Satwadhara News

Category: KUMTA

ಉತ್ತರಕನ್ನಡದ ಕುಮಟಾ ತಾಲೂಕಿನಲ್ಲಿ ನಡೆದ ಕಾರ್ಯಕ್ರಮಗಳ ವರದಿ ಮತ್ತು ಇನ್ನಿತರ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

  • ಕುಮಟಾ ವೈಭವದ ಆಮಂತ್ರಣ ಪತ್ರಿಕೆ ಬಿಡುಗಡೆ : ಕಾರ್ಯಕ್ರಮದ ಬಗ್ಗೆ ಸಂಘಟಕರ ಮಾಹಿತಿ : ನ.೧೬ ರಿಂದ ಕಾರ್ಯಕ್ರಮ.

    ಕುಮಟಾ ವೈಭವದ ಆಮಂತ್ರಣ ಪತ್ರಿಕೆ ಬಿಡುಗಡೆ : ಕಾರ್ಯಕ್ರಮದ ಬಗ್ಗೆ ಸಂಘಟಕರ ಮಾಹಿತಿ : ನ.೧೬ ರಿಂದ ಕಾರ್ಯಕ್ರಮ.

    ಕುಮಟಾ : ತಾಂಡವ ಕಲಾನಿಕೇತನ ಹಾಗೂ ಕುಮಟಾ ವೈಭವ ಸಮಿತಿ ವತಿಯಿಂದ 6ನೇ ವರ್ಷದ ಕುಮಟಾ ವೈಭವ ಕಾರ್ಯಕ್ರಮ ನ.೧೬ ರಿಂದ ಪ್ರಾರಂಭಗೊಳ್ಳಲಿದ್ದು, ಸಂಘಟಕರು ಮಂಗಳವಾರ ಪಟ್ಟಣದ ದೇವರಹಕ್ಕಲದ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದ ಸಭಾಭವನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

    ಈ ಸಂದರ್ಭದಲ್ಲಿ ಕುಮಟಾ ವೈಭವ ಸಮಿತಿಯ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಮಾತನಾಡಿ, ವಿನೂತನವಾಗಿ ಹಾಗೂ ವಿಶೇಷವಾಗಿ ನಮ್ಮ ಸಂಸ್ಕೃತಿ, ಸಂಪ್ರದಾಯ, ಕಲೆ, ಜಾನಪದ ಇವುಗಳನ್ನು ಭೂಮಿಕೆಯಾಗಿ ಇಟ್ಟುಕೊಂಡು ಈ ವರ್ಷದ ಕಾರ್ಯಕ್ರಮವನ್ನು ಸಂಯೋಜಿಸಲಾಗಿದೆ.

    ಈ ಹಿಂದೆ ಕುಮಟಾದ ಜನರು ನಮ್ಮ ಕಾರ್ಯಕ್ರಮಕ್ಕೆ ಸಾಕಷ್ಟು ಬೆಂಬಲ ನೀಡಿದ್ದು, ಈ ವರ್ಷವೂ ಅತಿ ಹೆಚ್ಚಿನ ಬೆಂಬಲವನ್ನು ಬಯಸುತ್ತಿದ್ದೇವೆ ಎಂದರು. 

    ಕಾರ್ಯಕ್ರಮದ ಕುರಿತಾಗಿ ವಿವರಣೆ ನೀಡಿದ ಅವರು ಕಲರ್ಸ ಕನ್ನಡ ಖ್ಯಾತಿಯ ಎದೆ ತುಂಬಿ ಹಾಡುವೆನು ಕಲಾವಿದರಿಂದ ಸಂಗೀತ ಸಂಜೆ, ಬಾಲಿವುಡ್ ಬ್ಯಾಂಡ್ ಲಕ್ಷ್ಮಣ ನಾಯ್ಕ  ಹಾಗೂ ಸಂಗಡಿಗರಿಂದ ಕಾರ್ಯಕ್ರಮ, ನೃತ್ಯ ರೂಪಕ, ಬೆಲ್ಲಿ ನೃತ್ಯ, ಕನ್ನಡ ರಾಪರ್ಸ್ ರಾಹುಲ್ ಡಿಟ್ಟೋ ಹಾಗೂ ಎಮ್. ಸಿ ಬಿಜ್ಜೂರು ಅವರಿಂದ ಸಂಗೀತ ಕಾರ್ಯಕ್ರಮ, ಸುಗ್ಗಿ ಕುಣಿತ, ದಾಂಡಿಯಾ ರಾಸ್, ಫ್ಯೂಸನ್ ನೃತ್ಯ, ಭರತನಾಟ್ಯ, ಯಕ್ಷಗಾನ ರೂಪಕ, ಭಜನ್ ಇವುಗಳು ಜನರನ್ನು ರಂಜಿಸಲಿದೆ ಜೊತೆಗೆ ವೈವಿಧ್ಯಮಯ ಸ್ಟಾಲ್ ಗಳು, ಅಮ್ಯೂಸ್ಮೆಂಟ್ ಪಾರ್ಕ್ ಗಳು ಜನರ ಕೇಂದ್ರ ಬಿಂದುವಾಗಲಿದೆ ಎಂದರು. ಬಾರಿಯ 6ನೇ ವರ್ಷದ ಕಾರ್ಯಕ್ರಮವನ್ನು ವೈಭವ ಸಮಿತಿ ಹಾಗೂ ವಾರಿಯರ್ಸ್ ಟೀಮ್ ಜತೆಗೆ ಸಮಾಜಮುಖಯಾಗಿ ಆಚರಿಸಲು ತೀರ್ಮಾನಿಸಿದ್ದೇವೆ ಎಂದು ಅವರು ವಿವರಿಸಿದರು.

    ತಾಂಡವ ಕಲಾನಿಕೇತನ ಸಂಸ್ಥೆಯ ಸಂಸ್ಥಾಪಕ ಮಂಜುನಾಥ ನಾಯ್ಕ ಮಾತನಾಡಿ ಲಿಂಗಪ್ಪ ಮಾಸ್ತರ ವೇದಿಕೆಯಲ್ಲಿ ಪ್ರತಿದಿನ ಸಂಜೆ ೬:೩೦ ರಿಂದ ಕಾರ್ಯಕ್ರಮ ನಡೆಯಲಿದ್ದು, ಹಿಂದಿಗಿಂತ ಬಹು ವಿಭಿನ್ನವಾಗಿ ಕಾರ್ಯಕ್ರಮ ರೂಪಿಸಲಾಗಿದೆ ಇನ್ನು ಸಹ ಕಾರ್ಯಕ್ರಮ ಸೇರ್ಪಡೆಗೊಳ್ಳುತ್ತಿದ್ದು ಬಹು ವಿಶೇಷವಾದ ಇವೆಂಟ್ ಗಳು ನಡೆಯಲಿದೆ.

    ಬಡಜನರನ್ನು ಗುರುತಿಸಿ ಐದು ಜನರಿಗೆ ಮಾಸಾಶನ ನೀಡುವುದು. ನೂರು ಜನ ಕಲಾವಿದರನ್ನು ಏಕಕಾಲದಲ್ಲಿ ವೇದಿಕೆಗೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಕುಮಟಾ ವೈಭವ ಕೇವಲ ಕುಮಟಾಕ್ಕೆ ಮಾತ್ರವೇ ಸೀಮಿತವಾಗಿರದೆ ನಾಡವೈಭವವಾಗಬೇಕು ಇದನ್ನು ಸಾಂಸ್ಕೃತಿಕ ಕಾರ್ಯಕ್ರಮ ಎಂಬಂತೆ ಬಿಂಬಿಸದೆ ನಾಡಹಬ್ಬವಾಗಿ ಇದನ್ನು ಬಿಂಬಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

    ಈ ಸಂದರ್ಭದಲ್ಲಿ ನರಸಿಂಹ ಭಟ್ಟ ಕಡತೋಕಾ, ಮಂಜುನಾಥ ಹರಿಕಾಂತ, ಮಂಜು ಜೈನ್, ನಿರಂಜನ್ ನಾಯ್ಕ, ಯತಿರಾಜ ನಾಯ್ಕ, ರವಿ ಶೆಟ್ಟಿ, ಶಿವರಾಮ ಹರಿಕಾಂತ, ವಿಕಾಸ ನಾಯ್ಕ, ಪ್ರಾತೇಶ ನಂಬಿಯಾರ್ ಹಾಗೂ ಇತರರು ಇದ್ದರು.

