ಜೀವನದಲ್ಲಿ ಎಷ್ಟೇ ಕೆಳಗೆ ಬಿದ್ದರೂ ಏಳಲು ಸಾಧ್ಯವಿದೆ. ಪಾಪದ ನಂತರ ತಾಪ ಬಂದರೆ, ಪಶ್ಚಾತ್ತಾಪ ಬಂದರೆ ಪಾಪ ನಾಶವಾಗುತ್ತದೆ. ಎರಡಕ್ಷರದ ತಪ್ಪು ಎಂಬ ಶಬ್ದವಿರದಿದ್ದರೆ ಭೀತಿ ಎಂಬ ಎರಡಕ್ಷರವಿಲ್ಲ. ಪಾಪಪ್ರಜ್ಞೆ ನಮ್ಮಲ್ಲಿದ್ದರೆ, ನಮ್ಮ ತಪ್ಪುಗಳೂ ಕಡಿಮೆಯಾಗುತ್ತವೆ.
ಅರಿತು ಮಾಡುವುದು ಮಾತ್ರ ಪಾಪ. ಅರಿಯದೇ ಮಾಡಿದ ಪಾಪ ಪಾಪವಲ್ಲ” ದೇವರ ಭಯವೇ ಜ್ಞಾನದ ಆರಂಭ ಎನ್ನುವ ಮಾತಿದೆ. ಯಾರ ಭಯವಿರದಿದ್ದರೂ ನಮಗೆ ದೇವರ ಭಯವಿರಬೇಕು. ಯಾವುದನ್ನು ನಾವು ದುರುಪಯೋಗ ಮಾಡಿಕೊಳ್ಳುತ್ತೇವೆಯೋ ಅದು ನಮ್ಮ ಪಾಲಿಗೆ ಇಲ್ಲದಂತೆ ಮಾಡುತ್ತಾನೆ ದೇವರು ಎಂಬ ಅರಿವಿರಬೇಕು ಪದವಿಯ ಮದ ಹದಮೀರಿದರೆ ಆಗಬಾರದ್ದು ಆಗುತ್ತದೆ. ಅನ್ಯ ಕ್ಷೇತ್ರದಲ್ಲಿ ಪಾಪ ಮಾಡಿದರೆ ಪುಣ್ಯಕ್ಷೇತ್ರದಲ್ಲಿ ಪರಿಹರಿಸಿಕೊಳ್ಳಬಹುದು.
ಆದರೆ ಪುಣ್ಯಕ್ಷೇತ್ರದಲ್ಲಿ ಮಾಡಿದ ಪಾಪ ಅದು ವಜೃಲೇಪ. ಅದಕ್ಕೆ ಪರಿಹಾರವಿಲ್ಲ. ಮನ ಬಯಸಿದ ಮಾತ್ರಕ್ಕೆ ಅಕಾಲ-ಸಕಾಲವಾಗದು, ಸುಕಾಲವಾಗದು, ಕಾಲಕ್ಕೆ- ಸ್ಥಳಕ್ಕೆ ತಕ್ಕಂತ ವ್ಯವಹಾರವಿರಬೇಕು. ಮಾಯೆಯ ಮೋಹವನ್ನು ಭೇದಿಸಿ ಭಗವಂತನನ್ನು ಕಾಣುವುದೇ ತಪ್ಪಸ್ಸು ಎಂಬ ಮಾತನ್ನು ನೆನಪಿನಲ್ಲಿಟ್ಟುಕೊಂಡು ನಮ್ಮ ನಡೆ-ನುಡಿಗಳನ್ನು ರೂಢಿಸಿಕೊಳ್ಳೋಣ. ಎದ್ದವರನ್ನು ಎತ್ತಲು ಜಗತ್ತಿನಲ್ಲಿ ಬಹಳ ಜನರಿದ್ದಾರೆ. ಆದರೆ ಬಿದ್ದವರನ್ನು ಎತ್ತುವವರಿಲ್ಲ ಎಂಬ ಎಚ್ಚರವಿರಲಿ.