಕರೆದೊಯ್ದಿದ್ದಾರೆ.

  • ಯಕ್ಷಗಾನ‌ ಲೋಕದ ಗಾನ ಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ.

    ಯಕ್ಷಗಾನ‌ ಲೋಕದ ಗಾನ ಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ.

    ಕುಮಟಾ : ಯಕ್ಷಗಾನದ ಬಡಗುತಿಟ್ಟಿನ ಶ್ರೇಷ್ಠ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಬೆಂಗಳೂರಿನ ಮನೆಯಲ್ಲಿ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಇವರಿಗೆ 67 ವರ್ಷ ವಯಸ್ಸಾಗಿತ್ತು. ʼಗಾನಕೋಗಿಲೆʼ ಎಂದೇ ಅಭಿಮಾನಿಗಳ ಮನದಲ್ಲಿ ನೆಲೆಯೂರಿರುವ, ಭಾಗವತರ ಅಂತ್ಯಕ್ರಿಯೆ ಇಂದು ಸಂಜೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾಗೂರಿನ ಸ್ವಗೃಹದಲ್ಲಿ ನಡೆಯಲಿದೆ. ಸುಮಾರು 46 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು, ಪತ್ನಿ, ಪುತ್ರ ಹವ್ಯಾಸಿ ಕಲಾವಿದ ಕಾರ್ತಿಕ್ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

    1957ರ ಸೆ.5ರಂದು ಜನಿಸಿದ ಅವರನ್ನು ಯಕ್ಷರಂಗದ ತಜ್ಞ ಭಾಗವತರೆಂದೇ ಗುರುತಿಸಲಾಗುತ್ತಿತ್ತು. ಯಕ್ಷಗಾನದ ಹೊಸ ಹಾಗೂ ಹಳೆಯ ಪ್ರಸಂಗಗಳ ಪರಿಣಿತರಾಗಿದ್ದರು. ಕೋಟ ಅಮೃತೇಶ್ವರಿ ಮೇಳ, ಪೆರ್ಡೂರು ಮೇಳಗಳಲ್ಲಿ ಭಾಗವತರಾಗಿ, ಹೊಸರಾಗಗಳನ್ನು ಹೊಸ ತಾಂತ್ರಿಕತೆಯನ್ನು ಯಕ್ಷರಂಗದಲ್ಲಿ ಯಶಸ್ವಿಯಾಗಿ ಬಳಸಿದರು.

    ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ, ಸನ್ಮಾನಗಳಿಗೆ ಪಾತ್ರರಾಗಿರುವ ಧಾರೇಶ್ವರ ಅವರು ಗುರುಗಳಾದ ನಾರಾಯಣಪ್ಪ ಉಪ್ಪೂರರನ್ನು ಸದಾ ಸ್ಮರಿಸುತ್ತಿದ್ದರು. ಸಾಂಪ್ರದಾಯಿಕ ರಾಗಗಳೊಂದಿಗೆ ಹೊಸ ರಾಗಗಳನ್ನು ತಂದು ಪೌರಾಣಿಕ ಹಾಗೂ ಸಾಮಾಜಿಕ ಪ್ರಸಂಗಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದ ಸುಬ್ರಹ್ಮಣ್ಯ ಧಾರೇಶ್ವರರು, ಕಾಳಿಂಗ ನಾವಡರರ ನಂತರ ಯಕ್ಷಗಾನ ರಂಗದಲ್ಲಿ ತನ್ನ ಇಂಪಾದ ಕಂಠದಿಂದ ಜನಪ್ರಿಯರಾದವರು.

    ಮೂಲತಃ ಎಲೆಕ್ಟ್ರಿಕಲ್ ಅಂಗಡಿ ಮಾಡಿಕೊಂಡಿದ್ದ ಸುಬ್ರಹ್ಮಣ್ಯ ಧಾರೇಶ್ವರ ಕೋಟದಲ್ಲಿ ಯಕ್ಷಗಾನ ಕೇಂದ್ರಕ್ಕೆ ಸೇರಿ ಅಲ್ಲಿ ಭಾಗವತಿಕೆಯ ಮಟ್ಟುಗಳನ್ನು ಕಲಿತರು. ಉಪ್ಪೂರರಿಂದ ಭಾಗವತಿಕೆಯ ಎಲ್ಲ ಪಟ್ಟುಗಳನ್ನು ಕಲಿತರು. ಆರಂಭದಲ್ಲಿ ಎಲೆಕ್ಟ್ರಿಶಿಯನ್ ಆಗಿ ಅಮೃತೇಶ್ವರಿ ಮೇಳಕ್ಕೆ ಸೇರಿದರು. ಈ ಸಂದರ್ಭ ಗುರುಗಳಾದ ಉಪ್ಪೂರರ ಒತ್ತಾಸೆಯಿಂದ ಭಾಗವತಿಕೆ ಮಾಡಲು ಆರಂಭಿಸಿದರು. ಪೀಠಿಕೆ ಸ್ತ್ರೀವೇಷದವರೆಗೆ ಪದ್ಯ ಹೇಳಿ, ಎಲೆಕ್ಟ್ರಿಶಿಯನ್ ಆಗಿ, ಹಗಲು ಮೈಕ್ ಜಾಹೀರಾತು ನೀಡುವ ಕೆಲಸವನ್ನು ಮಾಡುತ್ತಿದ್ದ ಧಾರೇಶ್ವರರು, ಬಳಿಕ ಭಾಗವತಿಕೆಯಲ್ಲೇ ತೊಡಗಿಸಿಕೊಂಡು ಜನಪ್ರಿಯರಾದರು. ಪೆರ್ಡೂರು ಮೇಳದಲ್ಲಿ ಸುಮಾರು 26ಕ್ಕೂ ಅಧಿಕ ವರ್ಷಗಳ ತಿರುಗಾಟ ಸಹಿತ ಧಾರೇಶ್ವರ ಚಾರಿಟೇಬಲ್ ಟ್ರಸ್ಟ್ ಮೂಲಕ ಯಕ್ಷಗಾನ ಸೇವೆ ಮಾಡಿದ್ದಾರೆ.

