muralidhar 2

ಜಗದೀಶನಾಡುವ ಜಗವೇ ಒಂದು ನಾಟಕರಂಗ, ಈ ನಾಟಕರಂಗದಲ್ಲಿ ದೇವರು ಸೂತ್ರದಾರಿ ಮನುಷ್ಯರೆಲ್ಲರೂ ಪಾತ್ರದಾರಿಗಳು, ದೇವರು ಆಡಿಸಿದಂತೆ ಆಡುವ ಮಾನವರು ಅವನ ಕೈಗೊಂಬೆ ಯಾಗಿರುತ್ತೇವೆ. ನಗಿಸಿದಂತೆ ನಗುವ, ಅಳಿಸಿದಂತೆ ಅಳುವ, ನಮಗೆ ಅವನೇ ಸೂತ್ರದಾರಿಯೂ ಅವನೇ ಪೋಷಕ ಪಾತ್ರದಾರಿಯೂ ಅವನೇ ಆಗಿರುತ್ತಾನೆ. ಅದೇ ರೀತಿ ಮನುಷ್ಯನ ಜೀವನದಲ್ಲಿ ಬರುವ ಎಲ್ಲರೂ ಒಂದಲ್ಲ ಒಂದು ರೀತಿಯ ಪೋಷಕ ಪಾತ್ರದಾರಿಗಳೇ ಆಗಿರುತ್ತಾರೆ.

ಮೊದಲನೆಯದಾಗಿ ದೇವರು ಮಾನವನನ್ನು ಆಡಿಸುವ ಸೂತ್ರದಾರಿಯಾದರೂ ಮನುಷ್ಯರೇ ಜೀವನದಲ್ಲಿ ಹುಟ್ಟಿದಾಗಿನಿಂದ ಸಾಯುವವರೆಗೂ ಇರುವ ಬೇರೆಯವರ ಜೀವನ ನಾಟಕರಂಗದ ಪಾತ್ರದಾರಿಗಳು. ದೇವರು ಮಾನವನ ಜೀವನದ ಸೂತ್ರದಾರಿಯಾದರೂ ಅವನೇ ಸೂತ್ರದಾರಿ ಹಾಗೂ ಪೋಷಕ ಪಾತ್ರದಾರಿಯಾಗಿ ದ್ವಿಪಾತ್ರದಲ್ಲಿ ಇರುತ್ತಾನೆ. ಮನುಷ್ಯನ ಜನ್ಮಕ್ಕೆ ಕಾರಣನಾಗಿ, ನಂತರ ಮನುಷ್ಯ ಮಗುವಾದಾಗಿನಿಂದಲೂ ಸಾಯುವವರೆಗೂ ಅವನನ್ನೇ ನಂಬಿದ ಭಕ್ತರನ್ನು ಸಲಹುತ್ತಾ, ಕಡೆಗೆ ತನ್ನ ಸಾನಿಧ್ಯಕ್ಕೆ ಕರೆಸಿಕೊಳ್ಳುವ ಅತ್ಯಮೂಲ್ಯ ಸೂತ್ರದಾರಿಯಾಗಿರುತ್ತಾನೆ. ಅಂದರೆ ಆ ದೇವರು ಎಲ್ಲರ ಜೀವನದಲ್ಲಿ ಪ್ರತಿಯೊಂದು ಕ್ಷಣದಲ್ಲಿಯೂ ನಂಬಿದವರ ಬೆನ್ನ ಹಿಂದೆ ಇದ್ದು, ರಕ್ಷಿಸುತ್ತಾ ಇರುತ್ತಾನೆ. ಅವನಿಗೆ ಯಾವುದೇ ಭೇದಭಾವವು ಇರುವುದಿಲ್ಲ. ಎಲ್ಲರೂ ಅವನ ದೃಷ್ಟಿಯಲ್ಲಿ ಒಂದೇ. ಆ ದೇವರನ್ನು ನಂಬಿ ದಿನವೂ ಸ್ತುತಿಸಿದರೆ ಮನುಷ್ಯನ ಜೀವನ ಸಾರ್ಥಕವಾಗುತ್ತದೆ.

