muralidhar 2

ಮನುಷ್ಯ ಬದುಕಿದ್ದಾಗ ಒಂದು ಕುಟುಂಬದ ಅಥವಾ ಮಕ್ಕಳು ಅಥವಾ ಒಡೆಯನಾಗಿದ್ದು, ಸತ್ತಮೇಲೆ ಅವನ ದೇಹವನ್ನು ಮಣ್ಣು ಮಾಡಬಹುದು ಅಥವಾ ಸುಡಬಹುದು. ಸುಟ್ಟನಂತರ ನದಿಯಲ್ಲಿ ವಿಸರ್ಜಿಸಲು ಅಸ್ತಿಯಾಗಬಹುದು, ಅಂತಹ ವ್ಯಕ್ತಿ ಸ್ವಂತ ಸ್ವತ್ತು ಅಥವಾ ಸಾರ್ವಜನಿಕರ ಸ್ವತ್ತಾಗಲು ಹೇಗೆ ಸಾಧ್ಯ ಎನ್ನುವುದುಂಟು.

ಹೆತ್ತವರಿಗೆ ಅವರ ಮಕ್ಕಳೇ ಸ್ವಂತ ಆಸ್ತಿ ಇದ್ದಂತೆ. ತಂದೆ ತಾಯಿಯರು ಪ್ರೀತಿ ವಿಶ್ವಾಸದಿಂದ ನೋಡುವಾಗ ಬೇರೊಬ್ಬರು ಪ್ರವೇಶಿಸಲಾರರು. ಆದರೆ ಮನುಷ್ಯನು ಅವರ ಕುಟುಂಬದ ಮಟ್ಟಿಗೆ ಸ್ವಂತ ಆಸ್ತಿಯಾದರೆ ಜೀವನ ಸಾರ್ಥಕವಾಗದು. ಮನುಷ್ಯ ಸಾರ್ವಜನಿಕರ ಸ್ವತ್ತು ಆಗಬೇಕಾದರೆ ಅಂತಹ ಮನುಷ್ಯನು ಬದುಕಿರುವಾಗ ಸದ್ಗುಣಗಳನ್ನು ಹೊಂದಿ ಪರೋಪಕಾರಿಯಾಗಿ, ಯಾವುದಾದರೂ ಕ್ಷೇತ್ರಗಳಲ್ಲಿ ಅದ್ವಿತೀಯ ಸೇವೆ ಸಲ್ಲಿಸಿ, ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನು ನೀಡಿದಾಗ ಮಾತ್ರ ಅವನನ್ನು ಎಲ್ಲರೂ ಪ್ರೀತಿ ವಿಶ್ವಾಸದಿಂದ ನೋಡುತ್ತಾರೆ. ಅಂತಹ ಮನುಷ್ಯನು ಬೆಲೆ ಕಟ್ಟಲಾಗದಂತಹ ಸಾರ್ವಜನಿಕರ ಸ್ವತ್ತಾಗಿರುತ್ತಾನೆ. ಆಗ ಯಾರೊಬ್ಬರ ಸ್ವಂತ ಸ್ವತ್ತು ಆಗಿರುವುದಿಲ್ಲ.