    ಸುಮಾರು 300ಕ್ಕೂ ಅಧಿಕ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಪ್ರಸಂಗಗಳನ್ನು ನಿರ್ದೇಶಿಸಿದ ಕೀರ್ತಿ ಧಾರೇಶ್ವರ ಅವರಿಗಿದೆ. ಪುರಂದರದಾಸ, ಕನಕದಾಸ, ಬಸವಣ್ಣ, ಚೆನ್ನಮಲ್ಲಿಕಾರ್ಜುನರ ಕೀರ್ತನೆಗಳನ್ನೂ ಅವರು ಹಾಡಿದ್ದಾರೆ. ಕುವೆಂಪು, ಬೇಂದ್ರೆಯವರ ಹಾಡುಗಳೂ ಯಕ್ಷಗಾನದ ಹಾಡುಗಳಾಗಿದ್ದು ಧಾರೇಶ್ವರರ ಕಂಠದಲ್ಲಿ. ಅಮೃತ ವರ್ಷಿಣಿ, ಸಿಂಧೂರ ಭಾಗ್ಯ, ರಕ್ತ ತಿಲಕ, ಶೂದ್ರ ತಪಸ್ವಿನಿ, ಚಾರು ಚಂದ್ರಿಕೆ, ಗಗನ ಗಾಮಿನಿ, ವಸಂತ ಸೇನೆ ನಿರ್ದೇಶಿಸಿದ ಎಲ್ಲ ಪ್ರಸಂಗಗಳೂ ಜನಮಾನಸದಲ್ಲಿ‌ ಅಚ್ಚಳಿಯದೇ ಉಳಿದಿವೆ.

  • ಕರ್ನಾಟಕದ ಕುಳ್ಳ ಖ್ಯಾತಿಯ ಚಿತ್ರನಟ ದ್ವಾರಕೀಶ್ ಇನ್ನಿಲ್ಲ.

    ಕರ್ನಾಟಕದ ಕುಳ್ಳ ಖ್ಯಾತಿಯ ಚಿತ್ರನಟ ದ್ವಾರಕೀಶ್ ಇನ್ನಿಲ್ಲ.

    ಕರ್ನಾಟಕದ ಕುಳ್ಳ ಅಂತಾನೇ ಫೇಮಸ್ ಆಗಿದ್ದ ಹಿರಿಯ ನಟ, ನಿರ್ಮಾಪಕ ನಿರ್ದೇಶಕ ದ್ವಾರಕೀಶ್ ಇಂದು ಇಹಲೋಕ ತ್ಯಜಿಸಿದ್ದಾರೆ. 81 ವರ್ಷ ವಯಸ್ಸಿನ ದ್ವಾರಕೀಶ್ ಅವರು ವಯೋಸಹಜ ಕಾಯಿಲೆಯಿಂದ ಬಳುತ್ತಿದ್ದರು. ದ್ವಾರಕೀಶ್ ಅವರ ನಿಧನದ ಬಗ್ಗೆ ಅವರ ಪುತ್ರ ಯೋಗಿ ಅವರು ಮಾಹಿತಿ ನೀಡಿದ್ದಾರೆ.ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಬಾಲಕೃಷ್ಣ, ಅಶ್ವಥ್, ಸೇರಿದಂತೆ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್​​ಗಳ ಜೊತೆ ಅಭಿನಯಿಸಿದ ಕೀರ್ತಿ ದ್ವಾರಕೀಶ್ ಅವರಿಗೆ ಸಲ್ಲುತ್ತದೆ.

    1964ರಲ್ಲಿ ವೀರಸಂಕಲ್ಪ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಬಂದ ದ್ವಾರಕೀಶ್ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. 40ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿರುವ ಇವರು 15ಕ್ಕೂ ಹೆಚ್ಚು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಡಾ.ರಾಜ್‌ಕುಮಾರ್, ವಿಷ್ಣುವರ್ಧನ್‌ ಅವರಂತಹ ದಿಗ್ಗಜರ ಸಿನಿಮಾಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದರು.

    ಹಾಸ್ಯ ಕಲಾವಿದರಾಗಿ, ನಾಯಕ ನಟನಾಗಿ ನೂರಾರು ಸಿನಿಮಾಗಳಲ್ಲಿ ದ್ವಾರಕೀಶ್ ತಮ್ಮ ಮನೋಜ್ಞ ಅಭಿನಯದಿಂದ ಕನ್ನಡ ಅಭಿಮಾನಿಗಳ ಕುಳ್ಳನಾಗಿ ಪ್ರಸಿದ್ಧಿ ಪಡೆದಿದ್ದರು. ಕನ್ನಡದ ಜೊತೆಗೆ ತಮಿಳು, ಹಿಂದಿ ಸಿನಿಮಾಗಳನ್ನೂ ದ್ವಾರಕೀಶ್ ನಿರ್ಮಿಸಿದ್ದಾರೆ. ಚಿತ್ರರಂಗದಲ್ಲಿ ಅವರ ಅಪಾರ ಸೇವೆ ಪರಿಗಣಿಸಿ ಬೆಂಗಳೂರು ವಿಶ್ವವಿದ್ಯಾನಿಲಯವು ಅವರಿಗೆ ಗೌರವ ಡಾಕ್ಟರೇಟ್‌ ನೀಡಿ ಪುರಸ್ಕರಿಸಿತ್ತು.

