muralidhar 2

ಮನುಷ್ಯ ಜೀವನದ ಕಹಿ ಸತ್ಯ ಎಂದರೆ ನೋವಿನಿಂದ ಸಾವು ಸಾವಿನಿಂದ ನೋವು ಎನ್ನುವುದು. ನೋವಿನಿಂದ ಸಾವು ಎಂದರೆ ಮನುಷ್ಯ ಸೇರಿದಂತೆ ಪ್ರತಿಯೊಂದು ಜೀವಿಯು ತಾನು ಸಾಯುವಾಗ ನೋವನ್ನು ಅನುಭವಿಸಿಯೇ ಸಾಯುವುದು ಹಾಗೂ ಸಾಯುತ್ತಿರುವುದು ಇದು ಎಲ್ಲರೂ ತಿಳಿದ ವಿಷಯ.

ಹೃದಯಾಘಾತವೇ ಆಗಿರಬಹುದು ಬೇರೆ ಯಾವರೀತಿಯ ಖಾಯಿಲೆಯಿಂದಲಾದರೂ ಸಾಯಬಹುದು, ಅಫಘಾತದಿಂದ ಆತ್ಮಹತ್ಮೆಯಿಂದ ಅಥವಾ ಬೇರೊಬ್ಬರಿಂದ ಸಾವಾಗಿರಬಹುದು. ಹೃದಯಾಘಾತವಾಗಿ ಸತ್ತ ವ್ಯಕ್ತಿಯನ್ನು ನೋಡಿ ಎಲ್ಲರೂ ಎಂತಹಾ ಪುಣ್ಯಾತ್ಮನಪ್ಪ ಕೊರಗಲಿಲ್ಲ ಅಥವಾ ಒಬ್ಬರಿಗೆ ತೊಂದರೆ ಕೊಡದೆ ತನ್ನ ಇಹಲೋಕ ತ್ಯಜಿಸಿದನಲ್ಲಾ ಎಂದು ಹೇಳಬಹುದು. ಆದರೆ ಹೃದಯಘಾತವಾಗಿ ಸತ್ತ ವ್ಯಕ್ತಿಯೂ ಸಹ ಅಲ್ಪ ಸ್ವಲ್ಪ ನೋವು ಅನುಭವಿಸಿ ಸಾಯುತ್ತಾನೆ.

ಇದಕ್ಕಿಂತ ಭಿನ್ನ ಎಂದರೆ ದೀರ್ಘಾವದಿ ಖಾಯಿಲೆ ಇದ್ದು ಅದರಿಂದ ನರಳಿ ನರಳಿ ಸತ್ತರೆ ಅವನು ಎಂಥಹ ನೋವನ್ನು ಅನುಭವಿಸಿರುತ್ತಾನೆ. ಕೆಲವರು ಬದುಕಿದ್ದಾಗ ಮಾರಕ ಖಾಯಿಲೆಯಿಂದ ನರಳುತ್ತಿರುವ ಸಂದರ್ಭದಲ್ಲಿ ಅವರ ಮನಸ್ಸಿನಲ್ಲಿ ಅಥವಾ ಬೇರೆಯವರ ಎದುರಿನಲ್ಲಿ ಯಾವ ಶತ್ರುವಿಗೂ ಬೇಡಪ್ಪಾ ಈ ರೀತಿಯ ನೋವು ಎಂದು ಉದ್ಗರಿಸಿರುವುದು ಅನೇಕ ಸಂದರ್ಭಗಳಲ್ಲಿ ಕೆಲವರಿಗೆ ಅನುಭವವಾಗಿರಬಹುದು. ಇನ್ನೂ ಕೆಲವರು ಅನೇಕ ಖಾಯಿಲೆಗೆ ತುತ್ತಾಗಿ ಈ ಕಡೆ ಬದುಕಲಾರದೆ ಆ ಕಡೆ ಸಾಯಲಾರದೆ ಕೊರಗಿ ಕೊರಗಿ ಬೇರೊಬ್ಬರ ನಿಂದನೆಗೆ ಒಳಗಾಗಿ ಕಡೆಯಲ್ಲಿ ತಮ್ಮ ಪ್ರಾಣತ್ಯಾಗ ಮಾಡಬಹುದು.

