Satwadhara News

Category: BHATKAL

ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ನಡೆದ ಕಾರ್ಯಕ್ರಮಗಳ ವರದಿ ಮತ್ತು ಇನ್ನಿತರ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

  • ಅಂಜುಮನ್ ಕಾಲೇಜಿನಲ್ಲಿ ಗಿಟ್ ಮತ್ತು ಗಿಟ್ ಹಬ್ ಕುರಿತು ಪ್ರಾಯೋಗಿಕ ಕಾರ್ಯಾಗಾರ

    ಅಂಜುಮನ್ ಕಾಲೇಜಿನಲ್ಲಿ ಗಿಟ್ ಮತ್ತು ಗಿಟ್ ಹಬ್ ಕುರಿತು ಪ್ರಾಯೋಗಿಕ ಕಾರ್ಯಾಗಾರ

    ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗವು ತನ್ನ ವಿದ್ಯಾರ್ಥಿಗಳ ವೇದಿಕೆ ಟೆಕ್ನೋವೇಟ್‌ನ ಸಹಯೋಗದೊಂದಿಗೆ 15 ಏಪ್ರಿಲ್ 2024 ರಂದು ಗಿಟ್ ಮತ್ತು ಗಿಟ್ ಹಬ್ ಕುರಿತು ಪ್ರಾಯೋಗಿಕ ಕಾರ್ಯಾಗಾರವನ್ನು ಆಯೋಜಿಸಿತು. ಕಾಲೇಜಿನ ಹಳೆಯ ವಿದ್ಯಾರ್ಥಿ ಆಕಿಫ್ ಅಶರ್ ಖಾನ್ ಕಾರ್ಯಾಗಾರವನ್ನು ಮುನ್ನಡೆಸಿದರು.

    ಕಾರ್ಯಾಗಾರವು ಆಧುನಿಕ ಸಾಫ್ಟ್‌ವೇರ್ ಅಭಿವೃದ್ಧಿಗೆ ಅಗತ್ಯವಾದ ಗಿಟ್ ಮತ್ತು ಗಿಟ್ ಹಬ್ ಕುರಿತು ಸಮಗ್ರ ತಿಳುವಳಿಕೆಯನ್ನು ನೀಡಿತು. ಕಾರ್ಯಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಗಿಟ್ಅನ್ನು ಬಳಸಿಕೊಂಡು ಕೋಡ್‌ನಲ್ಲಿ ಬದಲಾವಣೆಗಳನ್ನು ಹೇಗೆ ಟ್ರ್ಯಾಕ್ ಮಾಡುವುದು, ಗಿಟ್ ಹಬ್ ನಲ್ಲಿ ತಂಡದ ಸದಸ್ಯರೊಂದಿಗೆ ಪರಿಣಾಮಕಾರಿಯಾಗಿ ಸಹಕರಿಸುವುದು ಮತ್ತು ಆವೃತ್ತಿ ನಿಯಂತ್ರಣವನ್ನು ಹೇಗೆ ನಿರ್ವಹಿಸುವುದು ಎಂದು ಕಲಿತರು. ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವವನ್ನು ನೀಡಿತು.

    ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಪ್ರೊ. ಕಿರಣ ಶಾನಭಾಗ ಅವರು ಆಕಿಫ್ ಅಶರ್ ಖಾನ್ ಅವರ ಅಮೂಲ್ಯ ಕೊಡುಗೆಗಾಗಿ ಹೃತ್ಪೂರ್ವಕವಾಗಿ ಅಭಿನಂದಿಸಿದರು. ಪ್ರಾಂಶುಪಾಲ ಡಾ. ಫಜಲುರ್ ರೆಹಮಾನ್ ಹಾಗೂ ರೆಜಿಸ್ಟ್ರಾರ್ ಪ್ರೊ. ಜಾಹಿದ್ ಖರೂರಿ ಸಂಸ್ಥೆಯ ಬೆಳವಣಿಗೆಗೆ ಹಳೆಯ ವಿದ್ಯಾರ್ಥಿಗಳ ನಿರಂತರ ಬೆಂಬಲ ಮತ್ತು ಕೊಡುಗೆಗಳನ್ನು ಸ್ಮರಿಸಿದರು. ಪ್ಲೇಸ್ಮೆಂಟ್ ಆಫೀಸರ ಪ್ರೊ. ಶ್ರೀಶೈಲ ಭಟ್ಟ ವಿದ್ಯಾರ್ಥಿಗಳ ಸಾಮರ್ಥ್ಯಗಳ ಅಭಿವೃದ್ಧಿಗಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಹಳೆಯ ವಿದ್ಯಾರ್ಥಿಗಳ ಸಹಕಾರವನ್ನು ಅಪೇಕ್ಷಿಸಿದರು.

  • ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ : ಭಟ್ಕಳದಲ್ಲಿ ಎನ್‌ಐಎ ತಂಡದಿಂದ ಶೋಧ ಕಾರ್ಯ

    ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ : ಭಟ್ಕಳದಲ್ಲಿ ಎನ್‌ಐಎ ತಂಡದಿಂದ ಶೋಧ ಕಾರ್ಯ

    ಕಾರವಾರ : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ ದಲ್ಲಿ ಶಂಕೆಯ ಆಧಾರದ ಮೇಲೆ ಭಟ್ಕಳದಲ್ಲಿ ಎನ್‌ಐಎ ತಂಡದಿಂದ ಶೋಧ ಕಾರ್ಯ ಕೈಗೊಳ್ಳಲಾಯಿತು. ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ ಶಂಕಿತ ವ್ಯಕ್ತಿ, ಕೆಫೆ ಬ್ಲಾಸ್ಟ್‌ನ ಬಾಂಬರ್ ವಯಸ್ಸು ಭಟ್ಕಳದ ವ್ಯಕ್ತಿಗೆ ಹೋಲಿಕೆಯಾಗುವ ಹಿನ್ನಲೆ ಬೆಂಗಳೂರಿನ ಎನ್‌ಐಎ ತಂಡ ಹಾಗೂ ಸ್ಥಳೀಯ ಪೊಲೀಸರ ಸಹಕಾರದಿಂದ ಶಂಕಿತನ‌ ಮನೆಯಲ್ಲಿ ವಿಚಾರಣೆ ನಡೆಸಿದ್ದು ಗುರುವಾರ ಎನ್‌ಐಎ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸುವಂತೆ ಸೂಚನೆ ನೀಡಲಾಗಿದೆ.