    ‘ಕರ್ನಾಟಕದ ಕುಳ್ಳ’ ಎಂದೇ ಕರೆಸಿಕೊಂಡ ಇವರು ಭಾರತೀಯ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ನಟ, ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ದ್ವಾರಕೀಶ್​ ಚಿತ್ರ ನಿರ್ಮಾಣ ಸಂಸ್ಥೆ ಮೂಲಕ ಹಲವು ಸೂಪರ್ ಹಿಟ್ ಸಿನಿಮಾದ ಜೊತೆಗೆ ಸಾಕಷ್ಟು ನಟ, ನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.ದ್ವಾರಕೀಶ್ ಮತ್ತು ಸಾಹಸಿಂಗ ವಿಷ್ಣುವರ್ಧನ್ ಜೋಡಿ ಕನ್ನಡ ಚಿತ್ರರಂಗದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದು, ಈ ಜೋಡಿ ಪ್ರಸಿದ್ಧವಾಗಿತ್ತು. ಗುರು ಶಿಷ್ಯರು, ಪ್ರಚಂಡ ಕುಳ್ಳ, ಕಳ್ಳಕುಳ್ಳ, ಕಿಟ್ಟುಪುಟ್ಟು, ಸಿಂಗಾಪೂರದಲ್ಲಿ ರಾಜಕುಳ್ಳ, ನ್ಯಾಯ ಎಲ್ಲಿದೆ, ಅದೃಷ್ಟವಂತ, ಪೆದ್ದ ಗೆದ್ದ, ಆಪ್ತಮಿತ್ರ, ಮುದ್ದಿನ ಮಾವ, ಮಂಕುತಿಮ್ಮ, ವಿಷ್ಣುವರ್ಧನ, ರಾಯರು ಬಂದರು ಮಾವನ ಮನೆಗೆ, ಪೊಲೀಸ್​ ಪಾಪಣ್ಣ, ಬಂಗಾರದ ಮನುಷ್ಯ, ಆಫ್ರಿಕಾದಲ್ಲಿ ಶೀಲಾ ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ದ್ವಾರಕೀಶ್ ಅದ್ಭುತ ನಟನೆ ಸಿನಿ ರಸಿಕರ ಮನ ಗೆದ್ದಿತ್ತು.

  • ಹಬ್ಬ-ಹರಿದಿನ, ಗ್ರಹಣ ಸೇರಿದಂತೆ ವಿಶೇಷ ದಿನಗಳಂದು ಜ್ಯೋತಿಷ್ಯ ಹೇಳುತ್ತಿದ್ದ ಜ್ಯೋತಿಷಿ ಇನ್ನಿಲ್ಲ.

    ಹಬ್ಬ-ಹರಿದಿನ, ಗ್ರಹಣ ಸೇರಿದಂತೆ ವಿಶೇಷ ದಿನಗಳಂದು ಜ್ಯೋತಿಷ್ಯ ಹೇಳುತ್ತಿದ್ದ ಜ್ಯೋತಿಷಿ ಇನ್ನಿಲ್ಲ.

    ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಜ್ಯೋತಿಷಿ ಎಸ್.ಕೆ. ಜೈನ್ (67) (Astrologer SK Jain) ಅವರು ಶುಕ್ರವಾರ ಸಂಜೆ ನಿಧನರಾದರು. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ನಗರದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

    ಎಸ್.ಕೆ. ಜೈನ್ ಅವರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ. ಡಾ ಸುರೇಂದ್ರ ಕುಮಾರ್ ಜೈನ್ (ಎಸ್.ಕೆ.ಜೈನ್) ಅವರು 1957ರ ಅಕ್ಟೋಬರ್ 13ರಂದು ಜನಿಸಿದ್ದರು. ಮೂಲತಃ ದಕ್ಷಿಣ ಕನ್ನಡದವರಾದ ಇವರು, ಬೆಳೆದಿದ್ದು ಮಾತ್ರ ಬೆಂಗಳೂರಿನಲ್ಲಿ. ಶ್ವಾಸಕೋಶದಲ್ಲಿ ನೀರು ಶೇಖರಣೆಗೊಂಡು ದೇಹಕ್ಕೆಲ್ಲಾ ಹರಡಿದ್ದರಿಂದ ಮಾರ್ಚ್ 18ರಂದು ಸಂಜೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಸಂತೋಷ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪ್ರಥಮ ಚಿಕಿತ್ಸೆ ನಂತರ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ಸ್ಥಳಾಂತರಿಲಾಸಗಿತ್ತು. ಏಪ್ರಿಲ್ ಎರಡನೇ ವಾರದಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು.

    ಮತ್ತೆ ಅಸ್ವಸ್ಥರಾಗಿದ್ದರಿಂದ ಅವರನ್ನು 4 ದಿನಗಳ ಹಿಂದೆ ಭಗವಾನ್ ಮಹಾವೀನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಬಿಳಿರಕ್ತ ಕಣಗಳು ಕಡಿಮೆಯಾಗಿ, ಲೋ ಬಿಪಿ ಆಗಿದ್ದರಿಂದ ಸೋಂಕು ದೇಹದ ಇತರ ಭಾಗಗಳಿಗೆ ಹರಡಿ ಜೈನ್ ಅವರು ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    ಹಬ್ಬ-ಹರಿದಿನ, ಗ್ರಹಣ ಸೇರಿದಂತೆ ವಿಶೇಷ ದಿನಗಳಂದು ನ್ಯೂಸ್‌ ಚಾನೆಲ್‌ಗಳಲ್ಲಿ ರಾಶಿ ಫಲಾಫಲ ಸೇರಿ ದಿನದ ವಿಶೇಷತೆಗಳ ಬಗ್ಗೆ ಜ್ಯೋತಿಷ ಹೇಳುತ್ತಿದ್ದ ಇವರು, ಉದಯ ವಾಹಿನಿಯಲ್ಲಿ ಜ್ಯೋತಿಷ ಕಾರ್ಯಕ್ರಮ ನಡೆಸಿಕೊಡುವುದರ ಮೂಲಕ ಕನ್ನಡ ವಿದ್ಯುನ್ಮಾನ ಮಾಧ್ಯಮದ ಮೊಟ್ಟಮೊದಲ ಜ್ಯೋತಿಷಿ ಎಂಬ ಖ್ಯಾತಿ ಹೊಂದಿದ್ದರು.

  • ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ -1ರ ಫಲಿತಾಂಶ ಘೋಷಣೆ.

    ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ -1ರ ಫಲಿತಾಂಶ ಘೋಷಣೆ.

    ಬೆಂಗಳೂರು : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ -1ರ ಫಲಿತಾಂಶವನ್ನು (2nd PUC Result) ಬುಧವಾರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಒಟ್ಟಾರೆ 81.15ರಷ್ಟು %ಮಂದಿ ಉತ್ತೀರ್ಣರಾಗಿದ್ದಾರೆ. ಹೊಸದಾಗಿ ಪರೀಕ್ಷೆ ಬರೆದವರು ಶೇ.84.59 ಫಲಿತಾಂಶ ದಾಖಲಿಸಿದ್ದಾರೆ.

