Satwadhara News

Category: SIRSI

ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ನಡೆದ ಕಾರ್ಯಕ್ರಮಗಳ ವರದಿ ಮತ್ತು ಇನ್ನಿತರ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

  • ಮೆಡಿಕಲ್ ಕಾಲೇಜ್ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಆಗ್ರಹಿಸಿ ಪಾದಯಾತ್ರೆ ಪ್ರಾರಂಭಿಸಿದ ಅನಂತಮೂರ್ತಿ ಹೆಗಡೆ.

    ಮೆಡಿಕಲ್ ಕಾಲೇಜ್ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಆಗ್ರಹಿಸಿ ಪಾದಯಾತ್ರೆ ಪ್ರಾರಂಭಿಸಿದ ಅನಂತಮೂರ್ತಿ ಹೆಗಡೆ.

    ಅನಂತಮೂರ್ತಿ ಹೆಗಡೆ ಹಾದಿಗೆ ಜೊತೆಯಾದ ಜನತೆ: ಜಿಲ್ಲೆಯ ಬೇಡಿಕೆ ಈಡೇರಿಕೆಗೆ ಆರಂಭಗೊಂಡ ಪಾದಯಾತ್ರೆ

    ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಆಗಬೇಕು ಎನ್ನುವುದು ಜನರು ಬಹು ವರ್ಷಗಳ ಬೇಡಿಕೆ. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯಿಲ್ಲದೇ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಇನ್ನು ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನ ನಿರ್ಮಿಸಿ ಜನರ ಜೀವವನ್ನ ಕಾಪಾಡಿ ಎಂದು ಸಾಮಾಜಿಕ ಕಾರ್ಯಕರ್ತ ಅನಂತ ಮೂರ್ತಿ ಹೆಗಡೆ ಪಾದಯಾತ್ರೆಯ ಮೂಲಕ ಸರ್ಕಾರವನ್ನ ಎಚ್ಚರಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

    ಉತ್ತರ ಕನ್ನಡ ಜಿಲ್ಲೆ ರಾಜ್ಯದ ಗಡಿ ಜಿಲ್ಲೆ. ಗೋವಾ ಗಡಿಯಲ್ಲಿರುವ ಉತ್ತರ ಕನ್ನಡ ಭೌಗೋಳಿಕವಾಗಿ ಸಾಕಷ್ಟು ದೊಡ್ಡದಿದ್ದರೂ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯೊಂದು ಇಲ್ಲದಿರುವುದು ಜನರಿಗೆ ದೊಡ್ಡ ಸಮಸ್ಯೆಯಾಗಿಯೇ ಕಾಡುತ್ತಿದೆ. ಇನ್ನು ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕು ಎಂದು ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು ಸರ್ಕಾರ ಮಾತ್ರ ಈ ಬಗ್ಗೆ ಗಮನಹರಿಸಿಲ್ಲ. ಜಿಲ್ಲೆಯಲ್ಲಿ ಅಪಘಾತ, ಹೃದಯಾಘಾತ, ಇನ್ನಿತರ ಗಂಭೀರ ಸಮಸ್ಯೆ ಆದರೆ ರೋಗಿಗಳನ್ನ ನೆರೆಯ ಉಡುಪಿ ಮಂಗಳೂರು, ಶಿವಮೊಗ್ಗ, ಗೋವಾ ಭಾಗದ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುವ ಅನಿವಾರ್ಯ ಪರಿಸ್ಥಿತಿ ಇದೆ. ಎಷ್ಟೇ ಜನರು ದಾರಿ ಮಧ್ಯೆಯೇ ಸಾವನ್ನಪ್ಪಿದ ಘಟನೆ ಸಹ ಇದೆ. ಇನ್ನು ಜಿಲ್ಲೆಯಿಂದ ಬೇರೆ ಜಿಲ್ಲೆಯ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗದೇ ಸಾವನ್ನಪ್ಪಿದ ಘಟನೆಗಳು ಸಹ ಇದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಶಿರಸಿಯ ಸಾಮಾಜಿಕ ಕಾರ್ಯಕರ್ತ ಅನಂತ್ ಮೂರ್ತಿ ಹೆಗಡೆ ಎನ್ನುವವರು ಪಾದಯಾತ್ರೆ ಮೂಲಕ ಮುಂದಾಗಿದ್ದಾರೆ. ಇಂದಿನಿಂದ ಏಳು ದಿನಗಳ ಕಾಲ ಪಾದಯಾತ್ರೆಯ ಮೂಲಕ ಸುಮಾರು 143 ಕಿಲೋ ಮೀಟರ್ ಸಂಚರಿಸಿ ಕಾರವಾರದಲ್ಲಿ ಹೋರಾಟ ನಡೆಸಲು ಮುಂದಾಗಿದ್ದು ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ವರೆಗೆ ನಮ್ಮ ಹೋರಾಟ ಇರುತ್ತದೆ ಎಂದು ಅವರು ತಿಳಿಸಿದರು.