    ಮೂರು ಜನ ಅಧಿಕಾರಿಗಳು ಇರುವ ತಂಡವು ತಲೆಮರೆಸಿಕೊಂಡಿರುವ ಶಂಕಿತ ಉಗ್ರ, ಇಕ್ಬಾಲ್ ಭಟ್ಕಳ್ ಮನೆಗೆ ಭೇಟಿ ನೀಡಿದೆ. ಭಟ್ಕಳದ ತಕಿಯಾ ಸ್ಟ್ರೀಟ್ ನಲ್ಲಿರುವ ಇಕ್ಬಾಲ್ ಭಟ್ಕಳ ಮನೆಗೆ ಭೇಟಿ ನೀಡಿದ್ದು, ಇಕ್ಬಾಲ್ ಭಟ್ಕಳ್ ಮಗನನ್ನು ವಿಚಾರಿಸಿದ ಎನ್ಐಎ ಅಧಿಕಾರಿಗಳು ವಿಚಾರಣೆ ಸಂಬಂಧ ಬೆಂಗಳೂರಿಗೆ ಬರುವಂತೆ ನೋಟಿಸ್ ನೀಡಿ ತೆರಳಿದೆ.

    ಬಾಂಬ್ ಸ್ಫೋಟ ನಂತರ ಬೆಂಗಳೂರಿನ ಸುಜಾತ ಸರ್ಕಲ್‌ನಲ್ಲಿ ಬಾಂಬರ್ ಬಸ್ ಹತ್ತಿ ತುಮಕೂರಿನಲ್ಲಿ ಇಳಿದಿದ್ದ. ನಂತರ ತುಮಕೂರಿನಿಂದ ಬಳ್ಳಾರಿಗೆ ಬಸ್‌ನಲ್ಲಿ ಬಂದು ತದ ನಂತರ ಮಂತ್ರಾಲಯ- ಗೋಕರ್ಣ ಬಸ್‌ ಹತ್ತಿ ಭಟ್ಕಳಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಎನ್ಐಎ ತಂಡ ಭಟ್ಕಳಕ್ಕೆ ಬಂದಿತ್ತು ಎಂದು ಮೂಲಗಳು ತಿಳಿಸಿವೆ.

  • ಫೈರ್ ಬ್ರಾಂಡ್ ಆಗಿ ಗುರುತಿಸಿಕೊಂಡ ಅನಂತಕುಮಾರ ಹೆಗಡೆಗೆ ಟಿಕೆಟ್ ಕೈ ತಪ್ಪಲು ಕಾರಣವೇನು? ಅವರ ಮುಂದಿನ ನಡೆ ಏನಿರಬಹುದು?

    ಫೈರ್ ಬ್ರಾಂಡ್ ಆಗಿ ಗುರುತಿಸಿಕೊಂಡ ಅನಂತಕುಮಾರ ಹೆಗಡೆಗೆ ಟಿಕೆಟ್ ಕೈ ತಪ್ಪಲು ಕಾರಣವೇನು? ಅವರ ಮುಂದಿನ ನಡೆ ಏನಿರಬಹುದು?

    ಬೆಂಗಳೂರು : ಕಳೆದ ಮೂವತ್ತು ವರ್ಷಗಳಿಂದ ಸಂಸದರಾಗಿದ್ದ ಅನಂತಕುಮಾರ‌ ಹೆಗಡೆ ಅವರನ್ನ ಕೈ ಬಿಟ್ಟು ಮಾಜಿ ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಉತ್ತಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲಾಗಿದೆ. ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಉ.ಕ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಕೊನೆಗೂ ಮುಗಿದಿದ್ದು, ಕಾಗೇರಿ ಟಿಕೆಟ್ ಪಡೆದುಕೊಂಡಿದ್ದಾರೆ.

    ಕಳೆದ ಮೂರು ದಶಕಗಳ ಕಾಲ ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅನಂತಕುಮಾರ ಹೆಗಡೆ ಸಂಸದರಾಗಿದ್ದವರು. ಅವರು ಏಳು ಬಾರಿ ಈ ಕ್ಷೇತ್ರವನ್ನ ಪ್ರತಿನಿಧಿಸಿ ಒಮ್ಮೆ ಮಾತ್ರ ಸೊತ್ತಿದ್ದರು. ಆದರೆ ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸುದ್ದಿಯಾಗುತ್ತಿದ್ದ ಅನಂತಕುಮಾರ ಹೆಗಡೆಗೆ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದೆ.

    ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿರಸಿ ಕ್ಷೇತ್ರದಿಂದ ಮೂರು ಹಾಗೂ ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದರು, ಇನ್ನೂ ಕಳೆದ ವರ್ಷದ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಭೀಮಣ್ಣ ನಾಯ್ಕ ವಿರುದ್ಧ ಕಾಗೇರಿ ಅವರು ಸೋಲುವಂತಾಗಿತ್ತು.

    ಅನಂತ ಕುಮಾರ್ ಹೆಗಡೆ ಅವರ ಸಂವಿಧಾನ ಬದಲಾವಣೆ ಹೇಳಿಕೆಗಳು ಪಕ್ಷಕ್ಕೆ ದೊಡ್ಡ ಹೊಡೆತಕೊಟ್ಟಿದೆ ಎಂದು ಹೇಳಲಾಗುತ್ತಿದೆ. ಇನ್ನು ಆಯ್ಕೆ ಆದ ನಂತರದಲ್ಲಿ ಇವರು ಜನರ ಕೈಗೆ ಸಿಗದೆ ದೂರವೆ ಉಳಿದುಕೊಳ್ಳುತ್ತಿದ್ದು, ಚುನಾವಣೆ ಹತ್ತಿರ ಇರುವಾಗ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು‌ ಎಂಬ ಆರೋಪವೂ ಇದೆ. ಇನ್ನೂ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಎರಡರಿಂದ ಮೂರು ಶಾಸಕ ಸೋಲಿಗೆ ನೇರವಾಗಿ ಇವರೆ ಕಾರಣ ಎನ್ನುವುದು ಬಿಜೆಪಿ ನಾಯಕರ ಆರೋಪವೂ ಆಗಿತ್ತು.