    ವಿಜ್ಞಾನ ವಿಭಾಗದಲ್ಲಿ 2,49,927 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 1,74,315 ವಿದ್ಯಾರ್ಥಿಗಳು, ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

    97.37% ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ. 96.80% ಫಲಿತಾಂಶದೊಂದಿಗೆ ಉಡುಪಿ ಜಿಲ್ಲೆ ಎರಡನೇ ಸ್ಥಾನ, 94.89% ಫಲಿತಾಂಶದೊಂದಿಗೆ ವಿಜಯಪುರ ಜಿಲ್ಲೆ ಮೂರನೇ ಸ್ಥಾನ ಹಾಗೂ ಶೇ.92.51 ಫಲಿತಾಂಶದೊಂದಿಗೆ ಉತ್ತರ ಕನ್ನಡ ಜಿಲ್ಲೆ ನಾಲ್ಕನೇ ಸ್ಥಾನ ಪಡೆದಿದೆ. ಗದಗ ಜಿಲ್ಲೆ ಶೇ.72.86 ಫಲಿತಾಂಶದೊಂದಿಗೆ ಕೊನೆ ಸ್ಥಾನ ಪಡೆದಿದೆ. ಬೆಂಗಳೂರು ಉತ್ತರ ಶೇ.88.67 ಹಾಗೂ ಬೆಂಗಳೂರು ದಕ್ಷಿಣ ಶೇ.89.57 ಫಲಿತಾಂಶ ದಾಖಲಿಸಿವೆ.

    ಗಣಿತದಲ್ಲಿ 6960 ಮಂದಿ, ಜೀವಶಾಸ್ತ್ರದಲ್ಲಿ 5925 ಮಂದಿ, 2570 ಮಂದಿ ಕನ್ನಡದಲ್ಲಿ , 1499 ಮಂದಿ ಸಂಸ್ಕೃತದಲ್ಲಿ , ಅರ್ಥಶಾಸ್ತ್ರದಲ್ಲಿ 1403 ಮಂದಿ, ಗಣಕ ವಿಜ್ಞಾನದಲ್ಲಿ 2661 ಮಂದಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ.
    ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿ ಗಳು – 6,98,378
    ತೇರ್ಗಡೆಯಾದ ಒಟ್ಟು ವಿದ್ಯಾರ್ಥಿಗಳು- 5,52690
    ಶೇಕಾಡ 85% ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು – 1,53,370
    ಶೇಕಡಾ 60% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು– 2,89,733
    ದ್ವಿತೀಯ ದರ್ಜೆ- 72,098
    ತೃತೀಯ ದರ್ಜೆಯಲ್ಲಿ ಉತ್ತೀರ್ಣರಾದವರು – 37,489

  • ಅಖಿಲ ಹವ್ಯಕ ಮಹಾಸಭೆಯ 81 ನೆಯ ವರ್ಷದ ಸಂಸ್ಥಾಪನೋತ್ಸವ ಹಾಗೂ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭ

    ಅಖಿಲ ಹವ್ಯಕ ಮಹಾಸಭೆಯ 81 ನೆಯ ವರ್ಷದ ಸಂಸ್ಥಾಪನೋತ್ಸವ ಹಾಗೂ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭ

    ನಮ್ಮಲ್ಲಿರುವ ಜ್ಞಾನವನ್ನು ಹಂಚುವುದರ ಮೂಲಕ ಸಮಾಜಕ್ಕೆ ನಾವು ಉಪಕಾರಿಯಾಗಬೇಕು. ನಮ್ಮ ಸಾಧನೆಯ ಜೊತೆಜೊತೆಗೆ ನಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಜ್ಞಾನವನ್ನು ನಾವು ಹಂಚಬೇಕು ಹಾಗೂ ನಮ್ಮ ಅನುಭವಗಳನ್ನು ನಾವು ದಾಖಲಿಸಬೇಕು ಎಂದು ಡಾ| ಪಾದೇಕಲ್ಲು ವಿಷ್ಣುಭಟ್ ಹೇಳಿದರು.

    ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ನಡೆದ 81 ನೇ ವರ್ಷದ ಶ್ರೀ ಅಖಿಲ ಹವ್ಯಕ ಮಹಾಸಭೆಯ ಸಂಸ್ಥಾಪನೋತ್ಸವ ಹಾಗೂ ಹವ್ಯಕ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದ ಹಿರಿಯ ವಿದ್ವಾಂಸ ಹಾಗೂ ಭಾಷಾಶಾಸ್ತ್ರಜ್ಞರಾದ ಡಾ| ಪಾದೇಕಲ್ಲು ವಿಷ್ಣುಭಟ್ , ಹವ್ಯಕ ಮಹಾಸಭೆ ಸಾಧಕರನ್ನು ಸನ್ಮಾನಿಸುತ್ತಿರುವುದು ಈ ಸಾಧಕ ನಮ್ಮವ ಎಂದು ಸಮಾಜಕ್ಕೆ ಪರಿಚಯಿಸುವ ಕಾರ್ಯ. ಪ್ರತಿಭೆಯನ್ನು ಗೌರವಿಸುವುದು ಇನ್ನಷ್ಟು ಸಾಧನೆಗಳಿಗೆ ಪ್ರೇರಣೆಯಾಗಲಿದೆ. ಹವ್ಯಕ ಮಹಾಸಭೆ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ನಾವೆಲ್ಲ ಮಹಾಸಭೆಯ ಜೊತೆಯಾಗೋಣ ಎಂದರು.

    ಸಿ.ಐ.ಡಿ ಪೋಲೀಸ್ ಅಧೀಕ್ಷಕ ರಾಘವೇಂದ್ರ ಹೆಗಡೆ ಮುಖ್ಯ ಅಭ್ಯಾಗತರಾಗಿ ಮಾತನಾಡಿ, ಪ್ರಶಸ್ತಿ ಪುರಸ್ಕಾರದಿಂದ ಸಾಧನೆಗೆ ಗೌರವ ಸಲ್ಲಿಸಲ್ಪಟ್ಟರೆ, ಇನ್ನುಳಿದವರಿಗೆ ಅವರ ಸಾಧನೆಯೇ ಪ್ರೇರಣೆಯಾಗಲು ಸಾಧ್ಯ. ಹವ್ಯಕ ಮಹಾಸಭೆ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು. ಸಮಾಜದ ಉನ್ನತಿ ಇನ್ನಷ್ಟು ಸಾಧ್ಯವಾಗಲಿ ಎಂದರು.

    ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆ ಮಾತನಾಡಿ, ಹವ್ಯಕ ಸಮಾಜ ಯಾವುದೋ ಘರ್ಷಣೆ ಇತ್ಯಾದಿಗಳ ಕಾರಣದಿಂದ ಹುಟ್ಟುಕೊಂಡಿದ್ದಲ್ಲ. ಲೋಕಕಲ್ಯಾಣದ ಕಾರಣಕ್ಕಾಗಿಯೇ ಹುಟ್ಟಿಕೊಂಡವರು ಹವ್ಯಕರು. ಸ್ವಾತಂತ್ರ್ಯ ಪೂರ್ವದಲ್ಲೇ ಸಂಘಟಿತರಾಗಿ ಈ ಮಹಾಸಭೆಯನ್ನು ಹವ್ಯಕರು ಸಂಘಟಿಸದರು ಎಂದರೆ ನಮ್ಮ ಸಮಾಜದ ಮುಂದಾಲೋಚನೆಯನ್ನು ಗುರುತಿಸಲು ಸಾಧ್ಯ. ಹವ್ಯಕ ಮಹಾಸಭೆಯು 81 ನೇ ಸಂಸ್ಥಾಪನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಇಷ್ಟು ವರ್ಷಗಳಲ್ಲಿ ಮಹಾಸಭೆ ಎಷ್ಟು ಆಸ್ತಿಯನ್ನುಗಳಿಸಿದೆ ಎಂದು ಆಲೋಚಿಸುವುದಕ್ಕಿಂತ, ಪ್ರತಿಭಾವಂತ ಹವ್ಯಕ ಸಮಾಜವೇ ಮಹಾಸಭೆಯ ಆಸ್ತಿ ಎಂದು ಅಭಿಪ್ರಾಯ ಪಟ್ಟರು.

    2018 ರಲ್ಲಿ ಎರಡನೇ ವಿಶ್ವಹವ್ಯಕ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಅದಕ್ಕೆ ನಾಡಿನಾದ್ಯಂತ ಅಭೂತಪೂರ್ವ ಪ್ರತಿಸ್ಪಂದನೆ ವ್ಯಕ್ತವಾಗಿತ್ತು. ಇದೀಗ ಈ ವರ್ಷ ಡಿಸೆಂಬರ್ 27,28,29 ರಂದು 3ನೆಯ ವಿಶ್ವಹವ್ಯಕ ಸಮ್ಮೇಳನವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಹತ್ತಾರು ಸಮಾವೇಶಗಳು ನಡೆಯಲಿದ್ದು, ಇದು ಎಲ್ಲಾ ಸಮಾಜದವರಿಗೂ ಮುಕ್ತವಾಗಿರಲಿದೆ. ಇದು ಜಾತಿಯ ಸಮಾವೇಶವಾಗದೇ, ಹವ್ಯಕ ಸಮಾಜವನ್ನು ಸಮಷ್ಟಿ ಸಮಾಜಕ್ಕೆ ಪರಿಚಯಿಸುವ ಕಾರ್ಯ ಇಲ್ಲಿ ನಡೆಯಲಿದೆ ಎಂದರು.

    ಹವ್ಯಕ ವಿಭೂಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ, ಹೆಚ್.ಎಂ ತಿಮ್ಮಪ್ಪ ಕಲಸಿ,
    ನಮ್ಮವರು ನಮಗೆ ಕೊಡುವ ಪ್ರಶಸ್ತಿ ಅವಿಸ್ಮರಣೀಯವಾದುದು. ನೈಜವಾಗಿ ನೋಡಿದರೆ ನಾವು ಅಲ್ಪಸಂಖ್ಯಾತರಾಗಿದ್ದೇವೆ. ಆದರೆ ನಮಗೆ ಯಾವುದೇ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ. ಆದರೆ ನಮ್ಮಲ್ಲಿರುವ ಪ್ರತಿಭೆಯಿಂದ ನಾವು ಎಲ್ಲಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದೇವೆ ಎಂದರು.

    ಹವ್ಯಕರನ್ನು ಮಯೂರ ವರ್ಮ ಉತ್ತರದ ಅಹಿಚ್ಛತ್ರದಿಂದ ಕರೆದುಕೊಂಡು ಬಂದ ಎಂಬುದು ನಿಜವಾದರೂ, ಹವ್ಯಕರು ಮೂಲತಃ ಈ ನಾಡಿನವರು. ಕಾರಣಾಂತರಗಳಿಂದ ಇಲ್ಲಿಂದ ಉತ್ತರ ಭಾರತಕ್ಕೆ ವಲಸೆ ಹೋಗಿದ್ದರು. ಮಯೂರವರ್ಮ ಮತ್ತೆ ನಮ್ಮ ಈ ಮಣ್ಣಿಗೆ ಕರೆತಂದ ಎಂದು ಹವ್ಯಕರ ಇತಿಹಾಸದ ಕುರಿತಾಗಿ ಹೇಳಿದರು.

    ಗಣೇಶ್ ಎಲ್ ಭಟ್ ಅವರು ಹವ್ಯಕ ಭೂಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ,
    ಅಯೋಧ್ಯೆಯ ರಾಮಲಲಾ ಮೂರ್ತಿಯನ್ನು ಕೆತ್ತುವಾಗಿನ ಕುರಿತಾದ ಅನುಭವವನ್ನು ಹಂಚಿಕೊಂಡ ಇವರು, ಹವ್ಯಕರು ಮೂರ್ತಿ ಪೂಜಕರು. ನಾವು ಶಿಲ್ಪಶಾಸ್ತ್ರದ ಕುರಿತಾಗಿಯೂ ಬಲ್ಲವರಾದರೆ ಇನ್ನೂ ಹೆಚ್ಚಿನ ಅಧ್ಯಾತ್ಮ ಸಾಧನೆ ಸಾಧ್ಯ ಎಂದರು.

