Satwadhara News

Category: KUMTA

ಉತ್ತರಕನ್ನಡದ ಕುಮಟಾ ತಾಲೂಕಿನಲ್ಲಿ ನಡೆದ ಕಾರ್ಯಕ್ರಮಗಳ ವರದಿ ಮತ್ತು ಇನ್ನಿತರ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

  • ದೆಹಲಿಗೆ ಹೊರಟ ಸಂಗ್ರಹಿತ ಮೃತ್ತಿಕೆ.

    ದೆಹಲಿಗೆ ಹೊರಟ ಸಂಗ್ರಹಿತ ಮೃತ್ತಿಕೆ.

    ಕುಮಟಾ :  ‘ನನ್ನ ಮಣ್ಣು ನನ್ನ ದೇಶ’ ಅಭಿಯಾನದಲ್ಲಿ ಸಂಗ್ರಹಿಸಿದ ಪವಿತ್ರ ಮಣ್ಣನ್ನು ದೆಹಲಿಗೆ ಕೊಂಡೊಯ್ಯುವ ಕಳಶದ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಶಾಸಕ ದಿನಕರ ಶೆಟ್ಟಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

    ವಾಲ್ಮೀಕಿ ಮಹರ್ಷಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪಬೆಳಗಿಸಿದ ನಂತರ, ದೆಹಲಿಗೆ ಕೊಂಡೊಯ್ಯಲಿರುವ ಪವಿತ್ರ ಮಣ್ಣಿನ ಕಳಶವನ್ನು ಶಾಸಕರು, ಜಿಲ್ಲಾಧ್ಯಕ್ಷರು ಹಾಗೂ ವಿಭಾಗದ ಸಹ ಪ್ರಭಾರಿಗಳು ಕುಮಟಾ ಮಂಡಲ ಬಿಜೆಪಿ  ಅಧ್ಯಕ್ಷ ಹೇಮಂತಕುಮಾರ್ ಗಾಂವಕರ ಮತ್ತು ಅವರೊಂದಿಗೆ ದೆಹಲಿಗೆ ತೆರಳುತ್ತಿರುವ ಪಕ್ಷದ ಪದಾಧಿಕಾರಿಗಳಾದ ಮಹೇಶ ನಾಯಕ ದೇವರಬಾವಿ ಮತ್ತು ಆದಿತ್ಯ ಶೇಟ್ ಅವರಿಗೆ ಹಸ್ತಾಂತರಿಸಿ ಬೀಳ್ಕೊಟ್ಟರು.

    ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯಕ, ವಿಭಾಗದ ಸಹಪ್ರಭಾರಿ ಎನ್. ಎಸ್. ಹೆಗಡೆ, ಮಂಡಲ ಬಿಜೆಪಿ  ಅಧ್ಯಕ್ಷ ಹೇಮಂತಕುಮಾರ್ ಗಾಂವಕರ, ಜಿಲ್ಲಾ ಯುವಮೋರ್ಚಾ ಪ್ರಭಾರಿ ಎಮ್. ಜಿ. ಭಟ್, ಜಿಲ್ಲಾ ಪ್ರಮುಖರಾದ ಗಜಾನನ ಗುನಗಾ, ಡಾ. ಜಿ. ಜಿ. ಹೆಗಡೆ, ಪುರಸಭಾ ಸ್ಥಾಯಿಸಮಿತಿ ಅಧ್ಯಕ್ಷ ಕಿರಣ ಅಂಬಿಗ, ಒಬಿಸಿ ಮೋರ್ಚಾ ಅಧ್ಯಕ್ಷ ವಿಶ್ವನಾಥ ನಾಯ್ಕ್, ಮಹಿಳಾಮೋರ್ಚಾ ಅಧ್ಯಕ್ಷೆ ಮೋಹಿನಿ ಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಜಯಾ ಶೇಟ್, ಪುರಸಭಾ ಸದಸ್ಯೆ ಪಲ್ಲವಿ ಮಡಿವಾಳ, ಗ್ರಾ. ಪಂ. ಸದಸ್ಯರುಗಳಾದ ದೀಪಾ ಹಿಣಿ, ಮಾದೇವಿ ಮುಕ್ರಿ, ಮಂಜುಳಾ ಮುಕ್ರಿ ಹಾಗೂ ಅನೇಕ ಕಾರ್ಯಕರ್ತರು ಇದ್ದರು.

  • ಜನಮನ ಗೆದ್ದ ಚುಟುಕು ಸಾಹಿತ್ಯ ಸಮ್ಮೇಳನ : ಸಂಘಟಕರ ಕಾರ್ಯಕ್ಕೆ ಜನಮೆಚ್ಚುಗೆ.

    ಜನಮನ ಗೆದ್ದ ಚುಟುಕು ಸಾಹಿತ್ಯ ಸಮ್ಮೇಳನ : ಸಂಘಟಕರ ಕಾರ್ಯಕ್ಕೆ ಜನಮೆಚ್ಚುಗೆ.

    ಕುಮಟಾ : ಸಾಹಿತ್ಯದ ಓದಿನತ್ತ ಯುವಜನರನ್ನು ಸೆಳೆಯುವ ಕಾರ್ಯವಾಗಬೇಕು. ಅಂತಹ ಕಾರ್ಯದಲ್ಲಿ ಚುಟುಕು ಸಾಹಿತ್ಯ ಪ್ರಕಾರ ಬಹಳ ಉತ್ತಮ ಮಾರ್ಗವಾಗಿದೆ ಎಂದು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಅನಂತಮೂರ್ತಿ ಹೆಗಡೆ ಹೇಳಿದರು. ಅವರು ಕುಮಟಾದ ನಾದಶ್ರೀ ಕಲಾಕೇಂದ್ರದಲ್ಲಿ ನಡೆದ ಕುಮಟಾ ತಾಲೂಕಾ ತೃತೀಯ ಚುಟುಕು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ, ಸಮ್ಮೇಳನದ ಸವಿನೆನಪಿಗೆ ಹೊರತಂದ ‘ಕುಮಟಾ ಮುಕುಟ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. 

    ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರಿಂದ ಪ್ರಾರಂಭಿಸಿ ಬೀರಣ್ಣ ನಾಯಕ ಅವರವರೆಗೆ ಅತ್ಯಮೂಲ್ಯ ಚುಟುಕು ಪರಂಪರೆಯಿದೆ. ಸಾಹಿತ್ಯ ಎಂದರೆ ಮನುಷ್ಯನ ಬದುಕಿನ ಅನುಭವ ಲೋಕದ ಸಂಕಥನ. ಸಾಹಿತ್ಯ ಪರಂಪರೆಗೆ ಅಸಾಧಾರಣ ಶಕ್ತಿಯಿದೆ. ಮಹಾಬಲಿಷ್ಟವಾಗಿ ಕಾಣುವ ಕೋಟೆ ಕೊತ್ತಲಗಳೂ, ಸ್ತೂಪ ಸೌಧಗಳೆಲ್ಲ ಕಾಲದ ಹೊಡೆತಕ್ಕೆ ನಿರ್ನಾಮವಾಗುತ್ತವೆ. ಅತ್ಯಂತ ದುರ್ಬಲ ಪದಪುಂಜಗಳು, ವಾಕ್ಯಗಳು ಸಹಸ್ರಾರು ವರ್ಷಗಳ ಹಿಂದೆ ಬದುಕಿದ್ದ ಕವಿಯ ಭಾವಸ್ಪಂದನವನ್ನು ಅಜರಾಮರವಾಗಿ ಉಳಿಸುತ್ತವೆ ಇಂತಹ ಸಾಹಿತ್ಯದ ಓದಿನಿಂದ ಯುವಕರು ವಿಮುಖವಾಗಿದ್ದು, ಅವರನ್ನು ಸಾಹಿತ್ಯದ ಕಡೆಗೆ ತರುವುದರ ಮೂಲಕ ಜ್ಞಾನದ ಪರಂಪರೆಯನ್ನು ಮುನ್ನಡೆಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

    ಚುಟುಕು ಸಾಹಿತ್ಯ ಕೇವಲ ನಾಲ್ಕು ಸಾಲಿನಲ್ಲಿ ಇಡೀ ಜೀವನವನ್ನು ಬಿಂಬಿಸುತ್ತದೆ. ಇಂತಹ ಸಾಹಿತ್ಯ ಪ್ರಕಾರಗಳನ್ನು ಓದುವುದರ ಮೂಲಕ ವೇಗದ ಜೀವನದಲ್ಲಿಯೂ ಸಾಹಿತ್ಯದ ಪರಂಪರೆಯನ್ನು ಮುನ್ನಡೆಸಲು ಸಾಧ್ಯ. ಕುಮಟಾದಲ್ಲಿ ಮೂರನೇ ವರ್ಷ ಇಂತಹ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವ ಸಂಘಟಕರ ಕಾರ್ಯ ನಿಜಕ್ಕೂ ಶ್ಲಾಘನೀಯ. ಅತ್ಯುತ್ತಮ ರೀತಿಯಲ್ಲಿ ಕಾರ್ಯಕ್ರಮವನ್ನು ಸಂಘಟಿಸಿದ್ದಾರೆ, ಸಾಹಿತ್ಯ ಸೇವೆಗೆ ನಾವು ಸದಾ ಜೊತೆಗಿರುವುದಾಗಿ ಸಂಘಟಕರನ್ನು ಪ್ರೋತ್ಸಾಹಿಸಿದರು.

    ಗೋಷ್ಟಿಗಳನ್ನು ಉದ್ಘಾಟಿಸಿದ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ, ಚುಟುಕು ಸಾಹಿತ್ಯ ಬದುಕಿನ ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಂದನ್ನು ಚುಟುಕಾಗಿ ಓದುವ ಹವ್ಯಾಸ ಬೆಳೆಯುತ್ತಿದೆ. ಸಾಹಿತ್ಯ ನೋವು ನಲಿವಿನ ಅಭಿವ್ಯಕ್ತಿಯಾಗಿದೆ. ಅವು ಸರಿದಾರಿ ತೋರುವ ಜಾಗೃತ ವಾಕ್ಯಗಳು ಎಂದೂ ಹೇಳಬಹುದು ಎಂದ ಅವರು ಅಭಿಪ್ರಾಯಪಟ್ಟರು. 

    ಕಾಲ ಕಾಲಕ್ಕೆ ಸಾಹಿತ್ಯ ಬದಲಾಗುತ್ತಿದೆ. ಆದರೆ ಮೌಲಿಕ ಸಾಹಿತ್ಯಕ್ಕೆ ಅಳಿವಿಲ್ಲ. ಚುಟುಕುಗಳಿಗಾಗಿ ಸಂಘಟನೆ ಕಟ್ಟಿ ಅದರ ಮೂಲಕ ಇಷ್ಟು ಸುಂದರ ಕಾರ್ಯಕ್ರಮಗಳನ್ನು ಸಂಘಟಿಸಿರುವುದು ನಿಜವಾಗಿಯೂ ಹೆಮ್ಮೆಯ ವಿಚಾರ. ಹೇಳಬೇಕಿರುವ ವಿಚಾರವನ್ನು ಚಿಕ್ಕದಾಗಿ ಚೊಕ್ಕದಾಗಿ ಎಲ್ಲರ ಮನಮುಟ್ಟುವಂತೆ ಮಾಡುವಂತದ್ದು ಚುಟುಕು ಸಾಹಿತ್ಯದ ವಿಶೇಷತೆ. ಪ್ರಾಸದ ಜೊತೆಗೆ ಮನೋಹರವಾಗಿ ಎಲ್ಲಾ ವಿಚಾರಗಳ ಚಿತ್ರಣ ಅದರಲ್ಲಿ ಇರಲಿದೆ. ಸಾಹಿತ್ಯ ಬರವಣಿಗೆ ಅಷ್ಟು ಸುಲಭದ ಮಾತಲ್ಲ. ಅವರ ಕಷ್ಟವನ್ನು ಬಲ್ಲವರೇ ಬಲ್ಲರು. ಇಂತಹ ಸಂಘಟನೆಯ ಮೂಲಕ ಸಾಹಿತ್ಯವನ್ನು ಪ್ರೋತ್ಸಾಹಿಸುವ ಕಾರ್ಯ ನಡೆದಿರುವುದು ಶ್ಲಾಘನೀಯ ಎಂದರು.

    ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಕುಮಟಾ ಘಟಕ ಹಾಗೂ ರೋಟರಿ ಕ್ಲಬ್  ಸಹಯೋಗದೊಂದಿಗೆ ನಡೆದ ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಹಿರಿಯ ಕವಿ ಬೀರಣ್ಣ ನಾಯಕ ಮಾತನಾಡಿ ಉತ್ತರ ಕನ್ನಡದಲ್ಲಿ ಸಾಹಿತ್ಯ ರಚನೆಗೆ ಪೂರಕವಾಗಿ ಅನೇಕ ವಾತಾವರಣಗಳಿದೆ. ಪ್ರೋತ್ಸಾಹಿಸುವ ಜನರೂ ಇದ್ದಾರೆ. ಆದರೆ ಇತ್ತೀಚಿನ ದಿನದಲ್ಲಿ ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ತಂತ್ರಜ್ಞಾನ ಬೆಳದಂತೆ ಸಾಹಿತ್ಯದ ಓದು ಕಣ್ಮರೆಯಾಗುತ್ತಿರುವುದು ಖೇದಕರ ಓದುಗರ ಸಂಖ್ಯೆಯನ್ನು ಹೆಚ್ಚಿಸುವಂತಹ ಚಿಂತನೆಗಳು ನಡೆಯಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಕುಮಟಾದ ಜನರು ಸುಶಿಕ್ಷಿಕ್ಷತರು. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ರೈಲ್ವೆ ಪ್ರವಾಸೋದ್ಯಮ ಹಾಗೂ ಇನ್ನಿತರ ಬೇಡಿಕೆಗಳನ್ನು ಗಮನಿಸಿ ಸರಕಾರ ಪೂರಕ ಯೋಜನೆಗಳನ್ನು ಕಲ್ಪಿಸಬೇಕು. ಇದರಿಂದ ಈ ನೆಲದ ಅಭಿವೃದ್ಧಿಯಾಗುತ್ತದೆ. ಸ್ಥಳದ ಇತಿಹಾಸ ಪರಂಪರೆಯನ್ನು ಅರಿಯುವ ಕೆಲಸವನ್ನು ಇಂದಿನ ಜನರು ಮಾಡಬೇಕು ಎಂದರು.

    ತಾಲೂಕಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಣಪತಿ ಅಡಿಗುಂಡಿ ಇಂತಹ ಕಾರ್ಯಕ್ರಮವನ್ನು ಸಂಘಟಿಸುವಲ್ಲಿ ಬೆನ್ನೆಲುಬಾಗಿನಿಂತ ಮಾರ್ಗದರ್ಶಕರು ಹಾಗೂ ಧನ ಸಹಾಯ ಮಾಡಿದ ಎಲ್ಲಾ ಗಣ್ಯರನ್ನೂ ವಂದಿಸಿದರು. ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಮಾರ್ಗದರ್ಶಕ ರವೀಂದ್ರ ಭಟ್ಟ ಸೂರಿ, ಸಮ್ಮೇಳನದ ಸರ್ವಾಧ್ಯಕ್ಷರಾದ ಬೀರಣ್ಣ ನಾಯಕ, ಗ್ರಾಫಿಕ್ಸ್ ಡಿಸೈನರ್ ರಾಘವೇಂದ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಉದ್ದಿಮೆದಾರರಾದ ಮಂಜುನಾಥ ಭಟ್ಟ ಸುವರ್ಣಗದ್ದೆ, ರೋಟರಿ ಕ್ಲಬ್ ಅಧ್ಯಕ್ಷ ಎನ್.ಆರ್ ಗಜು ಇತರರು ವೇದಿಕೆಯಲ್ಲಿದ್ದರು. ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಯು ನಾಯ್ಕ ಇತರರು ಇದ್ದರು. ಸನ್ಮಾನಿತರ ಪರವಾಗಿ ರವೀಂದ್ರ ಭಟ್ಟ ಸೂರಿ ಮಾತನಾಡಿದರು.

    ಸ್ಫೂರ್ತಿ ಕಲಾತಂಡದಿಂದ ಗೀತಾಗಾನ ಗಮನ ಸೆಳೆಯಿತು. ಸಂಘಟನೆಯ ಕಾರ್ಯದರ್ಶಿ ಉದಯ ಮಡಿವಾಳ,  ಸಹಕಾರ್ಯದರ್ಶಿ ಎಂ.ಎನ್ ಭಟ್ಟ ವಾಲ್ಗಳ್ಳಿ, ಸದಸ್ಯರುಗಳಾದ ದೇವಿದಾಸ ಎಂ. ಮಡಿವಾಳ, ಪ್ರಕಾಶ ಮಡಿವಾಳ ಇತರರು ಇದ್ದರು.

    ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಚುಟುಕು ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಹಾಗೂ ಕವಿಗಳು ಚುಟುಕುಗಳು ವಾಚಿಸಿದರು. ಸಮಾರೋಪ ನುಡಿಗಳನ್ನು ಆಡಿದ ನಾಗರೀಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್

    ತನ್ನ ಕಾಲವನ್ನು ಎಲ್ಲದಕ್ಕೂ ಸರಿಹೊಂದಿಸುವ ಬರಹ ಮಾಡುವವನು ನಿಜವಾದ ಸಾಹಿತಿ. ಒಟ್ಟಾಗಿರುವ ಮನಸ್ಸು ಬದುಕಿನ ಭಾಗವಾಗಿದ್ದಲ್ಲಿ ಮಾತ್ರವೇ ಇಂತಹ ಸಮ್ಮೇಳನಗಳು ನಡೆಯಲು ಸಾಧ್ಯ ಜಾತಿ, ಧರ್ಮ, ಮತ, ಪಂಥಗಳ ಎಲ್ಲೆ ಮೀರಿ ಎಲ್ಲರೂ ಒಂದಾಗಿ ಸಾಹಿತ್ಯದ ಕೆಲಸ ಮಾಡೋಣ ಎಂದರು. ತೆರಿಗೆ ಸಲಹೆಗಾರ ಜಿ.ಎಸ್ ಹೆಗಡೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

    ಗಣೇಶ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಸಂಘಟನೆಯ ಕಾರ್ಯದರ್ಶಿ ಉದಯ ಮಡಿವಾಳ,  ಸಹಕಾರ್ಯದರ್ಶಿ ಎಂ.ಎನ್ ಭಟ್ಟ ವಾಲ್ಗಳ್ಳಿ, ಸದಸ್ಯರುಗಳಾದ ದೇವಿದಾಸ ಎಂ. ಮಡಿವಾಳ, ಪ್ರಕಾಶ ಮಡಿವಾಳ ಇತರರು ಸಹಕರಿಸಿದರು. ಹಲವರು ಚುಟುಕುಗಳನ್ನು ವಾಚಿಸಿ ಗಮನ ಸೆಳೆದರು. 

  • ಹಂದಿ ಅಡ್ಡ ಬಂದ ಪರಿಣಾಮ : ಸಹಕಾರಿ ಧುರೀಣ ಟಿ.ಪಿ ಹೆಗಡೆ ಹುಣಸೆಮಕ್ಕಿ ಸಾವು.

    ಹಂದಿ ಅಡ್ಡ ಬಂದ ಪರಿಣಾಮ : ಸಹಕಾರಿ ಧುರೀಣ ಟಿ.ಪಿ ಹೆಗಡೆ ಹುಣಸೆಮಕ್ಕಿ ಸಾವು.

    ಕುಮಟಾ : ಕುಮಟಾದಿಂದ ದ್ವಿಚಕ್ರವಾಹನದಲ್ಲಿ ತಮ್ಮ ಊರಾದ ಮೂರೂರಿಗೆ ತೆರಳುವ ವೇಳೆಯಲ್ಲಿ ಮೂರುರೂ ಗುಡ್ಡದ ಮೇಲೆ ಏಕಾಏಕಿ ಕಾಡು ಹಂದಿ ಅಡ್ಡ ಬಂದು ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ತಾಲೂಕಿನ ಅಡಿಕೆ ವ್ಯಾಪಾರಸ್ಥ, ಸಾಮಾಜಿಕ ಕಾರ್ಯಕರ್ತ, ಸಹಕಾರಿ ಧುರೀಣ ಹಾಗೂ ಅಘನಾಶಿನಿ ಉಳಿಸಿ ರೈತ ಹೋರಾಟ ಸಮಿತಿಯ ಮುಖ್ಯಸ್ಥ ಮೂರೂರು ಹುಣಸೆಮಕ್ಕಿಯ ಟಿ.ಪಿ. ಹೆಗಡೆ (೭೭) ಅಪಘಾತದಲ್ಲಿ ಕೊನೆಯುಸಿರೆಳೆದರು.

