‘ಹೆಣ್ಣು ಮಕ್ಕಳಿಗೆ ಕಾಲು ಕರೆತ ಬಾಯಿ ಚಪಲ’ ಅಂತ ಹಳೆಕಾಲದಲ್ಲಿ ಹೇಳುತ್ತಿದ್ದರಂತೆ ಎಂದು ಹಿರಿಯರು ಹೇಳಿದಾಗ ನಾನು ವಾದ ಮಾಡಿದ್ದಿದೆ. ‘ಏನು ಹೆಂಗಸರು ಅಷ್ಟು ಕೀಳಾಗಿರುತ್ತಾರಾ? ಅವರಿಗೂ ಗೌರವವಿದೆ. ಬಾಯಿಗೆ ಬರುತ್ತದೆ ಅಂತ ಈ ಗಂಡಸರು ಏನು ಬೇಕಾದರೂ ಮಾತನಾಡುತ್ತಾರೆ’ ಎಂದೆಲ್ಲ ಹೇಳಿದ್ದೆ. ಆದರೆ ಇತ್ತಿಚಿಗೆ ಎಲ್ಲೋ ಕೆಲವು ವಿಚಾರಗಳನ್ನು ನೋಡಿದಾಗ ಆ ಮಾತಿನಲ್ಲೂ ಸತ್ಯವಿದೆಯೇನೋ ಅನ್ನಿಸಲಿಕ್ಕೆ ಶುರುವಾಗಿದ್ದು ಸುಳ್ಳಲ್ಲ. ಹೆಣ್ಣಿಗೆ ಹೆಣ್ಣೆ ಶತ್ರು ಎನ್ನುವಂತೆ ಕೆಲವು ಹೆಂಗಸರು ತಮ್ಮ ಅಸಾಹಾಯಕತೆಯನ್ನು ಅಥವಾ ಅಸೂಹೆಯನ್ನು ತೀರಿಸಲು ತಯಾರಾಗಿ ನಿಂತಿರುವುದು ನೋಡಿದರೆ ಬೇಸರವೂ ಆಗುತ್ತದೆ.
ಮೊನ್ನೆ ಹಾಗೆ ಪೇಟೆಯಲ್ಲಿ ಸಾಗಿ ಹೋಗುತ್ತಿದ್ದೆ. ರಸ್ತೆಯ ಒಂದು ಪಕ್ಕ ಜನ ಸೇರಿದ್ದರು. ಗಲಾಟೆ ನಡೆಯುತ್ತಿದೆ ಎಂದು ಮಾತಿನ ಭರಾಟಿಯೇ ತಿಳಿಸುತಿತ್ತು. ಕುಡುಕರ ಗಲಾಟೆಯೋ ಅಥವಾ ರಸ್ತೆಯಲ್ಲಿ ವಾಹನಗಳ ಮಾಲಿಕರ ಗಲಾಟೆಯೋ ಅಂದುಕೊಂಡೆ. ಮುಂದೆ ಹೋಗಲು ಅಡ್ಡವಾಗಿ ಬಾರಿವಾಹನ ನಿಂತಿತ್ತು. ಹಾಗೆ ಪಕ್ಕದವರನ್ನು ಈ ಗಲಾಟೆ ಯಾವ ಕಾರಣಕ್ಕೆ ಕೇಳಿದಾಗ ನಾನೇ ಮುಗಿನ ಮೇಲೆ ಬೆರಳಿಟ್ಟುಕೊಂಡೆ.