  • ರೋಟರಿ ಸದ್ಭಾವನಾ ಪ್ರಶಸ್ತಿ ಪಡೆದ ವಸಂತ್ ರಾವ್ ಮತ್ತು  ಡಾ. ಸಂಜಯ್

    ರೋಟರಿ ಸದ್ಭಾವನಾ ಪ್ರಶಸ್ತಿ ಪಡೆದ ವಸಂತ್ ರಾವ್ ಮತ್ತು  ಡಾ. ಸಂಜಯ್

    ಕುಮಟಾ: ಇಲ್ಲಿಯ ರೋಟರಿ ಕ್ಲಬ್‌ನ ಸದಸ್ಯರುಗಳಾದ ರೋಟರಿಯ ಅಸಿಸ್ಟಂಟ್ ಗವರ್ನರ್ ವಸಂತ ರಾವ್ ಹಾಗೂ ಡಾ. ಸಂಜಯ್ ಪಟಗಾರ ಅವರಿಗೆ ಹೆಡ್‌ಬಂದರಿನ ಸೀಲಿಂಕ್ ಬೀಚ್ ಫಾರ್ಮನಲ್ಲಿ ನಡೆದ ರೋಟರಿಯ ಬೋರ್ಡ್ ಆಫ್ ಡೈರೆಕ್ರ‍್ಸ್ (ಬಿಒಡಿ) ಸಭೆಯಲ್ಲಿ ಕುಮಟಾ ರೋಟರಿಯು ಪ್ರಸ್ತುತ ಪಡಿಸುವ ‘ರೋಟರಿ ಸದ್ಭಾವನಾ ಪ್ರಶಸ್ತಿ’ಯನ್ನು ಕೊಡಮಾಡಲಾಗಿದೆ. ಅಂತರಾಷ್ಟೀಯ ರೋಟರಿಯ, ರೋಟರಿ ಫೌಂಡೇಶನ್ನಿಗೆ ಹಾಗೂ ಪಲ್ಸ್ ಪೋಲಿಯೋಗೆ ಅತಿ ಹೆಚ್ಚಿನ ದೇಣಿಗೆ ನೀಡಿದ ಪ್ರಯುಕ್ತ ವಸಂತ್ ರಾವ್ ಅವರಿಗೆ ಹಾಗೂ ರೋಟರಿ ಕ್ಲಬ್ ಸೇವೆಗೆ ಗಣನೀಯ ಕೊಡುಗೆ ನೀಡಿದ ಡಾ. ಸಂಜಯ್ ಪಟಗಾರ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

     ಟಿ.ಆರ್.ಎಫ್‌ನ  ಪ್ರಮುಖ ಧ್ಯೇಯವೆಂದರೆ ಆರೋಗ್ಯ ಸುಧಾರಣೆ, ಶೈಕ್ಷಣಿಕ ಬೆಂಬಲ ಮತ್ತು ಬಡತನದ ನಿವಾರಣೆಯೇ ಆಗಿದೆ.  ಆ ಮೂಲಕ ರೋಟರಿಯನ್ನರು ವಿಶ್ವ ತಿಳುವಳಿಕೆ, ಸದ್ಭಾವನೆ ಮತ್ತು ಶಾಂತಿಯನ್ನು ಮೂಡಿಸಲು  ಮುಂದಾಗುತ್ತಾರೆ. ವಸಂತ್ ರಾವ್ ಅವರು ಕಳೆದ ಕೆಲವಾರು ವರ್ಷಗಳಿಂದ ರೋಟರಿ ಸಂಸ್ಥೆಗೆ ದೇಣಿಗೆ ನೀಡುತ್ತಾ ಬಂದಿರುವುದು ಗಮನಾರ್ಹವಾಗಿದೆ ಎಂದರಲ್ಲದೇ ಈ ವರ್ಷವೂ ಗಣನೀಯ ಪ್ರಮಾಣದಲ್ಲಿ ದೇಣಿಗೆ ನೀಡಲಿದ್ದಾರೆ ಎಂದು ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ಬಿನ ಅಧ್ಯಕ್ಷ ಎನ್.ಆರ್.ಗಜು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರಲ್ಲದೇ ಸಮಾಜಮುಖಿ ಸೇವೆಯಲ್ಲಿರುವ ದಂತವೈದ್ಯ ಡಾ. ಸಂಜಯ್ ಅವರು ಕ್ಲಬ್ ಆಧಾರಿತ ಕಾರ್ಯಚಟುವಟಿಕೆಗಳಲ್ಲಿ ವಿಶಿಷ್ಠವಾಗಿ ತೊಡಗಿಸಿಕೊಂಡಿರುವುದನ್ನು ಉಲ್ಲೇಖಿಸಿದರು. 

    ಕಾರ್ಯದರ್ಶಿ ರಾಮದಾಸ ಗುನಗಿ ಕಾರ್ಯಕ್ರಮ ನಿರ್ವಹಿಸಿದರು. ಸನ್ಮಾನ ಸಮಾರಂಭದ ವೇದಿಕೆಯಲ್ಲಿ ಮಾಜಿ ಅಧ್ಯಕ್ಷರಾದ ಡಾ. ಡಿ.ಡಿ. ನಾಯಕ, ಜಿ.ಜೆ.ನಾಯ್ಕ, ಜೈವಿಠ್ಠಲ ಕುಬಾಲ, ಚೇತನ್ ಶೇಟ್ ಹಾಗೂ ಪದಾಧಿಕಾರಿಗಳಾದ ಎಸ್.ಎಸ್.ಭಟ್ ಲೋಕೇಶ್ವರ, ಗಣೇಶ್ ಎನ್. ಕಾಮತ, ಗುರುರಾಜ ಶೆಟ್ಟಿ, ವಿ.ಆರ್.ನಾಯ್ಕ, ಪವನ ಶೆಟ್ಟಿ, ನಿಖಿಲ್ ಕ್ಷೇತ್ರಪಾಲ, ವಿನಯ್ ನಾಯಕ, ಗಣೇಶ ನಾಯ್ಕ, ಡಾ. ನಿತಿಶ್ ಶಾನಭಾಗ, ಡಾ. ವಾಗೀಶ್ ಭಟ್, ಶ್ರೀನಿವಾಸ ನಾಯಕ, ಗಣೇಶ್ ಎಂ. ಕಾಮತ, ಲೋಹಿತ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು. ಪ್ರಣವ್ ಮಣಕೀಕರ್ ಸ್ವಾಗತಿಸಿದರು. ಯೋಗೇಶ್ ಕೋಡ್ಕಣಿ ನಿರೂಪಿಸಿದರು.

  • ‘ಶಕ್ತಿ ಸಂಚಯ’ ಮಹಿಳಾ ಸಮಾವೇಶದ ಸಿದ್ಧತೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವ ಮಹಿಳೆಯರು.

    ‘ಶಕ್ತಿ ಸಂಚಯ’ ಮಹಿಳಾ ಸಮಾವೇಶದ ಸಿದ್ಧತೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವ ಮಹಿಳೆಯರು.

    ಕುಮಟಾ :ಮನೆ ಮನೆಗಳು ಸಾಮಾಜಿಕ ಸಾಮರಸ್ಯದ ಕೇಂದ್ರಗಳಾಗಬೇಕು. ನಮ್ಮ ನಮ್ಮ ಮನೆಗಳ ಮುಖಾಂತರ ನಮ್ಮ ನಡೆ, ನುಡಿ, ಸಂಸ್ಕೃತಿಗಳು ಮತ್ತು ಸಾಮಾಜಿಕ ಜವಾಬ್ದಾರಿಗಳು ಹರಡುವಲ್ಲಿ ತಾಯಂದಿರ ಪಾತ್ರ ಬಹಳ ಹಿರಿದಾದುದು. ಈ ಉದ್ದೇಶಗಳ ಮೊದಲ ಹೆಜ್ಜೆಯಾಗಿ ಸಮಾಜದ ೧೧ ಆಯಾಮಗಳಿಂದ ಮಹಿಳೆಯರನ್ನು ಸಂಪರ್ಕಿಸಿ, ಸಹಸ್ರಾರು ಸಂಖ್ಯೆಯಲ್ಲಿ ಅವರನ್ನು ಒಟ್ಟಿಗೆ ಸೇರಿಸಿ ರಾಷ್ಟ್ರದಲ್ಲಿ ಜಾಗೃತಿಯನ್ನುಂಟು ಮಾಡುವ ನಿಟ್ಟಿನಲ್ಲಿ ದೇಶದೆಲ್ಲೆಡೆ 400 ಕ್ಕಿಂತಲೂ ಹೆಚ್ಚಿನ ಕಡೆಯಲ್ಲಿ “ಶಕ್ತಿ ಸಂಚಯ” ಮಹಿಳಾ ಸಮಾವೇಶಗಳನ್ನು ನಡೆಸಲಾಗುತ್ತಿದೆ.