    ಅಷ್ಟೆ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರೆ ಈ ಜಿಲ್ಲೆಗೆ ಬಂದರೂ ಅವರಿಗೂ ತಮ್ಮಗೂ ಯಾವುದೇ ಸಂಬಂಧವಿಲ್ಲ. ಮೋದಿ ಯಾರೋ ಎನ್ನುವ ರೀತಿಯಲ್ಲಿ ಕಾರ್ಯಕ್ರಮದ ಕಡೆ ಸುಳಿಯದೆ ದೂರವೆ ಉಳಿದುಕೊಂಡು ಒಂದು ರೀತಿಯಲ್ಲಿ ಪ್ರಧಾನ ಮೋದಿ ಅವರಿಗೆ ಸವಾಲು ಹಾಕಿರುವಂತಿತ್ತು. ಇವೇಲ್ಲವೂ ಕೂಡ ಈ ಭಾರಿ ಸಿಗಬಹುದಾಗಿದ್ದ ಟಿಕೆಟ್ ಕೈ ತಪ್ಪುವಂತಾಗಿದೆ.

    ಅನಂತ ಕುಮಾರ್ ತಮ್ಮದೇ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಅವರ ಅಪಾರ ಬೆಂಬಲಿಗರಿಗೆ ಇಂದಿನ ದಿನ ಬಹು ಆಘಾತ ಉಂಟಾಗಿದೆ. ಆದರೆ ಅನಂತಕುಮಾರ್ ಮುಂದಿನ ನಡೆ ಏನು ಎಂಬುದು ಮಾತ್ರ ಕಾದು ನೋಡಬೇಕಾದ ಸಂಗತಿ.

  • ಸಮುದ್ರದಲ್ಲಿ ಧುಮುಕಿ ಈಜಾಡಿದ ಉಸ್ತುವಾರಿ ಸಚಿವ ಮಂಕಾಳ ವೈದ್ಯ.

    ಸಮುದ್ರದಲ್ಲಿ ಧುಮುಕಿ ಈಜಾಡಿದ ಉಸ್ತುವಾರಿ ಸಚಿವ ಮಂಕಾಳ ವೈದ್ಯ.

    ಭಟ್ಕಳ : ತಾಲೂಕಿನ ಬೆಳಕೆಯ ಬಳಿ ಅರಬ್ಬಿ ಸಮುದ್ರದಲ್ಲಿ ಕೃತಕ ಬಂಡೆಗಳ ಸ್ಥಾಪನೆಗೆ ಚಾಲನೆ ನೀಡಲು ಸಮುದ್ರಕ್ಕೆ ತೆರಳಿದ ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಮಂಕಾಳ ಎಸ್ ವೈದ್ಯ ಅವರು, ಆಳ ಸಮುದ್ರದಲ್ಲಿ ಯಾವುದೇ ಸುರಕ್ಷಾ ವಿಧಾನ ಇಲ್ಲದೆ ಧುಮಕಿ ತನ್ನ ಸಾಹಸ ಪ್ರದರ್ಶಸಿ, ಅಧಿಕಾರಿಗಳ ಹಾಗೂ ಮೀನುಗಾರರ ಹುಬ್ಬೇರಿಸುವಂತೆ ಮಾಡಿದ್ದಾರೆ.

    ಶನಿವಾರ ಕೃತಕ ಬಂಡೆಗಳನ್ನು ಅಳವಡಿಸಲು ತೆರಳಿದ ಸಚಿವರು ಮೊದಲು ಕೃತಕ ಬಂಡೆಗಳನ್ನು ಸುಮಾರು 5 ನಾಟಿಕಲ್ ಸಮುದ್ರದ ಮದ್ಯ ತೆರಳಿ ಸಮುದ್ರದಲ್ಲಿ ಅದನ್ನು ಇಳಿಸಿದ್ದಾರೆ. ಬಳಿಕ ಮೀನುಗಾರರು, ಮಾಧ್ಯಮದವರು, ಸ್ಥಳೀಯರ ಎದುರೇ ನೋಡು ನೋಡುತ್ತಿರುವಂತೆ ಸಮುದ್ರಕ್ಕೆ ಧುಮುಕಿದ್ದಾರೆ. ಅಲೆಗಳ ಹೊಡೆತಲ ನಡುವೆ ಸಮುದ್ರದಲ್ಲಿ ಯೋಗಾಶನ ನಡೆಸಿದರು. ಸುಮಾರು ಅರ್ಧಗಂಟೆಗಳಿಗೂ ಹೆಚ್ಚನ ಕಾಲ ನೀರಿನಲ್ಲಿ ವಿವಿಧ ಭಂಗಿಗಳನ್ನು ಪ್ರದರ್ಶಿಸಿದ್ದಾರೆ.

