Satwadhara News

Category: Special News

  • ಮನೆಯೊಳಗೇ ಬಂಧಿಯಾಗಿದೆ ಚಿರತೆ : ಸುತ್ತಲೂ ಭಯದ ವಾತಾವರಣ

    ಮನೆಯೊಳಗೇ ಬಂಧಿಯಾಗಿದೆ ಚಿರತೆ : ಸುತ್ತಲೂ ಭಯದ ವಾತಾವರಣ

    ಕುಮಟಾ : ಬಾಡ ಗ್ರಾಮದ ಮಾದರಿ ರಸ್ತೆಯಲ್ಲಿ ಗ್ರಾಮದೊಳಗೆ ನುಗ್ಗಿದ್ದ ಬಲಾಢ್ಯ ಚಿರತೆಯೊಂದು ಮೂವರ ಮೇಲೆ ದಾಳಿ ನಡೆಸಿ ನಿನ್ನೆ ರಾತ್ರಿಯಿಂದ ಮನೆ ಒಳಗೆ ಅವಿತುಕೊಂಡಿದ್ದು, ಕಾರ್ಯಾಚರಣೆ ಇನ್ನೂ ಮುಗಿಯದೇ ಮನೆಯೊಳಗೇ ಬಂಧಿಯಾಗಿದೆ.

    ಮಾದರಿ ರಸ್ತೆಯಲ್ಲಿ ನಿನ್ನೆ ಸಂಜೆ ರಾಜಾರೋಷವಾಗಿ ಬಂದ ಚಿರತೆ ಮಹಾಬಲೇಶ್ವರ ನಾಯ್ಕ ಅವರ ಮನೆ ಒಳಗೆ ನುಗ್ಗಿ ಅವರ ಮೇಲೆ‌ ಹಲ್ಲೆ ಮಾಡಿತ್ತು. ಬಳಿಕ ಸುದ್ದಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆಯನ್ನು ಬೋನಿಗೆ ಕೆಡವಲು ಅದೆಷ್ಟೇ ಪ್ರಯತ್ನ ಮಾಡಿದರು ಸಾಧ್ಯವಾಗಿಲ್ಲ. ನಿನ್ನೆ ರಾತ್ರಿಯಿಂದ ಚಿರತೆ ಮಹಾಬಲೇಶ್ವರ ಅವರ ಮನೆಯ ಕೋಣೆಯೊಂದರೊಳಗೆ ಸೇರಿಕೊಂಡಿದೆ.

    ಇನ್ನೂ ಕೋಣೆಗೆ ಹೊರಗಡೆಯಿಂದ ಬೀಗ ಹಾಕಲಾಗಿದ್ದು, ಕೋಣೆಯೊಳಗೆ ಇರುವ ಚಿರತೆಯ ಚಲನವಲನ ಗಮನಿಸಲು ಮನೆಯ ಗೋಡೆಗೆ ರಂಧ್ರಕೊರೆಯಲಾಗಿದೆ. ಇದುವರೆಗೂ ಸಹ ಆ ಚಿರತೆ ಒಳಗಡೆಯಿಂದಲ್ಲೆ ಘರ್ಜನೆ ಮುಂದುವರೆಸಿದೆ. ಮಾದರಿ ರಸ್ತೆಯ ಸುತ್ತಮುತ್ತಲಿನ ಮನೆಯವರು ರಾತ್ರಿಯಿಂದ ಆತಂಕದಲ್ಲೇ ಕಾಲ‌‌ ಕಳೆಯುತ್ತಿದ್ದು, ಮನೆಯಿಂದ ಹೊರ ಬರಲು ಭಯಪಡುವಂತಾಗಿದೆ

    ಇನ್ನೂ ಚಿರತೆ ಸೆರೆ ಹಿಡಿಯಲು ಶಿವಮೊಗ್ಗದಿಂದ ಅರವಳಿಕೆ ತಜ್ಞರು ಬಾಡಕ್ಕೆ ಆಗಮಿಸುತ್ತಿದ್ದು, ಅವರು ಬಂದ ಬಳಿಕವೆ ಚಿರತೆ ಬೋನಿಗೆ ಬಿಳಬೇಕಿದೆ. ಸ್ಥಳದಲ್ಲೆ ಕುಮಟಾ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೆ ಬೀಡುಬಿಟ್ಟಿದ್ದಾರೆ.

  • ಯಕ್ಷಗಾನ‌ ಲೋಕದ ಗಾನ ಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ.

    ಯಕ್ಷಗಾನ‌ ಲೋಕದ ಗಾನ ಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ.

    ಕುಮಟಾ : ಯಕ್ಷಗಾನದ ಬಡಗುತಿಟ್ಟಿನ ಶ್ರೇಷ್ಠ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಬೆಂಗಳೂರಿನ ಮನೆಯಲ್ಲಿ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಇವರಿಗೆ 67 ವರ್ಷ ವಯಸ್ಸಾಗಿತ್ತು. ʼಗಾನಕೋಗಿಲೆʼ ಎಂದೇ ಅಭಿಮಾನಿಗಳ ಮನದಲ್ಲಿ ನೆಲೆಯೂರಿರುವ, ಭಾಗವತರ ಅಂತ್ಯಕ್ರಿಯೆ ಇಂದು ಸಂಜೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾಗೂರಿನ ಸ್ವಗೃಹದಲ್ಲಿ ನಡೆಯಲಿದೆ. ಸುಮಾರು 46 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು, ಪತ್ನಿ, ಪುತ್ರ ಹವ್ಯಾಸಿ ಕಲಾವಿದ ಕಾರ್ತಿಕ್ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

    1957ರ ಸೆ.5ರಂದು ಜನಿಸಿದ ಅವರನ್ನು ಯಕ್ಷರಂಗದ ತಜ್ಞ ಭಾಗವತರೆಂದೇ ಗುರುತಿಸಲಾಗುತ್ತಿತ್ತು. ಯಕ್ಷಗಾನದ ಹೊಸ ಹಾಗೂ ಹಳೆಯ ಪ್ರಸಂಗಗಳ ಪರಿಣಿತರಾಗಿದ್ದರು. ಕೋಟ ಅಮೃತೇಶ್ವರಿ ಮೇಳ, ಪೆರ್ಡೂರು ಮೇಳಗಳಲ್ಲಿ ಭಾಗವತರಾಗಿ, ಹೊಸರಾಗಗಳನ್ನು ಹೊಸ ತಾಂತ್ರಿಕತೆಯನ್ನು ಯಕ್ಷರಂಗದಲ್ಲಿ ಯಶಸ್ವಿಯಾಗಿ ಬಳಸಿದರು.

    ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ, ಸನ್ಮಾನಗಳಿಗೆ ಪಾತ್ರರಾಗಿರುವ ಧಾರೇಶ್ವರ ಅವರು ಗುರುಗಳಾದ ನಾರಾಯಣಪ್ಪ ಉಪ್ಪೂರರನ್ನು ಸದಾ ಸ್ಮರಿಸುತ್ತಿದ್ದರು. ಸಾಂಪ್ರದಾಯಿಕ ರಾಗಗಳೊಂದಿಗೆ ಹೊಸ ರಾಗಗಳನ್ನು ತಂದು ಪೌರಾಣಿಕ ಹಾಗೂ ಸಾಮಾಜಿಕ ಪ್ರಸಂಗಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದ ಸುಬ್ರಹ್ಮಣ್ಯ ಧಾರೇಶ್ವರರು, ಕಾಳಿಂಗ ನಾವಡರರ ನಂತರ ಯಕ್ಷಗಾನ ರಂಗದಲ್ಲಿ ತನ್ನ ಇಂಪಾದ ಕಂಠದಿಂದ ಜನಪ್ರಿಯರಾದವರು.

    ಮೂಲತಃ ಎಲೆಕ್ಟ್ರಿಕಲ್ ಅಂಗಡಿ ಮಾಡಿಕೊಂಡಿದ್ದ ಸುಬ್ರಹ್ಮಣ್ಯ ಧಾರೇಶ್ವರ ಕೋಟದಲ್ಲಿ ಯಕ್ಷಗಾನ ಕೇಂದ್ರಕ್ಕೆ ಸೇರಿ ಅಲ್ಲಿ ಭಾಗವತಿಕೆಯ ಮಟ್ಟುಗಳನ್ನು ಕಲಿತರು. ಉಪ್ಪೂರರಿಂದ ಭಾಗವತಿಕೆಯ ಎಲ್ಲ ಪಟ್ಟುಗಳನ್ನು ಕಲಿತರು. ಆರಂಭದಲ್ಲಿ ಎಲೆಕ್ಟ್ರಿಶಿಯನ್ ಆಗಿ ಅಮೃತೇಶ್ವರಿ ಮೇಳಕ್ಕೆ ಸೇರಿದರು. ಈ ಸಂದರ್ಭ ಗುರುಗಳಾದ ಉಪ್ಪೂರರ ಒತ್ತಾಸೆಯಿಂದ ಭಾಗವತಿಕೆ ಮಾಡಲು ಆರಂಭಿಸಿದರು. ಪೀಠಿಕೆ ಸ್ತ್ರೀವೇಷದವರೆಗೆ ಪದ್ಯ ಹೇಳಿ, ಎಲೆಕ್ಟ್ರಿಶಿಯನ್ ಆಗಿ, ಹಗಲು ಮೈಕ್ ಜಾಹೀರಾತು ನೀಡುವ ಕೆಲಸವನ್ನು ಮಾಡುತ್ತಿದ್ದ ಧಾರೇಶ್ವರರು, ಬಳಿಕ ಭಾಗವತಿಕೆಯಲ್ಲೇ ತೊಡಗಿಸಿಕೊಂಡು ಜನಪ್ರಿಯರಾದರು. ಪೆರ್ಡೂರು ಮೇಳದಲ್ಲಿ ಸುಮಾರು 26ಕ್ಕೂ ಅಧಿಕ ವರ್ಷಗಳ ತಿರುಗಾಟ ಸಹಿತ ಧಾರೇಶ್ವರ ಚಾರಿಟೇಬಲ್ ಟ್ರಸ್ಟ್ ಮೂಲಕ ಯಕ್ಷಗಾನ ಸೇವೆ ಮಾಡಿದ್ದಾರೆ.

    ಸುಮಾರು 300ಕ್ಕೂ ಅಧಿಕ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಪ್ರಸಂಗಗಳನ್ನು ನಿರ್ದೇಶಿಸಿದ ಕೀರ್ತಿ ಧಾರೇಶ್ವರ ಅವರಿಗಿದೆ. ಪುರಂದರದಾಸ, ಕನಕದಾಸ, ಬಸವಣ್ಣ, ಚೆನ್ನಮಲ್ಲಿಕಾರ್ಜುನರ ಕೀರ್ತನೆಗಳನ್ನೂ ಅವರು ಹಾಡಿದ್ದಾರೆ. ಕುವೆಂಪು, ಬೇಂದ್ರೆಯವರ ಹಾಡುಗಳೂ ಯಕ್ಷಗಾನದ ಹಾಡುಗಳಾಗಿದ್ದು ಧಾರೇಶ್ವರರ ಕಂಠದಲ್ಲಿ. ಅಮೃತ ವರ್ಷಿಣಿ, ಸಿಂಧೂರ ಭಾಗ್ಯ, ರಕ್ತ ತಿಲಕ, ಶೂದ್ರ ತಪಸ್ವಿನಿ, ಚಾರು ಚಂದ್ರಿಕೆ, ಗಗನ ಗಾಮಿನಿ, ವಸಂತ ಸೇನೆ ನಿರ್ದೇಶಿಸಿದ ಎಲ್ಲ ಪ್ರಸಂಗಗಳೂ ಜನಮಾನಸದಲ್ಲಿ‌ ಅಚ್ಚಳಿಯದೇ ಉಳಿದಿವೆ.

  • ಕುಮಟಾ ಕಾಂಗ್ರೆಸಿಗರ ಒಗ್ಗಟ್ಟೇ ಚುನಾವಣೆಗೆ ಬಹುದೊಡ್ಡ ಬಲ : ಇಲ್ಲ ಸಲ್ಲದ ಸುದ್ದಿ ಹಬ್ಬಿಸಿ ಗೊಂದಲ‌ಸೃಷ್ಟಿ ಯತ್ನ : ನಾವೆಲ್ಲಾ ಒಂದೇ ಎಂದೆಂದ ಕುಮಟಾ ಕಾಂಗ್ರೇಸಿಗರು.