    ಅಂತೆಯೇ ಕಾರವಾರ ಜಿಲ್ಲಾ ಮಹಿಳಾ ಸಮಾವೇಶವನ್ನು ‘ಶ್ರೀ ಕಲ್ಪತರು ಸೇವಾ ಪ್ರತಿಷ್ಠಾನ’ ಕುಮಟಾ ಇದರ ಆಶ್ರಯದಲ್ಲಿ ಇದೇ ಬರುವ ದಿನಾಂಕ 10 ಡಿಸೆಂಬರ್ 2023 ರವಿವಾರದಂದು ಕುಮಟಾದ ಗಿಬ್ ಹೈಸ್ಕೂಲ್ ಆವಾರದಲ್ಲಿ ಹಮ್ಮಿಕೊಳ್ಳಲಾಗಿದೆ.

    ಪೂರ್ವ ತಯಾರಿಯಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ವ್ಯಾಪಕವಾಗಿ ಸಂಪರ್ಕವನ್ನು ಮಾಡಲಾಗತ್ತಿದ್ದು ಕುಮಟಾದ “ಮಾಧವಕುಂಜ” ಸಂಘ ಕಾರ್ಯಾಲಯದಲ್ಲಿ ಜಿಲ್ಲಾ ಸಮನ್ವಯ ಗೋಷ್ಠಿಯನ್ನು ನಡೆಸಿ ಕಾರ್ಯಕ್ರಮದ ರೂಪು ರೇಷೆಯನ್ನು  ಸಿದ್ಧಪಡಿಸಲಾಯಿತು. ಈ ಸಂದರ್ಭದಲ್ಲಿ ಸಂಘಚಾಲಕ ಹನುಮಂತ ಶಾನಭಾಗ, ಮಾನನೀಯ ಆಶಾ ನಾಯಕ (ಮಹಿಳಾ ಸಮಾವೇಶದ ಪ್ರಾಂತ ಸಂಯೋಜಿಕಾ,) ಮಾರ್ಗದರ್ಶನ ಮಾಡಿದರು.

    ಭಗಿನಿ ಡಾ. ಶ್ರೀದೇವಿ  (ಜಿಲ್ಲಾ ಸಂಯೋಜಿಕಾ) ತಾಲೂಕುಶಃ ಚರ್ಚೆಯನ್ನು ನೆರವೇರಿಸಿದರು. 

    ಇಲ್ಲಿನ “ಪ್ರಕಾಶ ಸ್ಮೃತಿ ಭವನ”, ರತ್ನಾಕರ (ಬಗ್ಗೋಣ) ದಲ್ಲಿ ಸೇರಿದ ಸಭೆ ಯಲ್ಲಿ ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಸಿದ್ಧತೆಯಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡಿದ್ದು ಕಾರ್ಯಕ್ರಮದ ಯಶಸ್ಸಿಗೆ ಆಸಕ್ತಿಯಿಂದ ಕಾರ್ಯಪ್ರವರ್ತರಾಗಿದ್ದಾರೆ.

  • ಡಿವೈಡರ್ ಮೇಲೆ ಹತ್ತಿದ ಗ್ಯಾಸ್ ಟ್ಯಾಂಕರ್ : ಅಪಘಾತದಿಂದ ಕೆಲ ಸಮಯ ಭಯದ ವಾತಾವರಣ.

    ಡಿವೈಡರ್ ಮೇಲೆ ಹತ್ತಿದ ಗ್ಯಾಸ್ ಟ್ಯಾಂಕರ್ : ಅಪಘಾತದಿಂದ ಕೆಲ ಸಮಯ ಭಯದ ವಾತಾವರಣ.

    ಕುಮಟಾ : ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ‌ಒಂದು ಸೋಮವಾರ ತಡರಾತ್ರಿ ಹೆದ್ದಾರಿ ಬಿಟ್ಟು ಡಿವೈಡರ್ ಗೆ ಬಡಿದಿರುವ ಘಟನೆ ಕುಮಟಾ ಸಮೀಪದ ಹಂದಿಗೋಣದಲ್ಲಿ ನಡೆದಿದೆ. ಕುಮಟಾದಿಂದ ಮಂಗಳೂರು ಕಡೆ ತೆರಳುತ್ತಿದ್ದ ಖಾಲಿ ಗ್ಯಾಸ್ ಟ್ಯಾಂಕರ್ ಇದಾಗಿದ್ದು, ರಾತ್ರಿ ಸಮಯದಲ್ಲಿ ಕುಮಟಾ ತಾಲೂಕಿನ ಹಂದಿಗೋಣ ಸಮೀಪ ಹೆದ್ದಾರಿಯ ಪಕ್ಕದ ಡಿವೈಡರ್ ಗೆ ಬಡಿದಿದೆ. ಹೆದ್ದಾರಿ ಮಧ್ಯದಲ್ಲಿ ಡಿವೈಡರ್ ಹಾಕಲಾಗಿದ್ದು, ಚಾಲಕನ ನಿರ್ಲಕ್ಷ್ಯದಿಂದಾಗಿ ಗ್ಯಾಸ್ ಟ್ಯಾಂಕರ್ ಡಿವೈಡರ್ ಹತ್ತಿದೆ.

    ಅಪಘಾತದ ರಭಸಕ್ಕೆ ಸುತ್ತಲ ಜನ ಒಮ್ಮೆ ಭಯಗೊಂಡಿದ್ದರು, ಗ್ಯಾಸ್ ಟ್ಯಾಂಕರ್ ಆಗಿದ್ದ ಕಾರಣ ಭಯದ ವಾತಾವರಣ ಆವರಿಸಿತ್ತು. ಖಾಲಿ ಟ್ಯಾಂಕರ್ ಎಂಬುದು ಅರಿತ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ವಾಹನದ ಚಾಲಕ ಹಾಗೂ ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ.

  • ಕುಮಟಾಕ್ಕೆ ನೂತನ ತಹಶೀಲ್ದಾರರಾಗಿ ಪ್ರವೀಣ.

    ಕುಮಟಾಕ್ಕೆ ನೂತನ ತಹಶೀಲ್ದಾರರಾಗಿ ಪ್ರವೀಣ.

    ಕುಮಟಾ : ತಾಲೂಕಿನ ನೂತನ ದಂಡಾಧಿಕಾರಿಗಳಾಗಿ ಪ್ರವೀಣ ಎಸ್. ಕರಾಂಡೆ ಅಧಿಕಾರ ಸ್ವೀಕರಿಸಿದರು. ಕುಮಟಾದಲ್ಲಿ ಈ ಹಿಂದೆ ತಹಶೀಲ್ದಾರರಾಗಿ ಸತೀಶ ಗೌಡ ಸೇವೆ ಸಲ್ಲಿಸುತ್ತಿದ್ದರು. ಮೂಲತಃ ನಿಪ್ಪಾಣಿಯವರಾದ ಪ್ರವೀಣ ಬೆಳಗಾವಿಯಲ್ಲಿ ಈ ಹಿಂದೆ ಕಾರ್ಯ ನಿರ್ವಹಣೆ ಮಾಡಿದ್ದರು ಇವರು ೨೩ ವರ್ಷಗಳ ಸೇವಾ ಅನುಭವ ಹೊಂದಿದ್ದಾರೆ.