    ಕಾಡುಹಂದಿ ಅಡ್ಡಬಂದು ತಮ್ಮ ಬೈಕ್ ನ ನಿಯಂತ್ರಣ ಕಳೆದುಕೊಂಡು ಬಿದ್ದ ಅವರು ತೀವ್ರ ಗಾಯಗೊಂಡ ಪರಿಣಾಮ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಸಾಗಿಸುತ್ತಿರುವ ಸಂದರ್ಭದಲ್ಲಿ ಮೃತರಾಗಿದ್ದಾರೆ.

    ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಯ ಅವೈಜ್ಞಾನಿಕತೆ ಕುರಿತಾಗಿ ಧ್ವನಿ ಎತ್ತಿದ್ದರು. ಸಾಮಾಜಿಕ ಕಾರ್ಯಕರ್ತರಾಗಿ ಊರಿನ ಮತ್ತು ತಾಲೂಕಿನ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು. ಟಿ.ಪಿ.ಹೆಗಡೆ ಸ್ಥಳೀಯವಾಗಿ ಬಿಜೆಪಿಯನ್ನು ಬೆಳೆಸುವಲ್ಲಿ ಈ ಹಿಂದಿನಿಂದಲೂ ಶ್ರಮವಹಿಸಿದ್ದವರು. ಕುಮಟಾ ತಾಲೂಕು ಬಿಜೆಪಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಇವರು, ಕುಮಟಾ ಪಿಎಲ್‌ಡಿ ಬ್ಯಾಂಕಿನ ನಿರ್ದೇಶಕ, ಎಪಿಎಂಸಿ ನಿರ್ದೇಶಕ, ಹವ್ಯಕ ವಿದ್ಯಾವರ್ದಕ ಸಂಘದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

  • ಜೀವನದಲ್ಲಿ ಶಿಸ್ತು ಮತ್ತು ಸಮಯಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ : ವಿನಾಯಕ ಪ್ರಭು.

    ಜೀವನದಲ್ಲಿ ಶಿಸ್ತು ಮತ್ತು ಸಮಯಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ : ವಿನಾಯಕ ಪ್ರಭು.

    ಕುಮಟಾ: “ವಿದ್ಯಾರ್ಥಿಗಳು ತಮಗೆ ಸಿಗುವ ಸಮಯವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ನಿತ್ಯ ನಿರಂತರ ಏಕಾಗ್ರ ಚಿತ್ತದಿಂದ ಓದಿದರೆ ಮುಂದೆ ಬರುವ ಜೆಇಇ, ನೀಟ್, ಕೆಸಿಇಟಿ ಅಥವಾ ವಾರ್ಷಿಕ ಪರೀಕ್ಷೆಯನ್ನು ಸುಲಭವಾಗಿ ಎದುರಿಸಿ ಉತ್ತಮ ಅಂಕಗಳಿಸಿ ತಮ್ಮ ಗುರಿಯನ್ನು ತಲುಪಲು ಸಾಧ್ಯ” ಎಂದು ಪ್ರಖ್ಯಾತ ಶೈಕ್ಷಣಿಕ ಸಲಹೆಗಾರ ವಿನಾಯಕ ಪ್ರಭು ವಿದ್ಯಾರ್ಥಿಗಳಿಗೆ ತಿಳಿಸಿದರು.

    ಅವರು ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ.ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ  ಆಯೋಜಿಸಿದ ಶೈಕ್ಷಣಿಕ, ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಮಾರ್ಗದರ್ಶನ ಮಾಡಿದರು.

    ವಿನಾಯಕ ಪ್ರಭು ಅವರು ಪ್ರಸ್ತುತ ಮುಂಬಯಿನಲ್ಲಿ ವಾಸವಾಗಿದ್ದು ಕಳೆದ 20 ವರ್ಷಗಳಿಂದ ವಿವಿಧ ಸಂಸ್ಥೆಗಳ ವಿಜ್ಞಾನ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯ ಕುರಿತು ಮಾರ್ಗದರ್ಶನ ಮಾಡುತ್ತಾ ಬಂದಿರುತ್ತಾರೆ, ಏಳು ವರ್ಷಗಳ ಕಾಲ ಏಷ್ಯಾದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಆಪ್ತ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದು ಅವರ ಜೀವನಾನುಭವವನ್ನು ವಿದ್ಯಾರ್ಥಿಗಳ ಜೊತೆಗೆ ಹಂಚಿಕೊಂಡರು.

    ಜೀವನದಲ್ಲಿ ಶಿಸ್ತು ಮತ್ತು ಸಮಯಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಅದನ್ನು ನೀಡಲೇಬೇಕು. ಶಿಸ್ತು ಮತ್ತು ಸಮಯದ ಮಹತ್ವವನ್ನು ಯಾರು ಸರಿಯಾಗಿ ತಿಳಿದಿರುತ್ತಾರೆಯೋ ಅವರು ಜೀವನದಲ್ಲಿ ಸಾಧನೆಯ ಉತ್ತುಂಗಕ್ಕೆ ಹೋಗುತ್ತಾರೆೆ. ಯಾರು ಬೇಜವಾಬ್ದಾರಿಯಿಂದ ಕಾಲಹರಣ ಮಾಡಿ ಅಶಿಸ್ತಿನಿಂದ ಇರುತ್ತಾರೋ ಅವರು ಜೀವನದುದ್ದಕ್ಕೂ ಹಿಂದೆಯೇ ಇರುತ್ತಾರೆ ಎಂದ ಅವರು, ಒಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ಸು ಕಂಡುಕೊಂಡಿದ್ದಾನೆ ಎಂದರೆ ಅದರ ಅರ್ಥ ಆ ವ್ಯಕ್ತಿ ಶಿಸ್ತು ಬದ್ದ ಜೀವನದ ಜತೆಗೆ ಸಮಯಕ್ಕೆ ಮಹತ್ವವನ್ನು ನೀಡಿದ್ದಾನೆ.

     ಅಮೂಲ್ಯ ಸಮಯದ ಸದ್ಭಳಕೆ ಹಾಗೂ ಸಮಯವನ್ನು ನ್ಯಾಯೋಜಿತವಾಗಿ ಉಪಯೋಗಿಸಿಕೊಳ್ಳುವ ಚಾಣಾಕ್ಷತೆ ಹೊಂದಿರಬೇಕು. ಈಗ ಕಳೆದ ಸಮಯ ಮತ್ತೆ ಎಂದೂ ಹಿಂದಿರುಗಿ ಬರುವುದಿಲ್ಲ. ಇದಕ್ಕಾಗಿ ಸಿಕ್ಕಂತಹ ಸಮಯವನ್ನು ಬಳಸಿಕೊಂಡು ಅವಕಾಶಗಳನ್ನು ಬಾಚಿಕೊಳ್ಳುತ್ತಾ ಹೋಗಬೇಕು ಎಂದರು. 