ಇನ್ನು ಎರಡನೆಯದಾಗಿ, ತಂದೆ ತಾಯಿಗಳು ಇವರುಗಳ ಪಾತ್ರವು ಬಹಳ ದೊಡ್ಡದು, ಇವರು ತಮ್ಮ ಮಕ್ಕಳಿಗೆ ಜನ್ಮವನ್ನು ನೀಡಿ, ಮಗುವಿನಿಂದ ಪ್ರಾಪ್ತವಯಸ್ಕರಾಗುವವರೆಗೆ ಸಾಕಿ ಸಲಹಿ, ಅವರುÀಗಳ ಬೇಕು ಬೇಡಗಳನ್ನು ನೋಡಿಕೊಳ್ಳುವ ಪೋಷಕ ಪಾತ್ರದಾರಿಗಳು. ವಯಸ್ಸಿಗೆ ತಕ್ಕಂತೆ ಆಗಬೇಕಾದ ಎಲ್ಲಾ ಕಾರ್ಯಗಳನ್ನು ಮಾಡುತ್ತಾ, ಅಂದರೆ ಚಿಕ್ಕವರಿದ್ದಾಗ ಚೂಡಾಕರ್ಮ, ಅಕ್ಷರಾಭ್ಯಾಸ ವಿಧ್ಯಾಭ್ಯಾಸ, ಉದ್ಯೋಗ ಲಭಿಸಿದ ನಂತರ ವಿವಾಹವನ್ನು ಮಾಡಿಸಿ ಹುಟ್ಟುವ ತಮ್ಮ ಮೊಮ್ಮಕ್ಕಳಿಗೂ ಮಕ್ಕಳಿಗೆ ಮಾಡಿದ ರೀತಿಯಲ್ಲಿ ಎಲ್ಲಾ ಕಾರ್ಯಗಳನ್ನು ನೆರವೇರಿಸುವಂತಹ ಪೋಷಕ ಪಾತ್ರದಾರಿಗಳು ನಿಜಕ್ಕೂ ಅಭಿನಂದನೀಯ. ಆದರೆ ಕೆಲವರಿಗೆ ಇದು ಲಭ್ಯವಾಗದೇ ಇರಬಹುದು.
ಇವರ ನಂತರ ಬರುವುದೇ ಗುರುಗಳ ಪಾತ್ರ, ತನ್ನ ಮಕ್ಕಳು ಬೆಳೆದು ವಿದ್ಯಾವಂತರಾಗಲು ಶಾಲೆಗೆ ಕಳುಹಿಸುವ ಜವಾಬ್ದಾರಿ ಹೆತ್ತವರಿಗಾದರೆ, ತನ್ನ ಶಿಷ್ಯರನ್ನು ವಿದ್ಯಾವಂತರನ್ನಾಗಿ ಮಾಡಿ, ಜೀವನದಲ್ಲಿ ಶಿಸ್ತನ್ನು ಕಲಿಸುವ ಜವಾಬ್ದಾರಿ ಗುರುಗಳಾಗಿರುತ್ತದೆ. ಇವರಿಂದ ವಿದ್ಯೆ ಕಲಿತು ಉದ್ಯೋಗ ಪಡೆದು ತನ್ನ ಸ್ವಂತ ದುಡಿಮೆ ಮಾಡಿ ಸಾಕಿ ಸಲಹಿದ ತನ್ನ ತಂದೆ ತಾಯಿಯರನ್ನು ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳದಾಗಿರುತ್ತದೆ.