ತನ್ನ ಹುಟ್ಟಿದ ಊರಿನ ಅಭಿವೃದ್ದಿಗಾಗಿ ದುಡಿದು ಮಾದರಿ ಗ್ರಾಮವನ್ನಾಗಿಸಿದರೆ, ಕಲಾವಿದರಾದರೆ, ಸಾಹಿತ್ಯ ಸೇವೆ ಸಲ್ಲಿಸಿದರೆ, ಹೀಗೆ ಅನೇಕ ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡರೆ ಅಂತಹ ಮನುಷ್ಯನು ಎಲ್ಲರಿಗೂ ಚಿರಪರಿತನಾಗುವುದರ ಜೊತೆಗೆ ಸಮಾಜವು ವಿಶ್ವಾಸದಿಂದ ಹಾಗೂ ಗೌರವ ದಿಂದ ನೋಡುವಂತಾಗುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಹಾಗೂ ಜೀವವನ್ನೇ ಬಲಿಕೊಟ್ಟಿರುವ ಅನೇಕ ಮಹನೀಯರುಗಳನ್ನು ಹಾಗೂ ಪುಣ್ಯ ಪುರುಷರನ್ನು ಕಾಣುತ್ತಾ ಬಂದಿದ್ದೇವೆ. ಇವರೆಲ್ಲರೂ ತಮ್ಮ ಮನೆಯವರ ಸ್ವಂತ ಸ್ವತ್ತು ಎಂದಿಗೂ ಆಗದೆ ದೇಶದ ಎಲ್ಲ ಜನಗಳ ಸ್ವತ್ತಾಗಿದ್ದು ವಿಧಿವಶರಾದ ನಂತರವೂ ಮರೆಯದ ಮಾಣಿಕ್ಯದಂತಾಗಿ ದಂತಕಥೆಗಳಾಗಿರುವವರು. ಇದಕ್ಕೆ ಹೆಸರನ್ನು ಹೇಳುತ್ತಾ ಹೋದರೆ ಅನೇಕ ಗಣ್ಯ ವ್ಯಕ್ತಿಗಳ ಹಾಗೂ ಪುಣ್ಯ ಪುರುಷರ ದೊಡ್ಡ ಪಟ್ಟಿಯೇ ಬೆಳೆಯುತ್ತಾ ಹೋಗಿ ಅವರ ರೂಪ ನಮ್ಮ ಕಣ್ಣಮುಂದೆ ಬಂದು ನಿಲ್ಲುತ್ತದೆ. ಈಗಲೂ ದೇಶದ ಏಳ್ಗೆಗಾಗಿ ದುಡಿಯುತ್ತಿರುವ ಅನೇಕ ಮಹನೀಯರುಗಳು ಇಂದಿಗೂ ದೇಶಕ್ಕೆ ಮಾರ್ಗದರ್ಶಕರಾಗಿದ್ದಾರೆ.

ಅದ್ವಿತೀಯ ಸೇವೆ ಸಲ್ಲಿಸಿರುವ ವ್ಯಕ್ತಿಗಳ ಕಾರ್ಯವನ್ನು ಸರ್ಕಾರವು ಗುರ್ತಿಸಿ ಅವರಿಗೆ ಭಾರತರತ್ನ, ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಹಾಗೂ ಜೀವಮಾನದ ಸಾಧನೆಗೆ ಜೀವಮಾನ ಪ್ರಶಸ್ತಿ ಡಾಕ್ಟರೇಟ್ ಹೀಗೆ ಅನೇಕ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ. ಅಂತಹ ಪ್ರಶಸ್ತಿ ಪಡೆದವರು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಂತಹ ಜನಪ್ರಿಯ ವ್ಯಕ್ತಿಗಳಾಗಿರುತ್ತಾರೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಅಸಾಮಾನ್ಯ ಸಾಧನೆಗೆ ಪ್ರಶಸ್ತಿ ಇದ್ದೇ ಇರುತ್ತದೆ. ಕ್ರೀಡಾಕ್ಷೇತ್ರಕ್ಕೆ ಚಲನಚಿತ್ರಕ್ಕೆ ಕ್ಷೇತ್ರಕ್ಕೆ, ಸಾಹಿತ್ಯ ಕ್ಷೇತ್ರಕ್ಕೆ, ಕ್ರೀಡಾ ಕ್ಷೇತ್ರಕ್ಕೆ ಅದರದೇ ಆದ ಪ್ರಶಸ್ತಿಗಳಿದ್ದು, ಆ ಪ್ರಶಸ್ತಿಗಳು ಅದ್ವಿತೀಯ ಸಾಧನೆ ಮಾಡುವವರ ಮುಡಿಗೇರುತ್ತದೆ. ಅಂತರಾಷ್ಟ್ರೀಯವಾಗಿ ನೋಬೆಲ್ ಪ್ರಶಸ್ತಿ ನೀಡುತ್ತಾ ಬಂದಿದ್ದು, ನಮ್ಮ ದೇಶದ ಅನೇಕರು ನೋಬೆಲ್ ಪ್ರಶಸ್ತಿ ಪುರಸ್ಕøತರಾಗಿದ್ದಾರೆ. ಇಂಥವರಿಗೆ ಜನಗಳೇ ರಕ್ಷಕರಾಗಿರುತ್ತಾರೆ.