    ಪರೀಕ್ಷೆ ಎದುರಿಸುವ ವಿಧಾನ, ಪತ್ರಿಕೆಗಳ ಮೌಲ್ಯಮಾಪನ, ವಿದ್ಯಾರ್ಥಿಗಳು ಅನುಸರಿಸಬೇಕಾದ ಬರವಣಿಗೆ ವಿಧಾನ ಹಾಗೂ ಇತರ ವಿಚಾರಗಳನ್ನು ಸವಿಸ್ತಾರವಾಗಿ ಅವರು ತೆರೆದಿಟ್ಟರು.

    ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸಂಸ್ಥೆಯ ಉದ್ದೇಶ ಹಾಗೂ ಇತರ ಚಟುವಟಿಕೆಗಳನ್ನು ಪರಿಚಯಿಸಿದರು. ಪ್ರಾಂಶುಪಾಲ ಕಿರಣ ಭಟ್ಟ ಗಣ್ಯರನ್ನು ಪರಿಚಯಿಸಿ ಸ್ವಾಗತಿಸಿದರು.  ಗಣಕವಿಜ್ಞಾನ ಉಪನ್ಯಾಸಕರ ಗುರುರಾಜ ಶೆಟ್ಟಿ ವಂದಿಸಿದರು. ಉಪನ್ಯಾಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಕಾರ್ಯಕ್ರಮದ ಸದುಪಯೋಗ ಪಡೆದರು.

  • ಕಠಿಣ ಪರಿಶ್ರಮ ಹಾಗೂ ಕ್ರಮಬದ್ಧ ಯೋಜನೆ ಯಶಸ್ಸನ್ನು  ನೀಡುತ್ತದೆ : ರಾಮ ನಾಯಕ.

    ಕಠಿಣ ಪರಿಶ್ರಮ ಹಾಗೂ ಕ್ರಮಬದ್ಧ ಯೋಜನೆ ಯಶಸ್ಸನ್ನು  ನೀಡುತ್ತದೆ : ರಾಮ ನಾಯಕ.

    ಕುಮಟಾ : ಸವಿ ಪೌಂಡೇಶನ್ ಮೂಡಬಿದ್ರೆ ಇವರು ಉತ್ತರಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ, ಯೋಗ, ಮೌಲ್ಯಾಧಾರಿತ ಕೃಷಿ ಹಾಗೂ ಸಾಧಕರನ್ನು ಗುರುತಿಸಿ ಸನ್ಮಾನಿಸುವ  ಕಾರ್ಯಕ್ರಮಗಳನ್ನು ಕಳೆದ ಒಂದು ವರ್ಷದಿಂದ ಹಮ್ಮಿಕೊಂಡಿದೆ. ಪ್ರಸ್ತುತ ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಸಿವಿಲ್ ಇಂಜೀನೀಯರಿಂಗ್ ಮತ್ತು ಆರ್ಕಿಟೆಕ್ಟ್  ವಿಭಾಗದಲ್ಲಿ ತಮ್ಮದೇ ಖ್ಯಾತಿ ಪಡೆದ ಆರ್ಕಿಟೆಕ್ಟ್ ರಾಮ ನಾಯಕರನ್ನು ಅವರ ವೃತ್ತಿನಿಷ್ಠೆ ಸಾಮಾಜಿಕ ಮೌಲ್ಯಗಳನ್ನು ಗುರುತಿಸಿ ಬೆಂಗಳೂರಿನ ಅವರ ಸ್ವಗ್ರಹದಲ್ಲಿ ಸನ್ಮಾನಿಸಲಾಯಿತು. 

    ಈ ಸಂದರ್ಭದಲ್ಲಿ  ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಮ ನಾಯಕರು ಕಠಿಣ ಪರಿಶ್ರಮ ಹಾಗೂ ಕ್ರಮಬದ್ಧ ಯೋಜನೆಯಿಂದ ಯಶಸ್ಸನ್ನು ಪಡೆಯಬಹುದು ಎಂದರು. ಸಿವಿಲ್ ಇಂಜೀನಿಯರಿಂಗ್ ವಿಭಾಗದಲ್ಲಿ ಜನರನ್ನು ಸಮಾಜ ಅವರ ಕಾರ್ಯದಿಂದ ಗುರುತಿಸಿದ್ದು ಸಿವಿಲ್‌ಗೆ ಉತ್ತಮ ಅವಕಾಶಗಳು ಇದೆ ಎಂದು ಹೇಳಿದರು.

    ಸವಿ ಫೌಂಡೇಶನ್ ಅಧ್ಯಕರಾದ ಡಾ. ಸಂದೀಪ ನಾಯಕ ಹಾಗೂ ಟ್ರಸ್ಟೀ ಇಂಜೀನಿಯರ್ ತೇಜಸ ನಾಯಕ, ರಾಮ ನಾಯಕರನ್ನು ಸನ್ಮಾನಿಸಿದರು. ಈ ಸಂರ್ದಧದಲ್ಲಿ ರಾಮ ನಾಯಕ ಧರ್ಮಪತ್ನಿ ಶೈಲಜಾ ನಾಯಕ, ಮಕ್ಕಳಾದ ಮಹಾನ್, ಮಯೂರ್ ಹಾಗೂ ಬಿಲ್ಡರ್ ಜಯಪ್ರಕಾಶ ನಾಯಕ ಉಪಸ್ಥಿತರಿದ್ದರು.

  • ಬಾಡದ ಶ್ರೀ ಕಾಂಚಿಕಾಂಬಾ ದೇವಾಲಯಕ್ಕೆ ಆರ್.ವಿ ದೇಶಪಾಂಡೆ ಭೇಟಿ.

    ಬಾಡದ ಶ್ರೀ ಕಾಂಚಿಕಾಂಬಾ ದೇವಾಲಯಕ್ಕೆ ಆರ್.ವಿ ದೇಶಪಾಂಡೆ ಭೇಟಿ.

    ಕುಮಟಾ : ತಾಲೂಕಿನ ಶಕ್ತಿದೇವತೆ ಹಾಗೂ ಜಾಗೃತ ಸ್ಥಳವೆಂದೇ ಪ್ತಸಿದ್ಧವಾಗಿರುವ ಬಾಡದ ಕಾಂಚಿಕಾ ಪರಮೇಶ್ವರಿ ದೇವಾಲಯಕ್ಕೆ ಮುತ್ಸದ್ದಿ ರಾಜಕಾರಣಿ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ಭೇಟಿ ನೀಡಿ ದರ್ಶನ ಪಡೆದು ಸರ್ವಾಲಂಕಾರ ಪೂಜೆ ಮಾಡಿಸಿ, ತಾಯಿಯ ಅಶೀರ್ವಾದ ಹಾಗೂ ಪ್ರಸಾದ ಪಡೆದುಕೊಂಡರು. 