    ಇಂದಿನಿಂದ ಪಾದಯಾತ್ರೆ ಪ್ರಾರಂಭ ಮಾಡಿದ್ದು ದೇವಿಮನೆ ಘಟ್ಟದ ಮಾರ್ಗವಾಗಿ ಕುಮಟಾ, ಅಂಕೋಲಾ ಮೂಲಕ ಕಾರವಾರಕ್ಕೆ ನವೆಂಬರ್ 8ನೇ ತಾರೀಕು ತೆರಳಲಿದ್ದಾರೆ. ಆಟೋ ಚಾಲಕ ಮಾಲಕ ಸಂಘ, ನಿವೃತ್ತ ಸೈನಿಕರು, ಹಲವು ಸಂಘ ಸಂಸ್ಥೆಯವರು ಹಾಗೂ ಸಾರ್ವಜನಿಕರು ಈ ಪಾದಯಾತ್ರೆಗೆ ಬೆಂಬಲ ನೀಡಿದ್ದಾರೆ. ಇನ್ನು ಅನಂತ್ ಮೂರ್ತಿ ಹೆಗಡೆ ಕಳೆದ ಹಲವಾರು ವರ್ಷಗಳಿಂದ ಆಟೋ ಚಾಲಕರಿಗೆ ಉಚಿತ ಪಾಸ್ ವಿತರಣೆ, ಬಡ ರೋಗಿಗಳಿಗೆ ಸಹಾಯ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಹಾಯ ಹೀಗೆ ಹಲವು ಕಾರ್ಯಗಳನ್ನ ಮಾಡುತ್ತಾ ಬಂದಿದ್ದು ಸದ್ಯ ಜಿಲ್ಲೆಯ ಜನರ ಪ್ರಮುಖ ಬೇಡಿಕೆಯಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹೋರಾಟವನ್ನ ಪ್ರಾರಂಭಿಸಿದ್ದಾರೆ. ಇನ್ನು ಅನಂತ್ ಮೂರ್ತಿ ಹೆಗಡೆಯವರ ಹೋರಾಟ ಇತರರಿಗೆ ಮಾದರಿ, ಜಿಲ್ಲೆಯ ಸಂಸದರಾಗಿ ಇಂತಹ ಮನಸ್ಥಿತಿಯವರನ್ನ ಆಯ್ಕೆ ಮಾಡಬೇಕು ಎನ್ನುವುದು ಪಾದಯಾತ್ರೆಯಲ್ಲಿ ಪಾಲ್ಗೊಂಡ ಸಾರ್ವಜನಿಕರ ಅಭಿಪ್ರಾಯವಾಗಿದೆ.

    ಅನಂತ ಮೂರ್ತಿ ಹೆಗಡೆ ಅವರು ನಡೆಸುವ ಪಾದಯಾತ್ರೆಯ ಮಾರ್ಗದುದ್ದಕ್ಕೂ ಸಭೆಗಳನ್ನ ಮಾಡುವ ಮೂಲಕ ಜನರಲ್ಲಿ ಆಸ್ಪತ್ರೆ ನಿರ್ಮಾಣದ ಅಗತ್ಯತೆಯ ಅರಿವು ಮೂಡಿಸುವ ಕಾರ್ಯವನ್ನ ಸಹ ಮಾಡಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಜನರ ಬಹು ವರ್ಷಗಳ ಬೇಡಿಕೆ ಈಡೇರಿಕೆಗೆ ಪಾದಾಯಾತ್ರೆ ಮೂಲಕ ಗಮನ ಸೆಳೆಯಲು ಮುಂದಾಗಿರುವುದು ನಿಜಕ್ಕೂ ಉತ್ತಮ ಬೆಳವಣಿಗೆಯೇ. ಸರ್ಕಾರ ಈಗಲಾದರು ಎಚ್ಚೆತ್ತು ಜಿಲ್ಲೆಯ ಜನರಿಗೆ ಬೇಕಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾಗಬೇಕಿದೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜ್ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಆಗ್ರಹಿಸಿ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ನಡೆಯಲಿರುವ ಪಾದಯಾತ್ರೆಯು ಮಾರಿಕಾಂಬಾ ದೇವಾಲಯಲ್ಲಿ ಶ್ರೀ ಮಾರಿಕಾಂಬೆಗೆ ಪೂಜೆ ಸಲ್ಲಿಸುವ ಮೂಲಕ ಆರಂಭಗೊಂಡಿದೆ.

    ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನದಿಂದ ಪ್ರಾರಂಭವಾಗುವ ಈ ಪಾದಯಾತ್ರೆಯು ಕಾರವಾರದ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ನ.9 ರಂದು ಅಂತ್ಯಗೊಳ್ಳಲಿದೆ. ಉತ್ತರಕನ್ನಡ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಡೆಯುವ ಈ ಪಾದಯಾತ್ರೆಯಲ್ಲಿ ಜಿಲ್ಲೆಯ ಹಲವು ಸಂಘಸಂಸ್ಥೆಗಳು, ಗಣ್ಯರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಹಸ್ರಾರು ಸಾರ್ವಜನಿಕರು ಪಾಲ್ಗೊಂಡಿದ್ದಾರೆ.

    ಶ್ರೀಗಳ ಭೇಟಿ.

    ಅನಂತಮೂರ್ತಿ ಹೆಗಡೆಯವರು ಇಂದು ಶ್ರೀ ಕ್ಷೇತ್ರ ಸ್ವರ್ಣವಲ್ಲಿಯಲ್ಲಿ ಶ್ರೀಗಳಾದ ಶ್ರೀ ಶ್ರೀ ಗಂಗಾದರೇಂದ್ರ ಸರಸ್ವತೀ ಸ್ವಾಮೀಜಿಯವರನ್ನು ಭೇಟಿ ಮಾಡಿ ಅವರಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶ್ರೀಗಳು ವಿಶೇಷ ಪೂಜೆ ನೆರವೇರಿಸಿ, ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಇಂದಿನಿಂದ ಹಮ್ಮಿಕೊಂಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಆಗ್ರಹಿಸಿ ಮಾಡುತ್ತಿರುವ ಪಾದಯಾತ್ರೆಗೆ ಶ್ರೀಗಳು ಔಪಚಾರಿಕವಾಗಿ ಚಾಲನೆ ನೀಡಿ ಪಾದಯಾತ್ರೆಗೆ ಶುಭ ಹಾರೈಸಿದರು.