    ಪರಿಸರ ತಜ್ಞ ಶಿವಾನಂದ ಕಳವೆ ಹವ್ಯಕ ಭೂಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ,
    ಹವ್ಯಕ ಸಮಾಜ ಪರಿಸರ ತಜ್ಞ ಸಮಾಜವಾಗಿದೆ. ಪರಿಸರದ ಸೂಕ್ಷ್ಮಗಳನ್ನು ಗಮನಿಸಿ; ಅಭ್ಯಸಿಸಿ ಅಲ್ಲಿ ಕೃಷಿಯನ್ನು ಕಟ್ಟಿಬೆಳಸಿದ ಹೆಮ್ಮೆ ಹವ್ಯಕ ಸಮಾಜದ್ದು. ನಮ್ಮ ಹಿರಿಯರು ಕಾಡಿನ ಹಾಗೂ ಕಾಡಿನ ಉತ್ಪನ್ನಗಳ ಕುರಿತಾದ ಆಂತರಿಕ ಜ್ಞಾನ ಹೊಂದಿದ ಕೃಷಿ ವಿಜ್ಞಾನಿಗಳು ಎಂದು ಅಭಿಪ್ರಾಯಪಟ್ಟರು.

    ಇದಕ್ಕೂ ಮೊದಲು, ಹವ್ಯಕ ವಿಭೂಷಣ, ಹವ್ಯಕ ಭೂಷಣ, ಹವ್ಯಕ ಶ್ರೀ ಹಾಗೂ ಹವ್ಯಕ ಸೇವಾಶ್ರೀ ಪ್ರಶಸ್ತಿಯನ್ನು ಆಯ್ಕೆಯಾದ ಸಾಧಕರಿಗೆ ನೀಡಿ ಮಹಾಸಭೆಯ ಗೌರವ ಸಲ್ಲಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ 13 ಜನರಿಗೆ ಪಲ್ಲವಪುರಸ್ಕಾರ ನೀಡಿ ಗೌರವಿಸಲಾಯಿತು.

    ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷರಾದ ಆರ್ ಎಂ ಹೆಗಡೆ ಬಾಳೇಸರ, ಶ್ರೀಧರ ಜೆ ಭಟ್ಟ ಕೆಕ್ಕಾರು, ಕೋಸಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ, ಕಾರ್ಯದರ್ಶಿಗಳಾದ ಪ್ರಶಾಂತ ಕುಮಾರ ಜಿ ಭಟ್ಟ ಮಲವಳ್ಳಿ, ಆದಿತ್ಯ ಹೆಗಡೆ ಕಲಗಾರು, ಕಾರ್ಯಕ್ರಮದ ಸಂಚಾಲಕರಾದ ರವಿನಾರಾಯಣ ಪಟ್ಟಾಜೆ, ಮುಗಲೋಡಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

    ಸಭಾ ಕಾರ್ಯಕ್ರಮದ ನಂತರ ಕುಮಾರಿ ತುಳಸಿ ಹೆಗಡೆ ಅವರಿಂದ ನಡೆದ ಯಕ್ಷನೃತ್ಯ ರೂಪ ಸಭಾಸದರ ಮೆಚ್ಚುಗೆಗೆ ಪಾತ್ರವಾಯಿತು.

    ಪ್ರಶಸ್ತಿ ಪುರಸ್ಕೃತರು:

    ಹವ್ಯಕ ವಿಭೂಷಣ –
    1 ಶ್ರೀ ಹೆಚ್. ಎಂ. ತಿಮ್ಮಪ್ಪ ಕಲಸಿ – ಸಾಹಿತ್ಯ

    ಹವ್ಯಕ ಭೂಷಣ

    1. ಶ್ರೀ ಗಣೇಶ್ ಎಲ್ ಭಟ್ – ಶಿಲ್ಪಶಾಸ್ತ್ರ
    2. ಶ್ರೀ ಶಿವಾನಂದ ಕಳವೆ – ಪರಿಸರ
    3. ಯೋಗರತ್ನ ಶ್ರೀ ಗೋಪಾಲಕೃಷ್ಣ
      ದೇಲಂಪಾಡಿ – ಯೋಗ

    ಹವ್ಯಕ ಶ್ರೀ

    1. ಶ್ರೀ ಗಿರಿಧರ್ ದಿವಾನ್ – ಛಾಯಾಗ್ರಹಣ, ಸಂಗೀತ ನಿರ್ದೇಶನ
    2. ಶ್ರೀ ಗಣೇಶ್ ದೇಸಾಯಿ – ಸಂಗೀತ
    3. ಶ್ರೀಮತಿ ಮಂಗಳ ಬಾಲಚಂದ್ರ – ಕಥಾಕೀರ್ತನಕಾರರು

    ಹವ್ಯಕ ಸೇವಾಶ್ರೀ

    1. ಶ್ರೀ ಶ್ರೀಕಾಂತ ಹೆಗಡೆ ಅಂತ್ರವಳ್ಳಿ, ವಿಶ್ರಾಂತ ಸಂಪಾದಕರು ‘ಹವ್ಯಕ’ ಪತ್ರಿಕೆ
  • ಲೋಕಸಭಾ ಚುನಾವಣೆಗೆ ಸ್ಪರ್ಧಾಳುಗಳ ನಾಲ್ಕನೇ ಪಟ್ಟಿ ಹೊರಡಿಸಿದ ಬಿ.ಜೆ.ಪಿ

    ಲೋಕಸಭಾ ಚುನಾವಣೆಗೆ ಸ್ಪರ್ಧಾಳುಗಳ ನಾಲ್ಕನೇ ಪಟ್ಟಿ ಹೊರಡಿಸಿದ ಬಿ.ಜೆ.ಪಿ

    ನವದೆಹಲಿ : ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಶುಕ್ರವಾರ ತನ್ನ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು ಏಪ್ರಿಲ್ 19 ರಂದು ಮೊದಲ ಹಂತದ ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿರುವ ತಮಿಳುನಾಡು ಮತ್ತು ಪುದುಚೇರಿಯ ಸಂಸದೀಯ ಕ್ಷೇತ್ರಗಳ ಅಭ್ಯರ್ಥಿಗಳನ್ನು ಒಳಗೊಂಡಿದೆ.