  • ಸ್ವರ ಸಂಧ್ಯಾ, ಗಾಯನ, ವಾದನ, ಸನ್ಮಾನ ಕಾರ್ಯಕ್ರಮ : ತಬಲಾ ಗುರು ಶೇಷಾದ್ರಿ ಅಯ್ಯಂಗಾರ್ ಗೆ ಸನ್ಮಾನ : ಸಂಘಟಕರ ಕಾರ್ಯದ ಬಗ್ಗೆ ಮೆಚ್ಚುಗೆ.

    ಸ್ವರ ಸಂಧ್ಯಾ, ಗಾಯನ, ವಾದನ, ಸನ್ಮಾನ ಕಾರ್ಯಕ್ರಮ : ತಬಲಾ ಗುರು ಶೇಷಾದ್ರಿ ಅಯ್ಯಂಗಾರ್ ಗೆ ಸನ್ಮಾನ : ಸಂಘಟಕರ ಕಾರ್ಯದ ಬಗ್ಗೆ ಮೆಚ್ಚುಗೆ.

    ಕುಮಟಾ : ಕಲೆ ಎಂದಿಗೂ ತ್ಯಾಗವನ್ನು ಕೇಳುತ್ತದೆ. ನಮ್ಮ ಭವಿಷ್ಯವನ್ನು ಕೇಳುತ್ತದೆ. ಕಲೆಯಲ್ಲಿ ತೊಡಗಿಕೊಂಡವನು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ತ್ಯಾಗದ ಮೂಲಕವೇ ಮಹೋನ್ನತ ಕಲೆ ಹೊರಹೊಮ್ಮಲು ಸಾಧ್ಯ. ತ್ಯಾಗದ ಮೂಲಕವೇ ಓರ್ವನು ಕಲಾವಿದನಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಹಿರಿಯ ಪತ್ರಕರ್ತ ಜೀ.ಯು ಭಟ್ಟ ಹೇಳಿದರು. ಅವರು ಕುಮಟಾ ಪಟ್ಟಣದ ಶಾಂತೇರಿ ಕಾಮಾಕ್ಷಿ ದೇವಸ್ಥಾನದಲ್ಲಿ ಸುರ್ ಸಪ್ತಕ್ ಮ್ಯೂಸಿಕ್ ಟ್ರಸ್ಟ್ ಮುಂಬೈ ಹಾಗೂ ಆರೋಹಿ ಸಾಂಸ್ಕೃತಿಕ ಸಂಸ್ಥೆ, ಶಿರಾಲಿ ಮತ್ತು ಚಂದನ ಗ್ರೂಪ್ ಅಂಕೋಲಾ ಹಾಗೂ ಇತರರ ಸಹಕಾರದಲ್ಲಿ ಹಮ್ಮಿಕೊಂಡ ಸ್ವರ ಸಂಧ್ಯಾ, ಗಾಯನ, ವಾದನ, ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

    ಒಂದು ಅಪೂರ್ವದ ಸಂಗೀತ ಕಾರ್ಯಕ್ರಮವನ್ನು ಸಂಘಟಿಸುವುದರ ಮೂಲಕ ಈ ಭಾಗದ ಸಂಗೀತ ಪ್ರೇಮಿಗಳ ಮನವನ್ನು ತಣಿಸಿದ್ದಾರೆ. ಕಲಾವಿದ ಕಲೆಗಾಗಿ ತಮ್ಮ ಬದುಕನ್ನು ಸಮರ್ಪಿಸಿಕೊಂಡಿರುತ್ತಾನೆ.  ತಬಲಾವನ್ನು ತಮ್ಮ ಜೀವನದ ಮುಖ್ಯ ಉದ್ದೇಶವಾಗಿಸಿಕೊಂಡು ತಮ್ಮ ಬದುಕನ್ನು ಸಾಗಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೂ ತಬಲಾದ ಶಿಕ್ಷಣವನ್ನು ಧಾರೆಯೆರೆಯುತ್ತಾ ಬಂದಿರುವ ಶೇಷಾದ್ರಿ ಅಯ್ಯಂಗಾರ್ ಹಾಗೂ ಅವರ ಕುಟುಂಬದವರು ಈ ದಿನ ಸನ್ಮಾನವನ್ನು ಸ್ವೀಕರಿಸಿದ್ದಾರೆ. ಇದು ಅರ್ಹರಿಗೆ ಸಂದ ಗೌರವ. ತನ್ನ ಕಲೆಗೆ ಹಾಗೂ ಶಿಷ್ಯರಿಗೆ ಕಲಿಕೆಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಯಾವುದೇ ಒಂದು ನೌಕರಿಗೂ ಕಟ್ಟು ಬೀಳದೆ ತ್ಯಾಗಮಯದ ಜೀವನ ನಡೆಸಿದವರು ಅವರು ಎಂದರು.

    ಗುರು ಬೆಲ್ಲವಾಗಿದ್ದರೆ ಮಾತ್ರ ಶಿಷ್ಯ ಸಕ್ಕರೆ ಆಗುತ್ತಾನೆ. ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸಬೇಕು ಎಂಬುದಾಗಿ ಭಾಷಣ ಮಾಡುವುದು ಸುಲಭ ಆದರೆ ಅದಕ್ಕಾಗಿ ತ್ಯಾಗ ಮಾಡುವವರು ಬಹಳ ಕಡಿಮೆ ಜನ ಇದ್ದಾರೆ ಅಂತಹ ತ್ಯಾಗಮಯಿ ಜೀವನವನ್ನು ಕಲಾವಿದರು ನಡೆಸುತ್ತಿದ್ದಾರೆ ಎಂದವರು ಬಣ್ಣಿಸಿದ್ದರು.

    ಹೆಸರಾಂತ ತಬಲಾ ಗುರು ವಿದ್ವಾನ್ ಎಂ.ವಿ. ಶೇಷಾದ್ರಿ ಅಯ್ಯಂಗಾರ್ ಹಾಗೂ ಅವರ ಪತ್ನಿ ತಬಲಾ ಕಾಲವಿದೆ ಸರಸ್ವತಿ ಅಯ್ಯಂಗಾರ್ ದಂಪತಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶೇಷಾದ್ರಿ ಅಯ್ಯಂಗಾರ್ ಈ ಸನ್ಮಾನಕ್ಕೆ ನಾನು ಅರ್ಹನೋ? ಅಲ್ಲವೋ? ಎಂಬುದು ಇನ್ನೂ ನನ್ನ ಮನಸ್ಸಿನಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ. ಆದರೆ ನನಗೆ ದೊರೆತಿರುವ ಈ ಸನ್ಮಾನವನ್ನು ನನಗೆ ತಬಲಾ ಕಲಿಸಿದ ಎಲ್ಲ ಗುರುಗಳಿಗೆ ಸಮರ್ಪಿಸುತ್ತೇನೆ ಎಂದು ಭಾವುಕರಾಗಿ ನುಡಿದರು.

    ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ವಾಂಸ ಹಾಗೂ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಬನ್ಸುರಿ ವಾದಕ ಎಸ್. ಶಂಭು ಭಟ್ಟ ಕಡತೋಕಾ ಮಾತನಾಡಿ ಕಲಾವಿದರಿಗೆ ಹಾಕಿದ ಶಾಲು, ಕೊಟ್ಟ ಉಡುಗೊರೆ, ಕಲಾವಿದರ ಬಗ್ಗೆ ಆಡುವ ಸಂತಸದ ನುಡಿಗಳು, ಹೊಗಳಿಕೆಗಳು ಅದು ಕಲಾವಿದರಿಗಷ್ಟೇ ಅಲ್ಲ ಕಲೆಗೆ ಕೊಡುವ ಗೌರವ. ಕಲಾವಿದರನ್ನು ಗೌರವಿಸುವುದು ಎಂದರೆ ನಮ್ಮನ್ನು ನಾವು ಬೆಳೆಸಿಕೊಂಡಂತೆ. ಕಲೆಯನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು ಇಂತಹ ಸಂಗೀತ ಕಾರ್ಯಕ್ರಮಗಳಿಗೆ ಹೆಚ್ಚು ಹೆಚ್ಚು ಜನರು ಸೇರಿ ಬೆಂಬಲ ನೀಡುವುದರ ಮೂಲಕ ಕಲೆಯನ್ನು ಉಳಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

    ಕೇವಲ ಶಾಲು ಹಾರಗಳು ಕಲಾವಿದರನ್ನು ಪ್ರೋತ್ಸಾಹಿಸುವುದಿಲ್ಲ ಸಂಗೀತ ಕೇಳುವ ಜನರ ದೊಡ್ಡ ದೊಡ್ಡ ಸಭೆಗಳು ಸಂಗೀತ ಕೇಳುವ ಜನರು ಬರುವುದು ಸಂಗೀತವನ್ನು ಆಸ್ವಾದಿಸುವುದು ನಿಜವಾಗಿಯೂ ಕಲಾವಿದನಿಗೆ ಆನಂದವನ್ನು ತಂದುಕೊಡುವ ಸಂಗತಿಯಾಗಿದೆ. ಕುಮಟಾದ ಹಲವು ಜನರು ಇಲ್ಲಿ ಬಂದು ಈ ಕಾರ್ಯಕ್ರಮ ಆಸ್ವಾದಿಸಿದ್ದಾರೆ. ಇದು ಕಲಾವಿದರ ಪುಣ್ಯ ಎಂದು ಅವರು ಅಭಿಪ್ರಾಯಪಟ್ಟರು.