ಮನುಷ್ಯ ಆತ್ಮಹತ್ಯೆಯಿಂದ ಸತ್ತರೂ ಅವನು ಸಾಯುವ ಘಳಿಗೆಯಲ್ಲಿ ಎಷ್ಟು ನೋವು ಅನುಭವಿಸು ತ್ತಾನೋ ಅನುಬವಿಸಿದವನಿಗೆ ಗೊತ್ತು. ಸತ್ತಮೇಲೆ ಏನೂ ತಿಳಿಯುವುದಿಲ್ಲ. ಅಪಘಾತವಾದಾಗ ಅನುಭವಿಸುವ ನೋವು ಎಲ್ಲರ ಕಣ್ಣಲ್ಲೂ ನೀರು ಬರಿಸುವಂತಾದ್ದು. ಅಪಘಾತವಾದ ತಕ್ಷಣ ಸತ್ತರೆ ಅರೆಕ್ಷಣ ಸ್ವಲ್ಪ ನೋವಿನಿಂದ ಪ್ರಾಣ ಪಕ್ಷಿ ಹಾರಿಹೋಗುತ್ತದೆ. ಗಂಭೀರ ಗಾಯಗಳಾಗಿ ರಸ್ತೆಗಳಲ್ಲಿ ಬಿದ್ದಾಗ ಅಮಾನವೀಯತೆಯಿಂದ ಯಾರೂ ಸಹಾಯಕ್ಕೆ ಬರದೆ ನರಳಿ ನರಳಿ ಸತ್ತರಂತೂ ಅವರು ಅನುಭವಿಸುವ ನೋವು ಯಾರಿಗೂ ಬೇಡ. ಅಸಹಾಯಕರಾಗಿ ಎಲ್ಲರಲ್ಲೂ ಸಹಾಯ ಮಾಡಿ ಎಂದು ಬೇಡಿಕೊಳ್ಳುವ ಪರಿಸ್ಥಿತಿ ನೋಡಿದರೆ ಮಾನವೀಯತೆ ಇರುವ ಎಂಥವರಿಗೂ ಕರುಳು ಕಿವುಚಿದಂತೆ ಆಗುತ್ತದೆ. ಅವರ ನೋವು ಎಷ್ಟರ ಮಟ್ಟಿಗೆ ಇರುತ್ತದೆ ಎಂದರೆ ಅವರು ಮನಸ್ಸಿನಲ್ಲಿ ಬೇಗ ಪ್ರಾಣ ಹೋಗಬಾರದೆ ಎಂದು ಹಲುಬುವಂತೆ ಆಗಿರುತ್ತದೆ.

ಕಡೆಯದಾಗಿ ಮನುಷ್ಯನು ತನ್ನ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಅತೀವ ಆಸೆ ಇಟ್ಟುಕೊಂಡಿರುವವರು ತನ್ನ ತಪ್ಪಿಲ್ಲದೆ ಬೇರೆಯವರಿಂದ ಸತ್ತರೆ, ಈ ಕಡೆ ಬದುಕಬೇಕೆಂಬ ಆಸೆ ಆದರೆ ಆಗಿರುವ ಗಾಯಗಳಿಂದ ಆಗುತ್ತಿರುವ ನೋವು ಎರಡರಿಂದಲೂ ಅತೀವವಾಗಿ ನೋವು ಅನುಭವಿಸಿ ಕಡೆಗೆ ಕೊನೆಯುಸಿರೆಳುಯುತ್ತಾರೆ. ಯಾವುದೇ ರೀತಿಯಲ್ಲಿ ಸತ್ತರು ಮನುಷ್ಯನು ವಿಭಿನ್ನ ರೀತಿಯ ನೋವನ್ನು ಅನುಭವಿಸಿಯೇ ಸಾಯುವುದು ಇದನ್ನು ಯಾರೂ ಅಲ್ಲಗಳೆಯುವುದಿಲ್ಲ.

RELATED ARTICLES  ಸುಮಾ ಹೆಗಡೆ ಗೆ ಪಿ.ಎಚ್.ಡಿ

ನೋವಿನಿಂದ ಸಾವು ಒಪ್ಪಬಹುದು ಆದರೆ ಸಾವಿನಿಂದ ನೋವು ಎಂದರೆ ಹೇಗೆ? ಸತ್ತವನು ಪುನಃ ನೋವು ಪಡಲು ಹೇಗೆ ಸಾಧ್ಯ ಎನ್ನಬಹುದು. ಆದರೆ ನೋವಿನಿಂದ ಸಾಯುವವನು ಒಬ್ಬನಾದರೆ ಅವನ ಸಾವಿನಿಂದ ನೋವು ಅನುಭವಿಸುವವರು ಅವರ ಹತ್ತಿರದ ಸಂಬಂಧಿಕರು.