    ಖ್ಯಾತ ನಟಿ ಹಾಗೂ ರಾಜಕಾರಣಿ ರಾಧಿಕಾ ಶರತಕುಮಾರ ಅವರಿಗೆ ತಮಿಳುನಾಡಿನ ವಿರುಧನಗರ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ರಾಧಿಕಾ ಶರತಕುಮಾರ್ ನಟ ಆರ್. ಶರತಕುಮಾರ ಅವರ ಪತ್ನಿ. ಶರತಕುಮಾರ ಅವರು ಮಾರ್ಚ್ 12 ರಂದು ತಮ್ಮ ಅಖಿಲ ಭಾರತೀಯ ಸಮತುವ ಮಕ್ಕಳ ಕಚ್ಚಿ (ಎಐಎಸ್‌ಎಂಕೆ) ಅನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು. ಅಭ್ಯರ್ಥಿಗಳ ಪಟ್ಟಿಯಲ್ಲಿ 2017 ರಲ್ಲಿ ಬಿಜೆಪಿಗೆ ಸೇರಿದ್ದ ಎಐಎಡಿಎಂಕೆಯ ಮಾಜಿ ಪ್ರಮುಖ ಸದಸ್ಯೆ ಪಿ. ಕಾರ್ತ್ಯಾಯಿನಿ ಕಾಣಿಸಿಕೊಂಡಿದ್ದಾರೆ. ಕಾರ್ತ್ಯಾಯಿನಿ ತಮಿಳುನಾಡಿನ ಚಿದಂಬರಂ (SC) ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

    ಅಭ್ಯರ್ಥಿಗಳ ಪಟ್ಟಿ ಇಂತಿದೆ.

  • ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅರೆಸ್ಟ್.

    ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅರೆಸ್ಟ್.

    ನವದೆಹಲಿ : ಅಬಕಾರಿ ನೀತಿ ಹಗರಣದ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ತಂಡವು ಗುರುವಾರ (ಮಾರ್ಚ್ 21) ರಾತ್ರಿ 9 ಗಂಟೆ ವೇಳೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದೆ. ಅವರ ಬಂಧನಕ್ಕೆ ತಡೆ ನೀಡಲು ದೆಹಲಿ ಹೈಕೋರ್ಟ್​ ನಿರಾಕರಿಸಿದ ನಂತರ ಗುರುವಾರ ಸಂಜೆ ವೇಳೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ನಿವಾಸಕ್ಕೆ ಹೋದ ಇ.ಡಿ. ಅಧಿಕಾರಿಗಳು ಅವರನ್ನು ರಾತ್ರಿ 9ರ ಸುಮಾರಿಗೆ ಬಂಧಿಸಿದ್ದಾರೆ.
    ಇ.ಡಿ. ಅಧಿಕಾರಿಗಳು ದೊಡ್ಡ ಮಟ್ಟದ ಪೊಲೀಸ್​ ಭದ್ರತೆಯೊಂದಿಗೆ ಅವರ ನಿವಾಸಕ್ಕೆ ತೆರಳಿ ಸತತವಾಗಿ ಎರಡು ಗಂಟೆಗಳ ಕಾಲ ಪರಿಶೋಧ ನಡೆಸಿದರು. ಇದೇ ವೇಳೆ ಕೇಜ್ರಿವಾಲ್ ಅವರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸಮರ್ಪಕ ಉತ್ತರ ಸಿಗದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನ ಬಂಧಿಸಲಾಗಿದೆ ಎಂದು ಹೇಳಲಾಗಿದೆ.

    ಕೇಜ್ರಿವಾಲ್ ಅವರ ಮನೆಗೆ ಅಧಿಕಾರಿಗಳು ತೆರಳುತ್ತಿದ್ದಂತೆ ಆಪ್​ ಕಾರ್ಯಕರ್ತರು ನಿವಾಸದ ಹೊರಗೆ ಪ್ರತಿಭಟನೆ ನಡೆಸಿದರು. ನಾಯಕರು ಮನೆಯ ಸುತ್ತ ಜಮಾಯಿಸಿ ಘೋಷಣೆಗಳನ್ನು ಕೂಗಿದರು. ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಇ.ಡಿ ಅಧಿಕಾರಿಗಳ ಬಂಧನದಿಂದ ರಕ್ಷಣೆ ಕೋರಿ ಅರವಿಂದ್‌ ಕೇಜ್ರಿವಾಲ್‌ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ ಬಲವಂತದಿಂದ ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಲು ನಿರಾಕರಿಸಿತ್ತು.


    ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು.

  • ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಲಿಸ್ಟ್

    ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಲಿಸ್ಟ್

    ಹೊಸದಿಲ್ಲಿ : ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು, ರಾಜ್ಯದ ಅಭ್ಯರ್ಥಿಗಳ ಹೆಸರು ಪ್ರಕಟವಾಗಿದೆ.

    ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರಕ್ಕೆ, ಮೈಸೂರಿಗೆ ಯದುವೀರ್, ಬೆಂಗಳೂರು ಗ್ರಾಮಾಂತರಕ್ಕೆ ಡಾ.ಸಿ ಎನ್ ಮಂಜುನಾಥ್, ದಕ್ಷಿಣ ಕನ್ನಡಕ್ಕೆ ಬ್ರಿಜೇಶ್ ಚೌಟ, ಉಡುಪಿ – ಚಿಕ್ಕಮಗಳೂರಿಗೆ ಕೋಟ ಶ್ರೀನಿವಾಸ ಪೂಜಾರಿ, ಶಿವಮೊಗ್ಗಕ್ಕೆ ಬಿ ವೈ ರಾಘವೇಂದ್ರ, ಹಾವೇರಿ ಬಸವರಾಜ ಬೊಮ್ಮಾಯಿ ಅಭ್ಯರ್ಥಿಗಳಾಗಿದ್ದಾರೆ.

    ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕ 20 ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್‌ ಮಾಡಲಾಗಿದೆ. ನಿರೀಕ್ಷೆಯಂತೆ ಮೈಸೂರಿನಿಂದ ಪ್ರತಾಪ್‌ ಸಿಂಹಗೆ ಟಿಕೆಟ್‌ ಮಿಸ್‌ ಆಗಿದೆ. ಕರ್ನಾಟಕದ ಒಟ್ಟು 20 ಕ್ಷೇತ್ರಗಳಿಗೆ ಟಿಕೆಟ್‌ ಘೋಷನೆಯಾಗಿದೆ. ಬಿಜೆಪಿಯ ಒಟ್ಟು 8 ಹಾಲಿ ಸದಸ್ಯರಿಗೆ ಈ ಬಾರಿ ಟಿಕೆಟ್‌ ತಪ್ಪಿದೆ. ಪ್ರತಾಪ್‌ ಸಿಂಹ, ಡಿವಿ ಸದಾನಂದ ಗೌಡ, ಕರಡಿ ಸಂಗಣ್ಣ, ಶಿವಕುಮಾರ್‌ ಉದಾಸಿ, ಜಿಎಸ್‌ ಬಸವರಾಜು ಅವರಿಗೆ ಟಿಕೆಟ್‌ ತಪ್ಪಿದೆ. ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಿಜೆಪಿ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ. ಯಾರು ನಾಯಕರಾಗುತ್ತಾರೆ ಎಂಬ ಬಗ್ಗೆ ತೀರ್ಮಾನ ಮಾಡಲಿದ್ದಾರೆ. ಜೆಡಿಎಸ್-ಬಿಜೆಪಿ ಮೈತ್ರಿ ಟಿಕೆಟ್‌ಗಳ ಕ್ಷೇತ್ರವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಪ್ರಮುಖವಾಗಿ ತುಮಕೂರು ಕ್ಷೇತ್ರದಿಂದ ವಿ. ಸೋಮಣ್ಣ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 2ನೇ ಪಟ್ಟಿಯಲ್ಲಿ ಲೋಕಸಭೆಗೆ ಒಟ್ಟು 72 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್‌ ಘೋಷಣೆ ಮಾಡಿದೆ.

    ಬಿಜಾಪುರ- ರಮೇಶ್ ಜಿಗಜಿಣಗಿ
    ಚಿಕ್ಕೋಡಿ- ಅಣ್ಣಾ ಸಾಹೇಬ್ ಜೊಲ್ಲೆ
    ಬಾಗಲಕೋಟೆ- ಪಿ.ಸಿ. ಗದ್ದಿಗೌಡರ
    ಕಲಬುರಗಿ- ಉಮೇಶ್ ಜಾಧವ್
    ಬೀದರ್- ಭಗವಂತ ಖೂಬಾ
    ಕೊಪ್ಪಳ- ಡಾ. ಬಸವರಾಜ ಕ್ಯಾವತೋರ್
    ಬಳ್ಳಾರಿ- ಶ್ರೀರಾಮುಲು
    ಹಾವೇರಿ- ಬಸವರಾಜ ಬೊಮ್ಮಾಯಿ
    ಧಾರವಾಡ- ಪ್ರಹ್ಲಾದ್ ಜೋಶಿ
    ದಾವಣಗೆರೆ- ಗಾಯತ್ರಿ ಸಿದ್ದೇಶ್ವರ
    ಶಿವಮೊಗ್ಗ- ಬಿ.ವೈ. ರಾಘವೇಂದ್ರ
    ಉಡುಪಿ-ಚಿಕ್ಕಮಗಳೂರು- ಕೋಟಾ ಶ್ರೀನಿವಾಸ ಪೂಜಾರಿ
    ದಕ್ಷಿಣ ಕನ್ನಡ – ಕ್ಯಾ.ಬ್ರಿಜೇಶ್ ಚೌಟಾ
    ತುಮಕೂರು – ವಿ. ಸೋಮಣ್ಣ
    ಮೈಸೂರು- ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
    ಚಾಮರಾಜನಗರ- ಎಸ್. ಬಸವರಾಜು
    ಬೆಂಗಳೂರು ಗ್ರಾಮಾಂತರ- ಡಾ.ಸಿ.ಎನ್. ಮಂಜುನಾಥ್
    ಬೆಂಗಳೂರು ಉತ್ತರ- ಶೋಭಾ ಕರಂದ್ಲಾಜೆ
    ಬೆಂಗಳೂರು ಕೇಂದ್ರ – ಪಿ.ಸಿ. ಮೋಹನ್
    ಬೆಂಗಳೂರು ದಕ್ಷಿಣ- ತೇಜಸ್ವಿ ಸೂರ್ಯ

    ಬಿಜೆಪಿಯ 9 ಸಂಸದರಿಗೆ ಟಿಕೆಟ್ ಮಿಸ್ ಆಗಿದೆ. ನಳಿನ್ ಕುಮಾರ್‌ ಕಟೀಲ್‌ಗೆ ದಕ್ಷಿಣ ಕನ್ನಡ, ಮೈಸೂರು ಕೊಡಗು ಕ್ಷೇತ್ರದಿಂದ ಪ್ರತಾಪ್‌ ಸಿಂಹ, ಕೊಪ್ಪಳದಿಂದ ಕರಡಿ ಸಂಗಣ್ಣ, ಬೆಂಗಳೂರು ಉತ್ತರದಿಂದ ಸದಾನಂದ ಗೌಡ, ಬಳ್ಳಾರಿಯಲ್ಲಿ ದೇವೇಂದ್ರಪ್ಪ ಅವರಿಗೆ ಟಿಕೆಟ್‌ ನಿರಾಕರಿಸಲಾಗಿದ್ದರೆ, ಚಾಮರಾಜನಗರದಲ್ಲಿ ಶ್ರೀನಿವಾಸ್‌ ಪ್ರಸಾದ್‌, ಹಾವೇರಿಯಲ್ಲಿ ಸಿಎಂ ಉದಾಸಿ, ತುಮಕೂರಿನಲ್ಲಿ ಜಿಎಸ್‌ ಬಸವರಾಜ್‌ ಹಾಗೂ ದಾವಣಗೆರೆಯಲ್ಲಿ ಜಿಎಂ ಸಿದ್ಧೇಶ್ವರ ನಿವೃತ್ತಿ ಘೋಷಣೆ ಮಾಡಿರುವ ಕಾರಣ ಬೇರೆಯವರಿಗೆ ಟಿಕೆಟ್‌ ನೀಡಲಾಗಿದೆ.