Shubha Giranimane

ಎರಡು ಸಾವಿರದ ಹದಿನೇಳು ಕಳೆದು ಹೋಯಿತು. ಕೇವಲ ಈ ಇಸವಿ ಮಾತ್ರವಲ್ಲ. ನಮ್ಮ ಹುಟ್ಟು ಎಂದಾಯಿತೋ ಅಲ್ಲಿಂದಲೂ ವರ್ಷಗಳನ್ನು ದಾಟುತ್ತಲೇ ಬಂದಿದ್ದೇವೆ. ನಮ್ಮ ಹುಟ್ಟಿನಿಂದ ಇವತ್ತಿನ ತನಕ ವರ್ಷಗಳು ಕಳೆದಂತೆ ಸಂತಸವನ್ನು ಆಚರಿಸಿ ಮುಂದಿನ ದಿನಗಳು ಶುಭಕರವಾಗಿರಲಿ ಎಂದು ಹಾರೈಕೆ ವಿನಿಮಯಮಾಡಿಕೊಂಡಿದ್ದೇವೆ. ಹಾಗಾದರೆ ನಮ್ಮ ಹೊಸ ವರ್ಷದ ದಿನಚರಿಗಳು ಎನಿತಾದರೂ ಬದಲಾಗಿದೆಯೇ ಎಂದು ನೋಡಿಕೊಂಡರೆ ಉತ್ತರ ಅವರವರಿಗೆ ಗೊತ್ತಾಗುತ್ತದೆ. ನಿನ್ನೆ ಹೇಗೆ ಬದುಕುತ್ತಿದ್ದೇವೆಯೋ ಹಾಗೆ ಇವತ್ತು ಇದ್ದೇವೆ ಎಂದರೆ ಹೊಸವರ್ಷ ಆಚರಿಸಿ ಪ್ರಯೋಜನ ಏನಿದೆ ಅಲ್ಲವೇ?

ದಿನವೂ ಸೂರ್ಯ ಹುಟ್ಟುವಾಗಲು ಹೊಸತನವೇ ತುಂಬಿರುತ್ತದೆ. ನಮ್ಮ ಆಲಸ್ಯತನದಿಂದ ಅದನ್ನು ಗುರುತಿಸಲು ಸೋಲುತ್ತಿದ್ದೇವೆ. ನಿನ್ನೆಯಂತೆ ಇಂದು, ನಮ್ಮ ಹೊಟ್ಟೆ ತುಂಬಿದರೆ ಆಯಿತು. ಲೋಕದ ಗೊಡವೆ ನಮಗೇಕೆ ಎನ್ನುವವರ ಸಂಖ್ಯೆ ಹೆಚ್ಚು. ಹಾಗಂದ ಮಾತ್ರಕ್ಕೆ ಎಲ್ಲರೂ ಲೋಕೊದ್ಧಾರ ಮಾಡಲು ಆಗುವದಿಲ್ಲ. ಆದರೆ ಲೋಕದಲ್ಲಾಗುವ ಬದಲಾವಣೆಯನ್ನು ಗಮನಿಸಬೇಕು. ಆ ಬದಲಾವಣೆಗೆ ನಮ್ಮದಾದ ಒಂದು ಬಿಂದು ಕೊಡುಗೆ ನೀಡಬೇಕು. ಅದು ಆ ಕ್ಷಣಕ್ಕೆ ನಮಗೆ ಅಲ್ಪ ಎನ್ನಿಸಬಹುದು. ಎಲ್ಲರೂ ಅಲ್ಪವೆಂದುಕೊಂಡು ಮಾಡಿದ ಕೆಲಸ ಭೃಹತ್ ಆಗಿ ಬೆಳೇಯುವುದು “ಹನಿಹನಿ ಕೂಡಿದರೆ ಹಳ್ಳ” ಎನ್ನುವ ಗಾದೆ ಮಾತು ನೆನಪಲ್ಲಿದ್ದರೆ ಮುಂದೆ ನಮಗಾಗಿ ಮಾಡಿಕೊಂಡ ಹಲವು ಕಾರ್ಯ ಇನ್ನೊಬ್ಬರಿಗೆ ಅಥವಾ ಮುಂದಿನ ಪೀಳಿಗೆಗೆ ಸಹಾಯವಾಗುವುದು.

