ಹಳ್ಳಿಯ ಜೀವನವೇ ಸುಂದರ. ಮಳೆ ಚಳಿ ಬಿಸಿಲೆನ್ನದೇ ದುಡಿದು ತಮ್ಮ ತೋಟ, ಹೊಲಗಳಲ್ಲಿ ಬೆಳೆಯನ್ನು ಬೆಳೆಯುತ್ತಾರೆ. ವರ್ಷಾವಧಿ ಅವರಿಗೆ ಮೋಜುಮಜಲುಗಳು ಅದೇ ಹೊಲಗದ್ದೆಯ ಬದುವಿನಲ್ಲಿ ನಡೆಯುವುದು. ಒಂದು ಗದ್ದೆ ಇದೆ ಎಂದಾದರೆ, ಬತ್ತದ ಬೀಜ ಸೋಕಿ, ಸಸಿ ಮಾಡಿ ನಾಟಿ ಹಾಕಿ, ಗೊಬ್ಬರ ಹಾಕಿ, ಹದವರಿತು ನೀರುಣಿಸಿ ಕಟಾವು ಮಾಡುವವರೆಗೆ ಅವರದು ಆ ಗದ್ದೆಯ ಬಳಿ ಇರುವ ಜೋಪಡಿಯೇ ಮನೆಯಂತಾಗಿ, ಬರುವ ಆಳುಕಾಳುಗಳೆ ಸ್ನೇಹಿತರಾಗಿ ನಕ್ಕು ನಲಿಯುತ್ತ ಕೆಲಸ ಮುಗಿಸುತ್ತಿದ್ದ ಕಾಲವೊಂದಿತ್ತು. ಆಗ ಈ ರೀತಿಯ ಟಿವಿಗಳು, ಮೊಬೈಲ್‍ಗಳು ಎಂದು ಹೊರಜಗತ್ತು ಕೈಗೆಟಕುವಷ್ಟು ಹತ್ತಿರವಾಗಿರಲಿಲ್ಲ. ಬೆಂಗಳೂರಿನಲ್ಲಿ ತಮ್ಮ ಊರಿನ ಒಂದೆರಡು ಮಕ್ಕಳು ಇದ್ದಾರೆ ಎಂದರೆ ಅವರು ದೊಡ್ಡ ಊರಿನವರು ಅಂತ ಸಿಗುವ ಗೌರವ ಮರ್ಯಾದಿಯೇ ಬೇರೆಯಾಗಿತ್ತು.
ಹಾಗಿರುವಾಗ ದಿನ ದಿನ ಪೇಟೆಗೆ ಹೋಗುವುದು ಇರಲಿಲ್ಲ. ಎರಡು ಮೂರು ತಿಂಗಳಿಗೆ ಮನೆಯ ಯಜಮಾನ ಪೇಟೆಗೆ ಹೋಗಿ ಮನೆಗೆ ಬೇಕಾದ ಸಾಮಗ್ರಿಗಳನ್ನು ತಂದರೆ ಮುಗಿಯಿತು. ಮತ್ತೆ ಪೇಟೆಗೆ ಹೋಗುವುದು ಮನೆಗೆ ವಸ್ತುಗಳನ್ನು ತರುವುದಾದರೆ ಮಾತ್ರ. ಅಥವಾ ಯಾವುದಾದರೂ ಕಛೇರಿ ಕೆಲಸಕ್ಕೆ ಹೋಗುತ್ತಿದ್ದರು. ಪೈರು ಕಟಾವು ಮುಗಿದ ನಂತರ ಮನೆ ಮಂದಿಗೆಲ್ಲ ಒಂದಿಷ್ಟು ದಿನ ಯಾವುದೆ ಕೆಲಸ ಇರುವುದಿಲ್ಲ. ಈ ಸಂಕ್ರಾಂತಿ ನಂತರ ಉತ್ತರಾಯಣ ಪ್ರಾರಂಭ ಆಗುತ್ತದೆ. ಸರಿಸುಮಾರು ಈ ಸಂಕ್ರಾಂತಿ ನಂತರ ಜಾತ್ರೆಗಳು ಪ್ರಾರಂಭವಾಗುತ್ತದೆ. ಆ ಜಾತ್ರೆಗೆ ಮನೆ ಮಂದಿಯೆಲ್ಲ ಸೇರಿ ಹೋಗುತ್ತಿದ್ದರು.