    ಸಚಿವರು ಎರಡು ಕೈಗಳನ್ನು ಮೇಲೆ ನಿಂತಿರುವ ದೃಶ್ಯವಂತೂ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಮೀನುಗಾರಿಕೆ ಇಲಾಖೆಗೆ ತಕ್ಕದಾದ ಸಚಿವರು ದೊರಕಿದ್ದು ಇಲಾಖೆಯ ಬಗ್ಗೆ ಮಾತ್ರವಲ್ಲದೆ ನೀರಿನ ಆಳ ಎತ್ತರ ಸಮುದ್ರದ ಬಗ್ಗೆಯೂ ಎಲ್ಲಾ ಮಾಹಿತಿ ಹೊಂದಿದ್ದಾರೆ ಎನ್ನುವ ಅಭಿಪ್ರಾಯ ಮೀನುಗಾರರ ಬಾಯಿಯಿಂದಲೆ ಕೇಳಿ ಬಂದಿದೆ. ಸಚಿವರಾದ ಬಳಿಕ ತನ್ನ ಇಲಾಖೆಯ ಅಭಿವೃದ್ಧಿಗಾಗಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿ ಕಡಲ ಮಕ್ಕಳ ಒಡಲಿಗೆ ನಿತ್ಯ ಅನ್ನ ನೀಡುವ ಕಾಯಕ ಮಾಡುತ್ತಿದ್ದಾರೆ ಎಂದು ಮೀನುಗಾರರ ಮುಖಂಡ ಭಾಸ್ಕರ ಮೊಗೇರ ಹೇಳಿದರು. ಅರಬ್ಬಿ ಸಮುದ್ರದ ರಭಸದ ಅಲೆಗಳ ನಡುವೆ ಸಚಿವರ ಸಾಹಸಮಯ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೆ ಹರಿದು ಬರುತ್ತಿದೆ.

  • ಪ್ರೋ. ಚಿದಾನಂದ ಗಣಪತಿ‌ ನಾಯ್ಕರಿಗೆ ಪಿ.ಹೆಚ್.ಡಿ.

    ಪ್ರೋ. ಚಿದಾನಂದ ಗಣಪತಿ‌ ನಾಯ್ಕರಿಗೆ ಪಿ.ಹೆಚ್.ಡಿ.

    ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯ ಭಟ್ಕಳದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಚಿದಾನಂದ ಗಣಪತಿ ನಾಯ್ಕ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯವು Geotechnical Engineering ವಿಭಾಗದಲ್ಲಿ “Evaluation of shear strength and dilatancy parameters of different granular materials” ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಸಿದ್ಧಪಡಿಸಿ ಸಲ್ಲಿಸಲಾದ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಪ್ರಧಾನ ಮಾಡಿದೆ. ಪ್ರೊ. ಚಿದಾನಂದ ನಾಯ್ಕ ರವರು ಡಾ. ಕೆ.ವಿ.ಬಿ.ಎಸ್ ರಾಜು ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ಚಿದಾನಂದರವರು ಕುಮಟಾ ತಾಲೂಕಿನ ಕಲಭಾಗ ಗ್ರಾಮದ ಗಣಪತಿ ಹೊನ್ನಪ್ಪ ನಾಯ್ಕ್ ಹಾಗೂ ಕುಮುದಾ ಗಣಪತಿ ನಾಯ್ಕ್ ರ ದ್ವಿತೀಯ ಪುತ್ರರಾಗಿದ್ದಾರೆ. ಅವರ ಈ ಸಾಧನೆಯನ್ನು ಅಂಜುಮನ್ ಮ್ಯಾನೇಜ್ಮೆಂಟ್, ಪ್ರಾಂಶುಪಾಲರಾದ ಡಾ. ಫಜಲುರ್ ರೆಹಮಾನ್, ರಿಜಿಸ್ಟ್ರಾರರಾದ ಪ್ರೊ. ಜಾಹೀದ್ ಖರೂರಿ ಹಾಗೂ ಅಂಜುಮನ್ ಎಂಜಿನಿಯರಿಂಗ್ ಹಾಗೂ ಮ್ಯಾನೇಜ್ಮೆಂಟ್ ಸಿಬ್ಬಂದಿ ವರ್ಗದವರು ಶ್ಲಾಘಿಸಿದ್ದಾರೆ.

  • ಅಂಜುಮನ್ ಇನ್ಸ್ಟಿಟ್ಯೂಟ್ ಓಫ್ ಟೆಕ್ನಾಲಜಿ ಹಾಗೂ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ MBA ಫ್ರೆಷೆರ್ಸ್ ಇಂಡಕ್ಷನ್

    ಅಂಜುಮನ್ ಇನ್ಸ್ಟಿಟ್ಯೂಟ್ ಓಫ್ ಟೆಕ್ನಾಲಜಿ ಹಾಗೂ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ MBA ಫ್ರೆಷೆರ್ಸ್ ಇಂಡಕ್ಷನ್

    ಭಟ್ಕಳ : ಅಂಜುಮನ್ ಇನ್ಸ್ಟಿಟ್ಯೂಟ್ ಓಫ್ ಟೆಕ್ನಾಲಜಿ ಹಾಗೂ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ MBA ಫ್ರೆಷೆರ್ಸ್ ಇಂಡಕ್ಷನ್ ಅಥವಾ ಪ್ರವೇಶ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಜರುಗಿಸಲಾಯಿತು. ಈ ಕಾರ್ಯಕ್ರಮವು ಸರಿಯಾಗಿ ಬೆಳಿಗ್ಗೆ 9.30 ಕ್ಕೆ ಪ್ರಾರಂಭಿಸಲಾಗಿ ಅದರ ನಿರ್ದೇಶನ ವಹಿಸಿದ ಪ್ರೊ. ಮುಫಿಯಾ ಶೇಖ್ ಆರಂಭದಲ್ಲಿ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ನಂತರ ಸಂಸ್ಥೆಯ ಅನುಭವಿ ಪ್ರೊಫೆಸರ್ ಆದ ಪ್ರೊ. ಪ್ರೀತಿ ಕಲ್ಗುಟ್ಕರ್ ರವರು ಕಾರ್ಯಕ್ರಮಕ್ಕೆ ಸ್ವಾಗತವನ್ನು ಕೋರಿ ಕಾಲೇಜಿನ ಪ್ರಿನ್ಸಿಪಾಲರಾದ ಪ್ರೊ. ಡಾ.ಫಜಲೂರ್ ರಹಮಾನ್ ಮತ್ತು ಕಾಲೇಜಿನ ರಿಜಿಸ್ಟರಾರ್ ಹಾಗೂ ಹೆಚ್.ಓ.ಡಿ ಆದ ಪ್ರೊ. ಜಾಹಿದ್ ಹಸ್ಸನ್ ಖರುರೀ ಅವರನ್ನು ಆದರದಿಂದ ಬರಮಾಡಿಕೊಂಡರು ಹಾಗೆ MBA ಫ್ರೆಷೆರ್ಸ್ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದ ನೆನಪಿನ ಕಾಣಿಕೆಯಾಗಿ ಉಡುಗೊರೆ ನೀಡಿ ಸ್ವಾಗತಿಸಲಾಯಿತು.