RELATED ARTICLES  ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಪರ ಸುಬ್ರಾಯ ವಾಳ್ಕೆ ಪ್ರಚಾರ : ಕಾರ್ಯಕರ್ತರ ಮನೆ ಮನೆಗೆ ಭೇಟಿ.

ಮನುಷ್ಯನು ತನ್ನ ಕುಟುಂಬಕ್ಕೆ ಮಾತ್ರ ದುಡಿಯುತ್ತಿದ್ದು, ಅಂತಹ ಮನುಷ್ಯನಿಗೆ ಖಾಯಿಲೆ ಬಂದಲ್ಲಿ ಅವನ ದೀರ್ಘಾಯುಸ್ಸಿಗೆ ಅವನ ಕುಟುಂಬದವರು ಮಾತ್ರ ದೇವರಲ್ಲಿ ಪ್ರಾರ್ಥಿಸಿಕೊಳ್ಳುವರು. ಮನುಷ್ಯನು ತನ್ನ ಜೀವನವನ್ನು ಸಾರ್ವಜನಿಕರ ಸೇವೆಗೆ ಮುಡುಪಾಗಿಸಿ ದುಡಿದು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿದ್ದಲ್ಲಿ ಅಂತಹ ಮನುಷ್ಯನ ಆರೋಗ್ಯದಲ್ಲಿ ಏರುಪೇರಾದರೆ ಎಲ್ಲರೂ ಆತಂಕ ಪಡುವ ಸನ್ನಿವೇಶ ನಿರ್ಮಾಣವಾಗುತ್ತದೆ. ಆದರೆ ಎಲ್ಲರಿಗೂ ಬೇಕಾದ ವ್ಯಕ್ತಿ ಖಾಯಿಲೆಗೆ ಒಳಗಾದರೆ ಬೇಗನೇ ಗುಣವಾಗಲೆಂದು ಸಾರ್ವಜನಿಕರೆಲ್ಲರೂ ಪ್ರಾರ್ಥಿಸಿರುವ ಅನೇಕ ಪ್ರಸಂಗಗಳು ನಡೆದಿದೆ. ಅಕಸ್ಮಾತ್ ಅಂತಹ ವ್ಯಕ್ತಿಗೆ ಖಾಯಿಲೆ ಬಂದು, ಅಂತಹವನ ಮನೆಯವರು ಆರ್ಥಿಕ ತೊಂದರೆಯಲ್ಲಿದ್ದರೆ ಸಾರ್ವಜನಿಕರೇ ಮುಂದಾಳತ್ವ ವಹಿಸಿಕೊಂಡು ಆಸ್ಪತ್ರೆ ಖರ್ಚನ್ನು ಭರಿಸುವವರೂ ಇದ್ದಾರೆ. ಅಥವಾ ಸರ್ಕಾರವೇ ಅವನ ವೈದ್ಯಕೀಯ ವೆಚ್ಚವನ್ನು ಭರಿಸಬಹುದು. ಒಳ್ಳೆಯ ವ್ಯಕ್ತಿಯಾದರೆ ತಾನಾಗಿಯೇ ಸಮಾಜದಲ್ಲಿ ಎಲ್ಲರ ವಿಶ್ವಾಸಗಳಿಸಿ ಕೊಳ್ಳುವುದರಲ್ಲಿ ಯಶಸ್ವಿಯಾಗಿ ತಾನಾಗಿಯೇ ಸಾರ್ವಜನಿಕರ ಸ್ವತ್ತಾಗುತ್ತಾನೆ.