ಎರಡು ಅಕ್ಕ ಪಕ್ಕ ಇರುವ ಸಂಸಾರಗಳು. ಗಂಡಂದಿರು ತಮ್ಮತಮ್ಮ ಕೆಲಸದ ಮೇಲೆ ಹೊರಗರ ಹೋಗಿದ್ದಾರೆ. ಮಕ್ಕಳು ಶಾಲೆಗೆ ಹೋಗಿರುವುದರಿಂದ ಮನೆ ಕೆಲಸ ಮುಗಿಸಿ, ಒಬ್ಬಳು ಮತ್ತೊಬ್ಬಳ ಮನೆಗೆ ಬಂದು, ಇಬ್ಬರು ಮಾತನಾಡುತ್ತಿದ್ದಾರೆ. ಮಾತನಾಡುತ್ತ ಒಂದು ಮಾತು ನುಡಿದಿದ್ದಾಳೆ. ‘ನಿನ್ನೆ ನಿಮ್ಮ ಮಗಳು ನಮ್ಮ ಮನೆಗೆ ಬಂದಾಗ ಚಹಾ ಬೇಕು ಎಂದು ಹಠ ಮಾಡಿದಳು’ ಅಂದಳು ಆ ಮನೆಯವಳು. ಶುರುವಾಯಿತು ನೋಡಿ. ನನ್ನ ಮಗಳು ಹಾಗೆಲ್ಲ ಯಾರ ಮನೆಯಲ್ಲೂ ತಿಂಡಿ ಚಹಾ ಕೇಳುವುದಿಲ್ಲ ಎಂದು ಬಂದ ಹೆಣ್ಣುಮಗಳು ಹೇಳಿದಳು. ಆದರೆ ಆ ಮನೆಯವಳು ‘ಯಾವಾಗೂ ಕೇಳಿಲ್ಲ ಈಗ ನಾನು ಸಲಿಗೆಯಾಗಿದ್ದೇನಲ್ಲ. ಕೇಳಿದಾಳೆ ಅಷ್ಟೆ. ಮಕ್ಕಳು ಬಿಡಿ, ನನ್ನ ಮಗುವಿಗೆ ನಿಮ್ಮ ಮಗುವಿಗೆ ಇಬ್ಬರಿಗೂ ಮಾಡಿಕೊಟ್ಟೆ’ ಎಂದು ಮಾತು ಮುಗಿಸಲು ನೋಡಿದಳು ಈಕೆ. ಆದರೆ ಆ ಮನೆಗೆ ಬಂದ ಹೆಣ್ಣುಮಗಳು ಅಲ್ಲಿಗೆ ಬಿಡದೆ ‘ ಏನು ನನ್ನ ಮಗಳು ಚಹಾ ಕೇಳಿದ್ದು ತಪ್ಪೆನ್ನುವಂತೆಮಾತಾಡ್ತಿಯಾ, ನಾವೇನು ಗತಿ ಇಲ್ಲದವರಂತ ತಿಳದಿದ್ದೀಯಾ? ಒಂದು ಕಪ್ ಚಹಾ ಮಾಡಿಕೊಟ್ಟಿರುವುದು ನನ್ನ ಬಳಿ ಹೇಳುವುದು ಏನಿತ್ತು? ನೀನು ನನಗೆ ಅವಮಾನ ಮಾಡಬೇಕು ಅಂತಲೇ ಈ ವಿಚಾರವನ್ನು ನನ್ನ ಬಳಿ ಹೇಳಿರುವುದು’ ಎನ್ನುತ್ತ ಬಳೆ ಏರಿಸಿ ಸೀರೆಯನ್ನು ಕಟ್ಟಿಯೇ ಬಿಟ್ಟಳು.