    ನೆಗ್ಗು ಪಂಚಾಯತಿಗೆ ಆಗಮನ.

    ಅನಂತಮೂರ್ತಿ ಹೆಗಡೆಯವರ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿರಸಿಯಿಂದ ಕಾರವಾರದವರೆಗೆ ಹಮ್ಮಿಕೊಂಡ ಪಾದಯಾತ್ರೆಯು ಇಂದು ಸಂಜೆ ಶಿರಸಿಯ ನೆಗ್ಗು ಪಂಚಾಯತ್ ಗೆ ಆಗಮಿಸಿದೆ. ಈ ಸಂದರ್ಭದಲ್ಲಿ ನೆಗ್ಗು ಗ್ರಾಮಸ್ಥರು ಅನಂತಮೂರ್ತಿ ಹೆಗಡೆಯವರಿಗೆ ಭವ್ಯ ಸ್ವಾಗತ ನೀಡಿದ್ದು, ಪಾದಯಾತ್ರೆ ನೈತಿಕ ಬೆಂಬಲ ನೀಡುವುದರ ಜೊತೆಗೆ ಪಾದಯಾತ್ರೆಗೆ ಶುಭ ಹಾರೈಸಿದರು.

  • ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗೆ ಒತ್ತಾಯಿಸಿ ಪಾದಯಾತ್ರೆ. : ಅನಂತಮೂರ್ತಿ ಹೆಗಡೆ ನೇತ್ರತ್ವದಲ್ಲಿ ನಾಳೆಯಿಂದ ಪ್ರಾರಂಭ.

    ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗೆ ಒತ್ತಾಯಿಸಿ ಪಾದಯಾತ್ರೆ. : ಅನಂತಮೂರ್ತಿ ಹೆಗಡೆ ನೇತ್ರತ್ವದಲ್ಲಿ ನಾಳೆಯಿಂದ ಪ್ರಾರಂಭ.

    ಕಾರವಾರ : ಅನಂತಮೂರ್ತಿ ಹೆಗಡೆ ಮುಂದಾಳತ್ವದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ನಾಳೆ ನವೆಂಬರ್ 02 ರಿಂದ 9ರ ವರೆಗೆ ಶಿರಸಿಯಿಂದ ಕಾರವಾರದ ತನಕ ನಡೆಯಲಿರವ ಪಾದಯಾತ್ರೆಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿರುವ ಕಾಶಿನಾಥ ಮೂಡಿ ಅವರು ಚಾಲನೆ ನೀಡಲಿದ್ದಾರೆ.

    ಅನಂತಮೂರ್ತಿ ಹೆಗಡೆ ಅವರ ಮುಂದಾಳತ್ವದಲ್ಲಿ ಈ ಪಾದಯಾತ್ರೆ ಆರಂಭವಾಗಲಿದೆ. ಮಲನಾಡಿನ ಹೆಬ್ಬಾಗಿಲು ಶಿರಸಿಯಲ್ಲಿ ಪಾದಯಾತ್ರೆಗೆ ಚಾಲನೆ ಸಿಗಲಿದ್ದು, ಶಿರಸಿಯಿಂದ ಕುಮಟಾ ತಲುಪಲಿದ್ದು, ನಂತರದಲ್ಲಿ ಕುಮಟಾದಿಂದ ದೀವಗಿ, ಮಿರ್ಜಾನ, ಬರ್ಗಿ, ಹಿರೇಗುತ್ತಿ, ಮಾದನಗೇರಿ ಮಾರ್ಗವಾಗಿ ಪಾದಯಾತ್ರೆ ಕಾರವಾರ ತಲುಪಲಿದೆ.

    ಪಾದಯಾತ್ರೆ ಉದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿರುವ ಮೆಡಿಕಲ್ ಆಸ್ಪತ್ರೆ ಕುರಿತಾಗಿ ಪಾದಯಾತ್ರೆ ಉದ್ದಕ್ಕೂ ಹೋರಾಟಗಾರು, ನ್ಯಾಯವಾದಿಗಳು, ಪತ್ರಕರ್ತರು,ರಾಜಕೀಯ ಪಕ್ಷದ ಮುಖಂಡರು ಹೆಜ್ಜೆ ಹಾಕಲಿದ್ದು,ಮೆಡಿಕಲ್ ಕಾಲೇಜು ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುರಿತಾಗಿ ಸರಕಾರದ ಗಮನ ಸೆಳೆಯಲಿದ್ದಾರೆ.

  • ನಿಯಂತ್ರಣ ತಪ್ಪಿ ಬೈಕ್ ಇಂದ ಬಿದ್ದು ವ್ಯಕ್ತಿ‌ ಸಾವು.

    ನಿಯಂತ್ರಣ ತಪ್ಪಿ ಬೈಕ್ ಇಂದ ಬಿದ್ದು ವ್ಯಕ್ತಿ‌ ಸಾವು.

    ಶಿರಸಿ : ತಾಲೂಕಿನ ಕುಮಟಾ ರಸ್ತೆಯ ಸಹಸ್ರಹಳ್ಳಿ ಸಮೀಪ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಬೈಕ್ ಸವಾರ ಗಣಪತಿ ದೇವರು ಭಟ್ ಸ್ಥಳದಲ್ಲಿಯೇ ದುರ್ಮರಣಕ್ಕೀಡಾದ ಘಟನೆ ಶುಕ್ರವಾರ ನಡೆದಿದೆ. ಉತ್ತರಕನ್ನಡದಲ್ಲಿ ಅಪಘಾತಗಳ ಸಂಖ್ಯೆ ಏರಿಕೆ ಆಗುತ್ತಿದ್ದು, ಸವಾರರು ಜಾಗೃತ ಚಾಲನೆ ಬಗ್ಗೆ ಗಮನ ನೀಡಬೇಕಾದ ಅಗತ್ಯತೆ ಇದೆ.