ಸ್ನೇಹಿತರ ಪಾತ್ರಗಳು ಜೀವನದಲ್ಲಿ ಅತಿ ಮುಖ್ಯ. ಕೆಲವರಿಗೆ ಹುಟ್ಟಿದಾಗಿನಿಂದಲೂ ಸಾಯುವವರೆಗೂ ಕೆಲವರು ಸ್ನೇಹಿತರಾಗಿರುತ್ತಾರೆ. ಆದಾಗ್ಯೂ ಇವರುಗಳ ಜೊತೆಗೆ ಸಂದರ್ಭಕ್ಕೆ ತಕ್ಕಂತೆ, ಸನ್ನಿವೇಶಕ್ಕೆ ತಕ್ಕಂತೆ ಕೆಲವಾರು ಸಂದರ್ಭಗಳಲ್ಲಿ ಸ್ನೇಹಿತರು ಲಭಿಸುತ್ತಾರೆ. ಇನ್ನು ಕೆಲವರಿಗೆ ಶಾಲೆಗಳಲ್ಲಿ, ಕಾಲೇಜುಗಳಲ್ಲಿ, ಉದ್ಯೋಗ ತಾಣಗಳಲ್ಲಿ, ಹೀಗೆ ಅನೇಕ ಸಂದರ್ಭಗಳಲ್ಲಿ ಸ್ನೇಹಿತರು ಲಭಿಸುತ್ತಾರೆ. ಇವರುಗಳು ಸಂದರ್ಭಕ್ಕೆ ತಕ್ಕಂತೆ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಪೋಷಕ ಪಾತ್ರವನ್ನು ನಿರ್ವಹಿಸುತ್ತಿರುತ್ತಾರೆ. ಒಳ್ಳೆ ಸ್ನೇಹಿತರು ಸಿಕ್ಕಿ ಒಳ್ಳೆ ಗುಣಗಳನ್ನು ಕಲಿತು ಒಳ್ಳೆಯವರಾಗಿ ಬದುಕಿದರೆ ಆ ಸ್ನೇಹಕ್ಕೆ ಒಂದು ಬೆಲೆ ಇರುತ್ತದೆ. ಕೆಟ್ಟ ಚಟಗಳಿಗೆ ಬಲಿಯಾಗಿ, ತಾನೂ ಕೆಟ್ಟು, ತನ್ನ ಸ್ನೇಹಿತರುಗಳನ್ನು ದುರ್ಮಾರ್ಗಕ್ಕೆ ಕೊಂಡೊಯ್ಯುವ ಸ್ನೇಹಿತರುಗಳ ಪಾತ್ರ ಅತಿ ಘೋರವಾದದ್ದು. ಇದರಿಂದ ಯಾರಿಗೂ ಉಪಯೋಗವಿಲ್ಲದಂತಾಗುತ್ತದೆ ಹಾಗೂ ಜೀವನವೇ ಹಾಳಾಗಿ ಹೋಗುವ ಸಂಭವುಂಟು. ಇದರಿಂದ ಸಮಾಜದಲ್ಲಿಯೂ ಗೌರವ ಕಳೆದುಕೊಳ್ಳುವಂತೆ ಮಾಡುವ ಸ್ನೇಹ ಖಂಡಿತಾ ಸ್ನೇಹವೇ ಅಲ್ಲ. ಇದರಿಂದ ಯಾರಿಗೂ ನೆಮ್ಮದಿ ಇರುವುದಿಲ್ಲ. ಹೆತ್ತವರ ವಂಶಕ್ಕೆ ಒಂದು ಕಳಂಕವಿದ್ದಂತೆ ಆಗುತ್ತದೆ.

