ಪ್ರಭಲ ಹಿಂದುತ್ವ ವಾದಿ ಹಾಗೂ ಬಿಜೆಪಿಯಲ್ಲಿ ಈಗ ಎಲ್ಲರನ್ನು ಆಕರ್ಷಿಸುತ್ತಿರುವ ಪ್ರಮುಖರಾದ ಯೋಗಿ ಆದಿತ್ಯನಾಥ ಹಾಗೂ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳು ಇತ್ತೀಚಿಗೆ ಭೇಟಿಯಾದ ವಿಚಾರ ಅನೇಕರಿಗೆ ತಿಳಿದೆ. ಇದೊಂದು ಆಪ್ತ ಹಾಗೂ ಉಭಯ ಕುಶಲೋಪರಿಯ ಭೇಟಿಯೇ ಆದರೂ ಈ ಭೇಟಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ ಎಂಬ ಸಂತಸ ಸಕಲ ಭಕ್ತ ಸಮೂಹದಲ್ಲಿದೆ.

ಹೌದು ಗ್ರಾಮ ಒಕ್ಕಲು ಹಾಗೂ ಹಾಲಕ್ಕಿ ಸಮುದಾಯದ ಹೆಚ್ಚಿನ ಭಕ್ತರನ್ನು ಹೊಂದಿರುವ ಶ್ರೀ ಆದಿಚುಂಚನಗಿರಿ ಮಠದ 72ನೇ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥರು ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಆದಿಚುಂಚನಗಿರಿಯ ಪರಂಪರೆಯನ್ನು ಚಾಚೂ ತಪ್ಪದೆ ಅನೂಚಾನವಾಗಿ ಪಾಲಿಸುತ್ತ ಬಂದಿದ್ದಾರೆ. ಸಮಾಜ ಸಂಘಟನೆ ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ಅತ್ಯುತ್ತಮ ರೀತಿಯಲ್ಲಿ ನಡೆಸುತ್ತಿರುವ ಆದಿಚುಂಚನಗಿರಿ ಮಠದ ಶ್ರೀಗಳು ಹಾಗೂ ಅಪ್ರತಿಮ ಹಿಂದೂವಾದಿ ಯೋಗಿ ಆದಿತ್ಯನಾಥ್ ಭೇಟಿ ಶಿಲ್ಷಣ ಹಾಗೂ ದೇಶದ ಕೆಲ ಅತ್ಯುತ್ತಮ ಬದಲಾವಣೆಗೆ ಬುನಾದಿಯಾಗಲಿ ಎಂಬುದು ಭಕ್ತ ಜನತೆಯ ಆಶಯವಾಗಿದೆ.

RELATED ARTICLES  ಸ್ನೇಹ ಅದು ಅನನ್ಯವಾದ ಬಂಧ

ನಿರ್ಮಲಾನಂದರನ್ನು ನಾಥ ಪರಂಪರೆಯ 72ನೇ ಪೀಠಾಧ್ಯಕ್ಷರಾಗಿ, ಬಾಲಗಂಗಾಧರನಾಥ ಸ್ವಾಮೀಜಿಗಳ ಉತ್ತರಾಧಿಕಾರಿಯಾಗಿ ಘೋಷಿಸಿದ ನಂತರದಲ್ಲಿ ಅನೇಕ ಹೊಸ ಹೊಸ ಬದಲಾವಣೆ ಹಾಗೂ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡು ಅತ್ಯುತ್ತಮ ಸಮಾಜ ಸೇವೆಗೆ ಮುಂದಾಗಿರುವ ಇವರ ನಡೆಯನ್ನು ಯೋಗಿಯವರೂ ಮುಕ್ತ ಕಂಠದಿಂದ ಹೊಗಳಿದ್ದಾರೆ ಎಂಬುದು ಭಕ್ತರಲ್ಲಿ ಸಂತಸವನ್ನು ಇಮ್ಮಡಿಗೊಳಿಸಿದೆ.

ಮಹಾಂತ ಯೋಗಿ ಆದಿತ್ಯನಾಥ್ ಭಾರತೀಯ ಅರ್ಚಕ ಮತ್ತು ನಾಥ ಪಂಥದ ಧಾರ್ಮಿಕ ಮುಖ್ಯಸ್ಥ. “ಉಗ್ರ ಹಿಂದುತ್ವದ (ಹಿಂದೂ ರಾಷ್ಟ್ರೀಯತೆಯ)” ಮೂರ್ತರೂಪದ ರಾಜಕಾರಣಿ ಇವರು ಉತ್ತರ ಪ್ರದೇಶ ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ. ಮುಖ್ಯಮಂತ್ರಿ ಆಗಿರುವ ಮೊದಲು ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ತಾರಾ ವರ್ಚಸ್ಸಿನ ಚಳುವಳಿಗಾರ. 1998ರಿಂದ ಸತತ ಐದು ಅವಧಿಗೆ ಅವರು ಉತ್ತರ ಪ್ರದೇಶದ ಗೋರಕ್ಪುರ ಕ್ಷೇತ್ರದ, ಸಂಸತ್ ಸದಸ್ಯರಾಗಿದ್ದಾರೆ. ಗೋರಕ್ಪುರದ ಹಿಂದೂ ದೇವಾಲಯದ ಅರ್ಚಕರಾಗಿದ್ದರು.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಇವರೀರ್ವರ ಭೇಟಿಯ ಅಪೂರ್ವ ಕ್ಷಣ ಭಕ್ತರಲ್ಲಿ ಹಾಗೂ ಹಿಂದುಗಳಲ್ಲಿ ಹೊಸ ಸಂತಸ ತಂದಿದೆ. ಯೋಗಿಯವರನ್ನು ಭೇಟಿಮಾಡಿದ ಆದಿಚುಂಚನಗಿರಿ ಶ್ರೀಗಳಿಗೆ ಅಲ್ಲಿಯೇ ಅತ್ಯುತ್ತಮ ವಾಸ್ತವ್ಯ ಹಾಗೂ ಇನ್ನಿತರ ಸೇವೆಗಳನ್ನು ಹಾಗೂ ಅನುಷ್ಠಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಕೆಲಹೊತ್ತು ದೇಶದ ಅಭಿವೃದ್ಧಿ ಹಾಗೂ ಆಗು ಹೋಗುಗಳ ಕುರಿತಾಗಿ ಮಾತನಾಡಿ ಇವರಿಗೆ ಯೋಗಿಯವರು ಸ್ಮರಣಿಕೆ ನೀಡಿ ಆಶೀರ್ವಾದ ಪಡೆದರೆಂದು ಹೇಳಲಾಗಿದೆ.

ಸಂತ ಸಮಾಗಮ ಭಕ್ತ ಸಮೂಹದಲ್ಲಿ ಸಂತಸ ಮೂಡಿಸಿದ್ದಷ್ಟೇ ಅಲ್ಲ .ದೇಶದ ಹೊಸ ಅಧ್ಯಾಯಕ್ಕೆ ನಾಂದಿ ಹಾಡುತ್ತದೆಂಬ ಭರವಸೆ ಭಕ್ತರದ್ದು.