  • ವಿದ್ಯುತ್ ತಂತಿ ಸ್ಪರ್ಷದಿಂದ ಸಾವಿಗೀಡಾದ ಮೃತ ಮಂಗಕ್ಕೆ ಪೂಜೆ ಸಲ್ಲಿಸಿ ಅಂತ್ಯಸಂಸ್ಕಾರ.

    ವಿದ್ಯುತ್ ತಂತಿ ಸ್ಪರ್ಷದಿಂದ ಸಾವಿಗೀಡಾದ ಮೃತ ಮಂಗಕ್ಕೆ ಪೂಜೆ ಸಲ್ಲಿಸಿ ಅಂತ್ಯಸಂಸ್ಕಾರ.

    ಶಿರಸಿ: ಮರಾಠಿಕೊಪ್ಪದ ಸುಭಾಶನಗರ ಎರಡನೇ ಕ್ರಾಸ್‌ನಲ್ಲಿ ವಿದ್ಯುತ್‌ ತಂತಿ ಸ್ಪರ್ಷದಿಂದ ಸಾವಿಗೀಡಾದ ಗಂಡು ಮಂಗಕ್ಕೆ ಹಾಲು ಹಾಕಿ, ಅರಿಶಿಣ ಕುಂಕುಮ ಹಚ್ಚಿ ಹಣ್ಣು ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿ ಅಂತ್ಯ ಸಂಸ್ಕಾರ ನೆರವೇರಿಸಿದ ಘಟನೆ ನಡೆದಿದೆ.

    ವಿಡಿಯೋ

    ಗುಂಪುಗೂಡಿ ಬಂದಿದ್ದ ಮಂಗಗಳಲ್ಲಿ ಒಂದು ಮಂಗವು ಮರದಿಂದ ಹಾರಿ ವಿದ್ಯುತ್‌ ಕಂಬಕ್ಕೆ ಅಳವಡಿಸಲಾಗಿದ್ದ ಕಂಬಕ್ಕೆ ಜಿಗಿದಿದೆ. ಈ ಸಂದರ್ಭದಲ್ಲಿ ಮಂಗಕ್ಕೆ ವಿದ್ಯುತ್‌ ಸ್ಪರ್ಷವಾಗಿ ಅಲ್ಲಿಯೇ ಸತ್ತು ಹೋಗಿತ್ತು. ಸುದ್ದಿ ತಿಳಿದ ಹೆಸ್ಕಾಂನವರು ವಿದ್ಯುತ್ ಸ್ಥಗಿತಗೊಳಿಸಿ ಸತ್ತ ಮಂಗನನ್ನು ಕೆಳಕ್ಕೆ ಹಾಕಿದ್ದಾರೆ. ಇದನ್ನು ಕಣ್ಣಾರೆ ಕಂಡು ಮರುಗಿದ ಸುಭಾಶ ನಗರದ ಜನರು ಶ್ರೀ ಮಾರುತಿಯ ಅವತಾರನಂತಿರುವ ಮಂಗನಿಗೆ ಭಕ್ತಿಯಿಂದ ನಮಿಸಿ ಪೂಜೆ ಹಾಗೂ ಇತ್ಯಾದಿ ಕಾರ್ಯಗಳನ್ನು ನೆರವೇರಿಸಿದ್ದಾರೆ.

  • ಮನೆಯೆದುರೇ ಪ್ರತ್ಯಕ್ಷವಾದ ಬೃಹತದ ಕಾಳಿಂಗ ಸರ್ಪ.

    ಮನೆಯೆದುರೇ ಪ್ರತ್ಯಕ್ಷವಾದ ಬೃಹತದ ಕಾಳಿಂಗ ಸರ್ಪ.

    ಶಿರಸಿ: ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿ ಮರ್ಲಮನೆಯಲ್ಲಿ ಸುಮಾರು 9 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಮನೆ ಎದುರೇ ಆಗಮಿಸಿದ ಘಟನೆ ಗುರುವಾರ ನಡೆದಿದೆ. ಇಲ್ಲಿಯ ಗಣಪತಿ ಆರ್. ಹೆಗಡೆ ಎಂಬುವವರ ಮನೆಯಂಗಳದಲ್ಲಿ ಹಾವು ಪ್ರತ್ಯಕ್ಷವಾಗಿದೆ. ಕಳೆದ ಎರಡು ಮೂರು ದಿನಗಳಿಂದ ಮನೆ ಸಮೀಪದಲ್ಲಿಯೇ ಇದ್ದ ಅಡಕೆ ತೋಟದಲ್ಲಿ ಕಾಣಿಸಿಕೊಳ್ಳುತ್ತಿದ್ದ ಹಾವು ಗುರುವಾರ ಮನೆಯಂಗಳಕ್ಕೇ ಬಂದಿತ್ತು. ನೋಡುಗರಿಗೆ ಭಯ ಹುಟ್ಟಿಸುವಂತಹ ಬೃಹತ್ ಆಕಾರ ಹೊಂದಿದ ಕಾಳಿಂಗವನ್ನು ಉರಗ ತಜ್ಞ ಪ್ರಶಾಂತ ಹುಲೇಕಲ್ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

    ವಿಡಿಯೋ

  • ಶಕ್ತಿಯಿರುವುದು ಆಯುಧದಲ್ಲಲ್ಲ, ಬದಲಾಗಿ ಸಂಘಟನೆಯಲ್ಲಿ : ಆರ್.ಎಸ್.ಎಸ್ ಹಿರಿಯ ಪ್ರಚಾರಕ ಸು.ರಾಮಣ್ಣ