ಹೊಸ ವರ್ಷ ಎಂದರೆ ಕುಡಿದು ತಿಂದು ಮಸ್ತಿಮಜಾ ಮಾಡಿಬಿಟ್ಟರೆ ಅದು ಒಂದು ಮೋಜಾಗುವುದೇ ಹೊರತು ಹೊಸತೇನು ಆಗುವದಿಲ್ಲ. ಆ ದಿನದ ಮಟ್ಟಿಗೆ ಒಂದೆರಡು ಗಂಟೆ ಸಂತೋಷದಿಂದ ಎಲ್ಲರೊಟ್ಟಿಗೆ ಸ್ನೇಹಭರಿತ ಕೂಟ ಮಾಡಿದರೆ ಸ್ವಾಗತಾರ್ಹ. ಆ ನಂತರದ ದಿನಗಳು ಹೇಗೆ ಇರಬೇಕು? ನಿನ್ನೆಗಿಂತ ಇವತ್ತು ಹೊಸತಾಗಿರಬೇಕು. ಹಾಗೆ ನಾವು ಮುಂದುವರೆಯಬೇಕು ಎಂದುಕೊಳ್ಳುತ್ತೇವೆ ಅಲ್ಲವೆ? ಹಾಗೆ ಎಂದುಕೊಂಡರೆ ಸಾಲದು ಪ್ರಗತಿಗೆ ತರಬೇಕು.

RELATED ARTICLES  ಭಕ್ತಿ-ವೇಷ

ಒಬ್ಬ ಹಾಡುಗಾರ ಹಿಂದಿನ ವರ್ಷವೂ ಹಲವು ವೇದಿಕೆಯಲ್ಲಿ ಹಾಡಿದ್ದಾನೆ, ಸಮಾಜದಲ್ಲಿ ಗುರುತಿಸಿಕೊಂಡಿದ್ದಾನೆ. ಈ ವರ್ಷ ಆ ದಿನಗಳ ನೆನಪಲ್ಲಿ ಬಂದಷ್ಟೆ ಅವಕಾಶ ಬಳಸಿಕೊಂಡರೆ ಸಾಕಾಗುವುದಿಲ್ಲ. ಆತ ತನ್ನ ಹಾಡಿನ ಒಂದು ಝಲಕ್ಕನ್ನು ಸಿಡಿ ಮಾಡುವುದು, ಅಥವಾ ಸಿನೆಮಾ ಹಾಡುಗಳನ್ನು ಹಾಡುವುದಕ್ಕೆ ಅವಕಾಶ ಹುಡುಕುವುದು, ಅಥವಾ ಇಷ್ಟು ದಿನಗಳಲ್ಲಿ ಹಾಡಿರುವುದಕ್ಕಿಂತ ದೊಡ್ಡ ವೇದಿಕೆಯಲ್ಲಿ ಅತೀ ಗಣ್ಯರ ಮುಂದೆ ಹಾಡಲು ಪ್ರಯತ್ನಿಸುವುದು. ಇದೆಲ್ಲ ಆಗಬೇಕೆಂದರೆ ಆತ ಸತತ ಪ್ರಯತ್ನ ತನ್ನ ಹಾಡುಗಾರಿಕೆಯಲ್ಲಿ ಮಾಡಬೇಕು. ಶೃತಿ, ಲಯಗಳಿಗಾಗಿ ಹೆಚ್ಚಿನ ಒತ್ತು ನೀಡಬೇಕು. ಸಂಗೀತದಲ್ಲಿ ಕಲಿತು ಮುಗಿಯಿತು ಎನ್ನುವುದಿಲ್ಲ. ಅದರೊಳಗೆ ಇಳಿದು ಅಧ್ಯಯನ ಮಾಡಬೇಕು. ಒಬ್ಬ ಯಶಸ್ವಿ ಕಲಾವಿದ ಎನ್ನಿಸಿಕೊಳ್ಳಲು ಅನರವತ ಶ್ರಮ ಪಟ್ಟಾಗ ನಿರೀಕ್ಷೆ ದೊಡ್ಡದಿದ್ದರೂ ಚಿಕ್ಕ ಪ್ರಮಾಣದಲ್ಲಿ ಒಂದು ಸಾಧನೆ ಮಾಡಬಹುದು. ಮತ್ತೆ ಹೊಸವರ್ಷ ಬಂದಾಗ ಈ ವರ್ಷಕ್ಕಿಂತ ಹೆಚ್ಚಿನದಾದ ಶ್ರಮ ಅಲ್ಲಿ ಹಾಕಬೇಕು. ಇದ್ಯಾವುದು ಇಲ್ಲದೆ, ನಾನು ಕಲಿತಿದ್ದೇನೆ, ನಂಗೆ ಅವಕಾಶಗಳು ಕಮ್ಮಿ, ನಾನಿರುವುದು ಹೀಗೆ, ನನ್ನ ಸ್ನೇಹಿತರು ಇರುವುದು ಹೀಗೆ ಮತ್ತೆ ನಾನ್ಯಾಕೆ ಹಾಗೆ ಸತತ ಪ್ರಯತ್ನ ಮಾಡಬೇಕು. ಯಾಕೆ ತಲೆಬಿಸಿ ಮಾಡಿಕೊಳ್ಳುವುದು. ಜೀವನಕ್ಕೆ ಯಾವ ತೊಂದರೆ ಇಲ್ಲವಲ್ಲ ಎಂದು ಸುಮ್ಮನಾದರೆ ವರ್ಷಗಳು ಉರುಳಿ ಸರಾಗವಾಗಿ ನಮ್ಮಿಂದ ದೂರವಾಗುತ್ತದೆ.