ಆ ಜಾತ್ರೆ ಎಂದರೆ ಅದು ಸಾರ್ವಜನಿಕ ಹಬ್ಬವಾಗಿರುತಿತ್ತು. ವಾರಗಟ್ಟಲೇ ಜಾತ್ರೆ ಅಂದರೆ ಊರಿನಿಂದ ಪಾತ್ರೆಪಗಡೆ ಕೂಡ ತೆಗೆದುಕೊಂಡು ಹೋಗಿ ಅಲ್ಲಿಯೆ ಗುಡಿಸಲು ಕಟ್ಟಿ ಜಾತ್ರೆಯ ಸವಿಯನ್ನು ಸವಿಯುತ್ತಿದ್ದರು.ನೆಂಟರಿಷ್ಟರ ಮನೆಯಲ್ಲಿ ತಂಗುವುದು ಇತ್ತು. ಅಲ್ಲಿಯೇ ಸಿಹಿ ತಿಂಡಿ, ಜೋಕಾಲಿ, ಸಿನೆಮಾ, ನಾಟಕ, ಯಕ್ಷಗಾನ ಇಂತಹ ಎಲ್ಲಾ ಮನರಂಜನೆಗಳೂ ಸಿಗುವುದು. ಪಿಪಿಯಿಂದ ಬಟ್ಟೆಬರೆಯವರೆಗೂ ಅಲ್ಲಿಯೇ ಖರಿದಿಸುವುದು. ದೇವರ ಪೂಜೆ, ಮಿಠಾಯಿ, ಸರ-ಬಳೆ, ರಿಬ್ಬನ್, ಬಣ್ಣಬಣ್ಣದ ಕುಂಕುಮ ಎಲ್ಲ ಖರೀದಿ ಮಾಡುತ್ತಿದ್ದರು. ವರ್ಷಾವಧಿಯ ಮನರಂಜನೆ ಆ ಜಾತ್ರೆಯಲ್ಲಿ ಕಳೆಯುತ್ತಿದ್ದರು.
ಈಗ ಕಾಲ ಬದಲಾಗಿದೆ. ಮನೆಮನೆಯಲ್ಲಿ ಟಿವಿ, ಕಂಪ್ಯೂಟರ್, ಮೋಬೈಲ್ ಎನ್ನುವುದು ಇದೆ. ಈಗಿನ ರೈತಾಬಿ ಕೆಲಸ ಬೇರೆಯಾಗಿದೆ. ಯಂತ್ರೋಪಕರಣ ಉಪಯೋಗ ಹೆಚ್ಚಿಗೆ ಬಳಕೆಯಾಗುತ್ತಿದೆ. ದಿನದಿನವೂ ಪೇಟೆ ಹೋಗುವುದು, ಸಿನೆಮಾ ನೋಡುವುದು, ಖರೀದಿ ಮಾಡುವುದು ಸಹಜ ಎನ್ನುವ ರೀತಿಯಲ್ಲಿ ನಡೆಯುತ್ತಿದೆ. ಜಾತ್ರೆಗೆ ಮೊದಲಿನ ವಾರಗಟ್ಟಲೆಯ ಆಕರ್ಷಣೆ ಈಗಿಲ್ಲ. ಸಂಜೆಯ ಹೊತ್ತಿಗೆ ತಮ್ಮತಮ್ಮ ವಾಹನದಲ್ಲಿ ಹೋಗಿ ಸಾಧ್ಯವಿರುವುದು ನೋಡಿ, ಬೇಕಾದುದು ತೆಗೆದುಕೊಂಡು ತಿರುಗಿ ಮನೆ ಸೇರಿಕೊಳ್ಳುತ್ತಾರೆ. ವಾರಗಟ್ಟಲೇ ಜಾತ್ರೆಗೆ ಹಣ ಸುರಿಯುವುದು ಹೇಚ್ಚಾಗಿದೆಯೇ ಹೊರತು ಮೊದಲಿನ ಸಂಭ್ರಮ ಈಗ ಕಾಣಿಸುವುದಿಲ್ಲ ಎಂದು ಜನಭಿಪ್ರಾಯವಾಗಿದೆ.