    ಶಕ್ತಿಯಿರುವುದು ಆಯುಧದಲ್ಲಲ್ಲ, ಬದಲಾಗಿ ಸಂಘಟನೆಯಲ್ಲಿ : ಆರ್.ಎಸ್.ಎಸ್ ಹಿರಿಯ ಪ್ರಚಾರಕ ಸು.ರಾಮಣ್ಣ

    ಶಿರಸಿ: ಹಿಂದು ಸಂಘಟಿತರಾದರೆ ಮಾತ್ರ ಜಗತ್ತು ನಮಗೆ ಗೌರವ ಕೊಡುತ್ತದೆ. ಶಕ್ತಿಯಿರುವುದು ಆಯುಧದಲ್ಲಲ್ಲ, ಬದಲಾಗಿ ಸಂಘಟನೆಯಲ್ಲಿ ಎಂದು ಆರ್.ಎಸ್.ಎಸ್ ಹಿರಿಯ ಪ್ರಚಾರಕ ಸು.ರಾಮಣ್ಣ ಹೇಳಿದರು. ಅವರು ನಗರದ ವಿಕಾಸಾಶ್ರಮದಲ್ಲಿ ನಡೆದ ಆರ್ಎಸ್ಎಸ್ ವಿಜಯದಶಮಿ ಉತ್ಸವದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿ, ಶಕ್ತಿಯ ಚಮತ್ಕಾರವಿದ್ದಲ್ಲಿ ಮಾತ್ರ ಭಕ್ತಿಯ ನಮಸ್ಕಾರ ದೊರೆಯುತ್ತದೆ. ಸ್ವಯಂ ಜಾಗರೂಕರಾಗಿದ್ದರೆ ಮಾತ್ರ ಮತ್ತೊಬ್ಬರನ್ನು ಜಾಗೃತಗೊಳಿಸಲು ಸಾಧ್ಯ. ಸ್ವರಾಜ್ಯ ಬಂದರಷ್ಟೇ ಸಾಲದು, ಸ್ವಾತಂತ್ರ್ಯ ಬರಬೇಕು. ತನ್ನತನವನ್ನು ಕಳೆದುಕೊಳ್ಳಬಾರದು. ಸ್ವರಾಜ್ಯ ಪಡೆದ 75 ವರ್ಷಗಳು ಸಂದಿವೆ. ಈ ಹೊತ್ತಿನಲ್ಲಿ ನಾವೆಲ್ಲ ಜಾಗರೂಕರಾಗಬೇಕಿದೆ.

    ಸ್ವಯಂಸೇವಕರಿಂದ ಸಂಘದ ಸಂಸ್ಕೃತಿ ಪ್ರಕಟಿಕರಣಗೊಳ್ಳಬೇಕು. ಸ್ವದೇಶಿ ವಸ್ತು ಬಳಸುವುದರಲ್ಲಿ ಹೀನ ಭಾವ ಇರಬಾರದು, ಬದಲಾಗಿ ಅಭಿಮಾನವಿರಬೇಕು. ನಮ್ಮದು ಯುಗಾದಿಯ ದಿನ ಬೇವು-ಬೆಲ್ಲ ಹಂಚುವ ಸಂಸ್ಕೃತಿ. ನಮ್ಮದು ಪ್ರದರ್ಶನದ ಸಂಸ್ಕೃತಿಯಾಗಬಾರದು. ಜಗತ್ತು ಒಂದು ಕುಟುಂಬ ಎಂದು ನಾವೆಲ್ಲ ನಂಬಿದ್ದೇವೆ. ಇದು ನಮ್ಮ ಸಂಸ್ಕೃತಿಯಾಗಿದೆ. ಪರಸ್ಪರ ಗೌರವದಿಂದ ನಾವೆಲ್ಲ ಕೌಟುಂಬಿಕ ಪದ್ಧತಿಯಲ್ಲಿ ಪೂರೈಸಿಕೊಳ್ಳಬೇಕಿದೆ. ಸಂಸ್ಕೃತಿಯೊಂದಿಗೆ ಎಂದಿಗೂ ರಾಜಿಯಿರಬಾರದು ಎಂದರು.

    ಪ್ರಧಾನಿ ಮೋದಿಯ ನೇತೃತ್ವದಲ್ಲಿ ಇಂದಿನ ಈ ಅಮೃತ ಕಾಲದಲ್ಲಿ ಜಗತ್ತು ಭಾರತವನ್ನು ವಿಶೇಷವಾಗಿ ಗುರುತಿಸುತ್ತಿದೆ. ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಭಾರತೀಯತೆಯನ್ನು ಪ್ರಕಟಗೊಳಿಸಲಾಗಿದೆ. ಜ್ಞಾನ ಮನುಕುಲದ ಸಂಪತ್ತು. ಹಾಗಾಗಿ ವಿಶ್ವಕ್ಕೆ ಜ್ಞಾನವನ್ನು ಹಂಚುವುದರಲ್ಲಿ ಭಾರತ ಸದಾ ಮಗ್ನವಾಗಿದೆ. ಇಂಡಿಯಾ ಶಬ್ಧದ ಬದಲು ಭಾರತ ಎಂದು ಹೆಚ್ಚು ಬಳಸಬೇಕಿದೆ ಎಂದರು.

    ಶಾಖೆಯೊಡನೆ ಸ್ವಯಂಸೇವಕರು ಜೀವಂತಿಕೆಯನ್ನಿಟ್ಟುಕೊಳ್ಳಬೇಕು. ಸಂಘದ ಕಾರ್ಯಕ್ಕೆ ಸ್ವಯಂಸೇವಕರೇ ಆಧಾರವಾಗಿದ್ದಾರೆ. ಹಿಂದೂ ಎನ್ನುವ ಪದವೇ ಪವಿತ್ರವಾದುದು. ಜಗತ್ತನ್ನು ಒಗ್ಗೂಡಿಸುವುದು ಹಿಂದುವಿನ ಸಹಜ ಸ್ವಭಾವ. ಹಿಂದುಗಳ ಆಚರಣೆ ಮೂಢನಂಬಿಕೆಯಲ್ಲ, ಮೂಲನಂಬಿಕೆ. ಜೊತೆಗೆ ಇದು ಹಿಂದುವಿನ ಶ್ರೇಷ್ಠ ನಂಬಿಕೆಯಾಗಿದೆ.