RELATED ARTICLES  ಮನಸ್ಸು ಮಾನಸ ಸರೋವರದಂತಿರಲಿ.

ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಜನೆವರಿ 1 ಹೊಸವರ್ಷವಾದರೆ ಹಿಂದೂಗಳಿಗೆ ಯುಗಾದಿ ಹೊಸವರ್ಷವನ್ನು ಹೊತ್ತು ತರುತ್ತದೆ. ಯಾವ ಕಾಲಕ್ಕೆ ಹೊಸವರ್ಷ ಹುಟ್ಟಲಿ ನಮ್ಮೊಳಗೆ ಉತ್ಸಾಹವಿದ್ದಾಗ ದಿನವೂ ತುಡಿತದಲ್ಲಿ ಮುಂದೆನು ಮಾಡಬಹುದು ಎಂದು ಹುಡುಕಾಟ ಪ್ರಾರಂಭ ಆಗುತ್ತದೆ. ಆ ಹುಡುಕಾಟವೂ ಒಂದು ಹಂತಕ್ಕೆ ತಲುಪಿದಾಗಲೆಲ್ಲ ಹೊಸತನವೇ ಆಗಿದ್ದು ಆ ವರ್ಷದಲ್ಲಿ ನಮ್ಮದೊಂದು ಸಾಧನೆಯ ಮೆಟ್ಟಿಲು ಏರಿರುತ್ತೇವೆ. ನಮ್ಮಲ್ಲಿ ಹಿರಿಯರೊಬ್ಬರು ಊಟ ಮಾಡುವುದು ಒಂದು ಸಾಧನೆಯಲ್ಲೆ ಬರುತ್ತದೆ. ಇದು ಸಾಮಾನ್ಯ ಎನ್ನಿಸಬಹುದು. ಕೈ ಇಲ್ಲದವರನ್ನು ನೋಡಿ ಅನ್ನ ಸಂಪಾದಿಸಲು ಆಗದು, ಎದುರಿದ್ದ ಅನ್ನವನ್ನು ಕೈಯಿಂದ ಎತ್ತಿ ತಿನ್ನಲು ಸಾಧ್ಯಗದೆ ಅದಕ್ಕೆ ಪರ್ಯಾಯ ವ್ಯವಸ್ಥೆ ರೂಪಿಸಿಕೊಂಡು ಊಟ ಮಾಡುವುದು ನೋಡಿದಾಗ, ಊಟ ಮಾಡುವುದು ಹೇಗೆ ಸಾಧನೆ ಎನ್ನುವುದು ತಿಳಿಯುತ್ತದೆ’ ಎಂದಿದ್ದರು.

ಹೊಸವರ್ಷ ಬಂದ ಒಂದು ದಿನಕ್ಕೆ ಹೊಸ ಹುರುಪಿನ ಮನಸ್ಸು ಬೇಡ. ದಿನವೂ ಹೊಸತನದಲ್ಲಿ ತುಂಬಿದ ಕಾರ್ಯವು ಯಶಸ್ಸು ಕಾಣುವುದು. ದಿನ ಮುಂಜಾವನ್ನು ಹೊಸತಾಗಿ ಕಂಡಾಗ ಲವಲವಿಕೆ ತುಂಬಿ ದಿನವಿಡಿ ಚೇತನವಾಗಿ ನಮ್ಮ ಕೆಲಸ ಮಾಡಬಹುದು. ನಮ್ಮ ಮನಸ್ಸು ಸಂತಸದಲ್ಲಿದ್ದರೆ ನಾವು ಮಾಡುವ ಕೆಲಸದಲ್ಲೂ ಶ್ರದ್ಧೆ ಇರುತ್ತದೆ. ಇಂದಿನಿಂದ ದಿನವೂ ಹೊಸವರ್ಷವಾಗಲಿ ಎಂದು ಆಶಿಸೋಣ ಅಲ್ಲವೇ!