    ಕುಮಟಾ ಕಾಂಗ್ರೆಸಿಗರ ಒಗ್ಗಟ್ಟೇ ಚುನಾವಣೆಗೆ ಬಹುದೊಡ್ಡ ಬಲ : ಇಲ್ಲ ಸಲ್ಲದ ಸುದ್ದಿ ಹಬ್ಬಿಸಿ ಗೊಂದಲ‌ಸೃಷ್ಟಿ ಯತ್ನ : ನಾವೆಲ್ಲಾ ಒಂದೇ ಎಂದೆಂದ ಕುಮಟಾ ಕಾಂಗ್ರೇಸಿಗರು.

    ಕಾರವಾರ : ಚುನಾವಣೆ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಪ್ರತಿಯೊಂದು ದಿನ ದಿನವೂ ಕ್ಷಣ ಕ್ಷಣವೂ ಚುನಾವಣಾ ಪ್ರಚಾರದ ಅಂಶಗಳು ಪ್ರಮುಖವೆನಿಸುತ್ತದೆ. ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಗೆಲುವಿಗಾಗಿ ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್‌ ಪ್ರಮುಖರು ಒಗ್ಗಟ್ಟಾಗಿ ಎಲ್ಲೆಡೆ ಪ್ರಯತ್ನ ನಡೆಸುತ್ತಿದ್ದಾರೆ. ಇದರಲ್ಲಿ ಕುಮಟಾ ಕಾಂಗ್ರೆಸ್ ಮುಖಂಡರ ಒಗ್ಗಟ್ಟಿನ ಪ್ರಯತ್ನವೂ ಈ ಕ್ಷೇತ್ರದಲ್ಲಿ ಚುನಾವಣೆಗೆ ಬಹುದೊಡ್ಡ ಬಲವಾಗಿದೆ. ಕುಮಟಾದಲ್ಲಿ ಪ್ರತಿಯೊಂದು ಹಂತದಲ್ಲಿ ಎಲ್ಲಾ ಮುಖಂಡರು ಚರ್ಚಿಸಿ, ಹಿರಿಕಿರಿಯ ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯವನ್ನು ಪಡೆದು ಮುಂದುವರೆಯುತ್ತಿರುವುದು ಕಾಂಗ್ರೆಸ್ ಗೆಲುವಿಗೆ ಪೂರಕವಾಗಲಿದೆ ಎಂಬ ಮಾತು ಎಲ್ಲೆಡೆಯಿಂದ ಕೇಳಿ ಬರುತ್ತಿದೆ.

    ಇನ್ನು ತಾಲೂಕಿನಲ್ಲಿ ಕಾಂಗ್ರೆಸಿಗರ ಒಗ್ಗಟ್ಟು ಹಾಗೂ ಅವರ ಪ್ರಚಾರದ ಬಿರುಸಿಗೆ ತಲೆಕೆಡಿಸಿಕೊಂಡಿರುವ ಇತರ ಪಕ್ಷದವರು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರದ ಹಾದಿ ಹಿಡಿದಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ನಲ್ಲಿ ಒಳ ಜಗಳ ಪ್ರಾರಂಭವಾಗಿದೆ, ಒಬ್ಬರಿಗೊಬ್ಬರಿಗೆ ವೈಮನಸ್ಸು ಉಂಟಾಗಿದೆ ಎಂಬಲ್ಲಾ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದದ್ದು ಎಂದು ಬಹುತೇಕ ಕಾಂಗ್ರೆಸ್ಸಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಪ್ರಮುಖರ ಭಿನ್ನಾಭಿಪ್ರಾಯಗಳ ಕುರಿತಾಗಿ ಹಾಗೂ ಇಲ್ಲಸಲ್ಲದ ವಿಷಯಗಳ ಕುರಿತಾಗಿ ಅಪಪ್ರಚಾರಕ್ಕೆ ಮುಂದಾಗಿರುವ ನೆಟ್ಟಿಗರ ವಿರುದ್ಧ ಕುಮಟಾದ ಹಲವು ಕಾಂಗ್ರೆಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸುವುದರ ಜೊತೆಗೆ, ಇಂತಹ ಕೃತ್ಯಯಿಂದ ಕಾಂಗ್ರೆಸ್‌ ದೃಢತೆಯನ್ನು ಕುಗ್ಗಿಸಲು ಸಾಧ್ಯವಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಮುನ್ನಡೆಯುತ್ತಿದ್ದು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಸತತ ಪ್ರಯತ್ನ ಮುಂದುವರಿಸುವುದಾಗಿ ಅಭಿಪ್ರಾಯ ಯಾವ ವ್ಯಕ್ತಪಡಿಸಿದ್ದಾರೆ.

    ಕುಮಟಾ ಕಾಂಗ್ರೆಸ್ ನಲ್ಲಿ ಒಳ ಜಗಳ ನಡೆಯುತ್ತಿದೆ, ಹಲವು ಪ್ರಮುಖರ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದೆ. ಹಲವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ ಎಂಬೆಲ್ಲಾ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಿವಿಧ ಸುದ್ದಿ ವಾಹಿನಿಗಳಲ್ಲಿ ಪ್ರಸಾರ ಮಾಡುವುದರ ಮೂಲಕ ಕೀಳು ಮಟ್ಟದ ರಾಜಕೀಯವನ್ನು ಮಾಡಲಾಗುತ್ತಿದೆ. ಇದು ಸತ್ಯಕ್ಕೆ ದೂರವಾಗಿದ್ದು, ಕಾಂಗ್ರೆಸ್ಸಿಗರೆಲ್ಲರೂ ಒಗ್ಗಟ್ಟಿನ ಮಂತ್ರ ಜಪಿಸುವುದರ ಜೊತೆಗೆ ಪ್ರಾಮಾಣಿಕವಾಗಿ ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂಬುದು ಬಹುತೇಕ ಕುಮಟಾ ಕಾಂಗ್ರೆಸ್ಸಿಗರ ಅಭಿಪ್ರಾಯವಾಗಿದೆ.