    ಈ ಸಂದರ್ಭದಲ್ಲಿ MBA ಫ್ರೆಷೆರ್ಸ್ ವಿದ್ಯಾರ್ಥಿಗಳಲ್ಲದೆ ಅವರ ಕುಟುಂಬದ ಸದಸ್ಯರು, ಪ್ರಾಧ್ಯಾಪಕರು ಹಾಗೂ ಸಿನಿಯರ್ ಸ್ಟೂಡೆಂಟ್ಸ್ಗಳು ಸಹ ಭಾಗವಹಿಸಿ ಕಾರ್ಯಕ್ರಮ ಚಂದಗಾಣಿಸಿದರು.

    ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪ್ರಿನ್ಸಿಪಾಲ್ ಡಾ. ಫಜಲೂರ್ ರಹಮಾನ್ ಮತ್ತು ರೆಜಿಸ್ಟರಾರ್ ಆದ ಪ್ರೊ. ಜಾಹಿದ್ ಹಸ್ಸನ್ ಖರೂ ರೀ ರವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ ಇಂದಿನ ವಿದ್ಯಾರ್ಥಿಗಳಿಗೆ MBA ಶಿಕ್ಷಣದ ಅಗತ್ಯತೆ ಮತ್ತು ಅದರ ಪ್ರಾಮುಖ್ಯತೆಯನ್ನು ತಿಳಿಹೇಳಿದರು. ಅದಲ್ಲದೆ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಬೇಕಾಗುವ ಶಿಸ್ತು, ಸ್ವಾವಲಂಬನೆ ಮತ್ತು ಏಕಾಗ್ರತೆಗಳಂತಹ ವ್ಯಕ್ತಿತ್ವ ವಿಕಸನದ ಬಗ್ಗೆ ಮನದಟ್ಟು ಮಾಡಿಸಿದರು. ಹಾಗೆಯೇ ವಿದ್ಯಾರ್ಥಿಗಳು ಅಂಜುಮನ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತವಾಗಿ ಲಭ್ಯವಿರುವ ಸವಲತ್ತುಗಳಾದ ಪುಸ್ತಕ ಭಂಡಾರ, ಕಂಪ್ಯೂಟರ್, ಕ್ರೀಡಾಸಾಮಗ್ರಿ ಹಾಗೂ ಇನ್ನಿತರ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಶೈಕ್ಷಣಿಕ ಹಾಗೂ ಸಮಗ್ರ ವ್ಯಕ್ತಿತ್ವ ವಿಕಸನದೆಡೆಗೆ ಸಾಗಬೇಕೆಂದು ಹೇಳಿದರು. ಅಂಜುಮನ್ ಶಿಕ್ಷಣ ಸಂಸ್ಥೆಯ (AITM) ಇಂದಿನ ಮತ್ತು ಭವಿಷ್ಯದ ಗುರಿಯಾದ ಶೈಕ್ಷಣ ಉತ್ಕ್ರಷ್ಟತೆಯ ಬಗ್ಗೆ ವಿವರಿಸಿ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಶೈಕ್ಷಣ ಮೌಲ್ಯದಿಂದ ಕೂಡಿದ ಆಧುನಿಕ ಶೈಕ್ಷಣಿಕ ಉತ್ಕ್ರಷ್ಟತೆಯನ್ನು ಅಳವಡಿಸುವುದಾಗಿ ಆಶ್ವಾಸನೆ ನೀಡಿದರು. ಹಾಗೆಯೇ ಕಾರ್ಯಕ್ರಮದ ಕೊನೆಯ ಹಂತದಲ್ಲಿ ಪ್ರೊ. ಸಾದ್ ಕೋಲಾ ರವರು ಧನ್ಯವಾದ ಮತ್ತು ಶುಭಾಶಯವನ್ನು ಕೋರಿದರು. ಪ್ರೊ. ಶ್ರೀಕಾಂತ್ ಮತ್ತು ಪ್ರೊ. ತಸ್ಫಿಯ ರವರು ಹೊಸ ವಿದ್ಯಾರ್ಥಿಗಳ ಕ್ರೀಡಾಮನೋಭಾವ ಮತ್ತು ಮನೋರಂಜನೆಗಾಗಿ ಕೆಲವು ಒಳಾಂ ಗನ ಆಟವನ್ನು ನಡೆಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

  • ಕಂಟೇನರ್ ವಾಹನದಲ್ಲಿ ಸಾಗಿಸುತ್ತಿದ್ದ ೧೫ ಎತ್ತುಗಳ ರಕ್ಷಣೆ.

    ಕಂಟೇನರ್ ವಾಹನದಲ್ಲಿ ಸಾಗಿಸುತ್ತಿದ್ದ ೧೫ ಎತ್ತುಗಳ ರಕ್ಷಣೆ.

    ಭಟ್ಕಳ: ತಾಲೂಕಿನ ತೆಂಗಿನಗುಂಡಿ ಸಮೀಪ ಸೋಮವಾರ ಬೆಳಗಿನ ಜಾವ ಅಕ್ರಮವಾಗಿ ಕಂಟೇನರ್ ವಾಹನದಲ್ಲಿ ಸಾಗಿಸುತ್ತಿದ್ದ ೧೫ ಎತ್ತುಗಳನ್ನು ಭಟ್ಕಳ ಪೊಲೀಸ್ ತಂಡ ರಕ್ಷಣೆ ಮಾಡಿದ್ದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ಸ್ಪೆಕ್ಟರ್ ಗೋಪಿಕೃಷ್ಣ ನೇತೃತ್ವದ ತಂಡದಿಂದ ಈ ಕಾರ್ಯ ನಡೆದಿದೆ.