ಅದ್ವಿತೀಯ ಸಾಧನೆ ಮಾಡಿದ ಸಾಧಕರು ಸತ್ತ ಮೇಲೆಯೂ ಇವರ ಸಂಸ್ಕಾರ ಮಾಡಲು ಮನೆಯವರಿಗೆ ಎಲ್ಲಾ ರೀತಿಯ ನೆರವನ್ನು ನೀಡಿ ಸಹಕರಿಸುತ್ತಾರೆ. ಮನುಷ್ಯನು ಸ್ವಾರ್ಥಿಯಾಗದೆ ಎಲ್ಲರಲ್ಲೂ ವಿಶ್ವಾಸ ಗಳಿಸಿ, ತನ್ನ ಕೈಲಾದ ಸೇವೆಯನ್ನು ಯಾವುದಾದರೂ ಕ್ಷೇತ್ರಕ್ಕೆ ಸಲ್ಲಿಸಿದರೆ ಆ ಕ್ಷೇತ್ರವೇ ಅವನನ್ನು ಗುರುತಿಸಿ ಗೌರವಿಸುತ್ತದೆ.
ಕೇವಲ ಹಣದಿಂದಲೇ ಎಲ್ಲರ ಜನಬೆಂಬಲ ಹಾಗೂ ವಿಶ್ವಾಸಗಳಿಸಿಕೊಳ್ಳಲು ಸಾಧ್ಯವಿಲ್ಲ. ಹಣ ಇರುವವರೆಗೆ ಮಾತ್ರ ಅವನ ಬಳಿ ಸ್ವಲ್ಪ ಜನರಿದ್ದು ಜೈಕಾರ ಹಾಕಬಹುದು. ಹಣ ಕರಗಿಹೋದ ನಂತರ ಅವನನ್ನು ಬಿಟ್ಟು ದೂರ ಹೋಗಬಹುದು. ಆದರೆ ಒಳ್ಳೆಯ ಕಾರ್ಯಗಳಿಂದ ಗಳಿಸಿದ ವಿಶ್ವಾಸ ಹಾಗೂ ಪಡೆದ ಜನಬೆಂಬಲ ಎಂದಿಗೂ ಶಾಶ್ವತವಾಗಿರುತ್ತದೆ. ಅಂತಹ ಮನುಷ್ಯ ಸತ್ತ ನಂತರವೂ ಅಮರ ನಾಗಿರುತ್ತಾನೆ. ಮರಣಾನಂತರ ಅವನ ಮಕ್ಕಳಿಗೂ ಅದೇ ರೀತಿಯ ಬೆಂಬಲ ನೀಡಿ ವಿಶ್ವಾಸದಿಂದ ನೋಡುತ್ತಾರೆ. ಇದಕ್ಕೆ ಉದಾಹರಣೆ ಅನೇಕ ರಾಜಕಾರಣಿಗಳು, ಕಲಾವಿದರು, ಸಮಾಜ ಸೇವಕರು ಗಳಿಸಿದ ವಿಶ್ವಾಸವನ್ನೇ ಅವರ ಮಕ್ಕಳಿಗೂ ನೀಡುತ್ತಾ ಬಂದಿರುವುದು.