    ಈ ಹಿಂದೆ ಕುಮಟಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗುರುತಿಸಿಕೊಂಡ ನಿವೇದಿತ್ ಆಳ್ವಾ, ಸಕ್ರಿಯ ರಾಜಕಾರಣಕ್ಕೆ ಮರಳಿ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯರಾದ ಶಾರದಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್, ನಿಕಟಪೂರ್ವ ಅಧ್ಯಕ್ಷ ಹೊನ್ನಪ್ಪ ನಾಯಕ, ವಿ. ಎಲ್. ನಾಯ್ಕ ಹಾಗೂ ಪಕ್ಷದ ಪ್ರಮುಖರಾದ ರತ್ನಾಕರ ನಾಯ್ಕ, ಭಾಸ್ಕರ ಪಟಗಾರ, ಪ್ರದೀಪ ನಾಯಕ ಸೇರಿದಂತೆ ಪ್ರತೀ ಗ್ರಾ.ಪಂ ಮಟ್ಟದ ಎಲ್ಲಾ ಮುಖಂಡರೂ ನಿತ್ಯವೂ ಚುನಾವಣಾ ಚಿಂತನೆ ಹಾಗೂ ಪಕ್ಷ‌ ನೀಡಿದ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಜನರು ಇಲ್ಲ ಸಲ್ಲದ ಅಪಪ್ರಚಾರಕ್ಕೆ ಕಿವಿಗೊಡುವುದು ಬಿಟ್ಟು, ಕಾಂಗ್ರೆಸ್ ಗೆ ಬೆಂಬಲಿಸುವಂತೆ ಎಲ್ಲಾ ಕಾಂಗ್ರೇಸಿಗರೂ ಒಗ್ಗಟ್ಟಾಗಿ ಕುಮಟಾದಾದ್ಯಂತ ಒಕ್ಕೊರಲ ದನಿ ಹೊರಡಿಸಿದ್ದಾರೆ.

  • ಅಯ್ಯೋ..! ಎಳೆಯ ಶಿಶುವನ್ನು ಬಿಟ್ಟುಹೋದರು.

    ಅಯ್ಯೋ..! ಎಳೆಯ ಶಿಶುವನ್ನು ಬಿಟ್ಟುಹೋದರು.

    ಸಿದ್ದಾಪುರ : ತಾಲೂಕಿನ ಬಿಳಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳೂರಿನಲ್ಲಿ ಈಗ ತಾನೇ ಹುಟ್ಟಿದ ಗಂಡು ಶಿಶುವೊಂದನ್ನು ರಸ್ತೆಯ ಪಕ್ಕದಲ್ಲಿ (ಕಾಡಿನಲ್ಲಿ) ಬಿಟ್ಟುಹೋಗಿರುವ ಬಗ್ಗೆ ವರದಿಯಾಗಿದೆ. ಈ ಘನೆಯಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಿದ್ದಿದ್ದ ಈಗತಾನೇ ಹುಟ್ಟಿದ್ದ ಮಗುವನ್ನು ಕಂಡು ಸಾರ್ವಜನಿಕರನ್ನು ಬೆಚ್ಚಿ ಬಿದ್ದಿದ್ದಾರೆ ಎನ್ನಲಾಗಿದೆ.

    ಸ್ಥಳಕ್ಕೆ ಪೊಲೀಸ್ ಹಾಗೂ ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಅಧಿಕಾರಿಗಳ ಭೇಟಿ ಪರಿಶೀಲನೆ ನಡೆಸಿದ್ದಾರೆ. ಹೆತ್ತ ತಾಯಿಗೆ ಮಗು ಬೇಡವಾದರೆ, ಅನಾಥಾಶ್ರಮಕ್ಕೆ ಕೊಡಬಹುದುತ್ತು. ಅದರ ಬದಲು ಈ ರೀತಿಯ ಅಮಾನವೀಯ ಕೃತ್ಯ ಎಸಗಿದ್ದು ಅಕ್ಷಮ್ಯ ಅಪರಾದ ಎಂದು ಸಾರ್ವಜನಿಕರು ಬೇಸರಿಸಿದ್ದಾರೆ. ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಹಾಗೂ ಈ ಘಟನೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯ ನಂತರ ತಿಳಿದು ಬರಬೇಕಿದೆ.

  • ಉತ್ತರಕನ್ನಡದಲ್ಲಿ ತಂಪೆರೆದ ಮಳೆರಾಯ.

    ಉತ್ತರಕನ್ನಡದಲ್ಲಿ ತಂಪೆರೆದ ಮಳೆರಾಯ.

    ಕುಮಟಾ : ಜಿಲ್ಲೆಯ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಜಿಲ್ಲೆಯ ಕುಮಟಾ, ಅಂಕೋಲಾ,‌ ಹೊನ್ನಾವರ ಸೇರಿದಂತೆ ಕರಾವಳಿಯ ತಾಲೂಕಿನ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಳೆ ಉಂಟಾಗಿದೆ. ಈ ಮೂಲಕ ಸುಡು ಬಿಸಿಲಿನಿಂದ ಪರಿತಪಿಸುತ್ತಿದ್ದ ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆರಾಯ ತಂಪೆರೆದಿದ್ದಾನೆ.

    ಕಳೆದ ಎರಡು ದಿನಗಳಿಂದ ಭಾರೀ ಮೊಡಕವಿದ ವಾತಾವಣ ಇತ್ತು. ವಿಪರೀತವಾದ ಬಿಸಿಲಿನ ಧಗೆಗೆ ಕಂಗೆಟ್ಟಿದ್ದ ಜನತೆಗೆ ತಂಪಾಗಿಸಿದ ವರುಣ ತಂಪೆರೆದಿದೆ. ಕಳೆದೆರಡು ದಿನಗಳಿಂದ ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಅಬ್ಬರಿಸಿತ್ತು. ಇಂದು ಬೆಳ್ಳಂಬೆಳಿಗ್ಗೆ ಕುಮಟಾ, ಅಂಕೋಲಾ ಭಾಗದಲ್ಲಿ ಮಳೆ ಸುರಿಯುತ್ತಿದ್ದು ತಂಪೆರೆದಿದೆ.

    ಇನ್ನೂ ಜಿಲ್ಲೆಯಲ್ಲಿ ಎಪ್ರಿಲ್ 22ರ ವರೆಗೆ ಮಳೆ ಸುರಿಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶಿರಸಿ, ಸಿದ್ದಾಪುರ, ಮುಂಡಗೋಡ, ಹಳಿಯಾಳ ಭಾಗದಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆ ಉಂಟಾಗುತ್ತಿದೆ. ಇನ್ನೂ ಎರಡು ದಿನ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುವ ಬಗ್ಗೆ ಇಲಾಖೆ ಮಾಹಿತಿ ನೀಡಿದೆ.

  • ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ 1.42 ಕೋಟಿ ಐ.ಟಿ ನೋಟೀಸ್ – ಮೇಲ್ಮನವಿ ಅಂಗೀಕಾರ – ಶ್ರೀಮಠದ ಆಡಳಿತ ಶುದ್ಧ ಎಂದು ಮತ್ತೊಮ್ಮೆ ದೃಢ.

    ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ 1.42 ಕೋಟಿ ಐ.ಟಿ ನೋಟೀಸ್ – ಮೇಲ್ಮನವಿ ಅಂಗೀಕಾರ – ಶ್ರೀಮಠದ ಆಡಳಿತ ಶುದ್ಧ ಎಂದು ಮತ್ತೊಮ್ಮೆ ದೃಢ.

    ಶ್ರೀಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಸಂಬಂಧಿಸಿದಂತೆ ಮೌಲ್ಯಮಾಪನ ವರ್ಷ 2015-16 ನೆಯ ಸಾಲಿಗೆ ರೂ. 1.42 ಕೋಟಿ ತೆರಿಗೆ ಬಾಕಿ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯು ಕೆಲವಾರು ತಿಂಗಳ ಹಿಂದೆ ಆದೇಶಿಸಿತ್ತು. ಈ ಆದೇಶದ ವಿರುದ್ಧವಾಗಿ ಮೇಲ್ಮನವಿ ಮಾಡಲಾಗಿ; ಇದೀಗ ಮೇಲ್ಮನವಿಯ ಆದೇಶ ಬಂದಿದ್ದು, ದೇವಾಲಯಕ್ಕೆ ಜಯ ಲಭಿಸಿದೆ ಹಾಗೂ ಆ ಮೂಲಕ ತೆರಿಗೆ ಬಾಕಿ ಶೂನ್ಯ ಎಂಬುದನ್ನು ಆದಾಯ ತೆರಿಗೆ ಇಲಾಖೆಯ Commissioner of Appeal ಅವರು ತಮ್ಮ ಆದೇಶದಲ್ಲಿ ದೃಢೀಕರಿಸಿದ್ದಾರೆ.

    ಶ್ರೀರಾಮಚಂದ್ರಾಪುರಮಠವು ಮಾನ್ಯ ಕರ್ನಾಟಕ ಸರ್ಕಾರದ ಆದೇಶದನ್ವಯ 2008 ರಿಂದ ಶ್ರೀಮಹಾಬಲೇಶ್ವರ ದೇವಾಲಯದ ಆಡಳಿತವನ್ನು ವಹಿಸಿಕೊಂಡಿತ್ತು‌ ಹಾಗೂ ಸರ್ವೋಚ್ಚ ನ್ಯಾಯಾಲಯದ ಮದ್ಯಂತರ ತೀರ್ಪಿನ ಅನ್ವಯ 08.05.2021 ರಂದು ಮೇಲುಸ್ತುವಾರಿ ಸಮಿತಿಗೆ ಶ್ರೀಮಠದಿಂದ ಆಡಳಿತವು ಹಸ್ತಾಂತರಿಸಲ್ಪಟ್ಟಿದೆ.

    2015-16 ನೇ ಸಾಲಿನಲ್ಲಿ ಶ್ರೀರಾಮಚಂದ್ರಾಪುರಮಠದ ಆಡಳಿತದಲ್ಲಿದ್ದ ಸಾರ್ವಭೌಮ ಮಹಾಬಲೇಶ್ವರ ದೇವಾಲಯದ ಬ್ಯಾಂಕ್ ಖಾತೆಯಲ್ಲಿ ನಗದು ಹಣ ಜಮಾವಣೆಯ ಕುರಿತಾಗಿ ಸ್ಪಷ್ಟೀಕರಣವನ್ನು ಕೋರಿ ಆದಾಯ ತೆರಿಗೆ ಇಲಾಖೆಯು ನೋಟೀಸ್ ನೀಡಿತ್ತು ಹಾಗೂ ಈ ಕುರಿತಾಗಿ ರೂ.1.42 ಕೋಟಿಯನ್ನು ತೆರಿಗೆ ಬಾಕಿಯಾಗಿ ಪರಿಗಣಿಸಿ ಜಮಾ ಮಾಡುವಂತೆ ಆದಾಯ ತೆರಿಗೆ ಇಲಾಖೆಯು ಆದೇಶಿಸಿತ್ತು. ಇದು ಭಕ್ತಾದಿಗಳಲ್ಲಿ ಗೊಂದಲಗಳನ್ನು ಉಂಟುಮಾಡಿತ್ತು ಹಾಗೂ ಚರ್ಚೆಯ ವಿಷಯವೂ ಆಗಿತ್ತು.

    ಶ್ರೀರಾಮಚಂದ್ರಾಪುರಮಠವು ದೇವಾಲಯದ ಆಡಳಿತ ನಡೆಸುತ್ತಿದ್ದ ಸಮಯದಲ್ಲಿ ಆದಾಯ ತೆರಿಗೆ ಕಾಯಿದೆ ಕಲ್ಂ 10(23BBA) ಅನ್ವಯ ಆದಾಯ ತೆರಿಗೆ ಸಲ್ಲಿಸಲು ವಿನಾಯಿತಿಯನ್ನು ಹೊಂದಿತ್ತು ಹಾಗೂ ದೇವಾಲಯದಲ್ಲಿ ನಗದು ರೂಪದಲ್ಲಿ ಸಂಗ್ರಹವಾಗಿದ್ದ ಹುಂಡಿ ಕಾಣಿಕೆ , ಸೇವಾ ಕಾಣಿಕೆ ಮತ್ತು ದೇಣಿಗೆ ಹಣವನ್ನು ದೇವಾಲಯದ ಬ್ಯಾಂಕ್ ಖಾತೆಯಲ್ಲಿ ಜಮಾವಣೆ ಮಾಡಲಾಗಿತ್ತು. ಈ ಕುರಿತಾಗಿ ಆದಾಯ ತೆರಿಗೆ ಇಲಾಖೆಯು ಸ್ಪಷ್ಟೀಕರಣವನ್ನು ಕೋರಿದ್ದು ಸಹಜವಾ ಪ್ರಕ್ರಿಯೆಯಾಗಿದ್ದು, Question is not of mis appropriation. but it is a matter of taxability ಎಂದು ತೆರಿಗೆ ಇಲಾಖೆಯೇ ಹೇಳಿರುವಂತೆ, ಇಲಾಖೆಯು ನೀಡಿದ್ದ ನೋಟೀಸ್ ತೆರಿಗೆ ಸಾಧ್ಯತೆಯನ್ನು ನಿರ್ಧರಿಸುವ ಸಲುವಾಗಿತ್ತೇ ವಿನಃ ಇದು ಅಲ್ಲಿ ಯಾವುದೇ ಅವ್ಯವಹಾರ ನಡೆದಿತ್ತು ಎಂಬುದನ್ನು ಸೂಚಿಸುವುದಿಲ್ಲ. ಇದೀಗ ಆದಾಯ ತೆರಿಗೆ ಇಲಾಖೆಯ ನೋಟೀಸ್ ವಿರುದ್ಧ ದಾಖಲಿಸಲಾಗಿದ್ದ ಮೇಲ್ಮನವಿಯ ತೀರ್ಪು ಪ್ರಕಟವಾಗಿದ್ದು ; ಮಹಾಬಲೇಶ್ವರ ದೇವಾಲಯವು ಯಾವುದೇ ತೆರಿಗೆ ಬಾಕಿ ಹೊಂದಿರುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆಯೇ ದೃಢೀಕರಿಸಿ ಆದೇಶಿಸಿದೆ.