RELATED ARTICLES  ಆಲಸ್ಯ ಹಿಂದೂಡಿ ಉಲ್ಲಾಸವನ್ನು ಚಿಗುರಿಸಿಕೊಳ್ಳಿ

ಮದುವೆಯಾದ ನಂತರ ಬರುವ ಪತ್ನಿಯು ಕಡೇವರೆವಿಗೂ ತನ್ನ ಗಂಡನ ಜೊತೆ ಬಾಳಿ ಬದುಕುವಂತ ಪೋಷಕ ಪಾತ್ರದಾರಿ. ಇದು ಸಹ ಅತಿ ಮುಖ್ಯ ಹಾಗೂ ಜವಾಬ್ದಾರಿಯುತ ಪೋಷಕ ಪಾತ್ರವೆಂದೇ ಹೇಳಬಹುದು. ವಿವಾಹವಾದಾಗಿನಿಂದ ತನ್ನ ಗಂಡನ ಬೇಕು ಬೇಡಗಳನ್ನು ಅರ್ಥ ಮಾಡಿಕೊಂಡು ಸಹ ಬಾಳ್ವೆ ನಡೆಸುವ ಪತ್ನಿಯರು ನಿಜಕ್ಕೂ ಶ್ಲಾಘನೀಯ. ಆದರೆ ಕೆಲವೊಂದು ಸಂದರ್ಭಗಳು ಇಬ್ಬರನ್ನೂ ಕೆಟ್ಟವರಂತೆ ಮಾಡುತ್ತದೆ. ಯಾವ ಸಂದರ್ಭ ಬಂದರೂ ಕೆಲವರು ತನ್ನ ಕುಟುಂಬದ ರಕ್ಷಣೆಗಾಗಿ ಕೆಲವೊಂದು ತ್ಯಾಗಮಾಡಿ ಕುಟುಂಬವನ್ನು ರಕ್ಷಿಸುವ ಮನೋಭಾವ ಉಳ್ಳವರಿರುತ್ತಾರೆ. ಗಂಡ ಅಥವಾ ಹೆಂಡತಿ ಎಷ್ಟೇ ಕೆಟ್ಟವರಾದರೂ ಅನುಸರಿಸಿ ಬಾಳ್ವೆ ಮಾಡಿಕೊಂಡು ತನ್ನ ಮಕ್ಕಳ ಲಾಲನೆ ಫೋಷಣೆ ಮಾಡಿಕೊಂಡು ತನ್ನ ಮಕ್ಕಳಿಗೆ ಒಂದು ದಾರಿಯನ್ನು ಮಾಡಿಕೊಡುವವರು ಅದೆಷ್ಟೋ ಮಂದಿ ಇದ್ದಾರೆ. ಆದರೆ ಕೆಲವರು ಇದಕ್ಕೆ ತದ್ವಿರುದ್ದವಾಗಿಯೂ ಇರಬಹುದು. ಇದಕ್ಕೆ ಕಾರಣವೇ ಇರುವುದಿಲ್ಲ. ಸಣ್ಣ ಸಣ್ಣ ವಿಚಾರಗಳಿಗೆ ವೈಮನಸ್ಯ ಮಾಡಿಕೊಂಡು ತಮ್ಮ ಸಂಸಾರವನ್ನೇ ಅಲ್ಲೋಲ ಕಲ್ಲೋಲ ಮಾಡುವವರು ಕೆಲವರು ಇದ್ದಾರೆ. ಈ ಕಡೆ ಇವರ ಜಗಳದಲ್ಲಿ ಮಕ್ಕಳು ಅನಾಥರಾಗುತ್ತಾರೆ. ಕೆಲವೊಂದು ಸ್ವಯಂಕೃತ ಅಪರಾಧದಿಂದಲೂ ಎಷ್ಟೋ ಸಂಸಾರಗಳು ಒಡೆದು ಹೋಗಿರುವ ನಿದರ್ಶನಗಳು ಉಂಟು. ಇದಕ್ಕೆ ಯಾರನ್ನೂ ಹೊಣೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಉಭಯತ್ರರ ಸ್ವಾಭಿಮಾನ ಹಾಗೂ ಪ್ರತಿಷ್ಠೆಗಳೇ ಕಾರಣ. ಯಾರಾದರೂ ಒಬ್ಬರು ಸೋತರೂ ಜೀವನದಲ್ಲಿ ಸಾಮರಸ್ಯ ಮೂಡುತ್ತದೆ. ನಾನ್ಯಾಕೆ ಸೋಲಬೇಕು ಎಂಬ ಮನೋಭಾವದಿಂದ ಯಾರೂ ಸೋಲಲು ಮನಸ್ಸು ಮಾಡುವುದಿಲ್ಲ. ಸಂಸಾರ ಒಡೆದು ಹೋದರೂ ಸಹ ತಮ್ಮ ಪ್ರತಿಷ್ಠೆಯನ್ನು ಬಿಡುವುದೇ ಇಲ್ಲ. ಇದರಿಂದ ಯಾರಿಗೂ ಲಾಭವಿಲ್ಲ. ಚಿಂತೆ ದುಃಖ ಸಂಸಾರದಲ್ಲಿ ಮೂಡಿ ಅಶಾಂತಿ ಮನೆ ಮಾಡುತ್ತದೆ.