    ಸಮಿತಿ ಅಧ್ಯಕ್ಷ ಡಾ. ಎಸ್. ಎಸ್. ಹೆಗಡೆ, ಹಾಗೂ ಸದಸ್ಯರುಗಳಾದ ಲಲಿತಾ ಪಟಗಾರ, ರಾಜ ನಾಯಕ, ಎ.ಎಸ್. ವಿಟ್ಟಲ್, ಮಾಜಿ ಸಚಿವರನ್ನು ಬರಮಾಡಿಕೊಂಡು ಪೂಜೆ ನೆರವೇರಲು ಸಹಕರಿಸಿದರು. 

    ಈ ಸಂದರ್ಬದಲ್ಲಿ ನೂತನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಸ್.ಎಸ್ ಹೆಗಡೆ ದೇವಾಲಯದ ಅಭಿವೃದ್ಧಿ ದೃಷ್ಟಿಯಿಂದ ಆಗಬೇಕಾದ ಕೆಲಸಗಳ ಕುರಿತಾಗಿ ದೇಶಪಾಂಡೆಯವರ ಗಮನಕ್ಕೆ ತಂದರು. ಪ್ರಸ್ತುತ ಆಗಬೇಕಾದ ಅಭಿವೃದ್ಧಿಯ ಕಾರ್ಯಗಳ ಕುರಿತಾಗಿ ಸಮಗ್ರ ರೂಪುರೇಷೆ ಸಿದ್ದಪಡಿಸಿ ನನ್ನನ್ನು ಭೇಟಿ ಮಾಡಿದರೆ, ಅನುದಾನಕ್ಕೆ ಅಗತ್ಯ ಪ್ರಯತ್ನ ಮಾಡುವುದಾಗಿ ದೇಶಪಾಂಡೆಯವರು ಭರವಸೆ ನೀಡಿದರು ಎನ್ನಲಾಗಿದೆ.

    ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ನಾಯ್ಕ, ಕುಮಟಾ ಅರ್ಭನ ಬ್ಯಾಂಕ್ ಅಧ್ಯಕ್ಷ ಧೀರು ಶಾನಭಾಗ, ವ್ಯವಸ್ಥಾಪಕ ಪರಮೇಶ್ವರ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು. ದೇವಸ್ಥಾನದ ವತಿಯಿಂದ ಅಧ್ಯಕ್ಷರು ಶಾಲು ಹೊದೆಸಿ ಶ್ರೀ ದೇವಿಯ ಭಾವಚಿತ್ರ ನೀಡಿ ಗಣ್ಯರನ್ನು ಸನ್ಮಾನಿಸಿದರು.

  • ಗೋಕರ್ಣದ ಅಭಿವೃದ್ಧಿಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಆರ್.ವಿ.ಡಿ.

    ಗೋಕರ್ಣದ ಅಭಿವೃದ್ಧಿಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಆರ್.ವಿ.ಡಿ.

    ಕುಮಟಾ : ಹಿರಿಯ ರಾಜಕಾರಣಿ ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ ಗೋಕರ್ಣಕ್ಕೆ‌ ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ದಿ. ಗೋದಾವರಿ ಹೊಟೇಲ್ ನಲ್ಲಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗೋಕರ್ಣದ ಅಭಿವೃದ್ಧಿ, ರಸ್ತೆ, ಒಳಚರಂಡಿ ಹಾಗೂ ಮಾದನಗೇರಿಯಲ್ಲಿ ಮುಖ್ಯ ದ್ವಾರ ನಿರ್ಮಾಣದ ಕುರಿತಾಗಿ ಪತ್ರಕರ್ತರು ಅವರನ್ನು ಪ್ರಶ್ನಿಸಿದರು.

    ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆರ್.ವಿ ದೇಶಪಾಂಡೆ ಅವರು ನಾನು ಸಚಿವನಾಗಿದ್ದ ಕಾಲದಲ್ಲಿ ಗೋಕರ್ಣದ ಅಭಿವೃದ್ಧಿಗೆ ಸಾಕಷ್ಟು ಶ್ರಮ ವಹಿಸಿದ್ದೇನೆ, ಅನುದಾನವನ್ನು ಬಿಡುಗಡೆ ಮಾಡಿದ್ದೇನೆ. ಇದೀಗ ಗೋಕರ್ಣದಲ್ಲಿ ಆಗಬೇಕಾಗಿರುವ ಅಭಿವೃದ್ಧಿಗಳ ಕಾರ್ಯದ ಕುರಿತಾಗಿ ಸೂಕ್ತ ವಿವರಗಳೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸಿದರೆ, ಆ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು ಕಾರ್ಯ ಮಾಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ಕಾಂಗ್ರೆಸ್ ಪ್ರಮುಖರುಗಳಾದ ಪ್ರದೀಪ ನಾಯಕ, ರಾಘವೇಂದ್ರ ನಾಯಕ, ಹೊನ್ನಪ್ಪ ನಾಯಕ, ರತ್ನಾಕರ ನಾಯ್ಕ, ಶಿವಾನಂದ ನಾಯಕ, ನಾಗರಾಜ ನಾಯ್ಕ, ತೇಜಸ್ವಿ ನಾಯ್ಕ, ಅರುಣ ಗೌಡ, ಮನೋಹರ ಗೌಡ,ಇಬ್ರಾಹಿಂ ಸಾಬ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

  • ಆಟವಾಡುವ ಸಂದರ್ಭದಲ್ಲಿ ಬಿದ್ದ ಬಾಲಕಿ ಸಾವು.

    ಆಟವಾಡುವ ಸಂದರ್ಭದಲ್ಲಿ ಬಿದ್ದ ಬಾಲಕಿ ಸಾವು.

    ಕುಮಟಾ : ತಾಯಿಯ ಬಾಳಂತನವೆಂದು ದೊಡ್ಡಮ್ಮನ ಮನೆಗೆ ಬಂದ ಐದು ವರ್ಷದ ಮಗು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಮನೆ ಅಂಗಳದಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಶೋಕನಮಕ್ಕಿಯಲ್ಲಿ ನಡೆದಿದೆ.

    ಐದು ವರ್ಷದ ಪುಟಾಣಿ ಧೃತಿ ನಾರಾಯಣ ಪಟಗಾರ ಎಂಬಾಕೆಯೇ ಮೃತಪಟ್ಟಿರುವ ಬಾಲಕಿ. ಬಾಲಕಿ ಮೂಲತಃ ಹಿರೇಗುತ್ತಿಯವಳಾಗಿದ್ದು, ತಾಯಿ ಬಾಳಂತನದಲ್ಲಿ ಇರುವ ಕಾರಣ ತನ್ನ ತಾಯಿಯ ಅಕ್ಕನ ಮನೆ ಶೋಕನಮಕ್ಕಿಗೆ ಬಂದಿದ್ದಳು.