    ಶ್ರೀರಾಮಚಂದ್ರಾಪುರಮಠವುಸುಮಾರು 13 ವರ್ಷಗಳ ಕಾಲ ಶ್ರೀಸಂಸ್ಥಾನ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ನಿರ್ವಹಿಸಿದ್ದು, ಪ್ರತಿ ವರ್ಷ ಲೆಕ್ಕಪರಿಶೋಧನೆಯನ್ನು ನಡೆಸಿ; ಸುವ್ಯವಸ್ಥಿತವಾಗಿ ಲೆಕ್ಕಪತ್ರಗಳನ್ನು ನಿರ್ವಹಿಸಿ – ಸುಭದ್ರವಾಗಿ ದಾಖಲೀಕರಣ ಮಾಡಿದೆ. ದೇವಾಲಯದಲ್ಲಿ ಶ್ರೀಮಠದ ಸುವ್ಯವಸ್ಥಿತ – ಸುಭದ್ರ ಹಾಗೂ ಪಾರದರ್ಶಕ ಆಡಳಿತಕ್ಕಾಗಿ ಅಂತಾರಾಷ್ಟ್ರೀಯವಾದ ISO ಪ್ರಮಾಣಪತ್ರವೂ ಲಭಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

    ಇದೀಗ ಮೇಲ್ಮನವಿ ಆದೇಶದನ್ವಯ ತೆರಿಗೆ ಬಾಕಿ ಶೂನ್ಯವಾಗಿರುವುದು ಭಕ್ತಾದಿಗಳ ಗೊಂದಲಗಳನ್ನು ನಿವಾರಿಸಿದ್ದು ಮಾತ್ರವಲ್ಲದೇ, ದೇಗುಲದ ಇಂದಿನ ಆಡಳಿತ ಮಂಡಳಿಯ ಸ್ಪಷ್ಟೀಕರಣವನ್ನು ಆದಾಯ ತೆರಿಗೆ ಇಲಾಖೆ ಮಾನ್ಯ ಮಾಡಿರುವುದು ಅಂದಿನ ಶ್ರೀರಾಮಚಂದ್ರಾಪುರಮಠದ ಮಾದರಿ ಆಡಳಿತ ವ್ಯವಸ್ಥೆಗೆ ಸಂದ ಜಯವಾಗಿದೆ.

  • ಮಲಗಿದ್ದವರ ಮೇಲೆ ಹರಿದ ಕಾರು : ಮಗು ಸೇರಿ ಇಬ್ಬರು ಗಂಭೀರ

    ಮಲಗಿದ್ದವರ ಮೇಲೆ ಹರಿದ ಕಾರು : ಮಗು ಸೇರಿ ಇಬ್ಬರು ಗಂಭೀರ

    ಶಿರಸಿ ಕುಮಟಾ ರಸ್ತೆಯಲ್ಲಿರುವ ಹಿಪ್ನಳ್ಳಿ ಕ್ರಾಸನಲ್ಲಿ ಬಾರೀ ರಸ್ತೆ ಅಪಘಾತವೊಂದು ಸಂಭವಿಸಿದ ಬಗ್ಗೆ ವರದಿಯಾಗಿದೆ. ಕಾರೊಂದು ಮಲಗಿದವರ ಮೇಲೆ ಹರಿದ ಪರಿಣಾಮವಾಗಿ ಮಗು ಸೇರಿ ಈರ್ವರ ಸ್ಥಿತಿ ಗಂಭೀರವಾಗಿದೆ. ಇವರಿಗೆ ಪೆಟ್ಟಾಗಿರುವ ಬಗ್ಗೆ ವರದಿಯಾಗಿದೆ.

    ರಸ್ತೆ ಕೆಲಸ ಮಾಡಿ ವಿಶ್ರಾಂತಿಗಾಗಿ ಮಲಗಿದವರ ಮೇಲೆ ಕಾರು ಹರಿದ ಪರಿಣಾಮ ಈ ಭೀಕರ ಘಟನೆ ಸಂಭವಿಸಿದೆ. ಗಾಯಗೊಂಡವರೆಲ್ಲಾ ಹೈದರಬಾದನ್ ಮೆಹಬೂಬ ನಗರದ ಕಾರ್ಮಿಕರಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರಗೆ ಸಾಗಿಸಲಾಗಿದ್ದು, ಚಿಕಿತ್ಸೆ ನಡೆದಿದೆ. ನಾಡು ಯುಗಾದಿಯ ಸಂಭ್ರಮಾಚರಣೆಯಲ್ಲಿದ್ದಾರೆ ಇಲ್ಲಿ ಒಂದು ಕುಟುಂಬದ ಹಲವರು ಜೀವನ್ಮರಣ ಸ್ಥಿತಿಯಲ್ಲಿದ್ದಾರೆ.

  • ರೈಲು ಬಡಿದು ಮಹಿಳೆ ಸಾವು.

    ರೈಲು ಬಡಿದು ಮಹಿಳೆ ಸಾವು.