ಮನೆಗೆ ಯಜಮಾನನಾಗಿ ದುಡಿಯುತ್ತಿದ್ದ ವ್ಯಕ್ತಿ ತಕ್ಷಣ ಹೃದಯಾಘಾತವಾಗಿ ಸತ್ತರೆ, ಅವನ ಹೆಂಡತಿ ಮಕ್ಕಳ ಪಾಡು ಹೇಳತೀರದು. ಅವನು ದುಡಿಯುತ್ತಿದ್ದಾಗ ಬರುತ್ತಿದ್ದ ಸಂಬಳದಿಂದ ಕುಟುಂಬವನ್ನು ಬೇರೆ ಯಾವುದೇ ಕೆಟ್ಟ ಚಟವಿಲ್ಲದೆ ನಡೆಸಿಕೊಂಡು ಹೋಗುತ್ತಿದ್ದ ಪಕ್ಷದಲ್ಲಿ ಅಲ್ಪ ಸ್ವಲ್ಪ ಹಣ ಇಟ್ಟಿರಬಹುದು ಅಥವಾ ಎಣ್ಣೆ ಬತ್ತಿ ನೇರ ಎಂಬಂತೆ ಜೀವನ ಸಾಗಿಸುತ್ತಿರಬಹುದು. ಮಕ್ಕಳು ದೊಡ್ಡವರಾಗಿ ದುಡಿಯುತ್ತಿದ್ದರೆ ಅಂತಹ ಕಷ್ಟವೇನೂ ಆಗುವುದಿಲ್ಲ. ಆದರೆ ಮಕ್ಕಳು ಇನ್ನೂ ಚಿಕ್ಕವರಿದ್ದರೆ ಇವನ ಅಕಸ್ಮಿಕ ನಿಧನದಿಂದ ಮನೆಯವರಿಗೆ ದೊಡ್ಡ ಹೊಡೆತ ಬಿದ್ದಂತಾಗಿ ಹೆಂಡತಿಯ ಮೇಲೆ ಮನೆಯ ಸಂಪೂರ್ಣ ಜವಾಬ್ದಾರಿ ಬಂದೊದಗುತ್ತದೆ. ಇದರಿಂದ ಎಷ್ಟು ನೋವು ಅನುಭವಿಸಬೇಕಾಗುತ್ತದೆ. ತಕ್ಷಣ ಕೆಲಸ ಸಿಕ್ಕರೆ ಪರವಾಗಿಲ್ಲ. ಅನಕ್ಷರಸ್ತಳಾಗಿದ್ದರೆ ಇವಳ ದುಃಖ ಇನ್ನೂ ಹೇಳ ತೀರದಂತಾಗಿರುತ್ತದೆ.

ದೀರ್ಘವಾದ ಕ್ಯಾನ್ಸರ್ ಅಥವಾ ಬೇರೆಯಾದ ಮಾರಕ ಖಾಯಿಲೆ ಬಂದು, ಆಸ್ಪತ್ರೆಗೆ ಸೇರಿ ತಿಂಗಳುಗಟ್ಟಲೆ ಕೊರಗಿ ಮೃತನಾದರೆ ಇದರಲ್ಲೂ ಕಷ್ಟವಾಗುವುದು ತನ್ನ ಹೆಂಡತಿ ಮಕ್ಕಳಿಗೆ. ಬದುಕಿ ಬರುತ್ತಾನೆ ಎಂಬ ಆಸೆಯಿಂದ, ಆಸ್ಪತ್ರೆ ಖರ್ಚು ಒದಗಿಸಲು ಸಾಲ ಮಾಡುವುದು. ದುರಾದೃಷ್ಟದಿಂದ ಬದುಕುಳಿಯದಿದ್ದರೆ ಇವನು ಸತ್ತ ನಂತರ ತಿಥಿ ಕಾರ್ಯಗಳಿಗೆ ಮಾಡುವ ಸಾಲ ಇವೆಲ್ಲವೂ ಬದುಕಿರುವವರನ್ನು ಬೆಂಬಿಡದೆ ಕಾಡುತ್ತದೆ. ಇದನ್ನು ತೀರಿಸಲಾಗದೆ ಸ್ವಂತ ಮನೆಯಿದ್ದಲ್ಲಿ ಅದನ್ನು ಮಾರಿಯಾದರೂ ಸಾಲವನ್ನು ತೀರಿಸಬೇಕಾದ ಪ್ರಸಂಗಗಳು ಬಂದೊದಗುತ್ತವೆ.