ಏನೇ ಆಗಲಿ ತೇರು, ಜಾತ್ರೆಗಳು ಒಂದರ ನಂತರ ಮತ್ತೊಂದು ಶುರುವಾಗುತ್ತಿದೆ. ಹಳೆಯ ನೆನಪು ಹೊಸ ಮೆರಗು ಸೇರಿ ಜಾತ್ರೆಯ ಸವಿಯನ್ನು ಅನುಭವಿಸುವುದು ನಮ್ಮ ಹಕ್ಕು ಎನ್ನುವ ರೀತಿಯಲ್ಲಿ ನಾವು ನಡೆಯುತ್ತೇವೆ. ಕಿವಿಗವಡುಗಚ್ಚುವ ಪಿಪಿ ಸೌಂಡು ಮತ್ತೊಂದು ಜಾತ್ರೆ ಬರುವ ತನಕವೂ ಕೇಳಿಸುತ್ತಲೇ ಇರಬೇಕು. ಇಕ್ಕಟ್ಟಾದ ಪ್ರದೇಶದಲ್ಲಿ ಒಬ್ಬರಿಗೊಬ್ಬರು ದೂಡುತ್ತ, ಕಾಲ ಮೇಲೆ ಕಾಲು ಇಟ್ಟು ನೋವಿನಿಂದ ಹಾಯ್-ಅಮ್ಮಾ ಎನ್ನುತ್ತ ತಂಪೋತ್ತಿನಲ್ಲಿ ದೂರದಲ್ಲಿ ಕಂಡು ಕಾಣದಂತೆ ಕುಳಿತ ದೇವರಿಗೆ ಆ ಜನಜಂಗುಳಿಯಲ್ಲಿ ಕೈ ಮುಗಿದು ಆಕಾಶದೆತ್ತರ ಹಾರುವ ಉಯ್ಯಾಲೆಯಲ್ಲಿ ತೇಲುತ್ತ, ಅಲ್ಲೊಂದು ಪ್ಲೆಟ್ ಬೋಂಟಾ ಇಲ್ಲೋದು ಗ್ಲಾಸ್ ಕಬ್ಬಿನಾಲು, ಐಸ್ಕ್ರೀಮ್ ತಿಂದರೆ ಮಾತ್ರ ಜಾತ್ರೆ ಎಂದು ಪೈಪೋಟಿಯಲ್ಲಿ ತಿಂದು ಮಜವಾಗಿಸುವ ಜಾತ್ರೆಯ ಸೊಗಸೇ ಒಂದು ಸಂಭ್ರಮ. ಅಂತಹ ಸಂಭ್ರಮಕ್ಕೆ ಹಲವಾರು ಜಾತ್ರೆಗಳು ಇನ್ನು ಮುಂದೆ ಸಾಕ್ಷಿಯಾಗಲಿವೆ. ಜನ ಮಳ್ಳೋ ಜಾತ್ರೆ ಮಳ್ಳೋ ಎನ್ನುವ ಗಾದೆಯನ್ನು ಪಕ್ಕಕ್ಕಿಟ್ಟು ಒಮ್ಮೆ ಜಾತ್ರೆಗೆ ಹೋಗಿ ಬರೋಣ ಅಲ್ಲವೇ!