    ಅಂಕೋಲಾ : ಮಹಿಳೆಯೋರ್ವಳು,ರೈಲ್ವೆ ಹಳಿ ದಾಟುತ್ತಿದ್ದಾಗ ಆಕಸ್ಮಿಕವಾಗಿ ರೈಲೊಂದು ಬಡಿದು ಗಂಭೀರ ಗಾಯಗೊಂಡು, ನಂತರ ಮೃತ ಪಟ್ಟ ಘಟನೆ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯ ಮೊರಬಾ ಗ್ರಾಮದಲ್ಲಿ ನಡೆದಿದೆ.
    ಮೊರಬಾ ಕುಮಟಾ ನಿವಾಸಿ ಸುಶೀಲಾ ಚಂದ್ರು ಹರಿಕಂತ್ರ(65) ಮೃತ ದುರ್ದೈವಿ ಮಹಿಳೆಯಾಗಿದ್ದಾಳೆ. ಈಕೆಗೆ ಕಿವುಡುತನ ಸಮಸ್ಯೆ ಇತ್ತು ಎನ್ನಲಾಗಿದೆ.

    ಮಹಿಳೆ ಮೊರಬಾದ ತನ್ನ ಮನೆಯಿಂದ ಪಕ್ಕದ ಕೇರಿಯ ತಮ್ಮನ ಮನೆಗೆ ಹೋಗಲು ರೈಲ್ವೆ ಹಳಿ ದಾಟುತ್ತಿದ್ದ ಸಂದರ್ಭದಲ್ಲಿ ರೈಲು ಬಡಿದ ಪರಿಣಾಮ, ಭಾರೀ ಪ್ರಮಾಣದಲ್ಲಿ ಗಾಯಗೊಂಡು ಈಕೆ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಅನಂತಕುಮಾರ ಹೆಗಡೆ ಭೇಟಿಗೆ ಕಾದು ಕಾದು ವಾಪಸ್ಸಾದ ಕಾಗೇರಿ?

    ಅನಂತಕುಮಾರ ಹೆಗಡೆ ಭೇಟಿಗೆ ಕಾದು ಕಾದು ವಾಪಸ್ಸಾದ ಕಾಗೇರಿ?

    ಶಿರಸಿ : ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದಿಂದ ಅರು ಬಾರಿ ಗೆದ್ದು ಕಳೆದ ಚುನಾವಣೆಯಲ್ಲಿ ಸೋತಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಣಕ್ಕೆ ಇಳಿಸಿದೆ. ಇದರಿಂದ ಸಂಭ್ರಮ ಹಂಚಿಕೊಂಡಿದ್ದ ಕಾಗೇರಿ, ತನಗೆ ಟಿಕೆಟ್ ಕೊಟ್ಟಿದ್ದಕ್ಕೆ ಕೇಂದ್ರದ ನಾಯಕರಿಗೆ ಧನ್ಯವಾದ ಹೇಳಿದ್ದರು. ಅಲ್ಲದೆ ಉ.ಕ ಬಿಜೆಪಿಯ ಭದ್ರಕೋಟೆಯಾಗಿದ್ದು ನನ್ನ ಗೆಲುವು ನಿಶ್ಚಿತ. ಅನಂತ ಕುಮಾರ್ ಹೆಗಡೆಯೊಂದಿಗೆ ಭೇಟಿಯಾಗಿ ಅವರ ಸಹಕಾರ ಕೋರುತ್ತೇನೆ. ನಾನು ಮತ್ತು ಅನಂತಕುಮಾರ ಹೆಗಡೆ ಜೋಡೆತ್ತಿನಂತೆ ಕೆಲಸ ಮಾಡುತ್ತೇವೆ ಎಂಬ ಹೇಳಿಕೆಯನ್ನು ನೀಡಿದ್ದರು.

    ಆದರೆ ರಾಜಕೀಯದಲ್ಲಿ ತನ್ನದೇ ವಿಶೇಷ ನಡೆ ಹಾಗೂ ಛಾತಿ ಹೊಂದಿರುವ ಅನಂತ ಕುಮಾರ್ ಹೆಗಡೆ ಈಗ ಯಾವುದಕ್ಕೂ ಮಣಿಯುತ್ತಿಲ್ಲ. ಹೀಗಾಗಿ ಅನಂತಕುಮಾರ್ ಹೆಗಡೆಯವರು ಕಾಗೇರಿಯವರಿಗೆ ಬಲವಾಗಿ ಬರುವ ನಿರೀಕ್ಷೆಯೇ ಬಿಟ್ಟರೆ, ಸಾಧ್ಯತೆಗಳು ತೀರಾ ಕಡಿಮೆಯಿದೆ. ಹೀಗಾಗಿ ಕಾಗೇರಿ ಜೊತೆಗೆ ಅವರು ಜೋಡೆತ್ತು ಆಗುವುದಿರಲಿ ಕಾಗೇರಿಯವರಿಗೆ ಅನಂತಕುಮಾರ ಹೆಗಡೆಯವರ ಭೇಟಿಯೂ ಸಿಗುತ್ತಿಲ್ಲ‌ ಎಂಬ ಮಾತು ಕೇಳಿಬಂದಿದೆ.

    ಅನಂತ ಕುಮಾರ್ ಹಗಡೆ ಕಳೆದ ಐದಾರು ದಿನಗಳಿಂದ ಯಾರ ಕೈಗೂ ಸಿಗದೆ ಮನೆಯಲ್ಲೇ ಇದ್ದಾರೆ ಎಂಬುದಾಗಿ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಅವರನ್ನು ಭೇಟಿಯಾಗಲು ಕಾಗೇರಿಯವರು ಕೂಡ ಹೋಗಿ ಕಾದು ಕಾದು ಸುಸ್ತಾಗಿ ಕೊನೆಗೂ ಭೇಟಿಯಾಗದೇ ಮರಳಿದ್ದಾಗಿ ಮಾಹಿತಿ ಎಲ್ಲೆಡೆಯಿಂದ ಕೇಳಿಬರುತ್ತಲಿದೆ. ಒಟ್ಟಿನಲ್ಲಿ ರಾಜಕೀಯ ಚಿಗುರಂಗದಾಟ, ಯಾವ ಕಡೆಗೆ ಸಾಗಲಿದೆ ಎಂಬುದು ಮಾತ್ರ ಕುತೂಹಲ ಕೆರಳಿಸಿದೆ.