    ವೇದಿಕೆಯಲ್ಲಿ ತಬಲಾ ವಾದಕ ಉದಯರಾಜ ಕರ್ಪೂರ, ಹಿಂದುಸ್ತಾನಿ ಗಾಯಕ ಮಹೇಶ ಮಹಾಲೆ ಅಂಕೋಲಾ, ಶ್ರೀ ಶಾಂತೇರಿ ಕಾಮಾಕ್ಷಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಶೇಷಗಿರಿ ಕೃಷ್ಣ ಶಾನಭಾಗ, ಮುರಳೀಧರ ಭಟ್ಟ ಇತರರು ಇದ್ದರು. ಸಂಘಟಕರಾದ ಪ್ರಶಾಂತ ಶೇಟಿಯಾ, ಶಂತನು ಶುಕ್ಲಾ ಇತರರು ಸಹಕರಿಸಿದರು.

    ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀಮೋತ್ತಮ ಮಠದ ಶ್ರೀಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮಿಜಿ ಕಾರ್ಯಕ್ರಮಕ್ಕೆ ಚಿತ್ತೃಸಿ ಸಂಗೀತ ಆಲಿಸಿದರು. ವಿದುಷಿ ತೇಜಸ್ವಿನಿ ವೆರ್ಣೇಕರ್ ವಾರಣಾಸಿ ಗಾಯನ ಜನಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಮಧು ಕುಡಾಲ್ಕರ್ ಅಂಕೋಲಾ ತಬಲಾ ಮತ್ತು ಅಜಯ ಹೆಗಡೆ ಶಿರಸಿ ಸಂವಾದಿನಿ, ಸುಧೀರ ಭಕ್ತ ಮುಂಬೈ ಇವರ ಬಾನ್ಸೂರಿ ಸಾತ್ ನೀಡಿದರು. ನಂತರದಲ್ಲಿ ಮಾನಸ್ ಗೋಸಾವಿ ಪುಣೆ ಇವರ ಮೋಹನ ವೀಣಾ ವಾದನ ನಡೆಯಿತು. ಡಾ. ಉದಯರಾಜ ಕರ್ಪೂರ್ ಬೆಂಗಳೂರು ಇವರು ತಬಲಾ ಸಾಥ್ ನೀಡಿದರು.

  • ಶ್ರೀನಾಗ ಹಾಗೂ ರಜತ ನಾಯಕ ಜಿಲ್ಲಾ ಮಟ್ಟಕ್ಕೆ ಆಯ್ಕೆ.

    ಶ್ರೀನಾಗ ಹಾಗೂ ರಜತ ನಾಯಕ ಜಿಲ್ಲಾ ಮಟ್ಟಕ್ಕೆ ಆಯ್ಕೆ.

    ಕುಮಟಾ : ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ ಉತ್ತರ ಕನ್ನಡ, ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಛೇರಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉತ್ತರಕನ್ನಡ, ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಕುಮಟಾ ಇವರ ಸಂಯುಕ್ತಾಶ್ರಯದಲ್ಲಿ ನಡೆದ ೨೦೨೩-೨೪ನೇ ಸಾಲಿನ ವಿಶ್ವ ಸೊಳ್ಳೆ ನಿಯಂತ್ರಣ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಂದ ಸೊಳ್ಳೆ ನಿಯಂತ್ರಣ ವಿಧಾನಗಳ ಮಾದರಿ ಪ್ರದರ್ಶನ ಸ್ಪರ್ಧೆಯಲ್ಲಿ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನ ೯ ನೇ ತರಗತಿ ವಿದ್ಯಾರ್ಥಿ ಎನ್.ವಿ ಶ್ರೀನಾಗ ಹಿರೇಗುತ್ತಿ ಹಾಗೂ ರಜತ ನಾಗರಾಜ ನಾಯಕ  ಮೊಗಟಾ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿರುತ್ತಾರೆ. 

    ಕುಮಟಾ ತಾಲೂಕಿಗೆ ಪ್ರಥಮಸ್ಥಾನ ಪಡೆದ ವಿದ್ಯಾರ್ಥಿ ಎನ್.ವಿ ಶ್ರೀನಾಗ ಹಾಗೂ ರಜತ ನಾಗರಾಜ ನಾಯಕ ಹಾಗೂ ಮಾರ್ಗದರ್ಶನ ನೀಡಿದ ಶಿಕ್ಷಕ ಮಹಾದೇವ ಬಿ ಗೌಡರವರಿಗೆ ಮಹಾತ್ಮಗಾಂಧೀ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೊನ್ನಪ್ಪ ಎನ್ ನಾಯಕ, ಉಪಾಧ್ಯಕ್ಷ ಶ್ರೀಕಾಂತ ನಾಯಕ ಕಾರ್ಯದರ್ಶಿ ಮೋಹನ ಬಿ ಕೆರೆಮನೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಮುಖ್ಯಾಧ್ಯಾಪಕ ರೋಹಿದಾಸ ಎಸ್ ಗಾಂವಕರ ಹಾಗೂ ಶಿಕ್ಷಕವೃಂದ ಮತ್ತು ಹಿರೇಗುತ್ತಿ, ಗ್ರಾಮ ಪಂಚಾಯತ ಅಧ್ಯಕ್ಷ ಶಾಂತಾ ಎನ್ ನಾಯಕ ಹಾಗೂ ಸದಸ್ಯರು, ಆಶ್ರಯ ಪೌಂಡೇಶನ್‌ನ ರಾಜೀವ ಗಾಂವಕರ, ಸುನೀಲ್ ಪೈ ಮಾದನಗೇರಿ, ಬ್ರಹ್ಮ ಜಟಕ ಯುವಕ ಸಂಘ ಅಧ್ಯಕ್ಷ ಸಣ್ಣಪ್ಪ ಮಾರುತಿ ನಾಯಕ ಹಾಗೂ ಸದಸ್ಯರು, ಊರಿನ ನಾಗರಿಕರು ಅಭಿನಂದಿಸಿ ಮುಂದಿನ ಹಂತಕ್ಕೆ ಶುಭ ಕೋರಿದ್ದಾರೆ.

  • ಅನಂತಮೂರ್ತಿ ಹೆಗಡೆಯವರ ಪಾದಯಾತ್ರೆಗೆ ಅಮೋಘ ಸ್ಪಂದನೆ : ಕುಮಟಾದಲ್ಲಿ ಭವ್ಯ ಸ್ವಾಗತ.

    ಅನಂತಮೂರ್ತಿ ಹೆಗಡೆಯವರ ಪಾದಯಾತ್ರೆಗೆ ಅಮೋಘ ಸ್ಪಂದನೆ : ಕುಮಟಾದಲ್ಲಿ ಭವ್ಯ ಸ್ವಾಗತ.

    ಕುಮಟಾ : ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ, ಸಮಾಜ ಸೇವಕ ಅನಂತಮೂರ್ತಿ ಹೆಗಡೆಯವರು ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಶಿರಸಿಯಿಂದ ಕಾರವಾರದ ವರೆಗೆ ಹಮ್ಮಿಕೊಂಡ ಪಾದಯಾತ್ರೆಯನ್ನು ಕುಮಟಾದಲ್ಲಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು, ಮಹಾಸತಿ ದೇವಾಲಯದ ಮುಂಭಾಗದಲ್ಲಿ ಸಭೆ ನಡೆಸಿ ಜನತೆ ಹೋರಾಟಕ್ಕೆ ಬೆಂಬಲ ಸೂಚಿಸಿದರು.