    ಧೃತಿ ಅ ೨೫ ರಂದು ಸಂಜೆ ಮನೆಯ ಹೊರಗಡೆಯಲ್ಲಿ ಆಟವಾಡುತ್ತಿದ್ದಾಗ ಬಿದ್ದಿದ್ದು, ಈ ವೇಳೆ ಬಾಲಕಿಯ ತಲೆಗೆ ಗಾಯವಾಗಿದೆ. ಹಣೆಗೆ ಬಿದ್ದ ಒಳಪೆಟ್ಟಿನಿಂದ ಪ್ರಜ್ಞಾಹೀನ ಸ್ಥಿತಿಯಲ್ಕಿದ್ದ ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಿದರೂ ಆಸ್ಪತ್ತೆಗೆ ಬರುವ ಮಾರ್ಗಮಧ್ಯೆಯೇ ಆಕೆ ಮೃತಪಟ್ಟಿದ್ದಾಳೆ‌.

  • ನವರಾತ್ರಿ ವಿಶೇಷ ಶ್ರೀಕಾಂಚಿಕಾ ಪರಮೇಶ್ವರಿ ದೇವಾಲಯದ ರಥಬೀದಿಯಲ್ಲಿ ‘ಸಪ್ತ ಯಕ್ಷ ಸೌರಭ ಕಾರ್ಯಕ್ರಮ’.

    ನವರಾತ್ರಿ ವಿಶೇಷ ಶ್ರೀಕಾಂಚಿಕಾ ಪರಮೇಶ್ವರಿ ದೇವಾಲಯದ ರಥಬೀದಿಯಲ್ಲಿ ‘ಸಪ್ತ ಯಕ್ಷ ಸೌರಭ ಕಾರ್ಯಕ್ರಮ’.

    ಕುಮಟಾ : ಶ್ರೀಕಾಂಚಿಕಾಂಬಾ ಕೃಪಾಪೋಷಿತ ಯಕ್ಷಗಾನ‌ ಮಂಡಳಿಯ ವತಿಯಿಂದ ನವರಾತ್ರಿಯ ಅಂಗವಾಗಿ ಬಾಡದ   ಶ್ರೀಕಾಂಚಿಕಾ ಪರಮೇಶ್ವರಿ ದೇವಾಲಯದ ರಥಬೀದಿಯಲ್ಲಿ ‘ಸಪ್ತ ಯಕ್ಷ ಸೌರಭ ಕಾರ್ಯಕ್ರಮ’ ಜರುಗಿದ್ದು, ಏಳು ದಿನಗಳ ಪರ್ಯಂತ ವಿವಿಧ ಯಕ್ಷತಂಡಗಳು  ಯಕ್ಷಗಾನ ಪ್ರದರ್ಶನ ನೀಡಿದವು. ಸಪ್ತಯಕ್ಷ ಸೌರಭ ಕಾರ್ಯಕ್ರಮದ ವೇದಿಕೆಯಲ್ಲಿ ಹಾಜರಿದ್ದ ಗಣ್ಯರು ಯಕ್ಷಗಾನ ಕಲೆಯನ್ನು ಪ್ರತಿಯೊಬ್ಬರೂ ಉಳಿಸಿ ಬಳೆಸಬೇಕಾದದ್ದು ಇಂದಿನ ಅಗತ್ಯ ಎಂದು ತದೇಕಾತ್ಮತಾ ಭಾವ ವ್ಯಕ್ತಪಡಿಸಿ ಯಕ್ಷಗಾನದ ಉಳಿವಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.

    ಮಕ್ಕಳ ತಂಡ, ಮಹಿಳೆಯರ ತಂಡ, ವೈದ್ಯರುಗಳ ತಂಡ ಹೀಗೆ ವಿಭಿನವಾದ ವಿಶೇಷತೆಗಳು ರಂಗಸ್ಥಳದಲ್ಲಿ ಜರುಗುತ್ತಿದ್ದು ಯಕ್ಷಗಾನದ ಪ್ರಾಯೋಜಕರ ಹಾಗೂ ದಾನಿಗಳ ನೆರವಿನಿಂದ ಈ ಕಾರ್ಯಕ್ರಮಗಳು  ಸಂಪನ್ನವಾದವು.

    ಅತಿಥಿಗಳಾಗಿ ಭೂಗರ್ಭ ಶಾಸ್ತ್ರಜ್ಞ ವಿನೋದ ತಿಮ್ಮಣ್ಣ ಭಟ್ಟ, ಎಲ್ ಆಯ್ ಸಿ ಅಧಿಕಾರಿ ರಾಘವೇಂದ್ರ ಸಾಮಗ, ಪ್ರೋ. ಎಂ ಜಿ  ಭಟ್ಟ, ಮಣಿಪಾಲ ಆಸ್ಪತ್ರೆಯ ಮಕ್ಕಳ ತಜ್ಞ ಯಕ್ಷಗಾನ ಕಲಾವಿದ ಡಾ. ಸುನೀಲ ಮಂಡಕೂರು, ನ್ಯಾಯಾಧೀಶ ಪ್ರವೀಣ ನಾಯ್ಕ, ಉದ್ಯಮಿ ಎಚ್.ಎಸ್ ಗಜಾನನ ಮೊದಲಾದವರು ಅತಿಥಿಗಳಾಗಿ ಪಾಲ್ಗೊಂಡು ಯಕ್ಷಗಾನ ಕಲೆಯ ಮಹತ್ವದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

    ಬಾಡ ಹಾಗೂ ಕಾಗಾಲದಲ್ಲಿ ಮಕ್ಕಳ ಕಲಿಕಾ ಕೇಂದ್ರಗಳು ಪ್ರಾರಂಭಗೊಂಡು ಹಲವಾರು ವಿದ್ಯಾರ್ಥಿಗಳು ಯಕ್ಷಗಾನ ಕಲೆಯನ್ನು ಕರಗತಮಾಡಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಯಕ್ಷಗಾನ ಕಲೆಯು ವ್ಯಕ್ತಿತ್ವನ್ನು ಬೆಳಸುತ್ತದೆ ಎಂದು ಎಲ್ಲಾ ಅತಿಥಿಗಳು ಅಭಿಪ್ರಾಯಪಟ್ಟರು.

    ಯಕ್ಷಗಾನ ಸಂಘಟನೆಯ ಪ್ರಮುಖ ಜಗನ್ನಾಥ ನಾಯ್ಕ, ಅಧ್ಯಕ್ಷ ವಿಷ್ಣು ನಾಯ್ಕ ಸದಸ್ಯರಾದ ನಾರಾಯಣ ಭಟ್ಟ ಗುಡೇ ಅಂಗಡಿ, ಕಾಗಾಲ ಚಿದಾನಂದ ಭಂಡಾರಿ, ಬಂಗಾರಿ ಮಾಸ್ತರ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ನಾಗರಾಜ ಮಡಿವಾಳ ವೇದಿಕೆಯ ಕಾರ್ಯಕ್ರಮದ ನಿರ್ವಹಣೆ ಮಾಡಿದರು.