    ನಾರಿಶಕ್ತಿ ನವರಾತ್ರಿಯ ಪ್ರತೀಕ. ದೇವಿಯ ಕೈಲಿರುವ ಆಯುಧ ಶಕ್ತಿಯ ಪ್ರತೀಕವಾಗಿದೆ. ಶಕ್ತಿ ಆರಾಧನೆ ನಮ್ಮ ಸಂಸ್ಕೃತಿ. ರಾಮ-ಕೃಷ್ಣರ ಶಕ್ತಿಯು ನಮ್ಮಲ್ಲಿ ಆವಾಹನೆಯಾಗಬೇಕು. ಭಾರತದ ಮೂಲಾಧಾರ ಹಿಂದೂ ಸಮಾಜ. ಭಾರತ ಉಳಿಯಲು ಹಿಂದುಗಳು ಜಾಗೃತಗೊಳ್ಳಬೇಕು. ಭಾರತ್ ಮಾತಾಕೀ ಜಯ್ ನಮ್ಮ ಜೀವನದ ಮಂತ್ರವಾಗಬೇಕು. ಸಂಘ ಅರಳಿದಂತೆ ಸಮಾಜ ಬದಲಾವಣೆಯಾಗುತ್ತದೆ. ಸಂಘ ಕಾರ್ಯ ದೇವಕಾರ್ಯವಾಗಿದೆ ಎಂದರು.

    ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ರಾಮಾ ಹೆಗಡೆ ಮಾತನಾಡಿ, ಆರ್.ಎಸ್.ಎಸ್ ದೇಶಪ್ರೇಮಿಗಳ ಸಂಘವಾಗಿದೆ. ದೇಶ ಕಷ್ಟದಲ್ಲಿದ್ದಾಗ ಸಂಘದ ಸ್ವಯಂಸೇವಕರು ನಿಸ್ವಾರ್ಥದಿಂದ ಸೇವೆಗೆ ಮೊದಲಾಗಿರುವುದನ್ನು ನಾವೆಲ್ಲರು ನೋಡಿದ್ದೇವೆ. ಆರ್ಎಸ್ಎಸ್ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಅವರು ಹೇಳಿದರು.

    ಸಭಾ ಕಾರ್ಯಕ್ರಮಕ್ಕೂ ಮುಂಚೆ ಮರಾಠಿಕೊಪ್ಪದ ಆಂಜನಾದ್ರಿ ದೇವಾಲಯದಿಂದ ವಿಕಾಸಾಶ್ರಮ ಮೈದಾನದವರೆಗೆ ಗಣವೇಷಧಾರಿ ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನ ನಡೆಯಿತು. ಸಂಚಲನದ ಮಾರ್ಗದುದ್ದಕ್ಕೂ ಸ್ಥಳೀಯ ಜನತೆ ರಂಗೋಲಿ ಹಾಕಿ, ಭಗವಾಧ್ವಜಕ್ಕೆ ಪುಷ್ಪ ಅರ್ಚಿಸುವುದರ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಶಿರಸಿ ನಗರ ಕಾರ್ಯವಾಹ ಮಹೇಶ ಹಂಚಿನಕೇರಿ ಸ್ವಾಗತಿಸಿದರು. ಬೌದ್ಧಿಕ್ ಪ್ರಮುಖ್ ಕರುಣಾಕರ ನಾಯ್ಕ ನಿರೂಪಿಸಿದರು. ಸಹಕಾರ್ಯವಾಹ ರಾಘವೇಂದ್ರ ಹೊನ್ನಾವರ ವಂದಿಸಿದರು. ಆರಂಭದಲ್ಲಿ ಗಣವೇಷಧಾರಿ ಸ್ವಯಂಸೇವಕರಿಂದ ಶಾರೀರಿಕ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ 220 ಕ್ಕೂ ಅಧಿಕ ಗಣವೇಷ ಸ್ವಯಂಸೇವಕರು, ನಾಗರಿಕರು ಉಪಸ್ಥಿತರಿದ್ದರು.

  • ದಾಂಡಿಯಾ ನೃತ್ಯದಲ್ಲಿ ಪಾಲ್ಗೊಂಡ ಶಾಸಕ ಭೀಮಣ್ಣ ನಾಯ್ಕ.

    ದಾಂಡಿಯಾ ನೃತ್ಯದಲ್ಲಿ ಪಾಲ್ಗೊಂಡ ಶಾಸಕ ಭೀಮಣ್ಣ ನಾಯ್ಕ.

    ಶಿರಸಿ : ಶಿರಸಿ ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಶಿರಸಿಯಲ್ಲಿ ನೆಲೆಸಿರುವ ರಾಜಸ್ಥಾನೀ ವಿಷ್ಣು ಸಮಾಜದವರು ಆಯೋಜಿಸಿರುವ ನವರಾತ್ರಿ-ದಾಂಡಿಯಾ-ರಾಸ್ ಕಾರ್ಯಕ್ರಮದಲ್ಲಿ ಪರಿವಾರ ಸಮೇತ ಪಾಲ್ಗೊಂಡು, ಪ್ರತಿಷ್ಠಾಪಿತ ದೇವಿಗೆ ಆರತಿ ಬೆಳಗಿ, ದಾಂಡಿಯಾದಲ್ಲಿ ಹೆಜ್ಜೆ ಹಾಕಿ ಗಮನಸೆಳೆದರು.