ಪೂರ್ವಾಪರ ತಿಳಿಯದೆ ಪ್ರೀತಿ ಮಾಡಿ, ನಂತರ ತಪ್ಪಿನ ಅರಿವಾಗಿ, ಪ್ರೇಮವೈಫಲ್ಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯಂತ ನಿರ್ಧಾರ ಕೈಗೊಂಡು ತಮ್ಮ ಅಮೂಲ್ಯವಾದ ಜೀವನವನ್ನೇ ಹಾಳು ಮಾಡಿಕೊಂಡರೆ ಅಥವಾ ಬೇರೆ ಯಾವುದೇ ಕಾರಣದಿಂದಲಾದರೂ ಅಂದರೆ ಮಾಡಿರುವ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡರೆ, ಇದರಿಂದ ಇವರನ್ನು ನಂಬಿರುವ ಮನೆಯವರಿಗೆ ಮಾತ್ರ ಕಷ್ಟ ನೋವು ಎದುರಾಗುತ್ತದೆ.

RELATED ARTICLES  ಕಳೆದು ಹೋದ ಎಳೆಯ ದಿನಗಳು (ಭಾಗ ೨೫)

ಅಪಘಾತವಾದಲ್ಲಿ ಆಸ್ಪತ್ರೆ ಖರ್ಚು ಹೊಂದಿಸಬೇಕಾಗುತ್ತದೆ. ಅನುಕೂಲವಿದ್ದರೆ ಪರವಾಗಿಲ್ಲ, ಇಲ್ಲದಿದ್ದಲ್ಲಿ ಸಾಲ ಮಾಡಬೇಕಾದ ಪರಿಸ್ಥಿತಿ ಬರಬಹುದು. ಸಾಲ ಮಾಡಿ ಜೀವ ಉಳಿದು ಅಂಗವೈಕಲ್ಯವಾದರೆ, ಇನ್ನೊಂದು ರೀತಿಯ ಕಷ್ಟ ಆವರಿಸಬಹುದು. ಸರಿ ಹೋಗುವವರೆಗೂ ಕಷ್ಟ ತಪ್ಪಿದ್ದಲ್ಲ. ಮಾನಸಿಕ ಹಿಂಸೆಯ ಜೊತೆಗೆ ಭವಿಷ್ಯದ ಚಿಂತೆಯು ಎದುರಾಗುತ್ತದೆ.

ಬೇರೆಯವರಿಂದ ಹಿಂಸೆಗೆ ಒಳಗಾಗಿ ಸತ್ತರೆ, ಆರ್ಥಿಕವಾಗಿ ನಷ್ಟದ ಜೊತೆಗೆ ಒಂದು ರೀತಿಯ ದ್ವೇಷ ಮನೋಭಾವ ಉಂಟಾಗುತ್ತದೆ. ಕೋರ್ಟಿಗೆ ಅಲೆಯುವ ಪ್ರಸಂಗ ಬರಬಹುದು. ಹಿಂಸೆ ನೀಡಿದವನು ಅಕಸ್ಮಾತ್ ನಿರಪರಾಧಿಯಾದರೆ, ಶಿಕ್ಷೆ ಕೊಡಿಸಲೇ ಬೇಕೆಂಬ ಹಠದಿಂದ ಬೇರೆ ಕೋರ್ಟಿಗೆ ಹೋಗುವ ಪ್ರಸಂಗ ಬರಬಹುದು. ಇದರಿಂದ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಕುಗ್ಗಬಹುದು. ಒಂದು ಕಡೆ ಮನೆಯವರನ್ನು ಕಳೆದುಕೊಂಡಿರುವ ಸಂಕಟ, ಮತ್ತೊಂದೆಡೆ ಕೋರ್ಟಿನ ಅಲೆದಾಟ, ದ್ವೇಷ ಹೆಚ್ಚಾಗಿ ಮಾನಸಿಕ ನೆಮ್ಮದಿ ಹಾಳಾಗುವ ಸಂಭವವೂ ಇರುತ್ತದೆ.