    ಕಂಟೇನರ್ ಚಾಲಕ ಬೀದರ ಜಿಲ್ಲೆಯ ಹುಮ್ನಾಬಾದ ನಿವಾಸಿ ನಾಗಶೆಟ್ಟಿ ಶರಣಪ್ಪ ಗೋವಿ, ಹೈದ್ರಾಬಾದಿನ ನಿವಾಸಿ ಮಹ್ಮದ್ ಸರ್ದಾರ ಮತ್ತು ಮಹಾರಾಷ್ಟ್ರದ ಜಬ್ಬಾರ ಮಿಯಾ ಬಂಧಿತ ಆರೋಪಿಗಳು. ಇವರು ಲಾರಿಯಲ್ಲಿ ಹೊನ್ನಾವರ ಕಡೆಯಿಂದ ಮಂಗಳೂರು ಕಡೆಗೆ ಎತ್ತುಗಳನ್ನು ಪರವಾನಗಿ ಇಲ್ಲದೆ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.

    ಒಟ್ಟು ೩.೭೫ ಲಕ್ಷ ರೂ. ಮೌಲ್ಯದ ೧೫ ಎತ್ತುಗಳನ್ನು ಸಾಗಾಟ ಮಾಡಲಾಗುತ್ತಿತ್ತು. ರಕ್ಷಣೆ ಮಾಡಿದ ಜಾನುವಾರುಗಳನ್ನು ನ್ಯಾಯಾಲಯದ ಅನುಮತಿ ಪಡೆದು ಬ್ರಹ್ಮಾವರದ ನೀಲಾವರ ಗೋ ಶಾಲೆಗೆ ಸೇರಿಸಲಾಗಿದೆ. ಕಾರ್ಯಾಚರಣೆಯಲ್ಲಿ ವಾಹನ ಚಾಲಕ ಕಿರಣ ಕುಮಾರ, ಸಿಬ್ಬಂದಿಯಾದ ಅರುಣ ಪಿಂಟೋ, ಉದಯ ನಾಯ್ಕ ಹಾಗೂ ಇತರರು ಇದ್ದರು. ಪಿಎಸ್‌ಐ ಶಿವಾನಂದ ನಾವದಾರಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಭಟ್ಕಳದಲ್ಲಿ ಮತ್ತೆ ಹಾರಾಡಿದ ಹನುಮ ಧ್ವಜ : ಸಂಸದ ಅನಂತಕುಮಾರ್ ಹೆಗಡೆ ನೇತೃತ್ವದಲ್ಲಿ ಸರಕಾರಕ್ಕೆ ಸೆಡ್ಡು

    ಭಟ್ಕಳದಲ್ಲಿ ಮತ್ತೆ ಹಾರಾಡಿದ ಹನುಮ ಧ್ವಜ : ಸಂಸದ ಅನಂತಕುಮಾರ್ ಹೆಗಡೆ ನೇತೃತ್ವದಲ್ಲಿ ಸರಕಾರಕ್ಕೆ ಸೆಡ್ಡು

    ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಹೆಬಳೆ ಗ್ರಾಮ ಪಂಚಾಯಿತಿಯ ತೆಂಗಿನಗುಂಡಿ ಗ್ರಾಮದಲ್ಲಿ ಅಧಿಕಾರಿಗಳು ತೆರವು ಮಾಡಿದ್ದ ಸಾವರ್ಕರ್ ಧ್ವಜದ ಕಟ್ಟೆಯಲ್ಲಿ ಸೋಮವಾರ ಸಂಸದ ಅನಂತಕುಮಾರ್ ಹೆಗಡೆ ಅವರೇ ಖುದ್ದು ಬಂದು ಹನುಮ ಧ್ವಜವನ್ನು ಹಾರಿಸಿ ನಾಮಫಲಕ ಅಳವಡಿಸಿ ಸೆಡ್ಡು ಹೊಡೆದಿದ್ದಾರೆ.

    ತೆಂಗಿನಗುಂಡಿಯಲ್ಲಿ ನಿರ್ಮಾಣ ಮಾಡಿದ್ದ ವೀರ ಸಾವರ್ಕರ್ ವೃತ್ತದ ಕಟ್ಟೆಯನ್ನು ಯಾವುದೇ ಪರವಾನಗಿ ಇಲ್ಲದೇ ನಿರ್ಮಾಣ ಮಾಡಲಾಗಿದೆ ಎಂಬ ಕಾರಣದಿಂದ ಗ್ರಾಮ ಪಂಚಾಯಿತಿ ಇದನ್ನು ತೆರವು ಮಾಡಿತ್ತು. ಪರಿಣಾಮ ಇದರಿಂದಾಗಿ ಹಿಂದೂ ಸಂಘಟನೆಯ ಕಾರ್ಯಕರ್ತರು ತೀವ್ರವಾಗಿ ಈ ಕ್ರಮದ ವಿರುದ್ದ ಆಕ್ರೋಶಗೊಂಡಿದ್ದರು. ಆದರೆ ಈಗ ಸಂಸದ ಅನಂತಕುಮಾರ್‌ ಹೆಗಡೆ ಅವರೇ ಬಂದು ಈ ವೃತ್ತದಲ್ಲಿ ಭಗವಾನ್‌ ಧ್ವಜ ಹಾರಿಸಿರುವುದು ಧ್ವಜ ದಂಗಲ್‌ ಗೆ ಕಾರಣವಾಗಿದೆ.

    ಹೆಬಳೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಾವರ್ಕರ್‌ ಧ್ವಜ ಕಟ್ಟೆ ನಿರ್ಮಾಣಕ್ಕೆ ವಿರೋಧ ಮಾಡಿದರೆ, ಇನ್ನು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದರು. ಪಂಚಾಯಿತಿಯಲ್ಲಿಯೇ ಎರಡು ಶಕ್ತಿ ಕೇಂದ್ರಗಳಾಗಿ ನಿರ್ಮಾಣ ಆಗಿದ್ದವು. ಇದೆಲ್ಲದ ನಡುವೆ ಅಧಿಕಾರಿಗಳು ಜೆಸಿಬಿ ಮೂಲಕ ಧ್ವಜದ ಕಟ್ಟೆಯನ್ನು ಧ್ವಂಸ ಮಾಡಿದ್ದರು. ಇದರ ವಿರುದ್ದ ಹೊತ್ತಿಕೊಂಡಿದ್ದ ಕಿಡಿ ಈಗ ಮತ್ತೆ ಧ್ವಜ ಹಾರಾಟಕ್ಕೆ ಕಾರಣವಾಗಿದೆ.

  • ಭಟ್ಕಳ ತಾಲೂಕು ಕಸಾಪ ಘಟಕದಿಂದ ಸಾಹಿತಿ ವಿಷ್ಣು ನಾಯ್ಕ ಅವರಿಗೆ ನುಡಿನಮನ

    ಭಟ್ಕಳ ತಾಲೂಕು ಕಸಾಪ ಘಟಕದಿಂದ ಸಾಹಿತಿ ವಿಷ್ಣು ನಾಯ್ಕ ಅವರಿಗೆ ನುಡಿನಮನ

    ಭಟ್ಕಳ: ಇತ್ತೀಚೆಗೆ ಅಗಲಿದ ನಾಡಿನ ಹಿರಿಯ ಸಾಹಿತಿ, ಕವಿ ವಿಷ್ಣು ನಾಯ್ಕ ಅವರಿಗೆ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿನ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ನುಡಿನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಹಾಜರಿದ್ದ ಸಾಹಿತಿ ಡಾ.ಸಯ್ಯದ ಜಮೀರುಲ್ಲಾ ಷರೀಫ್ ವಿಷ್ಣು ನಾಯ್ಕ ಅವರ ಕುರಿತು ಮಾತನಾಡುತ್ತಾ ವಿಷ್ಣು ನಾಯ್ಕ ಅವರು ಸಾಹಿತ್ಯ ಕ್ಷೇತ್ರದಲ್ಲಿ ತಾವು ಬೆಳೆಯುತ್ತ ಇತರರನ್ನೂ ಬೆಳೆಸುವಂತಹ ಎತ್ತರದ ವ್ಯಕ್ತಿತ್ವ ಹೊಂದಿದ ಮಹಾನುಭಾವ. ಭಟ್ಕಳದ ನೆಲದಲ್ಲಿ ನನ್ನನ್ನು ಗುರುತಿಸಿ ಸಾಹಿತ್ಯ ಕೃಷಿಗೆ ಪ್ರೋತ್ಸಾಹಿಸಿದರಲ್ಲದೇ. ಅಂಕೋಲೆಯ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದಾಗ ಆ ವೇದಿಕೆಯಲ್ಲಿ ಅವಕಾಶ ಕಲ್ಪಿಸಿ ಪ್ರೋತ್ಸಾಹ‌ ನೀಡಿದವರು. ನನ್ನನ್ನು ಶಾಮಿಯಾನದ ಕವಿ ಎಂದು ಹೆಸರಿಸಿದರವರೇ ವಿಷ್ಣು ನಾಯ್ಕ ಅವರು. ಜಿಲ್ಲೆಯಲ್ಲಿ ದಿನಕರ ದೇಸಾಯಿಯವರ ನಂತರ ಅವರ ಛಾಯೆಯಾಗಿ ಬೆಳೆದ ವಿಷ್ಣು ನಾಯ್ಕ ಅವರ ಪ್ರೋತ್ಸಾಹದಲ್ಲಿ ಜಿಲ್ಲೆಯ ಈಗಿನ ಎಲ್ಲ ಹೆಸರಾಂತ ಸಾಹಿತಿಗಳು ಬೆಳೆದವರು. ನಾನೂ ಕೂಡ ವಿಷ್ಣು ನಾಯ್ಕ ಅವರ ಗರಡಿಯಲ್ಲಿಯೇ ಬೆಳದ ಸಾಹಿತಿ ಎಂಬ ಹೆಮ್ಮೆ ನನಗಿದೆ ಎಂದು ನುಡಿದರು.

    ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಒಬ್ಬ ವ್ಯಕ್ತಿ ಸಾಹಿತ್ಯ ಕ್ಷೇತ್ರದಲ್ಲಿ ಯಾವೆಲ್ಲ ರೀತಿಯಲ್ಲಿ ಕೆಲಸ ಮಾಡಬಹುದು ಎಂಬುದಕ್ಕೆ ವಿಷ್ಣು ನಾಯ್ಕ ಅವರ ಸಾಧನೆ ಎಲ್ಲರಿಗೂ ಪ್ರೇರಣೆ. ಪುರಾಣದಲ್ಲಿ ವಿಷ್ಣುವಿನ ಹತ್ತು ಅವತಾರಗಳ ಕುರಿತು ನಾವೆಲ್ಲ ಓದಿರುವಂತೆ ಸಾಹಿತ್ಯ ಕ್ಷೇತ್ರದಲ್ಲಿ ವಿಷ್ಣು ನಾಯ್ಕ ಅವರು ಶಿಕ್ಷಕ, ಉಪನ್ಯಾಸಕ, ಸಂಪನ್ಮೂಲ ವ್ಯಕ್ತಿ, ಲೇಖಕ, ಕವಿ, ಅಂಕಣಕಾರ, ನಾಟಕಕಾರ, ಪ್ರಕಾಶಕ, ಸಂಘಟಕ, ನಾಟಕಕಾರ, ಮಾರ್ಗದರ್ಶಕ, ಅಭಿನಯ, ಹೀಗೆ ಹತ್ತು ಹಲವು ಸ್ವರೂಪದಲ್ಲಿ ಕಾರ್ಯ ನಿರ್ವಹಿಸಿರುವುದು ಇತಿಹಾಸ. ಅವರಿಗೆ ಈ ಹಿಂದೆ ಭಟ್ಕಳದ ನೆಲದಲ್ಲಿಯೇ ಉ.ಕ. ಜಿಲ್ಲಾ‌ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ಸಂದಿರುವುದು ಭಟ್ಕಳ ತಾಲೂಕಿನ ಹೆಮ್ಮೆ ಎಂದರು. ಸಾಹಿತಿ ಮಾನಾಸುತ ಶಂಭು ಹೆಗಡೆ ಸ್ವರಚಿತ ಕವಿತೆ ವಾಚಿಸಿ ವಿಷ್ಣು ನಾಯ್ಕ ಅವರಿಗೆ ಕಾವ್ಯನಮನ ಸಲ್ಲಿಸಿದರೆ ಶಿಕ್ಷಕ ಚಿದಾನಂದ‌ ಪಟಗಾರ ಮಾತನಾಡಿ ತಾನು ಓರ್ವ ಭಾಷಣಕಾರನಾಗಿ, ರಾಜ್ಯ ಮಟ್ಟದ ವರೆಗಿನ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯಲು ಮತ್ತು ವಿವಿದೆಡೆ ಉಪನ್ಯಾಸ ನೀಡಲು ವಿಷ್ಣು ನಾಯ್ಕ ಅವರ ದಿನಕರ‌ ದೇಸಾಯಿಯವರ ಚುಟುಕುಗಳ ವಿವರಣೆಯನ್ನೊಳಗೊಂಡ ಕೃತಿಯೇ ನೆರವಾದುದನ್ನು ಸ್ಮರಿಸಿದರು.