ಮನುಷ್ಯ ಸ್ವಾರ್ಥಿಯಾದಲ್ಲಿ ಯಾರೂ ಅವನನ್ನು ಗುರುತಿಸುವುದಿಲ್ಲ. ಅಕಸ್ಮಾತ್ ರಸ್ತೆಗಳಲ್ಲಿ ಪ್ರಯಾಣಿಸುವಾಗ ಅಪಘಾತದಿಂದ ಸತ್ತರೆ ಅಂತಹ ವ್ಯಕ್ತಿಗಳ ಮನೆಯವರ ಗುರುತು ಸಿಗದೆ ಅಪರಿಚಿತ ಶವ ಎಂದು ನಿರ್ಧರಿಸಿ ಮಣ್ಣು ಮಾಡಬಹುದು. ನಂತರ ಸತ್ತವರ ಮನೆಯವರು ಊರು ಬಿಟ್ಟು ಹೋದವರು ಬರಲಿಲ್ಲವೆಂದು ಪೋಲಿಸ್‍ರವರಿಗೆ ಕಂಪ್ಲೇಂಟ್ ಕೊಡಬಹುದು. ಆದರೂ ಸತ್ತು ಹೋದ ವ್ಯಕ್ತಿ ಪತ್ತೆಯಾಗುವುದೇ ಇಲ್ಲ. ಯಾರಾದರೂ ಜನಪ್ರಿಯ ವ್ಯಕ್ತಿ ಸತ್ತರೆ ಯಾರಿಗಾದರೂ ಗುರುತು ಸಿಕ್ಕಿ ಅವರ ಸಂಬಂಧಿಕರಿಗೆ ತಿಳಿಸುವ ಪ್ರಯತ್ನ ಮಾಡುತ್ತಾರೆ. ಈಗಿನ ಕಾಲದಲ್ಲಿ ಟಿ.ವಿ. ಮಾದ್ಯಮ ಬೃಹದಾಕಾರವಾಗಿ ಬೆಳೆದಿದ್ದು, ಹಳ್ಳಿ ಹಳ್ಳಿಯಲ್ಲಿಯೂ ಟಿ.ವಿ ಬಂದಿರುವುದರಿಂದ ಹಾಗೂ ಪ್ರತಿಯೊಬ್ಬರ ಬಳಿಯಲ್ಲಿ ಮೊಬೈಲ್ ಇರುವುದರಿಂದ ಇಂತಹ ಸುದ್ದಿಗಳು ಮಿಂಚಿನಂತೆ ಪ್ರಸಾರವಾಗಿ ಎಲ್ಲರಿಗೂ ತಲುಪುವುದರಿಂದ ಅಪಘಾತಗಳಲ್ಲಿ ಸತ್ತವರನ್ನು ಅಥವಾ ಗಾಯಗೊಂಡವರನ್ನು ಗುರುತಿಸುವ ಕಾರ್ಯ ಇತ್ತೀಚೆಗೆ ಸುಲಭವಾಗುತ್ತಿದೆ.

RELATED ARTICLES  ಆಮ್ ಆದ್ಮಿ ಪಾರ್ಟಿ ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಸೇವಾಕಾಂಕ್ಷಿ ಸಮಾಜ ಸೇವಕ , ಸರ್ವ ಧರ್ಮ ಪ್ರಿಯ , ಜನಸ್ನೇಹಿ ಡಾಕ್ಟರ್ ನಸಿಮ್ ಖಾನ್

ಆದಾಗ್ಯೂ ಅಪಘಾತದಲ್ಲಿ ಸತ್ತವರನ್ನು ಹಾಗೂ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸುವ ಕಾರ್ಯಕ್ಕೆ ಕೆಲವರು ಹೋಗಲು ಹಿಂಜರಿಯುವುದುಂಟು. ಆದರೆ ಅಂತಹ ಸಂದರ್ಭಗಳಲ್ಲಿ ಜನಪ್ರಿಯ ವ್ಯಕ್ತಿಗಳಾಗಿದ್ದು, ಎಲ್ಲರಿಗೂ ಪರಿಚಿತನಾಗಿದ್ದರೆ ತಕ್ಷಣ ಯಾರಾದರೂ ಬಂದು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಯ ವ್ಯವಸ್ಥೆಯನ್ನು ಮಾಡಿಸುತ್ತಾರೆ. ಪರಿಚಯವಿಲ್ಲದ ಸಾಮಾನ್ಯ ವ್ಯಕ್ತಿಯಾದರೆ ನಮಗೇಕೆ ಬೇಕು ಇವರ ಉಸಾಬರಿ ಎಂದು ದೂರ ಹೋಗುವುದುಂಟು. ಅಪಘಾತದಿಂದ ಗಾಯಗೊಂಡು ರಸ್ತೆಯಲ್ಲಿಯೇ ಬಿದ್ದು ಒದ್ದಾಡುತ್ತಾ, ಸಹಾಯಕ್ಕೆ ಅಂಗಲಾಚಿದರೂ ಯಾರೂ ಸಹಾಯಕ್ಕೆ ಹೋಗದೆ ರಸ್ತೆ ಮದ್ಯೆಯಲ್ಲಿಯೇ ಅಸುನೀಗಿರುವ ಹೃದಯ ಕಲಕುವ ಅನೇಕ ದೃಶ್ಯಗಳು ಟಿ.ವಿ. ಮಾದ್ಯಮಗಳಲ್ಲಿ ಪ್ರಸಾರವಾಗಿರುವುದನ್ನು ನೋಡಿದ್ದೇವೆ. ಅವರ ನೋವನ್ನು ಅಕ್ರಂದನವನ್ನು ವಿಡಿಯೋ ಮಾಡಿ ಟಿ.ವಿ.ಗಳಿಗೆ ನೀಡುವ ಬದಲಾಗಿ ಗಾಯಗೊಂಡು ನರಳುತ್ತಿರುವವರನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಅವರ ಸಹಾಯಕ್ಕೆ ಧಾವಿಸಿದ್ದರೆ ಎಷ್ಟೋ ಜನ ಅಮಾಯಕರ ಪ್ರಾಣ ಉಳಿಯುತ್ತಿತ್ತೇನೋ.