ಇದನ್ನೆಲ್ಲಾ ನೋಡಿದರೆ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಎಂದು ಆಲೋಚಿಸಿದರೆ, ಖಂಡಿತಾ ಕೆಲವೊಂದು ಪ್ರಸಂಗಗಳಲ್ಲಿ ಮಾತ್ರ ತಪ್ಪಿಸಿಕೊಳ್ಳಬಹುದು ಎನಿಸುತ್ತದೆ. ಮಾನಸಿಕ ಒತ್ತಡ ಹೊಂದದೆ ಎಚ್ಚರಿಕೆಯಿಂದ ಜೀವನ ನಡೆಸುವುದು, ಯಾರಲ್ಲೂ ದ್ವೇಷ ಕಟ್ಟಿಕೊಳ್ಳದೆ ಯಾರಿಗೂ ಮೋಸ, ವಂಚನೆ ಮಾಡದೆ ಸ್ನೇಹದಿಂದ ಅಜಾತಶತೃವಿನಂತೆ ಜೀವನ ನಡೆಸುವುದು, ಹಾಸಿಗೆ ಇದ್ದಷ್ಟು ಕಾಲುಚಾಚು ಎಂಬಂತೆ ಇರುವ ಸಂಪಾದನೆಯಲ್ಲಿಯೇ ಹೆಚ್ಚಿನ ಸಾಲ ಮಾಡದೆ ಹಿತಮಿತವಾಗಿ ಸಂಸಾರವನ್ನು ತೂಗಿಸಿಕೊಂಡು ಹೋಗುವುದು. ರಸ್ತೆಗಳಲ್ಲಿ ಜಾಗರೂಕತೆಯಿಂದ ನಡೆಯುವುದು ಅಥವಾ ತಾವೇ ವಾಹನಗಳನ್ನು ಚಾಲನೆ ಮಾಡುತ್ತಿರುವಾಗ ಅತಿಯಾದ ವೇಗದಿಂದ ಹೋಗದೆ, ಮನೆಯಲ್ಲಿ ಹೆಂಡತಿ ಮಕ್ಕಳು ತಂದೆ ತಾಯಿ ನಮ್ಮನ್ನು ಕಾಯುತ್ತಿರುತ್ತಾರೆಂದು ತಿಳಿದು ಅತಿ ಜಾಗರೂಕತೆಯಿಂದ ಹುಷಾರಾಗಿ ವಾಹನ ಚಾಲನೆ ಮಾಡಿಕೊಂಡು ಹೋಗುವುದು ಬುದ್ದಿವಂತರ ಲಕ್ಷಣ. ಪೂರ್ವಾಪರ ತಿಳಿಯದೆ ಪ್ರೀತಿ ಮಾಡುವುದರ ಬದಲು ಮನೆಯವರ ಸಲಹೆಯಂತೆ ನಡೆಯುವುದು ಒಳಿತು. ದೇವರಲ್ಲಿ ಭಕ್ತಿ ಇಟ್ಟು ಗುರುಹಿರಿಯರನ್ನು ಗೌರವದಿಂದ ನೋಡಿದ್ದಲ್ಲಿ, ಕೆಲವೊಮ್ಮೆ ದೈವಸಹಾಯದಿಂದ ಎಂಥಹ ಕಷ್ಟದಿಂದ ಬೇಕಾದರೂ ಪಾರಾಗಬಹುದು. ಅದೇ ರೀತಿ ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿ ಒಳ್ಳೆಯ ವ್ಯಕ್ತಿಯಾಗಲು ಪ್ರಯತ್ನಿಸಿದರೆ ಸಮಾಜಕ್ಕೆ ಒಳ್ಳೆಯ ಕೊಡುಗೆಯಾಗುತ್ತದೆ ಹಾಗೂ ತಮ್ಮ ಅಮೂಲ್ಯವಾದ ಜೀವವನ್ನು ಕಾಪಾಡಿಕೊಳ್ಳಬಹುದು ಎನಿಸುತ್ತದೆ.
ಎನ್. ಮುರಳೀಧರ್