RELATED ARTICLES  ಕಾದಿರುವ ದಿನ….!

ತಂದೆ ತಾಯಿಗಳು ವೃದ್ದಾಪ್ಯಕ್ಕೆ ಬಂದಾಗ ಯಾರದ್ದಾದರೂ ಆಶ್ರಯ ಬೇಕೇ ಬೇಕು. ಆ ಪಾತ್ರವನ್ನು ಮಕ್ಕಳು ನಿರ್ವಹಿಸಬೇಕಾದ್ದು ಮಕ್ಕಳ ಕರ್ತವ್ಯ. ಈ ಸಮಯದಲ್ಲಿ ಮಕ್ಕಳ ಪಾತ್ರಗಳು ತಂದೆ ತಾಯಿಗಳಿಗೆ ತುಂಬಾ ಮುಖ್ಯ. ಬೇರೊಬ್ಬರ ಮಾತನ್ನು ಕೇಳದೆ ತಮ್ಮ ತಂದೆ ತಾಯಿಗಳೆಂಬ ಅಭಿಮಾನ ಮತ್ತು ಪ್ರೀತಿಯಿಂದ ಅವರ ಕಡೆಗಾಲದಲ್ಲಿ ಸಂತೋಷದಿಂದ ಇರುವಂತೆ ಮಕ್ಕಳು ಇದ್ದರೂ ಸಹ ಬೇರೆಯವರ ಮಾತು ಕೇಳಿಕೊಂಡು ತಂದೆ ತಾಯಿಗಳನ್ನು ವೃದ್ದಾಶ್ರಮಕ್ಕೆ ಬಿಡುವುದು ಖಂಡಿತಾ ತರವಲ್ಲ. ಹಿರಿಯ ತಂದೆ ತಾಯಿಗಳ ಆಶೀರ್ವಾದ ಇದ್ದರೆ ಎಲ್ಲಾ ಕೆಲಸಗಳಲ್ಲಿಯೂ ಜಯ ಲಭಿಸುತ್ತದೆ.

ವೃದ್ದಾಪ್ಯ ಬಂದಾಗ ಧರ್ಮ ಗುರುಗಳ ಪಾತ್ರವೇ ಅತಿ ಮುಖ್ಯವಾದ ಪಾತ್ರವಾಗಿರುತ್ತದೆ. ಕೆಲವರು ಲೌಕಿಕದಿಂದ ಆಧ್ಯಾತ್ಮತೆ ಕಡೆಗೆ ಮುಖ ಮಾಡಿದ್ದಲ್ಲಿ ಆಗ ಧರ್ಮಗುರುಗಳ ಪಾತ್ರವು ಅತಿ ದೊಡ್ಡದಾಗಿರುತ್ತದೆ. ತಮ್ಮಲ್ಲಿಗೆ ಬರುವ ಭಕ್ತಾದಿಗಳಿಗೆ ದೇವರ ಸಾನಿಧ್ಯವನ್ನು ಪಡೆಯುವ ರೀತಿಯನ್ನು ಭೋಧನೆ ಮಾಡಿ ಅವರುಗಳು ದೇವರ ಸಾನಿಧ್ಯವನ್ನು ಪಡೆಯಲು ಕಾರಣಕರ್ತರಾಗುವ ಗುರುಗಳು ದೈವ ಸಮಾನರಾಗಿರುತ್ತಾರೆ.

ಇನ್ನು ಜೀವನದಲ್ಲಿ ಎಲ್ಲಾ ಕಷ್ಟ ಸುಖಗಳನ್ನು ಅನುಭವಿಸಿ, ಕೊನೆಯುಸಿರೆಳೆದ ನಂತರ ಬರುವ ಪಾತ್ರಗಳು ಬಂದು ಮಿತ್ರರು ಸ್ನೇಹಿತರು ಎಲ್ಲಾ ಅಪರ ಕರ್ಮಾದಿಗಳನ್ನು ಮಕ್ಕಳಿಂದ ಮಾಡಿಸಿ, ಮೃತರಿಗೆ ಸದ್ಗತಿಯನ್ನು ಕೊಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವವರು ನಿಜಕ್ಕೂ ಧನ್ಯರು.