  • ಹೆಗಡೆಯ ಶಾಂತಿಕಾಂಬಾ ದೇವಾಲಯದಲ್ಲಿ ಶರನ್ನವರಾತ್ರಿ ಸಂಪನ್ನ.

    ಹೆಗಡೆಯ ಶಾಂತಿಕಾಂಬಾ ದೇವಾಲಯದಲ್ಲಿ ಶರನ್ನವರಾತ್ರಿ ಸಂಪನ್ನ.

    ಕುಮಟಾ : ತಾಲೂಕಿನ ಹೆಗಡೆಯ ಶ್ರೀ ಶಾಂತಿಕಾಂಬಾ ಪರಮೇಶ್ವರಿ ದೇವಾಲಯದಲ್ಲಿ ಒಂಬತ್ತು ದಿನ ಶರನ್ನವರಾತ್ರಿ ಉತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಜಾಗೃತ ಶಕ್ತಿಪೀಠ ಗಳಲ್ಲಿ ಒಂದಾದ ಹೆಗಡೆಯ ಶ್ರೀ ಶಾಂತಿಕಾಂಬಾ ಪರಮೇಶ್ವರಿ ದೇವಿಯ ನವರಾತ್ರಿ ಉತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು.. ಒಂಭತ್ತು ದಿನಗಳೂ ಕೂಡ ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿತ್ತು. ಗ್ರಾಮದ ಭಕ್ತರಷ್ಟೇ ಅಲ್ಲದೇ ಪರ ಊರಿನ ಭಕ್ತರು ಬಂದು ದೇವಿಯ ದರ್ಶನ ಪಡೆದು ಸೇವೆ ಸಲ್ಲಿಸಿ ಪ್ರಸಾದ ಭೋಜನ ಸವಿದು ಪುನೀತರಾದರು.

       ವೇ.ಮೂ ಪರಮೇಶ್ವರ ಶಾಸ್ತ್ರೀ ಹಾಗೂ ವೇ.ಮೂ ತಿಮ್ಮಣ್ಣ ಭಟ್ಟರವರ ನೇತೃತ್ವದಲ್ಲಿ ಹಾಗೂ ಇತರ ಬ್ರಾಹ್ಮಣ ರ ಸಹಕಾರದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ನವಚಂಡೀ ಹವನ, ಪ್ರತಿದಿನ ಬಲಿ, ಮಾತೆಯ ಪಲ್ಲಕ್ಕಿ ಉತ್ಸವ ದೊಂದಿಗೆ ಮಹಾಮಂಗಳಾರತಿ ನಡೆಸಲಾಯಿತು.. ದೇವಾಲಯ ಮೊಕ್ತೇಶ್ವರ ನಾಗೇಶ ಶಾನಭಾಗ ಮೊಕ್ತೇಶ್ವರ ಮಂಡಳಿಯ ಪುರುಷೋತ್ತಮ ಶಾನಭಾಗ, ಎಮ್ ಎಮ್ ನಾಯ್ಕ, ಗ್ರಾಮದ ಹೆಗಡೆಯವರಾದ ಪ್ರಭಾಕರ ಹೆಗಡೆ ದಂಪತಿಗಳು ಪ್ರತಿನಿತ್ಯ ನವರಾತ್ರಿ ಉತ್ಸವ ಸಾಂಗವಾಗಿ ಜರುಗಲು ಎಲ್ಲ ರೀತಿಯ ಸಹಕಾರದೊಂದಿಗೆ ಭಕ್ತರಿಗೆ ಯಾವುದೇ ಸಮಸ್ಯೆ ಬರದಂತೆ ಉತ್ತಮ ವ್ಯವಸ್ಥೆ ಕೈಗೊಂಡಿದ್ದರು.

       ಪ್ರತಿದಿನ ದೇವಿಯ ಎಲ್ಲ ಸೇವೆಗಳಿಗೆ ಕೃಷ್ಣ ಬಂಢಾರಿ ಹಾಗೂ ತಂಡದ ಪಂಚವಾದ್ಯದ ನಾದ ಇನ್ನಷ್ಟು ಭಕ್ತಿಪರವಶರಾಗುವಂತೆ ಮಾಡುತ್ತಿತ್ತು. ಶ್ರೀ ಶಾಂತಿಕಾಂಬಾ ಸೇವಾ ಬಳಗದ ಎಲ್ಲ ಸದಸ್ಯರು ಎಲ್ಲ ಭಕ್ತರ ಸಹಕಾರದೊಂದಿಗೆ ಈ ವರ್ಷದಿಂದ ಪ್ರಾರಂಭಿಸಿದ್ದ ಪ್ರಸಾದ ಭೋಜನ ತುಂಬಾ ಅಚ್ಚುಕಟ್ಟಾಗಿ ಯಾವುದೇ ಗೊಂದಲವಿಲ್ಲದೇ ಯಾವ ಭಕ್ತರಿಗೂ ಅಸಮಾಧಾನ ವಾಗದ ರೀತಿಯಲ್ಲಿ ವ್ಯವಸ್ಥೆ ಕೈಗೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ದಿನದಿಂದ ದಿನಕ್ಕೆ ಪ್ರಸಾದ ಭೋಜನ ಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದ್ದರೂ ತುಂಬಾ ಸಂತಸದಿಂದ ಎಲ್ಲರಿಗೂ ಪ್ರಸಾದ ಭೋಜನ ವ್ಯವಸ್ಥೆ ತಕ್ಷಣ ಮಾಡಿ ಭಕ್ತರ ಮನ ತಣಿಸಿದ್ದು ವಿಶೇಷ. ಒಂಭತ್ತನೇ ದಿನವಾದ ಸೋಮವಾರ ಸುಮಾರು ಮೂರು ಸಾವಿರಕ್ಕೂ ಅಧಿಕ ಭಕ್ತರು ಪ್ರಸಾದ ಭೋಜನ ಸವಿದರು.. 

      ನವರಾತ್ರಿ ಕೊನೆಯ ದಿನ ಶ್ರೀ ಶಾಂತಿಕಾಂಬಾ ಸೇವಾ ಬಳಗದಿಂದ ದೇವಾಲಯದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡು ಹಲವು ದಶಕಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿ  ಮೊಕ್ತೇಶ್ವರ ರಾಗಿ ನಾಗೇಶ ಶಾನಭಾಗ ಹಾಗೂ ಗ್ರಾಮದ ಹೆಗ್ಗಡೆಯವರಾಗಿ ಹರಿಹರ ಹೆಗಡೆ ಯವರು ಕಾಯಾ ವಾಚಾ ಮನಸಾ ತಾಯಿಯ ಸೇವೆಗೈದ ಹಿನ್ನೆಲೆಯಲ್ಲಿ ಅವರೀರ್ವರಿಗೂ ನಾಗರೀಕ ಸನ್ಮಾನ ಮಾಡಿ ಗೌರವಿಸಲಾಯಿತು..