ಇದು ಒಂದು ಜಗಳ ಆಡುವಂತಹ ವಿಷ್ಯ ಆಗುವುದೇ ಇಲ್ಲ. ಆದರೆ ಜಗಳ ಆಡುವುದು ಯಾತಕ್ಕೆ. ಅದು ಅವರ ಬುದ್ಧಿಮಟ್ಟವನ್ನು ತೋರಿಸುತ್ತದೆ. ಅಲ್ಲದೆ ಮಾತನಾಡುವುದಕ್ಕೆ ಎಂದು ಮತ್ತೊಬ್ಬರ ಮನೆಗೆ ಹೋದಾಗ ಸೌಜನ್ಯದ ವರ್ತನೆ ಗೊತ್ತಿಲ್ಲದೇ ಜಗಳ ಮಾಡುವುದು ಎಷ್ಟು ಸರಿ. ಅವರಿಂದ ನಿಜವಾದ ಅವಮಾನ ಆಗಿದ್ದರೂ ಅದು ಅವರ ಜಾಗ, ನಾವು ಸುಮ್ಮನೆ ಹೋಗುವುದು ಉತ್ತಮ ಎಂದು ಸಹನೆ ತಾಳ್ಮೆ ಇರುವವರು ಯೋಚಿಸುತ್ತಾರೆ. ಆದರೆ ಈ ರೀತಿಯ ಜಗಳ ನೋಡಿದಾಗ ಇದು ಅವಮಾನವಾಗಿ ಜಗಳವಾಡಿದ್ದಲ್ಲ ಉದ್ದೇಶ ಪೂರ್ವಕವಾಗಿ ಜಗಳವಾಡುವುದು. ಇವತ್ತು ಈ ಮನೆಯವರ ಬಳಿ ಜಗಳವಾಡಿ ಮತ್ತೊಂದು ಮನೆಯವರಲ್ಲಿ ದೋಸ್ತಿ ಬೆಳೆಸಿ, ಇಲ್ಲಿಯ ಹಲವು ಮಾತನ್ನು ಚೆಂದವಾಗಿ ಆ ಮನೆಯವರಲ್ಲಿ ವರ್ಣಿಸಿ, ಶಬ್ಬಾಷ್ ಗಿಟ್ಟಿಸಿಕೊಂಡು ಮುಂದೊಂದು ದಿನ ಇಂತಹದ್ದೇ ಸಲ್ಲದ ಕಾರಣಕ್ಕೆ ಅಲ್ಲಿ ಕೂಡ ಜಗಳವಾಡುವುದು ಮತ್ತೆ ಬೇರೆ ಮನೆಯವರಲ್ಲಿ ಸೇರುವುದು.
ಅಬ್ಬಾ ಇದು ಜಗಳವಾಡಬೇಕು ಅಂತ ಮಾಡುವ ಕೆಲಸ. ಇದೊಂತರ ಮನೋ ಖಾಯಿಲೆ ಎಂದರೂ ತಪ್ಪಾಗಲಾರದು. ಗಂಡಂದಿರು ಇಲ್ಲದಾಗ ಕಾಲು ಕಡಿತ ಇರುವಂತೆ ಅವರಿವರ ಮನೆಗೆ ಹೋಗಿ ಬಾಯಿಚಪಲಕ್ಕೆ ಸುದ್ದಿ ಮಾತನಾಡುತ್ತ ತನ್ನ ಘನತೆ ಏನು, ಮರ್ಯಾದಿ ಏನು ಎನ್ನುವದನ್ನು ಲೆಕ್ಕಿಸದೇ ಜಗಳವಾಡಿ ಸಣ್ಣವರಾಗುತ್ತೇವೆ ಎನ್ನುವ ಬುದ್ಧಿಯು ಇಲ್ಲವಲ್ಲ. ಇಂತವರನ್ನು ನೋಡಿಯೇ ‘ ಹೆಂಗಸರ ಬುದ್ಧಿ ಮೊಳಕಾಲು ಕೆಳಗೆ’ ಎನ್ನುವ ಗಾದೆ ಮಾತು ಹುಟ್ಟಿದ್ದೀರಬೇಕು.
ಈ ಖಾಯಿಲೆ ಇರುವವರು ಎಲ್ಲೆ ಹೋಗಲಿ ಒಂದೊಂದು ಕಾರಣ ಹುಡುಕಿ ಜಗಳವಾಡಿಯೇ ಮನೆಗೆ ಬರುತ್ತಾರೆ. ತಮ್ಮ ಮನಸ್ಥಿತಿ ಹಾಳು ಮಾಡಿಕೊಳ್ಳುವುದರ ಜೊತೆ, ಮನೆಯ ವಾತಾವರಣವನ್ನು ಕೆಡಿಸಿ, ಸಮಾಜದಲ್ಲಿಯೂ ಒಂದು ತಲೆನೋವಾಗಿ ನಿಲ್ಲುತ್ತಾರೆ. ಇವರಿಗೆ ಬುದ್ಧಿ ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಅಂಥವರು ಅಂತ ತಿಳಿದ ತಕ್ಷಣ ದೂರ ಸರಿಯುವುದೊಂದೆ ನಮಗಿರುವ ದಾರಿ ಅನ್ನಿಸುತ್ತದೆ ಅಲ್ಲವೆ.