ಮನುಷ್ಯ ಬಡವನಾಗಲೀ ಶ್ರೀಮಂತನಾಗಲೀ ಯಾವುದಾದರೊಂದು ಕ್ಷೇತ್ರದಲ್ಲಿ ಅದ್ವಿತೀಯ ಸೇವೆ ಸಲ್ಲಿಸಿ ಜನಗಳಲ್ಲಿ ವಿಶ್ವಾಸಗಳಿಸುವುದು ಅಷ್ಟು ಸುಲಭದ ಮಾತಲ್ಲ ಹಾಗೂ ಎಲ್ಲರೂ ಸಾಧಿಸುವ ಸುಲಭದ ಕೆಲಸವಲ್ಲ. ಇದಕ್ಕೆ ಮನುಷ್ಯ ಹುಟ್ಟುವ ಮನೆ, ಬೆಳೆಯುವ ಪರಿಸರ, ಸುತ್ತ ಮುತ್ತಲಿನ ವಾತಾವರಣ, ಗುರುಗಳ ಮಾರ್ಗದರ್ಶನ, ಮನಸ್ಥಿತಿ ಎಲ್ಲದರ ಮೇಲೂ ಅವಲಂಬಿತವಾಗಿರುತ್ತದೆ. ಮನುಷ್ಯ ಹುಟ್ಟುವಾಗ ಒಳ್ಳೆಯವನಾಗಿಯೇ ಇರುತ್ತಾನೆ. ಅವನು ಬೆಳೆಯುವ ವಾತಾವರಣ ಸ್ನೇಹಿತರ ಸಹವಾಸ ಇವೆಲ್ಲವೂ ಮನುಷ್ಯನ ಗುಣವನ್ನು ಮಾರ್ಪಡಿಸುತ್ತದೆ.

ಆದ್ದರಿಂದ ಮನುಷ್ಯನು ಸ್ವಾರ್ಥಿಯಾಗದೆ ಎಲ್ಲರಲ್ಲೂ ವಿಶ್ವಾಸ ಗಳಿಸಿ, ತನ್ನ ಕೈಲಾದ ಸೇವೆಯನ್ನು ಯಾವುದಾದರೂ ಕ್ಷೇತ್ರಕ್ಕೆ ಸಲ್ಲಿಸಿದರೆ ಸಮಾಜವೇ ಗುರುತಿಸಿ ಗೌರವಿಸುತ್ತದೆ. ಅಂತಹ ಮನುಷ್ಯನು ಯಾರೊಬ್ಬರ ಮನೆಯ ಸ್ವಂತ ಸ್ವತ್ತಾಗದೆ ಸಾರ್ವಜನಿಕರ ಸ್ವತ್ತಾಗಿರುತ್ತಾನೆ.