ಇನ್ನು ಕೆಲವಾರು ಸಂದರ್ಭಗಳಲ್ಲಿ ಕೆಲವು ಕಾಲ ಸಂದರ್ಭಕ್ಕೆ ಅನುಸಾರವಾಗಿ ಬಂದು ಹೋಗುವ ಅನೇಕ ಪೋಷಕ ಪಾತ್ರದಾರಿಗಳು ಬಂದು ಹೋಗುತ್ತಾರೆ. ಜೀವನದಲ್ಲಿ ಬರುವ ಎಲ್ಲಾ ಪಾತ್ರದ ಜನರೂ ಒಂದಲ್ಲ ಒಂದು ರೀತಿಯಲ್ಲಿ ಪರಸ್ಪರ ಸಹಾಯಕರಾಗಿರುತ್ತಾರೆ. ಈ ಉಪಕಾರದ ಗುಣವನ್ನು ಮನುಷ್ಯನಾದವನು ನೆನೆದರೆ ಅವನ ಜನ್ಮ ಸಾರ್ಥಕವಾದಂತೆ ಆಗುತ್ತದೆ. ಸಹಾಯ ಮಾಡದವರು ಪಾತ್ರದಾರಿಗಳಾಗಲು ಸಾಧ್ಯವಿಲ್ಲ. ಯಾವುದೇ ಪೋಷಕರ ಪಾತ್ರವಿಲ್ಲದೆ ಬದುಕುವುದು ಮನುಷ್ಯನಿಗೆ ಬಹಳ ಕಠಿಣವಾದ ಸವಾಲಾಗಿರುತ್ತದೆ. ಆದರೆ ಈ ಸವಾಲಿನಲ್ಲಿ ಮನುಷ್ಯನಾದವನು ಖಂಡಿತಾ ಜಯಗಳಿಸಲಾರ. ಪ್ರೀತಿ ವಿಶ್ವಾಸ ಎಲ್ಲವನ್ನೂ ಹೊಂದಿದ್ದರೆ ಪೋಷಕ ಪಾತ್ರದಾರಿಗಳ ಸಹಾಯ ಲಭಿಸುತ್ತದೆ.

ಹೀಗೆಯೇ ಪ್ರತಿಯೊಂದು ಕ್ಷೇತ್ರದಲ್ಲಿಯೂ ಪ್ರತಿಯೊಬ್ಬರಿಗೂ ಪೋಷಕ ಪಾತ್ರದಾರಿಗಳು ಅತ್ಯವಶ್ಯವಕವಾಗಿ ಬೇಕು. ಪಾತ್ರದಾರಿಗಳು ಇಲ್ಲದೆ ಜೀವನ ನಡೆಸುವವರು ಎಲ್ಲೂ ಕಂಡು ಬರುವುದಿಲ್ಲ. ಸ್ವಂತವಲ್ಲದಿದ್ದರೂ ಸಂಬಳ ಕೊಟ್ಟು ನೇಮಕ ಮಾಡಿಕೊಳ್ಳುವವರೂ ಇರುತ್ತಾರೆ. ಇಲ್ಲಿ ಹಣವೇ ಮುಖ್ಯವಾಗಿರುತ್ತದೆ. ಯಜಮಾನ ಮತ್ತು ಕೆಲಸಗಾರರ ಸಂಬಂಧ ಇರುತ್ತದೆ. ಒಟ್ಟಿನಲ್ಲಿ ಹುಟ್ಟಿನಿಂದ ಸಾಯುವವರೆಗೂ ಮನುಷ್ಯನ ಜೀವನದಲ್ಲಿ ಅನೇಕ ಪಾತ್ರದಾರಿಗಳು ಸಹಾಯಕ್ಕಾಗಿ ಬಂದು ಹೋಗುತ್ತಾರೆ.