    ಜಿಲ್ಲೆಯಲ್ಲಿ ಎರಡು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಶಿರಸಿಯಿಂದ ಕಾರವಾರದವರೆಗೆ ಜಿಲ್ಲೆಯ ಜನರಿಗಾಗಿ ಪಾದಯಾತ್ರೆ ಮಾಡುತ್ತಿರುವ ಅನಂತಮೂರ್ತಿ ಹೆಗಡೆಯವರ ಕೆಲಸ ಪುಣ್ಯದ ಕೆಲಸ, ಇವರ ದಿಟ್ಟತನ ಮೆಚ್ಚಲೇಬೇಕು. ಇಂತಹ ಕೆಲಸವನ್ನು ನಾವೆಲ್ಲರೂ ಬೆಂಬಲಿಸಬೇಕು ಎಂದು ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಹೇಳಿದರು.

    ಶಿರಸಿಯಿಂದ ಕಾರವಾರದವರೆಗೆ ಪಾದಯಾತ್ರೆ ಮಾಡುವುದು ಸುಲಭದ ಮಾತಲ್ಲ. ಅನಂತಮೂರ್ತಿ ಹೆಗಡೆ ಒಂದು‌ ದಿಟ್ಟ ನಿರ್ಧಾರ ಮಾಡಿದ್ದಾರೆ. ನಮಗೊಂದು ಆಸ್ಪತ್ರೆ ಬೇಕು. ಈ ಕೆಲಸ ಯಾರಿಂದಾದರೂ ಆಗಲಿ, ಆದರೆ ಒಂದು ಒಳ್ಳೆಯ ಕೆಲಸ ಆಗಿ ಜನರಿಗೆ ಅನಕೂಲವಾಗಲಿ. ನಮ್ಮ‌‌ ನಿಮ್ಮೆಲ್ಲರ ಪರವಾಗಿ ಅನಂತಮೂರ್ತಿ ಹೆಗಡೆ ಹೋರಾಟ ಮಾಡುತ್ತಿದ್ದಾರೆ. ಪಕ್ಕದ ಜಿಲ್ಲೆಯ ಜನಪ್ರತಿನಿಧಿಗಳ ಹಾಗೆ ನಾವೆಲ್ಲ ಜನಪ್ರತಿನಿಧಿಗಳು ಪಕ್ಷ ಭೇದ ಮರೆತು ಆಸ್ಪತ್ರೆ ಸ್ಥಾಪನೆಗೆ ಒಗ್ಗಟ್ಟು ಪ್ರದರ್ಶನ ಮಾಡೋಣ. ಯಾವ ಸರ್ಕಾರ ಮಾಡಿದರೇನು ಒಟ್ಟಿನಲ್ಲಿ ಆಸ್ಪತ್ರೆಯಾಗಿ ಜನರಿಗೆ ಅನುಕೂಲ ಆಗಲಿ, ಕಾಂಗ್ರೆಸ್ ಸರ್ಕಾರ ಆಸ್ಪತ್ರೆ ನೀಡುವ ಗ್ಯಾರಂಟಿ ನೀಡಲಿ ಎಂದರು.

    ನಂತರ ಮಾತನಾಡಿದ ಪಾದಯಾತ್ರೆಯ ರೂವಾರಿಯಾದ ಅನಂತಮೂರ್ತಿ ಹೆಗಡೆ ಹಿಂದಿನ‌ ಬಿಜೆಪಿ ಸರ್ಕಾರ ಇದ್ದಾಗ ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣಕ್ಕಾಗಿ ಸರ್ಕಾರ ಜಾಗವನ್ನು ಪರಿಶೀಲನೆ‌ಮಾಡಿತ್ತು. ನಂತರ ಬಿಜೆಪಿ‌ ಸರ್ಕಾರ ಅಧಿಕಾರ ಕಳೆದುಕೊಂಡಿತು ಮುಂದೆ ಹಣವು ಕೂಡ ಬಿಡುಗಡೆಯಾಗಿಲ್ಲ. ಮುಂದೆ ಯಾವುದೇ ಪ್ರಕ್ರಿಯೆಯೂ ಮುಂದುವರೆಯಲಿಲ್ಲ. ಶಾಸಕರು ಮಾಡಿದ ಎಲ್ಲಾ ಪ್ರಯತ್ನ ವ್ಯರ್ಥವಾಗಿದೆ. ಎಲ್ಲಿಯಾದರೂ ಕೂಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನೆಡೆಯಬೇಕು ಎಂದರೆ ಅಲ್ಲಿ ಮೆಡಿಕಲ್ ಕಾಲೇಜು ಇರಬೇಕು. ಕಾಲೇಜು ಇಲ್ಲ ಎಂದರೆ ವೈದ್ಯಾಧಿಕಾರಿಗಳ ಕೊರತೆ ಉಂಟಾಗುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಗಲೇಬೇಕು ಇದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಒಗ್ಗಟ್ಟನ್ನು ತೋರಿಸಬೇಕು ಎಂದರು.

    ಕುಮಟಾದ ಹಿರಿಯ ವಕೀಲ ಆರ್. ಜಿ. ನಾಯ್ಕ ಮಾತನಾಡುತ್ತಾ, ಅನಂತಮೂರ್ತಿ ಹೆಗಡೆಯವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಅವರಿಗೆ ದೇವರು ಶಕ್ತಿ ನೀಡಲಿ, ಈ ಆಸ್ಪತ್ರೆ ವಿಚಾರವಾಗಿ ತಾವೆಲ್ಲರೂ ಒಗ್ಗಟ್ಟಾಗಿ ಪ್ರಯತ್ನ ಮಾಡಿ ಎಂದು ಶಾಸಕ ದಿನಕರ ಶೆಟ್ಟಿ ಅವರಿಗೆ ಸೂಚನೆ ನೀಡಿದ ಅವರು. ಉಸ್ತುವಾರಿ ಸಚಿವರು ಒಂದು ಸಭೆ ಕರೆದು ನಮ್ಮೆಲ್ಲರ ಅಭಿಪ್ರಾಯ ಸಂಗ್ರಹಿಸಿ ಜಿಲ್ಲೆಗೆ ಒಳ್ಳೆಯ ಕೆಲಸ ಮಾಡಲಿ ಎಂದರು.

    ಈ ಸಂದರ್ಭದಲ್ಲಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಶಿವರಾಜ ಮೇಸ್ತ, ಗ್ರಾ.ಪಂ ಅಧ್ಯಕ್ಷ ಆನಂದು ಕವರಿ, ಮೋಹಿನಿ ಗೌಡ, ಉದಯ ನಾಯ್ಕ ಸೇರಿದಂತೆ ತಾಲೂಕಿನ ಆಟೋ ಚಾಲಕರು, ಮಾಲಕರು, ಗ್ರಾ.ಪಂ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಕುಮಟಾದಿಂದ ದಿವಗಿ ಮೂಲಕ ಸಾಗಿದ ಪಾದಯಾತ್ರೆಗೆ ಮಿರ್ಜಾನನಲ್ಲಿ ಭವ್ಯ ಸ್ವಾಗತ‌ನೀಡಿ ಅಲ್ಲಿನ‌ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಸ್ಥಳೀಯರು ಪಾದಯಾತ್ರೆಗೆ ಬೆಂಬಲ ನೀಡಿದರು. ರವಿವಾರ ತಾಲೂಕಿನ ಬರ್ಗಿಯಲ್ಲಿ‌ ತಂಗಿರುವ ಪಾದಯಾತ್ರಿಗಳು ಸೋಮವಾರ ತಮ್ಮ ಪಾದಯಾತ್ರೆ ಮುನ್ನಡೆಸುವರು.