    ನಂತರ ಮಾತನಾಡಿದ ಅವರು ಇದು ಒಂದು ಸಮಾಜದ ಕಾರ್ಯಕ್ರಮ ಅಲ್ಲ. ದೇಶದ ಪರಂಪರೆಯ ವಿಶೇಷ ಆಚರಣೆಯಾಗಿದೆ. ದೇಶದಲ್ಲಿ ಎಲ್ಲ ಸಮುದಾಯ, ಜಾತಿಯವರಿದ್ದಾರೆ. ಎಲ್ಲರೂ ಒಂದಾಗಿ ಬದುಕುತ್ತೇವೆ. ಅವರವರ ಆಚರಣೆ ಅವರು ಮಾಡಿಕೊಂಡು ಬಂದಿದ್ದಾರೆ. ಹಿಂದು ಪರಂಪರೆಯನ್ನು ಅವರವರ ಸಮುದಾಯದವರ ಆಚರಣೆಯಂತೆ ಆಚರಿಸಿಕೊಂಡು ಉಳಿಸಿಕೊಂಡು ಬಂದಿದ್ದಾರೆ. ಆದರೆ ಎಲ್ಲರ ಭಾವನೆ ಒಂದೇ. ಪರಂಪರೆ ಎಂದಿಗೂ ನಶಿಸಲು ಬಿಡಬಾರದು ಎಂದು ಎಲ್ಲೆಲ್ಲಿ ಸಮುದಾಯ ಇದೆಯೋ ಅಲ್ಲಿಯೇ ಸಂಘಟಿಸಿ ಕಾರ್ಯಕ್ರಮ ಆಚರಿಸುತ್ತಾ ಬಂದಿದ್ದಾರೆ ಎಂದರು.


    ನೀವು 10 ದಿನಗಳ ಪೂಜೆ, ದಾಂಡಿಯಾ ಸೇವೆಯ ಸಾಂಪ್ರದಾಯಿಕ ನೃತ್ಯ ಸೇವೆ ಮಾಡುವುದು ಹೆಮ್ಮೆಯ ವಿಷಯ. ತಾಯಂದಿರು ಪೂಜೆಗಳಲ್ಲಿ ಸಂಪ್ರದಾಯ ಆಚರಣೆಯನ್ನು ಹೆಚ್ಚಿನದಾಗಿ ಆಚರಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇನ್ನೂ ಹೆಚ್ಚಿನ ಶಕ್ತಿ ಆ ತಾಯಿ ನಿಮಗೆಲ್ಲ ನೀಡಲಿ ಎಂದು ಪ್ರಾರ್ಥಿಸೋಣ. ಸಮಾಜವನ್ನು ಇನ್ನಷ್ಟು ಹೆಚ್ಚು ಎತ್ತಿ ಹಿಡಿಯಲು ಮಕ್ಕಳಿಗೆ ಸಂಸ್ಕಾರ ನೀಡಬೇಕು. ಜೊತೆಯಲ್ಲಿ ದೇಶ, ನಾಡಿನ ಅಭಿಮಾನ, ನೆರೆಹೊರೆಯವರೊಂದಿಗೆ ಭಾವನಾತ್ಮಕತೆಯೊಂದಿಗೆ ಬಾಳುವುದು ಮುಖ್ಯ. ನಾವೆಲ್ಲ ಒಂದಾಗಿ ಆಚರಿಸಬೇಕು, ಎಂದರು.

    ವಿಡಿಯೋ


    ರಾಜಸ್ಥಾನದಿಂದ ಇಲ್ಲಿಗೆ ಬಂದು, ಇಲ್ಲಿ ನೆಲೆಸಿ, ಕನ್ನಡಿಗರೊಂದಿಗೆ ಉತ್ತಮ ಬಾಂಧವ್ಯ ಹೊಂದಿ, ವ್ಯಾಪಾರ, ವ್ಯವಹಾರ ಮಾಡುತ್ತಿದ್ದೀರಿ. ನಿಮಗೆ ಎಲ್ಲ ರೀತಿಯ ಸಹಕಾರ ನೀಡಿ ನಿಮಗೆ ಯಾವುದೇ ತೊಡಕು ಬಾರದ ರೀತಿಯಲ್ಲಿ ನನ್ನ ಸಹಕಾರ ಸದಾ ಇರುತ್ತದೆ. ಭೂಮಿ ಒಂದೇ, ನಮ್ಮಲ್ಲಿ ಭಿನ್ನಾಭಿಪ್ರಾಯ ಇರಬಾರದು. ನಿಸ್ವಾರ್ಥ ಸೇವೆ ಓರ್ವ ಶಾಸಕನ ಗುರಿ. ಅದನ್ನು ಮಾಡುತ್ತೇನೆ ಎಂದರು.

    ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಹಸ್ತಿಮಲ್ ಚೌಧರಿ, ಕೋಶಾಧ್ಯಕ್ಷ ಖಾನಾಲಾಲ್ ಚೌಧರಿ ರವೀಶಜಿ ಸುತಾರ್, ಮಂಗಲ ಪಾಟೀಲ್, ಅಭಯ್‌ಸಿಂಗ್, ಜಸರಾಜ್, ಶಾಸಕರ ಪತ್ನಿ ಗೀತಾ ನಾಯ್ಕ, ಪುತ್ರ ಅಶ್ವಿನ್ ನಾಯ್ಕ, ಜ್ಯೋತಿ ಪಾಟೀಲ್, ಗೀತಾ ಶೆಟ್ಟಿ, ಶ್ರೀನಿವಾಸ ನಾಯ್ಕ, ಶ್ಯಾಮ್ ಭಟ್ಟ, ರವಿ ಹಾಗೂ ಇತರರು ಉಪಸ್ಥಿತರಿದ್ದರು.

