Home KUMTA ಸ್ವರ ಸಂಧ್ಯಾ, ಗಾಯನ, ವಾದನ, ಸನ್ಮಾನ ಕಾರ್ಯಕ್ರಮ : ತಬಲಾ ಗುರು ಶೇಷಾದ್ರಿ ಅಯ್ಯಂಗಾರ್ ಗೆ...

ಸ್ವರ ಸಂಧ್ಯಾ, ಗಾಯನ, ವಾದನ, ಸನ್ಮಾನ ಕಾರ್ಯಕ್ರಮ : ತಬಲಾ ಗುರು ಶೇಷಾದ್ರಿ ಅಯ್ಯಂಗಾರ್ ಗೆ ಸನ್ಮಾನ : ಸಂಘಟಕರ ಕಾರ್ಯದ ಬಗ್ಗೆ ಮೆಚ್ಚುಗೆ.

ಕುಮಟಾ : ಕಲೆ ಎಂದಿಗೂ ತ್ಯಾಗವನ್ನು ಕೇಳುತ್ತದೆ. ನಮ್ಮ ಭವಿಷ್ಯವನ್ನು ಕೇಳುತ್ತದೆ. ಕಲೆಯಲ್ಲಿ ತೊಡಗಿಕೊಂಡವನು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ತ್ಯಾಗದ ಮೂಲಕವೇ ಮಹೋನ್ನತ ಕಲೆ ಹೊರಹೊಮ್ಮಲು ಸಾಧ್ಯ. ತ್ಯಾಗದ ಮೂಲಕವೇ ಓರ್ವನು ಕಲಾವಿದನಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಹಿರಿಯ ಪತ್ರಕರ್ತ ಜೀ.ಯು ಭಟ್ಟ ಹೇಳಿದರು. ಅವರು ಕುಮಟಾ ಪಟ್ಟಣದ ಶಾಂತೇರಿ ಕಾಮಾಕ್ಷಿ ದೇವಸ್ಥಾನದಲ್ಲಿ ಸುರ್ ಸಪ್ತಕ್ ಮ್ಯೂಸಿಕ್ ಟ್ರಸ್ಟ್ ಮುಂಬೈ ಹಾಗೂ ಆರೋಹಿ ಸಾಂಸ್ಕೃತಿಕ ಸಂಸ್ಥೆ, ಶಿರಾಲಿ ಮತ್ತು ಚಂದನ ಗ್ರೂಪ್ ಅಂಕೋಲಾ ಹಾಗೂ ಇತರರ ಸಹಕಾರದಲ್ಲಿ ಹಮ್ಮಿಕೊಂಡ ಸ್ವರ ಸಂಧ್ಯಾ, ಗಾಯನ, ವಾದನ, ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಒಂದು ಅಪೂರ್ವದ ಸಂಗೀತ ಕಾರ್ಯಕ್ರಮವನ್ನು ಸಂಘಟಿಸುವುದರ ಮೂಲಕ ಈ ಭಾಗದ ಸಂಗೀತ ಪ್ರೇಮಿಗಳ ಮನವನ್ನು ತಣಿಸಿದ್ದಾರೆ. ಕಲಾವಿದ ಕಲೆಗಾಗಿ ತಮ್ಮ ಬದುಕನ್ನು ಸಮರ್ಪಿಸಿಕೊಂಡಿರುತ್ತಾನೆ.  ತಬಲಾವನ್ನು ತಮ್ಮ ಜೀವನದ ಮುಖ್ಯ ಉದ್ದೇಶವಾಗಿಸಿಕೊಂಡು ತಮ್ಮ ಬದುಕನ್ನು ಸಾಗಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೂ ತಬಲಾದ ಶಿಕ್ಷಣವನ್ನು ಧಾರೆಯೆರೆಯುತ್ತಾ ಬಂದಿರುವ ಶೇಷಾದ್ರಿ ಅಯ್ಯಂಗಾರ್ ಹಾಗೂ ಅವರ ಕುಟುಂಬದವರು ಈ ದಿನ ಸನ್ಮಾನವನ್ನು ಸ್ವೀಕರಿಸಿದ್ದಾರೆ. ಇದು ಅರ್ಹರಿಗೆ ಸಂದ ಗೌರವ. ತನ್ನ ಕಲೆಗೆ ಹಾಗೂ ಶಿಷ್ಯರಿಗೆ ಕಲಿಕೆಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಯಾವುದೇ ಒಂದು ನೌಕರಿಗೂ ಕಟ್ಟು ಬೀಳದೆ ತ್ಯಾಗಮಯದ ಜೀವನ ನಡೆಸಿದವರು ಅವರು ಎಂದರು.

ಗುರು ಬೆಲ್ಲವಾಗಿದ್ದರೆ ಮಾತ್ರ ಶಿಷ್ಯ ಸಕ್ಕರೆ ಆಗುತ್ತಾನೆ. ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸಬೇಕು ಎಂಬುದಾಗಿ ಭಾಷಣ ಮಾಡುವುದು ಸುಲಭ ಆದರೆ ಅದಕ್ಕಾಗಿ ತ್ಯಾಗ ಮಾಡುವವರು ಬಹಳ ಕಡಿಮೆ ಜನ ಇದ್ದಾರೆ ಅಂತಹ ತ್ಯಾಗಮಯಿ ಜೀವನವನ್ನು ಕಲಾವಿದರು ನಡೆಸುತ್ತಿದ್ದಾರೆ ಎಂದವರು ಬಣ್ಣಿಸಿದ್ದರು.