  • ಅನಂತಮೂರ್ತಿ ಹೆಗಡೆ ನೇತೃತ್ವದ ಪಾದಯಾತ್ರೆಗೆ ಅಪಾರ ಜನಬೆಂಬಲ : ನಾಳೆ ಕುಮಟಾದಲ್ಲಿ ಬೃಹತ್ ಸಭೆ

    ಅನಂತಮೂರ್ತಿ ಹೆಗಡೆ ನೇತೃತ್ವದ ಪಾದಯಾತ್ರೆಗೆ ಅಪಾರ ಜನಬೆಂಬಲ : ನಾಳೆ ಕುಮಟಾದಲ್ಲಿ ಬೃಹತ್ ಸಭೆ

    ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ಸಾಮಾಜಿಕ ಮುಖಂಡ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಶಿರಸಿಯಿಂದ ಕಾರವಾರದವರೆಗೆ ನಡೆಯುತ್ತಿರುವ ಪಾದಯಾತ್ರೆಯೂ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಪಾದಯಾತ್ರೆಯ ಮಾರ್ಗದ ಉದ್ದಕ್ಕೂ ಸ್ಥಳೀಯರ ಅಪಾರ ಜನಬೆಂಬಲ ವ್ಯಕ್ತವಾಗಿದೆ.

    ಇದು ಜನಪರ ಉದ್ದೇಶದ ಪಾದಯಾತ್ರೆಯಾಗಿದೆ. ಜಿಲ್ಲೆಯ ಜನರಿಗಾಗಿ ಸರ್ಕಾರವು ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಬೇಕು. ಇದು ಜನರ ಹಿತಕ್ಕಾಗಿ ಮತ್ತು ಜನಪರ ಉದ್ದೇಶಕ್ಕಾಗಿ ನಡೆಯುತ್ತಿರುವ ಪಾದಯಾತ್ರೆಯಾಗಿದೆ ಎಂದು ಅನಂತಮೂರ್ತಿ ಹೆಗಡೆ ತಿಳಿಸಿದರು.

    ಇಂದು ಪಾದಯಾತ್ರೆಯ ಮೂರನೇ ದಿನವಾಗಿದ್ದು, ಇಂದು ದೇವಿಮನೆಯಿಂದ, ಕತಗಾಲ, ಹಾಗೂ ಅಂತ್ರವಳ್ಳಿ ಮೂಲಕ ದಿವಗಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಪಾದಯಾತ್ರೆಯು ಸಾಗುವ ಮಾರ್ಗದ ಎಲ್ಲಾ ಊರುಗಳಲ್ಲಿ ಜನರು ಪಾದಯಾತ್ರೆಯನ್ನು ಆತ್ಮೀಯವಾಗಿ ಬರಮಾಡಿಕೊಂಡು ತಮ್ಮ ಬೆಂವಲ‌ ನೀಡುತ್ತಿದ್ದಾರೆ. ವಿವಿಧ ಸಂಘಟನೆಗಳ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರು ಅನಂತಮೂರ್ತಿಯವರ ಪಾದಯಾತ್ರೆಗೆ ಬೆಂಬಲ ಸೂಚಿಸಿ ಅವರೊಂದಿಗೆ ಪಾದಯಾತ್ರೆಯಲ್ಲಿ ಸಾಗುತ್ತಿದ್ದಾರೆ.
    ಶನಿವಾರ ದೇವಿಮನೆಯಿಂದ ಪ್ರಾರಂಭವಾದ ಪಾದಯಾತ್ರೆಯೂ ಮಧ್ಯಾಹ್ನದ ವೇಳೆಗೆ ಕುಮಟಾ ತಾಲೂಕಿನ ಕತಗಾಲಕ್ಕೆ ಬಂದಿದ್ದು, ಇಲ್ಲಿನ ಗ್ರಾಮಸ್ಥರು ಭವ್ಯವಾಗಿ ಸ್ವಾಗತ ನೀಡಿ ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಪಾದಯಾತ್ರೆಗೆ ಮುಖಂಡರುಗಳ ಸಾಥ
    ಇಂದು ದೇವಿಮನೆಯಿಂದ ಪ್ರಾರಂಭವಾದ ಪಾದಯಾತ್ರೆಗೆ ದೇವಿಮನೆಯಲ್ಲಿ ಕೆಡಿಸಿಸಿ ಬ್ಯಾಂಕ್ ನಿಧೇರ್ಶಕ ಶಿವಾನಂದ ಹೆಗಡೆ ಕಡತೋಕಾ, ಮನುವಿಕಾಸ ಸಂಸ್ಥೆಯ ನಿದೇರ್ಶಕ ಗಣಪತಿ ಭಟ್ ಅನಂತಮೂರ್ತಿ ಹೆಗಡೆ ಸಾಥ ನೀಡಿದರೆ, ನಂತರ ಸಾಗಿದ ಪಾದಯಾತ್ರೆಯೂ ಮಧ್ಯಾಹ್ನದ ವೇಳೆಗೆ ಕುಮಟಾ ತಾಲೂಕಿನ ಕತಗಾಲ ತಲುಪಿದ್ದು, ಇಲ್ಲಿ ಕೆಡಿಸಿಸಿ ಬ್ಯಾಂಕ್ ನಿದೇರ್ಶಕ ಗಜಾನನ ಪೈ, ಕತಗಾಲ್ ಪಂಚಾಯತ್ ಅಧ್ಯಕ್ಷ ದೇವು ಗೌಡ, ಪಂಚಾಯತ್ ಸದಸ್ಯರಾದ ಮಹೇಶ್ ದೇಶಭಂಡಾರಿ, ರಾಜೀವ ಭಟ್ ಸೇರಿದಂತೆ ನೂರಾರು ಜನರು ಬೆಂಬಲ ಸೂಚಿಸಿ ಪಾದಯಾತ್ರೆಯಲ್ಲಿ ಹೆಜ್ಜೆಹಾಕಿದರು.

    ಕುಮಟಾದಲ್ಲಿ ಬೃಹತ್ ಸಭೆ ಶಾಸಕ ದಿನಕರ ಶೇಟ್ಟಿ‌ ಭಾಗಿ

    ನಾಳೆ ರವಿವಾರ ಬೆಳಿಗ್ಗೆ ಪಾದಯಾತ್ರೆಯೂ ಕುಮಟಾದ ಬಸ್ ನಿಲ್ದಾಣ ಮುಂಭಾಗ ತಲುಪಲಿದ್ದು, ಬೆಳಿಗ್ಗೆ 8 ಘಂಟೆಗೆ ಸಾರ್ವಜನಿಕರನ್ನುದ್ದೇಶಿಸಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ. ಸಭೆಗೆ ಹೊನ್ನಾವರ – ಕುಮಟಾ ಕ್ಷೇತ್ರದ ಶಾಸಕ ದಿನಕರ್ ಶೇಟ್ಟಿಯವರು ಸೇರಿದಂತೆ ಅನೇಕ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಪಾದಯಾತ್ರೆಯ ರೂವಾರಿ ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ.

  • ಗಣಪತಿ ಹೆಗಡೆ ಕೊಂಡದಕುಳಿ ಅವರ ದೇವದೀಪ ಲೋಕಾರ್ಪಣೆ : ಮುಕ್ತಕಗಳ ಬಗ್ಗೆ ಮೆಚ್ಚುಗೆ.

    ಗಣಪತಿ ಹೆಗಡೆ ಕೊಂಡದಕುಳಿ ಅವರ ದೇವದೀಪ ಲೋಕಾರ್ಪಣೆ : ಮುಕ್ತಕಗಳ ಬಗ್ಗೆ ಮೆಚ್ಚುಗೆ.

    ಕುಮಟಾ : ಜಗತ್ತಿನಲ್ಲಿ ಜೀವಿಸುವವರು ಹಲವರು ಇರುತ್ತಾರೆ. ಬದುಕುವವರು ಕೆಲವೇ ಕೆಲವರು ಮಾತ್ರ. ನಮ್ಮೊಳಗಿನ ಸ್ಪುರಣೆಯನ್ನು ಜಗತ್ತಿಗೆ ತಿಳಿಸುವ ಕಾರ್ಯ ಮಾಡುವವನು ನಿಜವಾಗಿ ಬದುಕುವವನು. ಉಳಿದವನು ಸಾಮಾನ್ಯವಾಗಿ ಜೀವಿಸುವುದು ಮಾತ್ರ ಎಂದು ಡಾ.‌ಎ.ವಿ ಬಾಳಿಗಾ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ. ಮಹೇಶ ಅಡ್ಕೋಳಿಯವರು ಹೇಳಿದರು. ಬುಧವಾರ ತಾಲೂಕಿನ ನಾದಶ್ರೀ ಕಲಾ ಕೇಂದ್ರದಲ್ಲಿ ಕನ್ನಡ ಚಂದ್ರಮ ಉತ್ತರ ಕನ್ನಡವು ಪ್ರಕಾಶಿಸಿದ ನಾಡಿನ ಪ್ರತಿಭಾನ್ವಿತ ಕವಿ ಗಣಪತಿ ಕೊಂಡದಕುಳಿಯವರ ಚತುರ್ಥ ಕೃತಿ  “ದೇವದೀಪ” ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. 