    ಇನ್ನು ಅನಂತಕುಮಾರ್ ಹೆಗಡೆ ಯಾವ ನಾಯಕರನ್ನೂ ಸಹ ಕಾಗೇರಿ ವಿಷಯದಲ್ಲಿ ಮಾತನಾಡಲು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇನ್ನು ಭಟ್ಕಳ ಮಾಜಿ ಶಾಸಕ, ಕೆಲವು ಮುಖಂಡರು ಅನಂತಕುಮಾರ್ ಹೆಗಡೆ ಮನೆಗೆ ಹೋಗಿಬಂದಿದ್ದರೂ ಸಂದಾನದ ಬಗ್ಗೆ ಬಾಯಿ ತಪ್ಪಿಯೂ ಮಾತನಾಡಿರಲಿಲ್ಲ.


    ಇನ್ನು ಕಾಗೇರಿ ಕಚೇರಿಯಿಂದ ಟಿಕೆಟ್ ಘೋಷಣೆ ಆದ ದಿನದಿಂದ ಅನಂತಕುಮಾರ್ ಹೆಗಡೆರವರನ್ನು ಮುಖತಹ ಭೇಟಿ ಮಾಡಲು ಸಮಯ ಕೇಳಿದ್ದರು. ಆದರೇ ಅನಂತಕುಮಾರ್ ಹೆಗಡೆ ಕಚೇರಿಯಿಂದ ಸಮಯ ನೀಡಿರಲಿಲ್ಲ. ಏತನ್ಮಧ್ಯೆ ಸಂಧಾನಕ್ಕಾಗಿ ತೆರಳಿದ ಮಾಜಿ ಸಚಿವನ ಗನ್ ಮ್ಯಾನ್ ಫೋಟೋ ಕ್ಲಿಕ್ಕಿಸಿದ ವಿಚಾರದಲ್ಲಿ ಕೋಪಗೊಂಡ ಅನಂತಕುಮಾರ ಹೆಗಡೆ ಗನ್ ಮ್ಯಾನ್ ಹೊಡೆದಿದ್ದಾರೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಬಿಜಪಿ ವಲಯದಲ್ಲಿ ಸುದ್ದಿ ಹರಿದಾಡುತ್ತಿದೆ.

  • ಅನಂತಕುಮಾರ ಹೆಗಡೆ ಪರಮಾಪ್ತ ಕೃಷ್ಣ ಎಸಳೆ ಪಕ್ಷೇತರ ಸ್ಪರ್ಧೆ..?

    ಅನಂತಕುಮಾರ ಹೆಗಡೆ ಪರಮಾಪ್ತ ಕೃಷ್ಣ ಎಸಳೆ ಪಕ್ಷೇತರ ಸ್ಪರ್ಧೆ..?

    ಕುಮಟಾ : ಪ್ರಭಲ ಹಿಂದುತ್ವ ವಾದಿ ಹಾಗೂ ಕಳೆದ ಮೂವತ್ತು ವರ್ಷಗಳಿಂದ ಸಂಸದರಾಗಿದ್ದ ಅನಂತಕುಮಾರ‌ ಹೆಗಡೆ ಬದಲಾಗಿ ಮಾಜಿ ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಉತ್ತಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಿದ ನಂತರದಲ್ಲಿ ದಿನಕ್ಕೊಂದು ರಾಜಕೀಯ ವಿದ್ಯಮಾನಗಳು ಚುರುಕು ಪಡೆದುಕೊಳ್ಳುತ್ತಿದೆ. ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಉ.ಕ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಬಗ್ಗೆ ಅಸಮಾಧಾನದ ಹೊಗೆ ಎದ್ದಿದ್ದು, ಫೈಯರ್ ಬ್ರಾಂಡ್ ಅನಂತ ಕುಮಾರ ಹೆಗಡೆ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಅವರ ಕುರಿತಾಗಿ ಪ್ರಖರ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

    ಇನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾವೇರಿ ಅನಂತ್ ಕುಮಾರ್ ಹೆಗಡೆಯವರನ್ನು ಭೇಟಿ ಮಾಡಲು ತೆರಳಿದರು ಅನಂತಕುಮಾರ್ ಹೆಗಡೆ ಭೇಟಿಯಾಗಿಲ್ಲ ಎಂದು ತಿಳಿದು ಬಂದಿದೆ. ಇದರ ಮಧ್ಯೆ ವಿಶೇಷ ರಾಜಕೀಯ ಬೆಳವಣಿಗೆಯೊಂದು ನಡೆದಿದ್ದು, ಅನಂತಕುಮಾರ್ ಹೆಗಡೆಯವರ ಪರಮಾಪ್ತ ಕೃಷ್ಣ ಎಸಳೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ.

    ಕೃಷ್ಣ ಎಸಳೆ ಅನಂತಕುಮಾರ್ ಹೆಗಡೆಯವರ ಪರಮಾಪ್ತರಾಗಿದ್ದು, ಪ್ರಖರ ಹಿಂದುತ್ವವಾದಿಯಾಗಿಯೂ ಇವರು ಗುರುತಿಸಿಕೊಂಡವರು. ಅವರು ನಾಳೆ ಬೆಂಗಳೂರಿಗೆ ತೆರಳುವ ನಿರೀಕ್ಷೆಯಿದ್ದು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಉತ್ತರ ಕನ್ನಡದಲ್ಲಿ ತಮ್ಮದೇ ಹಿಡಿತ ಹೊಂದಿರುವ ಅನಂತಕುಮಾರ ಹೆಗಡೆಯವರು ತಮ್ಮ ಪರಮಾಪ್ತನ ಜೊತೆಗೆ ಬೆಂಬಲವಾಗಿ ನಿಂತರೆ ಬಿಜೆಪಿ ಅಭ್ಯರ್ಥಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆಗಳು ಹೆಚ್ಚಿದೆ. ಆದರೆ ಮುಂದಿನ ರಾಜಕೀಯ ಪ್ರಕ್ರಿಯೆಗಳು ಯಾವ ದಿಕ್ಕಿನಲ್ಲಿ ಸಾಗಲಿದೆ ಎನ್ನುವುದು ಮಾತ್ರ ಕುತೂಹಲ ಕೆರಳಿಸಿದೆ.