ಹೆಸರಾಂತ ತಬಲಾ ಗುರು ವಿದ್ವಾನ್ ಎಂ.ವಿ. ಶೇಷಾದ್ರಿ ಅಯ್ಯಂಗಾರ್ ಹಾಗೂ ಅವರ ಪತ್ನಿ ತಬಲಾ ಕಾಲವಿದೆ ಸರಸ್ವತಿ ಅಯ್ಯಂಗಾರ್ ದಂಪತಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶೇಷಾದ್ರಿ ಅಯ್ಯಂಗಾರ್ ಈ ಸನ್ಮಾನಕ್ಕೆ ನಾನು ಅರ್ಹನೋ? ಅಲ್ಲವೋ? ಎಂಬುದು ಇನ್ನೂ ನನ್ನ ಮನಸ್ಸಿನಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ. ಆದರೆ ನನಗೆ ದೊರೆತಿರುವ ಈ ಸನ್ಮಾನವನ್ನು ನನಗೆ ತಬಲಾ ಕಲಿಸಿದ ಎಲ್ಲ ಗುರುಗಳಿಗೆ ಸಮರ್ಪಿಸುತ್ತೇನೆ ಎಂದು ಭಾವುಕರಾಗಿ ನುಡಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ವಾಂಸ ಹಾಗೂ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಬನ್ಸುರಿ ವಾದಕ ಎಸ್. ಶಂಭು ಭಟ್ಟ ಕಡತೋಕಾ ಮಾತನಾಡಿ ಕಲಾವಿದರಿಗೆ ಹಾಕಿದ ಶಾಲು, ಕೊಟ್ಟ ಉಡುಗೊರೆ, ಕಲಾವಿದರ ಬಗ್ಗೆ ಆಡುವ ಸಂತಸದ ನುಡಿಗಳು, ಹೊಗಳಿಕೆಗಳು ಅದು ಕಲಾವಿದರಿಗಷ್ಟೇ ಅಲ್ಲ ಕಲೆಗೆ ಕೊಡುವ ಗೌರವ. ಕಲಾವಿದರನ್ನು ಗೌರವಿಸುವುದು ಎಂದರೆ ನಮ್ಮನ್ನು ನಾವು ಬೆಳೆಸಿಕೊಂಡಂತೆ. ಕಲೆಯನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು ಇಂತಹ ಸಂಗೀತ ಕಾರ್ಯಕ್ರಮಗಳಿಗೆ ಹೆಚ್ಚು ಹೆಚ್ಚು ಜನರು ಸೇರಿ ಬೆಂಬಲ ನೀಡುವುದರ ಮೂಲಕ ಕಲೆಯನ್ನು ಉಳಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕೇವಲ ಶಾಲು ಹಾರಗಳು ಕಲಾವಿದರನ್ನು ಪ್ರೋತ್ಸಾಹಿಸುವುದಿಲ್ಲ ಸಂಗೀತ ಕೇಳುವ ಜನರ ದೊಡ್ಡ ದೊಡ್ಡ ಸಭೆಗಳು ಸಂಗೀತ ಕೇಳುವ ಜನರು ಬರುವುದು ಸಂಗೀತವನ್ನು ಆಸ್ವಾದಿಸುವುದು ನಿಜವಾಗಿಯೂ ಕಲಾವಿದನಿಗೆ ಆನಂದವನ್ನು ತಂದುಕೊಡುವ ಸಂಗತಿಯಾಗಿದೆ. ಕುಮಟಾದ ಹಲವು ಜನರು ಇಲ್ಲಿ ಬಂದು ಈ ಕಾರ್ಯಕ್ರಮ ಆಸ್ವಾದಿಸಿದ್ದಾರೆ. ಇದು ಕಲಾವಿದರ ಪುಣ್ಯ ಎಂದು ಅವರು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ತಬಲಾ ವಾದಕ ಉದಯರಾಜ ಕರ್ಪೂರ, ಹಿಂದುಸ್ತಾನಿ ಗಾಯಕ ಮಹೇಶ ಮಹಾಲೆ ಅಂಕೋಲಾ, ಶ್ರೀ ಶಾಂತೇರಿ ಕಾಮಾಕ್ಷಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಶೇಷಗಿರಿ ಕೃಷ್ಣ ಶಾನಭಾಗ, ಮುರಳೀಧರ ಭಟ್ಟ ಇತರರು ಇದ್ದರು. ಸಂಘಟಕರಾದ ಪ್ರಶಾಂತ ಶೇಟಿಯಾ, ಶಂತನು ಶುಕ್ಲಾ ಇತರರು ಸಹಕರಿಸಿದರು.

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀಮೋತ್ತಮ ಮಠದ ಶ್ರೀಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮಿಜಿ ಕಾರ್ಯಕ್ರಮಕ್ಕೆ ಚಿತ್ತೃಸಿ ಸಂಗೀತ ಆಲಿಸಿದರು. ವಿದುಷಿ ತೇಜಸ್ವಿನಿ ವೆರ್ಣೇಕರ್ ವಾರಣಾಸಿ ಗಾಯನ ಜನಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಮಧು ಕುಡಾಲ್ಕರ್ ಅಂಕೋಲಾ ತಬಲಾ ಮತ್ತು ಅಜಯ ಹೆಗಡೆ ಶಿರಸಿ ಸಂವಾದಿನಿ, ಸುಧೀರ ಭಕ್ತ ಮುಂಬೈ ಇವರ ಬಾನ್ಸೂರಿ ಸಾತ್ ನೀಡಿದರು. ನಂತರದಲ್ಲಿ ಮಾನಸ್ ಗೋಸಾವಿ ಪುಣೆ ಇವರ ಮೋಹನ ವೀಣಾ ವಾದನ ನಡೆಯಿತು. ಡಾ. ಉದಯರಾಜ ಕರ್ಪೂರ್ ಬೆಂಗಳೂರು ಇವರು ತಬಲಾ ಸಾಥ್ ನೀಡಿದರು.