    ಬದುಕಿನ ಕಷ್ಟಗಳನ್ನು ನೋವುಗಳನ್ನು ನುಂಗಿ ಬದುಕಿದ ಗಣಪತಿ ಹೆಗಡೆ ಕೊಂಡದಕುಳಿಯವರು ಜೀವಕ್ಕೆ ಬೇಕಾದ ಹಿತನುಡಿಗಳನ್ನು ತಮ್ಮ ಮುಕ್ತಕಗಳ ಮೂಲಕ ಬರೆದಿದ್ದಾರೆ. ಹಾಗಾಗಿ ಈ ಪುಸ್ತಕ ದೇವ ದೀಪ ಎಂಬುದಕ್ಕಿಂತಲೂ ‘ಜೀವ ದೀಪ’ ಎಂದು ಉಲ್ಲೇಖ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು. ಕಾಡಿನಲ್ಲಿ ಉರಿವ ಬೆಂಕಿಯ ಜೊತೆಗೆ ಗಾಳಿ ಗೆಳೆತನ ಬೆಳೆಸುತ್ತದೆ, ಚಿಕ್ಕ ದೀಪವನ್ನು ಗಾಳಿ ನಂದಿಸುತ್ತದೆ. ದುರ್ಬಲರೊಡನೆ ಯಾರು ಗೆಳೆತನ ಮಾಡುತ್ತಾರೆ ಎಂಬ ಮಾತನ್ನೂ ಕಾವ್ಯಾತ್ಮಕವಾಗಿ ಕವಿ ಜನರಿಗೆ ತಲುಪಿಸಿದ್ದಾರೆ ಎಂದು ಅವರು ಕನ್ನಡದ ಹಲವಾರು ಉದಾಹರಣೆಗಳೊಂದಿಗೆ ಗಣಪತಿ ಹೆಗಡೆಯವರ ಬರಹವನ್ನು ತಾಳೆಹಾಕಿದರು.

    ದೇವದೀಪದಲ್ಲಿ ಬರೆದ ಹಲವು ಮುಕ್ತಕಗಳನ್ನು ಉಲ್ಲೇಖಿಸಿ, ಅರ್ಥಾಂತರ ನ್ಯಾಸದ ಕುರಿತಾಗಿ ವಿವರಿಸಿದರು. ತಪ್ಪೋ ಒಪ್ಪೋ ಬೆಪ್ಪರಂತೆ ಬಿದ್ದಿರುವುದಕ್ಕಿಂತ ವಿಭಿನ್ನವಾದುದನ್ನು ಸಾಧಿಸಲು ಹೊರಡುವ ನಾವುಗಳು ಎಚ್ಚರಿಕೆಯ ಹೆಜ್ಜೆ ಇಡಬೇಕು. ಗಣಪತಿ ಹೆಗಡೆಯವರ ಮುಕ್ತಕಗಳು ಗಾದೆಯಂತಾಗಿ ಜನರ ಮನಸ್ಸಿನಲ್ಲಿ ಉಳಿಯುವಂತಾಗಲಿ ಎಂದು ಅವರು ಹಾರೈಸಿ, ದೀರ್ಘ ಕಾವ್ಯ ಬರಹದತ್ತ ಮುಂದಾಗುವಂತೆ ಅವರು ಕೃತಿಕಾರಿಗೆ ಸೂಚನೆ ನೀಡಿದರು.

    ಕೃತಿಕಾರ ಗಣಪತಿ ಹೆಗಡೆ ಮಾತನಾಡಿ ನಾನು ಕಲಾವಿದ ಆಗಬೇಕು, ಉಪನ್ಯಾಸಕನಾಗಬೇಕು ಎಂಬೆಲ್ಲಾ ಕನಸು ಕಂಡಿದ್ದೆ ಆದರೆ ಎದುರಾದ ಸಮಸ್ಯೆಗಳಿಂದ ಕನಸು ನನಸಾಗಲಿಲ್ಲ. ಬರವಣಿಗೆ ನನ್ನ ಕನಸಿನಲ್ಲಿಯೂ ಇರಲಿಲ್ಲ. ಪತ್ನಿ ಕಮಲಾ ಕೊಂಡದಕುಳಿ ಬರೆಯುತ್ತಿದ್ದರು ಅವರಿಂದ ಪ್ರೇರಣೆ ಪಡೆದು ನಾನು ಬರವಣಿಗೆ ಪ್ರಾರಂಭಸಿದೆ. ಸಾಹಿತ್ಯ ಕ್ಷೇತ್ರಕ್ಕೆ ತಮ್ಮನ್ನು ಕರೆತಂದ ವಿ.ಗ ನಾಯಕ ಅವರನ್ನು ಸ್ಮರಿಸಿದರು. 

    ಹಿರಿಯ ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆ ಹಾಗೂ ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್ ಅವರು ಅಭ್ಯಾಗತರಾಗಿ ವೇದಿಕೆಯಲ್ಲಿದ್ದು, ಪುಸ್ತಕದ ಕುರಿತಾಗಿ ಹಾಗೂ ಕೃತಿಕಾರರ ಬಗೆಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ರೋಟರಿ ಕ್ಲಬ್‌ನ ಅಧ್ಯಕ್ಷರಾದ ಎನ್. ಆರ್. ಗಜು ಅವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು.

    ಕನ್ನಡ ಚಂದ್ರಮದ ಸಂಸ್ಥಾಪಕ ಗೌರವಾಧ್ಯಕ್ಷ ಮಂಜುನಾಥ ಗಾಂವ್ಕರ್ ಬರ್ಗಿ ಆಶಯ ನುಡಿಗಳನ್ನಾಡಿ ರಸವತ್ತಾದ ಅಂಶಗಳನ್ನು ಕಿಂಚಿತ್ತೂ ಲೋಪವಿಲ್ಲದೆ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿರುವ ಗಣಪತಿ ಕೊಂಡದಕುಳಿಯವರು ನಿಜವಾಗಿಯೂ ಸಾಹಿತ್ಯದ ಗಣಿ ಎಂದರು. ಉದಯೋನ್ಮುಖ ವಾಗ್ಮಿ ವಿಷ್ಣು ಪಟಗಾರ ಕೃತಿ ಪರಿಚಯಿಸಿ ಕೃತಿ ಸಮರಸದಿಂದ ಕೂಡಿದ ಕೃತಿ ಇದು ಎಂದು ಬಣ್ಣಿಸಿದರು. ಮುಕ್ತಕ, ಚುಟುಕು, ಕವನ, ಕಥನ ಕವನ ಸೇರಿ ಒಟ್ಟೂ ೫೦೩ ಕವನಗಳನ್ನು ಇದರಲ್ಲಿ ಅಡಕ ಮಾಡಲಾಗಿದೆ ಎಂದು ವಿವರಿಸಿದರು.  

    ಕನ್ನಡ ಚಂದ್ರಮದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ ಸ್ವಾಗತಿಸಿದರು. ಕಿಶೋರ ಕೊಂಡದಕುಳಿ ಪ್ರಾರ್ಥನೆಗೈದರು. ಶ್ರೇಯಾ ಹೆಗಡೆ ನಾಡಗೀತೆ ಹಾಡಿದರು. ಕಮಲಾ ಕೊಂಡದಕುಳಿ ಸರ್ವರನ್ನೂ ವಂದಿಸಿದರು. ರವೀಂದ್ರ ಭಟ್ಟ ಸೂರಿ ಕೃತಿಕಾರರ ಮುಕ್ತಕಗಳನ್ನೇ ಬಳಸಿ ಕಾರ್ಯಕ್ರಮ ನಿರೂಪಿಸಿ ಗಮನ ಸೆಳೆದರು.