    ಸಾಹಿತಿ, ಭಟ್ಕಳ ತಾಲೂಕಾ ಕಸಾಪ ಕೋಶಾಧ್ಯಕ್ಷ ಶ್ರೀಧರ ಶೇಟ್ ವಿಷ್ಣು ನಾಯ್ಕ ಅವರ ಬದುಕು ಬರೆಹದ ಕುರಿತು ವಿವರಿಸಿ ತಮ್ಮ ನಿವಾಸ ಪರಿಮಳದಂಗಳವನ್ನೇ ಸಾಹಿತ್ಯ ಸಾಂಸ್ಕೃತಿಕ‌ ಕೇಂದ್ರವಾಗಿಸಿ ನನ್ನಂತ ನೂರಾರು‌ ಕವಿಗಳನ್ನು ಪೋಷಿಸಿರುವುದನ್ನೂ ಸ್ಮರಿಸುತ್ತ ಕಾರ್ಯಕ್ರಮ ನಿರ್ವಹಿಸಿದರು.


    ಕಸಾಪ ಗೌರವ ಕಾರ್ಯದರ್ಶಿ ನಾರಾಯಣ ನಾಯ್ಕ ವಂದಿಸಿದರು. ಕಾರ್ಯಕ್ರಮವನ್ನು ವಿಷ್ಣು ನಾಯ್ಕ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಆರಂಭಿಸಲಾಯಿತು.ಕಸಾಪ ಸಂಘಟನಾ ಕಾರ್ಯದರ್ಶಿ ಸಂತೋಷ ಆಚಾರ್ಯ, ಸಂಘ ಸಂಸ್ಥೆಯ ಪ್ರತಿನಿದಿ ವೆಂಕಟೇಶ ನಾಯ್ಕ ಆಸರಕೇರಿ, ಶಿಕ್ಷಕ ಸಿ.ಡಿ.ಪಡುವಣಿ, ಮುಂತಾದವರು ಉಪಸ್ಥಿತರಿದ್ದರು.

  • ಮುರ್ಡೇಶ್ವರದ ಕಡಲ ತೀರದಲ್ಲಿ ಕುಸಿದು ಬಿದ್ದು ಮೃತಳಾದ ವಿದೇಶಿ ಪ್ರಜೆ.

    ಮುರ್ಡೇಶ್ವರದ ಕಡಲ ತೀರದಲ್ಲಿ ಕುಸಿದು ಬಿದ್ದು ಮೃತಳಾದ ವಿದೇಶಿ ಪ್ರಜೆ.

    ಭಟ್ಕಳ: ಭಾರತ ಪ್ರವಾಸಕ್ಕೆಂದು ಬಂದಿದ್ದ ರಷ್ಯಾದ ಪ್ರಜೆಯೋರ್ವರು ಮುರ್ಡೇಶ್ವರದ ಕಡಲ ತೀರದಲ್ಲಿ ಕುಸಿದು ಬಿದ್ದು ಅಸ್ವಸ್ಥಗೊಂಡು ಬಳಿಕ ಆಸ್ಪತ್ರೆ ಸೇರಿದರೂ ಚೇತರಿಸಿಕೊಳ್ಳದೆ ಮೃತಪಟ್ಟಿದ್ದಾರೆ. ರಷ್ಯಾ ದೇಶದ ಅಲೆಗ್ಸಾಂಡರ್ ತನೆಗಾ( ೭೧) ಮೃತ ಪಟ್ಟ ವ್ಯಕ್ತಿ. ಇವರು ರಷ್ಯಾ ದೇಶದಿಂದ ತಂಡವನ್ನು ಕಟ್ಟಿಕೊಂಡು ಗೋವಾ ರಾಜ್ಯಕ್ಕೆ ಬಂದಿಳಿದಿದ್ದರು. ಗೋವಾದ ಪ್ರದೇಶಗಳನ್ನು ಸುತ್ತಾಡಿ ಗುರುವಾರ ಮುರ್ಡೇಶ್ವರಕ್ಕೆ ಬಂದಿದ್ದರು.

    ಮುರುಡೇಶ್ವರ ದೇವಸ್ಥಾನದ ಬಳಿಯಲ್ಲಿ ತೆರಳುವಾಗ ಇವರು ಹಠಾತನೆ ಕುಸಿದು ಬಿದ್ದಿದ್ದರು. ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡದ ಬಳಿಕ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ನೀಡಿದ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಕುರಿತು ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.