  • ಎರಡು ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ : ಬೆಳ್ಳಂಬೆಳಗ್ಗೆ ನಡೆದ ಘೋರ ದುರಂತ.

    ಎರಡು ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ : ಬೆಳ್ಳಂಬೆಳಗ್ಗೆ ನಡೆದ ಘೋರ ದುರಂತ.

    ಶಿರಸಿ : ಶಿರಸಿ ಹುಬ್ಬಳ್ಳಿ ರಸ್ತೆಯ ಇಸಳೂರಿನ ಬಳಿ ಭೀಕರ ಅಪಘಾತ ಸಂಭವಿಸಿದ್ದು ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರವಾಗಿ ಪೆಟ್ಟಾಗಿರುವ ಬಗ್ಗೆ ವರದಿಯಾಗಿದೆ. ಕೆ ಎಸ್ ಅರ್ ಟಿ ಸಿ ಬಸ್ ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದೆ.

    ಎರಡೂ ಬಸ್ ನಲ್ಲಿದ್ದ ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅಪಘಾತದ ರಭಸಕ್ಕೆ ಬಸ್ ಮುಂಬಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

    ಶಿರಸಿಯಿಂದ ಅಕ್ಕಿಹಾಲೂರಿಗೆ ಸಾಗುತ್ತಿದ್ಸ ಬಸ್ಸಿಗೆ ಖಾಸಗಿ ಬಸ್ ಡಿಕ್ಕಿ ಯಾಗಿದೆ. ತುರ್ತಾಗಿ ೧೦೮ ವಾಹನ ಹಾಗು ಹೈವೆ ಪೆಟ್ರೋಲ್ ವಾಹನದ ಮೂಲಕ ಗಾಯಾಳುಗಳಿಗೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಬೆಳಗ್ಗೆ 7 ಗಂಟೆ ಸರಿಸುಮಾರು ಸಂಭವಿಸಿದ ಈ ಘಟನೆಯಲ್ಲಿ ಬಸ್ ಒಳಗೆ ಸಿಲುಕಿದ್ದ ಚಾಲಕ ಅಪಘಾತದಿಂದ ಒಳಗೆ ಸಿಲುಕಿದ್ದು, ಆತನನ್ನು ಹೊರತೆಗೆಯಲು ಸಾರ್ವಜನಿಕರು ಹರಸಾಹಸ ಪಟ್ಟರು. ಪೊಲೀಸರು ಸ್ಥಳಕ್ಕೆ ಭೇಟಿನೀಡಿದ್ದು, ಹೆಚ್ಚಿನ ವಿವರ ತಿಳಿಯಬೇಕಿದೆ.

  • ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಬೆಲೆಯ ಸಾಗುವಾನಿ ತುಂಡು ವಶ

    ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಬೆಲೆಯ ಸಾಗುವಾನಿ ತುಂಡು ವಶ

    ಶಿರಸಿ: ತಾಲೂಕಿನ ಬನವಾಸಿ ವ್ಯಾಪ್ತಿಯ ಹಲಸಿನಕೊಪ್ಪ ರಸ್ತೆ ಬಳಿ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಬೆಲೆಯ ಸಾಗುವಾನಿ ತುಂಡುಗಳನ್ನು ಆರೋಪಿ ಸಮೇತವಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಹಲಸಿನಕೊಪ್ಪದ ಪಾಂಡುರಂಗ ಪುಟ್ಟಪ್ಪ ಆಚಾರಿ ಹಾಗು ಬಿದ್ರಳ್ಳಿಯ ಗಣಪತಿ ನಾಗ್ಯ ಬಂಧಿತ ಆರೋಪಿಗಳಾಗಿದ್ದು, ಬನವಾಸಿ ಅರಣ್ಯ ವಲಯ ಅಧಿಕಾರಿ ವರದ ಜಿ. ಎಚ್. ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ ಸಿಬ್ಬಂದಿಗಳು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

  • ‘ಉದಯ ರಾಗ’ ಸಂಗೀತ ಕಾರ್ಯಕ್ರಮವು ಅ.20ರಂದು

    ‘ಉದಯ ರಾಗ’ ಸಂಗೀತ ಕಾರ್ಯಕ್ರಮವು ಅ.20ರಂದು

    ಶಿರಸಿ: ಕಲ್ಯಾಣ ಸಂಗೀತ ಸಭಾ ಟ್ರಸ್ಟ್ ಸೋಮನಹಳ್ಳಿ ಇವರಿಂದ ‘ಉದಯ ರಾಗ’ ಸಂಗೀತ ಕಾರ್ಯಕ್ರಮವು ಅ.20ರಂದು ಬೆಳಿಗ್ಗೆ 9.30 ಘಂಟೆಯಿಂದ ಚಿಪಗಿಯ ನಂದಗೋಕುಲದಲ್ಲಿ ನಡೆಯಲಿದೆ. ಕಲಾವಿದೆ ವಿದೂಷಿ ಮಂಜರಿ ಅಲೆಗಾಂವ್ಕರ್ ಕಾರ್ಯಕ್ರಮ ನಡೆಸಿಕೊಡಲಿದ್ದು, ಇವರಿಗೆ ತಬಲಾದಲ್ಲಿ ಪಂ.ಗುರುಮೂರ್ತಿ ವೈದ್ಯ, ಹಾರ್ಮೋನಿಯಂನಲ್ಲಿ ಭರತ ಹೆಗಡೆ ಹೆಬ್ಬಲಸು ಸಾಥ್ ನೀಡಲಿದ್ದಾರೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.